ದೆಹಲಿ ಕಣ್ಣೋಟ
ಬಿಹಾರ ವಿಧಾನಸಭೆ ಚುನಾವಣೆಯೇ ಈಗ ರಾಷ್ಟ್ರಮಟ್ಟದ ಪ್ರಮುಖ ಸುದ್ದಿ. ಬಿಹಾರ ರಾಜ್ಯದ ಲಕ್ಷಾಂತರ ಜನರು ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಬಿಹಾರದ ತಲಾ ಆದಾಯ ಬೇರೆಲ್ಲ ರಾಜ್ಯಗಳಿಗಿಂತಲೂ ಕಡಿಮೆ ಇದೆ. ಲಾಲೂ ಪ್ರಸಾದ್ ಯಾದವ್ ಅಧಿಕಾರ ಕಳೆದುಕೊಂಡು ದಶಕಗಳೇ ಕಳೆದಿದ್ದು, ಬಿಹಾರವು ‘ಜಂಗಲ್ ರಾಜ್’ ಎಂಬ ಅಪಖ್ಯಾತಿಯಿಂದ ದೂರವಾಗಿರುವುದೇ ಈಗ ಸಮಾಧಾನದ ಸಂಗತಿ. ಆದರೆ ಈ ಎರಡು ದಶಕಗಳಲ್ಲಿ ಸಂಪೂರ್ಣ ಕ್ರಾಂತಿಯ ನೇತಾರ ದಿ.ಜಯಪ್ರಕಾಶ್ ನಾರಾಯಣ್ ಅವರ ಶಿಷ್ಯ ಹಿಂದುಳಿದ ಕುರ್ಮಿ ಜಾತಿಯ ನಿತೀಶ್ ಕುಮಾರ್ ಅವರ ಕೈಯಲ್ಲಿ ಆಡಳಿತವಿದ್ದರೂ ಬಿಹಾರ ಏಕೆ ಅಭಿವೃದ್ಧಿ ಸಾಧಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.
ಇಪ್ಪತ್ತಾರನೇ ವಯಸ್ಸಿಗೆ ಜಯಪ್ರಕಾಶ್ ನಾರಾಯಣ್ (ಜೆಪಿ) ಚಳವಳಿಯಲ್ಲಿ ಬಿಹಾರದಲ್ಲಿ ನಾಯಕತ್ವವಹಿಸಿದ್ದ ರಾಂ ವಿಲಾಸ್ ಪಾಸ್ವಾನ್ ರಾಜ್ಯ ರಾಜಕೀಯಕ್ಕೆ ತಲೆಹಾಕದೆ ರಾಷ್ಟ್ರರಾಜಕಾರಣದಲ್ಲಿ ಮಿಂಚಿ ಮರೆಯಾದರು. ಲಾಲೂ ಪ್ರಸಾದ್ ಯಾದವ್ ಮತ್ತು ಉತ್ತರ ಪ್ರದೇಶದವರಾದರೂ ಬಿಹಾರದಲ್ಲಿ ರಾಜಕೀಯ ನೆಲೆ ಕಂಡುಕೊಂಡ ಶರದ್ ಯಾದವ್ ಮತ್ತು ಜೆಪಿ ಚಳವಳಿಯ ಹಿನ್ನೆಲೆಯಲ್ಲಿ ಬಂದ ತುರ್ತುಪರಿಸ್ಥಿತಿ ಯಲ್ಲಿ ಹೋರಾಡಿ ಜೈಲುವಾಸ ಅನುಭವಿಸಿದ ಕರ್ನಾಟಕದವರಾದ ಜಾರ್ಜ್ ಫರ್ನಾಂಡೀಸ್ ಮುಂತಾದವರೆಲ್ಲ ಬಿಹಾರದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೂ ಆ ರಾಜ್ಯವನ್ನು ಬಡತನ, ಶೋಷಣೆ ಮತ್ತು ಊಳಿಗಮಾನ್ಯ ವ್ಯವಸ್ಥೆಯಿಂದ ಮುಕ್ತಗೊಳಿಸಲು ಆಗಲಿಲ್ಲ ಎನ್ನುವುದು ದುರಂತ.
ಎಪ್ಪತ್ತರ ದಶಕದಲ್ಲಿ ಬಿಹಾರದಿಂದ ರಾಜಕಾರಣಕ್ಕೆ ಬಂದವರಲ್ಲಿ ಘಟಾನುಘಟಿ ನಾಯಕರೇ ಸಿಗುತ್ತಾರೆ. ದೇಶದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್, ರಾಷ್ಟ್ರರಾಜಕಾರಣದಲ್ಲಿ ಹಲವು ದಶಕಗಳ ಕಾಲ ಅಧಿಕಾರ ಅನುಭವಿಸಿದ ಜಗಜೀವನ ರಾಂ, ಭ್ರಷ್ಟಾಚಾರ ವ್ಯವಸ್ಥೆಯನ್ನು ತೊಲಗಿಸಲೆಂದು ಟೊಂಕ ಕಟ್ಟಿದ ಲೋಕನಾಯಕ ಜಯಪ್ರಕಾಶ್ ನಾರಾಯಣ್ , ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಹೀಗೆ ಹತ್ತು ಹಲವು ಮಹಾನಾಯಕರೇ ಬಿಹಾರದ ಬಡತನವನ್ನು ತೊಡೆದು ಹಾಕಲು ಆಗಲಿಲ್ಲ ಎನ್ನುವುದೇ ವಿಪರ್ಯಾಸ. ಎಲ್ಲ ರಾಜ್ಯಗಳಲ್ಲಿರುವಂತೆ ಜಾತಿ ಬಲದಿಂದ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಬಿಹಾರವನ್ನು ನಿರಂತರವಾಗಿ ಆಳುತ್ತಾ ಬಂದಿರುವುದು ಸತ್ಯ. ಇದೇ ರಾಜಕೀಯ ಸಂಸ್ಕೃತಿ ಈಗಲೂ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ‘ಇಂಡಿಯಾ ಮೈತ್ರಿಕೂಟ (ಮಹಾಘಟ ಬಂಧನ್)’ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಡುವೆ ಈಗ ವಿಧಾನಸಭೆ ಚುನಾವಣೆಗೆ ಪೈಪೋಟಿ ನಡೆದಿದೆ.
ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮೇವು ಹಗರಣ ಅಪಖ್ಯಾತಿಯ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರನ್ನು ಘೋಷಿಸಲಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ತನ್ನ ಅಽಕಾರ ಹಿಡಿದಿರುವ ಭಾರತೀಯಜನತಾ ಪಕ್ಷ ಮಾತ್ರ ನಿತೀಶ್ ಕುಮಾರ್ ನಾಯಕತ್ವವನ್ನೇ ಅವಲಂಬಿಸಿದೆ. ಮೊದಲ ಹಂತದ ಚುನಾವಣೆಯ ನಾಮಪತ್ರದ ಪ್ರಕ್ರಿಯೆ ಮುಗಿದು ಪ್ರಚಾರದ ಭರಾಟೆ ಶುರುವಾಗಿದ್ದರೂ ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಲು ಈ ಮೈತ್ರಿಕೂಟದ ನಾಯಕತ್ವವಹಿಸಿರುವ ಬಿಜೆಪಿ ಹಿಂದೇಟು ಹಾಕುತ್ತಿರುವುದರಿಂದ ಆ ಪಕ್ಷದ ಹಿಡನ್ ಅಜೆಂಡಾದ ರಹಸ್ಯ ಏನೆಂಬುದು ಬಹಿರಂಗಗೊಂಡಿಲ್ಲ. ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಯಕತ್ವದಲ್ಲಿಯೇ ಎನ್‌ಡಿಎ ಚುನಾವಣೆ ಎದುರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರೆ ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ದರೂ, ಈ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮತ್ತೆ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಬಗೆಗೆ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ.
ಇದನ್ನು ಓದಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಕೊಡಗಿನಲ್ಲಿ ಶೇ.87 ಸಾಧನೆ
ಚುನಾವಣೆ ಮುಗಿದು ನವೆಂಬರ್ ೧೪ರ ನಂತರ ಸೇರುವ ಮೈತ್ರಿಕೂಟದ ಶಾಸಕರು ಮತ್ತು ಬಿಜೆಪಿಯ ಸಂಸದೀಯ ಮಂಡಳಿಯು ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತದೆ ಎಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ವಕ್ತಾರರು ಹೇಳುತ್ತಿರುವುದು ನಿತೀಶ್ ನಾಯಕತ್ವದ ಬಗೆಗೆ ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಬಿಜೆಪಿಯ ಈ ನಿಲುವನ್ನು ಗಮನಿಸಿದಾಗ ನಿತೀಶ್ ಕುಮಾರ್ ಎನ್‌ಡಿಎ ಕೂಟದ ಚುನಾವಣೆ ಮುಖವಾಡವಾಗಲಿದ್ದಾರೆಯೇ ಅಥವಾ ಮುಖ್ಯಮಂತ್ರಿ ಆಗಲಿದ್ದಾರೆಯೇ ಎನ್ನುವುದು ಈಗ ಬಿಹಾರದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.ಈಗಾಗಲೇ ಕೆಲವು ಚುನಾವಣಾ ಸಮೀಕ್ಷೆ ನಡೆಸುವ ಸಂಸ್ಥೆಗಳು ಮುಖ್ಯಮಂತ್ರಿ ಯಾರಾಗಬೇಕೆನ್ನುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದ್ದು, ತೇಜಸ್ವಿ ಯಾದವ್‌ಗೆ (ಶೇ.೩೬) ಹೆಚ್ಚಿನ ಒಲವು ಕಂಡು ಬಂದಿದೆ. ನಿತೀಶ್ ಕುಮಾರ್ ಅವರಿಗೆ ಶೇ.೧೫ ಬೆಂಬಲ ವ್ಯಕ್ತವಾಗಿದೆ. ನಿತೀಶ್ ಕುಮಾರ್ ಅವರ ವರ್ಚಸ್ಸು ಕುಗ್ಗಿರುವುದು ಎನ್‌ಡಿಎ ಮೈತ್ರಿಕೂಟದಲ್ಲಿ ಆತಂಕ ಮೂಡಿಸಿದೆ. ಹಾಗಾಗಿಯೇ ಎನ್‌ಡಿಎ ಬಿಹಾರದ ಮತದಾರನ ಮುಂದೆ ‘ಜಂಗಲ್ ರಾಜ್ ಅಥವಾ ಜನ ಕಲ್ಯಾಣ್ ರಾಜ್’ ಎನ್ನುವ ಘೋಷಣೆಯನ್ನು ಮುನ್ನೆಲೆಗೆ ಬಿಟ್ಟಿದೆ.
ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ಬಿಜೆಪಿ ಬಲಿಷ್ಠ ಜಾತಿಗಳಿಗೆ ಹೆಚ್ಚಿನ ಟಿಕೆಟ್ ನೀಡಿದ್ದು, ಹಿಂದುಳಿದ ಜಾತಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಅವಕಾಶವನ್ನು ಜೆಡಿ(ಯು)ಗೆ ಬಿಟ್ಟುಕೊಟ್ಟಿದೆ. ಬಿಜೆಪಿಯು ತನ್ನ ೧೦೧ ಸೀಟುಗಳ ಪೈಕಿ ಬಲಿಷ್ಠ ಜಾತಿಗಳಿಗೆ ೪೯, ಹಿಂದುಳಿದ ಜಾತಿಗಳಿಗೆ ೨೫, ಅತಿ ಹಿಂದುಳಿದ ಜಾತಿಗಳಿಗೆ ೧೫ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಟ್ಟು ೧೨ ಸೀಟುಗಳನ್ನು ನೀಡಿದೆ. ಬಲಿಷ್ಠ ಜಾತಿಗಳಾದ ರಜಪೂತರಿಗೆ ೨೧, ಭೂಮಿಹಾರರಿಗೆ ೧೬, ಬ್ರಾಹ್ಮಣರಿಗೆ ೧೧ ಮತ್ತು ಕಾಯಸ್ತರಿಗೆ ಒಂದು ಸೀಟನ್ನು ಹಂಚಿದೆ. ಆದರೆ ತನ್ನ ಮೈತ್ರಿಕೂಟದ ಭಾಗವಾಗಿರುವ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿಗೆ ೨೯ ಮತ್ತು ರಾಷ್ಟ್ರೀಯ ಲೋಕ್ ಮೋರ್ಚಾಗೆ ೬ ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ತನ್ನ ಈ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿಯೂ ಇಲ್ಲದಿರುವುದು ಬಿಜೆಪಿ ತನ್ನ ರಾಜಕೀಯ ನೀತಿಗನುಗುಣವಾಗಿ ನಡೆದುಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಜನತಾದಳ (ಯು) ೨೦೨೦ರಲ್ಲಿ ಹನ್ನೊಂದು ಮಂದಿ ಮುಸ್ಲಿಮರಿಗೆ ಟಿಕೆಟ್ ನೀಡಿದ್ದು ಅವರಲ್ಲಿ ಒಬ್ಬರೂ ಗೆಲ್ಲದ ಕಾರಣ ಬೆರಳೆಣಿಕೆಯ ಮಂದಿಗೆ ಟಿಕೆಟ್ ನೀಡಿರುವುದು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.೧೭ ಇರುವ ಆ ವರ್ಗವನ್ನು ಕಡೆಗಣಿಸಿದಂತೆ ಕಾಣುತ್ತದೆ. ಒಂದು ಅಂದಾಜಿನ ಪ್ರಕಾರ ಶೇಕಡಾವಾರು ಸೀಟು ಹಂಚಿಕೆಯಲ್ಲಿಎನ್‌ಡಿಎ ಬಲಿಷ್ಠ ಜಾತಿಗಳಿಗೆ ಶೇ.೧೦.೬, ಜೆಡಿಯು (ಕೋರಿ, ಕುರ್ಮಿ ಜಾತಿಗಳು ಸೇರಿ) ಶೇ.೯.೫ ಮತ್ತು ಎಲ್‌ಜೆಪಿಗೆ ಶೇ.೫.೩ ಹಾಗೂ ಇತರೆ ಸಣ್ಣಪುಟ್ಟ ಪಕ್ಷಗಳಿಗೆ ಶೇ.೩.೬ ಸೀಟನ್ನು ಬಿಟ್ಟುಕೊಟ್ಟಿದೆ. ಆದರೆ ಮಹಾಘಟಬಂಧನ್ ಕೂಟದಲ್ಲಿ ಸೀಟು ಹಂಚಿಕೆಯ ಮಾತುಕತೆ ಇನ್ನೂ ಮುಂದುವರಿದಿದೆ. ಮತಗಳವು ಪ್ರಕರಣವನ್ನು ಮುಂದಿಟ್ಟುಕೊಂಡು ದೇಶದ ಹಲವು ಕಡೆ ಹೋರಾಟಕ್ಕಿಳಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದಲ್ಲಿ ಚೇತರಿಕೆ ಉಂಟು ಮಾಡಿದ್ದು ಹೆಚ್ಚಿನ ಸೀಟಿಗಾಗಿ ಹಟ ಹಿಡಿದಿರುವುದರಿಂದ ಇನ್ನೂ ಅಂತಿಮ ಒಪ್ಪಂದಕ್ಕೆ ಬರಲಾಗಿಲ್ಲಎನ್ನಲಾಗಿದೆ. ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೂ, ಮಹಾಘಟಬಂಧನ ಮೈತ್ರಿಕೂಟದಿಂದ ಹೊರಗೆ ಹೋಗಲು ಒಂದು ಹೆಜ್ಜೆ ಇಟ್ಟಿದ್ದ ನಿಷಾದ್ ಜಾತಿಯ ಯುವ ನಾಯಕಮುಖೇಶ್ ಸಹಾನಿ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಘೋಷಿಸಿರುವುದು ಕಾಂಗ್ರೆಸ್ ಮುನಿಸಿಗೆ ಕಾರಣ ಎನ್ನಲಾಗಿದೆ. ಇಂತಹ ಆಂತರಿಕ ಬಿಕ್ಕಟ್ಟನ್ನು ಮಹಾಘಟಬಂಧನ್ ಮೈತ್ರಿಕೂಟ ಎದುರಿಸುತ್ತಿದ್ದು, ಈ ಬಿಕ್ಕಟ್ಟನ್ನು ಹೇಗೆ ಬಗೆಹರಿಸಿಕೊಂಡು ಚುನಾವಣಾ ಪ್ರಚಾರಕ್ಕಿಳಿಯುವುದೋ ಕಾದು ನೋಡಬೇಕಿದೆ.
ಈ ಮಧ್ಯೆ ಆರ್‌ಜೆಡಿ ಮತ್ತು ಜೆಡಿ (ಯು) ಸರ್ಕಾರವಿದ್ದಾಗ ೨೦೨೩ರಲ್ಲಿ ನಡೆಸಿದ ಜಾತಿವಾರು ಅರ್ಥಾತ್ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕಸಮೀಕ್ಷೆಯ ಆಧಾರವನ್ನಿಟ್ಟುಕೊಂಡು ಈಗ ಎರಡೂ ಮೈತ್ರಿಕೂಟಗಳು ಚುನಾವಣೆಯ ವಿಷಯವನ್ನಾಗಿ ಮಾಡಿಲ್ಲದಿರುವುದು ಅಚ್ಚರಿಯ ಸಂಗತಿ. ಈ ಸಮೀಕ್ಷೆಗೆ ರಾಜ್ಯದಲ್ಲಿ ಯಾವುದೇ ಜಾತಿಯ ವಿರೋಧವು ವ್ಯಕ್ತವಾಗದಿದ್ದರೂ, ಸಮೀಕ್ಷೆಯಿಂದ ದೊರೆತ ದತ್ತಾಂಶದ ಅನ್ವಯ ಮಾಡಲಾದ ಮೀಸಲಾತಿ ಹಂಚಿಕೆಯು ಶೇ.೫೦ರಿಂದ ಶೇ.೬೫ಕ್ಕೆ ಹೆಚ್ಚಿಸಿದ ಕ್ರಮವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ತೀರ್ಪಿಗೆ ವಿರುದ್ಧವಾಗಿ ಬಿಹಾರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿ ರಾಜ್ಯದಲ್ಲಿನ ಹಿಂದುಳಿದಿರುವ ಜಾತಿಗಳಿಗೆ ನ್ಯಾಯದೊರಕಿಸಿಕೊಡಬೇಕಾಗಿದೆ ಎಂದು ವಾದ ಮಂಡಿಸಿದೆ. ಹೈಕೋರ್ಟು ಸಮೀಕ್ಷೆ ಕಾರ್ಯವನ್ನು ಒಪ್ಪಿತಾದರೂ, ಈಗಾಗಲೇ ಇಂದ್ರಾಸಾಹ್ನಿ ಪ್ರಕರಣದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೂರು ದಶಕಗಳ ಹಿಂದೆ ನೀಡಿದ ಮೀಸಲಾತಿಯ ಮೀತಿ ಶೇ.೫೦ ಮೀರಬಾರದೆನ್ನುವ ತೀರ್ಪಿನಿಂದಾಗಿ ೨೦೨೩ರಲ್ಲಿ ನಡೆಸಿದ ಸಮೀಕ್ಷೆ ಈಗ ನನೆಗುದಿಗೆ ಬಿದ್ದಂತಾಗಿದೆ. ೨೦೨೩ರ ನವೆಂಬರ್ ೯ರಂದು ಬಿಹಾರ ವಿಧಾನಸಭೆಯು ಅತಿ ಹಿಂದುಳಿದ, ಹಾಗೂ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಇರುವ ಶೇ. ೫೦ರ ಮೀಸಲಾತಿ ಪ್ರಮಾಣವನ್ನು ಶೇ.೬೫ಕ್ಕೆ ಹೆಚ್ಚಿಸಲು ನಿರ್ಣಯ ಮಾಡಿತ್ತು.
ಆದರೆ ಈ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಹಿಂದುಳಿದ ಜಾತಿಗಳ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸುವ ಉದ್ದೇಶ ಹೊಂದಿರುವುದಾಗಿ ಬಿಹಾರ ಸರ್ಕಾರ ನ್ಯಾಯಾಲಯದ ಮುಂದೆ ತನ್ನ ವಾದ ಮಂಡಿಸಿದೆ. ಈ ಸಮೀಕ್ಷೆಯ ಆಧಾರದ ಮೇಲೆ ಈಗ ಹಣ ಹಂಚಿಕೆಯನ್ನು ಮಾಡಲಾಗುತ್ತಿದೆ. ಆದರೆ ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಽಸಿದಂತೆ ನ್ಯಾಯಾಲಯದ ತೀರ್ಪು ಈಗ ಸರ್ಕಾರಕ್ಕೆ ಅಡ್ಡಿಯಾಗಿದೆ. ಬಹುತೇಕ ರಾಜ್ಯಗಳು ಈಗಿರುವ ಮೀಸಲಾತಿ ಮಿತಿ ಶೇ.೫೦ಕ್ಕಿಂತ ಹೆಚ್ಚಿನ ಮೀಸಲಾತಿ ನೀತಿಗಾಗಿ ತಿಣುಕಾಡುತ್ತಿವೆ. ಈ ಬಗೆಗೆ ಶೇ.೫೦ ಮಿತಿಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ಮನಸ್ಸು ಮಾಡದಿರುವುದು ಮತ್ತು ರಾಜ್ಯ ಸರ್ಕಾರಗಳು ಸಂವಿಧಾನ ತಿದ್ದುಪಡಿಗೆ ಆಗ್ರಹಪಡಿಸದಿರುವುದು ಅಚ್ಚರಿ. ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಯತ್ನ ಕೇವಲ ಕಣ್ಣೊರೆಸುವ ತಂತ್ರವಾಗಿಯೇ ಉಳಿದಿರುವುದು ವಿಪರ್ಯಾಸ
” ಚುನಾವಣಾ ಸಮೀಕ್ಷೆ ನಡೆಸುವ ಸಂಸ್ಥೆಗಳು ಬಿಹಾರದ ಮುಖ್ಯಮಂತ್ರಿ ಯಾರಾಗಬೇಕೆನ್ನುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದ್ದು ತೇಜಸ್ವಿ ಯಾದವ್‌ಗೆ (ಶೇ.೩೬) ಹೆಚ್ಚಿನ ಒಲವು ಕಂಡು ಬಂದಿದೆ. ನಿತೀಶ್ ಕುಮಾರ್ ಅವರಿಗೆ ಶೇ.೧೫ ಬೆಂಬಲ ವ್ಯಕ್ತವಾಗಿದೆ. ನಿತೀಶ್ ಕುಮಾರ್ ಅವರ ವರ್ಚಸ್ಸು ಕುಗ್ಗಿರುವುದು ಎನ್‌ಡಿಎ ಮೈತ್ರಿಕೂಟದಲ್ಲಿ ಆತಂಕ ಮೂಡಿಸಿದೆ.”
–ಶಿವಾಜಿ ಗಣೇಶನ್
ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗುರುಪುರದ ಬಳಿಯ ಜಮೀನೊಂದರಲ್ಲಿ ಓಡಾಡುತ್ತಿದ್ದ ಒಂದು ವರ್ಷದ ಹುಲಿ ಮರಿಯನ್ನು ಅರಣ್ಯಾಧಿಕಾರಿಗಳು ಸೆರೆ…
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ. ಆ ಮೂಲಕ ನಮಗೆ…
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಯಾದ…
ಚಿಕ್ಕಮಗಳೂರು: ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟ ಘಟನೆ ಕಡೂರು ತಾಲ್ಲೂಕಿನ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ವರ…
ಬೆಂಗಳೂರು: ಬಿಜೆಪಿ ಜೊತೆ ಸೇರಿಕೊಂಡ ಮೇಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಮನುವಾದಿ ಆಗಿಬಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.…
ಬೆಂಗಳೂರು: ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ…