ಅಂಕಣಗಳು

ವಿನೂತನ ರೀತಿಯಲ್ಲಿ ದಾನ ನೀಡುವ ‘ಅನುಕಂಪದ ಗೋಡೆ’ಗಳು!

ಪಂಜು ಗಂಗೊಳ್ಳಿ 

ಮುಂಬೈ, ದೆಹಲಿ, ಕೊಲ್ಕತ್ತಾ, ಚೆನ್ನೈ ಮೊದಲಾದ ನಗರಗಳಲ್ಲಿ ಅಲ್ಲಲ್ಲಿ ಕೆಲವು ಗೋಡೆಗಳ ಮೇಲೆ, ‘ಲೀವ್ ವಾಟ್ ಯೂ ಡೋಂಟ್ ನೀಡ್, ಟೇಕ್ ವಾಟ್ ಯೂ ಡು (ನಿಮಗೆ ಬೇಡವಾದುದನ್ನು ಇಲ್ಲಿ ಇಡಿ, ನಿಮಗೆ ಬೇಕಾದುದನ್ನು ತೆಗೆದುಕೊಳ್ಳಿ)’ ಎಂದು ಬರೆದ ಗೋಡೆ ಬರಹಗಳು ಕಾಣಿಸುತ್ತವೆ. ನಮ್ಮ ದೇಶದಲ್ಲಿ ಗೋಡೆ ಬರಹಗಳು ಕಾಣಿಸುವುದು ತೀರಾ ಸಾಮಾನ್ಯ ಸಂಗತಿ. ಚುನಾವಣೆ, ಯಾವುದಾದರೂ ಧರಣಿ, ಸತ್ಯಾಗ್ರಹಗಳ ಸಮಯದಲ್ಲಂತೂ ಗೋಡೆ ಬರಹಗಳು ಇಲ್ಲದ ಗೋಡೆಗಳೇ ನಮ್ಮಲ್ಲಿಲ್ಲ ಎನ್ನಬಹುದು. ಆದರೆ, ಇದು ಇವೆಲ್ಲಕ್ಕಿಂತ ಭಿನ್ನವಾದ ಗೋಡೆ ಬರಹ.

ಈ ಬರಹಗಳನ್ನು ಬರೆದ ಗೋಡೆಗಳ ಮೇಲೆ ಬಟ್ಟೆ, ಶೂ, ಪುಸ್ತಕ, ಕೊಡೆ, ಸ್ವೆಟರ್, ರೈನ್ ಕೋಟ್, ಮಕ್ಕಳ ಆಟಿಕೆ, ಗೃಹಬಳಕೆ ಸಾಮಗ್ರಿಗಳು ಮತ್ತು ಪ್ಯಾಕ್ ಮಾಡಿದ ಆಹಾರ ವಸ್ತು ಮೊದಲಾದವುಗಳನ್ನು ನೇತು ಹಾಕಿಡಲಾಗಿರುತ್ತದೆ. ಯಾರಿಗಾದರೂ ಈ ವಸ್ತುಗಳು ಬೇಕಿದ್ದರೆ ಅವರು ಇವುಗಳನ್ನು ತೆಗೆದುಕೊಳ್ಳಬಹುದು, ಉಚಿತವಾಗಿ. ಯಾರನ್ನೂ ಕೇಳಬೇಕಾಗಿಲ್ಲ. ಯಾರು ಏಕೆ ಎಂದು ಕೇಳುವುದೂ ಇಲ್ಲ. ಈ ವಸ್ತುಗಳನ್ನು ನೇತು ಹಾಕಿಟ್ಟಿರುವುದೇ ಅಗತ್ಯವಿರುವವರು ತೆಗೆದುಕೊಳ್ಳಿ ಅಂತಲೇ. ಹಾಗೆಯೇ, ಯಾರ ಬಳಿಯಾದರೂ ಇಂತಹ ವಸ್ತುಗಳು ಬಳಸಿ ಉಳಿದಿದ್ದರೆ, ಅಥವಾ ಅವರಿಗೆ ಈ ವಸ್ತುಗಳು ಬೇಡವಾಗಿದ್ದರೆ ಅಂತಹವರು ತಮ್ಮ ಆ ವಸ್ತುಗಳನ್ನು ತಂದು ಈ ಗೋಡೆಗಳ ಮೇಲೆ ನೇತು ಹಾಕಬಹುದು. ಏಕೆಂದರೆ, ಈ ಗೋಡೆಗಳು ‘ಅನುಕಂಪದ ಗೋಡೆ (ವಾಲ್ ಆಫ್ ಕೈಂಡ್‌ನೆಸ್)’ಗಳು.

ಅನುಕಂಪದ ಗೋಡೆಗಳು ಮೊತ್ತ ಮೊದಲ ಬಾರಿಗೆ ತಲೆ ಎತ್ತಿದ್ದು ೨೦೧೫ರಲ್ಲಿ, ಇರಾನಿನ ಮಶಾದ್ ಎಂಬಲ್ಲಿ. ಅಲ್ಲಿ ಚಳಿಗಾಲದ ಒಂದು ದಿನ ಯಾರೋ ಅನಾಮಧೇಯರು ಒಂದು ಗೋಡೆಯ ಮೇಲೆ, ಕೊಕ್ಕೆಗಳನ್ನು ಹುಗಿದು, ಅವುಗಳಿಗೆ ಬೆಚ್ಚಗಿನ ಬಟ್ಟೆಗಳನ್ನು ಸಿಕ್ಕಿಸಿ, ‘ಲೀವ್ ವಾಟ್ ಯೂ ಡೋಂಟ್ ನೀಡ್, ಟೇಕ್ ವಾಟ್ ಯೂ ಡು’ ಎಂಬ ಎರಡು ಸಾಲಿನ ಬರಹವನ್ನು ಬರೆದು ಹೋಗಿದ್ದರು. ಅಂದಿನಿಂದ, ಅಂತಹ ಗೋಡೆಗಳು ‘ಅನುಕಂಪದ ಗೋಡೆ’ಗಳು ಎಂಬ ಹೆಸರಿನಿಂದ ಪ್ರಪಂಚದ ಹಲವೆಡೆ ತಲೆ ಎತ್ತಿ, ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೂ ತಲೆ ಎತ್ತುತ್ತಿವೆ. ೨೦೧೬ರಲ್ಲಿ ಹೈದರಾಬಾದಿನಲ್ಲಿ ಭಾರತದ ಮೊತ್ತ ಮೊದಲ ಅನುಕಂಪದ ಗೋಡೆ ಹುಟ್ಟಿಕೊಂಡಿತು. ಅದರ ನಂತರ, ತಣ್ಣಗಿನ ಕಾಶ್ಮೀರದಿಂದ ಹಿಡಿದು ಉರಿ ಬಿಸಿಲಿನ ಚೆನ್ನೈತನಕ, ಇಂದೋರ್, ಜೈಪುರ, ಕೊಚ್ಚಿ ಮತ್ತು ಭೋಪಾಲ್ ಮೊದಲಾದ ನಗರಗಳಲ್ಲಿ ಸರ್ಕಾರೇತರ ಸಂಸ್ಥೆಗಳು, ಸಾಮಾಜಿಕ ಸಂಸ್ಥೆಗಳು, ವಿದ್ಯಾರ್ಥಿಗಳು, ಪೊಲೀಸ್ ಇಲಾಖೆಗಳು,

ಕಲಾವಿದರ ತಂಡಗಳು ಹಾಗೂ ಸಾಮಾನ್ಯ ನಾಗರಿಕರು ‘ಅನುಕಂಪದ ಗೋಡೆ’ಗಳನ್ನು ನಿರ್ಮಿಸಿದ್ದಾರೆ. ದಾನ ನೀಡಿಕೆಯ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ದಾನ ಪಡೆಯುವ ವ್ಯಕ್ತಿ ಮುಜುಗರ ಅನುಭವಿಸುವುದು ಸಹಜ. ಆದರೆ, ಅನುಕಂಪದ ಗೋಡೆಗಳು ದಾನ ನೀಡುವವರು ಮತ್ತು ದಾನ ಪಡೆಯುವವರು ಇಬ್ಬರನ್ನೂ ಪರಸ್ಪರ ಅಜ್ಞಾತವಾಗಿರಿಸುವುದರಿಂದ ಇಂತಹ ಮುಜುಗರದ ಭಾವಕ್ಕೆ ಆಸ್ಪದವನ್ನು ನೀಡುವುದಿಲ್ಲ. ಯಾರೋ ತಮಗೆ ಹೆಚ್ಚಾದ ವಸ್ತುವನ್ನು ಅಥವಾ ತಮಗೆ ಬೇಡದ ವಸ್ತುವನ್ನು ತಂದು ಅನುಕಂಪದ ಗೋಡೆಯಲ್ಲಿರಿಸುತ್ತಾರೆ. ಮತ್ತ್ತ್ಯಾರೋ ತಮಗೆ ಬೇಕಾದ ವಸ್ತುಗಳು ಅನುಕಂಪದ ಗೋಡೆಯಲ್ಲಿದ್ದರೆ ಅದನ್ನು ತೆಗೆದುಕೊಳ್ಳುತ್ತಾರೆ. ಅನುಕಂಪದ ಗೋಡೆಗಳು ದಾನ ನೀಡುವ ಮತ್ತು ಪಡೆಯುವ ಪ್ರಕ್ರಿಯೆಯನ್ನು ಅಷ್ಟರಮಟ್ಟಿಗೆ ಸರಳ ಹಾಗೂ ಸುಲಭಗೊಳಿಸಿವೆ.

ಕೆಲವೆಡೆ ಕಲಾವಿದರ ತಂಡಗಳು ಅನುಕಂಪದ ಗೋಡೆಗಳ ತಮ್ಮ ಕೈಚಳಕವನ್ನು ನಡೆಸಿ ಹೆಚ್ಚು ಹೆಚ್ಚು ಜನ ಈ ಗೋಡೆಗಳತ್ತ ಆಕರ್ಷಿತವಾಗುವಂತೆ ಮಾಡುತ್ತಿವೆ. ಉದಾಹರಣೆಗೆ, ತಮಿಳುನಾಡು ಮೂಲದ ಸಹೋದರಿ ಫೌಂಡೇಶನ್ ಎಂಬ ಸಂಘಟನೆಯ ಕಲ್ಕಿ ಸುಬ್ರಮಣಿಯಮ್ ಎಂಬ ಒಬ್ಬರು ಟ್ರಾನ್ಸ್‌ಜೆಂಡರ್ ಕಲಾವಿದರ ನೇತೃತ್ವದಲ್ಲಿ ಅಲ್ಲಿನ ಅನುಕಂಪದ ಗೋಡೆಗಳನ್ನು ಕಲಾ ಗೋಡೆಗಳನ್ನಾಗಿ ಶೃಂಗರಿಸುತ್ತಿದ್ದಾರೆ.

ಕೆಲವೆಡೆ ಅನುಕಂಪದ ಗೋಡೆಗಳ ಬಳಿ ಅಥವಾ ಪ್ರತ್ಯೇಕವಾಗಿ ಫ್ರಿಜ್ ಗಳನ್ನು ನಿಲ್ಲಿಸಿರುವುದನ್ನು ಕಾಣಬಹುದು. ಇವುಗಳನ್ನು ‘ಕಮ್ಯುನಿಟಿ ಫ್ರಿಜ್’ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಮುಂಬೈ, ದೆಹಲಿ, ಕೊಲ್ಕತ್ತಾ, ಬೆಂಗಳೂರು, ಚೆನ್ನೈ ಮೊದಲಾದ ನಗರಗಳ ರಸ್ತೆಗಳ ಬದಿಯಲ್ಲಿ ಇಂತಹ ಕಮ್ಯುನಿಟಿ ಫ್ರಿಜ್‌ಗಳನ್ನು ಕಾಣಬಹುದು. ಇವುಗಳಲ್ಲಿ ಆಹಾರಗಳನ್ನು ಇಟ್ಟಿರುತ್ತಾರೆ. ಅನುಕಂಪದ ಗೋಡೆಗಳಂತೆ, ಯಾರು ಬೇಕಾದರೂ ಈ ಫ್ರಿಜ್ ಗಳಿಂದ ತಮಗೆ ಬೇಕಾದ ಆಹಾರವನ್ನು ತೆಗೆದುಕೊಳ್ಳಬಹುದು. ಯಾರೂ ಬೇಕಾದರೂ ಈ ಫ್ರಿಜ್‌ಗಳಲ್ಲಿ ಆಹಾರವನ್ನು ತಂದು ಇಡಬಹುದು. ಅನುಕಂಪದ ಗೋಡೆಗಳಂತೆ, ಕಮ್ಯುನಿಟಿ ಫ್ರಿಜ್‌ಗಳು ಕೂಡ ಒಂದು ವಿನೂತನ ರೀತಿಯ ಆಹಾರ ದಾನ ಕಾರ್ಯಕ್ರಮ. ಇದು ೮೦-೯೦ರ ದಶಕದಲ್ಲಿ ಮೊತ್ತ ಮೊದಲ ಬಾರಿಗೆ ಯುರೋಪಿನಲ್ಲಿ ಶುರುವಾಯಿತು. ಮುಖ್ಯವಾಗಿ, ಜರ್ಮನಿಯಲ್ಲಿ. ಶುರುವಾದ ನಂತರದ ದಶಕಗಳಲ್ಲಿ ಇದು ಹೆಚ್ಚು ಜನಪ್ರಿಯವಾಗದಿದ್ದರೂ ಇತ್ತೀಚಿನ ಕೆಲವು ವರ್ಷಗಳಲ್ಲಿ, ಮುಖ್ಯವಾಗಿ ಕೋವಿಡ್ ನಂತರ, ಜಗತ್ತಿನೆಲ್ಲೆಡೆ ತೀವ್ರಗತಿಯಲ್ಲಿ ಜನಪ್ರಿಯವಾಗುತ್ತಿದೆ.

