ಅಂಕಣಗಳು

ಕನ್ನಡ ಚಿತ್ರಗಳಿಗೆ ಬೆನ್ನುಮಾಡಿರುವ ಒಟಿಟಿ ತಾಣಗಳು

ಕನ್ನಡ ಚಿತ್ರಗಳನ್ನು ಬಿಡುಗಡೆಯಾಗುವುದಕ್ಕೂ ಮೊದಲೇ ಒಟಿಟಿ ತಾಣಗಳು ಕೊಂಡುಕೊಂಡು ಪ್ರಸಾರ ಮಾಡುತ್ತಿದ್ದವು. 2023ರಲ್ಲೇ ನೇರವಾಗಿ ನಾಲ್ಕು ಕನ್ನಡ ಚಿತ್ರಗಳನ್ನು ಪಡೆದುಕೊಂಡಿದ್ದವು. ಆದರೆ ಇತ್ತೀಚೆಗೆ ಕನ್ನಡ ಚಿತ್ರಗಳನ್ನು ಕೊಂಡುಕೊಳ್ಳುವುದಿಲ್ಲ ಎಂದು ಸಾರಾಸಗಟಾಗಿ ಒಟಿಟಿಗಳು ತಿರಸ್ಕರಿಸುತ್ತಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅವು ಯಶಸ್ವಿಯಾದರೆ ಮಾತ್ರ ಒಟಿಟಿಯಲ್ಲಿ ಅವಕಾಶ; ಇಲ್ಲದೆ ಇದ್ದರೆ ಅದೂ ಇಲ್ಲ.

ಇಂತಹದೊಂದು ಪರಿಸ್ಥಿತಿ ನಿರ್ಮಾಣ ಆಗಲು ಕಾರಣ ಏನು? ಕನ್ನಡ ಚಿತ್ರಗಳೆಂದರೆ ಅವಜ್ಞೆಯೇ? ಅವುಗಳ ಗುಣಮಟ್ಟವೇ? ತಾರಾ ವರ್ಚಸ್ಸಿನ ಚಿತ್ರಗಳನ್ನು ಕೊಂಡುಕೊಳ್ಳುವ ಒಟಿಟಿಗಳು ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗುವ ಚಿತ್ರಗಳನ್ನು ಕೊಂಡುಕೊಳ್ಳುತ್ತಿಲ್ಲ ಏಕೆ? ಇತರ ಭಾರತೀಯ ಭಾಷಾ ಚಿತ್ರಗಳನ್ನು ಕೊಂಡುಕೊಳ್ಳುವುದಾದರೆ, ಕನ್ನಡದ ಕುರಿತಂತೆ ಈ ಮಲತಾಯಿ ಧೋರಣೆ ಏಕೆ?

ಒಟಿಟಿಗಳು ಉಚ್ಛಾಯ ಸ್ಥಿತಿಗೆ ಬರಲು ಕಾರಣವಾದದ್ದು ಕೊರೊನಾ ದಿನಗಳು. 2020 ಮತ್ತು 2021ರ ದಿನಗಳು. ಚಿತ್ರಮಂದಿರಗಳು ಲಾಕ್‌ಔಟ್ ಆದ ದಿನಗಳಲ್ಲಿ ಒಟಿಟಿಗಳಿಗೆ ಎಂದೂ ಇಲ್ಲದ ಬೇಡಿಕೆ. ಮನೆಯ ಒಳಗೆ ಕುಳಿತ ಮಂದಿಗೆ ಮನರಂಜನೆಗೆ ಇದ್ದ ಏಕೈಕ ರಹದಾರಿ. ಆ ದಿನಗಳಲ್ಲಿ ಕನ್ನಡ ಮಾತ್ರವಲ್ಲದೆ ದೇಶವಿದೇಶಗಳ ಚಿತ್ರಗಳನ್ನು ನೋಡುವ ಅವಕಾಶವೂ ಅವುಗಳಿಂದ ಒದಗಿ ಬಂತು.

ಚಲನಚಿತ್ರ ತಂತ್ರಜ್ಞಾನದಲ್ಲಿ ಬದಲಾದ ರೀತಿ, ಪ್ರಯೋಗಗಳು, ವಿಶೇಷವಾಗಿ ನೆರೆಯ ಕೇರಳದಲ್ಲಿ ತಯಾರಾಗುತ್ತಿದ್ದ ಮಲಯಾಳಂ ಚಿತ್ರಗಳೇ ಮೊದಲಾದವುಗಳನ್ನು ನೋಡಿ ತಿಳಿಯಲು ದಾರಿಯೂ ಆಯಿತು. ಕನ್ನಡದಲ್ಲಿ ತಯಾರಾದ ಚಿತ್ರಗಳಲ್ಲಿ ಸಾಕಷ್ಟು ಬಿಡುಗಡೆಯಾಗಿರಲಿಲ್ಲ. ಅವುಗಳನ್ನು ಮಾರಲು ನಿರ್ಮಾಪಕರು ಕಂಡುಕೊಂಡ ದಾರಿ, ವೀಕ್ಷಕರ ಸಂಖ್ಯೆಗನುಗುಣವಾಗಿ ಹಂಚಿಕೊಳ್ಳುವ ವಿಧಾನ. ಇದು ಹೆಚ್ಚು ಅನುಕೂಲ ಮಾಡಿಕೊಟ್ಟದ್ದು ಒಟಿಟಿಗಳಿಗೆ. ಯಾವುದೇ ಬಂಡವಾಳ ಇಲ್ಲದೆ ತಮಗೆ ಸಾಕಷ್ಟು ಕಂಟೆಂಟ್‌ಗಳು ಸಿಗುವುದಾದರೆ ಒಮ್ಮೆಗೇ ಕೊಂಡುಕೊಳ್ಳಬೇಕಾದ ಅಗತ್ಯ ಇಲ್ಲ ಎನ್ನುವ ಮನೋಭಾವನೆ ಅಲ್ಲಿ ಗಟ್ಟಿಯಾಗತೊಡಗಿತು. ಕನ್ನಡ ಚಿತ್ರಗಳನ್ನು ಕೊಂಡುಕೊಳ್ಳದೆ ಇರುವುದಕ್ಕೆ ಇದು ಕೂಡ ಒಂದು ಕಾರಣ ಎನ್ನುವುದು, ಪರಿಣತ ಉದ್ಯಮಿಗಳ ಅಭಿಪ್ರಾಯ.

ಕಡಿಮೆ ವೆಚ್ಚದಲ್ಲಿ ತಯಾರಾಗುವ ಅರ್ಧಕ್ಕಿಂತ ಹೆಚ್ಚು ಚಿತ್ರಗಳ ಗುಣಮಟ್ಟ ತೀರಾ ಕಳಪೆಯಾಗಿರುತ್ತದೆ. ಚಲನಚಿತ್ರ ಭಾಷೆಯ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದ ಚಿತ್ರಗಳೂ ಈ ಸಾಲಿನಲ್ಲಿರುತ್ತವೆ. ರಾಜ್ಯ ಸರ್ಕಾರ ನೀಡುವ ಸಹಾಯಧನ ಮೊತ್ತದ ಒಳಗೇ ತಯಾರಾಗುವ ಚಿತ್ರಗಳೂ ಇವೆ ಎನ್ನಿ. ಸಹಾಯಧನ, ಪ್ರಶಸ್ತಿ ಎಂದು ಹೇಳಿಕೊಂಡು ತಿರುಗಾಡುವ ಒಂದಷ್ಟು ಚಿತ್ರಗಳ ಮಂದಿ, ಇತರ ನಿರ್ದೇಶಕ/ನಿರ್ಮಾಪಕರ ಅವಕಾಶಗಳಿಗೂ ಹಾದಿಯ ಮುಳ್ಳಾಗುತ್ತಾರೆ.

