ಅಂಕಣಗಳು

98ನೇ ಆಸ್ಕರ್‌ ಪ್ರಶಸ್ತಿ: ನಿಯಮಾವಳಿಗಳು ಇನ್ನಷ್ಟು ಬಿಗಿ

ಆಸ್ಕರ್ – ವಿಶ್ವ ಚಲನಚಿತ್ರ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಹಾಗಂತ ಚಿತ್ರೋದ್ಯಮದ ಮಂದಿಯ ಅಂಬೋಣ. ಇನ್ನೆರಡು ವರ್ಷ ಗಳಲ್ಲಿ ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಪ್ರಶಸ್ತಿಯನ್ನು ಭಾರತದ ಚಿತ್ರಗಳು ಈ ತನಕ ಪಡೆದಿಲ್ಲ. ವೈಯಕ್ತಿಕ ಪ್ರಶಸ್ತಿಗಳು ಸಂದಿವೆ. ವಸ್ತ್ರವಿನ್ಯಾಸಕ್ಕಾಗಿ ಭಾನು ಅಥೈಯಾ, ಧ್ವನಿ ಸಂಯೋಜನೆಗಾಗಿ ರಸೂಲ್ ಪೂಕುಟ್ಟಿ, ಮೂಲ ಗೀತೆಗಾಗಿ ಗುಲ್ಜಾರ್ ಮತ್ತು ಮೂಲ ಸಂಗೀತ ಮತ್ತು ಗೀತೆಗಾಗಿ ಎ. ಆರ್. ರೆಹಮಾನ್ ಮತ್ತು ಎಂ. ಎಂ. ಕೀರವಾಣಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉಳಿ ದಂತೆ ಜೀವಮಾನ ಸಾಧನೆಗಾಗಿ ಸತ್ಯಜಿತ್ ರೇ ಅವರಗೆ ಆಸ್ಕರ್ ಗೌರವ ಸಂದಿದೆ.

ಹಾಲಿವುಡ್ ಚಿತ್ರೋದ್ಯಮಿಗಳ ಕನಸಾಗಿರುವ ಆಸ್ಕರ್ ಪ್ರಶಸ್ತಿಯತ್ತ ಈಗ ಉಳಿದ ದೇಶಗಳ ಚಿತ್ರೋದ್ಯಮಗಳ ಗಮನವೂ ಹರಿದಿದೆ. ಪ್ರಶಸ್ತಿಗಳನ್ನು ಇತರ ದೇಶ, ಭಾಷೆಗಳ ಮಂದಿಯೂ ಪಡೆಯತೊಡಗಿದ್ದಾರೆ. ಇತರ ದೇಶಗಳ ಚಿತ್ರಗಳಿಗಾಗಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿ ಇದೆ. ಈಗ ಅಲ್ಲಿ ಸ್ಪರ್ಧಿಸುವ ಚಿತ್ರಗಳು ಇತರ ವಿಭಾಗಗಳಲ್ಲಿಯೂ ಸ್ಪರ್ಧಿಸುವ ಅವಕಾಶ ಪಡೆಯುತ್ತವೆ. ಒಂದು ದೇಶದಿಂದ ಒಂದು ಚಿತ್ರಕ್ಕೆ ಮಾತ್ರ ಸ್ಪರ್ಧಿಸುವ ಅವಕಾಶ. ಭಾರತದಿಂದ ಈ ಚಿತ್ರವನ್ನು ಆಯ್ಕೆ ಮಾಡುವ ಕೆಲಸವನ್ನು ಭಾರತೀಯ ಚಲನಚಿತ್ರ ಒಕ್ಕೂಟ ಮಾಡುತ್ತದೆ.

ಭಾರತದಿಂದ ಆಯ್ಕೆಯಾಗದೆ ಇದ್ದರೂ ಹಿಂದಿನ ವರ್ಷ ಗೀತೆ ಮತ್ತು ಸಂಗೀತ ಸಂಯೋಜನೆಗಾಗಿ ಪ್ರಶಸ್ತಿ ಪಡೆದ ತೆಲುಗು ಚಿತ್ರ ಅಲ್ಲಿ ಸ್ಪರ್ಧೆಯಲ್ಲಿತ್ತು. ಅಮೆರಿಕದಲ್ಲಿ ಬಿಡುಗಡೆಯಾಗಿ ಕನಿಷ್ಠ ಒಂದು ವಾರ ಪ್ರದರ್ಶನ ಕಂಡ ಯಾವುದೇ ದೇಶದ ಯಾವುದೇ ಭಾಷೆಯ ಚಿತ್ರ ಆಸ್ಕರ್ ಪ್ರಶಸ್ತಿಯ ಕಣದಲ್ಲಿ ಸ್ಪರ್ಧಿಸಲು ಅವಕಾಶ ಪಡೆಯುತ್ತದೆ. ಹಾಗೆ ಸ್ಪರ್ಧಿಸಿ, ವೈಯಕ್ತಿಕ ಪ್ರಶಸ್ತಿ ಪಡೆದಿತ್ತು ಈ ಚಿತ್ರ.

ಆಸ್ಕರ್ ಪ್ರಶಸ್ತಿ ಕೊಡಮಾಡುವ ಚಲನಚಿತ್ರ ಕಲೆ ಮತ್ತು ವಿಜ್ಞಾನ ಅಕಾಡೆಮಿಯಲ್ಲೀಗ ಹತ್ತು ಸಾವಿರಕ್ಕಿಂತಲೂ ಅಧಿಕ ಮಂದಿ ಸದಸ್ಯರಿದ್ದಾರೆ. ಪ್ರತಿವರ್ಷ ಪ್ರಶಸ್ತಿ ಪಡೆದ ಮಂದಿಗೆ ಮುಂದಿನ ವರ್ಷದಿಂದ ಅಲ್ಲಿ ಸದಸ್ಯರಾಗುವ ಅವಕಾಶ. 19 ವಿಭಾಗಗಳಲ್ಲಿ 24 ಪ್ರಶಸ್ತಿಗಳನ್ನು ಪ್ರತಿವರ್ಷ ಅದು ನೀಡುತ್ತದೆ. ಅಲ್ಲಿನ ಪ್ರಶಸ್ತಿ ಆಯ್ಕೆ, ನಾಮನಿರ್ದೇಶನ, ಅಂತಿಮ ಆಯ್ಕೆ ಎಲ್ಲವೂ ಅದರದೇ ಆದ ನಿಯಮಾವಳಿಯಂತೆ ನಡೆಯುತ್ತದೆ.

ಪ್ರಶಸ್ತಿಯ ಕಣದಲ್ಲಿರುವ ಚಿತ್ರಗಳನ್ನು ಆಯ್ಕೆ ಮಾಡಲು ಅಕಾಡೆಮಿಯ ಎಲ್ಲ ಸದಸ್ಯರೂ ಮತ ನೀಡಬೇಕು:
ವೈಯಕ್ತಿಕ ಪ್ರಶಸ್ತಿಗಳಿಗೆ ಆಯಾ ವಿಭಾಗದ ಸದಸ್ಯರು ಮಾತ್ರ ಮತ ನೀಡಬೇಕು. ಗೌಪ್ಯ ಮತದಾನ. ಆನ್‌ಲೈನ್ ಮೂಲಕ ಆಗುವ ಈ ಮತದಾನದ ಲೆಕ್ಕಾಚಾರ ಮಾಡುವ ಸಂಸ್ಥೆ ಪ್ರೈಸ್ ವಾಟರ್ ಹೌಸ್ ಸ್ಕೂಪರ್ಸ್; ಇದೊಂದು ಆಡಿಟ್ ಸಂಸ್ಥೆ ಎನ್ನಲಾಗಿದ್ದು ಪ್ರತಿವರ್ಷ ಈ ಲೆಕ್ಕಾಚಾರದ ಕೆಲಸವನ್ನು ಅದು ಮಾಡುತ್ತದೆ.

