ಅಂಕಣಗಳು

ಪ್ರತಿದಿನ ಸಾವಿರಾರು ಜನರ ಹಸಿವು ತಣಿಸುವ ‘ನೋ ಫುಡ್ ವೇಸ್ಟ್ ’

ಪಂಜು ಗಂಗೊಳ್ಳಿ 

ಸಮಾಜಕ್ಕೆ ಮಾದರಿಯಾದ ಇಂಜಿನಿಯರಿಂಗ್ ಪದವೀಧರರ ಸೇವಾಕಾರ್ಯ

ಭಾರತ ಹಲವು ವೈರುಧ್ಯಗಳ ತವರು ಮನೆ. ಆಹಾರ ಲಭ್ಯತೆ ಅಂತಹ ವೈರುಧ್ಯಗಳಲ್ಲೊಂದು. ಇಲ್ಲಿ ಒಂದೆಡೆ ಕೆಲವರಿಗೆ ಒಂದು ಹೊತ್ತಿನ ಊಟಕ್ಕೂ ಗತಿಯಿರುವುದಿಲ್ಲ. ಆದರೆ, ಇನ್ನೊಂದೆಡೆ ಹಲವರು ಉಂಡು ಮಿಕ್ಕಿದ ಆಹಾರವನ್ನು ಕಸದ ತೊಟ್ಟಿಗೆ ಹಾಕುತ್ತಾರೆ. ಉದಾಹರಣೆಗೆ, ಒಂದು ಮದುವೆ ಊಟದಲ್ಲಿ ಹತ್ತಾರು ಬಗೆಯ ಖಾದ್ಯಗಳಿರುತ್ತವೆ. ಮದುವೆಗೆ ಬಂದವರೆಲ್ಲರೂ ತಮಗೆ ಬಡಿಸಿದ ಎಲ್ಲವನ್ನೂ ತಿನ್ನುವುದಿಲ್ಲ. ಹಾಗಾಗಿ, ಸಾಕಷ್ಟು ಆಹಾರ ಪದಾರ್ಥಗಳು ಉಳಿದಿರುತ್ತವೆ. ಅವೆಲ್ಲವೂ ಕಸದ ಬುಟ್ಟಿಯ ಪಾಲಾಗುತ್ತವೆ. ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ ಪ್ರತಿ ವರ್ಷ ಭಾರತದ ಮನೆಗಳಿಂದ ೭೮ ಮಿಲಿಯನ್ ಟನ್‌ಗಳಷ್ಟು ಆಹಾರ ಪದಾರ್ಥಗಳು ಬಳಸಲ್ಪಡದೆ ವ್ಯರ್ಥವಾಗಿ ಕಸದ ತೊಟ್ಟಿಗೆ ಸೇರುತ್ತವೆ.

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆ ಎಂದು ಹೇಳಿಕೊಳ್ಳುವ ಈ ದೇಶದಲ್ಲಿ ಕೊಳೆಗೇರಿಗಳಲ್ಲಿರುವ ಆರು ವರ್ಷಕ್ಕೆ ಕೆಳಗಿನ ಮಕ್ಕಳಲ್ಲಿ ೫೦% ಮಕ್ಕಳು ಪೋಷಕಾಂಶದ ಕೊರತೆಯಿಂದ ಬಳಲುತ್ತವೆ ಎಂಬುದು ಆತಂಕದ ವಿಚಾರ. ೨೦೨೪ರ ‘ಜಾಗತಿಕ ಹಸಿವು ಸೂಚ್ಯಂಕ’ದಲ್ಲಿ ಭಾರತ ೧೨೭ ದೇಶಗಳಲ್ಲಿ ೧೦೫ನೇ ಸ್ಥಾನದಲ್ಲಿದೆ ಎಂದರೆ ನಮ್ಮಲ್ಲಿನ ಆಹಾರದ ಕೊರತೆಯನ್ನು ಅಂದಾಜಿಸಬಹುದು. ಇನ್ನೂ ಹಸಿವೆಯ ಬಾಯಿಂದ ಹೊರಬಾರದ ಒಂದು ಬಡ ದೇಶದಲ್ಲಿ ಅಗಾಧ ಪ್ರಮಾಣದಲ್ಲಿ ಆಹಾರ ಪದಾರ್ಥ ವ್ಯರ್ಥವಾಗುವುದು ಎಂತಹ ದುರಂತವೆಂಬುದು ಮೇಲು ನೋಟಕ್ಕೇ ಅರಿವಾಗುವ ಸಂಗತಿ. ಆಹಾರ ಪದಾರ್ಥ ಹೀಗೆ ವ್ಯರ್ಥವಾಗುವುದನ್ನು ತಡೆಗಟ್ಟಲು ಎಷ್ಟೋ ಜನ ಬಯಸಿದರೂ ಏನೂ ಮಾಡಲಾಗದೆ ಅಸಹಾಯಕತೆಯಿಂದ ಕೈ ಕೈ ಹಿಸುಕಿಕೊಳ್ಳುತ್ತಾರೆ. ಆದರೆ ಕೆಲವರು ಪಟ್ಟು ಹಿಡಿದು ಏನಾದರೊಂದು ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಕೊಯಂಬತ್ತೂರಿನ ಪದ್ಮನಾಭನ್ ಗೋಪಾಲನ್, ದಿನೇಶ್ ಮಾಣಿಕ್ಕಮ್ ಮತ್ತು ಸುಧಾಕರ್ ಮಾರಿಮುತ್ತು ಎಂಬ ಮೂವರು ಪ್ರೊಡಕ್ಷನ್ ಇಂಜಿನಿಯರಿಂಗ್ ಪದವೀಧರರು ಅಂತಹ ಮೂವರು.

೨೦೧೪ರ ಅಕ್ಟೋಬರ್ ತಿಂಗಳಲ್ಲಿ ಈ ಮೂವರು ಜೊತೆಯಾಗಿ ಕೊಯಂಬತ್ತೂರಿನಲ್ಲಿ ‘ನೋ ಫುಡ್ ವೇಸ್ಟ್’ ಎಂಬ ಒಂದು ಸಂಸ್ಥೆಯನ್ನು ಹುಟ್ಟು ಹಾಕಿದರು. ಹೆಸರೇ ಸೂಚಿಸುವಂತೆ ಇದು ಹೀಗೆ ವ್ಯರ್ಥವಾಗುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅದನ್ನು ಅಗತ್ಯವಿರುವವರಿಗೆ ನೀಡುತ್ತದೆ. ಪ್ರಾರಂಭದಲ್ಲಿ ಈ ಮೂವರು ಎರಡು ಶಾಪಿಂಗ್ ಬ್ಯಾಗ್ ಮತ್ತು ಒಬ್ಬ ಸ್ವಯಂ ಸೇವಕನನ್ನು ಜೊತೆಯಲ್ಲಿರಿಸಿಕೊಂಡು ಕೊಯಂಬತ್ತೂರಿನಲ್ಲಿ ಎಲ್ಲೆಲ್ಲಿ ಹೆಚ್ಚುವರಿ ಆಹಾರ ಉಳಿದಿದೆ ಎಂದು ಪತ್ತೆ ಹಚ್ಚಿ, ಅದನ್ನು ಸಂಗ್ರಹಿಸಿ, ಬಸ್ಸು, ಆಟೋಗಳಲ್ಲಿ ಸಂಚರಿಸಿ, ನಗರದ ರಸ್ತೆಗಳಲ್ಲಿ ವಾಸಿಸುವ ನಿರ್ಗತಿಕರಿಗೆ ನೀಡಿದರು. ಈಗ ‘ನೋ ಫುಡ್ ವೇಸ್ಟ್’ ಎಷ್ಟು ದೊಡ್ಡದಾಗಿ ಬೆಳೆದಿದೆಯೆಂದರೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೂ ಅದು ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ.

ಹೆಚ್ಚುವರಿ ಆಹಾರವನ್ನು ಸಂಗ್ರಹಿಸಿ, ವಿತರಿಸುವ ಕೆಲಸ ಮೇಲು ನೋಟಕ್ಕೆ ಕಾಣಿಸುವಷ್ಟು ಸುಲಭ ಹಾಗೂ ಸರಳವಾದುದಲ್ಲ. ಮೊದಲಿಗೆ ಎಲ್ಲೆಲ್ಲ ಹೆಚ್ಚುವರಿ ಆಹಾರ ಲಭ್ಯವಿದೆ ಎಂಬ ಮಾಹಿತಿಯನ್ನು ಪಡೆಯಬೇಕು. ನಂತರ, ತಕ್ಷಣವೇ ವಾಹನಗಳನ್ನು ಕಳುಹಿಸಿ ಸಂಗ್ರಹಿಸಿ ತರಬೇಕು. ತಂದ ನಂತರ ಅದನ್ನು ಪರೀಕ್ಷಿಸಿ ತಿನ್ನಲು ಯೋಗ್ಯವೇ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು. ಒಂದೊಂದು ಬಗೆಯ ಆಹಾರಕ್ಕೆ ಒಂದೊಂದು ರೀತಿಯ ‘ಶೆಲ್ಛ್ ಲೈಫ್’ ಇರುತ್ತದೆ. ಆದಷ್ಟು ಮಟ್ಟಿಗೆ ಆಹಾರ ಪದಾರ್ಥಕ್ಕೆ ಮಾನವ ಕೈಗಳು ತಾಕದಂತೆ ನೋಡಿಕೊಳ್ಳಬೇಕಾಗುತ್ತದೆ. ಏಕೆಂದರೆ, ತುಸುವೂ ಅಜಾಗರೂಕತೆಯಿಂದ ಹಳಸಿದ ಅಥವಾ ವಿಷವಾದ ಆಹಾರ ಪದಾರ್ಥ ಸೇವಿಸಿ ಯಾರಿಗಾದರೂ ಅಲರ್ಜಿಯಾದರೆ ಅಥವಾ ಯಾರಾದರೂ ಅಸ್ವಸ್ಥರಾದರೆ ಪೊಲೀಸ್ ಕೇಸುಗಳನ್ನು ಎದುರಿಸಬೇಕಾಗುತ್ತದೆ. ಸಂಗ್ರಹಿಸಿದ ಆಹಾರವನ್ನು ನಂತರ ಸೂಕ್ತವಾಗಿ ಪ್ಯಾಕ್ ಮಾಡಿ, ಎಲ್ಲೆಲ್ಲಿ ಆಹಾರದ ಅಗತ್ಯ ಇದೆಯೆಂಬುದನ್ನು ತಿಳಿದು ಆ ಜಾಗಗಳಿಗೆ ಕಳುಹಿಸಿಕೊಡಬೇಕು. ಇಷ್ಟೆಲ್ಲ ಮಾಡಲು ಒಂದು ಕಾಲ್ ಸೆಂಟರ್, ವಾಹನ ವ್ಯವಸ್ಥೆ, ಸ್ವಯಂಸೇವಕರ ಪಡೆ ಹಾಗೂ ಸಂಗ್ರಹಿಸಿ ತಂದ ಆಹಾರವನ್ನು ಇಡಲು ಸ್ವಚ್ಛ ಹಾಗೂ ಸುರಕ್ಷಿತವಾದ ಸ್ಥಳದ ವ್ಯವಸ್ಥೆ ಬೇಕಾಗುತ್ತದೆ. ನೋ ಫುಡ್ ವೇಸ್ಟ್ ಇವೆಲ್ಲವನ್ನು ಹೊಂದಿದೆ.

ತಮಿಳುನಾಡಿನ ಮಧುರೈ ‘ನೋ ಫುಡ್ ವೇಸ್ಟ್’ ಕಾರ್ಯ ನಿರ್ವಹಿಸುವ ಪ್ರಧಾನ ನಗರ. ಪ್ರತೀ ದಿನ ಐಟಿ ಕಂಪೆನಿ, ಐಐಟಿ ಮದ್ರಾಸ್, ಕಾರ್ಪೋರೇಟ್ ಕಾರ್ಯಕ್ರಮ, ಮದುವೆ ಹಾಗೂ ಮ್ಯಾರಥಾನ್ ಮೊದಲಾದೆಡೆಗಳಿಂದ ಬಳಸಿ ಉಳಿದ ಹೆಚ್ಚುವರಿ ಆಹಾರವನ್ನು ಸಂಗ್ರಹಿಸಿ, ಸಾವಿರದಿಂದ ಒಂದೂವರೆ ಸಾವಿರ ಜನರಿಗೆ ಒದಗಿಸುತ್ತದೆ. ಅಂದರೆ, ನೋ ಫುಡ್ ವೇಸ್ಟ್ ಒಂದು ತಿಂಗಳಿಗೆ ಸುಮಾರು ನಲವತ್ತು ಸಾವಿರ ಹಸಿದ ಹೊಟ್ಟೆಗಳನ್ನು ತಣಿಸುತ್ತದೆ. ಸ್ವಯಂಸೇವಕರು ‘ನೋ ಫುಡ್ ವೇಸ್ಟ್’ನ ಜೀವನಾಡಿಗಳು ‘ನೋ ಫುಡ್ ವೇಸ್ಟ್’ ಇಂತಹ ಮೂವತ್ತು ಪೂರ್ಣಾವಧಿ ಸ್ವಯಂಸೇವಕರನ್ನು ಹೊಂದಿರುವುದಲ್ಲದೆ, ಸರ್ಕಾರೇತರ ಸಂಸ್ಥೆ, ಶಾಲೆ, ಕಾಲೇಜುಗಳಿಂದ ಅರೆ ಸ್ವಯಂಸೇವಕರ ಸಹಾಯವನ್ನು ಪಡೆಯುತ್ತದೆ.

‘ನೋ ಫುಡ್ ವೇಸ್ಟ್’ ಹೀಗೆ ಹೆಚ್ಚುವರಿ ಆಹಾರ ಸಂಗ್ರಹಿಸಿ, ವಿತರಿಸುವುದಕ್ಕಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡಿಲ್ಲ. ಯಾವುದಾದರೂ ಆಕಸ್ಮಿಕ ಅಥವಾ ನೈಸರ್ಗಿಕ ಪ್ರಕೋಪಗಳು ತಲೆದೋರಿದ ಸಮಯದಲ್ಲೂ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಅಂತಹ ಸಮಯದಲ್ಲಿ ಕೇವಲ ಸಂಗ್ರಹಿಸಿದ ಆಹಾರ ಸಾಕಾಗುವುದಿಲ್ಲ. ಅಂತಹ ಉದ್ದೇಶಕ್ಕೆಂದೇ ‘ನೋ ಫುಡ್ ವೇಸ್ಟ್’ ಚೆನ್ನೆ ಯ ಪಳ್ಳಿಕರಾಣೈ ಎಂಬಲ್ಲಿ ತನ್ನದೇ ಆದ ಒಂದು ಅಡುಗೆ ಮನೆಯನ್ನೂ ಹೊಂದಿದೆ. ೨೦೨೧ರಂದು ನಿರ್ಮಿಸಲ್ಪಟ್ಟ ಈ ಅಡುಗೆ ಮನೆ ಈಗ ‘ನೋ ಫುಡ್ ವೇಸ್ಟ್’ನ ಆಹಾರ ವಿತರಣ ಕಾರ್ಯದಲ್ಲಿ ಪ್ರಧಾನ ಪಾತ್ರವನ್ನು ನಿಭಾಯಿಸುತ್ತಿದೆ. ಸಂಗ್ರಹಿಸಿದ ಆಹಾರ ಸಾಕಾಗದಿದ್ದಾಗ ಈ ಅಡುಗೆ ಮನೆಯಲ್ಲಿ ಹೆಚ್ಚುವರಿ ಆಹಾರವನ್ನು ತಯಾರಿಸಲಾಗುತ್ತದೆ. ಸ್ವಯಂಸೇವಕರು ಸಂಗ್ರಹಿಸಿದ ಆಹಾರದ ಜೊತೆ ಈ ಅಡುಗೆ ಮನೆಯಲ್ಲಿ ಪ್ರತಿದಿನ ಸುಮಾರು ೭೦೦-೮೦೦ ಪ್ಲೇಟ್‌ನಷ್ಟು ಆಹಾರವನ್ನು ತಯಾರಿಸುತ್ತಾರೆ. ಅದಕ್ಕೆ ಬೇಕಾಗುವ ದಿನಸಿ ವಸ್ತುಗಳನ್ನು ದಾನಿಗಳಿಂದ ಪಡೆಯುತ್ತದೆ. ಹೀಗೆ ದಾನಿಗಳಿಂದ ಬಂದ ದಿನಸಿ ಸಾಕಾಗದಿದ್ದರೆ ತನ್ನದೇ ಖರ್ಚಿನಲ್ಲಿ ಖರೀದಿಸಿ, ಆಹಾರ ವಿತರಣೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.

‘ನೋ ಫುಡ್ ವೇಸ್ಟ್’ ಹೆಚ್ಚುವರಿ ಆಹಾರದ ವಿತರಣೆಯ ಜೊತೆ ಶಾಲೆ, ಕಾಲೇಜುಗಳಿಗೆ ಹೋಗಿ ಆಹಾರ ವ್ಯರ್ಥಗೊಳಿಸುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತದೆ. ಸಾಧ್ಯವಾದಾಗಲೆಲ್ಲ ವಿದ್ಯಾರ್ಥಿಗಳನ್ನು ತನ್ನ ಆಹಾರ ವಿತರಣೆಯ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸುವಂತೆ ಮಾಡಿ, ಸಮಾಜದಲ್ಲಿ ಆಹಾರದ ತಾರತಮ್ಯದ ಬಗ್ಗೆ ಸೂಕ್ಷ ಗ್ರಾಹಿಗಳಾಗುವಂತೆ ಮಾಡುತ್ತದೆ. ಆಹಾರವನ್ನು ಪ್ಲಾಸ್ಟಿಕ್ ಪ್ಯಾಕುಗಳಲ್ಲಿ ಕೊಡದೆ, ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪ್ಯಾಕುಗಳಲ್ಲಿ ಹಂಚಿ, ಪ್ಲಾಸ್ಟಿಕ್‌ನ ಬಳಕೆಯ ಬಗ್ಗೆಯೂ ಜನರಲ್ಲಿ ಜಾಗೃತಿ ಹುಟ್ಟು ಹಾಕುವ ಕೆಲಸವನ್ನೂ ಮಾಡುತ್ತಿದೆ.

” ನೋ ಫುಡ್ ವೇಸ್ಟ್’  ಮೂವತ್ತು ಪೂರ್ಣಾವಧಿ ಸ್ವಯಂಸೇವಕರನ್ನು ಹೊಂದಿರುವುದಲ್ಲದೆ, ಸರ್ಕಾರೇತರ ಸಂಸ್ಥೆ, ಶಾಲೆ, ಕಾಲೇಜುಗಳಿಂದ ಅರೆ ಸ್ವಯಂಸೇವಕರ ಸಹಾಯವನ್ನು ಪಡೆಯುತ್ತದೆ.”

ಆಂದೋಲನ ಡೆಸ್ಕ್

Recent Posts

ಮನಸೆಳೆವ ಫಲ ಪುಷ್ಪ ಪ್ರದರ್ಶನ

ಪ್ರಕೃತಿಯೊಂದಿಗೆ ನಂಟನ್ನು ನೆನಪಿಸುವ ಒಂದು ಸುಂದರ ಪಯಣ. 15 ಎಕರೆ ವಿಸ್ತೀರ್ಣ, 70 ಸಸ್ಯಶಾಸ್ತ್ರೀಯ ಜಾತಿಯ 327ಕ್ಕೂ ಹೆಚ್ಚಿನ ವೈವಿಧ್ಯಮಯ…

44 seconds ago

ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 416ನೇ ನಾಡಹಬ್ಬ ದಸರಾ…

2 hours ago

ಓದುಗರ ಪತ್ರ: ಬಳಸಿದ ಅಡುಗೆ ಎಣ್ಣೆ: ಯೋಜನೆ ಪ್ರಶಂಸನೀಯ

ಬಳಸಿದ ಅಡುಗೆ ಎಣ್ಣೆಯನ್ನು ಸರಕಾರವೇ ಸಂಗ್ರಹಿಸಿ ಜೈವಿಕ ಇಂಧನವಾಗಿ (ಬಯೋಡೀಸೆಲ) ಪರಿವರ್ತಿಸುವ ಯೋಜನೆ ಪ್ರಶಂಸನೀಯ. ಪುನರಾವರ್ತಿತ ಎಣ್ಣೆ ಬಳಕೆಯಿಂದ ಹೊರಹೊಮ್ಮುವ…

3 hours ago

ಓದುಗರ ಪತ್ರ: ಇದೇನು ಪಾದಚಾರಿ ರಸ್ತೆಯೋ ಅಥವಾ…?

ಅನ್ನ ಬೆಂದಿದೆಯೋ ಇಲ್ಲವೋ ಎಂಬುದನ್ನುಪರೀಕ್ಷಿಸಲು ಪಾತ್ರೆಯ ಅನ್ನವನ್ನು ಮುಟ್ಟಿ ನೋಡಬೇಕಿಲ್ಲ. ಒಂದು ಅಗುಳನ್ನು ಪರೀಕ್ಷಿಸಿದರೆ ಸಾಕು. ಅಂತೆಯೇ ಮೈಸೂರಿನಲ್ಲಿ ಸಂಚಾರ…

3 hours ago

ಓದುಗರ ಪತ್ರ: ನಕಲಿ ಔಷಧಿಗಳ ಜಾಲದ ತಡೆಗೆ ಕಠಿಣ ಕ್ರಮ ಕೈಗೊಳ್ಳಿ

ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳ ಮಾರಾಟ ಹೆಚ್ಚಾಗುತ್ತಿರುವುದು ಅಂತಕ ಮೂಡಿಸಿದೆ. ಬ್ರಾಂಡೆಡ್ ಹೆಸರಿನಲ್ಲಿ ಸೂಕ್ತ ಪ್ರಮಾಣದಲ್ಲಿ ರಾಸಾಯನಿಕಗಳಿಲ್ಲದ ಅಥವಾ ಹಾನಿಕಾರಕ ಘಟಕಾಂಶಗಳಿರುವ…

3 hours ago

ಹರಿಕಥೆ ಮೇಷ್ಟ್ರು ಮಾದೇಶ ಇನ್ನಿಲ್ಲ

ಗುಂಡ್ಲುಪೇಟೆ : ತಾಲ್ಲೂಕಿನ ಬಾಚಹಳ್ಳಿಗ್ರಾಮದ ನಿವಾಸಿ, ಹರಿಕಥೆ ಮೇಷ್ಟ್ರು ಮಾದೇಶ(55) ಅವರು ಶನಿವಾರ ರಾತ್ರಿ ನಿಧನರಾದರು. ಚಿಕ್ಕನಿಂದಲೇ ಕಲೆಯನ್ನು ಮೈಗೂಡಿಸಿಕೊಂಡಿದ್ದ…

3 hours ago