ಎನ್‌ಟಿಎಂಎಸ್‌ ವಿವಾದ; ಶಾಲೆಯ ಶೋ ಮುಗಿಯದಿರಲಿ

-ನಾ.ದಿವಾಕರ

ಕಾಕತಾಳೀಯವೋ ಏನೋ ‘ಆಂದೊಲನ’ ದಿನಪತ್ರಿಕೆಯ ಸೆ.22ರ ಸಂಚಿಕೆಯ ಮುಖಪುಟದಲ್ಲಿ ಎರಡು ಮುಖ್ಯ ಸುದ್ದಿಗಳಿದ್ದವು. ಶೋ ಮುಗಿಸಿದ ಸರಸ್ವತಿ ಮತ್ತು ಎನ್‌ಟಿಎಂಎಸ್ ಮಕ್ಕಳ ಅರ್ಜಿ ವಜ. ಮೊದಲನೆಯದು ಒಂದು ಮನರಂಜನೆಯ ಕೇಂದ್ರ ಶಾಶ್ವತವಾಗಿ ಇಲ್ಲವಾಗುತ್ತಿರುವ ಸುದ್ದಿ, ಮತ್ತೊಂದು ಬೌದ್ಧಿಕ ಕೇಂದ್ರವೂ ನಾಶವಾಗುವುದರ ಸೂಚನೆ.

ಶಾಲೆಯ ಅಳಿವಿಗಾಗಿ ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ವಿವೇಕಾನಂದರ ಅನುಯಾಯಿಗಳು, ಹೆಣ್ಣು ಮಕ್ಕಳ ಈ ಶಾಲೆಯ ಉಳಿವಿಗಾಗಿ ಶತಪ್ರಯತ್ನ ಮಾಡುತ್ತಿರುವ ಜನಸಾಮಾನ್ಯರ ಮುಂದೆ ದಿಗ್ವಿಜಯದ ನಗೆ ಬೀರಲು, ರಾಜ್ಯ ಉಚ್ಚ ನ್ಯಾಯಾಲಯ ಏಕಸದಸ್ಯ ಪೀಠದ ಆದೇಶ ನೆರವಾಗಿದೆ. ನ್ಯಾಯಾಲಯದ ಮುಂದೆ ಇದ್ದುದು, ಸರ್ಕಾರದಿಂದ ರಾಮಕೃಷ್ಣ ಮಠಕ್ಕೆ ಹಸ್ತಾಂತರವಾದ ಭೂಮಿಯ ಪ್ರಶ್ನೆ ಅಷ್ಟೇ. ಈ ಭೂಮಿ ಅಥವಾ ಅಲ್ಲಿರುವಂತಹ ಶತಮಾನದ ಶಾಲೆಯ ಉಳಿವು ಸರ್ಕಾರದ ವಿವೇಚನೆಗೆ (ಇದ್ದರೆ) ಬಿಟ್ಟ ಪ್ರಶ್ನೆ. ಭೂಮಿಗಾಗಿ ಹಪಹಪಿಸುವವರ ವಿವೇಕಕ್ಕೆ ಬಿಟ್ಟ ವಿಚಾರ.

