ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ
ಅದೇಕೋ ಏನೋ ಕರ್ನಾಟಕಕ್ಕೂ ಇಲ್ಲಿರುವ ಮಲ್ಟಿಪ್ಲೆಕ್‌ಳಿಗೂ ಆಗಿ ಬರುತ್ತಿಲ್ಲ ಎನಿಸುತ್ತದೆ. ಅದು ಚಿತ್ರೋದ್ಯಮಕ್ಕೆ ಮಾತ್ರವಲ್ಲ, ಸರ್ಕಾರದ ವಿಷಯದಲ್ಲೂ ಅಷ್ಟೇ. ಸರ್ಕಾರ ಚಿತ್ರೋದ್ಯಮಕ್ಕೆ, ಸಾಂಸ್ಕೃತಿಕ ಕ್ಷೇತ್ರಕ್ಕ ಸಂಬಂಧಿಸಿದಂತೆ ಯಾವುದೇ ಕಾಯಿದೆ ತಂದರೂ ಅದರ ವಿರುದ್ಧ ತಡೆಯಾe ತರುವುದರಲ್ಲಿ ಇವು ಮುಂಚೂಣಿಯಲ್ಲಿರುತ್ತವೆ. ಅದರ ಬಗ್ಗೆ ನಂತರ ಗಮನಿಸೋಣ.
ಯಾವುದೇ ಹೊಸ ಚಿತ್ರ ತೆರೆಗೆ ಬರುವ ವೇಳೆ ಅದರ ಪ್ರದರ್ಶನ ವೇಳೆಯ ಕುರಿತಂತೆ ಕನ್ನಡ ಚಿತ್ರಗಳ ನಿರ್ಮಾಪಕರು ಯಾರಾದರೂ ದೂರದೆ ಇದ್ದದ್ದು ಇದೆಯೇ? ಸಾಮಾನ್ಯವಾಗಿ, ಕನ್ನಡ ಚಿತ್ರಗಳಿಗೆ ನೀಡುವ ಪ್ರದರ್ಶನ ವೇಳೆ, ಜನಸಾಮಾನ್ಯರು ಬಾರದೆ ಇರುವ ಹೊತ್ತು ಎಂದು ಆರೋಪಿಸುವವರೇ ಹೆಚ್ಚು. ಇದು ನಿಜವೂ ಹೌದು ಎನ್ನುತ್ತಿದೆ ಗಾಂಧಿನಗರ. ಇದಕ್ಕಾಗಿಯೇ, ಮಹಾರಾಷ್ಟ್ರ ಸರ್ಕಾರ, ಮರಾಠಿ ಚಿತ್ರಗಳಿಗೆ ಪ್ರದರ್ಶನ ವೇಳೆ ಪ್ರತಿದಿನ ಇಂತಹದೇ ಹೊತ್ತಿಲ್ಲಿ ಇರಬೇಕು ಎನ್ನುವ ಆದೇಶ ಮಾಡಿದೆ, ಮಾತ್ರವಲ್ಲ, ಪ್ರತಿ ಮಲ್ಟಿಪ್ಲೆಕ್ಸ್ ಕೂಡಾ ಕಡ್ಡಾಯವಾಗಿ ಈ ನಿಯಮ ಪಾಲಿಸಬೇಕು, ಇಲ್ಲದೆ ಹೋದರೆ, ಅವುಗಳ ಲೈಸನ್ಸ್ ನವೀಕರಣ ಮಾಡುವುದಿಲ್ಲ ಎಂದು ಹೇಳಿದೆ. ಅಲ್ಲಿನ ಸರ್ಕಾರ ಹೇಳಿದಂತೆ ಮಾಡುತ್ತದೆ. ಇತ್ತೀಚೆಗೆ, ಮುಂಬೈಯಲ್ಲಿ ಎಲ್ಲ ಆಟೋ ಚಾಲಕರೂ ಮರಾಠಿ ಕಲಿತಿರಬೇಕು, ವ್ಯವಹರಿಸಬೇಕು ಎಂದು ಹೇಳಿತ್ತು. ಮೊನ್ನೆ ಸೆಪ್ಟೆಂಬರ್ ಒಂದರಿಂದ ಆಟೋ ಚಾಲಕರನ್ನು ಪರೀಕ್ಷಿಸಲಾಗುತ್ತಿದೆ. ಮರಾಠಿ ಬಾರದ ಚಾಲಕರ ಲೈಸನ್ಸ್ ರದ್ದು ಮಾಡುವ ಕೆಲಸ ಆರಂಭವಾಗಿರುವುದಾಗಿ ಹೇಳಲಾಗಿದೆ. ಕರ್ನಾಟಕದಲ್ಲಿ ಅಂತಹ ಕಲ್ಪನೆ ಕೂಡಾ ಸಾಧ್ಯವಿಲ್ಲ. ‘ಕನ್ನಡ್ ಗೊತ್ತಿಲ್ಲ’, ‘ಹಿಂದಿ ಬೋಲೋ’ಗಳ ನಡುವೆ ಅವರದೇ ಭಾಷೆಗಳ ಮೊರೆಹೋಗುವ ನಮ್ಮ ಮಂದಿಯ ದರ್ಬಾರು ಕಡಿಮೆ ಏನಲ್ಲ.
ಏಕಪರದೆಯ ಚಿತ್ರಮಂದಿರಗಳ ದಿನಗಳಲ್ಲಿ ನಿಗದಿತ ಬಾಡಿಗೆ ಪದ್ಧತಿ ಇತ್ತು. ಚಿತ್ರಮಂದಿರದ ಗರಿಷ್ಟ ಗಳಿಕೆಯ ಶೇಕಡಾ ೨೦- ೨೨ ಪ್ರದರ್ಶಕರು ತಮ್ಮ ಬಾಡಿಗೆಯಾಗಿ ತೆಗೆದುಕೊಂಡರೆ, ಉಳಿದ ಭಾಗ ನಿರ್ಮಾಪಕ/ಹಂಚಿಕೆದಾರರ ಪಾಲು. ಆ ದಿನಗಳಲ್ಲಿ ಪ್ರದರ್ಶಕರೇ, ಜಾಹೀರಾತು, ಚಿತ್ರಮಮದಿರಗಳ ಶೃಂಗಾರವೇ ಮೊದಲಾದ ಕೆಲಸಗಳ ಜವಾಬ್ದಾರಿಯನ್ನೂ ವಹಿಸುತ್ತಿದ್ದರು. ಬಿಡಿ, ಅವು ಚಿತ್ರವೊಂದರ ನಿರ್ಮಾಣ ಹಂತದ ಪ್ರದರ್ಶಕರು ವಿತರಕರ ಮೂಲಕ ನಿರ್ಮಾಪಕರಿಗೆ ಮುಂಗಡ ನೀಡುತ್ತಿದ್ದ ದಿನಗಳು. ಮುಂದೆ ಅದು ಗಳಿಕೆಯಲ್ಲಿ ತಮ್ಮ ಬಾಡಿಗೆ ಪಡೆಯುವ ದಿನಗಳು. ಆಗಲೂ ಅದು ಶೇ. ೧/೩ಗಿಂತ ಹೆಚ್ಚು ಎಂದೂ ಆಗಿರಲಿಲ್ಲ.