ಬಹುತೇಕ ಒಟಿಟಿ ತಾಣಗಳ ಕಚೇರಿಗಳು ಕರ್ನಾಟಕದಲ್ಲಿ ಇಲ್ಲ. ಏನಿದ್ದರೂ ಮುಂಬೈಯಲ್ಲೇ ಎಲ್ಲ. ಇಲ್ಲಿನ ಚಲನಚಿತ್ರ ಪರಂಪರೆಯ ಕುರಿತು ತಿಳಿದವರನ್ನು ನೇಮಿಸಿ, ಅವರ ಮೂಲಕ ಚಿತ್ರಗಳ ಗುಣಾವಗುಣಗಳನ್ನು ತಿಳಿದುಕೊಳ್ಳುವ ಪ್ರಯತ್ನಗಳನ್ನು ಈ ತಾಣಗಳು ಮಾಡುತ್ತಿಲ್ಲ. ಅದೇ ಇಲ್ಲಿನ ಚಿತ್ರಗಳನ್ನು ಕೊಂಡುಕೊಳ್ಳದೆ ಇರುವುದಕ್ಕೆ ಮತ್ತೊಂದು ಕಾರಣ ಎನ್ನಲಾಗಿದೆ. ಇನ್ನು ಮಧ್ಯವರ್ತಿಗಳು ಎಂದುಕೊಂಡು ಓಡಾಡುವವರ ಕೈಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುವವರೂ ಇದ್ದಾರೆ.

ಒಟಿಟಿಗಷ್ಟೇ ಕನ್ನಡದ ಮೇಲಿನ ಈ ಮನಸ್ಥಿತಿ ಸೀಮಿತವಾಗಿಲ್ಲ. ಯಾವುದಾದರೂ ಒಳ್ಳೆಯ ಕಥಾವಸ್ತು ಇದ್ದರೆ, ಅದನ್ನು ಕನ್ನಡದ ಬದಲು ಬೇರೆ ಭಾಷೆಯಲ್ಲಿ, ಅದೂ ಹಿಂದಿಯಲ್ಲಿ ಮಾಡಿ ಎನ್ನುವ ಒತ್ತಾಯವನ್ನು ಮಾಡುವುದು ಈಗ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಚಿತ್ರೋತ್ಸವದ ಫಿಲಂ ಬಜಾರಿನಲ್ಲಿ ನಿರ್ಮಾಣ ಸಹಯೋಗಕ್ಕಾಗಿ ಆಯ್ಕೆಯಾಗಿದ್ದ  ಕಾಲಕೂಟ’ ಚಿತ್ರದ ನಿರ್ಮಾಪಕರಿಗೆ ಈ ಒತ್ತಾಯ ಸಾಕಷ್ಟಿತ್ತು. ಕನ್ನಡದ ಬದಲು ಹಿಂದಿಯಲ್ಲಿ ಈ ಚಿತ್ರವನ್ನು ಮಾಡುವುದಾದರೆ ನಾವು ಸಹಯೋಗ ನೀಡುತ್ತೇವೆ ಎಂದು ಉತ್ತರ ಭಾರತದ ನಾಲ್ಕೆ ದು ಮಂದಿ ನಿರ್ಮಾಪಕರು ಆಶ್ವಾಸನೆ ನೀಡಿದರಂತೆ. ಇದು ಏನನ್ನು ಹೇಳುತ್ತದೆ?

ಇನ್ನು ಒಟಿಟಿ ತಾಣಗಳಿಗೆ ಬಹಳ ಕಡಿಮೆ ಬಂಡವಾಳಕ್ಕೆ ಸಿಗುವ ಕನ್ನಡಕ್ಕೆ ಡಬ್ ಆದ ಚಿತ್ರಗಳ ಪ್ರವಾಹವೇ ಇದೆ. ಯಾವುದೇ ಒಟಿಟಿ ತಾಣಗಳಿಗೆ ಹೋದರೂ, ಯಾರೂ ಕೇಳಿರದ ಹೆಸರಿನ ಕನ್ನಡ ಚಿತ್ರಗಳು ಅಲ್ಲಿರುತ್ತವೆ. ಬಹಳಷ್ಟು ಮಂದಿಗೆ ಮೂಲ ಚಿತ್ರಗಳೋ, ಡಬ್ ಆದ ಚಿತ್ರಗಳೋ, ಒಟ್ಟಿನಲ್ಲಿ ಮನರಂಜನೆಯ ಹೆಸರಿನಲ್ಲಿ ಸಮಯ ಕಳೆಯಲು ಯಾವುದಾದರೂ ಸಿಕ್ಕಿದರೆ ಸಾಕು. ಈ ಚಿತ್ರಗಳಿಗೆ ಒಟಿಟಿ ತಾಣಗಳು ಕೋಟಿಗಟ್ಟಲೆ ಹಣವನ್ನೂ ನೀಡಬೇಕಾದ ಅಗತ್ಯವಿಲ್ಲ. ಕೆಲವೇ ಲಕ್ಷ ರೂ.ಗಳಲ್ಲಿ ಆಗುವ ವ್ಯವಹಾರ ಇದು.

ಅವಕಾಶಕ್ಕಾಗಿ ನಿರ್ಮಾಪಕರನ್ನು ಹುಡುಕಿಕೊಂಡು ಬರುವ ನಿರ್ದೇಶಕರಾಗಬಯಸುವವರಿಗೆ, ಚಿತ್ರಗಳ ಮಾರುಕಟ್ಟೆಯ ಅನುಭವ ಇರುವುದು ಕಡಿಮೆ. ವಿಶೇಷವಾಗಿ ಚಿತ್ರಕ್ಕೆ ಆಗಬಹುದಾದ ವೆಚ್ಚ ಮತ್ತು ಅದನ್ನು ಪುನಃ ಪಡೆಯುವ ಲೆಕ್ಕಾಚಾರಗಳ ಕುರಿತು ಅವರಿವರು ಹೇಳಿದ್ದೇ ಬಹಳಷ್ಟು ಸಂದರ್ಭಗಳಲ್ಲಿ ಬಂಡವಾಳ. ಒಟಿಟಿಯಿಂದ ಇಷ್ಟು ಕೋಟಿ, ಟಿವಿ ಪ್ರಸಾರದ ಹಕ್ಕು ಇಷ್ಟು ಕೋಟಿ, ಆಡಿಯೋ ಪ್ರಸಾರದ ಹಕ್ಕು ಇಷ್ಟು ಕೋಟಿ… ಹೀಗೆ ಬಜೆಟ್‌ನಲ್ಲಿ  ತೋರಿಸುತ್ತಾರೆ. ನಿರ್ಮಾಪಕರು ಹೊಸಬರಾದರೆ, ಅದನ್ನೇ ನಂಬಿಬಿಡುತ್ತಾರೆ. ಉದ್ಯಮದಲ್ಲಿ ಸಾಕಷ್ಟು ಅನುಭವಿಗಳಾದರೆ, ಅವರಿಗೆ, ಯಾವ ನಟನ ಸಿನಿಮಾ ಎಷ್ಟು ವ್ಯಾಪಾರ ಮಾಡಬಹುದು ಎನ್ನುವ ಲೆಕ್ಕಾಚಾರ ಇರುತ್ತದೆ. ಚಿತ್ರ ನಿರ್ಮಿಸಿ, ವ್ಯಾಪಾರ ಮಾಡಿಬಿಡುತ್ತಾರೆ. ಅಂತಿಮವಾಗಿ ಕೊಳ್ಳುವವನಿಗೆ ಅದರ ಪರಿಣಾಮ.

ಕೆಲವು ಚಿತ್ರಗಳ ನಿರ್ಮಾಪಕರು, ತಾವು ಲಾಭದಲ್ಲಿದ್ದೇವೆ ಎಂದು ಹೇಳುತ್ತಾರೆ. ತಾವು ಹಾಕಿದ ಬಂಡವಾಳಕ್ಕೆ ಲಾಭ ಸೇರಿಸಿ ಅವರು ಮಾರಿರುತ್ತಾರೆ. ಬೇರೆ ಬೇರೆ ಪ್ರದೇಶಗಳಿಗೆ ಕೊಂಡುಕೊಂಡವರಿಗೆ ಲಾಭ ಬರಬೇಕಾದರೆ ಅವರು ನಿರೀಕ್ಷಿಸಿದ ಪ್ರಮಾಣದಲ್ಲಿ ಅದನ್ನು ಪ್ರೇಕ್ಷಕರು ನೋಡಬೇಕು. ಹಾಗಾಗಿ ಕೆಲವು ಸಂದರ್ಭಗಳಲ್ಲಿ ನಿರ್ಮಾಪಕರು ಲಾಭವಾಗಿದೆ ಎಂದರೂ, ಅದನ್ನು ಕೊಂಡುಕೊಂಡ ವಿತರಕ ಇಲ್ಲವೇ ಪ್ರದರ್ಶಕರಿಗೆ ನಷ್ಟವಾದದ್ದೂ ಇದೆ.

ಒಟಿಟಿ ತಾಣಗಳು ಕನ್ನಡ ಚಿತ್ರಗಳನ್ನು ಕೊಂಡುಕೊಳ್ಳದೆ ಇರುವುದನ್ನು ಉದ್ಯಮ ಗಂಭೀರವಾಗಿ ಇನ್ನೂ ಪರಿಗಣಿಸಿದಂತಿಲ್ಲ. ಕಲಾತ್ಮಕ ಚಿತ್ರಗಳನ್ನು ಒಟಿಟಿ ತಾಣಗಳೂ ಕೇಳುವುದಿಲ್ಲ, ಚಿತ್ರಮಂದಿರಗಳಲ್ಲೂ ಅವುಗಳನ್ನು ಪ್ರದರ್ಶಿಸಲು ಅವಕಾಶ ಕಡಿಮೆ. ಅದಕ್ಕಾಗಿ ಪರ್ಯಾಯ ವ್ಯವಸ್ಥೆ ಆಗಬೇಕಾದ ಅನಿವಾರ್ಯತೆ ಇದೆ. ಕೇರಳದಲ್ಲಿ ಅಲ್ಲಿನ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮ ನಡೆಸುವ ಚಿತ್ರಮಂದಿರಗಳಿವೆ. ಅಲ್ಲಿ ಜನಪ್ರಿಯ ಚಿತ್ರಗಳಷ್ಟೇ ಅಲ್ಲದೆ, ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನಕ್ಕೂ ಅವಕಾಶ ಮಾಡಿಕೊಡಲಾಗುತ್ತಿದೆ.

ಅದಷ್ಟೇ ಅಲ್ಲ, ಕಲಾತ್ಮಕ ಚಿತ್ರಗಳೂ ಸೇರಿದಂತೆ, ಮಲಯಾಳಂ ಚಿತ್ರಗಳ ಮಾರುಕಟ್ಟೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರ, ಅಕಾಡೆಮಿಯ ಮೂಲಕ ಹಮ್ಮಿಕೊಂಡ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೂರು ದಿನಗಳ ಪ್ರತ್ಯೇಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದರಲ್ಲಿ ಚಿತ್ರಕಥಾ ರಚನೆ, ಚಲನಚಿತ್ರಗಳ ವ್ಯವಹಾರವೇ ಮೊದಲಾದ ವಿಷಯಗಳ ಕುರಿತು ತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸಿದೆ. ಮಲಯಾಳ ಚಿತ್ರಗಳ ಪ್ರಸಾರಕ್ಕಾಗಿ ಕೇರಳ ಸರ್ಕಾರ ಕೈಗೆತ್ತಿಕೊಂಡಿರುವ ತನ್ನದೇ ಆದ ಒಟಿಟಿ ಯೋಜನೆ ಇತರರಿಗೆ ಮಾದರಿ.

ಚಲನಚಿತ್ರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಕೇರಳ, ಅದಕ್ಕೆ ಕಾಯಕಲ್ಪವಾಗಿರುವ ಸರ್ಕಾರದ ಕಾರಣ ಮಲಯಾಳ ಚಿತ್ರಗಳು ಇಂದು ದೇಶವಿದೇಶಗಳಲ್ಲಿ ಮೆರೆಯುತ್ತಿವೆ. ಅಲ್ಲಿ ಮುಖ್ಯವಾಹಿನಿ ಚಿತ್ರಗಳಿಗೂ, ಕಲಾತ್ಮಕ ಚಿತ್ರಗಳಿಗೂ ಅಂತರವಿಲ್ಲ. ಜನಪ್ರಿಯ ನಟರಾದ ಮಮ್ಮುಟಿ, ಮೋಹನ್‌ಲಾಲ್ ಮೊದಲಾದವರು ಕಲಾತ್ಮಕ ಚಿತ್ರಗಳಲ್ಲೂ ನಟಿಸುತ್ತಿರುತ್ತಾರೆ. ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆಯುತ್ತಾರೆ. ಅಲ್ಲಿ ಇನ್ನೂ ಫಿಲಂ ಸೊಸೈಟಿಗಳಿವೆ. ಚಲನಚಿತ್ರ ಅಕಾಡೆಮಿ ಅವುಗಳಿಗೆ ಒತ್ತಾಸೆಯಾಗಿ ಕೆಲಸ ಮಾಡುತ್ತಿದೆ.

ಕರ್ನಾಟಕದಲ್ಲಿ ಜನಪ್ರಿಯ ನಟರಲ್ಲಿ ಯಾರಾದರೂ ಕಲಾತ್ಮಕ ಚಿತ್ರಗಳಲ್ಲಿ ನಟಿಸಿದ ಉದಾಹರಣೆ ಇದೆಯೇ? ಉದ್ಯಮದಲ್ಲಿ ಅಂತಹ ಚಿತ್ರಗಳನ್ನು ಉತ್ತೇಜಿಸುವ, ಅವುಗಳ ಬೇಕುಬೇಡಗಳನ್ನು ತಿಳಿಯುವ ಉತ್ಸಾಹ ಇದೆಯೇ? ಇಲ್ಲ. ವಾಣಿಜ್ಯ ಮಂಡಳಿಯಲ್ಲಿ ಈ ಕುರಿತ ಪ್ರಸ್ತಾಪವೂ ಆಗುವುದಿಲ್ಲ. ಅದೇನಿದ್ದರೂ ವಾಣಿಜ್ಯ ಮಂಡಳಿ. ಮಾತೆತ್ತಿದೆ ಕನ್ನಡ ಚಿತ್ರರಂಗದ ಪ್ರಾತಿನಿಧಿಕ ಸಂಸ್ಥೆ ಎಂದು ಹೇಳುವ ಮಂಡಳಿ, ಇಂತಹ ಚಿತ್ರಗಳಿಗೆ ಚಿತ್ರಮಂದಿರ ಒದಗಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಂತಿಲ್ಲ. ಡಿಜಿಟಲ್ ದಿನಗಳ ನಂತರ ಪ್ರಚಾರಕ್ಕಾಗಿಯೇ ಕೋಟಿ ರೂ.ಗಳನ್ನು ವ್ಯಯಿಸಬೇಕು ಎನ್ನುವ ಈ ದಿನಗಳಲ್ಲಿ, ಅದರ ಅರ್ಧದಷ್ಟೂ ನಿರ್ಮಾಣ ವೆಚ್ಚ ಆಗದ ಚಿತ್ರಗಳು ಬರುವುದಾದರೂ ಹೇಗೆ? ಒಟಿಟಿಗಳು ಅದಕ್ಕೆ ಸರಿಯಾದ ದಾರಿ. ಅದಕ್ಕೆ ಬೇಕಾದ ಕೆಲಸಗಳಾಗಬೇಕು.

‘ಪರಸ್ಪರ’, ‘ಸಿನಿಮಾ ಯಾತ್ರೆ’ಯಂತಹ ಪರ್ಯಾಯ ಬಿಡುಗಡೆ ವ್ಯವಸ್ಥೆಯ ಯೋಚನೆ ನಿರಂತರವಾದರೆ ಅದು ಕೊಂಚ ನೆರವಾಗಬಹುದೇನೋ. ಮುಖ್ಯವಾಹಿನಿಯ ಚಿತ್ರಗಳನ್ನು ಬೆಂಬಲಿಸುವಂತೆ ಈ ಚಿತ್ರಗಳನ್ನು ವಾಹಿನಿಗಳು ಬೆಂಬಲಿಸದೆ ಇರುವುದು ಕೂಡ ಕನ್ನಡದ ಈ ರೀತಿಯ ಚಿತ್ರಗಳ ಕುರಿತ ಒಟಿಟಿಗಳ ನಿರಾಕರಣೆಯ ಕಾರಣಗಳಲ್ಲಿ ಇನ್ನೊಂದು.

ಅದೇನೇ ಇರಲಿ, ಕನ್ನಡ ಚಿತ್ರರಂಗಕ್ಕೆ, ಕನ್ನಡ ನಾಡಿಗೆ ಹೆಸರು ತಂದ, ತರುವ ಚಿತ್ರಗಳನ್ನು ಪ್ರೇಕ್ಷಕ ನೋಡಲು ಅನುಕೂಲಕರ ವ್ಯವಸ್ಥೆ ಮಾಡುವ ಹೊಣೆ ಉದ್ಯಮಕ್ಕಿದೆ, ಚಿತ್ರಮಂದಿರಗಳಿಗೆ ಲೈಸನ್ಸ್ ನೀಡುವ ಜವಾಬ್ದಾರಿ ಸರ್ಕಾರಕ್ಕಿದೆ.

andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago