ಪಂಜುಗಂಗೊಳ್ಳಿ
ಸಮಾಜದಿಂದ ಪರಿತ್ಯಕ್ತರಾದ ಮಕ್ಕಳ ಬಾಳಲ್ಲಿ ಬೆಳಕು ಮೂಡಿಸಿದ ಆನಂದ ಗ್ರಾಮ
ಮಹಾರಾಷ್ಟ್ರದ ಬೀಡ್‌ನ ಜಿಲ್ಲಾ ಆಸ್ಪತ್ರೆಯ ರಕ್ತದ ಬ್ಯಾಂಕಿನಲ್ಲಿ ಒಬ್ಬ ಪೆಥೋಲಜಿ ಟೆಕ್ನಿಷಿಯನ್ ಆಗಿದ್ದ ದತ್ತಾ ಬರ್ಗಾಜೆ ಮತ್ತು ಕಾಲೇಜು ಉಪನ್ಯಾಸಕಿಯಾಗಿದ್ದ ಅವರ ಪತ್ನಿಸಂಧ್ಯಾ ೨೦೦೬ರ ಡಿಸೆಂಬರ್ ೧ ರಂದು ‘ಇನ್ಛಾಂಟ್ ಇಂಡಿಯಾ ಟ್ರಸ್ಟ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿ, ಅದರ ಮೂಲಕ ರಕ್ತದಾನ ಶಿಬಿರ, ವೈದ್ಯರು, ಸಾಮಾಜಿಕ ಕಾರ್ಯಕರ್ತರನ್ನು ಆಹ್ವಾನಿಸಿ ಕಾರ್ಯಕ್ರಮ ಏರ್ಪಡಿಸುವುದು ಮೊದಲಾದ ಕೆಲಸಗಳನ್ನು ಮಾಡುತ್ತಿದ್ದರು. ೨೦೦೭ರ ಒಂದು ಬೆಳಿಗ್ಗೆ ದತ್ತಾ ಬರ್ಗಾಜೆ ರಕ್ತದ ಬ್ಯಾಂಕಿನಲ್ಲಿ ಎಂದಿನಂತೆ ಜನರ ವೈದ್ಯಕೀಯ ವರದಿಗಳನ್ನು ವಿಂಗಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು.
ಆಗ ಇದ್ದಕ್ಕಿದ್ದಂತೆ, ತನ್ನ ಸೊಂಟದ ಮೇಲೊಂದು ಮಗು ಮತ್ತು ಕೈಯಲ್ಲಿ ಇನ್ನೊಂದು ಮಗುವನ್ನು ಹಿಡಿದಿದ್ದ ಮಹಿಳೆಯೊಬ್ಬಳು ಒಳ ನುಗ್ಗಿದಳು. ಆಕೆಯ ಅಸ್ತವ್ಯಸ್ತ ಸೀರೆ, ಕೆದರಿದ ತಲೆಗೂದಲು ಆಕೆ ಬಹಳ ದೂರದಿಂದ ಪ್ರಯಾಣ ಮಾಡಿ ಬಂದವಳೆಂಬುದನ್ನು ಹೇಳುತ್ತಿದ್ದವು. ‘ನನಗೆ ಏಡ್ಸ್ ಕಾಯಿಲೆ ಇದೆ. ನನ್ನ ಗಂಡ ಇದೇ ಕಾಯಿಲೆಯಿಂದ ಸತ್ತ. ನನ್ನ ಕೈಯಲ್ಲಿರುವ ಈ ಮಗುವಿಗೂ ಏಡ್ಸ್ ಕಾಯಿಲೆ ಇದೆ…‘ ಸಿಟ್ಟು ಹಾಗೂ ಭಯ ಮಿಶ್ರಿತ ಸ್ವರದಲ್ಲಿ ಅವಳು ಏನೇನೋ ಹೇಳುತ್ತ ನಿಂತಳು.
ಆಕೆಯ ಹೆಸರು ಪಾರ್ವತಿ. ಮಕ್ಕಳ ಹೆಸರು ವಿಶಾಲ್ ಮತ್ತು ಯೋಗೇಶ್. ದತ್ತಾ ಅವಳ ಬಳಿ ಹೋಗಿ ಅವಳಿಗೆ ಏನು ಬೇಕು ಎಂದು ಕೇಳಿದರು. ಆಕೆ ಅದಕ್ಕೇನೂ ಉತ್ತರಿಸಲಿಲ್ಲ. ದತ್ತಾ ನೀರು ತಂದು ಅವಳ ಮುಖವನ್ನು ತೊಳೆದು, ಸಮಾಧಾನದ ಮಾತುಗಳನ್ನು ಹೇಳಿ, ಅವಳು ಮತ್ತು ಅವಳ ಎರಡು ಮಕ್ಕಳನ್ನು ತನ್ನ ಕ್ವಾರ್ಟರ್ಸ್‌ಗೆ ಕರೆದುಕೊಂಡು ಹೋದರು. ಅಲ್ಲಿ ದತ್ತಾರ ಹೆಂಡತಿ ಸಂಧ್ಯಾ ಆ ಮಹಿಳೆಗೆ ಸ್ನಾನ ಮಾಡಿಸಿದರು. ತನ್ನದೊಂದು ಸೀರೆಯನ್ನು ಆಕೆಗೆ ಉಡಿಸಿದರು. ಅವಳಿಗೆ ಹಾಗೂ ಎರಡು ಮಕ್ಕಳಿಗೆ ಉಣ್ಣಿಸಿದರು. ದತ್ತಾ ಹಾಗೂ ಸಂಧ್ಯಾರ ಮಕ್ಕಳು ಆ ಮಕ್ಕಳನ್ನು ತಮ್ಮೊಂದಿಗೆ ಆಡಲು ಕರೆದುಕೊಂಡು ಹೋದರು. ನಂತರ, ದತ್ತಾ ಮತ್ತು ಸಂಧ್ಯಾ ಆ ಇಬ್ಬರು ಮಕ್ಕಳನ್ನು ತಮ್ಮ ಬಳಿ ಇರಿಸಿಕೊಂಡು, ಪಾರ್ವತಿಗೆ ಧೈರ್ಯದ ಮಾತುಗಳನ್ನು ಹೇಳಿ ಕಳಿಸಿಕೊಟ್ಟರು. ಆ ದಿನದ ನಂತರ, ದತ್ತಾ ಮತ್ತು ಸಂಧ್ಯಾ ಎಚ್‌ಐವಿ ಪಾಸಿಟಿವ್ ಮಕ್ಕಳಿಗೆ ಆಶ್ರಯ ಒದಗಿಸುತ್ತಿದ್ದಾರೆ ಎಂಬುದು ಸುತ್ತಮುತ್ತ ಹರಡಿ, ಎಚ್‌ಐವಿ ಪೀಡಿತ ಹಲವು ಹೆತ್ತವರು ತಮ್ಮ ಮಕ್ಕಳನ್ನು ಅವರ ಮನೆಯೆದುರು ಬಿಟ್ಟು ಹೋಗುವುದು ಶುರುವಾಯಿತು. ಕೆಲವೊಮ್ಮೆ ಬೆಳಗ್ಗಿನ ನಸುಕಿನಲ್ಲಿ, ಕೆಲವೊಮ್ಮೆ ಸಂಜೆಗತ್ತಲಲ್ಲಿ. ಹೀಗೆ ಬಿಟ್ಟು ಹೋಗಲ್ಪಟ್ಟ ಹೆಚ್ಚಿನ ಮಕ್ಕಳು ವಲಸೆ ಕಾರ್ಮಿಕರು, ಆದಿವಾಸಿಗಳು, ಕಬ್ಬು ಕತ್ತರಿಸುವ ಕೂಲಿಗಳು ಮೊದಲಾದ ದುರ್ಬಲ ಕುಟುಂಬಗಳಿಗೆ ಸೇರಿದವರಾಗಿದ್ದರು.
೨೦೦೮ರ ನಡುವಿನ ಸುಮಾರಿಗೆ ಎಚ್‌ಐವಿ ಪೀಡಿತ ಏಳೆಂಟು ಮಕ್ಕಳು ದತ್ತಾ-ಸಂಧ್ಯಾರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದವು. ಆಗ ಅವರ ನೆರೆಹೊರೆಯ ಮನೆಗಳ ಜನ ದೂರು ನೀಡಿದ ಪರಿಣಾಮವಾಗಿ ದತ್ತಾರ ಮೇಲಧಿಕಾರಿಗಳು ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದರು. ಆಗ ದತ್ತಾ ಮತ್ತು ಸಂಧ್ಯಾ ಆ ಮಕ್ಕಳೊಂದಿಗೆ ತಮ್ಮ ಸರಂಜಾಮುಗಳನ್ನು ಕಟ್ಟಿಕೊಂಡು ಕ್ವಾರ್ಟರ್ಸ್ ಖಾಲಿ ಮಾಡಿ, ಬಾಡಿಗೆ ಮನೆ ಹುಡುಕತೊಡಗಿದರು. ಆದರೆ, ಅವರ ಜೊತೆಯಲ್ಲಿರುವ ಮಕ್ಕಳು ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಎಲ್ಲಿಯೂ ಅವರಿಗೆ ಬಾಡಿಗೆ ಮನೆ ಸಿಗಲಿಲ್ಲ. ಆಗ ಅಲಿಜಾ ಪಟೇಲ್ ಎಂಬ ಒಬ್ಬ ಸಣ್ಣ ಉದ್ಯಮಿಯು ತನ್ನ ಗ್ಯಾಸ್ ಸಿಲಿಂಡರ್ ಗೋಡೌನನ್ನು ಅವರಿಗೆ ಬಾಡಿಗೆ ನೀಡಿದರು. ಆದರೆ, ದತ್ತಾ ಮತ್ತು ಸಂಧ್ಯಾ ಅಲ್ಲಿ ವಾಸಿಸಲು ಶುರು ಮಾಡಿದ ಸ್ವಲ್ಪವೇ ಸಮಯದಲ್ಲಿ ಅಕ್ಕಪಕ್ಕದವರು ಕಿರುಕುಳ ನೀಡಲು ಶುರು ಮಾಡಿದ ಕಾರಣ ಅವರು ಆ ಮನೆಯನ್ನೂ ಬಿಟ್ಟು ಹೋಗಬೇಕಾಯಿತು. ಈಗ ಅವರ ಸಹಾಯಕ್ಕೆ ಬಂದವರು ಒಬ್ಬರು ಅರ್ಚಕರು. ಅವರು ತಮ್ಮ ಕೃಷಿ ಭೂಮಿಯ ನಡುವೆ ಇದ್ದ ಒಂದು ಕಟ್ಟಡವನ್ನು ಅವರಿಗೆ ಬಾಡಿಗೆಗೆ ನೀಡಿದರು. ಅದೊಂದು ಖಾಲಿ ಕಟ್ಟಡವಾಗಿದ್ದು ಶೌಚಾಲಯವೂ ಸೇರಿ ಅದರಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿರಲಿಲ್ಲ. ದತ್ತಾ ತಮಗೆ ಅಗತ್ಯವಾದ ಸೌಕರ್ಯಗಳನ್ನೆಲ್ಲ ತಾವೇ ಕಟ್ಟಿಸಿಕೊಳ್ಳಬೇಕಾಯಿತು.
ತಾವು ಮತ್ತು ತಮ್ಮ ಮಕ್ಕಳು ಅಲ್ಲಾದರೂ ಯಾರ ಕಿರುಕುಳವಿಲ್ಲದೆ ನೆಮ್ಮದಿಯಿಂದಿರಬಹುದು ಎಂಬ ಅವರ ನಿರೀಕ್ಷೆ ಕೆಲವೇ ದಿನಗಳಲ್ಲಿ ಸುಳ್ಳಾಯಿತು. ಈ ಬಾರಿ ನೆರೆಹೊರೆಯವರು ನೇರವಾಗಿ ಕಿರುಕುಳ ನೀಡದಿದ್ದರೂ ಅವರ ಮಕ್ಕಳು ಹೊರಗೆ ಹೋದಾಗ ಅವರನ್ನು ಅವಮಾನಿಸುವುದು, ಬಯ್ಯುವುದು ಮಾಡತೊಡಗಿದರು. ಇಲ್ಲಿಯೂ ಇರುವುದು ಅಸಾಧ್ಯ ಎಂದು ಅರಿತ ದತ್ತಾ ಬೇರೆ ಜಾಗ ಹುಡುಕ ತೊಡಗಿದರು. ಕೆಲವು ತಿಂಗಳ ಹುಡುಕಾಟ ಅವರನ್ನು ಬೀಡ್ ಜಿಲ್ಲೆಯ ಪಾಲಿ ಗ್ರಾಮದ ಬಿಂದುಸಾರ ಅಣೆಕಟ್ಟೆಯ ಪಕ್ಕದಲ್ಲಿದ್ದ ಒಂದು ಖಾಲಿ ಜಾಗಕ್ಕೆ ಕರೆ ತಂದಿತು.
ಅದೊಂದು ಎತ್ತರದ ಬಂಜರು ಭೂಮಿಯಾಗಿತ್ತು. ಅದಕ್ಕೆ ದಾರಿ ಇರಲಿಲ್ಲ. ವಿದ್ಯುತ್ ಸಂಪರ್ಕ ಇರಲಿಲ್ಲ. ನೀರೂ ಇರಲಿಲ್ಲ. ಅಷ್ಟೇ ಅಲ್ಲ, ಸನಿಹದಲ್ಲಿ ಮನೆಗಳೂ ಇರಲಿಲ್ಲ, ಜನರೂ ಇರಲಿಲ್ಲ. ಅಲ್ಲಿ ಇದ್ದುದು ಎರಡೇ-ನೀರವ ಮೌನ ಮತ್ತು ಸುಮಾರು ೩೦೦ ಅಡಿ ಎತ್ತರಕ್ಕೆ ನಿಂತ ಒಂದು ಬೃಹತ್ ಬಂಡೆಗಲ್ಲು! ದತ್ತಾ ತಮ್ಮ ೨೦೦೦ ಚದರಡಿಯ ಒಂದು ಜಾಗ, ಇಂಡಿಕಾ ಕಾರು ಮತ್ತು ಸಂಧ್ಯಾರ ಕೆಲವು ಆಭರಣಗಳನ್ನು ಮಾರಿ, ೧೦.೫ ಲಕ್ಷ ರೂಪಾಯಿಗಳಿಗೆ ಅಲ್ಲಿ ಎರಡು ಎಕರೆ ಜಾಗವನ್ನು ಖರೀದಿಸಿದರು. ಮತ್ತು, ಆ ಬಂಜರು ಜಾಗಕ್ಕೆ ‘ಆನಂದ ಗ್ರಾಮ’ ಎಂದು ನಾಮಕರಣ ಮಾಡಿ, ಅಲ್ಲಿ ನೆಲೆವೂರಿದರು. ಈಗ ದತ್ತಾ ಮತ್ತು ಸಂಧ್ಯಾರ ಬಳಿ ೨೫ ಮಕ್ಕಳು ಆಶ್ರಯ ಪಡೆದಿದ್ದರು. ದತ್ತಾ ಆ ಮಕ್ಕಳಿಗೆ ತಂದೆಯ ಸ್ಥಾನದಲ್ಲಿದ್ದರೆ, ಸಂಧ್ಯಾ ತಾಯಿಯ ಸ್ಥಾನದಲ್ಲಿ. ದತ್ತಾರ ತಾಯಿ ಆ ಮಕ್ಕಳಿಗೆ ಪ್ರೀತಿಯ ಅಜ್ಜಿ. ಸಂಧ್ಯಾ ದೊಡ್ಡ ಪ್ರಾಯದ ಹೆಣ್ಣು ಮಕ್ಕಳ ಸಹಾಯ ಪಡೆದು ಅಡುಗೆ ಮಾಡುತ್ತಿದ್ದರು. ಅನ್ನ, ಪಲ್ಯ, ಜೋಳದ ರೊಟ್ಟಿ ಅಥವಾ ಚಪಾತಿ ಇರುವ ಸರಳ ಊಟವನ್ನು ಒಂದೇ ಕುಟುಂಬದವರಂತೆ ಎಲ್ಲರೂ ಒಟ್ಟು ಸೇರಿ ಉಣ್ಣುತ್ತಿದ್ದರು. ಗಂಡು ಮಕ್ಕಳು ಇತರ ಸಣ್ಣ ಪುಟ್ಟ ಮನೆವಾರ್ತೆ ಕೆಲಸ ಮಾಡಿಕೊಡುತ್ತಿದ್ದರು. ದತ್ತಾರ ಎಂಬತ್ತಕ್ಕೂ ಹೆಚ್ಚು ಪ್ರಾಯದ ತಾಯಿ ಆ ಮಕ್ಕಳಿಗೆ ಸ್ನಾನ ಮಾಡಿಸುತ್ತಿದ್ದರು. ಮಕ್ಕಳು ತಮ್ಮ ದೇಹದ ದುರ್ಬಲ ರೋಗ ನಿರೋಧಕ ಶಕ್ತಿಯಿಂದಾಗಿ ಆಗಾಗ್ಗೆ ಹೊಟ್ಟೆ ನೋವು, ವಾಂತಿ ಹಾಗೂ ಜ್ವರ ಮೊದಲಾದ ಕಾರಣಕ್ಕೆ ಕಾಯಿಲೆ ಬೀಳುವುದು ಸಾಮಾನ್ಯವಾಗಿತ್ತು. ಆಗ ದತ್ತಾ ಮತ್ತು ಸಂಧ್ಯಾ ಅಸ್ವಸ್ಥ ಮಕ್ಕಳನ್ನು ರಾತ್ರಿ ಹೊತ್ತು ಬಟ್ಟೆಯ ತೊಟ್ಟಿಲಲ್ಲಿ ಸಾಗಿಸಿ, ಬೆಟ್ಟ ಇಳಿದು, ಅರ್ಧ ಕಿ.ಮೀ. ನಡೆದು, ರಿಕ್ಷಾ ಹಿಡಿದು ೧೫ ಕಿ.ಮೀ. ಪ್ರಯಾಣಿಸಿ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.
ಆನಂದ ಗ್ರಾಮಕ್ಕೆ ಹತ್ತಿರದಲ್ಲಿ ಯಾವುದೇ ಮನೆಗಳಿಲ್ಲದಿದ್ದುದರಿಂದ ದತ್ತಾ ಹಾಗೂ ಸಂಧ್ಯಾ ಹಿಂದಿನಂತೆ ಜನರ ವಿರೋಧಗಳನ್ನು ಎದುರಿಸಬೇಕಾಗಿ ಬರಲಿಲ್ಲ. ಬದಲಿಗೆ, ಅವರ ಕೆಲಸಗಳನ್ನು ತಿಳಿದು ಅನುಕಂಪಗೊಂಡ ಅಕ್ಕಪಕ್ಕದ ಕೆಲವು ಹಳ್ಳಿಗರು ತಮ್ಮಲ್ಲಿನ ಹಳೆ ಬಟ್ಟೆ, ತರಕಾರಿ ಹಾಗೂ ದವಸಧಾನ್ಯಗಳನ್ನು ತಂದು ಕೊಡ ತೊಡಗಿದರು. ಆದರೆ, ಮಕ್ಕಳನ್ನು ಶಾಲೆಗೆ ಸೇರಿಸುವಾಗ ಅವರು ಅಡ್ಡಿ ಎದುರಿಸಬೇಕಾಯಿತು. ಜಿಲ್ಲಾ ಪರಿಷತ್ ಹೈಸ್ಕೂಲಿಗೆ ಅವರನ್ನು ಸೇರಿಸಲು ಕರೆದುಕೊಂಡು ಹೋದಾಗ ಅದಾಗಲೇ ಅಲ್ಲಿ ಕಲಿಯುತ್ತಿದ್ದ ಮಕ್ಕಳ ಹೆತ್ತವರು ಅಡ್ಡಿ ಮಾಡಿದರಲ್ಲದೆ, ಅವರ ಮೇಲೆ ದೈಹಿಕ ಹಲ್ಲೆ ನಡೆಸಿದರು. ಗಾಯಗೊಂಡ ದತ್ತಾ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಅವರು ಪೊಲೀಸ್ ದೂರು ದಾಖಲಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳು ಮತ್ತು ಸಿವಿಲ್ ಆಸ್ಪತ್ರೆಯ ವೈದ್ಯರು ಮಧ್ಯ ಪ್ರವೇಶಿಸಿ, ವಿರೋಧಿಸಿದ ಹೆತ್ತವರಿಗೆ ಎಚ್‌ಐವಿಯ ಬಗ್ಗೆ ತಿಳಿವಳಿಕೆ ಹೇಳಿದ ಮೇಲೆ ದತ್ತಾರ ಮಕ್ಕಳಿಗೆ ಶಾಲಾ ಪ್ರವೇಶ ಸಿಕ್ಕಿತು. ಆದರೆ, ಮಕ್ಕಳನ್ನು ಉಳಿದ ಮಕ್ಕಳಿಂದ ಪ್ರತ್ಯೇಕವಾಗಿ ತರಗತಿ ಕೋಣೆಯಿಂದ ಹೊರಕ್ಕೆ ಕುಳ್ಳಿರಿಸಲಾಯಿತು. ನಂತರ, ಉಪಯೋಗದಲ್ಲಿಲ್ಲದ ಒಂದು ಕಂಪ್ಯೂಟರ್ ಕೋಣೆಗೆ ಅವರನ್ನು ಸ್ಥಳಾಂತರಿಸಲಾಯಿತು. ಅಲ್ಲಿ, ಶಿಕ್ಷಕರು ಮಧ್ಯಂತರ ಸಮಯದಲ್ಲಿ ಒಬ್ಬೊಬ್ಬರಾಗಿ ಬಂದು ಏನೋ ಒಂದಷ್ಟು ಕಲಿಸಿ ಹೋಗುತ್ತಿದ್ದರು. ಬೆಳಗ್ಗಿನ ಪ್ರಾರ್ಥನೆಯ ಹೊತ್ತಲ್ಲಿ ಆ ಮಕ್ಕಳನ್ನು ಬೇರೆ ಮಕ್ಕಳ ಸಂಪರ್ಕಕ್ಕೆ ಬಾರದಂತೆ ಕೊನೆಯ ಸಾಲಿನಲ್ಲಿ ನಿಲ್ಲಿಸಲಾಗುತ್ತಿತ್ತು. ಮಧ್ಯಾಹ್ನದ ಊಟವನ್ನು ಅವರಿಗೆ ದೂರದಿಂದ ನೀಡಲಾಗುತ್ತಿತ್ತು. ಬೇರೆ ಮಕ್ಕಳು ಬಳಸುವ ನೀರಿನ ನಳ್ಳಿಯನ್ನು ಈ ಮಕ್ಕಳು ಉಪಯೋಗಿಸುವಂತಿರಲಿಲ್ಲ.
ಹೀಗೆ ಕೆಲವು ವರ್ಷಗಳು ಕಳೆಯಿತು. ದತ್ತಾ, ಸಂಧ್ಯಾ, ಅವರ ಮೂವರು ಸ್ವಂತ ಮಕ್ಕಳು ಮತ್ತು ದತ್ತಾರ ವಯಸ್ಕ ತಾಯಿ ಎಚ್‌ಐವಿ ಪಾಸಿಟಿವ್ ಮಕ್ಕಳೊಂದಿಗೆ ವರ್ಷಗಳ ಕಾಲ ಜೊತೆಯಲ್ಲಿದ್ದರೂ ಅವರಿಗೇನೂ ಸೋಂಕು ಹರಡದ್ದನ್ನು ಕಂಡ ನಂತರ ಜನರ ವಿರೋಧ ನಿಧಾನಕ್ಕೆ ಮೃದುವಾಗ ತೊಡಗಿತು. ಹಾಗಾಗಲು ಎಂಟು ವರ್ಷಗಳು ಬೇಕಾದವು. ಅದರ ನಂತರ ಆ ಮಕ್ಕಳ ಶಿಕ್ಷಣ ಹೆಚ್ಚಿನ ಅಡೆತಡೆ ಇಲ್ಲದೆ ಸಾಗತೊಡಗಿತು. ಆದರೆ, ಬೇರೆ ಸಮಸ್ಯೆಗಳು ಇದ್ದಿದ್ದವು. ದತ್ತಾ ಮಕ್ಕಳ ‘ಆಂಟಿ ರಿಟ್ರೋವೈರಲ್ ಥೆರಪಿ’ ಔಷಧಿಗಾಗಿ ೧೩೦ ಕಿ.ಮೀ. ದೂರದ ಅಂಬಾಜೋಗಾಯಿಯಲ್ಲಿದ್ದ ಮೆಡಿಕಲ್ ಕಾಲೇಜಿಗೆ ಹೋಗಬೇಕಾಗುತ್ತಿತ್ತು. ಅಷ್ಟು ದೂರದ ಪ್ರಯಾಣದಿಂದಾಗಿ ಮಕ್ಕಳು ಅಸ್ವಸ್ಥರಾಗಿ ವಾಂತಿ ಮಾಡಿಕೊಳ್ಳುತ್ತಿದ್ದರು. ಅದಕ್ಕಾಗಿ ದಾರಿ ಮಧ್ಯೆ ಪದೇ ಪದೇ ಬಸ್ಸನ್ನು ನಿಲ್ಲಿಸಬೇಕಾಗಿ ಬರುತ್ತಿದ್ದುದರಿಂದ ಬಸ್ಸಿನ ಕಂಡಕ್ಟರ್ ಮತ್ತು ಚಾಲಕರು ಅಸಮಾಧಾನಗೊಳ್ಳುತ್ತಿದ್ದರು. ಕೊನೆಗೊಂದು ದಿನ ದತ್ತಾ ಒಂದು ಸೆಕೆಂಡ್ ಹ್ಯಾಂಡ್ ಓಮ್ನಿ ವ್ಯಾನನ್ನು ಖರೀದಿಸಿ, ಅದನ್ನು ಒಂದು ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿ ಆ ಸಮಸ್ಯೆಯನ್ನು ನಿವಾರಿಸಿಕೊಂಡರು. ಆದರೆ, ಅಷ್ಟು ದೂರ ಪ್ರಯಾಣದ ಕಷ್ಟ ಹಾಗೇಯೇ ಉಳಿಯಿತು. ದತ್ತಾ ಮಹಾರಾಷ್ಟ್ರ ಆರೋಗ್ಯ ಇಲಾಖೆಗೆ ಪತ್ರ ಬರೆದು, ತಮ್ಮ ಮಕ್ಕಳ ಕಷ್ಟವನ್ನು ವಿವರಿಸಿ ಬೀಡ್ ಜಿಲ್ಲೆಯಲ್ಲಿ ‘ಆಂಟಿ ರಿಟ್ರೋವೈರಲ್ ಥೆರಪಿ’ ಔಷಧಿಗಳು ಲಭಿಸುವಂತೆ ಮಾಡಬೇಕೆಂದು ಕೇಳಿಕೊಂಡರು. ಇಲಾಖೆ ಅದಕ್ಕೆ ಸ್ಪಂದಿಸದಾಗ ಮಕ್ಕಳನ್ನು ಜೊತೆಯಲ್ಲಿರಿಸಿಕೊಂಡು ಪ್ರತಿಭಟನೆ ನಡೆಸಿದರು. ಬೇರೆ ಬೇರೆ ಮೂಲಗಳಿಂದ ಇಲಾಖೆ ಮೇಲೆ ಒತ್ತಡ ಹಾಕಿಸಿದರು. ಕೊನೆಗೂ ಆರೋಗ್ಯ ಇಲಾಖೆ ೨೦೧೦ರಲ್ಲಿ ಜಿಲ್ಲಾಸ್ಪತ್ರೆಯಲ್ಲಿ ‘ಆಂಟಿ ರಿಟ್ರೋವೈರಲ್ ಥೆರಪಿ’ ಔಷಧಿಗಳನ್ನು ನೀಡುವ ಒಂದು ಸಬ್‌ಸ್ಟೇಷನ್ ತೆರೆಯಿತು. ಆ ಕ್ರಮ ದತ್ತಾರ ಮಕ್ಕಳು ಔಷಽಗಾಗಿ ಪ್ರಯಾಣಿಸುವ ಕಷ್ಟವನ್ನು ನಿವಾರಿಸಿತು.
೨೦೧೦ರಲ್ಲಿ ದತ್ತಾರು ನಾಂದೇಡ್‌ಗೆ ವರ್ಗ ಮಾಡಲ್ಪಟ್ಟಿದ್ದರು. ಆಗ ಅವರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಬೇಕಾಯಿತು. ಸಂಧ್ಯಾ ಪಾಲಿ ಗ್ರಾಮಕ್ಕೆ ನೆಲೆ ಬದಲಾಯಿಸಿದಾಗಲೇ ತಮ್ಮ ಕಾಲೇಜು ಉಪನ್ಯಾಸಕಿ ಉದ್ಯೋಗವನ್ನು ಬಿಟ್ಟಿದ್ದರು. ಈಗ ಅವರ ಆಶ್ರಯದಲ್ಲಿ ೪೮ ಎಚ್‌ಐವಿ ಪೀಡಿತ ಮಕ್ಕಳಿದ್ದಾರೆ. ಆ ಮಕ್ಕಳಲ್ಲದೆ, ೧೫ ಜನ ಎಚ್‌ಐವಿ ಪಾಸಿಟಿವ್ ವಿಧವೆಯರೂ ಅಲ್ಲಿದ್ದಾರೆ. ಈವರೆಗೆ ಆನಂದಗ್ರಾಮದಲ್ಲಿ ಆಶ್ರಯ ಪಡೆದ ೬೫೦ಕ್ಕೂ ಹೆಚ್ಚು ಎಚ್‌ಐವಿ ಪೀಡಿತ ಮಕ್ಕಳು, ಶಿಕ್ಷಿತರಾಗಿ, ಮೆಕ್ಯಾನಿಕ್ಸ್, ನರ್ಸ್, ಫಾರ್ಮಾಸಿಸ್ಟ್ , ಸ್ಟಿವಾರ್ಡ್ಸ್‌ಗಳಾಗಿ ತರಬೇತಿ ಪಡೆದು ಟಾಟಾ ಮೋಟಾರ‍್ಸ್, ಅಶೋಕ್ ಲೇಲ್ಯಾಂಡ್ ಹಾಗೂ ಕೆಲವು ಆಸ್ಪತ್ರೆಗಳಲ್ಲಿ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ಹೆತ್ತವರು ಎಚ್‌ಐವಿ ಪೀಡಿತರಾಗಿದ್ದರೂ ೬೦ ಹೆಣ್ಣು ಮಕ್ಕಳು ಸೂಕ್ತ ವೈದ್ಯಕೀಯ ಆರೈಕೆಯ ನೆರವಿನಿಂದಾಗಿ ಆ ಕಾಯಿಲೆಯಿಂದ ಸುರಕ್ಷಿತರಾಗಿ, ಮದುವೆಯೂ ಆಗಿ ಸಾಮಾನ್ಯರಂತೆ ಬದುಕುತ್ತಿದ್ದಾರೆ.
” ಆನಂದ ಗ್ರಾಮದಲ್ಲಿ ಆಶ್ರಯ ಪಡೆದ ೬೫೦ಕ್ಕೂ ಹೆಚ್ಚು ಎಚ್‌ಐವಿ ಪೀಡಿತ ಮಕ್ಕಳು, ಶಿಕ್ಷಿತರಾಗಿ, ಮೆಕ್ಯಾನಿಕ್ಸ್, ನರ್ಸ್, ಫಾರ್ಮಾಸಿಸ್ಟ್ , ಸ್ಟಿವಾರ್ಡ್ಸ್‌ಗಳಾಗಿ ತರಬೇತಿ ಪಡೆದು ಟಾಟಾ ಮೋಟಾರ‍್ಸ್, ಅಶೋಕ್ ಲೇಲ್ಯಾಂಡ್ ಹಾಗೂ ಕೆಲವು ಆಸ್ಪತ್ರೆಗಳಲ್ಲಿ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ.”
ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…
ಮೈಸೂರಿನ ಪ್ರಮುಖ ವೃತ್ತಗಳಾದ ಸಿದ್ದಪ್ಪ ಸ್ಕ್ವೇರ್, ಸಂಸ್ಕೃತ ಪಾಠಶಾಲೆ, ವಿ.ವಿ.ಪುರಂ, ತಾತಯ್ಯ ವೃತ್ತ ಮೊದಲಾದ ಕಡೆಗಳಲ್ಲಿ ಭಿಕ್ಷುಕರು, ಅಂಗವಿಕಲರು ಪ್ರತಿನಿತ್ಯ…
ಮೈಸೂರಿನ ವೀಣೆ ಶಾಮಣ್ಣ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನವೂ ನಿವಾಸಿಗಳು ಹೊಲಸು ನೀರನ್ನು…
ಹೊಸ ವರ್ಷದ ಆಗಮನವೆಂದರೆ ಬಣ್ಣಬಣ್ಣದ ದೀಪಗಳ ಅಲಂಕಾರ, ಸಿಹಿ ವಿತರಣೆ ಅಥವಾ ಮಧ್ಯರಾತ್ರಿಯ ಸಂಭ್ರಮಾಚರಣೆಯಷ್ಟೇ ಅಲ್ಲ. ಅದು ಕಾಲ ಚಕ್ರದ…
ಪುನೀತ್ ಮಡಿಕೇರಿ ಹೊಸ ವರ್ಷಾಚರಣೆಗೆ ಕೊಡಗಿನತ್ತ ಮುಖ ಮಾಡಿದ ಜನರು; ಜಿಲ್ಲೆಯಲ್ಲಿ ಹೆಚ್ಚಿದ ವಾಹನ ದಟ್ಟಣೆ ಮಡಿಕೇರಿ: ಹೊಸ ವರ್ಷವನ್ನು…
೨೦೨೫ರ ಅವಧಿಯಲ್ಲಿ ರಾಜಕೀಯವಾಗಿ ಗಂಭೀರ ವಿಪ್ಲವಗಳನ್ನು ಕಾಣದೆ ಹೋದರೂ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದಷ್ಟು ಬದಲಾವಣೆಗಳು ನಡೆದಿರುವುದು…