ಅರೆಬೆಂದ ’ಅಗ್ನಿಪಥ’- ಮೋದಿಯವರಿಗೆ ಅಗ್ನಿಪರೀಕ್ಷೆ!

  ಈಗ ಸಿಡಿದಿರುವ ಯುವಜನರ ಆಕ್ರೋಶ ರೈತ ಆಂದೋಲನಕ್ಕಿಂತ ತೀವ್ರ ಮತ್ತು ವ್ಯಾಪಕ ಹಾಗೂ ಹಿಂಸಾತ್ಮಕ 

ದೇಶದ ನಿರುದ್ಯೋಗಿ ಯುವಜನ ಸಮುದಾಯದ ಮೇಲೆ ಏಕಾಏಕಿ ಹೇರಿದ ’ಅಗ್ನಿಪಥ’ ಯೋಜನೆ ತಿರುಗುಬಾಣವಾಗಿ ಮೋದಿ ಸರ್ಕಾರದ ಬೆನ್ನಟ್ಟಿದೆ. ದೇಶವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದಿವೆ. ಹದಿನಾರಕ್ಕೂ ಹೆಚ್ಚು ರಾಜ್ಯಗಳಲ್ಲಿ ಆಕ್ರೋಶ ಸ್ಫೋಟಿಸಿದೆ. ರೈಲು ಸಂಚಾರ ದೊಡ್ಡ ಪ್ರಮಾಣದಲ್ಲಿ ಅಸ್ತವ್ಯಸ್ತಗೊಂಡಿದೆ. ಏಳಕ್ಕೂ ಹೆಚ್ಚು ರೈಲುಗಾಡಿಗಳು ಅಗ್ನಿಸ್ಪರ್ಶಕ್ಕೆ ಗುರಿಯಾಗಿವೆ.

ಬಿಜೆಪಿ-ಸಂಯುಕ್ತ ಜನತಾದಳದ ಮೈತ್ರಿ ಸರ್ಕಾರವಿರುವ ಬಿಹಾರ ತೀವ್ರ ಬಿರುಸಿನ ಮತ್ತು ಹಿಂಸಾಚಾರದ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಉಪಮುಖ್ಯಮಂತ್ರಿಯ ನಿವಾಸವೇ ನಡುಗಿ ಹೋಗಿದೆ. ಬಿಜೆಪಿಯ ಕಚೇರಿಗಳು ಧ್ವಸ್ತವಾಗಿವೆ.

ಕೋವಿಡ್ ಕಾರಣ ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಸೇನೆಗೆ ನೇಮಕಾತಿಗಳು ಜರುಗಿಲ್ಲ. ನಿರುದ್ಯೋಗದ ಅಂಧಕಾರ ಕವಿದು ಮುತ್ತಿರುವ ಈ ಹೊತ್ತಿನಲ್ಲಿ ಯುವಜನರಿಗೆ ಧರ್ಮ ಮತ್ತು ಮುಸ್ಲಿಮ್ ದ್ವೇಷದ ಅಫೀಮು ತಿನಿಸಿ ಅವರನ್ನು ಅಮಲಿನಲ್ಲಿ ಮೈಮರೆಸುವ ಕೃತ್ಯ ಕಳೆದ ಎಂಟು-ಹತ್ತು ವರ್ಷಗಳಿಂದ ಜರುಗಿದೆ.

ತಮ್ಮ ಬದುಕಿನ ಭವಿಷ್ಯ ನಿರುದ್ಯೋಗದ ಕಗ್ಗತ್ತಲೆಯಲ್ಲದೆ ಬೇರೇನೂ ಅಲ್ಲ ಎಂಬುದು ಯುವಜನ ಸಮುದಾಯಕ್ಕೆ ತಿಳಿದು ಅವರು ಗುಡುಗಿದ ದಿನ ಆಳುವವರ ಕುರ್ಚಿಗಳು ನಡುಗತೊಡಗುತ್ತವೆ. ಈ ಕಠೋರಸತ್ಯವನ್ನು ಅರಿಯದವರೇನಲ್ಲ ಆಳುವವರು. ಹೀಗಾಗಿಯೇ ಅವರು ಹಿಂದುರಾಷ್ಟ್ರದ ಅಮಲನ್ನು ಅರೆದರೆದು ಕುಡಿಸತೊಡಗಿದ್ದಾರೆ. ಆದರೆ ಈ ಹುಲಿಸವಾರಿ ಒಂದಲ್ಲ ಒಂದು ದಿನ ಅಂತ್ಯಗೊಳ್ಳಲೇಬೇಕಿದೆ.

ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ವಿರುದ್ಧ ಸಿಡಿದು ಹಬ್ಬಿದ ಮೊದಲ ಪ್ರತಿರೋಧದ ಈ ಕಿಚ್ಚು ಸುಲಭಕ್ಕೆ ತಣಿಯುವಂತೆ ತೋರುತ್ತಿಲ್ಲ. ವಿಶೇಷವಾಗಿ ದೇಶದ ಯುವಜನ ಸಮುದಾಯವನ್ನು ಕಿಂದರಿಜೋಗಿಯಂತೆ ಮರುಳು ಮಾಡಿದ್ದಾರೆ ನರೇಂದ್ರ ಮೋದಿ. ಯುವಜನ ಮತದಾರರು ಮೋದಿಯವರ ಬಹುದೊಡ್ಡ ಶಕ್ತಿ. ಅವರು ಮುನಿಸು ಬಿಜೆಪಿಗೆ ಮಾರಕ. ಹೀಗಾಗಿ ಇಂದಲ್ಲ ನಾಳೆ ಸರ್ಕಾರ ಯುವಜನ ಸಮುದಾಯದ ಮುಂದೆ ಮಂಡಿಯೂರದೆ ವಿಧಿಯಿಲ್ಲ.

ಕೃಷಿ ಕಾಯಿದೆಗಳ ವಿರುದ್ಧ ತಿರುಗಿಬಿದ್ದ ತಿರುಗಿಬಿದ್ದ ರೈತರ ಚಳವಳಿಯನ್ನು ವರ್ಷಕಾಲ ನಿರ್ಲಕ್ಷಿಸಿದ್ದರು ಮೋದಿ. ಆನಂತರ ಹಿಂದೆ ಸರಿದು ವಾಪಸು ತೆಗೆದುಕೊಳ್ಳಲೇಬೇಕಾಯಿತು. ಮೋದಿ ಆಡಳಿತ ತನ್ನ ಮೊದಲ ಅವಧಿಯಲ್ಲಿ ತಂದಿದ್ದ ಭೂಸ್ವಾಧೀನ ವಿಧೇಯಕವೂ ಕಟ್ಟಕಡೆಗೆ ಇದೇ ಗತಿ ಕಂಡಿತು.

ಈಗ ಸಿಡಿದಿರುವ ಯುವಜನರ ಆಕ್ರೋಶ ರೈತ ಆಂದೋಲನಕ್ಕಿಂತ ತೀವ್ರ ಮತ್ತು ವ್ಯಾಪಕ ಹಾಗೂ ಹಿಂಸಾತ್ಮಕ.

ಬೆಂಕಿ ಧಗಧಗಿಸುವ ಹಾದಿ ಎಂಬುದು ’ಅಗ್ನಿಪಥ’ದ ಪದಶಃ ಅರ್ಥ. ದೇಶದ ಸಶಸ್ತ್ರ ಪಡೆಗಳ ಮೂರೂ ವಿಭಾಗಗಳಿಗೆ ಇನ್ನು ಮುಂದೆ ನೇಮಕಾತಿ ‘ಅಗ್ನಿಪಥ’ದ ಮೂಲಕವೇ ಎಂದು ಮೋದಿ ಸರ್ಕಾರ ಇದೇ ೧೪ರಂದು ಆದೇಶ ಹೊರಡಿಸಿತು.

ಮಿಲಿಟರಿ ತಜ್ಞರು ಈ ಕ್ರಮದ ಕುರಿತು ಆಶ್ಚರ್ಯಾಘಾತ ಪ್ರಕಟಿಸಿದ್ದಾರೆ. ನೇಮಕಾತಿಯನ್ನು ಮಾತ್ರವಲ್ಲದೆ ಯೋಧನೊಬ್ಬ ಹೇಗಿರಬೇಕೆಂಬ ಮಿಲಿಟರಿ ಗೊತ್ತುಗುರಿಗಳನ್ನೇ ಈ ಯೋಜನೆ ಬುಡಮೇಲು ಮಾಡಲಿದೆ ಎಂಬುದು ಅವರ ಆತಂಕ.

ಹದಿನೈದು ವರ್ಷಗಳ ಸೇವಾವಧಿ ಮತ್ತು ಬದುಕಿರುವ ತನಕ ನಿವೃತ್ತಿವೇತನ ಸೌಲಭ್ಯವನ್ನು ಒಳಗೊಂಡ ಸೇನಾ ನೌಕರಿ ಇನ್ನು ಮುಂದೆ ಕೇವಲ ಕನಸು. ತರಬೇತಿ ಅವಧಿಯ ಆರು ತಿಂಗಳೂ ಸೇರಿದಂತೆ ‘ಅಗ್ನಿವೀರ’ರ ಸೇವಾವಧಿ ಕೇವಲ ನಾಲ್ಕು ವರ್ಷಗಳು ಮಾತ್ರ. ಆನಂತರ ಹದಿನೈದು ವರ್ಷಗಳ ಸೇವಾವಧಿಯ ಯೋಧರ ಹುದ್ದೆಗಳಿಗೆ ಇವರು ಅರ್ಜಿಯನ್ನೇನೋ ಸಲ್ಲಿಸಬಹುದು. ಆದರೆ ಹೀಗೆ ಅರ್ಜಿ ಸಲ್ಲಿಸುವ ನೂರು ಮಂದಿಯ ಪೈಕಿ ಉದ್ಯೋಗ ಸಿಗುವುದು ಕೇವಲ ೨೫ ಮಂದಿಗೆ ಮಾತ್ರ. ಉಳಿದ ೭೫ ಮಂದಿ ಸುಮಾರು ಹನ್ನೆರಡು ಲಕ್ಷ ರುಪಾಯಿ ನಿವೃತ್ತಿ ನಿಧಿ ಪಡೆದುಕೊಂಡು ಮನೆಗೆ ಮರಳಬೇಕು. ‘ದೇಶಕಟ್ಟುವ’ ಕೆಲಸದಲ್ಲಿ ತೊಡಗಬೇಕು. ಕನಿಷ್ಠ ಪಕ್ಷ ಮುಂದಿನ ನಾಲ್ಕು ವರ್ಷಗಳ ಕಾಲ ಸೇನೆಗೆ ಕಾಯಂ ಸಿಬ್ಬಂದಿಯ ನೇಮಕಾತಿ ಸ್ಥಗಿತಗೊಳ್ಳಲಿದೆ.

ಆಕ್ರಮಣಕಾರಿ ಧೋರಣೆ ತಳೆದಿರುವ ಚೀನಾ ಭಾರತದ ಗಡಿಗಳ ಒತ್ತುವರಿ ಮಾಡುತ್ತಲೇ ನಡೆದಿರುವ ಮತ್ತು ಧರ್ಮಾಂಧ ತೀವ್ರವಾದಿಗಳನ್ನು ಭಾರತದೊಳಕ್ಕೆ ನುಗ್ಗಿಸಲು ಸದಾ ಹೊಂಚು ಹಾಕುತ್ತಿರುವ ಪಾಕಿಸ್ತಾನದ ಸನ್ನಾಹಗಳನ್ನು ತಡೆಯುವುದು ಈಗಲೇ ದುಸ್ತರವಾಗಿ ಪರಿಣಮಿಸಿದೆ.ಶತ್ರುದೇಶಗಳ ಹಂಚಿಕೆಗಳನ್ನು ವಿಫಲಗೊಳಿಸಲು ನಮ್ಮ ಸೇನೆ ಸದಾ ಸನ್ನದ್ಧವಾಗಿರಬೇಕಿದೆ.

ಹೀಗಿರುವಾಗ ಆರೇ ತಿಂಗಳ ಅವಸರದಲ್ಲಿ ಅರೆಬರೆ ತರಬೇತಿ ಪಡೆದ ನಾಲ್ಕು ವರ್ಷಗಳ ಸೇವಾವಧಿಯ, ಕಸಬು ತಿಳಿಯದ ’ಅಗ್ನಿವೀರ’ರ ಕೈಯಲ್ಲಿ ದೇಶದ ಗಡಿಗಳು ಅದೆಷ್ಟು ಸುರಕ್ಷಿತ? ದೀರ್ಘಾವಧಿಯ ಉದ್ಯೋಗಭದ್ರತೆ ಇಲ್ಲದೆ ಕೇವಲ ನಾಲ್ಕು ವರ್ಷಗಳ ಗುತ್ತಿಗೆಯ ಮೇರೆಗೆ ನೇಮಕಗೊಂಡವರಿಗೆ ದೇಶರಕ್ಷಣೆಯ ಪ್ರೇರಣೆ ಎಲ್ಲಿಂದ ಬಂದೀತು. ಸದಾ ಕಾರ್ಯಾಚರಣೆ ಸನ್ನದ್ಧ ಸ್ಥಿತಿಯಲ್ಲಿ ಸೇನೆಯನ್ನು ಇರಿಸಬೇಕಿರುವ ಅಂಶಕ್ಕೆ ಭಾರೀ ಹಿನ್ನಡೆ ಆಗುವುದಿಲ್ಲವೇ ಎಂಬ ಪ್ರಶ್ನೆಗಳು ಎದ್ದಿವೆ. ಯೋಧರ ಸಂಬಳ ಸಾರಿಗೆಯೇ ರಕ್ಷಣಾವೆಚ್ಚದ ಬಹುಪಾಲನ್ನು ನುಂಗುತ್ತಿದ್ದು, ಶಸ್ತ್ರಾಸ್ತ್ರ ಖರೀದಿಗೆ ಹಣ ಸಾಲುತ್ತಿಲ್ಲ. ಹೀಗಾಗಿ ಸಂಬಳ ಸಾರಿಗೆಯನ್ನು ದೊಡ್ಡ ಪ್ರಮಾಣದಲ್ಲಿ ತಗ್ಗಿಸಬೇಕೆಂಬುದೇ ’ಅಗ್ನಿಪಥ’ದ ಹಿಂದಿನ ಅಸಲು ಉದ್ದೇಶ. ಸರ್ಕಾರವೂ ಈ ಅಂಶವನ್ನು ಒಪ್ಪಿಕೊಂಡಿದೆ. ಉದಾಹರಣೆಗೆ ೪೨ ಸ್ಕ್ವಾಡ್ರನ್ ಗಳ ಅಗತ್ಯವಿರುವ ಭಾರತೀಯ ವಾಯುಸೇನೆ ಕೇವಲ ೩೦ ಸ್ಕ್ವಾಡ್ರನ್ ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ದಿನ ನೂಕಿದೆ. ನೌಕಾಸೇನೆ ೧೩೦ ಹಡಗುಗಳಿಗೇ ತೃಪ್ತಿಪಟ್ಟುಕೊಳ್ಳಬೇಕಿದೆ. ಬೇಕಿರುವ ಸಂಖ್ಯೆ ೩೦೦. ಪದಾತಿ ಪಡೆ ಒಂದು ಲಕ್ಷ ಯೋಧರ ಕೊರತೆಯಿಂದ ಬಳಲಿದೆ. ದೇಶದ ಅರ್ಥಸ್ಥಿತಿ ತೀವ್ರವಾಗಿ ಕುಸಿದಿದ್ದು, ಸೇನೆಯ ಈ ಅಗತ್ಯಗಳನ್ನು ಪೂರೈಸುವ ಸ್ಥಿತಿಯಲ್ಲಿ ಇಲ್ಲವೇ ಇಲ್ಲ. ಹಣಕಾಸಿನ ಸಂಕಟವನ್ನು ನಿವಾರಿಸುವ ಸಾಮರ್ಥ್ಯವೂ ಸರ್ಕಾರಕ್ಕೆ ಇಲ್ಲ. ಇಂತಹ ಸ್ಥಿತಿಯಲ್ಲಿ ಉಳಿದ ಏಕೈಕ ಸುಲಭದ ದಾರಿಯೆಂದರೆ ಸೇನಾವೆಚ್ಚವನ್ನು ತಗ್ಗಿಸುವುದು. ಮೋದಿಯವರು ಈ ಹಾದಿಯನ್ನೇ ತುಳಿದಿದ್ದಾರೆ.
ಸೇನಾ ನಿವೃತ್ತರಿಗೆ ’ಒಂದೇ ಶ್ರೇಣಿ, ಒಂದೇ ತೆರನ ಪಿಂಚಣಿ’ (One Rank, One Pension) ಆಶ್ವಾಸನೆ ನೀಡಿ ಆಕಾಶ ತೋರಿಸಿದ್ದರು ಮೋದಿ. ಎಂಟು ವರ್ಷಗಳ ನಂತರವೂ ಈ ವಚನವನ್ನು ಈಡೇರಿಸಿಲ್ಲ. ಬದಲಾಗಿ ’ಶ್ರೇಣಿಯೂ ಇಲ್ಲ, ಪಿಂಚಣಿಯೂ ಇಲ್ಲ’ (No Rank, No Pension) ಎಂದು ಇದೀಗ ಅಣಕವಾಡಿದ್ದಾರೆ. ಗಾಯದ ಮೇಲೆ ಬರೆ ಎಳೆದಿದ್ದಾರೆ.

‘ಅಗ್ನಿಪಥ’ಡಿಯ ನೇಮಕಾತಿಯಲ್ಲಿ ರಾಜ್ಯವಾರು ಕೋಟಾಗಳನ್ನು ಕೈಬಿಡಲಾಗಿದೆ. ಎಲ್ಲ ರಾಜ್ಯಗಳಿಗೂ ಅವುಗಳಲ್ಲಿನ ಉದ್ಯೋಗಾರ್ಹ ಗಂಡಸರ ಸಂಖ್ಯೆಗೆ ಅನುಗುಣವಾಗಿ ಈ ಕೋಟಾವನ್ನು ನಿಗದಿ ಮಾಡಲಾಗಿತ್ತು. ೧೯೯೬ರಿಂದ ಜಾರಿಯಲ್ಲಿದ್ದ ಈ ಕ್ರಮಕ್ಕೆ ಎಳ್ಳುನೀರು ಬಿಡಲಾಗಿದೆ. ಹೀಗಾಗಿ ಸೇನೆಯಲ್ಲಿ ಕೆಲವು ರಾಜ್ಯಗಳಿಗೆ ಹೆಚ್ಚು ಪ್ರಾತಿನಿಧ್ಯ ಸಿಗಬಹುದು, ಕೆಲವಕ್ಕೆ ಪ್ರಾತಿನಿಧ್ಯವೇ ಸಿಗದೆ ಹೋಗಬಹುದು. ಹೀಗಾಗಿ ರಾಜ್ಯವಾರು- ಭಾಷಾವಾರು ಅಸಮತೋಲನದ ಪರಿಸ್ಥಿತಿ ಉಂಟಾಗಿ ಒಕ್ಕೂಟ ವ್ಯವಸ್ಥೆಯು ಸವಾಲುಗಳನ್ನು ಎದುರಿಸಬೇಕಾದೀತು ಎಂಬುದು ತಜ್ಞರ ಎಚ್ಚರಿಕೆ.

ಇತ್ತೀಚೆಗೆ ಹೊರಬಿದ್ದ ನಿರುದ್ಯೋಗದ ಅಂಕಿಅಂಶಗಳ ಪ್ರಕಾರ ೪೫ ಕೋಟಿ ಮಂದಿ ದೇಶವಾಸಿಗಳು ಉದ್ಯೋಗದ ಆಸೆಯನ್ನು ತೊರೆದು, ಅದಕ್ಕಾಗಿ ಪ್ರಯತ್ನವನ್ನೇ ನಡೆಸದೆ ಕೈಚೆಲ್ಲಿ ಕುಳಿತಿದ್ದಾರಂತೆ. ನಾಲ್ಕೇ ವರ್ಷಗಳ ಉದ್ಯೋಗ ಮಾಡಿ ನಿವೃತ್ತರಾಗುವ ಅತೃಪ್ತ ಅಗ್ನಿವೀರರು ಈ ಕೋಟಿ ಕೋಟಿ ನಿರುದ್ಯೋಗಿಗಳ ಸಾಲನ್ನು ಕಾಲಕಾಲಕ್ಕೆ ಸೇರಿಕೊಳ್ಳುತ್ತಾರೆ. ಪ್ರಭುತ್ವವು ಹಾದಿಬೀದಿಗಳಲ್ಲಿ ಹಿಂಸಾಚಾರಕ್ಕೆ ಇಳಿಯುವ, ದೊಂಬಿ ಹತ್ಯೆಗಳ ನಡೆಸುವ ಅಧಿಕಾರವನ್ನು ಅನಧಿಕೃತವಾಗಿ ಬಹುಸಂಖ್ಯಾತ ಗುಂಪುಗಳ ಕೈಗೆ ಒಪ್ಪಿಸಿ ಕುಳಿತಿದೆ. ಹೀಗಿರುವಾಗ ಹತಾಶೆ ನಿರಾಶೆಗಳು ಬೆರೆತು ಕುದಿದು ಆಸ್ಫೋಟಕ ಪರಿಸ್ಥಿತಿ ಉಂಟಾಗಲಾರದೇ ಎಂಬ ಆತಂಕವನ್ನು ತಳ್ಳಿ ಹಾಕಲು ಬರುವುದಿಲ್ಲ.

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

4 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

4 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

5 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

5 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

5 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

5 hours ago