ಗಾಜಾ ಪಟ್ಟಿ ಪ್ರದೇಶದ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಲಾರಂಭಿಸಿ ಒಂದು ತಿಂಗಳು ಮುಗಿದಿದೆ. ಅರಬ್ ದೇಶಗಳಿಂದ ಮತ್ತು ವಿಶ್ವಸಂಸ್ಥೆಯಿಂದ ಎಷ್ಟೇ ಒತ್ತಡ ಬಂದರೂ ಯುದ್ಧವಿರಾಮಕ್ಕೆ ಇಸ್ರೇಲ್, ಅಂತೆಯೇ ಅದರ ಬೆಂಬಲಿತ ದೇಶಗಳು ಒಪ್ಪಿಲ್ಲ. ಯುದ್ಧವಿರಾಮ ಘೋಷಿತವಾದರೆ ಹಮಾಸ್ ಉಗ್ರರು ಪುನರ್ ಸಂಘಟಿತವಾಗಲು ಅವಕಾಶ ನೀಡಿದಂತಾಗುತ್ತದೆ ಎನ್ನುವುದು ಇಸ್ರೇಲ್ ಮತ್ತು ಅಮೆರಿಕದ ವಾದ. ಗಾಜಾ ಉತ್ತರ ಭಾಗದಲ್ಲಿರುವ ಜನರು ದಕ್ಷಿಣಕ್ಕೆ ಹೋಗಲು ಮತ್ತು ಪರಿಹಾರ ಕಾರ್ಯ ಸುಗಮಗೊಳಿಸುವ ದೃಷ್ಟಿಯಿಂದ ಯುದ್ಧಕ್ಕೆ ನಾಲ್ಕು ಗಂಟೆಗಳ ಬಿಡುವು ಕೊಡುವ ಅಮೆರಿಕದ ಸಲಹೆಯನ್ನು ಕೊನೆಗೂ ಇಸ್ರೇಲ್ ಒಪ್ಪಿದೆ.
ಗುರುವಾರ ಕೆಲವು ಗಂಟೆಗಳ ಕಾಲ ಅಂಥ ಬಿಡುವನ್ನು ಘೋಷಿಸಲಾಗಿತ್ತು. ಸಹಸ್ರಾರು ಜನರು ದಕ್ಷಿಣ ಗಾಜಾಕ್ಕೆ ವಲಸೆಹೋಗಿದ್ದಾರೆ. ಇದೀಗ ಕೆಲವು ದಿನಗಳ ಕಾಲ ನಾಲ್ಕು ಗಂಟೆಗಳ ಯುದ್ಧ ನಿಲುಗಡೆಯನ್ನು ಜಾರಿ ಮಾಡಲಾಗುತ್ತದೆ. ಈ ಬಿಡುವಿನ ಅವಧಿಯಲ್ಲಿ ಎಷ್ಟು ಜನ ದಕ್ಷಿಣದತ್ತ ವಲಸೆ ಹೋಗುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಈಗ ಲಭ್ಯವಿರುವ ಮಾಹಿತಿಯಂತೆ ಉತ್ತರ ಗಾಜಾದಲ್ಲಿ ಇನ್ನು ಕನಿಷ್ಠ 8 ಲಕ್ಷ ಜನರು ಇದ್ದಾರೆ. ಸುಮಾರು ಒಂದೂವರೆ ಲಕ್ಷ ಜನರು ಈಗಾಗಲೇ ಉತ್ತರ ಗಾಜಾ ತೆರವು ಮಾಡಿದ್ದಾರೆ. ಉಳಿದವರಾರೂ ತಾವಿರುವ ಜಾಗ ತೆರವಿಗೆ ಸಿದ್ಧವಿಲ್ಲ. ಸತ್ತರೂ ಸರಿ ಅಲ್ಲಿಯೇ ಇರುತ್ತೇವೆ ಎನ್ನುತ್ತಿದ್ದಾರೆ ಆ ಜನರು. ಇಸ್ರೇಲ್ ಸೇನಾ ಕಾರ್ಯಾಚರಣೆಗೆ ದೊಡ್ಡ ಸಮಸ್ಯೆ ಎದುರಾಗಿರುವುದು ಇಲ್ಲಿಯೇ.
ಅಲ್ಲಿಂದ ಜನರನ್ನು ಖಾಲಿ ಮಾಡಿಸದಿದ್ದರೆ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗಲಿದೆ. ಆದರೆ ಹೆಚ್ಚು ಸಾವು ನೋವು ಸಂಭವಿಸದಂತೆ ಯುದ್ಧ ಮುಂದುವರಿಸಬೇಕಾದ ಅಂತಾರಾಷ್ಟ್ರೀಯ ಒತ್ತಡದ ಮಧ್ಯೆ ಇಸ್ರೇಲ್ ಸೇನೆ ಕೆಲಸ ಮಾಡಬೇಕಿದೆ. ಹಮಾಸ್ ಉಗ್ರಗಾಮಿಗಳು ಸಾಮಾನ್ಯ ಜನರು ವಾಸಿಸುವ ವಸತಿಸಂಕೀರ್ಣಗಳ ಕೆಳಗಡೆ ಸುರಂಗಗಳನ್ನು ನಿರ್ಮಿಸಿ ಅಲ್ಲಿ ಅಡಗಿಕೊಂಡಿರುವುದರಿಂದ ತಾನು ಒತ್ತಡವನ್ನು ನಿರ್ಲಕ್ಷಿಸಿ ಬಾಂಬ್ ದಾಳಿ ನಡೆಸಬೇಕಾಗಿದೆ ಎನ್ನುವುದು ಇಸ್ರೇಲ್ ಸೇನೆಯ ವಾದ. ಹೀಗಾಗಿಯೇ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ.
ಇದುವರೆಗೆ ನಡೆದ ಸೇನಾ ದಾಳಿಯಲ್ಲಿ ಗಾಜಾದ ಜನರ ರಕ್ತ ಸಾಕಷ್ಟು ಹರಿದಿದೆ, ಇನ್ನೂ ಹರಿಯುತ್ತಿದೆ. ಆಸ್ಪತ್ರೆ, ನಿರಾಶ್ರಿತರ ಶಿಬಿರಗಳ ಮೇಲೂ ಇಸ್ರೇಲ್ ಸೇನೆ ದಾಳಿ ನಡೆಸುತ್ತಿದೆ. ಹಮಾಸ್ ಉಗ್ರವಾದಿಗಳು ಮಕ್ಕಳು, ನಿರಾಶ್ರಿತರು, ಗಾಯಗೊಂಡ ಜನರನ್ನು ಮುಂದಿಟ್ಟುಕೊಂಡು ರಕ್ಷಣೆ ಪಡೆಯುತ್ತಿರುವುದರಿಂದ ಅನಿವಾರ್ಯವಾಗಿ ದಾಳಿ ಮಾಡಬೇಕಾಗಿದೆ ಎಂದು ಇಸ್ರೇಲ್ ಸೇನೆ ಹೇಳುತ್ತಿದೆ. ಆದರೆ ಅಂಥ ದಾಳಿ ಅಮಾನವೀಯ ಅಷ್ಟೇ ಅಲ್ಲ ಯುದ್ಧಾಪರಾಧ ಎಂದು ವಿಶ್ವಸಂಸ್ಥೆ ಹೇಳುತ್ತಿದೆ. ಆದರೆ ಈ ಆಕ್ಷೇಪಗಳಿಗೆ ಗಮನ ಕೊಡದೆ ಇಸ್ರೇಲ್ ಸೇನೆ ಬಾಂಬ್ ದಾಳಿ ಮುಂದುವರಿಸಿದೆ.
ಹಾಗೆ ನೋಡಿದರೆ ಇದೊಂದು ಯುದ್ಧ ಅಲ್ಲ. ಏಕ ಮುಖ ದಾಳಿ, ಹಮಾಸ್ ಹೋರಾಟಗಾರರು ಯುದ್ಧಕ್ಕಿಳಿದಿಲ್ಲ. ಇಸ್ರೇಲ್ ಸೇನೆ ಅತಿಕ್ರಮಣಕ್ಕೆ ಪ್ರತಿರೋಧ ಒಡ್ಡುತ್ತಿದ್ದಾರೆ ಅಷ್ಟೆ. ಹೀಗಾಗಿ ಇಸ್ರೇಲ್ ತನ್ನಲ್ಲಿರುವ ಯುದ್ಧಾಸ್ತ್ರಗಳನ್ನು ಬಳಸಿ ಗಾಜಾವನ್ನು ಧ್ವಂಸ ಮಾಡುತ್ತಿದೆ. ಯುದ್ಧ ಬಹುಪಾಲು ಏಕಮುಖವಾಗಿರುವುದರಿಂದ ಮುಂದೊಂದು ದಿನ ಪ್ರತಿರೋಧ ನಿಲ್ಲುತ್ತದೆ. ಕೆಲವು ಹಮಾಸ್ ನಾಯಕರು ಮುಸ್ಲಿಂ ದೇಶಗಳಿಗೆ ಪಲಾಯನ ಮಾಡಬಹುದು. ಆಗ ಗಾಜಾದಲ್ಲಿ ಯುದ್ಧ ಅಂತ್ಯವಾಗಲಿದೆ.
ಅಂಥ ಸನ್ನಿವೇಶದಲ್ಲಿ ಗಾಜಾದ ಜವಾಬ್ದಾರಿ ಯಾರದ್ದಾಗಿರುತ್ತದೆ ಎಂಬ ಪ್ರಶ್ನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ಬಹು ಚರ್ಚೆಗೆ ಕಾರಣವಾಗಿದೆ. ಯುದ್ಧ ಅಂತ್ಯವಾದ ನಂತರ ಇಸ್ರೇಲ್ ಸೇನೆ ಅಲ್ಲಿಂದ ತೆರವು ಮಾಡುವ ನಿರೀಕ್ಷೆಯಲ್ಲಿ ಅಮೆರಿಕ ಇದೆ. ಹಾಗೇನಾದರೂ ಇಸ್ರೇಲ್ ಸೇನೆ ಅಲ್ಲಿಯೇ ಉಳಿದರೆ ಅದಕ್ಕಿಂತ ಕೆಟ್ಟ ಬೆಳವಣಿಗೆ ಬೇರೊಂದಿಲ್ಲ ಎಂದು ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್ ಹೇಳುತ್ತಾರೆ. ಯುದ್ಧದ ನಂತರ ಒಂದು ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಅಲ್ಲಿನ ಪ್ಯಾಲೆಸ್ಟೇನ್ ಜನರಿಗೆ ಅವಕಾಶ ನೀಡಬೇಕು ಎನ್ನುವುದು ಅಮೆರಿಕದ ಅಧ್ಯಕ್ಷ ಜೋ ಬಿಡನ್ ಅಭಿಪ್ರಾಯ. ಆದರೆ ಇಸ್ರೇಲ್ ಪ್ರಧಾನಿ ನೆತಾನ್ಯಹು ಲೆಕ್ಕಾಚಾರವೇ ಬೇರೆ ಇದೆ. ಕನಿಷ್ಠ ಗಾಜಾದ ರಕ್ಷಣೆ ಮತ್ತು ಸುರಕ್ಷತೆಯ ಜವಾಬ್ದಾರಿಯನ್ನು ಇಸ್ರೇಲ್ ಹೊರುತ್ತದೆ ಎಂದು ನೆತಾನ್ಯಹು ಹೇಳಿ ವಿವಾದ ಎಬ್ಬಿಸಿದ್ದಾರೆ. ಯುದ್ಧ ಮುಗಿದ ನಂತರವೂ ಇಸ್ರೇಲ್‌ಗೆ ಭದ್ರತೆ ಬೆದರಿಕೆ ಇರುತ್ತದೆ. ಮತ್ತೆ ಹಮಾಸ್ ಪುನರ್‌ಜನ್ಮ ಪಡೆಯಬಹುದಾದ ಸಾಧ್ಯತೆ ಅಥವಾ ಮತ್ತೊಂದು ಉಗ್ರಗಾಮಿ ಸಂಘಟನೆ ರೂಪುಗೊಳ್ಳುವ ಸಾಧ್ಯತೆ ಇರುವುದರಿಂದ ಗಾಜಾದ ಭದ್ರತೆಯ ಜವಾಬ್ದಾರಿಯನ್ನು ಇಸ್ರೇಲ್ ಹೊರಬೇಕಾಗಿರುವುದು ಅನಿವಾರ್ಯ ಎಂದು ನೆತಾನ್ಯಹು ವಾದ ಮಾಡುತ್ತಾರೆ. ಆದರೆ ಗಾಜಾ ಪ್ರದೇಶ ಇಸ್ರೇಲ್ ಉಸ್ತುವಾರಿಯಲ್ಲಿರುವುದನ್ನು ಅಮೆರಿಕದಂತೆಯೇ ಅರಬ್ ದೇಶಗಳೂ ವಿರೋಽಸುತ್ತವೆ. ಹಾಗಾದರೆ ಪರ್ಯಾಯ ಮಾರ್ಗ ಯಾವುದು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಗಾಜಾ ಮೇಲೆ ನಡೆಯುತ್ತಿರುವ ಇಸ್ರೇಲ್ ದಾಳಿಗೆ ಪ್ರತಿದಾಳಿ ನಡೆಸಲು ಯಾವುದೇ ಮುಸ್ಲಿಂ ದೇಶ ಮುಂದಾಗದೆ ಇದ್ದುದು ಗಮನಿಸಬೇಕಾದ ಅಂಶ. ಎಲ್ಲ ಅರಬ್ ದೇಶಗಳೂ ಯುದ್ಧವಿರಾಮಕ್ಕೆ ಒತ್ತಾಯ ಮಾಡುತ್ತಿವೆಯೇ ಹೊರತು ಯುದ್ಧಕ್ಕೆ ಇಳಿಯಲು ಸಿದ್ಧವಿಲ್ಲ. ಈ ಹಿಂದೆ ಇಸ್ರೇಲ್ ಮತ್ತು ಅರಬ್ ದೇಶಗಳ ನಡುವೆ ಮೂರು ಬಾರಿ ಯುದ್ಧ ನಡೆದಿದೆ. ಆ ಮೂರೂ ಯುದ್ಧಗಳಲ್ಲಿ ಅರಬ್ ದೇಶಗಳು ಸೋತಿವೆ. ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಜೊತೆ ಅರಬ್ ದೇಶಗಳು ಉತ್ತಮ ಬಾಂಧವ್ಯ ಹೊಂದಲು ಪ್ರಯತ್ನಿಸುತ್ತಿವೆ. ಈ ಹಿನ್ನೆಲೆ ಮತ್ತು ಈಗ ಅವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅರಬ್ ದೇಶಗಳು ಯುದ್ಧಕ್ಕೆ ಮುಂದಾಗದಿರಲು ಮುಖ್ಯ ಕಾರಣವಿರಬಹುದು. ಅಷ್ಟೇ ಅಲ್ಲ, ಪ್ಯಾಲೆಸ್ಟೇನ್ ಸಮಸ್ಯೆ ಗಾಜಾ ಯುದ್ಧಕ್ಕೆ ಸೀಮಿತವಾದುದಲ್ಲ. ಪ್ಯಾಲೆಸ್ಟೇನ್ ಪ್ರತ್ಯೇಕ ದೇಶವಾಗದ ಹೊರತು ಪರಿಸ್ಥಿತಿ ಬದಲಾಗುವುದಿಲ್ಲ. ಆದ್ದರಿಂದ ಪ್ಯಾಲೆಸ್ಟೇನ್ ಗೋಜಲಿನಲ್ಲಿ ಸಿಕ್ಕಿಕೊಳ್ಳಲು ಯಾವುದೇ ಅರಬ್ ದೇಶ ಸಿದ್ಧವಿಲ್ಲ.
ಅರಬ್ ದೇಶಗಳ ಯುದ್ಧದಿಂದಾಗಿ ನೂರಾರು ಜನ ಪ್ಯಾಲೆಸ್ಟೇನಿಯರು ಸಾಯುತ್ತಿದರೂ ಈಜಿಪ್ಟ್ ಗಡಿಯನ್ನು ಇತ್ತೀಚಿನವರೆಗೂ ತೆರೆಯಲಿಲ್ಲ. ಇದೀಗ ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಗಾಜಾದಲ್ಲಿ ಸಿಕ್ಕಿಕೊಂಡಿರುವ ವಿದೇಶಿಯರ ಪ್ರವೇಶಕ್ಕೆ ಮತ್ತು ಗಾಯಗೊಂಡಿರುವ ಪ್ಯಾಲೆಸ್ಟೇನಿಯರ ಚಿಕಿತ್ಸೆಗೆ ಅವಕಾಶ ಕಲ್ಪಿಸಿದೆ. ನಿರಾಶ್ರಿತ ಪ್ಯಾಲೆಸ್ಟೇನಿಯರಿಗೆ ಈಜಿಪ್ಟ್ ಆಗಲಿ ಅಥವಾ ಇನ್ನಿತರ ಅರಬ್ ದೇಶಗಳಾಗಲಿ ಇನ್ನೂ ಪ್ರವೇಶ ಕೊಟ್ಟಿಲ್ಲ. ಹಾಗೆಂದು ಗಾಜಾ ಸಮಸ್ಯೆಯನ್ನು ಅರಬ್ ದೇಶಗಳು ಗಂಭೀರವಾಗಿ ಭಾವಿಸಿಲ್ಲ ಎಂದಲ್ಲ. ಈ ವಿಚಾರದಲ್ಲಿ ಎಲ್ಲ ಮುಸ್ಲಿಂ ದೇಶಗಳೂ ಒಂದಾಗಿವೆ. ಯುದ್ಧ ಮುಂದುವರಿಯದೇ ಬೇರೆ ಮಾರ್ಗದಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವೇ ಎಂದು ಯೋಚಿಸುತ್ತಿವೆ. ಯುದ್ಧ ನಿಂತ ನಂತರ ಅರಬ್ ದೇಶಗಳು ಗಾಜಾ ಪಟ್ಟಿ ಪ್ರದೇಶದ ಉಸ್ತುವಾರಿ ಹೊರಲು ಸಾಧ್ಯವೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗಿದೆ. ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್ ಅವರು ನೆತಾನ್ಯಹು, ಈಜಿಪ್ಟ್, ಜೋರ್ಡಾನ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದಾರೆ. ಜೋರ್ಡಾನ್ ಮತ್ತು ಈಜಿಪ್ಟ್ ನಾಯಕರು ಆ ಜವಾಬ್ದಾರಿ ಹೊರಲು ಸಿದ್ಧವಿಲ್ಲ. ಇಸ್ಲಾಮಿಕ್ ದೇಶಗಳ ಸಂಘಟನೆ ಕೂಡ ಗಾಜಾ ಪಟ್ಟಿ ಉಸ್ತುವಾರಿ ವಹಿಸಿಕೊಳ್ಳಲು ಸಿದ್ಧವಿಲ್ಲ.
ಪಶ್ಚಿಮ ದಂಡೆ ಪ್ರದೇಶ ಇಸ್ರೇಲ್ ಆಕ್ರಮಿತ ಪ್ರದೇಶವಾದರೂ ಅಲ್ಲಿ ಪ್ಯಾಲೆಸ್ಟೇನ್ (ಫತಾ) ಆಡಳಿತವಿದೆ. ಮಹಮ್ಮದ್ ಅಬ್ಬಾಸ್ ಪ್ಯಾಲೆಸ್ಟೇನ್ ಲಿಬರೇಷನ್ ಆರ್ಗನೈಜೇಷನ್ (ಪಿಎಲ್‌ಓ) ನಾಯಕರು. ಕಳೆದ 16 ವರ್ಷಗಳಿಂದ ಪಶ್ಚಿಮ ದಂಡೆ ಉಸ್ತುವಾರಿ ಇವರದ್ದೇ ಆಗಿದೆ. ಗಾಜಾದ ಜವಾಬ್ದಾರಿಯನ್ನೂ ಪಿಎಲ್‌ಒಗೆ ಕೊಟ್ಟರೆ ಹೇಗೆ ಎನ್ನುವ ಮಾತೂ ಕೇಳಿಬಂದಿದೆ. ಆದರೆ ಗಾಜಾದಲ್ಲಿ ಪಿಎಲ್‌ಒ ಜನಮನ್ನಣೆ ಗಳಿಸಿಲ್ಲ. 2006 ರಲ್ಲಿ ನಡೆದ ಚುನಾವಣೆಯಲ್ಲಿ ಗಾಜಾ ಜನರು ಹಮಾಸ್‌ಗೆ ಬೆಂಬಲ ನೀಡಿದ್ದರು. ಆ ನಂತರ ಫತಾ ತನ್ನ ಚಟುವಟಿಕೆಯನ್ನು ಪಶ್ಚಿಮ ದಂಡೆ ಪ್ರದೇಶಕ್ಕೆ ಸೀಮಿತಗೊಳಿಸಿಕೊಂಡಿತ್ತು. ಗಾಜಾದಲ್ಲಿ ಫತಾ ಮತ್ತು ಹಮಾಸ್ ಕಾರ್ಯಕರ್ತರ ನಡುವೆ ದೊಡ್ಡ ಹೋರಾಟವೇ ನಡೆದಿದೆ. ಹಮಾಸ್ ಉಗ್ರರು ಫತಾದ 160ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದಾರೆ. ಇಂಥ ಕೆಟ್ಟ ನೆನಪುಗಳುಳ್ಳ ಗಾಜಾಕ್ಕೆ ಮತ್ತೆ ಫತಾ ಸಂಘಟನೆಯ ನಾಯಕರು ಬರುವರೇ ಎನ್ನುವ ಪ್ರಶ್ನೆಯೂ ಚರ್ಚೆಗೆ ಬಂದಿದೆ. ಎರಡೂ ಪ್ರದೇಶಗಳಲ್ಲಿ ಚುನಾವಣೆ ನಡೆದರೆ ಮತ್ತೆ ಜನರು ಹಮಾಸ್ ಸಂಘಟನೆಯನ್ನೇ ಆಯ್ಕೆಮಾಡಬಹುದಾದ ಸಾಧ್ಯತೆಗಳಿವೆ ಎಂದು ಗುಪ್ತಚರ ವರದಿಗಳು ಹೇಳುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಗಾಜಾ ಮತ್ತೆ ಇಸ್ರೇಲ್ ಆಡಳಿತಕ್ಕೆ ಒಳಗಾಗಬಹುದು. ಇಸ್ರೇಲ್‌ಗೆ ಬೇಕಿರುವುದು ಅದೇ. ಆದರೆ ಗಾಜಾವನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ.
ಹಮಾಸ್ ಇಸ್ರೇಲ್ ಪ್ರತಿರೋಧ ಸಂಘಟನೆಯಾಗಿ ಬೆಳೆದಿದೆ. ಆದರೆ ಹಮಾಸ್ ಎನ್ನುವುದು ಒಂದು ಆಲೋಚನೆ, ಪ್ಯಾಲೆಸ್ಟೆ ನ್ ಜನರ ಕನಸಿನ ಕೂಸು. ಸ್ವತಂತ್ರ ದೇಶದ ಕನಸು ನನಸಾಗದ ಹೊರತು ಆ ಆಲೋಚನೆ ಬೇರೆ ಬೇರೆ ಸ್ವರೂಪದಲ್ಲಿ ಕುಡಿಯೊಡೆಯಬಹುದು. ಪ್ಯಾಲೆಸ್ಟೆ ನ್ ಜನರನ್ನು ಸತತವಾಗಿ ಗುಲಾಮಗಿರಿಯಲ್ಲಿರಿಸಿಕೊಂಡು ಇಸ್ರೇಲ್ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಇಸ್ರೇಲ್‌ನ ಭವಿಷ್ಯದ ಜನಾಂಗ ನೆಮ್ಮದಿಯಿಂದ ಬದುಕಬೇಕಾದರೆ ನೆರೆಯ ಪ್ಯಾಲೆಸ್ಟೆ ನ್ ಜನರನ್ನೂ ನೆಮ್ಮದಿಯಿಂದ ಸ್ವತಂತ್ರ ನಾಡಿನಲ್ಲಿ ಬದುಕಲು ಬಿಡಬೇಕು.
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…
ಮಂಡ್ಯ: ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮ್ಮದ್ ಇಬ್ರಾಹಿಂ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾನೆ.…
ಕುಶಾಲನಗರ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಜಲ ಸಮಾಧಿಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದಲ್ಲಿ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಪಾರ್ಕ್ ಆದ ಕಬ್ಬನ್ ಪಾರ್ಕ್‌ನಲ್ಲಿ ಇನ್ನು ಮುಂದೆ ಯಾವುದೇ ಸಂಘಟನೆಗಳು ತಮ್ಮ ಚಟುವಟಿಕೆ…
13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನಲ್ಲಿ 1.10 ಕೋಟಿಗೆ ರಾಜಸ್ಥಾನ ತಂಡಕ್ಕೆ ಹರಾಜಾಗುವ ಮೂಲಕ ಕಿರಿಯ ವಯಸ್ಸಿಗೆ ಐಪಿಎಲ್‌ಗೆ…
ಕುವೈತ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕುವೈತ್ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಶೇಕ್ ಮಿಶಾಲ್…