ಭಾರತದ ನಗರಗಳಲ್ಲೂ ಕಮ್ಯುನಿಟಿ ಫ್ರಿಜ್‌ಗಳು ತಲೆ ಎತ್ತುತ್ತಿವೆ. ಕಮ್ಯುನಿಟಿ ಫ್ರಿಜ್‌ಗಳಲ್ಲಿ ಆಹಾರ ಇಡುವವರು ಯಾರೆಂಬುದೇ ಗೊತ್ತಾಗುವುದಿಲ್ಲ, ಆಹಾರ ತೆಗೆದುಕೊಳ್ಳುವವರು ಯಾರೆಂಬುದೂ ಗೊತ್ತಾಗುವುದಿಲ್ಲ. ಹಾಗಾಗಿ ಇದು ತೆಗೆದುಕೊಳ್ಳುವವರ ಆತ್ಮಗೌರವಕ್ಕೆ ತುಸುವೂ ಘಾಸಿ ಮಾಡದ ದಾನ ಕ್ರಮ. ಇದರಲ್ಲಿ ಯಾರು ಬೇಕಾದರೂ ತಮ್ಮಲ್ಲಿ ಹೆಚ್ಚುವರಿಯಾಗಿ ಉಳಿದ ಆಹಾರವನ್ನು ಇಡಬಹುದಾದರೂ ಆಹಾರ ಇಡುವವರು ತಮ್ಮ ಆಹಾರದ ಸುರಕ್ಷತೆಯ ಬಗ್ಗೆ ಅತ್ಯಂತ ಜಾಗರೂಕತೆ ವಹಿಸುವುದು ತೀರಾ ಅಗತ್ಯ. ಆದರೆ, ಸಾಮಾನ್ಯವಾಗಿ ಕಮ್ಯುನಿಟಿ ಫ್ರಿಜ್ಗಳನ್ನು ಇಡುವವರು ಯಾವುದಾದರೂ ಸರ್ಕಾರೇತರ ಸಾಮಾಜಿಕ ಸಂಸ್ಥೆಗಳಾಗಿರುವುದರಿಂದ ಸುರಕ್ಷತೆಯ ಕಾರಣಕ್ಕೆ ಆ ಸಂಸ್ಥೆಗಳೇ ಹೆಚ್ಚಾಗಿ ಇವುಗಳಲ್ಲಿ ಆಹಾರವನ್ನು ಇಡುತ್ತವೆ. ಕಮ್ಯುನಿಟಿ ಫ್ರಿಜ್‌ಗಳ ಸ್ವಚ್ಛತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾದುದರಿಂದ ಆ ಸಂಸ್ಥೆಗಳೇ ಇವುಗಳ ಮೇಲ್ವಿಚಾರಣೆಗೆ ವ್ಯಕ್ತಿಗಳನ್ನು ನೇಮಿಸುತ್ತವೆ. ದಿನದ ಅಥವಾ ರಾತ್ರಿಯ ಯಾವ ಹೊತ್ತಲ್ಲೂ ಹಸಿದವರು ಇವುಗಳಿಂದ ತಮಗೆ ಬೇಕಾದ ಆಹಾರವನ್ನು ಪಡೆಯಬಹುದು.

ಭಾರತದಂತಹ ಬಡ ದೇಶಗಳಲ್ಲಿ ಮಾತ್ರವಲ್ಲದೆ ಅಮೆರಿಕದಂತಹ ಶ್ರೀಮಂತ ದೇಶಗಳಲ್ಲೂ ಆಹಾರದ ಅಭಾವ ಒಂದು ಸಾಮಾಜಿಕ ಸಮಸ್ಯೆ. ಕೋವಿಡ್ ಸಮಯದಲ್ಲಿ ಈ ಸಮಸ್ಯೆ ದುರಂತದ ಹಂತಕ್ಕೆ ಹೋಯಿತು. ಆದರೆ, ಅದೇ ಹೊತ್ತಲ್ಲಿ ಆಹಾರದ ಅಭಾವದ ಸಮಸ್ಯೆಗೆ ಹಲವಾರು ವಿನೂತನ ರೀತಿಯ ಪರಿಹಾರಗಳೂ ರೂಪುಗೊಂಡವು. ಅವುಗಳಲ್ಲಿ ಕಮ್ಯುನಿಟಿ ಫ್ರಿಜ್ ಒಂದು. ಕಮ್ಯುನಿಟಿ ಫ್ರಿಜ್‌ಗಳು ಬಹಳ ಹೆಚ್ಚಿನ ಜನರನ್ನು ತಲುಪದಿದ್ದರೂ ಹಸಿದವರಿಗೆ ಪ್ರತಿಯೊಂದು ಅಗಳೂ ಮುಖ್ಯ ಎಂಬಂತೆ, ಇವುಗಳು ಹಸಿವಿನ ಸಮಸ್ಯೆಯ ಪರಿಹಾರಕ್ಕೆ ತಮ್ಮದೇ ಆದ ಅಳಿಲು ಸೇವೆ ಸಲ್ಲಿಸುತ್ತಿವೆ. ಈ ದೇಶದಲ್ಲಿ ಹಸಿದವರ ಸಂಖ್ಯೆಗೆ ಹೋಲಿಸಿದರೆ ಈ ಕಾರ್ಯಕ್ರಮದಲ್ಲಿ ಸಿಗುವ ಆಹಾರದ ಪ್ರಮಾಣ ಬಹಳ ಕಡಿಮೆ, ಆದರೂ, ಇವುಗಳಲ್ಲಿ ಸಿಗುವ ಆಹಾರಗಳು ಹಾಲು, ಮೊಟ್ಟೆಗಳಿಂದ ಕೂಡಿದ್ದು ಹಸಿದವರಿಗೆ ಅಷ್ಟರ ಮಟ್ಟಿಗೆ ಪುಷ್ಟಿಕರ ಆಹಾರವನ್ನು ಒದಗಿಸುವ ಮೂಲಕ ಅವರ ದೇಹಾರೋಗ್ಯವನ್ನು ಹೆಚ್ಚಿಸುತ್ತವೆ.

” ದಾನ ನೀಡಿಕೆಯ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ದಾನ ಪಡೆಯುವ ವ್ಯಕ್ತಿ ಮುಜುಗರ ಅನುಭವಿಸುವುದು ಸಹಜ. ಆದರೆ, ಅನುಕಂಪದ ಗೋಡೆಗಳು ದಾನ ನೀಡುವವರು ಮತ್ತು ದಾನ ಪಡೆಯುವವರು ಇಬ್ಬರನ್ನೂ ಪರಸ್ಪರ ಅಜ್ಞಾತವಾಗಿರಿಸುವುದರಿಂದ ಇಂತಹ ಮುಜುಗರದ ಭಾವಕ್ಕೆ ಆಸ್ಪದವನ್ನು ನೀಡುವುದಿಲ್ಲ. ಯಾರೋ ತಮಗೆ ಹೆಚ್ಚಾದ ವಸ್ತುವನ್ನು ಅಥವಾ ತಮಗೆ ಬೇಡದ ವಸ್ತುವನ್ನು ತಂದು ಅನುಕಂಪದ ಗೋಡೆಯಲ್ಲಿರಿಸುತ್ತಾರೆ. ಮತ್ತ್ತ್ಯಾರೋ ತಮಗೆ ಬೇಕಾದ ವಸ್ತುಗಳು ಅನುಕಂಪದ ಗೋಡೆಯಲ್ಲಿದ್ದರೆ ಅದನ್ನು ತೆಗೆದುಕೊಳ್ಳುತ್ತಾರೆ. ಅನುಕಂಪದ ಗೋಡೆಗಳು ದಾನ ನೀಡುವ ಮತ್ತು ಪಡೆಯುವ ಪ್ರಕ್ರಿಯೆಯನ್ನು ಅಷ್ಟರಮಟ್ಟಿಗೆ ಸರಳ ಹಾಗೂ ಸುಲಭಗೊಳಿಸಿವೆ”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಜಲಪುರಿ ಬಡಾವಣೆ ರಸ್ತೆ ದುರಸ್ತಿ ಮಾಡಿ

ಮೈಸೂರಿನ ಜಲಪುರಿ ಬಡಾವಣೆಯ  ಪೊಲೀಸ್ ಆಸ್ಪತ್ರೆ ಮುಂಭಾಗದ  ರಸ್ತೆ ತೀರಾ ಹದಗೆಟ್ಟಿದೆ.  ಕಾಳಿಕಾಂಬ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಕೆಲವು…

15 mins ago

ಓದುಗರ ಪತ್ರ: ಐಪಿಎಲ್‌ನಲ್ಲಿ ಭಾರತೀಯ ಆಟಗಾರರೇ ಆಡಲಿ

೨೦೦೮ರಲ್ಲಿ ಭಾರತದಲ್ಲಿ ಶುರುವಾದ ‘ಇಂಡಿಯನ್ ಪ್ರೀಮಿಯರ್ ಲೀಗ್’  (ಐಪಿಎಲ್) ಕ್ರಿಕೆಟ್ ಆಟವು ಇಡೀ ದೇಶದ ಗಮನ ಸೆಳೆದಿದೆ.  ಐಪಿಎಲ್ ತಂಡಗಳಲ್ಲಿ …

19 mins ago

ಓದುಗರ ಪತ್ರ: ಮೆಟ್ರೋ ಪ್ರಯಾಣ ದರ ಏರಿಕೆ ಸಲ್ಲದು

ಬೆಂಗಳೂರಿನ ಜೀವನಾಡಿಯಾಗಿರುವ ಮೆಟ್ರೋ ರೈಲು ಪ್ರಯಾಣ ದರವನ್ನು ಹತ್ತು ತಿಂಗಳ ಅಲ್ಪಾವಽಯಲ್ಲಿ ಎರಡನೇ ಬಾರಿಗೆ ಏರಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ. …

21 mins ago

ಓದುಗರ ಪತ್ರ: ರಾಮಕೃಷ್ಣನಗರದ ಮುಖ್ಯ ರಸ್ತೆಗೆ ಡಾಂಬರ್ ಹಾಕಿ

ಮೈಸೂರಿನ ರಾಮಕೃಷ್ಣ ನಗರದ ಒಳಚರಂಡಿಗೆ ಹೊಸದಾಗಿ  ಪೈಪ್‌ಗಳನ್ನು  ಅಳವಡಿಸಲು ರಸ್ತೆಯನ್ನು  ಅಗೆಯಲಾಗಿತ್ತು. ಪೈಪ್‌ಗಳನ್ನು ಅಳವಡಿಸಿ ತಿಂಗಳುಗಳೇ ಕಳೆದರೂ ರಸ್ತೆಗೆ ಡಾಂಬರ್…

23 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಸಂಸತ್ತಿನೊಳಗೆ ಪ್ರಧಾನಿಗೆ ‘ಬೆದರಿಕೆಯ ಗುಮ್ಮ

ಕರ್ನಾಟಕ ಮತ್ತು ತಮಿಳುನಾಡಿನ ರಾಜ್ಯಪಾಲರು ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಸರ್ಕಾರದ ಗೊತ್ತು ಗುರಿಯ ಭಾಷಣವನ್ನು ಪೂರ್ಣವಾಗಿ ಓದದೆ…

27 mins ago

ಸಾವಿರಾರು ಸೈನಿಕರ ಜೀವನ್ಮರಣದ ಪ್ರಶ್ನೆಯಾಗಿತ್ತು

ಕೈಲಾಶ್ ಶ್ರೇಣಿಯ ರೇಚಿನ್ ಲಾ ಪಾಸ್‌ನತ್ತ ಮುನ್ನುಗ್ಗುತ್ತಿರುವ ಚೀನಾದ ಟ್ಯಾಂಕ್‌ಗಳನ್ನು ತಡೆಯಲು ಒಂದೇ ಒಂದು ಗುಂಡು ಹಾರಿಸಿದರೂ ಆ ದೇಶದೊಂದಿಗೆ…

3 hours ago