ಅಂಕಣಗಳು

ಬಿಜೆಪಿಯಲ್ಲಿ ಹರ್ಷ ಮೂಡಿಸಿದ ‘ಕೈ’ ಪಾಳೆಯದ ಸುದ್ದಿಗಳು’

ಬೆಂಗಳೂರು ಡೈರಿ 

ಆರ್.ಟಿ.ವಿಠ್ಠಲಮೂರ್ತಿ 

ಕಾಂಗ್ರೆಸ್ ಪಾಳೆಯದಿಂದ ಕೇಳಿ ಬಂದ ಎರಡು ಸುದ್ದಿಗಳು ಬಿಜೆಪಿ ಪಾಳೆಯದಲ್ಲಿ ಹರ್ಷ ಮೂಡಿಸಿವೆ. ಈ ಪೈಕಿ ಒಂದು ಸುದ್ದಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನಿಂದ ತೇಲಿ ಬಂದಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಯಾಂಪಿನಿಂದ ಮತ್ತೊಂದು ಸುದ್ದಿ ತೇಲಿ ಬಂದಿದೆ. ಬಿಜೆಪಿ ಪಾಳೆಯದ ಹರ್ಷಕ್ಕೆ ಈ ಎರಡು ಸುದ್ದಿಗಳೇ ಕಾರಣವಾಗಿವೆ.

ಮೊದಲನೆಯದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನಿಂದ ತೇಲಿ ಬಂದ ಸುದ್ದಿ ಎಂದರೆ, ಬಿಹಾರ ವಿಧಾನಸಭಾಚುನಾವಣೆಯ ನಂತರ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಲು ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ನಾಯಕರು ಸಜ್ಜಾಗಿದ್ದಾರೆ ಎನ್ನುವುದು.

ಅದರಲ್ಲೂ ಶ್ರೀಮತಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ಕೊಡಿಸಲು ಉತ್ಸುಕರಾಗಿದ್ದಾರೆ ಮತ್ತು ಇದುವರೆಗೂ ಸಿದ್ದರಾಮಯ್ಯ ಅವರ ನಾಯಕತ್ವದ ಪರವಾಗಿರುವ ರಾಹುಲ್ ಗಾಂಧಿ ಅವರ ಮೇಲೆ ಈ ಕುರಿತು ಒತ್ತಡ ಹೇರಿದ್ದಾರೆ.

ಕಳೆದ ಹಲವು ಕಾಲದಿಂದ ಡಿ.ಕೆ.ಶಿವಕುಮಾರ್ ಅವರು ಪಕ್ಷಕ್ಕಾಗಿ ಸಲ್ಲಿಸಿದ ಸೇವೆ ಮತ್ತು ತ್ಯಾಗವೇ ಇದಕ್ಕೆ ಕಾರಣ. ರಾಜ್ಯಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ಆಪ್ತ ಅಹಮದ್ ಪಟೇಲ್ ಅವರನ್ನು ಗೆಲ್ಲಿಸುವ ಸಲುವಾಗಿ ಡಿ.ಕೆ.ಶಿವಕುಮಾರ್ ಮಾಡಿದ ಯತ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೋಪಕ್ಕೆ ಕಾರಣವಾಯಿತಲ್ಲ? ಇದೇ ಕಾರಣಕ್ಕಾಗಿ ಮುಂದೆ ಡಿಕೆಶಿ ಜೈಲು ಸೇರಬೇಕಾಯಿತು ಮತ್ತು ಹೀಗೆ ಜೈಲು ಸೇರಿದರೂ ಅವರು ಪಕ್ಷದ ವರಿಷ್ಠರನ್ನು ಸಂಕಷ್ಟಕ್ಕೆ ಸಿಲುಕಿಸಲಿಲ್ಲ. ಇದೇ ರೀತಿ ಕಾಲ ಕಾಲಕ್ಕೆ ಪಕ್ಷ ನೀಡಿದ ಹೊಣೆಗಾರಿಕೆಯನ್ನು ಡಿಕೆಶಿ ಸಮರ್ಥವಾಗಿ ನಿಭಾಯಿಸಿದರು ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದು ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂಬುದು ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರಿಗೆ ಮುಖ್ಯವಾಗಿ ಕಾಣಿಸಿದೆ.

ಹೀಗಾಗಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಕಳೆದ ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಸಲು ಅವರು ನಿರ್ಧರಿಸಿದ್ದಾರೆ ಮತ್ತು ದಿಲ್ಲಿಗೆ ಬರುವ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಅವರ ಮೂಲಕ ಅಧಿಕಾರ ತ್ಯಾಗ ಮಾಡಿಸುವಂತೆ ಹೇಳಿಸಲಿದ್ದಾರೆ.

ಹೀಗೆ ರಾಹುಲ್ ಗಾಂಧಿ ಅವರು ಸೂಚಿಸಿದರೆ ಸಿದ್ದರಾಮಯ್ಯ ಅವರು ಅದನ್ನು ಮೀರುವುದಿಲ್ಲ. ಹೀಗಾಗಿ ನವೆಂಬರ್ ಇಪ್ಪತ್ತಾರರ ಹೊತ್ತಿಗೆ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಡಿಕೆಶಿ ಕ್ಯಾಂಪಿನಲ್ಲಿ ಕೇಳಿಬರುತ್ತಿರುವ ಮಾತು.

ಇದು ಒಂದು ಕಡೆಗಾದರೆ ಮತ್ತೊಂದು ಕಡೆ ಸಿದ್ದರಾಮಯ್ಯ ಅವರ ಕ್ಯಾಂಪಿನಿಂದ ಕೇಳಿ ಬರುತ್ತಿರುವ ವರ್ತಮಾನ ಬೇರೆಯೇ ಇದೆ. ಅದರ ಪ್ರಕಾರ, ಯಾವ ಕಾರಣಕ್ಕೂ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಿಂದ ಇಳಿಯುವುದಿಲ್ಲ.ಒಂದು ವೇಳೆ ರಾಹುಲ್ ಗಾಂಧಿಯವರು ಅಧಿಕಾರ ತ್ಯಾಗದ ಮಾತನಾಡಿದರೆ ಸಿದ್ದರಾಮಯ್ಯ ಅವರು ಅದನ್ನೊಪ್ಪಬಹುದು.ಆದರೆ ತಾವು ತ್ಯಾಗ ಮಾಡಲಿರುವ ಜಾಗಕ್ಕೆ ಡಿ. ಕೆ.ಶಿವಕುಮಾರ್ ಅವರು ಬರುವುದನ್ನು ಯಾವ ಕಾರಣಕ್ಕೂ ಅವರು ಸಹಿಸಿಕೊಳ್ಳುವುದಿಲ್ಲ.

ಹೀಗಾಗಿ ರಾಹುಲ್ ಗಾಂಧಿ ಅವರು ಅಧಿಕಾರ ತ್ಯಾಗದ ಮಾತನಾಡಿದರೆ, ಹೈಕಮಾಂಡ್ ತೀರ್ಮಾನವನ್ನು ನಾನು ಒಪ್ಪುತ್ತೇನೆ. ಆದರೆ ಸಿಎಂ ಜಾಗಕ್ಕೆ ಡಿ.ಕೆ.ಶಿವಕುಮಾರ್ ಅವರು ಬಂದರೆ ಸರ್ಕಾರಕ್ಕೆ ಅಪಾಯವಿದೆ. ಹೀಗಾಗಿ ಬೇರೊಬ್ಬರನ್ನು ಸಿಎಂ ಹುದ್ದೆಗೆ ತರಬೇಕು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಒಂದು ವೇಳೆ ರಾಹುಲ್ ಗಾಂಽ ಇದನ್ನೊಪ್ಪಿದರೆ ಸಮಸ್ಯೆ ಇಲ್ಲ. ಆಗ ಡಿಕೆಶಿ ಬದಲು ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಹುದ್ದೆಗೆ ಹತ್ತಿರವಾಗುತ್ತಾರೆ. ಒಂದು ವೇಳೆ ರಾಹುಲ್ ಗಾಂದಿ ಅವರು ಇದನ್ನು ಒಪ್ಪದೇ ಡಿ.ಕೆ.ಶಿವಕುಮಾರ್ ಅವರಿಗೇ ಪಟ್ಟ ಕಟ್ಟಲು ಮುಂದಾದರೆ ಸರ್ಕಾರದ ಬುಡ ನಿಶ್ಚಿತವಾಗಿ ಅಲುಗಾಡುತ್ತದೆ ಎಂಬುದು ಸಿದ್ದರಾಮಯ್ಯ ಕ್ಯಾಂಪಿನ ಮಾತು. ಹೀಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ಕ್ಯಾಂಪುಗಳಿಂದ ತೇಲಿ ಬಂದಿರುವ ಈ ಎರಡು ಸುದ್ದಿಗಳು ಬಿಜೆಪಿ ಪಾಳೆಯದ ಹರ್ಷಕ್ಕೆ ಏಕೆ ಕಾರಣವಾಗಿವೆ ಎಂದರೆ, ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಪ್ರಕ್ರಿಯೆ ಬಿಡಿಸಲಾಗದ ಕಗ್ಗಂಟಾಗಲಿದೆಯಲ್ಲದೆ ಏನೇ ಬೆಳವಣಿಗೆ ನಡೆದರೂ ಮಧ್ಯಂತರ ಚುನಾವಣೆ ಅನಿವಾರ್ಯವಾಗುತ್ತದೆ ಎಂಬುದು.

ಹೀಗೆ ಮಧ್ಯಂತರ ಚುನಾವಣೆ ಅನಿವಾರ್ಯವಾದರೆ ಏನಾಗುತ್ತದೆ? ಕರ್ನಾಟಕದ ಮತ ಬ್ಯಾಂಕ್ ಸ್ವರೂಪ ಬದಲಾಗಲಿದೆಯಲ್ಲದೆ ಬಿಜೆಪಿಗೆ ಅನುಕೂಲಕರ ಸನ್ನಿವೇಶ ನಿರ್ಮಾಣವಾಗಲಿದೆ ಎಂಬುದು ಆ ಪಾಳೆಯದ ಲೆಕ್ಕಾಚಾರ. ಅರ್ಥಾತ್, ಡಿಕೆಶಿ ಸಿಎಂ ಆಗಲಿ, ಅಥವಾ ಆಗದೆ ಇರಲಿ, ಆದರೆ ಈ ಬೆಳವಣಿಗೆ ಸಿದ್ದರಾಮಯ್ಯ ಅವರು ಕೆಳಗಿಳಿಯುವಂತೆ ಮಾಡಿದರೆ ರಾಜ್ಯದ ಅಹಿಂದ ವರ್ಗಗಳು ಚೆಲ್ಲಾಪಿಲ್ಲಿಯಾಗುತ್ತವೆ. ಅದರಲ್ಲೂ ಕರ್ನಾಟಕದ ಜನಸಂಖ್ಯೆಯ ಶೇಕಡ ಎಂಟರಷ್ಟಿರುವ ಕುರುಬ ಸಮುದಾಯ ಕಾಂಗ್ರೆಸ್ ಪಕ್ಷದಿಂದ ದೂರ ಸರಿಯುತ್ತದೆ. ಇದು ಒಂದು ಕಡೆಗಾದರೆ ಮತ್ತೊಂದು ಕಡೆಯಿಂದ ಮುಸ್ಲಿಂ ಮತಗಳು ಕೂಡಾ ಚದುರಿ ಹೋಗುತ್ತವೆ. ಇವತ್ತು ದೇಶದ ಮುಸ್ಲಿಮರ ಮನಃಸ್ಥಿತಿ ಹೇಗಾಗಿದೆ ಎಂದರೆ ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್ ಅಥವಾ ಬೇರೆ ಶಕ್ತಿಗಳು ಬಲಿಷ್ಠವಾಗಿದ್ದರೆ ಅವುಗಳ ಜತೆ ನಿಲ್ಲುತ್ತಾರೆ.

ಒಂದು ವೇಳೆ ಸನ್ನಿವೇಶ ಹಾಗಿಲ್ಲವೆಂದರೆ ಬಿಜೆಪಿಯ ವಿರೋಧಕ್ಕೆ ಗುರಿಯಾಗದ ಹಾಗೆ ನಡೆದುಕೊಳ್ಳುವ ಎಚ್ಚರಿಕೆ ವಹಿಸುತ್ತಿವೆ.ಇವತ್ತು ದೇಶದ ಹಲವು ರಾಜ್ಯಗಳಲ್ಲಿ ಮುಸ್ಲಿಂ ಮತದಾರರ ಈ ಮನಃ ಸ್ಥಿತಿ ಹೇಗೆ ಕೆಲಸ ಮಾಡುತ್ತಿದೆಯೆಂದರೆ ಮುಸ್ಲಿಂ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುತ್ತಿದ್ದಾರಲ್ಲದೆ ತಮ್ಮ ಸಮುದಾಯದ ಮತಗಳನ್ನು ಗಣನೀಯ ಸಂಖ್ಯೆಯಲ್ಲಿ ಪಡೆಯುತ್ತಿದ್ದಾರೆ. ಹೀಗಾದಾಗ ಅದು ಸಹಜವಾಗಿಯೇ ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸುತ್ತಿದೆಯಲ್ಲದೆ, ಮುಸ್ಲಿಮರ ವಿರುದ್ಧ ಬಿಜೆಪಿ ವ್ಯತಿರಿಕ್ತ ನಿಲುವು ತಳೆಯದಂತೆ ಮಾಡುತ್ತಿದೆ. ಹೀಗೆ ಬೇರೆ ರಾಜ್ಯಗಳಲ್ಲಿ ಸಾಧ್ಯವಾಗುತ್ತಿರುವುದು ಕರ್ನಾಟಕದಲ್ಲೂ ನಡೆದರೆ ಬಿಜೆಪಿಗೆ ತಾನೇ ಅನುಕೂಲ? ಹೀಗಾಗಿಯೇ ಬಿಜೆಪಿ ಪಾಳೆಯದಲ್ಲಿ ಹರ್ಷ ಕಾಣಿಸಿಕೊಂಡಿದೆ. ಅದು ಎಷ್ಟರ ಮಟ್ಟಿಗೆ ನಿಜವಾಗುತ್ತದೋ ಎಂಬುದನ್ನು ಕಾದು ನೋಡಬೇಕು.

” ಇವತ್ತು ದೇಶದ ಹಲವು ರಾಜ್ಯಗಳಲ್ಲಿ ಮುಸ್ಲಿಂ ಮತದಾರರ ಈ ಮನ:ಸ್ಥಿತಿ ಹೇಗೆ ಕೆಲಸ ಮಾಡುತ್ತಿದೆಯೆಂದರೆ ಮುಸ್ಲಿಂ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುತ್ತಿದ್ದಾರಲ್ಲದೆ ತಮ್ಮ ಸಮುದಾಯದ ಮತಗಳನ್ನು ಗಣನೀಯ ಸಂಖ್ಯೆಯಲ್ಲಿ ಪಡೆಯುತ್ತಿದ್ದಾರೆ. ಹೀಗಾದಾಗ ಅದು ಸಹಜವಾಗಿಯೇ ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸುತ್ತಿದೆಯಲ್ಲದೆ,ಮುಸ್ಲಿಮರ ವಿರುದ್ಧ ಬಿಜೆಪಿ ವ್ಯತಿರಿಕ್ತ ನಿಲುವು ತಳೆಯದಂತೆ ಮಾಡುತ್ತಿದೆ. ಹೀಗೆ ಬೇರೆ ರಾಜ್ಯಗಳಲ್ಲಿ ಸಾಧ್ಯವಾಗುತ್ತಿರುವುದು ಕರ್ನಾಟಕದಲ್ಲೂ ನಡೆದರೆ ಬಿಜೆಪಿಗೆ ತಾನೇ ಅನುಕೂಲ?”

ಆಂದೋಲನ ಡೆಸ್ಕ್

Recent Posts

ಇಡಿಯಿಂದ ನನಗೆ ಕಿರುಕುಳ ನೀಡಲಾಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್‌ ಆಕ್ರೋಶ

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಹಾಗೂ ಯಂಗ್‌ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್‌ ನೀಡಿದೆ. ಆ ಮೂಲಕ ನಮಗೆ…

51 mins ago

ಕಾಂಗ್ರೆಸ್‌ ಕಾರ್ಯಕರ್ತನ ಹತ್ಯೆ ಪ್ರಕರಣ: ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ: ಸಚಿವ ಕೆ.ಜೆ.ಜಾರ್ಜ್‌

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್‌ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಯಾದ…

55 mins ago

2 ಗುಂಪುಗಳ ಮಧ್ಯೆ ಮಾರಾಮಾರಿ: ಕಾಂಗ್ರೆಸ್‌ ಕಾರ್ಯಕರ್ತನ ಹತ್ಯೆ

ಚಿಕ್ಕಮಗಳೂರು: ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಕಾಂಗ್ರೆಸ್‌ ಕಾರ್ಯಕರ್ತ ಮೃತಪಟ್ಟ ಘಟನೆ ಕಡೂರು ತಾಲ್ಲೂಕಿನ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ವರ…

59 mins ago

ಬಿಜೆಪಿ ಜೊತೆ ಸೇರಿ ಕುಮಾರಸ್ವಾಮಿ ಮನುವಾದಿ ಆಗಿದ್ದಾರೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಜೊತೆ ಸೇರಿಕೊಂಡ ಮೇಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಮನುವಾದಿ ಆಗಿಬಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.…

1 hour ago

ಅಂಬೇಡ್ಕರ್ ದೇಶ ಕಂಡ ಅಪರೂಪದ ನಾಯಕ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ…

2 hours ago

ದರ್ಶನ್‌ಗೆ ಫಿಸಿಯೊಥೆರಪಿ ಸ್ಟಾಪ್‌ ಮಾಡಿದ ವೈದ್ಯರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್‌ಗೆ ಬೆನ್ನುನೋವು ಮಾಯವಾಯ್ತಾ ಎಂಬ ಕುತೂಹಲ ಮನೆ ಮಾಡಿದೆ. ದರ್ಶನ್‌…

2 hours ago