ಅಂಕಣಗಳು

ಪಾಕ್:ಸೇನೆ ಬೆಂಬಲದ ನವಾಜ್ ಷರೀಫ್ ಮತ್ತೆ ಅಧಿಕಾರಕ್ಕೆ?

ಡಿ.ವಿ.ರಾಜಶೇಖರ

ಪಾಕಿಸ್ತಾನದ ರಾಷ್ಟ್ರೀಯ ಚುನಾವಣೆಗಳು (ಸಂಸತ್) ಮುಂದಿನ ಗುರುವಾರದಂದು (ಫೆ.8) ನಡೆಯಲಿವೆ. ಕಡೆಯ ಗಳಿಗೆಯಲ್ಲಿ ಸುಪ್ರೀಂ ಕೋರ್ಟಿನ ಮಧ್ಯಪ್ರವೇಶ ಆಗದಿದ್ದರೆ ಅಥವಾ ರಾಷ್ಟ್ರೀಯ ದುರಂತವೊಂದು ಸಂಭವಿಸದಿದ್ದರೆ ಅಂದು ಚುನಾವಣೆ ಆಗುವುದು ಖಚಿತ. ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎನ್ನುವ ಕಾರಣ ನೀಡಿ ಈ ಹಿಂದೆ ಹಲವು ಬಾರಿ ರಾಜಕೀಯ ನಾಯಕರು ಸುಪ್ರೀಂ ಕೋರ್ಟ್‌ಗೆ ಮತ್ತು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡದ್ದಿದೆ. ಆದರೆ ಆ ಮನವಿಗೆ ಪುರಸ್ಕಾರ ಸಿಕ್ಕಿಲ್ಲ. ಹೀಗಾಗಿ ಚುನಾವಣೆಗಳನ್ನು ಮುಂದೂಡುವ ಸಾಧ್ಯತೆಗಳು ಕಡಿಮೆ.

ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಮುಸ್ಲಿಮ್ ಲೀಗ್ (ಎನ್) ಬಹುಮತ ಗಳಿಸುತ್ತದೆ ಮತ್ತು ನವಾಜ್ ಷರೀಫ್‌ ನಾಲ್ಕನೆಯ ಬಾರಿ ಪ್ರಧಾನಿಯಾಗುತ್ತಾರೆ ಎಂಬ ಸುದ್ದಿ ಪಾಕಿಸ್ತಾನದಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಷರೀಫ್ ಅವರಿಗೆ ಸೇನೆ ಬೆಂಬಲ ನೀಡುತ್ತಿರುವುದೇ ಆಗಿದೆ. ಪಾಕಿಸ್ತಾನದಲ್ಲಿ ಸೇನೆಯ ಕೃಪಾಕಟಾಕ್ಷವಿಲ್ಲದೆ ಯಾರೊಬ್ಬರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಅಥವಾ ಅಧಿಕಾರಕ್ಕೆ ಬಂದರೂ ಸೇನೆ ಅವರನ್ನು ಉಳಿಯಬಿಡುವುದಿಲ್ಲ. ಇಮ್ರಾನ್ ಖಾನ್‌ಗೆ ಆದದ್ದು ಇದೇ. ಸೇನೆ ನೆರವಿನಿಂದ ಅವರು 2018ರಲ್ಲಿ ಅಧಿಕಾರಕ್ಕೇರಿದ್ದರು. ಯಾವಾಗ ಅವರು ಸೇನೆಯನ್ನು ಟೀಕಿಸಲಾರಂಭಿಸಿದರೋ ಅಂದಿನಿಂದಲೇ ಅವರು ದಿನಗಳನ್ನು ಎಣಿಸಬೇಕಾಗಿ ಬಂತು. ಕೊನೆಗೆ ಕಳೆದ ವರ್ಷ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು.

ಪಾಕಿಸ್ತಾನದ ರಾಜಕೀಯ ಮತ್ತು ಅಧಿಕಾರವನ್ನು ನಿಯಂತ್ರಿಸುತ್ತಿರುವುದು ಗೊತ್ತಿರುವ ವಿಚಾರವೇ. ಆದರೆ ಅದು ಯಾವಾಗ ಯಾರ ಪರ ಕೆಲಸ ಮಾಡುತ್ತದೆ, ಯಾವಾಗ ವಿರೋಧ ಮಾಡುತ್ತದೆ ಎನ್ನುವುದು ರಾಜಕಾರಣಿಗಳಿಗೂ ತಿಳಿಯುತ್ತಿಲ್ಲ. ಒಳಗಿನ ವಿಚಾರಗಳು ಹೊರಗೆ ತಿಳಿಯುವುದೂ ಇಲ್ಲ. ಸೇನೆ ಬೆಂಬಲ ಇರುವಷ್ಟು ದಿನ ರಾಜಕೀಯ ನಾಯಕ ಅಧಿಕಾರದಲ್ಲಿರುತ್ತಾನೆ, ಬೆಂಬಲ ಹಿಂತೆಗೆದುಕೊಂಡರೆ ಯಾವುದಾದರೂ ಸ್ವರೂಪದಲ್ಲಿ ಅಧಿಕಾರ ಕಳೆದುಕೊಳ್ಳುವಂತೆ ಅಧಿಕಾರ ಮಾಡಲಾಗುತ್ತದೆ. ಇದು ಇತ್ತೀಚಿನ ವಿದ್ಯಮಾನವಲ್ಲ, ಬೆನಜಿರ್ ಭುಟ್ಟೋ ಕಾಲದಿಂದಲೂ ಹೀಗೆ ನಡೆದಿದೆ. ಸೇನೆಯ ಬೆಂಬಲ ಕಳೆದುಕೊಂಡು ಬ್ರಿಟನ್ ನಲ್ಲಿ ನೆಲೆಸಿದ್ದ ಬೆನಜಿರ್‌ ಮತ್ತೆ ಸೇನೆಯಬೆಂಬಲ ಪಡೆದುಪ್ರಧಾನಿಯಾಗಿದ್ದರು. ಬೆಂಬಲ ಕಳೆದುಕೊಂಡ ನಂತರ ಅಧಿಕಾರವನ್ನೂ ಕಳೆದುಕೊಂಡರು. ಅಂತಿಮವಾಗಿ ಅವರು ಹತ್ಯೆಗೀಡಾದರು. 1990ರಲ್ಲಿ ಪ್ರಧಾನಿಯಾದ ನವಾಜ್ ಷರೀಫ್ ಸರ್ಕಾರ ಮಿಲಿಟರಿಯಿಂದಾಗಿಯೇ ಕಳೆದುಕೊಂಡಿತು. ಆಗ ಮತ್ತೆ ಅಧಿಕಾರಕ್ಕೆ ಬಂದದ್ದು ಬೆನಜಿರ್ ಭುಟ್ಟೋ. ಅವರೂ ಕೂಡ ಸೇನೆಯ ವಿರೋಧ ಕಟ್ಟಿಕೊಂಡು ಅಧಿಕಾರ ಕಳೆದುಕೊಂಡರು. ಮತ್ತೆ 2013ರಲ್ಲಿ ಅಧಿಕಾರಕ್ಕೆ ಬಂದ ನವಾಜ್ ಷರಿಫ್ ಸೇನೆಯನ್ನು ವಿರೋಧಿಸಿ ಪಟ್ಟಪಾಡು ಅಷ್ಟಿಷ್ಟಲ್ಲ. ಲಂಡನ್‌ನಲ್ಲಿ ಐಷಾರಾಮಿ ಬಂಗಲೆ ಕೊಳ್ಳಲು ದೇಶದಿಂದ ಕಳ್ಳಮಾರ್ಗದಲ್ಲಿ ಹಣ ಸಾಗಿಸಿದ ಮತ್ತಿತರ ಭ್ರಷ್ಟಾಚಾರದ ಆರೋಪಗಳ ಮೇಲೆ 2017ರಲ್ಲಿ ಅವರನ್ನು ಜೈಲಿಗೆ ಹಾಕಲಾಗಿತ್ತು. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂತು. ಅನಾರೋಗ್ಯದ ಕಾರಣಕ್ಕೆ ಅವರು ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡು ನೆಲೆಸಿದ್ದರು. ಅವರ ಮೇಲಿದ್ದ ಭ್ರಷ್ಟಾಚಾರ ಪ್ರಕರಣಗಳು ಮತ್ತು ಆ ಸಂಬಂಧವಾಗಿ ಬಂದಿದ್ದ ತೀರ್ಪುಗಳ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಅವರ ಬೆಂಬಲಿಗರು ಸಲ್ಲಿಸಿದ್ದ ಪುನರ್‌ಪರಿಶೀಲನಾ ಮನವಿಗಳು ಅವರ ಗೈರು ಹಾಜರಿಯಲ್ಲಿ ವಿಚಾರಣೆಗೆ ಬಂದವು. ಭ್ರಷ್ಟಾಚಾರ ಪ್ರಕರಣಗಳು ವಜಾ ಆದವು. ತೀರಾ ಇತ್ತೀಚೆಗೆ ಅವರು ಜೀವಮಾನ ಪರ್ಯಂತ ಚುನಾವಣೆಗಳಲ್ಲಿ ಭಾಗವಹಿಸದಂತೆ ನೀಡಿದ್ದ ಸುಪ್ರೀಂಕೋರ್ಟ್ ತೀರ್ಪು ಪರಿಷ್ಕೃತಗೊಂಡಿತು. ಜೀವಿತಾವಧಿ ಚುನಾವಣೆ ಸ್ಪರ್ಧೆ ನಿಷೇಧವನ್ನು ಕೋರ್ಟ್ ರದ್ದು ಮಾಡಿ ಅದನ್ನು ಐದು ವರ್ಷಗಳ ಅವಧಿಗೆ ಸೀಮಿತಗೊಳಿಸಿತು. ಷರೀಫ್ ಅವರು ಕಳೆದ ಅಕ್ಟೋಬರ್‌ನಲ್ಲಿ ಸ್ವದೇಶಕ್ಕೆ ವಾಪಸಾದ ನಂತರ ಇತ್ತೀಚೆಗೆ ತೀರ್ಪು ಬಂದ ಹಿನ್ನೆಲೆಯಲ್ಲಿ ದೇಶದ ರಾಜಕೀಯ ಪರಿಸ್ಥಿತಿಯೇ ಬದಲಾಯಿತು. ಅವರು ರಾಷ್ಟ್ರೀಯ ಚುನಾವಣೆಗಳಲ್ಲಿ ಮತ್ತೆ ಸ್ಪರ್ಧಿಸುತ್ತಿದ್ದಾರೆ.

ನೆಯ ಸಹಾಯದಿಂದಲೇ 2018ರಲ್ಲಿ ಅಧಿಕಾರಕ್ಕೆ ಬಂದ ಮಾಜಿ ಕ್ರಿಕೆಟ್ ಆಟಗಾರ ಇಮ್ರಾನ್‌ಖಾನ್ ತಮ್ಮ ಅಧಿಕಾರದ ಅಂತ್ಯದ ವೇಳೆಗೆ ಸೇನೆ ಮತ್ತು ಅಮೆರಿಕದ ವಿರೋಧಿಯಾಗಿಬಿಟ್ಟಿದ್ದರು. ಸೇನೆಯ ಉನ್ನತ ಅಧಿಕಾರಿಯೊಬ್ಬರ ಮೇಲೆ ತಮ್ಮನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದರು. ಆಡಳಿತದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ ಎಂದು ದೂರಿದರು. ಈ ವಿಚಾರವಾಗಿ ಸರ್ಕಾರದ ರಹಸ್ಯ ದಾಖಲೆಗಳನ್ನು ಬಹಿರಂಗ ಮಾಡಿದ ಗಂಭೀರ ಆರೋಪಕ್ಕೆ ಅವರು ಒಳಗಾದರು. ದೇಶ ವಿದೇಶಗಳಿಂದ ಬಂದ ಉಡುಗೊರೆಗಳನ್ನು ಬೇರೆ ದೇಶಕ್ಕೆ ಮಾರಿದ ಆರೋಪ ಅವರ ಮೇಲೆ ಬಂತು. ಒಟ್ಟು 14 ಪ್ರಕರಣಗಳು ಅವರ ವಿರುದ್ಧ ದಾಖಲಾದವು. ಈ ಪ್ರಕರಣಗಳು ಅವರನ್ನು ನ್ಯಾಯಾಲಯಗಳ ಮುಂದೆ ನಿಲ್ಲುವಂತೆ ಮಾಡಿದವು. ಅವರ ವಿರುದ್ಧ ವಿರೋಧ ಪಕ್ಷಗಳ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದರು. ಅವರು ಬಹುಮತ ಕಳೆದುಕೊಂಡು ರಾಜೀನಾಮೆ ಕೊಡಬೇಕಾದಂಥ ಸ್ಥಿತಿ ಬಂತು. ಭ್ರಷ್ಟಾಚಾರ ಪ್ರಕರಣಗಳಲ್ಲಿ ನ್ಯಾಯಾಲಯಗಳು ಅವರ ವಿರುದ್ಧ ತೀರ್ಪು ನೀಡಿದವು. ಚುನಾವಣೆಗಳಲ್ಲಿ ಐದು ವರ್ಷ ಸ್ಪರ್ಧಿಸದಂತೆ ಸುಪ್ರೀಂ ಕೋರ್ಟ್ ನಿಷೇಧ ಹೇರಿತು. ಅಷ್ಟೇ ಅಲ್ಲ ಅವರ ಪಕ್ಷ ಮತ್ತು ಚುನಾವಣಾ ಚಿಹ್ನೆಯಾದ ಕ್ರಿಕೆಟ್ ಬ್ಯಾಟ್ ಬಳಸದಂತೆ ನಿಷೇಧ ಹೇರಲಾಯಿತು. ಅಲ್ಲಿಗೆ ಅವರ ಚುನಾವಣಾ ಆಟ ಮುಕ್ತಾಯ ವಾದಂತೆ ಆಯಿತು. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಜನಪ್ರಿಯ ನಾಯಕ. ಹಾಗೆಯೇ ಅವರ ರಾಜಕೀಯ ಪಕ್ಷ ಪಾಕಿಸ್ತಾನ್ ತಹರಿಕ್-ಇ-ಇನ್ಸಾಫ್. ಕೋರ್ಟ್ ತೀರ್ಪುಗಳಿಂದಾಗಿ ಅವರು ಮತ್ತು ಅವರ ಪಕ್ಷದ ಹೆಸರಿನಲ್ಲಿ ಯಾರೂ ಸ್ಪರ್ಧಿಸದಂತೆ ಆಗಿದೆ. ಅವರ ಪಕ್ಷದ ಅನೇಕ ರಾಜಕಾರಣಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ವತಂತ್ರ ಚಿಹ್ನೆಯಡಿ ಸ್ಪರ್ಧಿಸಬೇಕಾಗಿ ಬಂದಿದೆ. ಅನಿವಾರ್ಯವಾಗಿ ಅವರ ಬೆಂಬಲಿಗರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಅಂಥ ಸ್ಪರ್ಧಿಗಳ ಅಪಹರಣ, ನಾಮಪತ್ರ ಸಲ್ಲಿಸಲು ಹೋದ ಅಭ್ಯರ್ಥಿಗಳ ನಾಮಪತ್ರಗಳನ್ನು ಹರಿದು ಹಾಕುವ, ಬೆದರಿಕೆ ಹಾಕುವ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಇಮ್ರಾನ್ ಖಾನ್ ಹತಾಶರಾಗಿದ್ದಾರೆ. ಆದರೆ ಹೋರಾಟದ ದಾರಿ ಬದಲಾಯಿಸುವುದಿಲ್ಲ ಎಂದು ಇತ್ತೀಚೆಗೆ ಜೈಲಿನಿಂದ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇಮ್ರಾನ್ ಖಾನ್ ಮತ್ತು ಅವರ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸದೆ ಇರುವುದರಿಂದ ಮುಸ್ಲಿಮ್ ಲೀಗ್ (ಎನ್) ನಾಯಕ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಉತ್ತಮ ಅವಕಾಶ ಸಿಕ್ಕಂತಾಗಿದೆ. ಹಿಂದೆ ಸಾಕಷ್ಟು ಜನಪ್ರಿಯ ನಾಯಕರಾಗಿದ್ದ ನವಾಜ್ ಷರೀಫ್ ಮತ್ತೆ ಚುನಾವಣೆ ಗೆಲ್ಲುವ ದಿಕ್ಕಿನಲ್ಲಿ ಮುನ್ನಡೆಯುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಯಾವ ಮಿಲಿಟರಿ ಅವರನ್ನು ಪದಚ್ಯುತಗೊಳಿಸಿ ದೇಶ ಬಿಟ್ಟು ಹೋಗುವಂತೆ ಮಾಡಿತ್ತೋ ಅದೇ ಮಿಲಿಟರಿ (ಈಗ ಅಧಿಕಾರಿಗಳು ಬದಲಾಗಿದ್ದಾರೆ ಅಷ್ಟೆ) ಈಗ ಬೆಂಬಲ ನೀಡುತ್ತಿರುವುದು ವಿಪರ್ಯಾಸ. ಅಂತೆಯೇ ಆಡಳಿತದಲ್ಲಿ ಮಿಲಿಟರಿ ಹಸ್ತಕ್ಷೇಪ ತಡೆಯುವುದಾಗಿ ಹೇಳಿದ್ದ ನವಾಜ್ ಷರೀಫ್ ಅವರೇ ಈಗ ಅಧಿಕಾರಕ್ಕಾಗಿ ಮಿಲಿಟರಿ ಬೆಂಬಲ ಪಡೆಯಬೇಕಾಗಿ ಬಂದುದು ಮತ್ತೊಂದು ವಿಪರ್ಯಾಸ.

ಚುನಾವಣೆ ಕಣದಲ್ಲಿರುವ ಮತ್ತೊಂದು ಪಕ್ಷ ದಿವಂಗತ ಪ್ರಧಾನಿ ಬೆನಜಿರ್‌ ಭುಟ್ಟೋ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ. ಈ ಪಕ್ಷದ ನಾಯಕ ಬೆನಜಿ‌ ಭುಟ್ಟೋ ಅವರ ಪುತ್ರ ಬಿಲ್ವಾಲಾ ಭುಟ್ಟೋ ಜರದಾರಿ ಕೂಡ ಅಧಿಕಾರಕ್ಕೆ ಬರಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ನವಾಜ್ ಷರೀಫ್ ಪಕ್ಷ ಗೆಲ್ಲುವ ಸಾಧ್ಯತೆಗಳನ್ನು ಊಹಿಸಿರುವ ಬಿಲ್ವಾಲ್‌ ಅವರು ನೇರವಾಗಿ ಅವರ ಹಿಂದಿನ ಆಡಳಿತವನ್ನು ಪರೋಕ್ಷವಾಗಿಯೂ ಟೀಕಿಸುತ್ತಿಲ್ಲ. ಮುಂದೆ ಅಧಿಕಾರಕ್ಕೆ ಬರುವ ಸಾಧ್ಯತೆ ಇರಬಹುದಾದ ನವಾಜ್ ಷರೀಫ್ ಅವರ ಜೊತೆ ಹೊಂದಾಣಿಕೆಗೆ ಸಿದ್ಧವಿರುವಂತೆ ಕಾಣುತ್ತಿದೆ.

ಚುನಾವಣೆ ವಿಚಾರದಲ್ಲಿ ಉಂಟಾದ ನಾನಾ ರೀತಿಯ ಗೊಂದಲಗಳಿಂದಾಗಿ ಮತ್ತು ದೇಶ ಈಗ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರಲ್ಲಿ ಉತ್ಸಾಹ ಕಾಣಿಸುತ್ತಿಲ್ಲ. ಜೊತೆಗೆ ಚುನಾವಣೆ ಸ್ಪರ್ಧಿಗಳ ಮೇಲೆ ಪೊಲೀಸರು ವಿಧಿಸಿರುವ ನಾನಾ ರೀತಿಯ ನಿರ್ಬಂಧಗಳೂ ನೀರಸ ವಾತಾವರಣಕ್ಕೆ ಕಾರಣವಾಗಿವೆ.

ನವಾಜ್ ಷರೀಫ್ ಅವರು ಪಾಕ್ ಪ್ರಧಾನಿಯಾದರೆ ಭಾರತದ ಜೊತೆಗಿನ ಬಾಂಧವ್ಯ ಸುಧಾರಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಹಿಂದೆ ಅವರು ಪ್ರಧಾನಿಯಾಗಿದ್ದಾಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರು. ಮೋದಿ ಅವರು ಒಮ್ಮೆ ನವಾಜ್ ಷರೀಫ್ ಅವರ ಮೊಮ್ಮಗಳ ಮದುವೆ ಸಂದರ್ಭದಲ್ಲಿ ಅವರ ರಾವಲ್‌ಪಿಂಡಿ ಮನೆಗೆ ಭೇಟಿ ನೀಡಿದ ನಿದರ್ಶನವಿದೆ. ಮದುವೆ ಒಂದು ನೆಪ ಅಷ್ಟೆ. ವಾಸ್ತವವಾಗಿ ನವಾಜ್ ಷರೀಫ್ ಜೊತೆ ಸ್ನೇಹ ವೃದ್ಧಿ ನಿಜವಾದ ಕಾರಣ. ಭಯೋತ್ಪಾದಕರ ಜೊತೆಗೂಡಿ ಸೇನೆ ಕಾರ್ಗಿಲ್ ಅತಿಕ್ರಮಣಕ್ಕೆ ಮುಂದಾಗಿ ಎರಡೂ ದೇಶಗಳ ಸೇನೆ ಸಂಘರ್ಷಕ್ಕೆ ಇಳಿದದ್ದು ಮತ್ತು ಪಾಕ್ ಸೇನೆ ಅಲ್ಲಿಂದ ಕಾಲುಕಿತ್ತದ್ದು ಬಾಂಧವ್ಯವನ್ನು ಹಾಳು ಮಾಡಿತ್ತು. ಇದು ಆದದ್ದು ನವಾಜ್ ಷರೀಫ್ ಪ್ರಧಾನಿಯಾಗಿದ್ದಾಗಲೇ ಈ ಬಗ್ಗೆ ಷರೀಫ್ ಗೆ ಸ್ವಲ್ಪವೂ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಈ ದುಸ್ಸಾಹಸದ ಹಿಂದೆ ಸೇನೆ ಇತ್ತೆಂದು ಹೇಳಲಾಗಿದೆ. ನವಾಜ್ ಷರೀಫ್ ಅವರು ಮತ್ತೆ ಈಗ ದೇಶಕ್ಕೆ ಬಂದಮೇಲೆ ಭಾರತದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿರುವುದು ವರದಿಯಾಗಿದೆ. ವಾಸ್ತವವಾಗಿ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ತಿಳಿದಿಲ್ಲ. ಆದರೆ ಸೇನೆ ಮಾತ್ರ ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವುದರಿಂದ ಎರಡೂ ದೇಶಗಳ ನಡುವಣ ಬಾಂಧವ್ಯ ವೃದ್ಧಿಯಾಗುವ ಸಾಧ್ಯತೆ ಕಾಣಿಸುತ್ತಿಲ್ಲ.

andolanait

Recent Posts

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

14 mins ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

49 mins ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

59 mins ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

1 hour ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

2 hours ago

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಹಳೆ ಪ್ರಕರಣಕ್ಕೆ ಹೊಸ ಎನ್‌ಸಿಆರ್‌

ಬೆಂಗಳೂರು: ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಹಳೆ…

3 hours ago