ವರ್ತಮಾನದ ಸಿಕ್ಕುಗಳ ನಡುವೆ ನೆನಪಾಗಿ ಕಾಡುವ ಪ.ಮಲ್ಲೇಶ್
21ನೇ ಶತಮಾನದಲ್ಲಿ ಭಾರತದ ಆರ್ಥಿಕ ಪ್ರಗತಿ ಅಥವಾ ಅಭಿವೃದ್ಧಿ ಎಂಬ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ, ಕಾಣದೆ ಹೋಗುವ ಅಸಂಖ್ಯಾತ (ಬಹುಸಂಖ್ಯಾತ ಎಂದೂ ಹೇಳಬಹುದು) ಜನರು, ವಿಭಿನ್ನ ಜಾತಿ, ಬುಡಕಟ್ಟು, ಸಮುದಾಯ, ಭಾಷೆ ಮತ್ತು ಧರ್ಮಗಳನ್ನು ಪ್ರತಿನಿಧಿಸುವ ಸಮಾಜಗಳು ಈ ಸಂದಿಗ್ಧತೆಗೆ ನೇರ ಮುಖಾಮುಖಿಯಾಗಲಿವೆ.
ಇಲ್ಲಿ ಎದುರಿಸಬೇಕಾದ ಸಿಕ್ಕುಗಳು ಮತ್ತು ಸವಾಲುಗಳು ತಳಮಟ್ಟದ ಸಮಾಜಗಳನ್ನು ನಾಲ್ಕೂ ದಿಕ್ಕುಗಳಿಂದ ಕಾಡುತ್ತಿರುವಂತೆಯೇ, ಈ ಸಮಾಜದಲ್ಲಿ ಅವಕಾಶ ವಂಚಿತರಾಗಿ, ಭವಿಷ್ಯದ ಕನಸು ಕಟ್ಟಲಾಗದೆ ಜೀವನೋಪಾಯದ ಮಾರ್ಗಗಳನ್ನು ಮಾರುಕಟ್ಟೆಯ ಜಗುಲಿಯಲ್ಲೇ ಕಂಡುಕೊಳ್ಳಬೇಕಾದ ಸನ್ನಿವೇಶವನ್ನು ಎದುರಿಸಲಿದ್ದಾರೆ. ಈ ತಳಸಮಾಜಗಳ ತಲ್ಲಣಗಳಿಗೆ ಸ್ಪಂದಿಸುವ, ಸವಾಲುಗಳಿಗೆ ಎದೆಯೊಡ್ಡಿ ನಿಲ್ಲುವ, ಸಿಕ್ಕುಗಳನ್ನು ಬಿಡಿಸುವ, ಹೋರಾಟಗಳು ತಳಮಟ್ಟದಿಂದಲೇ ರೂಪುಗೊಳ್ಳಬೇಕಿದೆ.
ನಿರ್ವಾತದಲ್ಲಿ ನೆನಪಾಗುವ ಜೀವ: ಈ ಕನಸು ಮನದಲ್ಲಿ ಮೂಡಿದ ಕ್ಷಣವೇ ಮೈಸೂರಿನ ಪುರೋಗಾಮಿ ಆಲೋಚನೆಗಳ ಸಮಾಜಕ್ಕೆ ನೆನಪಾಗುವುದು ಕೆಲವು ವರ್ಷಗಳ ಮುನ್ನ ನಮ್ಮೆಲ್ಲರನ್ನೂಬಿಟ್ಟು ಹೋದ ಒಂದು ಹಿರಿಯ ಜೀವ, ಪ.ಮಲ್ಲೇಶ್. ತಾತ್ವಿಕವಾಗಿ ಗಾಂಧಿವಾದಿ, ಲೋಹಿಯಾವಾದಿ, ಸಮಾಜವಾದಿ ಮುಂತಾಗಿ ಬಣ್ಣಿಸಲ್ಪಡುವ ಮಲ್ಲೇಶ್ ಈಎಲ್ಲ ವಾದಗಳನ್ನೂ ಮೀರಿ ನಿಲ್ಲುವಂತಹ ಜನಪರ ಜೀವ ಎನ್ನುವುದು ನಿರ್ವಿವಾದ. ಏಕೆಂದರೆ ಕನ್ನಡ ಹೋರಾಟಗಾರರಾಗಿ, ಗಾಂಧಿ ತತ್ವಗಳಿಗೆ ಕೊನೆಯ ಉಸಿರಿರುವವರೆಗೂ ಬದ್ಧರಾಗಿದ್ದು, ಸಮ ಸಮಾಜದ ಕನಸುಗಳನ್ನು ನನಸು ಮಾಡಲು ನಿರಂತರ ಹೋರಾಟದಲ್ಲಿ ತೊಡಗಿದ್ದ ಮಲ್ಲೇಶ್, ಮೂಲತಃ ಅನ್ಯಾಯ, ಅಸಮಾನತೆ, ದೌರ್ಜನ್ಯ, ತಾರತಮ್ಯ, ಹಿಂಸೆ ಮತ್ತು ಇಂದು ಭಾರತವನ್ನು ಅಷ್ಟ ದಿಕ್ಕುಗಳಿಂದ ಕಾಡುತ್ತಿರುವ ಮತಾಂಧತೆ-ಮತೀಯವಾದ, ಇವುಗಳ ವಿರುದ್ಧ ಸದಾ ದನಿ ಎತ್ತುವ, ವಿಶಾಲ ಹಂದರದ ಕ್ರಿಯಾಶೀಲ ವ್ಯಕ್ತಿಯಾಗಿ ಬಾಳಿದವರು.
ಮಲ್ಲೇಶ್ ಪದೇ ಪದೇ ಏಕೆ ನೆನಪಾಗುತ್ತಾರೆ?: ಇತ್ತೀಚೆಗೆ ಮೈಸೂರಿನಲ್ಲಿ ೯ ವರ್ಷದ ಅಲೆಮಾರಿ ಕೂಸು, ಬಲೂನು ಮಾರುವ ಬಾಲೆ ಅತ್ಯಾಚಾರಕ್ಕೀಡಾಗಿ ಜೀವ ತೆತ್ತ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿಯನ್ನು ಆವರಿಸಿದ್ದ ಸನ್ನಿವೇಶ ನೆನಪಾದಾಗ, ಮಲ್ಲೇಶ್ ಸಹಜವಾಗಿ ಮನದಲ್ಲಿ ಹಾದು ಹೋಗುತ್ತಾರೆ. ಈಗ ವಿಸ್ಮೃತಿಗೆ ಜಾರಿರುವ ಆ ಹತಭಾಗ್ಯ ಬಾಲೆ ನಮ್ಮ ನಡುವೆ ಇನ್ನೂ ಇರುತ್ತಿತ್ತು, ನಮ್ಮ ಪ್ರಜ್ಞೆಯನ್ನು ಕದಡುತ್ತಲೇ ಇರುತ್ತಿತ್ತು. ಇದು ಮಲ್ಲೇಶ್ ಅವರಲ್ಲಿ ನಾವು ಗುರುತಿಸಬೇಕಾದ ವಿಶೇಷ ಲಕ್ಷಣ. ಯಾವುದೇ ರೀತಿಯ ದೌರ್ಜನ್ಯವಾದರೂ, ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾದರೂ, ಕ್ಷಣಮಾತ್ರದಲ್ಲಿ ಸ್ಪಂದಿಸುವುದೇ ಅಲ್ಲದೆ, ನೊಂದ ಜನರಿಗೆ, ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ‘ನಿಮ್ಮೊಡನೆ ನಾನಿದ್ದೇನೆ’ ಎಂಬ ಅಭಯ ನೀಡುತ್ತಿದ್ದ ಮಲ್ಲೇಶ್, ಗುರಿ ತಲುಪುವವರೆಗೂ ಹೋರಾಡುವ ಛಲ, ಕ್ಷಮತೆ ಮತ್ತು ಸಾಮರ್ಥ್ಯ ಹೊಂದಿದ್ದರು.
ಇದನ್ನು ಓದಿ: ಬಾ.ನಾ.ಸುಬ್ರಹ್ಮಣ್ಯ ವಾರದ ಅಂಕಣ: ಭಾರತದ ೫೬ನೇ ಅಂ.ರಾ. ಚಿತ್ರೋತ್ಸವಕ್ಕೆ ಹೊಸ ರೀತಿಯ ಚಾಲನೆ
ಇಲ್ಲಿ ಅವರಿಗೆ ಸಿದ್ಧಾಂತಗಳ, ರಾಜಕಾರಣದ ಅಥವಾ ಜಾತಿ-ಮತಗಳ ಅಡ್ಡ ಬೇಲಿಗಳು ನಗಣ್ಯವಾಗುತ್ತಿದ್ದವು. ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯತೀತತೆ ಈ ಮೌಲ್ಯಗಳಿಗೆ ಸದಾ ನಿಷ್ಠರಾಗಿದ್ದ ಮಲ್ಲೇಶ್, ಕನ್ನಡ ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಸದಾ ತುಡಿಯುತ್ತಿದ್ದವರು. ಅವರ ಆಶಯಗಳು ಕೇವಲ ಹಾಳೆಯ ಮೇಲಿರುತ್ತಿರಲಿಲ್ಲ ಅಥವಾ ಪುಸ್ತಕದಪುಟಗಳಲ್ಲಿ ಅಡಗಿರುತ್ತಿರಲಿಲ್ಲ. ಸದಾ ರಸ್ತೆಯಲ್ಲೇ ಸದ್ದು ಮಾಡುತ್ತಿದ್ದವು.
ತಾತ್ವಿಕವಾಗಿ ಭಿನ್ನ ವ್ಯಕ್ತಿತ್ವ: ಯಾವುದೇ ಜಟಿಲ ಸಮಸ್ಯೆಗಳ ಸುತ್ತ ವಿಚಾರ ಸಂಕಿರಣ ನಡೆದರೂ, ಎಲ್ಲವೂ ಮುಗಿದ ಮೇಲೆ ಅವರು ಕೇಳುತ್ತಿದ್ದ ಪ್ರಶ್ನೆ ‘What Next’’!ಅಂದರೆ ಸಾರ್ವಜನಿಕ ಪ್ರತಿಭಟನೆ, ಧರಣಿ, ಮುಷ್ಕರ, ಹೋರಾಟ ಇವೆಲ್ಲಕ್ಕೆ ಕಾರಣವಾಗುತ್ತಿದ್ದ ಜನಸಾಮಾನ್ಯರ, ಕಾರ್ಮಿಕರ, ರೈತರ, ಮಹಿಳೆಯರ ಹಾಗೂ ಶೋಷಿತ ಸಮುದಾಯಗಳ ಸಂಕಟಗಳು ಕೊನೆಯಾಗುವವರೆಗೂ ಹೋರಾಡುವ ಛಲ ಅವರಲ್ಲಿತ್ತು. ಅದು ಈಡೇರಿತೋ ಇಲ್ಲವೋ ಎನ್ನುವುದು ಮುಖ್ಯವಲ್ಲ ಆದರೆ ಒಂದು ಹೋರಾಟ ತಾರ್ಕಿಕ ಅಂತ್ಯ ತಲುಪುವವರೆಗೂ ಮುಂದುವರಿಸುವ ಕ್ಷಮತೆ ಮತ್ತು ದೃಢ ನಿಶ್ಚಯ ಅವರಲ್ಲಿ ಸದಾ ಇರುತ್ತಿತ್ತು. ಮೈಸೂರಿನ ಎನ್‌ಟಿಎಮ್ ಶಾಲೆಯನ್ನು ಉಳಿಸಲು ನಡೆಸಿದ ೭೫ ದಿನಗಳ ನಿರಂತರ ಮುಷ್ಕರ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸ್ವಾಯತ್ತತೆಗಾಗಿ ನಡೆಸಿದ ದಶಕಕ್ಕೂ ಹೆಚ್ಚು ಕಾಲದ ಹೋರಾಟ, ರಂಗಾಯಣ ಉಳಿಸಿ ಹೋರಾಟ ಅವರ ಈ ಧೋರಣೆಗೆ ಇತ್ತೀಚಿನ ಸಾಕ್ಷಿಗಳು. ಈ ನಿಟ್ಟಿನಲ್ಲಿ ಮಲ್ಲೇಶ್‌ರ ಸಾಫಲ್ಯ – ವೈಫಲ್ಯಗಳನ್ನು ಹೆಕ್ಕಿ ತೆಗೆಯಬೇಕಿಲ್ಲ. ದುಷ್ಟ ಸಾಂಸ್ಕ ತಿಕ ಶಕ್ತಿಗಳ ವಿರುದ್ಧ, ಸರ್ಕಾರಗಳ ವಿರುದ್ಧ ಹೋರಾಟಗಳು ನಡೆದಾಗ ಕಿಂಚಿತ್ತೂ ಹಿಂಜರಿಯದೆ, ಯಾವುದೇ ಸೈದ್ಧಾಂತಿಕ – ತಾತ್ವಿಕ ಭಿನ್ನತೆಗಳನ್ನೂ ಲೆಕ್ಕಿಸದೆ, ಕ್ರಿಯಾಶೀಲರಾಗಿ ಹಗಲು ರಾತ್ರಿ ಎನ್ನದೆ ಮುನ್ನುಗ್ಗುತ್ತಿದ್ದುದನ್ನು ಗೋಕಾಕ್ ಚಳವಳಿಯಿಂದ ಎನ್‌ಟಿಎಮ್‌ಎಸ್‌ವರೆಗಿನ ಚರಿತ್ರೆಯಲ್ಲಿ ಗುರುತಿಸಬಹುದು. ಡಿಜಿಟಲ್ ಯುಗದ ಯುವ ಸಮಾಜ ಈ ಹೆಜ್ಜೆಗಳನ್ನು ಗುರುತಿಸಬೇಕಿದೆ.
ಸೋಲಿಗೆ ಎದೆಗುಂದದೆ, ಗೆಲುವನ್ನು ಸಂಭ್ರಮಿಸದೆ, ನಾಯಕತ್ವದ ಫಲಾಪೇಕ್ಷೆಗಳಿಲ್ಲದೆ, ಎಲ್ಲರೊಳಗೊಂದಾಗಿ, ಅಂತಿಮವಾಗಿ ನ್ಯಾಯವೊಂದೇ ಗುರಿ ಎಂಬ ಮನೋಭಾವದೊಡನೆ ಹೋರಾಟದ ಅಖಾಡಕ್ಕೆ ಧುಮುಕುತ್ತಿದ್ದ ಮಲ್ಲೇಶ್ ಈ ದೃಷ್ಟಿಯಿಂದ ಆದರ್ಶಪ್ರಾಯರೂ, ಅನುಕರಣೀಯರೂ ಆಗುತ್ತಾರೆ. ಮಲ್ಲೇಶ್ ಭೌತಿಕವಾಗಿ ಇಲ್ಲವಾಗಿದ್ದಾರೆ ಅಷ್ಟೆ. ಅವರ ಕನಸುಗಳ ಮೂಲಕ ನಮ್ಮ ನಡುವೆ ಉಸಿರಾಡುತ್ತಿದ್ದಾರೆ. ಈ ಉಸಿರು ನಿಲ್ಲುವುದಿಲ್ಲ.
” ಮೈಸೂರಿನಲ್ಲಿ ಪುರೋಗಾಮಿ ಸಂಘಟನೆಗಳು ಪ.ಮಲ್ಲೇಶ್ ಅವರನ್ನು ಸ್ಮರಿಸುವ ವಿಚಾರಸಂಕಿರಣ ಕಾರ್ಯಕ್ರಮವನ್ನು ನ.೨೧ರಂದು ಹಮ್ಮಿಕೊಂಡಿವೆ. ಈ ಸಮಾವೇಶದ ಆಶಯವೆಂದರೆ, ಮಲ್ಲೇಶ್ ಅವರು ಕಟ್ಟಿದ ಕನಸುಗಳನ್ನು, ಈಡೇರಿಸಲಾಗದೆ ಬಿಟ್ಟುಹೋದ ಆಶಯಗಳನ್ನು ಸಾಕಾರಗೊಳಿಸುವುದೇ ಆಗಿದೆ.”
–ನಾ.ದಿವಾಕರ
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…