ಆರ್.ಟಿ.ವಿಠಲಮೂರ್ತಿ
ಪ್ರಜಾ ಪ್ರಭುತ್ವ ಎಂಬ ರಥದ ಚಕಗಳು ಸಡಿಲವಾಗುತ್ತಾ ಹೋದಂತೆ ಪಾಳೇಪಟ್ಟುಗಳು ಬಲಿಷ್ಠವಾಗುತ್ತಾ ಹೋಗುವುದು ನಿಯಮ. ಇದನ್ನು ಒಟ್ಟಾರೆ ಭಾರತದ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಸ್ಪಷ್ಟವಾಗುತ್ತದೆ. ಹೀಗಾಗಿ ಈ ಅಂಶವನ್ನು ಗಮನಿಸಲು ಕರ್ನಾಟಕವನ್ನು ಸಾಂಕೇತಿಕವಾಗಿ ಪರಿಗಣಿಸಿದರೂ ಸಾಕು ಅನಿಸುತ್ತದೆ.
ಉದಾಹರಣೆಗೆ ಕರ್ನಾಟಕದ ರಾಜಕೀಯ ವ್ಯವಸ್ಥೆ ತಲುಪಿರುವ ಸನ್ನಿವೇಶವನ್ನು ನೋಡಿ, ಕಳೆದ ಎರಡು ದಶಕಗಳ ರಾಜಕಾರಣ ಕರ್ನಾಟಕದ ರಾಜಕಾರಣವನ್ನು ಹೇಗೆ ಶಿಥಿಲಗೊಳಿಸುತ್ತಾ ಬಂದಿದೆಯೆಂದರೆ, ಇವತ್ತಿನ ಪರಿಸ್ಥಿತಿಯನ್ನು ಗಮನಿಸಿದರೆ ಅದು ಪಾಳೇಪಟ್ಟುಗಳ ಹಿಡಿತದಲ್ಲಿ ಸಿಲುಕಲುತುಂಬ ಕಾಲ ಬೇಕಿಲ್ಲ ಅನಿಸುತ್ತದೆ. ಬ್ರಿಟಿಷರು ಭಾರತಕ್ಕೆ ಬಂದ ಸಂದರ್ಭದಲ್ಲಿ ಇಲ್ಲಿ ಆರು ನೂರಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಬಹುತೇಕ ಸಂಸ್ಥಾನಗಳು ತಮ್ಮದೇ ಆರ್ಥಿಕ, ರಾಜಕೀಯ ನೆಲೆಯನ್ನು ಹೊಂದಿದ್ದವು. ಆದರೆ ಬ್ರಿಟಿಷರು ಈ ಸಂಸ್ಥಾನಗಳನ್ನು, ಅವುಗಳಿಗೆ ಅಂಟಿಕೊಂಡ ಪಾಳೇಪಟ್ಟುಗಳನ್ನು ನಿಯಂತ್ರಣಕ್ಕೆ ಪಡೆದು ದೇಶವನ್ನು ಆಳಿದರು. ಈಗಿನ ಪರಿಸ್ಥಿತಿಯಲ್ಲಿ ತಮ್ಮದೇ ಆರ್ಥಿಕ, ರಾಜಕೀಯ ನೆಲೆಯಲ್ಲಿ ಸಂಸ್ಥಾನಗಳು ರೂಪುಗೊಳ್ಳುವ ಸ್ಥಿತಿ ಇಲ್ಲ. ಆದರೆ ಇಂತಹ ಸಂಸ್ಥಾನಗಳಿಗೆ ಪೂರಕವಾಗಿದ್ದಪಾಳೇಪಟ್ಟುಗಳು ತಲೆ ಎತ್ತಲು ಪ್ರಶಸ್ತ ವಾತಾವರಣವಂತೂ ಇದೆ.
ಇಂತಹ ವಾತಾವರಣ ಸೃಷ್ಟಿಯಾಗಲು ಈ ಮೊದಲು ಹೇಳಿದಂತೆ ಆಳುವ ಸರ್ಕಾರಗಳು ದುರ್ಬಲವಾಗುತ್ತಾ, ಇಲ್ಲವೇ ಅಸಹಾಯಕವಾಗುತ್ತಾ ಬಂದಿರುವುದೇ ಮುಖ್ಯ ಕಾರಣ. ಹೀಗಾಗಿ ಇವತ್ತು ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಪಾಳೇಪಟ್ಟುಗಳು ತಲೆ ಎತ್ತುತ್ತಿವೆ. ಹಾಗಂತ ತಲೆ ಎತ್ತುತ್ತಿರುವ ಪಾಳೇಪಟ್ಟುಗಳಿಗೆ ಅಧಿಕೃತ ಮೊಹರು ಒತ್ತಲಾಗುವುದಿಲ್ಲ. ಏಕೆಂದರೆ ಪಾಳೇಪಟ್ಟು ಸಂಸ್ಕೃತಿ ತಲೆ ಎತ್ತುತ್ತಿದೆ ಎಂದು ಯಾವ ಸರ್ಕಾರವೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಅಧಿಕೃತತೆಯ ಮೊಹರು ಒತ್ತಲೂ ಸಾಧ್ಯವಿಲ್ಲ. ಆದರೆ ಸುಮ್ಮನೆ ಗಮನಿಸುತ್ತಾ ಹೋಗಿ, ಕರ್ನಾಟಕದ ರಾಜಕೀಯ ಸಂದರ್ಭ ಹೇಗಿದೆ ಎಂದರೆ ರಾಜ್ಯದ ಪ್ರತೀ ಜಿಲ್ಲೆಯ ರಾಜಕೀಯ ವ್ಯವಸ್ಥೆ ಪ್ರಭಾವಿ ಕುಟುಂಬಗಳ ಮೂಲಕ ನಿರ್ವಹಿಸಲ್ಪಡುತ್ತಿದೆ. ಸರ್ಕಾರಗಳು ಬದಲಾದಾಗ ಪ್ರಭಾವಿ ಕುಟುಂಬಗಳ ರೂಪ ಬದಲಾಗಬಹುದು.
ಆದರೆ ಬಹುತೇಕ ಜಿಲ್ಲೆಗಳ ರಾಜಕಾರಣವನ್ನು ಕುಟುಂಬಗಳು ನಿರ್ವಹಿಸತೊಡಗಿವೆ. ಅರ್ಥಾತ್, ಯಾವುದೇ ಸರ್ಕಾರ ಬರಲಿ, ಯಾವ ಪಕ್ಷದ ಕೈಯಲ್ಲಿ ಸರ್ಕಾರವಿದೆ ಎಂಬುದರ ಆಧಾರದ ಮೇಲೆ ಆಯಾ ಕಾಲಕ್ಕೆ ಅನುಗುಣವಾಗಿ ಪ್ರಬಲ ಕುಟುಂಬಗಳು ಮೇಲೆದ್ದು ನಿಲ್ಲುತ್ತವೆ. ಕೆಲ ಜಿಲ್ಲೆಗಳಲ್ಲಿ ಈ ಕುಟುಂಬ ರಾಜಕಾರಣದ ಸ್ವರೂಪ ಇನ್ನೂ ಪರಿಪೂರ್ಣ ಶಕ್ತಿ ಹೊಂದಿಲ್ಲದೆ ಇರಬಹುದು. ಆದರೆ ರಾಜ್ಯದ ಬಹುತೇಕ ಜಿಲ್ಲೆಗಳ ರಾಜಕಾರಣವನ್ನು ಗಮನಿಸಿದರೆ ಒಂದೋ, ಎರಡೋ, ಮೂರೋ ಕುಟುಂಬಗಳು ಆಯಾ ಜಿಲ್ಲೆಯ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುತ್ತಿವೆ. ಇದು ಪರೋಕ್ಷವಾಗಿ ಪಾಳೇಪಟ್ಟು ವ್ಯವಸ್ಥೆಯಲ್ಲದೆ ಬೇರೇನೂ ಅಲ್ಲ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಅಸ್ತಿತ್ವದಲ್ಲಿರುವಾಗ ನೇರವಾಗಿ ಅವು ಪಾಳೇಪಟ್ಟು ಸಂಸ್ಕೃತಿಯ ಅಸ್ತಿತ್ವವನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ.
ಇವತ್ತು ರಾಜಕೀಯ ವ್ಯವಸ್ಥೆ ಹೇಗಾಗಿದೆ ಎಂದರೆ ಕಾಲ ಕ್ರಮೇಣ ಅದರ ಶಕ್ತಿ ದುರ್ಬಲವಾಗುತ್ತಿದೆ. ವಾಸ್ತವವಾಗಿ ಸರ್ಕಾರಗಳು ಬಲಿಷ್ಠವಾಗಿ, ಜನಪರವಾಗಿ ಕೆಲಸ ಮಾಡಬೇಕು ಎಂದರೆ ನಾನು ಜನಪ್ರತಿನಿಧಿ, ಜನರಿಗಾಗಿ ಕೆಲಸ ಮಾಡಬೇಕಾದವನು ಎಂಬ ಮನಸ್ಥಿತಿ ಉಳ್ಳವರು ಆಯ್ಕೆಯಾಗಿ ಬರಬೇಕು. ಇದನ್ನು ಹೊರತುಪಡಿಸಿ ಆಯ್ಕೆಯಾಗಿ ಬರುವವರಿಗೆ ತಮ್ಮ ತಮ್ಮ ವ್ಯಾಪಾರ, ವಹಿವಾಟು, ತಮ್ಮವರ ಹಿತಾಸಕ್ತಿ ಮುಖ್ಯವಾದರೆ ಅವರು ಸೀಮಿತ ನೆಲೆಯಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಒಟ್ಟಾರೆ ವ್ಯವಸ್ಥೆಗಿಂತ ತಮ್ಮವರು, ತಮಗಾಗಿ ಇರುವವರು ಮುಖ್ಯ. ಸೂಚ್ಯವಾಗಿ ಹೇಳುವುದಾದರೆ ಪಾಳೇಪಟ್ಟು ಸಂಸ್ಕೃತಿಯ ಮೂಲ ತತ್ವವೇ ಇದು.
ಈ ಸಂಸ್ಕೃತಿಯ ಮೂಲ ತತ್ವದಲ್ಲಿ ಇನ್ನೊಂದು ಅಂಶ ಢಾಳಾಗಿ ಎದ್ದು ಕಾಣುತ್ತದೆ. ಅದೆಂದರೆ ಇಂತಹ ಪಾಳೇಪಟ್ಟುಗಳ ನಡುವೆ ವೈವಾಹಿಕ ಸಂಬಂಧಗಳು ಏರ್ಪಡುತ್ತಿವೆ. ಹಿಂದೆ ಜೋಳರು, ಚೇರರು, ಪಾಂಡ್ಯರು, ಗಂಗರು, ಚಾಲುಕ್ಯರು, ಕದಂಬರು, ಪಲ್ಲವರು ಸೇರಿದಂತೆ ಬಹುತೇಕ ರಾಜವಂಶಗಳ ನಡುವೆ ಏಕೆ ವೈವಾಹಿಕ ಸಂಬಂಧಗಳು ಏರ್ಪಡುತ್ತಿದ್ದವು ಎಂದರೆ ಇಂತಹ ವೈವಾಹಿಕ ಸಂಬಂಧಗಳ ಮೂಲಕ ರಾಜ್ಯಗಳ, ಪಾಳೇಪಟ್ಟುಗಳ ಶಕ್ತಿ ವರ್ಧನೆಯಾಗುತ್ತಿತ್ತು. ಈಗ ತಲೆ ಎತ್ತಿರುವ ಪಾಳೇಪಟ್ಟುಗಳ ನಡುವೆಯೂ ಇಂತಹ ವೈವಾಹಿಕ ಸಂಬಂಧಗಳು ಹೆಚ್ಚುತ್ತಲೇ ಇವೆ. ಯಥಾ ಪ್ರಕಾರ ಇದರ ಉದ್ದೇಶವೂ ಪಾಳೇಪಟ್ಟುಗಳ ಬಲವರ್ಧನೆಯಲ್ಲದೆ ಬೇರೇನೂ ಅಲ್ಲ. ಈ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಎಂಬುದು ಮಾಯವಾಗಿ ಜಂಗಲ್ ರಾಜ್ ಅಸ್ತಿತ್ವಕ್ಕೆ ಬರುವ ಕಾಲ ಹತ್ತಿರವಾಗುತ್ತದೆ. ಅರ್ಥಾತ್, ಶಕ್ತಿ ಇದ್ದವರು ಬದುಕುತ್ತಾರೆ, ದುರ್ಬಲರು ಅಳಿಯುತ್ತಾರೆ.
ವಾಸ್ತವವಾಗಿ ವ್ಯವಸ್ಥೆಯ ಚಿಂತನೆಗೆ ಇದು ಮೂಲವಾಗಬೇಕು. ಆದರೆ ಕಾಲಕ್ರಮೇಣ ಪರಿಸ್ಥಿತಿ ಹೇಗಾಗುತ್ತಿದೆ ಎಂದರೆ ಒಂದು ಕಾಲದ ನೈತಿಕ ಕೇಂದ್ರಗಳು ಕೂಡ ತಮ್ಮ ತಮ್ಮ ನೆಲೆಯಲ್ಲಿ ಯಾವುದೋ ಬಲಿಷ್ಠ ಪಾಳೇಪಟ್ಟುಗಳನ್ನು ಪೋಷಿಸುವ ಮನಸ್ಥಿತಿಗೆ ತಲುಪಿದೆ. ಅಳಿವು-ಉಳಿವಿನ ಹೋರಾಟದಲ್ಲಿ ಇಂತಹ ಮಾರ್ಗ ಹಿಡಿಯುವುದು ಅನಿವಾರ್ಯ ಎಂದು ಭಾವಿಸಿರುವುದು ಕೂಡ ಇದಕ್ಕೆ ಮುಖ್ಯ ಕಾರಣ.
ತುಂಬ ದೂರ ಹೋಗುವುದೇನೂ ಬೇಡ. ಕೆಲವೇ ದಶಕಗಳ ಹಿಂದೆ ನೆಹರೂ-ಇಂದಿರಾ ಗಾಂಧಿ ಅವರ ಕುಟುಂಬ ರಾಜಕಾರಣದ ವಿರುದ್ದ ಇಡೀ ದೇಶವೇ ತಿರುಗಿ ಬಿದ್ದಿತ್ತು. ಇಂತಹ ಹೋರಾಟಗಳ ಫಲವಾಗಿ ಕೇಂದ್ರದಿಂದ ಹಿಡಿದು, ರಾಜ್ಯಗಳ ತನಕ ಕಾಂಗ್ರೆಸ್ಸೇತರ ಸರ್ಕಾರಗಳು ಅಸ್ತಿತ್ವಕ್ಕೆ ಬಂದವು. ವಿಪರ್ಯಾಸವೆಂದರೆ ಯಾರು ಕುಟುಂಬ ರಾಜಕಾರಣದ ವಿರುದ್ದ ಹೋರಾಡಿದರೋ ಅಂತಹವರೇ ಆನಂತರದ ದಿನಗಳಲ್ಲಿ ಕುಟುಂಬ ರಾಜಕಾರಣವನ್ನು ಅಪ್ಪಿ ಆರಾಧಿಸತೊಡಗಿದರು. ಇವತ್ತು ಕರ್ನಾಟಕದ ವಿಧಾನಸಭೆಯಲ್ಲಿ ಎಷ್ಟು ಮಂದಿ ಕುಟುಂಬ ರಾಜಕಾರಣದ ಮೂಲಕ ಬಂದವರಿದ್ದಾರೆ ಎಂಬುದನ್ನು ಗಮನಿಸಿದರೆ ಸಾಕು, ಕುಟುಂಬ ರಾಜಕಾರಣದ ಬೇರು ಎಷ್ಟು ಬಲಿಷ್ಠವಾಗುತ್ತಾ ಹೋಗಿದೆ ಎಂಬುದು ಸಾಬೀತಾಗುತ್ತದೆ.
ಅರ್ಥಾತ್, ಕುಟುಂಬ ರಾಜಕಾರಣ ಬೇರೆಯಲ್ಲ, ಪಾಳೇಪಟ್ಟುಗಳ ನಿರ್ಮಾಣ ಎಂಬುದು ಬೇರೆಯಲ್ಲ. ಮೇಲ್ನೋಟಕ್ಕೆ ಕುಟುಂಬ ರಾಜಕಾರಣವನ್ನು ಪಾಳೇಪಟ್ಟು ರಾಜಕಾರಣ ಎಂದು ಅಧಿಕೃತವಾಗಿ ಘೋಷಿಸಲು ಸಾಧ್ಯವಾಗದೆ ಇರಬಹುದು. ಆದರೆ ಕುಟುಂಬ ರಾಜಕಾರಣದ ಅಂತಿಮ ಗುರಿ ಪಾಳೇಪಟ್ಟು ನಿರ್ಮಾಣವೇ ಹೊರತು ಬೇರೇನಲ್ಲ.
ಅಂದ ಹಾಗೆ ಇವತ್ತು ನಮ್ಮ ಕಣ್ಣ ಮುಂದೆ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಕೆಲವು ನಾಯಕರಾದರೂ ಇದ್ದಾರೆ. ಆದರೆ ಇಂತಹ ನಾಯಕರು ತೆರೆಯ ಹಿಂದೆ ಸರಿಯುತ್ತಿದ್ದಂತೆ ಕುಟುಂಬ ರಾಜಕಾರಣ ಎಂಬುದು ಮತ್ತಷ್ಟು ವಿಸ್ತ್ರತ ನೆಲೆ ಪಡೆದು ಪಾಳೇಪಟ್ಟಿನ ರೂಪ ಪಡೆಯುತ್ತದೆ. ಅವು ಬಯಸಿದವರೇ ಶಾಸಕ, ಸಂಸದರಾಗಿ ಆಯ್ಕೆಯಾಗಿ ರಾಜಕೀಯ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸುವುದು ಸುಲಭವಾಗುತ್ತದೆ.
ಪಾಳೇಪಟ್ಟುಗಳ ನಿರ್ಮಾಣವಾಗುವುದು ಎಂದರೆ ಬೇರೇನೂ ಅಲ್ಲ, ಅಲ್ಲಿರುವ ಪ್ರಜೆಗಳು ಈ ಪಾಳೇಪಟ್ಟಿನ ಆರಾಧಕರಾಗಿರಬೇಕು, ಇಲ್ಲವಾದರೆ ಶೋಷಣೆಗೆ ಗುರಿಯಾಗಲು ಸಜ್ಜಾಗಿರಬೇಕು. ಇವತ್ತು ಇಂತಹ ವಿಷಯವನ್ನು ಮುಂದಿಟ್ಟುಕೊಂಡು ಚರ್ಚಿಸದೆ ಹೋದರೆ ವ್ಯವಸ್ಥೆಗೆ ಭವಿಷ್ಯವಿರಲು ಸಾಧ್ಯವಿಲ್ಲ.
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…