ಮೈಸೂರಿನಲ್ಲಿ ಇದ್ದದ್ದು 93 ಟಾಕೀಸ್‌ಗಳು!

-ಬಾ.ನಾ.ಸುಬ್ರಹ್ಮಣ್ಯ

ಚಲನಚಿತ್ರವೊಂದರ ನಿಜವಾದ ಅನುಭವ ಆಗುವುದು ಚಿತ್ರಮಂದಿರದಲ್ಲಿ ಅದನ್ನು ನೋಡಿದಾಗಲೇ. ಹಿಂದಿನ ದಿನಗಳಲ್ಲಿ ಅಗ್ಗದಲ್ಲಿ ದೊರೆಯುವ ಮನರಂಜನೆ ಎಂದರೆ ಸಿನಿಮಾ ಮಾತ್ರವಾಗಿತ್ತು. ಅದನ್ನು ನೋಡಲು ಅದು ಪ್ರದರ್ಶನ ಆಗುವ ಚಿತ್ರಮಂದಿರಕ್ಕೇ ಹೋಗಬೇಕಿತ್ತು. ಆಗೆಲ್ಲ ಕುಟುಂಬ ಸಮೇತ ಸಿನಿಮಾ ನೋಡಲು ಹೋಗುವುದು ವಾಡಿಕೆಯಾಗಿತ್ತೆನ್ನಿ. ಮೂಕಿ ಚಿತ್ರಗಳಿಂದ ಮೊದಲ್ಗೊಂಡು, ಕಳೆದ ಸಹಸ್ರಮಾನದ ಕೊನೆಯ ಶತಮಾನದ ಆರಂಭದಿಂದ ಪ್ರೇಕ್ಷಕರನ್ನು ರಂಜಿಸಿದ ಚಿತ್ರಮಂದಿರಗಳು ಇತಿಹಾಸದ ಪುಟ ಸೇರಲಿವೆಯೇ ಎನ್ನುವ ಅನುಮಾನ ಈಗ ಎದ್ದರೆ ಆಶ್ಚರ್ಯವಿಲ್ಲ.

ಮೈಸೂರಿನ ‘ಸರಸ್ವತಿ’ ಚಿತ್ರಮಂದಿರ ಅಂಕದ ಪರದೆ ಇಳಿಬಿಡಲು ನಿರ್ಧರಿಸಿದ್ದು ಈ ಪ್ರಸ್ತಾಪಕ್ಕೆ ಕಾರಣ. ಈಗ ಸಾಂಸ್ಕೃತಿಕ ನಗರಿಯ ಯುವಸಮೂಹವೊಂದು ‘ಚಿತ್ರಮಂದಿರ ಉಳಿಸಿ’ ಅಭಿಯಾನದಲ್ಲಿ ತೊಡಗಿಕೊಂಡಿದೆ. ಶಾಂತಲಾ, ಲಕ್ಷ್ಮೀ ನಂತರ ಈ ಸರಸ್ವತಿ ಚಿತ್ರಮಂದಿರ ಮುಚ್ಚಿದ ಹಿನ್ನೆಲೆಯಲ್ಲಿ ಈ ಅಭಿಯಾನ. ಕೊರೊನಾ ಕಾರಣದಿಂದ ಪ್ರದರ್ಶನ ಸ್ಥಗಿತಗೊಂಡಿರುವುದು ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.

ಕೊರೊನಾ ದಿನಗಳಲ್ಲಿ ಅತ್ಯಂತ ಅವಜ್ಞೆಗೆ ಒಳಗಾದ ಕ್ಷೇತ್ರ ಚಲನಚಿತ್ರೋದ್ಯಮ. ಅದು ಆದ್ಯತೆಯ ಕ್ಷೇತ್ರವಲ್ಲ ನಿಜ, ಆದರೆ, ಅಲ್ಲಿ ಕೆಲಸ ಮಾಡುವವರ ಅಗತ್ಯಗಳು, ಅನ್ನ, ಆರೋಗ್ಯ, ವಸತಿ ಎಲ್ಲವೂ ಸೇರಿದಂತೆ, ಉಳಿದ ಆದ್ಯತಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಷ್ಟೇ ಇರುತ್ತದೆ. ಚಲನಚಿತ್ರ ಕಾರ್ಮಿಕರಿಗೆ, ಚಿತ್ರೀಕರಣ ಸ್ಥಗಿತವಾದ ನಂತರ, ಕಳೆದ 18-20 ತಿಂಗಳಲ್ಲಿ ಸರ್ಕಾರ ನೀಡಿದ ನೆರವು, ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ.

ಚಿತ್ರಮಂದಿರಗಳ ಮಾಲೀಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದರು. ವಿಶೇಷವಾಗಿ ನೀರು, ವಿದ್ಯುತ್ ಶುಲ್ಕ ರಿಯಾಯಿತಿ, ಇತರ ತೆರಿಗೆಯ ಮನ್ನಾ ಇತ್ಯಾದಿ. ಅವುಗಳಲ್ಲಿ ಎಲ್ಲವನ್ನೂ ಸರ್ಕಾರ ನೀಡಿಲ್ಲ. ಇನ್ನೂ 50% ಆಸನ ಸಂಖ್ಯೆಯ ಪ್ರವೇಶಾವಕಾಶದೊಂದಿಗೆ ಚಿತ್ರಮಂದಿರಗಳು ತೆರೆಯಲು ಅವಕಾಶ ನೀಡಲಾಗಿದೆ. ಇಷ್ಟರಲ್ಲೇ ಪೂರ್ಣಪ್ರಮಾಣದಲ್ಲಿ ಪ್ರವೇಶಾವಕಾಶ ನೀಡಲಾಗುವುದು ಎನ್ನುತ್ತಿವೆ ಮೂಲಗಳು.

ವರ್ಚಸ್ವೀ ನಟರ ಚಿತ್ರಗಳು ಬಿಡುಗಡೆಯಾಗದೆ ಹೋದರೆ ಚಿತ್ರಮಂದಿರಗಳ ಗಲ್ಲಾಪೆಟ್ಟಿಗೆ ತುಂಬುವುದು ಕಷ್ಟ ಎನ್ನುವುದು ಪ್ರದರ್ಶಕರ ಅನುಭವದ ಮಾತು. ಹಾಗಾಗಿ, ಈಗಾಗಲೇ ಅನುಮತಿ ಇದ್ದರೂ ಚಿತ್ರಮಂದಿರಗಳು ಎಲ್ಲವೂ ತೆರೆದಿಲ್ಲ. ಇದು ಏಕಪರದೆಯ ಚಿತ್ರಮಂದಿರಗಳ ಕುರಿತ ಮಾತು.

ಏಕಪರದೆಯ ಚಿತ್ರಮಂದಿರಗಳು ಮುಚ್ಚಲು ಆರಂಭವಾಗಿರುವುದು ಕೊರೊನಾ ದಿನಗಳ ಕಾರಣದಿಂದಲ್ಲ. ಈ ಸಹಸ್ರಮಾನದ ಆರಂಭದ ವೇಳೆಗೆ ಕರ್ನಾಟಕದಲ್ಲಿ ಒಟ್ಟು 1,250ಕ್ಕೂ ಹೆಚ್ಚು  ಚಿತ್ರಮಂದಿರಗಳಿದ್ದವು. ಅವುಗಳಲ್ಲಿ ಸುಮಾರು 650ಕ್ಕೂ ಖಾಯಂ ಚಿತ್ರಮಂದಿರಗಳು ಹಾಗೂ ೬೦೦ಕ್ಕೂ ಹೆಚ್ಚು ಸಂಚಾರಿ ಮತ್ತು ಅರೆ ಖಾಯಂ ಚಿತ್ರಮಂದಿರಗಳು. ಬೆಂಗಳೂರು, ದಕ್ಷಿಣ ಕನ್ನಡ, ತುಮಕೂರು, ಮೈಸೂರು, ಬೆಳಗಾವಿ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ತಲಾ 40ಕ್ಕಿಂತಲೂ ಹೆಚ್ಚು ಖಾಯಂ ಚಿತ್ರಮಂದಿರಗಳಿದ್ದರೆ ಕೊಡಗು, ಕಲಬುರ್ಗಿ, ಬೀದರ್‌ಗಳಲ್ಲಿ ತೀರಾ ಕಡಿಮೆಯೆನಿಸುವ ಹತ್ತು- ಹದಿನೈದು ಖಾಯಂ ಚಿತ್ರಮಂದಿರಗಳಿದ್ದವು.

ಬೆಂಗಳೂರು ಬಿಟ್ಟರೆ ಪ್ರಮುಖವಾದ ಜಿಲ್ಲೆ ಮೈಸೂರು. ಆಗ ಇಲ್ಲಿ 41 ಖಾಯಂ ಹಾಗೂ ಅರೆಖಾಯಂ ಚಿತ್ರಮಂದಿರಗಳಿದ್ದವು. ಜೊತೆಗೆ 52 ತಾತ್ಕಾಲಿಕ ಚಿತ್ರಮಂದಿರಗಳೂ ಸೇರಿ ಒಟ್ಟು 93 ಚಿತ್ರಮಂದಿರಗಳಿದ್ದವು. ಅವುಗಳಲ್ಲಿ ಕೆಲವು ನವೀಕರಣ ಆಗದೆ, ಇನ್ನೇನೋ ಕಾರಣದಿಂದ ಮುಚ್ಚಿಹೋದವು.

ಕರ್ನಾಟಕದಲ್ಲಿ ಈಗ ಇರುವ ಚಿತ್ರಮಂದಿರಗಳ ಸಂಖ್ಯೆ ಸುಮಾರು 600 ಮಾತ್ರ. ಉಳಿದವುಗಳಲ್ಲಿ ಕೆಲವು ಮುಚ್ಚಿವೆ. ಕೆಲವು ಮದುವೆ ಛತ್ರಗಳೋ ಸಮುದಾಯ ಭವನಗಳೋ ಆಗಿವೆ. ಕೆಲವೆಡೆ ಮಾಲ್‌ಗಳು ತಲೆಯೆತ್ತಿವೆ.

ಯಾವುದೇ ಹೊಸ ಕನ್ನಡ ಚಿತ್ರ ಬಿಡುಗಡೆಯಾಗುವಾಗ ಬೆಂಗಳೂರಿನ ಕೆಂಪೇಗೌಡ ರಸ್ತೆಯ ಒಂದು ಪ್ರಮುಖ ಚಿತ್ರಮಂದಿರದಲ್ಲಿ ಅದು ತೆರೆಗೆ ಬರಲೇಬೇಕು. ಅದು ನಿರ್ಮಾಪಕ/ವಿತರಕರ ಪ್ರತಿಷ್ಠೆಯೂ ಹೌದು. ಆಗ ಆ ರಸ್ತೆಯ ಇಕ್ಕೆಲಗಳಲ್ಲಿ 20ಕ್ಕೂ ಹೆಚ್ಚು ಚಿತ್ರಮಂದಿರಗಳಿದ್ದವು. ಅವುಗಳಲ್ಲಿ ಈಗ ಉಳಿದಿರುವವು ಮೇನಕಾ, ಸ್ಟೇಟ್ಸ್, ಅಭಿನಯ, ಸಂತೋಷ್, ನರ್ತಕಿ, ಸಪ್ನಾ, ತ್ರಿವೇಣಿ, ಅಪರ್ಣ, ಮೂವಿಲ್ಯಾಂಡ್ ಮತ್ತು ಶಾರದಾ ಮಾತ್ರ. ಅವುಗಳಲ್ಲಿ ಹೆಚ್ಚಿನ ಚಿತ್ರಮಂದಿರಗಳು ತಾರಾ ವರ್ಚಸ್ಸಿನ ನಟರ ಚಿತ್ರಗಳ ಬಿಡುಗಡೆಗೆ ಕಾದಿವೆ. ಉಳಿದಂತೆ, ಪಲ್ಲವಿ, ಸಾಗರ್, ಕೆಂಪೇಗೌಡ, ಪ್ರಭಾತ್, ಅಲಂಕಾರ್, ಕಲ್ಪನಾ, ತ್ರಿಭುವನ್, ಮೆಜೆಸ್ಟಿಕ್, ಹಿಮಾಲಯ, ಗೀತಾ, ಸಂಗಂ, ಕಪಾಲಿ ನೆಲಸಮವಾಗಿವೆ. ಅತ್ತ ಲಿಡೋ, ಸ್ವಸ್ತಿಕ್, ಸೆಂಟ್ರಲ್, ಗೀತಾಂಜಲಿ ನೆಲಸಮವಾಗಿ ಬೇರೆ ಕಟ್ಟಡಗಳೆದ್ದಿವೆ.

ಕೆಂಪೇಗೌಡ ರಸ್ತೆಯ ಅಲಂಕಾರ್ ಮತ್ತು ಕಲ್ಪನಾ ಚಿತ್ರಮಂದಿರಗಳನ್ನು ಮುಚ್ಚದಂತೆ ಪ್ರತಿಭಟನೆಗಳಾದವು. ಕೊನೆಗೆ ಸಂಬಂಧಪಟ್ಟ ಮಾಲೀಕರು, ಅಲ್ಲಿ ತಲೆ ಎತ್ತುವ ಹೊಸ ಕಟ್ಟಡದಲ್ಲಿ ಚಿತ್ರಮಂದಿರಗಳಿಗೆ ಕೂಡ ಅವಕಾಶ ನೀಡುವ ಹುಸಿ ಆಶ್ವಾಸನೆ ನೀಡಿ ಪ್ರತಿಭಟನಾಕಾರರನ್ನು ಸಾಗಹಾಕಿದರು. ಕೆಂಪೇಗೌಡ ರಸ್ತೆಯಲ್ಲಿ ನಿವೇಶನಕ್ಕೆ ಚಿನ್ನದ ಬೆಲೆ!

ಮೈಸೂರಿನಲ್ಲಿದ್ದ ಚಿತ್ರಮಂದಿರಗಳಲ್ಲಿ ರಾಜ್‌ಕಮಲ್, ಪದ್ಮಾ, ಪ್ರಭಾ, ಗಾಯತ್ರಿ, ಉಮಾ ಡಿಲಕ್ಸ್, ಲಿಡೋ, ತಿಬ್ಬಾದೇವಿ ಮತ್ತು ಸಂಗಮ್ ಚಿತ್ರಮಂದಿರಗಳು ಸದ್ಯ ಪ್ರದರ್ಶನಕ್ಕೆ ಇರುವವು. ಕೊರೊನಾ ಮೊದಲ ಅಲೆಯ ವೇಳೆ ಶಾಂತಲಾ ಮುಚ್ಚಲಾಯಿತು. ನಂತರ ಲಕ್ಷ್ಮಿ. ಇದೀಗ ಸರಸ್ವತಿಯ ಸರದಿ.

ಶಾಂತಲಾ ಚಿತ್ರಮಂದಿರವನ್ನು ಮುಚ್ಚಲು ಕೊರೊನಾ ಮಾತ್ರ ಕಾರಣವಾಗಿರಲಿಲ್ಲ ಎನ್ನಲಾಗಿದೆ. ಆ ಜಾಗದಲ್ಲಿ ಚಿತ್ರಮಂದಿರ ಕಟ್ಟಲು ಮಾಡಿಕೊಂಡ ಗುತ್ತಿಗೆ ಕರಾರು ಅವ ಮುಗಿದಿತ್ತು. ಅದನ್ನು ನವೀಕರಿಸಲು ಸಂಬಂಧಪಟ್ಟವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಅದನ್ನು ಮುಚ್ಚಲಾಗಿದೆ. ಸರಸ್ವತಿ ಚಿತ್ರಮಂದಿರದ ವಿಷಯಕ್ಕೆ ಬರುವುದಾದರೆ, ಅಲ್ಲಿ ಚಿತ್ರಮಂದಿರ ಕಟ್ಟಿಸಿದವರು ತಮ್ಮಣ್ಣಗೌಡರು. ಅಲ್ಲಿ ಪ್ರದರ್ಶನ ವ್ಯವಸ್ಥೆ ಜವಾಬ್ದಾರಿ ಪ್ರಭಾ ಚಿತ್ರಮಂದಿರದ ಗಣೇಶ್ ಅವರದ್ದು.

ಸಾಮಾನ್ಯವಾಗಿ ಚಿತ್ರಮಂದಿರಗಳ ಮಾಲೀಕರೇ ಅಲ್ಲಿ ಚಿತ್ರಗಳ ಪ್ರದರ್ಶನ ವ್ಯವಸ್ಥೆ ಮಾಡುವುದು ಅಪರೂಪ. ಕೆಲವು ಅಪವಾದಗಳ ಹೊರತಾಗಿ, ಬೇರೆಯವರು ಗುತ್ತಿಗೆಗೆ ಅವುಗಳನ್ನು ಪಡೆದು ನಡೆಸುತ್ತಿರುತ್ತಾರೆ. ಇಲ್ಲೂ ಅಷ್ಟೇ. ಗಣೇಶ್ ಅವರು ಕೆಲವು ವರ್ಷಗಳ ಕಾಲ ಅದನ್ನು ಗುತ್ತಿಗೆಗೆ ಪಡೆದಿದ್ದರು. ನಂತರ ‘ಉದಯರಂಗ’ದ ಮಾಲೀಕರು, ವಿತರಕರೂ ಆದ ಸುಬ್ರಹ್ಮಣ್ಯಂ ಅವರು ವಹಿಸಿಕೊಂಡರು. ತಮ್ಮೂರು ಮಳವಳ್ಳಿಯಲ್ಲಿ ಮಹಾಲಕ್ಷ್ಮಿ, ರಾಜರಾಜೇಶ್ವರಿ ಚಿತ್ರಮಂದಿರಗಳನ್ನು ಹೊಂದಿದ್ದ ಅವರು ಮೈಸೂರಿನ ಈ ಚಿತ್ರಮಂದಿರವನ್ನೂ ಪಡೆದುಕೊಂಡರು.

ವಾರಕ್ಕೆ 45,000 ರೂ.ಗಳಿಂದ ಆರಂಭವಾದ ಬಾಡಿಗೆ, ಕೊರೊನಾ ಕಾರಣದಿಂದ ಪ್ರದರ್ಶನ ಸ್ಥಗಿತವಾಗುವ ವೇಳೆಗೆ ಎರಡೂವರೆ ಲಕ್ಷ ರೂ.ಗಳಿಗೆ ಹೆಚ್ಚಳವಾಗಿತ್ತು. ಮೂಲಗಳ ಪ್ರಕಾರ, ಆ ಜಾಗದ ಮಾಲೀಕರು ಸುಬ್ರಹ್ಮಣ್ಯಂ ಅವರಿಗೆ ಅದನ್ನು ಕೊಂಡುಕೊಳ್ಳಲು ಒತ್ತಾಯಿಸಿದ್ದರಂತೆ. ಎಲ್ಲೆಡೆ ನಿವೇಶನೋದ್ಯಮದ ಏರುಗತಿ, ಚಿತ್ರೋದ್ಯಮದ ಪಾಲಿಗೆ, ವಿಶೇಷವಾಗಿ ಚಿತ್ರಮಂದಿರಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಅದು ಬೆಂಗಳೂರಿರಲಿ, ಮೈಸೂರೇ ಇರಲಿ, ಚಿತ್ರಮಂದಿರ ಕೆಡವಿ ಮಾಲ್‌ಗಳನ್ನೋ, ಅಥವಾ ಅಪಾರ್ಟ್‌ಮೆಂಟ್‌ಗಳನ್ನೋ ಕಟ್ಟಿಸಿದರೆ, ಕೋಟಿಗಟ್ಟಲೆ ದುಡಿಮೆ, ಇಲ್ಲವೇ ಲಕ್ಷಗಟ್ಟಲೆ ಬಾಡಿಗೆ ಬರುತ್ತದೆ, ಹೆಚ್ಚಿನ ತಲೆನೋವು ಇಲ್ಲ ಎನ್ನುವುದು ಈ ಬೆಳವಣಿಗೆಯನ್ನು ಗಮನಿಸುತ್ತಿರುವವರ ಮಾತು. ಸರಸ್ವತಿ ಚಿತ್ರಮಂದಿರ ಮತ್ತು ಅದರ ಸುತ್ತಲಿನ ಜಾಗ ಒಂದು ಎಕರೆಯಷ್ಟಿದ್ದು, 30-35 ಕೋಟಿ ರೂ. ಬಾಬತ್ತು ಎನ್ನಲಾಗುತ್ತಿದೆ.

ನಡುಮನೆಗೆ ಬಂದ ಕಿರುತೆರೆ, ಡಿಜಿಟಲ್ ಮೂಲಕ ಬೆರಳ ತುದಿಯಲ್ಲಿ ಸಿಗುವ ಮನರಂಜನೆ, ದುಬಾರಿ ಜೀವನ ನಿರ್ವಹಣಾ ವೆಚ್ಚ, ಇವೆಲ್ಲವುಗಳ ಕಾರಣದಿಂದ ಪ್ರೇಕ್ಷಕ ಚಿತ್ರಮಂದಿರಗಳಿಂದ ದೂರ ಹೋಗುತ್ತಿದ್ದಾನೆ ಎನ್ನುವುದು ಒಂದೆಡೆಯಾದರೆ, ಕಾರ್ಪೊರೇಟ್ ಲೋಕ ಏಕಪರದೆಯ ಚಿತ್ರಮಂದಿರಗಳಿಗೆ ಪರ್ಯಾಯವಾಗಿ ಮಲ್ಟಿಪ್ಲೆಕ್ಸ್‌ಗಳನ್ನು ತೋರಿಸುತ್ತಿದೆ. ಸಿನಿಮಾ, ಧಾರಾವಾಹಿ, ನಾಟಕಗಳು ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಮನೆಯಲ್ಲೇ ಕುಳಿತು ನೋಡಲು ಒಟಿಟಿ ತಾಣಗಳು ಅನುವು ಮಾಡಿಕೊಡುತ್ತಿವೆ. ಇವೆಲ್ಲವೂ, ತಮ್ಮ ನಿವೇಶನಗಳನ್ನು ಇನ್ನಷ್ಟು ಲಾಭದಾಯಕವಾಗಿ ಮಾಡಲು ಬಯಸುವ ಮಂದಿಗೆ, ‘ರೋಗಿ ಬಯಸಿದ್ದೂ  ಹಾಲು- ಅನ್ನ, ವೈದ್ಯ ಹೇಳಿದ್ದೂ ಹಾಲು- ಅನ್ನ’ ಎಂಬಂತಾಗಿದೆ.

ಚಿತ್ರಮಂದಿರಗಳು ಮುಚ್ಚಿದಾಗ, ನೇರವಾಗಿ ಮತ್ತು ಪರೋಕ್ಷವಾಗಿ ಅಲ್ಲಿ ಕೆಲಸ ಮಾಡುವ ಮಂದಿ ಕೆಲಸ ಕಳೆದುಕೊಳ್ಳುತ್ತಾರೆ. ಸಿನಿಮಾದ ನಿಜ ಅನುಭವ ಪ್ರೇಕ್ಷಕನಿಗೆ ಎರವಾಗುತ್ತದೆ. ಸಿನಿಮಾ ಪರಂಪರೆಯ ಒಂದಂಗ ಇಲ್ಲದಂತಾಗಿ ಬಿಡುತ್ತದೆ.

ಜನತಾ ಚಿತ್ರಮಂದಿರಗಳ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಆರ್ಥಿಕ ನೆರವು ನೀಡುವ ಯೋಜನೆ ಈಗ ಚಾಲ್ತಿಯಲ್ಲಿದೆ. ಒಂದು ಪರದೆಯ ಚಿತ್ರಮಂದಿರವಾದರೆ 50 ಲಕ್ಷ ರೂ., ಎರಡಿದ್ದರೆ ಒಂದು ಕೋಟಿ ರೂ. ನೆರವು ಇದೆ. ಹಾಗೆಯೇ ಹಳೆಯ ಚಿತ್ರಮಂದಿರಗಳನ್ನು ಮೇಲ್ದರ್ಜೆಗೇರಿಸಲು ಸಹಾಯಧನವಿದೆ. ಮುಚ್ಚುತ್ತಿರುವ ಏಕಪರದೆಯ ಚಿತ್ರಮಂದಿರಗಳನ್ನು ಉಳಿಸಲು, ಅವರ ಸಮಸ್ಯೆಗಳನ್ನು ಆಲಿಸಲು ಸರ್ಕಾರ ಕಿವಿಯಾಗಬೇಕು. ಅದನ್ನು ಪರಿಹರಿಸಲು ಮುಂದಾಗಬೇಕು. ತೆರಿಗೆ ವಿನಾಯಿತಿ, ನೀರು, ವಿದ್ಯುತ್ ಶುಲ್ಕ ಮನ್ನಾದಂತಹ ಬೇಡಿಕೆ ಈಡೇರಿಸಬೇಕು.

ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳಿಗೆ ಇದ್ದ ಸಂಪೂರ್ಣ ಮನರಂಜನಾ ತೆರಿಗೆ ವಿನಾಯಿತಿ ಈಗಿಲ್ಲ. ಜಿಎಸ್‌ಟಿ ಪ್ರವಾಹದಲ್ಲಿ ಅದು ಕೊಚ್ಚಿಹೋಗಿದೆ. ರಾಜ್ಯಕ್ಕೆ ಈ ತೆರಿಗೆಯಿಂದ ಬರುವ ಪಾಲನ್ನು ಚಿತ್ರೋದ್ಯಮಕ್ಕೆ ಬಳಸಲು, ಮತ್ತಿತರ ಸೌಲಭ್ಯಗಳನ್ನು ನೀಡುವ ಕುರಿತಂತೆ ತಜ್ಞರ ಜೊತೆ ಚರ್ಚಿಸಿ ಸಲಹೆ ಪಡೆದು ಸರ್ಕಾರ ಕೂಡಲೇ ಕಾರ್ಯೋನ್ಮುಖವಾಗಬೇಕಾಗಿದೆ.

 

× Chat with us