ಎಲ್ಲ ವಿಭಾಗಗಳಲ್ಲಿ ಸದಸ್ಯರು ನೀಡಿದ ಮತಗಳ ಆಧಾರದಲ್ಲಿ ಆದ್ಯತೆಯಂತೆ ಆಯಾ ವಿಭಾಗಗಳಲ್ಲಿ ಅತಿಹೆಚ್ಚು ಮಂದಿ ಹೇಳಿದ ಐದು ಮಂದಿಯನ್ನು ಅಂತಿಮ ಹಂತಕ್ಕೆ ನಾಮಕರಣ ಮಾಡಲಾಗುತ್ತದೆ. ಚಿತ್ರಗಳಾದರೆ ಅಂತಿಮ ಹಂತದ ಆಯ್ಕೆ ಹೆಚ್ಚಬಹುದು. ಕೆಲವೊಮ್ಮೆಇತರ ವಿಭಾಗಗಳಲ್ಲೂ. ಈ ಹಿಂದೆ ಚಿತ್ರಗಳನ್ನು ನೋಡಲು ಅಕಾಡೆಮಿಯ ಕೇಂದ್ರದ ಹೊರತಾಗಿಯೂ ಬೇರೆ ಕಡೆ ನೋಡಿ ಮತ ನೀಡಬಹುದಾಗಿತ್ತು. ಆದರೆ ಈ ಬಾರಿ ಸದಸ್ಯರು ಅಲ್ಲಿನ ವ್ಯವಸ್ಥೆ ಯಿಂದಲೇ ವೀಕ್ಷಿಸಬೇಕು; ಅನಿವಾರ್ಯವಾಗಿ ಬೇರೆ ಕಡೆ ನೋಡುವುದೇ ಆದರೆ, ಅದಕ್ಕೆ ಸಂಬಂಧಪಟ್ಟಂತೆ ಮೊದಲೇ ತಿಳಿಸಿ, ದಾಖಲೆಗಳನ್ನು ನೀಡಬೇಕು.

ಅಂತಿಮ ನಾಮಕರಣದ ಎಲ್ಲ ಚಿತ್ರಗಳನ್ನೂ ನೋಡದೇ ಇದ್ದರೆ, ಅಂತಹ ಸದಸ್ಯರಿಗೆ ಆಯ್ಕೆ ಮಾಡುವ ಹಕ್ಕಿರುವುದಿಲ್ಲ ಎನ್ನುವುದು ಈ ಬಾರಿಯ ತೀರ್ಮಾನ. ಈ ತೀರ್ಮಾನ ಬಹಿರಂಗವಾಗುತ್ತಲೇ ಹಲವು ಪ್ರಶ್ನೆಗಳು ಏಳತೊಡಗಿವೆ. ಈ ಹಿಂದೆ ಆಸ್ಕರ್ ಅಕಾಡೆಮಿಯ ಸದಸ್ಯರು ನಾಮಕರಣಗೊಂಡ ಎಲ್ಲ ಚಿತ್ರಗಳನ್ನೂ ನೋಡಿರಲಿಲ್ಲವೇ ಎನ್ನುವುದು ಮುಖ್ಯ ಪ್ರಶ್ನೆ. ನೋಡದೆ ಇದ್ದರೆ ಈವರೆಗಿನ ಆಸ್ಕರ್ ಆಯ್ಕೆಗಳು ಎಷ್ಟು ಸರಿಯಾಗಿರಬಹುದು ಎನ್ನುವ ಅನುಮಾನ, ಪ್ರಶ್ನೆ ಸಹಜವೇ ಆಗಿದೆ. ಏನೇ ಇರಲಿ, ಪ್ರಶಸ್ತಿಗಾಗಿ ಅಂತಿಮ ಆಯ್ಕೆ ಸೂಚಿಸುವ ಮೊದಲು ಅಲ್ಲಿನ ಎಲ್ಲ ಚಿತ್ರಗಳನ್ನೂ ವೀಕ್ಷಿಸಿರಲೇಬೇಕು ಎನ್ನುವ ನಿಲುವು ಸರಿ, ಮೊದಲಿನಿಂದಲೂ ಅದು ಇರಬೇಕಾಗಿತ್ತು. ಪ್ರಶಸ್ತಿಗಳ, ವಿಶೇಷವಾಗಿ ಸಿನಿಮಾ ಪ್ರಶಸ್ತಿಗಳ ವಿಷಯದಲ್ಲಂತೂ, ಅದು ಆಸ್ಕರ್ ಇರಲಿ, ರಾಷ್ಟ್ರದ್ದಿರಲಿ, ರಾಜ್ಯ ದ್ದಿರಲಿ ಸಾಮಾನ್ಯವಾಗಿ ಅವು ವಿವಾದ ರಹಿತವಾಗಿರುವುದು ಅಪರೂಪ.

ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನೇ ಗಮನಿಸಿ. 2018ರ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟವಾಗುತ್ತಲೇ ಅದು ನ್ಯಾಯಾಲಯದ ಮೆಟ್ಟಿಲೇರಿತ್ತು. ಆ ಸಾಲಿನ ಆಯ್ಕೆ ಸಮಿತಿಯ ಅಧ್ಯಕ್ಷರು ನಟಿಸಿದ ಚಿತ್ರಗಳಿದ್ದವು ಎನ್ನುವ ಕಾರಣದಿಂದ ಈ ಬೆಳವಣಿಗೆ. ಹಿಂದೆ, 2010-11ರ ಸಾಲಿನಲ್ಲಿ (ಆಗ ಪ್ರಶಸ್ತಿಗಳನ್ನು ಆರ್ಥಿಕ ವರ್ಷದ ಆಧಾರದಲ್ಲಿ ನೀಡುವುದಿತ್ತು) ಆಯ್ಕೆಯಾದ ಪ್ರಶಸ್ತಿಗಳನ್ನು ಪ್ರಶ್ನಿಸಿ, ನಿರ್ಮಾಪಕರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಮುಖ್ಯವಾಗಿ ಆಯ್ಕೆ ಸಮಿತಿಯ ಸದಸ್ಯರೊಬ್ಬರ ಚಿತ್ರ ಅಲ್ಲಿದ್ದು, ಅದಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಂದಿತ್ತು. ಕೊನೆಗೆ ಸರ್ಕಾರ ಅದನ್ನು ಹಿಂದೆಗೆದುಕೊಂಡು ಹೊಸ ಆಯ್ಕೆ ಸಮಿತಿ ಮಾಡುವುದಾಗಿ ಹೇಳಿ, ವಿವಾದದಿಂದ ಹೊರಬಂತು.

ಇತ್ತೀಚೆಗೆ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧೆಯ ಆಯ್ಕೆಯ ಕುರಿತಂತೆ ಕೂಡ ಅಪಸ್ವರವಿತ್ತು. ಇಲ್ಲಿ ಅಂತಿಮ ಆಯ್ಕೆಗಿಂತ, ಆರಂಭಿಕ ಹಂತದ ಆಯ್ಕೆಯ ಕುರಿತಂತೆಯೇ ಸಾಕಷ್ಟು ಟೀಕೆ ಇತ್ತು. ತಮ್ಮ ಚಿತ್ರಗಳನ್ನು ವೀಕ್ಷಿಸಿಯೇ ಇಲ್ಲ ಎಂದು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದೂ ಇದೆ. ಅದೀಗ ನ್ಯಾಯಾಲಯದಲ್ಲಿದೆ.

ಅಂತಿಮ ಹಂತಕ್ಕೆ ಚಿತ್ರಗಳನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಸಿನಿಮಾ ಕುರಿತಂತೆ ಹೆಚ್ಚು ತಿಳಿದ ಮಂದಿ ಇದ್ದರೆ ಈ ರೀತಿಯ ಸಮಸ್ಯೆ ಇರುವುದಿಲ್ಲ ಎನ್ನುವುದು ತೀರ್ಪುಗಾರರಾಗಿ ಬಂದಿದ್ದವರೊಬ್ಬರ ಅಭಿಪ್ರಾಯ. ಅಂತಿಮ ಹಂತಕ್ಕೆ ಆಯ್ಕೆಯಾದ ಚಿತ್ರಗಳ ಗುಣಮಟ್ಟ ಕುರಿತಂತೆ ಮಾತನಾಡುತ್ತಿದ್ದ ವೇಳೆ ಅವರು ವ್ಯಕ್ತಪಡಿಸಿದ ಅಭಿಪ್ರಾಯವಿದು.

ಕನ್ನಡ ಸ್ಪರ್ಧಾ ವಿಭಾಗದಲ್ಲಿ ಪ್ರಾದೇಶಿಕ ಭಾಷೆಯ ಎರಡು ಚಿತ್ರಗಳು ಪ್ರಶಸ್ತಿ ಪಡೆದವು. ಮೊದಲನೆಯ ಅತ್ಯುತ್ತಮ ಚಿತ್ರವನ್ನು ಹೊರತುಪಡಿಸಿದರೆ ಎರಡು, ಮೂರನೇ ಸ್ಥಾನ ತುಳು ಚಿತ್ರಗಳದ್ದಾಗಿತ್ತು. ಸ್ಪರ್ಧೆಯಲ್ಲಿದ್ದ ಬಹುತೇಕ ಚಿತ್ರಗಳೂ ಸಾಮಾನ್ಯ ಮಟ್ಟದಿಂದ ಮೇಲಿರಲಿಲ್ಲ ಎನ್ನುವುದು, ಕನ್ನಡ ಚಿತ್ರಗಳ ಇಂದಿನ ಗುಣಮಟ್ಟಕ್ಕೆ ಕನ್ನಡಿ ಹಿಡಿಯುತ್ತದೆ. ಜೊತೆಗೆ ಪ್ರಾಥಮಿಕ ಆಯ್ಕೆಯ ಕುರಿತೂ ಅನುಮಾನ ಮೂಡಿಸುತ್ತದೆ.

ಪ್ರಾಥಮಿಕ ಹಂತವಿರಲಿ, ಅಂತಿಮ ಹಂತವಿರಲಿ, ಆಯ್ಕೆಗೆ ಸಿನಿಮಾ ಕುರಿತಂತೆ ಸಾಕಷ್ಟು ತಿಳಿದವರ ತಂಡವನ್ನು ಕಳುಹಿಸಬೇಕು. ಇಲ್ಲದೆ ಹೋದರೆ ಇಂತಹ ಟೀಕೆ ಪ್ರತಿಕ್ರಿಯೆಗಳು ಸಹಜ. ಮುಖ್ಯವಾಹಿನಿ ಚಿತ್ರಗಳಿಗೂ, ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುವ, ಸ್ಪರ್ಧಿಸುವ ಚಿತ್ರಗಳಿಗೂ ಇರುವ ಅಂತರವನ್ನೇ ತಿಳಿಯದ ಮಂದಿಗೆ ಅವುಗಳ ವಿಶ್ಲೇಷಣೆ ಕಷ್ಟಸಾಧ್ಯ.

‘ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ. . . ’ ಎನ್ನುವುದು ಚಲನಚಿತ್ರಗಳ ಕುರಿತಂತೆ ಕೂಡ ಹೌದು. ಇದು ಇಲ್ಲಿಗೆ ಮಾತ್ರವಲ್ಲ, ರಾಷ್ಟ್ರ ಪ್ರಶಸ್ತಿಗಳ ಆಯ್ಕೆಗೆ ತೀರ್ಪುಗಾರರನ್ನು ಕಳುಹಿಸುವಾಗಲೂ ಆಗುತ್ತದೆ ಎನ್ನುವುದು, ಅಲ್ಲಿನ ಮೂಲಗಳ ಮಾತು. ಜೊತೆಗೆ ಶಿಫಾರಸುಗಳು ಯೋಗ್ಯತೆಯನ್ನು ಹೇಳುವ ದಿನಗಳು. ಆಳುವ ಪಕ್ಷದ ಹತ್ತಿರದವರು, ಅವರ ಹತ್ತಿರದವರು ಅಲ್ಲಿಗೆ ಹತ್ತಿರವಾಗುತ್ತಾರೆ ಎನ್ನುವ ಮಾತೂ ಇದೆ. ಚಲನಚಿತ್ರ ರಾಷ್ಟ್ರ ಪ್ರಶಸ್ತಿಯ ಹೊಸ ನಿಯಮಾವಳಿಗಳ ಕುರಿತೂ ಟೀಕೆ ಇದೆ. ಎರಡು ಹಂತಗಳ ಆಯ್ಕೆಯಲ್ಲಿ, ಮೊದಲ ಹಂತದ ಆಯ್ಕೆಯಲ್ಲಿದ್ದ ಐವರು ಅಧ್ಯಕ್ಷರು ಅಂತಿಮ ಹಂತದ ಸಮಿತಿಯ ಸದಸ್ಯರಾಗಿರುತ್ತಿದ್ದರು, ಪ್ರತಿವಲಯದಿಂದ ಪ್ರತಿಶತ 30ರವರೆಗೆ ಚಿತ್ರಗಳನ್ನು ಅಂತಿಮ ಹಂತಕ್ಕೆ ಐದೂ ವಲಯಗಳು ಕಳುಹಿಸಬಹುದಿತ್ತು. ಆದರೆ ಈಗ ಅದು ಕೇವಲ ಹತ್ತು ಚಿತ್ರಗಳಿಗೆ ಸೀಮಿತವಾಗಿದೆ! ಮೊದಲ ಹಂತದಲ್ಲಿದ್ದ ಅಧ್ಯಕ್ಷರು ಎರಡನೇ ಹಂತಕ್ಕೆ ಹೋಗುವ ಬದಲು, ಅಲ್ಲಿ ಎಲ್ಲ ಹೊಸ ಸದಸ್ಯರೇ ಇರುತ್ತಾರೆ.

ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣದ ಎರಡು ವಲಯಗಳು ಗರಿಷ್ಟ ಐವತ್ತು ಚಿತ್ರಗಳಿಗಷ್ಟೇ ಅಂತಿಮ ಹಂತದ ಅವಕಾಶ. ಗಮನಿಸಿ: ದಕ್ಷಿಣದಲ್ಲಿ ತೆಲುಗು, ಕನ್ನಡ ಜೊತೆಗೆ ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ, ಬಂಜಾರ, ಬ್ಯಾರಿ, ಅರೆಭಾಷೆ, ಈ ಎಲ್ಲ ಭಾಷೆಗಳಲ್ಲು ಒ ಳ್ಳೆಯ ಚಿತ್ರಗಳು ಬಂದು ಅವು ಸ್ಪರ್ಧೆಯಲ್ಲಿದ್ದಾಗ, ಕೆಲವಾದರೂ ಅಂತಿಮ ಹಂತ ತಲು ಪುವುದು ಹೊಸ ನಿಯಮದಂತೆ ಕಷ್ಟಸಾಧ್ಯ. ಇದು ಈಶಾನ್ಯ ರಾಜ್ಯಗಳ ಚಿತ್ರಗಳಿಗೂ ಅನ್ವಯಿಸುತ್ತದೆ.

ಸಂಬಂಧಪಟ್ಟವರು ಇವುಗಳನ್ನು ಗಮನಿಸಬೇಕು. ಪ್ರಾತಿನಿಽಕ ಸಂಸ್ಥೆಗಳು ಇದನ್ನು ಹೇಳಬೇಕು. ಆಸ್ಕರ್ ನಿಯಮಾವಳಿಗಳನ್ನು ಓದಿದಾಗ ಇದು ನೆನಪಾಯಿತು. ಹ್ಞಾಂ. ಆಸ್ಕರ್ 100ರ ವೇಳೆಗೆ ಹೊಸದೊಂದು ವಿಭಾಗ ಸೇರ್ಪಡೆ ಆಗಲಿದೆ. ಸಾಹಸವಿನ್ಯಾಸ. ಆರ್‌ಆರ್‌ಆರ್‌ನ ರಾಜಮೌಳಿ ಅವರಿಗಂತೂ ಇನ್ನಿಲ್ಲದ ಖುಷಿಯಂತೆ. ಕಳೆದ ವರ್ಷ ಅವರು ಆಸ್ಕರ್‌ಗೆ ಹೋಗಿದ್ದಾಗ ಅವರ ಚಿತ್ರದ ಸಾಹಸ ವಿನ್ಯಾಸದ ಬಗ್ಗೆ ಅಲ್ಲಿ ಪ್ರಸ್ತಾಪವಿತ್ತಂತೆ!

ಆಂದೋಲನ ಡೆಸ್ಕ್

Recent Posts

ಉಪಸಭಾಪತಿಗೆ ಚಿತ್ರಹಿಂಸೆ ಆರೋಪ : ಐಪಿಎಸ್‌ ಅಧಿಕಾರಿ ಬಂಧನ

ಅಮರಾವತಿ : ಹಿಂದಿನ ವೈಎಸ್‍ಆರ್‍ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರ…

6 hours ago

ಮಾರ್ಚ್‌ 11ರಿಂದ ವೈದ್ಯಾಧಿಕಾರಿಗಳ ಮುಷ್ಕರ : ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11ರಿಂದ…

6 hours ago

ಟ್ರಂಪ್‌ ಜಾಗತಿಕ ಸುಂಕ ರದ್ದು : ವರದಿ

ವಾಷಿಂಗ್ಟನ್ : ಕಾನೂನುಬಾಹಿರವಾಗಿ ಟ್ರಂಪ್ ವಿಧಿಸಿದ್ದ ಆಮದು ಸುಂಕ ಸಂಗ್ರಹವನ್ನ ಅಮೆರಿಕ ನಿಲ್ಲಿಸಲಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ…

7 hours ago

ಸಫಾರಿ ಆದಾಯದ ಶೇ.35 ಭಾಗ ಕಾಡಿನಂಚಿನ ಜನಕಲ್ಯಾಣಕ್ಕೆ ಬಳಕೆ : ಖಂಡ್ರೆ

ಬೆಂಗಳೂರು : ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಗ್ರಾಮಗಳಲ್ಲಿ…

7 hours ago

ವನ್ಯಜೀವಿ ಸಂಚಾರ | ಕಾಡಂಚಿನ ಗ್ರಾಮದ ಮುಖಂಡರಿಗೆ ಮಾಹಿತಿ ರವಾನಿಸಲು ಖಂಡ್ರೆ ಸೂಚನೆ

ಬೆಂಗಳೂರು : ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ…

8 hours ago

ಮನರೇಗಾ ನಾಶ | ಜನರ ಅನ್ನ ಕಿತ್ತುಕೊಳ್ಳುತ್ತಿರುವ ಕೇಂದ್ರ ; ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ : ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್…

8 hours ago