ಶತಮಾನದ ಶಾಲೆಯ ಉಳಿವಿಗಾಗಿ ಹೋರಾಡುತ್ತಿರುವ ಸಮಾಜಕ್ಕೆ ನ್ಯಾಯಾಲಯದ ಮತ್ತೊಂದು ಮೆಟ್ಟಿಲು ತೆರೆದೇ ಇದೆ. ಅಲ್ಲಿಯಾದರೂ ನ್ಯಾಯ ದೊರೆಯುವುದೇ? ಇದು ಯಕ್ಷ ಪ್ರಶ್ನೆ. ಏಕೆಂದರೆ ನ್ಯಾಯಾಲಯ ಸಾಕ್ಷಿ ಪುರಾವೆಗಳನ್ನು ಗಮನಿಸುತ್ತದೆ. ಭಾವನೆ, ಚಾರಿತ್ರಿಕ ಸೂಕ್ಷ್ಮತೆ ಮತ್ತು ಸಮಾಜದ ಸಂವೇದನೆಯನ್ನಲ್ಲ. ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದೀಯ ಚೌಕಟ್ಟಿನಲ್ಲಿ ಚುನಾಯಿತ ಸರ್ಕಾರವೊಂದು ಕೈಗೊಳ್ಳುವ ನಿರ್ಧಾರಗಳೆಲ್ಲವೂ ಜನತೆಯ ಆಶಯಗಳು ಮತ್ತು ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡೇ ಹೊರಬಂದಿರುತ್ತವೆ ಎನ್ನುವ ಪರಿಕಲ್ಪನೆಯ ಭೂಮಿಯ ವ್ಯಾಜ್ಯಗಳು ನಿಷ್ಕರ್ಷೆಗೊಳಗಾಗುತ್ತವೆ. ಎನ್‌ಟಿಎಂಎಸ್ ಶಾಲೆಯ ಆವರಣ ಈಗ ಕೇವಲ ಒಂದು ಭೂಮಿಯ ಪ್ರಶ್ನೆಯಾಗಿ ನ್ಯಾಯಾಲಯದ ಮುಂದಿದೆ. ಅಲ್ಲಿ ನಿಂತಿರುವ ಒಂದು ಚಾರಿತ್ರಿಕ-ಶೈಕ್ಷಣಿಕ ಸ್ಥಾವರ ನಿಮಿತ್ತ ಮಾತ್ರ. ಈ ಭೂಮಿಯನ್ನು ಪರಭಾರೆ ಮಾಡುವ ಸಾಂವಿಧಾನಿಕ ಹಕ್ಕು ಚುನಾಯಿತ ಸರ್ಕಾರಕ್ಕೆ ಇರುತ್ತದೆ, ಈ ಹಕ್ಕನ್ನು ವಿವೇಕಯುತವಾಗಿ ಬಳಸಿಕೊಳ್ಳದೆ ಇದ್ದರೆ ಅದು ನ್ಯಾಯಾಲಯದ ಹೊಣೆ ಆಗಲಾರದು. ಹಾಗಾಗಿ ಇಲ್ಲಿ ನ್ಯಾಯಾಲಯದ ಆವರಣದಿಂದ ಹೊರಬಂದು ಕೆಲವು ವಿಚಾರಗಳನ್ನು ಮಾತನಾಡಬಹುದು.

140 ವರ್ಷಗಳಿಂದ ಮೈಸೂರಿನ ಬಡ ಜನತೆಗೆ ಆಸರೆಯಾಗಿ, ಸಮಾಜದ ಶೋಷಿತ ವರ್ಗಗಳ ಜ್ಞಾನಾರ್ಜನೆಗೆ ನೆರವಾಗುತ್ತಾ, ಶಾಲೆಯ ಮೆಟ್ಟಿಲು ಕಾಣಲಾಗದ ಮಕ್ಕಳಿಗೆ ಅಕ್ಷರ eನವನ್ನು ನೀಡಲು ಏಳುತ್ತಾ, ಬೀಳುತ್ತಾ ಬಂದಿರುವ ಒಂದು ಜ್ಞಾನದೇಗುಲದ ಸಮಾಯ ನಿರ್ಮಾಣಕ್ಕೆ ರಾಮಕೃಷ್ಣ ಮಠ ಗುತ್ತಿಗೆ ಪಡೆದಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಎನ್ನುವುದೇ ಮರೀಚಿಕೆಯಾಗಿದ್ದಂತಹ ಚಾರಿತ್ರಿಕ ಘಟ್ಟದಲ್ಲಿ ಪ್ರತ್ಯೇಕವಾಗಿ ಹೆಣ್ಣುಮಕ್ಕಳ ಶಾಲೆಯನ್ನು ತೆರೆದ ಮಹಾರಾಣಿಯವರ ಉದಾತ್ತ ಚಿಂತನೆಗೆ, ಹೆಣ್ಣುಮಕ್ಕಳನ್ನು ಓದಿಸಿ ಹೆಣ್ಣುಮಕ್ಕಳನ್ನು ಪೋಷಿಸಿ ಘೋಷಣೆಯೊಂದಿಗೆ ಡಿಜಿಟಲೀಕರಣ ಯುಗದಲ್ಲಿರುವ ಆತ್ಮನಿರ್ಭರ ಭಾರತದ ಆಡಳಿತ ವ್ಯವಸ್ಥೆ ಶಾಶ್ವತ ಸಮಾಯನ್ನು ನಿರ್ಮಿಸುತ್ತಿದೆ. ಈ ಸಮಾಯ ಮೇಲೆ ಶಿಕ್ಷಣವೊಂದೇ ಸಮಾಜದ ಉನ್ನತಿಗೆ ಮಾರ್ಗ ಎಂದು ಘಂಟಾಘೋಷವಾಗಿ ಸಾರಿ ಹೇಳಿದ ಜಂಗಮ ಸನ್ಯಾಸಿ ವಿವೇಕಾನಂದರ ಸ್ಮಾರಕ ನಿರ್ಮಾಣವಾಗಲಿದೆ.

ಇಲ್ಲಿ ಸರಸ್ವತಿ ಶೋ ಮುಗಿಸುತ್ತಿದ್ದಾಳೆ. ವಿವೇಕ ಸ್ಮಾರಕ ವಿಜೃಂಭಿಸುತ್ತಿದೆ. ಒಂದು ಪ್ರಬುದ್ಧ ಸಮಾಜವಾಗಿ ನಮ್ಮ ಆಲೋಚನೆ ಯಾವ ದಿಕ್ಕಿನಲ್ಲಿರಬೇಕು? ಮಕ್ಕಳ ಅರ್ಜಿ ನ್ಯಾಯಾಲಯದಲ್ಲಿ ತಿರಸ್ಕೃತವಾಗಿದೆ. ಆದರೆ ನಮ್ಮ ಪ್ರeವಲಯದಲ್ಲಿ ಒಂದು ಬೌದ್ಧಿಕ ನ್ಯಾಯಾಲಯ ಇರಬೇಕಲ್ಲವೇ? ನ್ಯಾಯ ನಿಷ್ಕರ್ಷೆಯ ಈ ಅಂಗಳದಲ್ಲಿ ನಮ್ಮ ಸಾಮಾಜಿಕ ಬದ್ಧತೆ ಮತ್ತು ಚಾರಿತ್ರಿಕ ಪ್ರe ಜಗೃತವಾಗಿರಬೇಕಲ್ಲವೇ ? ಸರಸ್ವತಿ ಶೋ ಮುಗಿಸುತ್ತಿರುವ ಈ ವಿಷಮ ಸನ್ನಿವೇಶದಲ್ಲೂ ಕನ್ನಡದ ಕೆಲವು ಸರಸ್ವತಿ ಪುತ್ರರು ಶಾಲೆಯ ಸಮಾಗೆ ಕರಸೇವಕರಾಗುತ್ತಿರುವುದು ದುರಂತ ಅಲ್ಲವೇ? ಈ ಶಾಲೆ ಯಾರಿಗಾಗಿ ಉಳಿಯಬೇಕು? ಇದರ ಫಲಾನುಭವಿಗಳು ಯಾರು? ಮೌಢ್ಯ ಹರಡುವ ಮೂಲಕ ಸಮಾಜದ ಬೌದ್ಧಿಕ ಸ್ವಾಸ್ಥ್ಯವನ್ನೇ ಹಾಳುಗೆಡವುವ ಧಾರ್ಮಿಕ ಕೇಂದ್ರಗಳನ್ನು ರಕ್ಷಿಸಲು, ನ್ಯಾಯಾಲಯದ ಆದೇಶವನ್ನೂ ಧಿಕ್ಕರಿಸಿ ವಿಧೇಯಕವನ್ನು ಹೊರಡಿಸುವ ಒಂದು ಚುನಾಯಿತ ಸರ್ಕಾರಕ್ಕೆ, ಒಂದು ಶಾಲೆಯ ಉಳಿವಿಗಾಗಿ ಸ್ವಂತ ನಿರ್ಧಾರ ಕೈಗೊಳ್ಳುವುದು ಅಸಾಧ್ಯವೇ ?

ಇಲ್ಲಿ ಆದ್ಯತೆಯ ಪ್ರಶ್ನೆ ಬರುತ್ತದೆ. ಚುನಾಯಿತ ಸರ್ಕಾರಗಳ ಆದ್ಯತೆ ಏನಾಗಿರಬೇಕು? ಎನ್‌ಟಿಎಂಎಸ್ ಶಾಲೆಯ ಅಳಿವು ಉಳಿವಿನ ಚೆಂಡು ಸರ್ಕಾರದ ಅಂಗಳದಲ್ಲಿದೆ. ರಾಮಕೃಷ್ಣ ಮಠಕ್ಕೆ ಆ ಭೂಮಿ ಮುಖ್ಯ. ಪ್ರವಾಸೋದ್ಯಮ ನಗರದ ಕೇಂದ್ರ ಭಾಗದಲ್ಲಿರುವ ಮೂಲೆ ನಿವೇಶನ(ಕಾರ್ನರ್ ಸೈಟ)ಕ್ಕೆ ಬೌದ್ಧಿಕ ಮೌಲ್ಯಕ್ಕಿಂತಲೂ ಹೆಚ್ಚು ಮಾರುಕಟ್ಟೆ ಮೌಲ್ಯ ಇದೆ. ಮಾರುಕಟ್ಟೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮುಂದೆ ವಿವೇಕಾನಂದರೂ ಗೌಣ ಎನಿಸಿಬಿಡುತ್ತಾರೆ. ಅವರ ಹೆಸರಿನಲ್ಲಿ ನಿರ್ಮಾಣವಾಗುವ ಒಂದು ಸ್ಮಾರಕ ಕೇಂದ್ರದಲ್ಲಿ ಜ್ಞಾನ ವಿಸ್ತರಣೆಗಿಂತಲೂ ಹೆಚ್ಚಾಗಿ ಆಧುನಿಕ ಅಧ್ಯಾತ್ಮ ಮಾರುಕಟ್ಟೆಯ ಪರಿಕರಗಳ ಮರುಉತ್ಪಾದನೆ ಮತ್ತು ವಿತರಣೆ ಮುಖ್ಯವಾಗುತ್ತದೆ.

ಈ ಸಂತನ ಸ್ಮಾರಕ ನಿರ್ಮಿಸಲು, ಬೌದ್ಧಿಕ ಶಕ್ತಿಕೇಂದ್ರವೊಂದನ್ನು ಕೆಡವಿ, ಸಮಾ ಕಟ್ಟುವುದು ಮನುಷ್ಯ ವಿವೇಚನೆಯ ವ್ಯಾಪ್ತಿಯಿಂದ ಹೊರತಾದ ಆಲೋಚನೆಯೇ ಆಗಿರಬೇಕು. ತಾವು ತಂಗಿದ್ದ ಅಥವಾ ಕಾಲಿಟ್ಟ ಕಡೆಯೆ ತಮ್ಮ ಹೆಸರಿನ ಸ್ಮಾರಕ/ಸ್ಥಾವರ ನಿರ್ಮಾಣವಾಗುವ ಭಾರತ ವಿವೇಕಾನಂದರ ಕನಸಿನ ಭಾರತವಾಗಿರಲಿಲ್ಲ. ಅವರ ಕನಸಿನ ಭಾರತ ಈ ಸ್ಥಾವರಗಳನ್ನು ಮೀರಿದ ಒಂದು ಬೌದ್ಧಿಕ ಭಂಡಾರವಾಗಬೇಕಲ್ಲವೇ?

ಶತಮಾನದ ಶಾಲೆಯೊಂದರಲ್ಲಿ ಸರಸ್ವತಿ ಶೋ ಮುಗಿಸುವುದನ್ನು ಸಂಭ್ರಮಿಸುವ ಸಾಹಿತ್ಯವಲಯ ಈ ಕುರಿತು ಯೋಚಿಸಬೇಕು. ರಾಜಕೀಯ ವಲಯದಿಂದ ಹೆಚ್ಚಿನದನ್ನೇನೂ ನಿರೀಕ್ಷಿಸಲಾಗದು. ಜತಿ ಸಮೀಕರಣದ ಮೂಲಕ ತಮ್ಮ ನಿವೇಶನವನ್ನು ಸಂರಕ್ಷಿಸಲು ಸೆಣಸುತ್ತಿರುವ ಯಾವುದೇ ಸಂಘಟನೆಗಳು ಈ ಸೂಕ್ಷ್ಮ ಸಂವೇದನೆ ಹೊಂದಿರುತ್ತವೆ ಎಂದು ನಿರೀಕ್ಷಿಸಲಾಗುವುದಿಲ್ಲ. ಆದರೆ ಸಾರ್ವಜನಿಕ ವಲಯದಲ್ಲಿನ ಸೂಕ್ಷ್ಮ ಮನಸುಗಳು ಇಲ್ಲಿ ಸ್ಪಂದಿಸುತ್ತಿವೆ ಎನ್ನುವುದಕ್ಕೆ ಕಳೆದ ಎಂಬತ್ತು ದಿನಗಳ ಹೋರಾಟವೇ ಸಾಕ್ಷಿ. ವಿಲೀನ ಎನ್ನುವ ಪ್ರಕ್ರಿಯೆಯಲ್ಲಿ ಒಂದರ ಅವಸಾನವೂ ಅಡಗಿರುತ್ತದೆ ಎಂಬ ವಿವೇಕವೂ ನಮಗಿರಬೇಕು. ಈ ಶಾಲೆಯನ್ನು ಮತ್ತೊಂದರಲ್ಲಿ ವಿಲೀನಗೊಳಿಸುವ ‘ಔದಾರ್ಯ’ ತೋರುವವರಿಗೂ ವಿವೇಚನೆ ಇರಬೇಕು. ತಮ್ಮ ಅಧ್ಯಾತ್ಮ ಮಾರುಕಟ್ಟೆಯ ವಿಸ್ತರಣೆಯಿಂದಾಚೆಗೆ ಯೋಚಿಸದ ರಾಮಕೃಷ್ಣ ಮಠದಿಂದ ಇದನ್ನು ನಿರೀಕ್ಷಿಸುವುದು ಅತಾರ್ಕಿಕ.

ಒಬ್ಬ ವ್ಯಕ್ತಿಯ ಸಾವನ್ನು ಸಂಭ್ರಮಿಸಿ ಪಟಾಕಿ ಸಿಡಿಸುವ ಸಮಾಜದಲ್ಲಿ ಶಾಲೆಯ ಅವಸಾನವನ್ನು ಸಂಭ್ರಮಿಸಿ ಪಟಾಕಿ ಸಿಡಿಸುವುದು ಅಚ್ಚರಿ ಮೂಡಿಸುವ ಅಂಶವೇನಲ್ಲ. ರಾಮಕೃಷ್ಣ ಮಠದ ಪದಾಕಾರಿಗಳು ಮತ್ತು ವಿವೇಕಾನಂದರ ಅನುಯಾಯಿಗಳು ಶೋ ಮುಗಿಸಿದ ಸರಸ್ವತಿಯ ಬಗ್ಗೆ ಕೆಲ ಕ್ಷಣಗಳಾದರೂ ಯೋಚಿಸಲಿ. ಶಾಲೆಯ ಪ್ರದೇಶದ ಹಸ್ತಾಂತರ ಕುರಿತ ತನ್ನ ಆದೇಶವನ್ನು ಪಾಲಿಸಲು ಸರ್ಕಾರಕ್ಕೆ ಯಾವ ತೊಡಕೂ ಇಲ್ಲ ಎಂದು ದಿಗ್ವಿಜಯದ ನಗೆ ಬೀರಿರುವ ರಾಮಕೃಷ್ಣ ಮಠದ ಸ್ವಾಮಿ ಮುಕ್ತಿದಾನಂದರ ಆಶಯವನ್ನು ಈಡೇರಿಸಲು ತುದಿಗಾಲಲ್ಲಿ ನಿಂತಿರುವ ಆಡಳಿತ ವ್ಯವಸ್ಥೆಗೆ ವಿವೇಕಾನಂದರ ‘ವಿವೇಕಪ್ರಜ್ಞೆ’ಯೇ ಕಣ್ತೆರಸಲಿ. ಇಲ್ಲವಾದರೆ ಹೋರಾಟವೊಂದೇ ಪ್ರತ್ಯುತ್ತರವಾದೀತು.

 

× Chat with us