ಸ್ವಾವಲಂಬನೆಗೆ ಸಹಕಾರಿಯಾದ ನಿಯೋಬೋಲ್ಟ್ ಸ್ಕೂಟರ್ ಗಾಲಿಕುರ್ಚಿ
2010ರ ಆಗಸ್ಟ್ ತಿಂಗಳಿನಲ್ಲಿ ನಾಗ್ಪುರದ ನಿವಾಸಿ ನಿತೀನ್‌ರ ಜನ್ಮ ದಿನಾಚರಣೆಯ ಸಂಭ್ರಮ ಆಚರಿಸಲು ಅವರು ಮತ್ತು ಅವರ ಭಾವೀ ಪತ್ನಿ ಪುಣೆಯ ೩೨ ವರ್ಷ ಪ್ರಾಯದ ಜ್ಯೋತಿ ಹತ್ತಿರದ ಲೋನಾವಳಕ್ಕೆ ಹೋಗುವ ಸಲುವಾಗಿ ರೈಲು ಹತ್ತಿದ್ದರು. ರೈಲು ಚಲಿಸಲು ಶುರು ಮಾಡಿದಾಗ ಅವರಿಗೆ ತಾವು ಲೋನಾವಳಕ್ಕೆ ಹೋಗುವ ರೈಲಿನ ಬದಲು ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದ ರೈಲು ಹತ್ತಿದ್ದು ಅರಿವಿಗೆ ಬಂತು. ಚಲಿಸುವ ರೈಲಿನಿಂದ ಹೊರಕ್ಕೆ ಹಾರುವ ತರಾತುರಿಯಲ್ಲಿ ಜ್ಯೋತಿ ಕಾಲು ಜಾರಿ ಬಿದ್ದು ರೈಲಿನಡಿ ಸಿಲುಕಿ, ಅವರ ಬಲಗಾಲು ಜಜ್ಜಿ ಹೋಯಿತು. ಎಡಗೈಯ ಕೆಲವು ಬೆರಳುಗಳು ತುಂಡಾದವು. ಆಸ್ಪತ್ರೆಗೆ ದಾಖಲಾದಾಗ ವೈದ್ಯರಿಗೆ ಜ್ಯೋತಿಯ ಬಲಗಾಲನ್ನು ಕತ್ತರಿಸಿ ತೆಗೆಯುವ ಹೊರತಾಗಿ ಬೇರಾವುದೇ ದಾರಿ ಉಳಿದಿರಲಿಲ್ಲ.
ಮುಂದೆ, ೨೦೧೧ರ ವೆಲೆಂಟೈನ್ ದಿನ ನಿತೀನ್ ಜೊತೆ ಜ್ಯೋತಿಯ ಮದುವೆ ನಡೆಯಿತು. ದಂಪತಿಗೆ ಈಗ ೧೩ ವರ್ಷ ಪ್ರಾಯದ ಒಂದು ಗಂಡು ಮಗುವಿದೆ. ಆದರೆ, ಕಾಲು ಕಳೆದುಕೊಂಡ ದಿನದಿಂದಲೂ ಜ್ಯೋತಿ ತಯಾಡೆಯ ದಿನನಿತ್ಯದ ಬದುಕು ಬಹಳ ದುಸ್ತರವಾಗಿ ನಡೆಯುತ್ತಿತ್ತು. ಆದರೆ, ೨೦೨೪ರ ಆಗಸ್ಟ್ ತಿಂಗಳಿಂದೀಚೆಗೆ ಜ್ಯೋತಿ ತನ್ನ ಹಿಂದಿನ ‘ಚಲನೆ’ಯನ್ನು ಮರಳಿ ಗಳಿಸಿದ್ದಲ್ಲದೆ, ಝೊಮಾಟೋ ‘ಡೆಲಿವರಿ ಪಾರ್ಟ್ನರ್’ ಆಗಿ ಕೆಲಸ ಮಾಡುತ್ತ ತಿಂಗಳಿಗೆ ೨೦-೩೦ ಸಾವಿರ ರೂಪಾಯಿ ಗಳಿಸುತ್ತಿದ್ದಾರೆ.
ಒಂದು ಮಗುವಿನ ತಂದೆಯಾಗಿರುವ ೩೭ ವರ್ಷ ಪ್ರಾಯದ ಗಿರೀಶ್ ಭಗವಾನ್ ಪಾಟೇಕರ್ ೨೦೧೮ರಲ್ಲಿ ಬೆನ್ನುಮೂಳೆಗೆ ಪೆಟ್ಟು ಮಾಡಿಕೊಂಡು ದೈಹಿಕ ಚಲನೆಯನ್ನು ಕಳೆದುಕೊಂಡು, ಉದ್ಯೋಗವಿಲ್ಲದೆ ಹಲವು ವರ್ಷಗಳಕಾಲ ಮನೆಯಲ್ಲಿ ಕುಳಿತುಕೊಂಡಿದ್ದರು. ಅವರಿಗೆ ತನ್ನ ಮಗುವನ್ನು ಶಾಲೆಗೆ ಕರೆದುಕೊಂಡು ಹೋಗಿ ಬರುವಂತಹ ಚಿಕ್ಕ ಕೆಲಸವನ್ನೂ ಮಾಡಲಾಗದಂತಹ ಸ್ಥಿತಿಯಲ್ಲಿದ್ದರು. ಉದ್ಯೋಗವಿಲ್ಲದ ಕಾರಣ ಮಗುವಿನ ಶಾಲಾ ಶುಲ್ಕವನ್ನು ಭರಿಸಲೂ ಪರದಾಡುತ್ತಿದ್ದರು. ಅದೇ ಗಿರೀಶ್ ಈಗ ತನ್ನ ಮಗುವನ್ನು ಶಾಲೆಗೂ ಕರೆದುಕೊಂಡು ಹೋಗಿ ಬರುತ್ತಿದ್ದಾರೆ, ಡೆಲಿವರಿ ಮ್ಯಾನ್ ಆಗಿ ಉದ್ಯೋಗವನ್ನೂ ಮಾಡುತ್ತಿದ್ದಾರೆ. ಹಾಗೂ ಯಾವುದೇ ತೊಂದರೆಯಿಲ್ಲದೆ ತನ್ನ ಮಗುವಿನ ಶಾಲಾ ಶುಲ್ಕವನ್ನೂ ಕಟ್ಟುತ್ತಿದ್ದಾರೆ. ಜ್ಯೋತಿ ತಯಾಡೆ ಮತ್ತು ಗಿರೀಶ್ ಇಬ್ಬರೂ ತಮ್ಮ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಲು ಕಾರಣವಾದುದು ಸಂದೀಪ್ ತಲ್ವಾರ್ ಸಿಇಒ ಆಗಿರುವ ‘ಇಂಪ್ಯಾಕ್ಟ್ ಗುರು ಫೌಂಡೇಶನ್’ ಎಂಬ ಒಂದು ಸರ್ಕಾರೇತರ ಸಂಸ್ಥೆ.
ಸಂದೀಪ್ ತಲ್ವಾರ್ ಕಳೆದ ಮೂರು ದಶಕಗಳಿಂದ ಕಾರ್ಪೊರೇಟ್ ಕ್ಷೇತ್ರದಲ್ಲಿ ಒಂದಲ್ಲ ಒಂದು ರೀತಿಯ ಸಾಮಾಜಿಕ ಕಾರ್ಯಗಳಿಗಾಗಿ ಮಾರ್ಕೆಟಿಂಗ್ ಪ್ರಚಾರ ಮತ್ತು ನಿಧಿ ಸಂಗ್ರಹ ಮಾಡುವ ಕಾರ್ಯಗಳಲ್ಲಿ ತೊಡಗಿದ್ದವರು. ತಮ್ಮ ಕಾರ್ಯಗಳಲ್ಲಿ ಅವರು ಸಮಾಜದಲ್ಲಿ ವಿವಿಧ ರೀತಿಯ ಸವಾಲುಗಳನ್ನು ಎದುರಿಸುವ ವ್ಯಕ್ತಿಗಳನ್ನು ಮುಖಾಮುಖಿಯಾಗುತ್ತಿದ್ದರು. ಅಂತಹವರಲ್ಲಿ ಅವರನ್ನು ಅತ್ಯಂತ ಹೆಚ್ಚು ಕಲಕಿದವರೆಂದರೆ ಏನೇನೋ ಆಕಸ್ಮಿಕಗಳಿಗೆ ಸಿಲುಕಿ, ತಮ್ಮ ಅಂಗಾಂಗಗಳನ್ನು ಕಳೆದುಕೊಂಡು ಚಲನೆಯ ಸ್ವಾತಂತ್ರ್ಯದಿಂದ ವಂಚಿತರಾದ ವಿಕಲಾಂಗರು.
ಇದನ್ನು ಓದಿ: ನವೆಂಬರ್‌ನಲ್ಲೇ 1.59 ಕೋಟಿ ರೂ ರಾಜಸ್ವ ಸಂಗ್ರಹ
ಒಮ್ಮೆ ಮುಂಬೈಯಲ್ಲಿ ಅವರಿಗೆ ಬೀದಿ ಬದಿಯಲ್ಲಿ ಹಣ್ಣು ಮಾರಿಕೊಂಡು ಜೀವಿಸುವ ಒಂದು ಬಡ ಕುಟುಂಬದ ಮಹೇಶ್ ಎಂಬ ಒಬ್ಬ ಹುಡುಗನ ಮುಖಾಮುಖಿಯಾಯಿತು. ಆ ಹುಡುಗ ಒಂದು ದಿನ ಮಧ್ಯಾಹ್ನದ ಹೊತ್ತು ತಾಯಿಯ ಜೊತೆಯಲ್ಲಿ ಒಂದು ಮರದಡಿ ಹಣ್ಣು ಮಾರಲು ನಿಂತಿದ್ದಾಗ ಆ ಮರ ಅವನ ಮೇಲೆ ತುಂಡಾಗಿ ಬಿದ್ದು, ಬೆನ್ನು ಮೂಳೆ ಜಖಂಗೊಂಡು ಸೊಂಟದ ಕೆಳಭಾಗ ಸಂಪೂರ್ಣವಾಗಿ ಸ್ವಾಽನ ತಪ್ಪಿ, ಅವನು ನಡೆಯುವ ಶಕ್ತಿಯನ್ನು ಕಳೆದುಕೊಂಡಿದ್ದನು. ಮಹೇಶನ ಪರಿಸ್ಥಿತಿಯನ್ನು ನೋಡಿ ಮನಸ್ಸು ಕರಗಿದ ಸಂದೀಪ್ ಅವನಿಗೆ ಸಹಾಯ ಮಾಡುವುದಕ್ಕಾಗಿ ಹಲವರನ್ನು ವಿಚಾರಿಸಿದಾಗ ಹೆಚ್ಚಿನವರು ಅವನಿಗೊಂದು ಗಾಲಿಕುರ್ಚಿ ನೀಡುವುದು ಎಲ್ಲಕ್ಕಿಂತ ಒಳ್ಳೆಯದು ಎಂದರು. ಒಂದು ಗಾಲಿಕುರ್ಚಿ ಮಹೇಶನಿಗೆ ಬಹಳಷ್ಟು ಸಹಾಯ ಮಾಡುವುದು ನಿಜವಾದರೂ ಅದು ಅವನಿಗೆ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಹೆಚ್ಚಿನ ಸಹಾಯ ನೀಡದು ಎಂಬುದು ಸಂದೀಪರ ಆಲೋಚನೆಯಾಗಿತ್ತು. ಅವನಿಗೆ ಅದಕ್ಕೂ ಹೆಚ್ಚಿನ ಸಹಾಯ ಮಾಡುವುದು ಹೇಗೆ ಎಂದು ಆಲೋಚಿಸಿದ ಅವರು, ಐಐಟಿ ಮದ್ರಾಸ್ ಬೆಂಬಲಿತ ‘ನಿಯೋಮೋಶನ್ ಅಸಿಸ್ಟಿವ್ ಸಲೂಷನ್ಸ್’ ಎಂಬ ಸ್ಟಾರ್ಟ್‌ಅಪ್‌ನ ಪ್ರೊಫೆಸರುಗಳನ್ನು ಭೇಟಿಯಾದರು.
‘ನಿಯೋಮೋಶನ್ ಅಸಿಸ್ಟಿವ್ ಸಲೂಷನ್ಸ್’ ವಿಕಲಾಂಗರ ಬಳಕೆಗೆ ವಿವಿಧ ಸಾಧನಗಳನ್ನು ತಯಾರಿಸುವ ಒಂದು ಸ್ಟಾರ್ಟ್‌ಅಪ್. ಆದರೆ, ಸಂದೀಪ್ ತಮ್ಮ ಆಲೋಚನೆಯನ್ನು ಹೇಳಿಕೊಂಡಾಗ ಅಲ್ಲಿನ ಎಂಜಿನಿಯರುಗಳು ತಮ್ಮಲ್ಲಿ ಗಾಲಿ ಕುರ್ಚಿಯ ಹೊರತಾಗಿ ಬೇರಾವ ಪರಿಹಾರಗಳಿಲ್ಲ ಎಂದರು. ಆಗ ಸಂದೀಪ್, ‘ಒಂದು ಸಾಧಾರಣ ಸ್ಕೂಟರಿಗೆ ಅಗತ್ಯ ಬದಲಾವಣೆ ಮಾಡಿ, ಒಂದು ಗಾಲಿ ಕುರ್ಚಿಗೆ ಅಳವಡಿಸಿದರೆ ಹೇಗಿರುತ್ತದೆ?’ ಎಂದು ತಮ್ಮದೇ ಒಂದು ಆಲೋಚನೆಯನ್ನು ಅವರೊಂದಿಗೆ ಹಂಚಿಕೊಂಡರು. ಸಂದೀಪರ ಆಲೋಚನೆಯಂತೆ ನಿಯೋಬೋಲ್ಟ್ ಒಂದು ಸ್ಕೂಟರಿಗೆ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿ, ಅದನ್ನು ಒಂದು ಗಾಲಿಕುರ್ಚಿಗೆ ಅಳವಡಿಸಿ ಒಂದು ಮೂಲ ಮಾದರಿ (ಪ್ರೋಟೋಟೈಪ್)ಯನ್ನು ತಯಾರಿಸಿ ಕೊಟ್ಟಿತು. ಮಹೇಶ್ ಆ ವಿಶೇಷ ಗಾಲಿಕುರ್ಚಿಯಲ್ಲಿ ಕುಳಿತು ರಸ್ತೆಯಲ್ಲಿ ತಿರುಗಾಡಲು ಶಕ್ಯನಾದನು.
ಇದನ್ನು ಓದಿ: ಅದ್ದೂರಿಯಾಗಿ ನೆರವೇರಿದ ಶ್ರೀ ಮುತ್ತುರಾಯಸ್ವಾಮಿ ಜಾತ್ರೆ
ಸಂದೀಪ್ ತಲ್ವಾರ್ ಒಬ್ಬ ಮಹೇಶನಿಗೆ ನೆರವಾಗಲು ಆವಿಷ್ಕರಿಸಿದ ‘ನಿಯೋಬೋಲ್ಟ್ ಸ್ಕೂಟರ್ ಗಾಲಿಕುರ್ಚಿ’ ಮುಂದೆ ಜ್ಯೋತಿ ತಯಾಡೆ, ಗಿರೀಶ್ ಭಗವಾನ್‌ರಂತಹ ಸಾವಿರಾರು ಜನ ವಿಕಲಾಂಗರ ಬದುಕಿಗೆ ಚಲನೆಯನ್ನು ನೀಡಿತು. ೨೦೧೧ರ ಜನಗಣತಿಯ ಪ್ರಕಾರ ದೇಶದಲ್ಲಿ ಎರಡೂವರೆ ಕೋಟಿಗೂ ಮಿಕ್ಕಿ ಅಂಗವಿಕಲರಿದ್ದಾರೆ. ತಮ್ಮ ಅಂಗವಿಕಲತೆಯಿಂದಾಗಿ ಅವರಲ್ಲಿ ಹೆಚ್ಚಿನವರು ಸೂಕ್ತ ಶಿಕ್ಷಣ, ಗೌರವಯುತ ಉದ್ಯೋಗ, ಸಾರ್ವಜನಿಕ ಸ್ಥಳಗಳ ಬಳಕೆ ಮೊದಲಾದ ಮೂಲ ಅಗತ್ಯಗಳಿಂದ ವಂಚಿತರಾಗುತ್ತಾರೆ. ಸಂದೀಪ್ ತಲ್ವಾರ್ ಮತ್ತು ಅವರ ತಂಡ ೨೦೨೧ರಲ್ಲಿ ‘ಇಂಪ್ಯಾಕ್ಟ್ ಗುರು ಫೌಂಡೇಶನ್’ ಅಡಿಯಲ್ಲಿ ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿ ವಿಕಲಾಂಗರಿಗೆ ಉಚಿತವಾಗಿ ಸ್ಕೂಟರ್ ಗಾಲಿಕುರ್ಚಿಯನ್ನು ನೀಡುವುದನ್ನು ಪ್ರಾರಂಭಿಸಿತು. ಆ ಮೂಲಕ ವಿಕಲಾಂಗರು ತಮ್ಮ ಚಲನೆಯನ್ನು ಮರಳಿ ಪಡೆದು, ಕಳೆದುಕೊಂಡ ತಮ್ಮ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸವನ್ನು ಮರಳಿ, ಗೌರವಯುತ ಉದ್ಯೋಗಗಳನ್ನು ಪಡೆದು ಸಮಾಜದಲ್ಲಿ ಇತರ ಸಾಮಾನ್ಯರಂತೆ ಬದುಕಲು ನೆರವಾಗುತ್ತಿದ್ದಾರೆ.
ಮೊದಲಿಗೆ, ‘ಇಂಪ್ಯಾಕ್ಟ್ ಗುರು ಫೌಂಡೇಶನ್’ ದೇಶದಾದ್ಯಂತ ತನ್ನ ಸಂಪರ್ಕದಲ್ಲಿರುವ ೫೦೦ಕ್ಕೂ ಆಸ್ಪತ್ರೆ, ವಿಕಲಾಂಗರ ವಿವಿಧ ಸಂಘಟನೆ ಮತ್ತುಸ್ಥಳೀಯ ಸರ್ಕಾರೇತರ ಸಂಸ್ಥೆಗಳ ಮೂಲಕ ಅರ್ಹ ವಿಕಲಾಂಗರನ್ನು ಗುರುತಿಸುತ್ತದೆ. ನಂತರ, ಅವರ ಸಂದರ್ಶನ ನಡೆಸಿ, ಆಯ್ಕೆಯಾದವರಿಗೆ ಸ್ಕೂಟರ್ ಗಾಲಿಕುರ್ಚಿಯನ್ನು ಬಳಸಲು ಹಾಗೂ ಅವುಗಳನ್ನು ನೋಡಿಕೊಳ್ಳಲು ಸೂಕ್ತ ತರಬೇತಿಯನ್ನು ನೀಡುತ್ತದೆ. ನಂತರ, ಅವರ ದೈಹಿಕ ಅಳತೆಯನ್ನು ಪಡೆದು ಪ್ರತಿಯೊಬ್ಬ ವಿಕಲಾಂಗ ವ್ಯಕ್ತಿಗೆ ‘ಕಸ್ಟಮೈಸ್ಡ್’ ಆದ ‘ನಿಯೋಬೋಲ್ಟ್ ಸ್ಕೂಟರ್ ಗಾಲಿಕುರ್ಚಿ’ಯನ್ನು ನೀಡುತ್ತದೆ. ನಿಯೋಬೋಲ್ಟ್ ಸಂಸ್ಥೆಯು ಸ್ಕೂಟರ್ ಗಾಲಿಕುರ್ಚಿಯನ್ನು ರಚಿಸಿ, ತಯಾರಿಸುವ ಹೊಣೆ ಹೊತ್ತರೆ, ‘ಇಂಪ್ಯಾಕ್ಟ್ ಗುರು ಫೌಂಡೇಶನ್’ ದಾನಿಗಳನ್ನು ಗುರುತಿಸುವುದು, ವಿಕಲಾಂಗರ ತರಬೇತಿ ಹಾಗೂ ಅವರಿಗೆ ಸ್ಕೂಟರ್ ಗಾಲಿಕುರ್ಚಿಗಳನ್ನು ತಲುಪಿಸುವ ಹೊಣೆಯನ್ನು ಹೊರುತ್ತದೆ. ಪ್ರತಿಯೊಂದು ಸ್ಕೂಟರ್ ಗಾಲಿಕುರ್ಚಿಯ ಬೆಲೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿಗಳಷ್ಟು. ಇಂಪ್ಯಾಕ್ಟ್ ಗುರು ಫೌಂಡೇಶನ್ ಈ ಕಾರ್ಯಕ್ಕೆ ಬೇಕಾಗುವ ಹಣಕಾಸಿನ ಸಹಾಯವನ್ನು ಕಾರ್ಪೋರೇಟ್ ಸಂಸ್ಥೆಗಳು ಮತ್ತು ಖಾಸಗೀ ದಾನಿಗಳಿಂದ ಪಡೆಯುತ್ತದೆ. ಇಡೀ ಕಾರ್ಯಕ್ರಮವು ಅತ್ಯಂತ ಪಾರದರ್ಶಕ ರೀತಿಯಲ್ಲಿ ನಡೆದು, ಇಂಪ್ಯಾಕ್ಟ್ ಗುರು ಫೌಂಡೇಶನ್ ಪ್ರತಿಯೊಂದು ರೂಪಾಯಿಗೂ ಲೆಕ್ಕವಿಡುತ್ತದೆ. ಈವರೆಗೆ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ಉತ್ತರಪ್ರದೇಶ ಹಾಗೂ ಬಿಹಾರ ಮೊದಲಾದ ರಾಜ್ಯಗಳ ೭,೦೦೦ಕ್ಕೂ ಅಧಿಕ ವಿಕಲಾಂಗರು ಇಂಪ್ಯಾಕ್ಟ್ ಗುರು ಫೌಂಡೇಶನ್‌ನ ಈ ಕಾರ್ಯಕ್ರಮದಿಂದಾಗಿ ಸ್ವಾವಲಂಬನೆ ಹಾಗೂ ಗೌರವದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ.
ವಿಕಲಾಂಗರ ಬಗ್ಗೆ ನಿರ್ಲಕ್ಷ ವೇ ಪ್ರಧಾನವಾಗಿರುವ ಸಮಾಜದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ವಿಕಲಾಂಗರು ಗಾಲಿಕುರ್ಚಿ ಬಳಸಿ ಅತ್ತಿತ್ತ ಚಲಿಸಲು ಪಡುವ ಅಧ್ವಾನಗಳನ್ನು ನೋಡಿಯೇ ತಿಳಿಯಬೇಕು. ರಸ್ತೆಗಳು ಗಾಲಿಕುರ್ಚಿಗಳ ಚಲನೆಗೆ ಅನುಕೂಲಕರವಾಗಿಲ್ಲ. ಖಾಸಗೀ ಬಿಡಿ, ಸಾರ್ವಜನಿಕ ಕಟ್ಟಡಗಳಲ್ಲೂ ಗಾಲಿಕುರ್ಚಿಗಳ ಚಲನೆಗೆ ಬೇಕಾದ ರ‍್ಯಾಂಪ್‌ಗಳು ಈಗೀಗಷ್ಟೇ ಕಾಣಿಸಿಕೊಳ್ಳಲು ಶುರುವಾಗಿವೆ. ಇಂತಹ ಸನ್ನಿವೇಶಗಳಲ್ಲಿ ನಿಯೋಬೋಲ್ಟ್ ಸ್ಕೂಟರ್ ಗಾಲಿ ಕುರ್ಚಿಗಳು ವಿಕಲಾಂಗರಿಗೆ ಹೊಸ ತರಹದ ಆತ್ಮವಿಶ್ವಾಸದ ಚಲನೆಯನ್ನು ನೀಡಿವೆ. ನಿಯೋಬೋಲ್ಟ್ ಸ್ಕೂಟರ್ ಗಾಲಿ ಕುರ್ಚಿಯು ಒಮ್ಮೆಗೆ ೧೧೦ ಕೆಜಿ ತೂಕವನ್ನು ತಡೆದುಕೊಳ್ಳಬಹುದಾಗಿದ್ದು ಐಎಸ್‌ಒ -೦೭೧೭೬ ಮತ್ತು ೧೩೪೮೫ ಗುಣಮಟ್ಟದ್ದಾಗಿದೆ. ಇದರ ೪೮ ವಿ ಲೀಥಿಯಮ್-ಆಯನ್ ಬ್ಯಾಟರಿಯು ನಾಲ್ಕು ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗಬಲ್ಲದು. ಪ್ರತೀಬಾರಿ ಚಾರ್ಜ್ ಮಾಡಿದಾಗ ಗಂಟೆಗೆ ೨೫ ಕಿ.ಮೀ. ವೇಗದಲ್ಲಿ ೨೫ ಕಿ.ಮೀ. ತನಕ ಚಲಿಸಬಲ್ಲದು. ಇದರಲ್ಲಿ ಅಳವಡಿಸಲಾದ ಪೇಟೆಂಟ್ ಹೊಂದಿದ ‘ಕ್ವಾಡ್ರಾ ಲಾಕ್’ ವ್ಯವಸ್ಥೆಯ ಮೂಲಕ ಗಾಲಿಚಕ್ರವನ್ನು ಬೇಡವಾದಾಗ ಸುಲಭದಲ್ಲಿ ಸ್ಕೂಟರ್ ಭಾಗದಿಂದ ಪ್ರತ್ಯೇಕಿಸಿ ಸಾಮಾನ್ಯ ಗಾಲಿಚಕ್ರದಂತೆ ಬಳಸಬಹುದು ಹಾಗೂ, ಪುನಃ ಸುಲಭದಲ್ಲಿ ಜೋಡಿಸಬಹುದು.
‘ಇಂಪ್ಯಾಕ್ಟ್ ಗುರು ಫೌಂಡೇಶನ್’ ವಿಕಲಾಂಗರಿಗೆ ನಿಯೋಬೋಲ್ಟ್ ಸ್ಕೂಟರ್ ಗಾಲಿಕುರ್ಚಿಯನ್ನು ನೀಡುವುದು ಮಾತ್ರವಲ್ಲದೆ ಸ್ವಿಗ್ಗಿ, ಝೊಮಾಟೋ ಮೊದಲಾದ ಆಹಾರ ಸರಬುರಾಜು ಮಾಡುವ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ ಉದ್ಯೋಗವನ್ನೂ ಕೊಡಿಸುವ ಮೂಲಕ ಅವರ ಬದುಕಿಗೊಂದು ದಾರಿಯನ್ನೂ ಮಾಡಿಕೊಡುತ್ತದೆ
” ಸಂದೀಪ್ ತಲ್ವಾರ್ ಮಹೇಶನಿಗೆ ನೆರವಾಗಲು ಆವಿಷ್ಕರಿಸಿದ ‘ನಿಯೋಬೋಲ್ಟ್ ಸ್ಕೂಟರ್ ಗಾಲಿಕುರ್ಚಿ’ ಮುಂದೆ ಜ್ಯೋತಿ ತಯಾಡೆ, ಗಿರೀಶ್ ಭಗವಾನ್‌ರಂತಹ ಸಾವಿರಾರು ಜನ ವಿಕಲಾಂಗರ ಬದುಕಿಗೆ ಚಲನೆಯನ್ನು ನೀಡಿತು”
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…