ನಂತರ ಬಹುಪರದೆಯ ಮಲ್ಟಿಪ್ಲೆಕ್ಸ್‌ಗಳು ಒಂದೊಂದಾಗಿ ಬರತೊಡಗಿದವು. ಆಗಿನ್ನೂ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆ- ಇಂಡಿಯಾ ಸ್ಥಾಪನೆ ಆಗಿರಲಿಲ್ಲ. ಕನ್ನಡ ಮತ್ತು ಕನ್ನಡೇತರ ಚಿತ್ರಗಳ ಬಾಡಿಗೆಗೆ ಸಂಬಂಧಪಟ್ಟಂತೆ ಚಿತ್ರೋದ್ಯಮದ ಪ್ರತಿನಿಧಿಗಳು ಸಾಕಷ್ಟು ಚರ್ಚಿಸಿ, ಒಂದು ತೀರ್ಮಾನಕ್ಕೆ ಬರಬೇಕಾಯಿತು. ಈಗಿರುವಂತೆ, ಮೂಲಗಳ ಪ್ರಕಾರ ಮೊದಲ ವಾರದ ಗಳಿಕೆಯನ್ನು ಸಮಾನವಾಗಿ ಹಂಚಿಕೊಳ್ಳಲಾಗುತ್ತದೆ(೫೦:೫೦). ಮುಂದೆ ಪ್ರತಿವಾರ ಕನ್ನಡ ಚಿತ್ರಗಳ ನಿರ್ಮಾಪಕರಿಗೆ ಶೇ. ೨.೫ ಇಳಿಕೆಯಾಗುತ್ತಾ, ಪ್ರದರ್ಶಕರಿಗೆ ಏರಿಕೆಯಾಗುತ್ತಾ ಹೋಗುತ್ತದೆ. ಎರಡನೇ ವಾರ ೪೭.೫:೫೨.೫, ಮೂರನೇ ವಾರ ೪೫:೫೫, ನಾಲ್ಕನೇ ವಾರ ೪೨.೫:೫೭.೫, ಐದನೇ ವಾರ ೪೦:೬೦, ಆರನೇ ವಾರ ೩೭.೫:೬೨.೫, ಏಳನೇ ವಾರ ೩೫:೬೫, ಎಂಟನೇ ವಾರ ೩೨.೫:೬೭.೫ ಮತ್ತು ಮಂದಿನ ವಾರಗಳಲ್ಲಿ ೩೦:೭೦ರ ಅನುಪಾತದಲ್ಲಿ ಹಂಚಿಕೆಯಾಗುತ್ತದೆ. ಕೆಲವು ಚಿತ್ರಮಂದಿರಗಳಲ್ಲಿ ನಿರ್ಮಾಪಕರನ್ನು ಹೊಂದಿಕೊಂಡು ಈ ಹಂಚಿಕೆ ಎಂದೂ ಹೇಳುವವರಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಸಂಬಂಧಪಟ್ಟಂತೆ ಈ ಹಂಚಿಕಾ ಸೂತ್ರ ಇದ್ದರೆ, ಪರಭಾಷಾ ಚಿತ್ರಗಳಿಗೆ ಇಳಿಕೆ, ಏರಿಕೆಗಳು ೨.೫ ಬದಲು ಶೇ ೫ರಿಂದ ಹತ್ತರವರೆಗೆ. ಹಿಂದಿ, ತಮಿಳು, ತೆಲುಗು ಅಥವಾ ಮಲಯಾಳ ಚಿತ್ರಗಳ ವಿಷಯ ಬಿಡಿ, ಕರ್ನಾಟಕದ ಪ್ರಾದೇಶಿಕ ಭಾಷೆಯ ಚಿತ್ರಗಳನ್ನೂ ಪರಭಾಷೆಯ ಚಿತ್ರಗಳೆಂದು ಪರಿಗಣಿಸಿದರೆ? ಇಲ್ಲಿನ ಪ್ರಾದೇಶಿಕ ಭಾಷಾ ಚಿತ್ರಗಳಲ್ಲಿ ತುಳು ಚಿತ್ರಗಳು ಈ ದಿನಗಳಲ್ಲಿ ಹೆಚ್ಚು ತಯಾರಾಗತೊಡಗಿವೆ. ಆದರೆ ಯಶಸ್ವಿ ಚಿತ್ರಗಳ ಗಳಿಕೆಯ ಸಿಂಹಪಾಲು ಮಲ್ಟಿಪ್ಲೆಕ್ಸ್ ಪಾಲಾಗುತ್ತಿದೆ. ತುಳು ಚಿತ್ರವೊಂದು ತೆರೆಕಂಡರೆ, ಅದರ ಮೊದಲ ವಾರದ ಗಳಿಕೆ ಸಮನಾಗಿ ಹಂಚಿಕೆಯಾಗುತ್ತದೆ. ಮುಂದಿನ ವಾರ ಪ್ರದರ್ಶಕರಿಗೆ ಶೇ ೬೦, ನಿರ್ಮಾಪಕರಿಗೆ ಶೇ ೪೦, ಮೂರನೇ ವಾರದಿಂದ ಪ್ರದರ್ಶಕರಿಗೆ ಶೇ ೭೦, ನಿರ್ಮಾಪಕರಿಗೆ ಶೇ. ೩೦! ಕರ್ನಾಟಕದ ಪ್ರಾದೇಶಿಕ ಭಾಷೆ, ಮಲ್ಟಿಪ್ಲೆಕ್ಸ್ ಮಂದಿಗೆ ಪರಭಾಷೆಯ ಚಿತ್ರ! ಇತ್ತೀಚೆಗೆ ತೆರೆಕಂಡ ‘ಪಿಚ್ಚರ್’ ತುಳುಚಿತ್ರ ಇದೀಗ ಐದನೇ ವಾರಕ್ಕೆ ಕಾಲಿಟ್ಟಿದೆ. ಗಳಿಕೆಯ ಮುಕ್ಕಾಲು ಭಾಗ ಮಲ್ಟಿಪ್ಲೆಕ್ಸ್‌ಗಳ ಆದಾಯವಾದರೆ, ಶೇ.೩೦ ಮಾತ್ರ ನಿರ್ಮಾಪರಿಗೆ. ಮುಂದಿನ ವಾರ ಅರ್ಜುನ್ ಕಾಪಿಕ್ಕಾಡ್ ಅವರ ‘ಟಾಸ್’ ತುಳು, ಕನ್ನಡ ಚಿತ್ರ ತೆರೆಗೆ ಬರುತ್ತಿದೆ. ಕರ್ನಾಟಕ ಚಿತ್ರೋದ್ಯಮದ ಪ್ರಾತಿನಿಧಿಕ ಸಂಸ್ಥೆ ಎಂದುಕೊಂಡಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಈ ಕುರಿತಂತೆ ಎಚ್ಚರ ವಹಿಸದೆ ಇರುವುದು ನಿಜ್ಕಕೂ ಚೋದ್ಯವೇ ಸರಿ. ರಾಜ್ಯ ಸರ್ಕಾರ ಚಿತ್ರೋದ್ಯಮಕ್ಕೆ ಸಂಬಂಧಪಟ್ಟಂತೆ ಇರುವ ಯಾವುದೇ ಆದೇಶ, ನಿಯಮಗಳಲ್ಲಿ ಕನ್ನಡದ ಜೊತೆ ಇತರ ಪ್ರಾದೇಶಿಕ ಭಾಷೆಗಳನ್ನು ಸೇರಿಸಿಕೊಳ್ಳುತ್ತದೆ. ಕನ್ನಡ ನಿರ್ಮಾಪಕರ ಜೊತೆ ಇಲ್ಲಿನ ಪ್ರಾದೇಶಿಕ ಭಾಷಾ ಚಿತ್ರಗಳ ನಿರ್ಮಾಪಕರ ಹಿತ ಕಾಯುವ ಕೆಲಸವನ್ನು ವಾಣಿಜ್ಯ ಮಂಡಳಿ ಮಾಡಬೇಕಾಗಿದೆ. ಸರ್ಕಾರಕ್ಕೆ ಮತ್ತು ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ, ಕನ್ನಡ ಚಿತ್ರಗಳಂತೆಯೇ ತುಳು, ಕೊಡವ,ಕೊಂಕಣಿ, ಬಂಜರ, ಬ್ಯಾರಿ ಭಾಷೆಗಳ ಚಿತ್ರಗಳ ಗಳಿಕೆಯ ಶೇಕಡಾವಾರು ಹಂಚಿಕೆಯನ್ನು ಮಾಡುವಂತೆ ಒತ್ತಾಯಿಸಬೇಕು. ಒಪ್ಪದೆ ಇರಲು ಸಾಧ್ಯವಿಲ್ಲ. ಅವರಿಗೆ ಮನವರಿಕೆ ಮಾಡಿಕೊಡಬೇಕು ಅಷ್ಟೇ.
ಕರ್ನಾಟಕ ಸರ್ಕಾರ ಚಿತ್ರರಂಗಕ್ಕೆ ಸಂಬಂಧಿಸಿದಂತೆ ತಂದ ನಿಯಮ, ಕಾನೂನುಗಳ ವಿರುದ್ಧ, ಭಾರತದ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ನ್ಯಾಯಾಲಯದ ಮೆಟ್ಟಲೇರುವುದು ಸಾಮಾನ್ಯವಾಗಿದೆ. ನೆರೆ ರಾಜ್ಯಗಳಲ್ಲಿದ್ದಂತೆ ಚಿತ್ರಮಂದಿರಗಳಲ್ಲಿ ಪ್ರವೇಶದರ ನಿಯಂತ್ರಣದ ಆದೇಶದ ವಿರುದ್ಧ ಈ ಸಂಸ್ಥೆ ಕರ್ನಾಟಕ ಹೈಕೋರ್ಟಿನ ಮೆಟ್ಟಲೇರಿತು. ಅಲ್ಲಿ ಅದಕ್ಕೆ ತಡೆಯಾಜ್ಞೆ ಪಡೆದುಕೊಂಡಿತು. ನೆರೆಯ ರಾಜ್ಯಗಳಲ್ಲಿ ಚಿತ್ರಮಂದಿರಗಳ ಪ್ರವೇಶದರವನ್ನು ಸರ್ಕಾರಗಳೇ ನಿಗದಿಪಡಿಸುವ ಅವಕಾಶ ಇದ್ದುದರಿಂದ ಅಲ್ಲಿನ ನ್ಯಾಯಾಲಯದ ಮೆಟ್ಟಲೇರಿದರೂ, ಈ ಮಂದಿ ಸೋಲಬೇಕಾಯಿತು. ಆದರೆ, ಮೂಲಗಳ ಪ್ರಕಾರ ಕರ್ನಾಟಕ ಸಿನಿಮಾಟೋಗ್ರ- ಕಾಯಿದೆಯಲ್ಲಿ ಚಿತ್ರಮಂದಿರಗಳ ಪ್ರವೇಶದರಕ್ಕೆ ಸಂಬಂಧಪಟ್ಟ ಪ್ರಸ್ತಾಪ ಇಲ್ಲದೆ ಇದ್ದುದರಿಂದ ಅದಕ್ಕೆ ತಡೆಯಾe ಸುಲಭ ಸಾಧ್ಯವಾಯಿತು.
ಮೊನ್ನೆ ಇನ್ನೊಂದು ಬೆಳವಣಿಗೆ. ಕನ್ನಡ ಚಿತ್ರರಂಗ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುವ ಕಾರ್ಯಕರ್ತರ ಸಾಮಾಜಿಕ ಭದ್ರತೆಗಾಗಿ ಕರ್ನಾಟಕ ಸರ್ಕಾರ ‘ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರು (ಕಲ್ಯಾಣ) ಕಾಯ್ದೆ, ೨೦೨೪’ ಜರಿಗೆ ತರಲು ಶಾಸನಾತ್ಮಕ ಕ್ರಮ ಕೈಗೊಂಡಿತು. ೨೩ ಸೆಪ್ಟೆಂಬರ್ ೨೦೨೪ರಂದು ರಾಜ್ಯಪಾಲರ ಅನುಮೋದನೆ ಪಡೆದ ಈ ಕಾಯಿದೆ ರಾಜ್ಯಪತ್ರದಲ್ಲಿ ಪ್ರಕಟವಾಯಿತು. ಕಾಯಿದೆಯ ಪ್ರಕಾರ ಸಿನಿಮಾ ಟಿಕೆಟ್‌ಗಳು, ಚಂದಾ ಶುಲ್ಕ ಹಾಗೂ ಸಂಬಂಧಿತ ಸಂಸ್ಥೆಗಳ ಆದಾಯದ ಮೇಲೆ ಕನಿಷ್ಠ ಶೇ.೧ ಮತ್ತು ಗರಿಷ್ಟ ಶೇ.೨ರೊಳಗಿನ ಕಲ್ಯಾಣ ಸೆಸ್ ವಿಧಿಸಲು ಅವಕಾಶ ಕಲ್ಪಿಸಲಾಯಿತು. ಕರಡು ನಿಯಮಗಳಲ್ಲಿ ದರವನ್ನು ಶೇ.೨ಕ್ಕೆ ನಿಗದಿಪಡಿಸಲು ಪ್ರಸ್ತಾಪಿಸಿ, ೩ ನವೆಂಬರ್ ೨೦೨೫ರಂದು ಅಂತಿಮಗೊಳಿಸಲಾಯಿತು. ಎಲ್ಲ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ, ಸಿನಿಮಾ ಟಿಕೆಟ್‌ಗಳ ಮೇಲೆ ಶೇ.೨ ಸೆಸ್ ವಿಧಿಸುವುದು ಅಂತಿಮ ನಿಯಮಗಳಲ್ಲಿ ಸ್ಪಷ್ಟವಾಗಿದೆ.
ಈ ಹಣವನ್ನು ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ನಿಧಿಗೆ ವರ್ಗಾಯಿಸಿ, ಅಪಘಾತ, ವೈದ್ಯಕೀಯ ನೆರವು, ಮರಣ ಪರಿಹಾರ, ಮಕ್ಕಳ ಶಿಕ್ಷಣ, ಮಾತೃತ್ವ ನೆರವು ಮತ್ತು ಪಿಂಚಣಿ ಮುಂತಾದ ಯೋಜನೆಗಳಿಗೆ ಬಳಸುವ ಉದ್ದೇಶ ಹೊಂದಲಾಗಿದೆ. ಇದೀಗ ಸೆಸ್ ವಸೂಲಿ ಪ್ರಾರಂಭಿಸಲು ನೀಡಲಾದ ಇಲಾಖಾ ಆದೇಶಗಳನ್ನು ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಮತ್ತು ಪಿವಿಆರ್ ಐನಾಕ್ಸ್ ಪ್ರಶ್ನಿಸಿದ್ದು, ಮೂಲ ಕಾಯಿದೆಗೆ ಜರಿಗೆ ಬರುವ ದಿನಾಂಕವನ್ನು ನಿಗದಿಪಡಿಸುವ ಪ್ರತ್ಯೇಕ ರಾಜ್ಯಪತ್ರ ಅಧಿಸೂಚನೆ ಹೊರಡದಿರುವಾಗ ಸುತ್ತೋಲೆ ಮೂಲಕ ಸೆಸ್ ವಸೂಲಿ ಮಾಡಬಹುದೇ ಎಂಬ ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ಮುಂದೆ ತಂದಿವೆ. ಮೊನ್ನೆ, ೯ರಂದು ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿದೆ; ಪ್ರಕರಣ ಇನ್ನೂ ಅಂತಿಮಗೊಂಡಿಲ್ಲ. ಮನರಂಜನೋದ್ಯಮಕ್ಕೆ ಪೂರಕವಾಗುವ ಬದಲು ಮಲ್ಟಿಪ್ಲೆಕ್ಸ್‌ಗಳು ಮಾರಕವಾಗುತ್ತಿವೆ ಎನ್ನುವ ಆರೋಪ ಚಿತ್ರೋದ್ಯಮದಲ್ಲಿ ಹೊಸದೇನೂ ಅಲ್ಲ. ಹಾಗಾಗದಂತೆ ಸಂಬಂಧಪಟ್ಟವರು ಕಾರ್ಯ ಪ್ರವೃತ್ತರಾಗಬೇಕಿದೆ.
” ಕರ್ನಾಟಕ ಸರ್ಕಾರ ಚಿತ್ರರಂಗಕ್ಕೆ ಸಂಬಂಧಿಸಿದಂತೆ ತಂದನಿಯಮ, ಕಾನೂನುಗಳ ವಿರುದ್ಧ, ಭಾರತದ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ನ್ಯಾಯಾಲಯದ ಮೆಟ್ಟಲೇರುವುದು ಸಾಮಾನ್ಯವಾಗಿದೆ. ನೆರೆ ರಾಜ್ಯಗಳಲ್ಲಿದ್ದಂತೆ ಚಿತ್ರಮಂದಿರಗಳಲ್ಲಿಪ್ರವೇಶದರ ನಿಯಂತ್ರಣದ ಆದೇಶದ ವಿರುದ್ಧ ಈ ಸಂಸ್ಥೆ ಕರ್ನಾಟಕ ಹೈಕೋರ್ಟಿನ ಮೆಟ್ಟಲೇರಿತು. ಅಲ್ಲಿ ಅದಕ್ಕೆ ತಡೆಯಾಜ್ಞೆ ಪಡೆದುಕೊಂಡಿತು. ನೆರೆಯ ರಾಜ್ಯಗಳಲ್ಲಿ ಚಿತ್ರಮಂದಿರಗಳ ಪ್ರವೇಶದರವನ್ನು ಸರ್ಕಾರಗಳೇ ನಿಗದಿಪಡಿಸುವ ಅವಕಾಶ ಇದ್ದುದರಿಂದ ಅಲ್ಲಿನ ನ್ಯಾಯಾಲಯದ ಮೆಟ್ಟಲೇರಿದರೂ, ಈ ಮಂದಿ ಸೋಲಬೇಕಾಯಿತು. ಆದರೆ, ಮೂಲಗಳ ಪ್ರಕಾರ ಕರ್ನಾಟಕ ಸಿನಿಮಾಟೋಗ್ರ- ಕಾಯಿದೆಯಲ್ಲಿ ಚಿತ್ರಮಂದಿರಗಳ ಪ್ರವೇಶದರಕ್ಕೆ ಸಂಬಂಧಪಟ್ಟ ಪ್ರಸ್ತಾಪ ಇಲ್ಲದೆ ಇದ್ದುದರಿಂದ ಅದಕ್ಕೆ ತಡೆಯಾಜ್ಞೆ ಸುಲಭ ಸಾಧ್ಯವಾಯಿತು.”
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…
ಸಿಡಬ್ಲ್ಯುಆರ್‌ಸಿ ಆದೇಶದಂತೆ ಪ್ರತಿದಿನ ೬,೦೦೦ ಕ್ಯೂಸೆಕ್ಸ್‌ನಂತೆ ೧೫ ದಿನಗಳ ಕಾಲ ಕರ್ನಾಟಕ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕಾಗುತ್ತದೆ. ಜಲಾಶಯದಲ್ಲಿ…
ಲಕ್ಷ್ಮೀಕಾಂತ್ ಕೊಮಾರಪ್ಪ ಸುದರ್ಶನ ಸರ್ಕಲ್‌ನಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ಸೋಮವಾರಪೇಟೆ: ಮಲೆನಾಡ ಭಾಗದ ರೈತರ ಬದುಕಿನ ಮೇಲೆ ತೂಗುಗತ್ತಿಯಂತೆ ಪರಿಣಮಿಸಿರುವ…
ರಾಜೇಶ್ ಬೆಂಡರವಾಡಿ ಪ್ರಥಮ ಬಾರಿಗೆ ಇತರೆ ಹಿಂದುಳಿದ ವರ್ಗಕ್ಕೆ ಒಲಿದ ಡಿಸಿಸಿ ಅಧ್ಯಕ್ಷ ಸ್ಥಾನ ಚಾಮರಾಜನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ…