ಕಳೆದ ವಾರ ಕೊಚ್ಚಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಕಲೆ ಮತ್ತು ಸಾಹಿತ್ಯ ಉತ್ಸವದಲ್ಲಿ ಸಿನಿಮಾ ಕುರಿತಂತೆ ಪ್ರಮುಖರು ಆಡಿರುವ ವಿಷಯಗಳು ವರದಿಯಾಗಿವೆ. ಅದರಲ್ಲಿ ಗಮನ ಸೆಳೆದದ್ದು ಮಲೆಯಾಳಂ ಚಿತ್ರಗಳ ಗಳಿಕೆ, ಉಳಿಕೆಗಳ ಕುರಿತಂತೆ ನಿರ್ಮಾಪಕರೊಬ್ಬರ ಮಾತು.ಮಲಯಾಳದಲ್ಲಿ ಈ ಬಾರಿ ಕೆಲವು ಚಿತ್ರಗಳ ಗಳಿಕೆ ನೂರು ಕೋಟಿ ರೂ. ದಾಟಿದ್ದಾಗಿ ಸುದ್ದಿಯಾಗಿತ್ತು. ಅವುಗಳಲ್ಲಿ ಒಂದು ಮೋಹನ್‌ಲಾಲ್ ಅಭಿನಯದ ‘ತುಡರುಂ’.
ಎಂ. ರಂಜಿತ್ ನಿರ್ಮಾಣದ ಚಿತ್ರವಿದು. ರಂಜಿತ್ ಅವರು ‘ಜನುಮದ ಜೋಡಿ’ ಚಿತ್ರದ ನಟಿ ಶಿಲ್ಪಾ ಅವರ ಪತಿ. ಅವರ ಕುಟುಂಬದ ನಿರ್ಮಾಣದ ಚಿತ್ರ‘ತುಡರುಂ’ ರಂಜಿತ್ ಅವರು ಮೇಲಿನ ಗೋಷ್ಠಿಯಲ್ಲಿ ಮಾತನಾಡುತ್ತಾ. ‘ಒಂದು ಚಿತ್ರದ ಗಳಿಕೆ ೧೫೦ ಕೋಟಿ ರೂ. ಎಂದಾದರೆ, ನಿರ್ಮಾಪಕರ ಕೈಗೆ ಬರುವುದು ಕೇವಲ ೫೫ ಕೋಟಿ ರೂ. ಮಾತ್ರ’ ಎಂದರು. ಸಿನಿಮಾದ ಒಟ್ಟು ಗಳಿಕೆಯ ಕುರಿತಂತೆ ಸಾಮಾನ್ಯವಾಗಿ ವರದಿ ಆಗುತ್ತದೆ. ಆದರೆ ಅದು ನಿರ್ಮಾಪಕರ ಕೈ ಸೇರುವ ಮೊತ್ತ ಆಗಿರುವುದಿಲ್ಲ. ಪ್ರವೇಶ ದರ ರೂ. ೧೦೦ಕ್ಕಿಂತ ಕಡಿಮೆ ಇದ್ದರೆ ಶೇ.೫, ಹೆಚ್ಚಿದ್ದರೆ ಶೇ.೧೮ ಜಿಎಸ್‌ಟಿಯನ್ನು ಗಳಿಕೆಯ ಮೊತ್ತದಲ್ಲಿ ಪಾವತಿ ಮಾಡಬೇಕು. ಉಳಿದ ಮೊತ್ತದಲ್ಲಿ ಸಾಮಾನ್ಯವಾಗಿ ಮಲ್ಟಿಪ್ಲೆಕ್ಸ್‌ಗಳು ಪಡೆಯುವುದು ಸಿಂಹಪಾಲು. ಅಲ್ಲಿನ ಗಳಿಕೆಯ ಹಂಚಿಕೆಯೇ ಬೇರೆ ರೀತಿ. ಮೊದಲ ವಾರದಲ್ಲಿ ಗಳಿಕೆಯ ಅರ್ಧ (ಶೇ.೫೦ ) ಮಲ್ಟಿಪ್ಲೆಕ್ಸ್ ಪಾಲು, ಉಳಿದರ್ಧ ನಿರ್ಮಾಪಕರಿಗೆ. ಮುಂದಿನ ಪ್ರತಿ ವಾರ ಈಹಂಚಿಕೆ ೫೫:೪೫, ೬೦:೪೦, ೬೫:೩೫ ಮತ್ತು ೭೦:೩೦ ಆಗುತ್ತದೆ. ಶೇ.೭೦ ಮಲ್ಟಿಪ್ಲೆಕ್ಸ್‌ಗೆ ಶೇ.೩೦ ನಿರ್ಮಾಪಕರಿಗೆ. ಚಿತ್ರಗಳು ಯಶಸ್ವಿಯಾದರೆ ಅದರ ಲಾಭ ದಕ್ಕುವುದು ಪ್ರದರ್ಶಕರಿಗೆ.
ನಿರ್ಮಾಪಕರು ಹಂಚಿಕೆದಾರರ ಮೂಲಕ ತಮ್ಮ ಚಿತ್ರವನ್ನು ಬಿಡುಗಡೆ ಮಾಡಿದರೆ, ಗಳಿಕೆಯಲ್ಲಿ ಅವರ ಕಮಿಶನ್ ವಜಾ ಮಾಡಬೇಕು. ಪ್ರಚಾರದ ವೆಚ್ಚ, ಇನ್ನಿತರ ಖರ್ಚುಗಳು. ಹೀಗೆ ಗಲ್ಲಾ ಪೆಟ್ಟಿಗೆಯ ಗಳಿಕೆಯಲ್ಲಿ ನಿರ್ಮಾಪಕರ ಕೈ ಸೇರುವುದು ಮೂರರಲ್ಲಿ ಒಂದು ಭಾಗ ಮಾತ್ರ ಎನ್ನುವ ರಂಜಿತ್ ಲೆಕ್ಕ ಸುಳ್ಳೇನೂ ಆಗಿರಲಾರದು. ಇನ್ನುಚಿತ್ರ ನಿರ್ಮಾಣ ಹಂತದಲ್ಲಿ ಹೂಡುವ ಬಂಡವಾಳ ಸ್ವಂತದ ಹಣ ಆದರೆ ಪರವಾಗಿಲ್ಲ. ಬಜಾರಿನಿಂದ ದುಬಾರಿ ಬಡ್ಡಿಗೆ ತಂದರೆ, ಅದರ ಬಡ್ಡಿಯ ಮೊತ್ತವೇ ಬಹಳ ಆಗುವ ಸಂಭವವೇ ಹೆಚ್ಚು.
ಇದನ್ನು ಓದಿ: ಇತಿಹಾಸದ ಪುಟ ಸೇರಿದ ಐತಿಹಾಸಿಕ ಸೇತುವೆ
ಮಲಯಾಳದಲ್ಲಿ ಐದಾರು ಚಿತ್ರಗಳ ಗಳಿಕೆ ನೂರು ಕೋಟಿ ರೂ. ಗಡಿದಾಟಿದೆ. ಅಲ್ಲೂ ಚಿತ್ರ ನಿರ್ಮಾಣ ಇಳಿಮುಖ ಆಗುತ್ತಿದೆ ಎನ್ನುತ್ತಿದ್ದಾರೆಅಲ್ಲಿನ ಉದ್ಯಮಿಗಳು. ಪ್ರತಿಶತ ೧೦ ಚಿತ್ರಗಳು ಗೆಲ್ಲುತ್ತಿಲ್ಲ ಎನ್ನುವುದು ಇದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ. ಕಲಾವಿದರ ಸಂಭಾವನೆ ಗಗನಕ್ಕೇರಿರುವುದು, ನಿರ್ಮಾಣ ವೆಚ್ಚ ದುಬಾರಿ ಆಗಿರುವುದು, ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಇಳಿಮುಖ ಆಗಿರುವುದು,ಒಟಿಟಿ, ಖಾಸಗಿ ವಾಹಿನಿಗಳು ಹೀಗೆ ಮನರಂಜನಾ ಮಾಧ್ಯಮದ ಟಿಸಿಲುಗಳ ನಡುವೆ ಎಲ್ಲ ಭಾರತೀಯ ಭಾಷಾ ಚಿತ್ರಗಳೂ ಗೊಂದಲದಲ್ಲೇ ಇವೆ.
ಕನ್ನಡದಲ್ಲಿ ಈ ವರ್ಷ ತೆರೆಕಂಡ ಚಿತ್ರಗಳಲ್ಲಿ ‘ಸು ಫ್ರಂ ಸೋ’ ಮತ್ತು ‘ಕಾಂತಾರ’ ಚಿತ್ರಗಳ ಹೊರತಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿದ ಚಿತ್ರಗಳ ಸಂಖ್ಯೆ ಕಡಿಮೆ. ಅಲ್ಲೊಂದು ಇಲ್ಲೊಂದು ಚಿತ್ರಗಳ ಹೆಸರು ಕೇಳಿದರೂ, ಅವು ನಿರ್ಮಾಪಕರಿಗೆ ಎಷ್ಟು ಲಾಭ ತಂದುಕೊಟ್ಟಿವೆ ಎನ್ನುವುದನ್ನು ಹೇಳಬೇಕು. ಪ್ರಚಾರಕ್ಕೋ, ಪ್ರತಿಷ್ಠೆಗೋ ಗಳಿಕೆಯನ್ನು ಹಿಗ್ಗಿಸಿ ಹೇಳಬಹುದೇ ಹೊರತು ಉಳಿದಂತೆ ಎಲ್ಲ ಕಡೆ ನಷ್ಟದ ಬಾಬತ್ತೇ ಹೆಚ್ಚು ಎನ್ನುವುದು ಗಾಂಧಿನಗರದ ಮಾತು.
ಚಿತ್ರಗಳ ನಿರ್ಮಾಣ ಸುಲಭ, ಆದರೆ ಅವುಗಳ ಬಿಡುಗಡೆ ತುಂಬಾ ಕಷ್ಟ ಎನ್ನುವುದು ಇತ್ತೀಚಿನ ದಿನಗಳ ನಿರ್ಮಾಪಕರ ಅನುಭವದ ಮಾತು. ಕಾರಣವಿಷ್ಟೇ. ಸಿನಿಮಾ ಡಿಜಿಟಲ್‌ಗೆ ಹೊರಳಿದ ನಂತರ ತೆರೆಗೆ ಬರುವಚಿತ್ರಗಳ ಪ್ರಚಾರದ ರೀತಿಯೇ ಬದಲಾಗಿದೆ. ಅದನ್ನು ಇದಂಮಿತ್ಥಂ ಎನ್ನುವ ಹಾಗಿಲ್ಲ. ನವ ಮಾಧ್ಯಮಗಳು, ಇತರ ವಾಹಿನಿಗಳು, ಉಪಗ್ರಹ ವಾಹಿನಿಗಳುಮುಂತಾದೆಡೆ ಜಾಹೀರಾತು, ಪ್ರಚಾರಬೇಕು, ಭಿತ್ತಿಪತ್ರ, ಪತ್ರಿಕಾ ಜಾಹೀರಾತು ಮಾತ್ರ ಅಲ್ಲ ಎನ್ನುವುದು ಈಗ ಕೇಳಿಬರುತ್ತಿರುವ ಮಾತು.
ಹಿಂದಿನ ದಿನಗಳಲ್ಲಿ ಒಂದು ಸಿನಿಮಾದ ನಿರ್ಮಾಣಕ್ಕೆ ತೊಡಗಿಸುವ ಮೊತ್ತ, ಸದಭಿರುಚಿಯ ಚಿತ್ರಗಳಿಗೆ ಹೂಡುವ ಬಂಡವಾಳದ ದುಪ್ಪಟ್ಟು ಮೊತ್ತವನ್ನು ಈಗ ಕೇವಲ ಪ್ರಚಾರಕ್ಕೆ ಬಳಸಬೇಕಾಗುತ್ತದೆ ಎಂದು ಹೇಳುವನಿರ್ಮಾಪಕರಿದ್ದಾರೆ. ಜನಪ್ರಿಯ ನಟರ ಸಂಭಾವನೆ ಏರಿಕೆ, ಅಂತಹ ನಟರ ಚಿತ್ರಗಳ ನಿರ್ಮಾಣ ಹಂತದಲ್ಲಿ ಆಗುವ ವೆಚ್ಚ ಎಲ್ಲವೂ ನಿರ್ಮಾಪಕರ ಕೈಮೀರಿರುತ್ತದೆ.
ಕಳೆದ ವರ್ಷ ನಿರ್ದೇಶಕರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಕಿರುತೆರೆ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾಗಿದ್ದ ಅವರು ಚಿತ್ರವೊಂದನ್ನು ನಿರ್ದೇಶಿಸಲು ಹೊರಟರು. ಗೆಳೆಯರ ಜೊತೆ ಸೇರಿ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕರೊಬ್ಬರ ಜೊತೆ ಕೆಲಸ ಮಾಡುತ್ತಿದ್ದ ಅವರಿಗೆ ಮುಖ್ಯ ವಾಹಿನಿಯ ಚಿತ್ರಗಳ ನಿರ್ದೇಶನದ ಹಂಬಲ. ಅವರ ಯೋಜನೆ ಎರಡು ಕೋಟಿ ರೂ. ವೆಚ್ಚದಲ್ಲಿ ಆ ಚಿತ್ರವನ್ನು ತಯಾರಿಸುವುದು. ಕಿರುತೆರೆಯ ಜೊತೆಗಾರರೊಂದಿಗೆ ಸೇರಿ ಚಿತ್ರ ನಿರ್ಮಿಸಿ, ನಿರ್ದೇಶಿಸಲು ಹೊರಟರು. ಆದರೆ ದುರಂತ ಎಂದರೆ ಐದಾರು ಕೋಟಿ ರೂ. ವ್ಯಯಿಸಿದರೂ ಚಿತ್ರದ ಮುಕ್ಕಾಲು ಭಾಗ ಮುಗಿದಿರಲಿಲ್ಲ. ಮುಂದೆ ದಾರಿ ಕಾಣದೆಯೊ, ಇನ್ನೇನೋ ಅವರು ಆತ್ಮಹತ್ಯೆ ಮಾಡಿಕೊಂಡರು.
ಇದು ಇಂದಿನ ಚಿತ್ರರಂಗದ ಸ್ಥಿತಿಗೆ ಹಿಡಿದ ಕನ್ನಡಿಯೂ ಹೌದು. ನಿರ್ಮಾಣ, ಹಂಚಿಕೆ, ಪ್ರದರ್ಶನ, ಚಿತ್ರೋದ್ಯಮದ ಈ ಮೂರುವಲಯಗಳಲ್ಲಿನ ಪರಸ್ಪರ ಸಹಕಾರ ಮನೋಭಾವನೆಯ ಕೊರತೆ ಇದಕ್ಕೆ ಮೂಲ ಕಾರಣ. ಹಿಂದಿನ ದಿನಗಳಲ್ಲಿ ಚಿತ್ರವೊಂದರ ನಿರ್ಮಾಣದ ವೇಳೆ ಈ ಮೂರೂ ವಲಯಗಳ ಮಂದಿ ಪರಸ್ಪರ ಒಬ್ಬರಿಗೊಬ್ಬರು ಆಗುತ್ತಿದ್ದರು. ಜನಪ್ರಿಯ ನಟರೊಬ್ಬರ ಚಿತ್ರಸೆಟ್ಟೇರಿದ ಕೂಡಲೇ, ಆ ಚಿತ್ರದ ಹಂಚಿಕೆ ತಮಗಿರಲಿ ಎಂದು ವಿತರಕರು ಮುಂದಾಗಿ ಮುಂಗಡ ಹಣ ನೀಡುತ್ತಿದ್ದರು. ಪ್ರದರ್ಶಕರು ತಮ್ಮ ಚಿತ್ರಮಂದಿರಗಳಿಗೆ ಆ ಚಿತ್ರವನ್ನು ಕಾಯ್ದಿರಿಸಲು ಮುಂಗಡ ಕೊಡುತ್ತಿದ್ದರು.
ಚಿತ್ರದ ಪ್ರಚಾರವೂ ಅಷ್ಟೇ. ಚಿತ್ರಮಂದಿರಗಳಲ್ಲಿ ‘ಬರುತ್ತದೆ’ ಎಂದು ಬರಲಿರುವ ಚಿತ್ರದ ಸ್ಲೈಡ್ ಹಾಕಿ ಪ್ರಚಾರ ಮಾಡುವುದಿತ್ತು. ಜಾಹೀರಾತುಗಳನ್ನು ಚಿತ್ರಮಂದಿರಗಳವರೇ ಪ್ರಕಟಿಸುತ್ತಿದ್ದರು. ಆದರೆ ಈಗ ಅವೆಲ್ಲ ಇಲ್ಲ. ಎಲ್ಲ ಹಂತದ ಪ್ರಚಾರಗಳನ್ನೂ ನಿರ್ಮಾಪಕರೇ ಮಾಡಿಕೊಳ್ಳಬೇಕಾದ ವಾತಾವರಣ. ಕೆಲವು ಚಿತ್ರಗಳಿಗೆ ಹಂಚಿಕೆದಾರರಿರುತ್ತಾರೆ. ಸಣ್ಣಪುಟ್ಟ ಚಿತ್ರಗಳ ನಿರ್ಮಾಪಕರೇ, ಹಂಚಿಕೆದಾರರಿಗೆ ಪ್ರಚಾರ ಮತ್ತಿತರ ವೆಚ್ಚಗಳಿಗಾಗಿ ಮುಂಗಡ ಕೊಡಬೇಕಾದ ಪರಿಸ್ಥಿತಿ. ಹೆಸರಿಗೆ ಮಾತ್ರ ಹಂಚಿಕೆದಾರರು. ಅದರ ಜೊತೆ ಗಳಿಕೆಯಲ್ಲಿ ಕಮಿಶನ್ ಕೂಡ ನೀಡಬೇಕು.
ಇದನ್ನು ಓದಿ: ಶ್ರೀರಂಗಪಟ್ಟಣದಲ್ಲಿ ರಾಜಕಾಲುವೆಗೆ ಹರಿಯುತ್ತಿದೆ ತ್ಯಾಜ್ಯ ನೀರು
ಕನ್ನಡ ಮಾತ್ರವಲ್ಲ, ಭಾರತದ ಬಹುತೇಕ ಭಾಷೆಗಳ ಚಿತ್ರಗಳ ನಿರ್ಮಾಪಕರು ತೇಲುತ್ತಿರುವ ದೋಣಿ ಒಂದೇ. ಜನಪ್ರಿಯ ನಟರ, ಅದ್ಧೂರಿ ವೆಚ್ಚದ, ಎರಡೋ ಮೂರೋ ವರ್ಷಗಳಿಗೊಂದು ಚಿತ್ರಗಳನ್ನು ತೆರೆಗೆ ತರುವಮಂದಿಯ ಲೆಕ್ಕಾಚಾರ, ಪ್ರಚಾರದ ವೈಖರಿಯೇ ಬೇರೆ. ಸಣ್ಣ ಪುಟ್ಟ ನಿರ್ಮಾಪಕರ, ಕಡಿಮೆ ವೆಚ್ಚದ ಚಿತ್ರಗಳ ಮಂದಿಯ ಕಷ್ಟಗಳೇ ಬೇರೆ. ತಮಿಳುನಾಡು, ಕೇರಳಗಳಲ್ಲಿ ವರ್ಚಸ್ವೀ ನಟರ ಸಂಭಾವನೆ ಇಳಿಸುವಂತೆ ಅಲ್ಲಿನ ನಿರ್ಮಾಪಕರ ಸಂಘ ಕೋರಿದೆ. ಅದಕ್ಕೆ ಪೂರಕ ಪ್ರತಿಕ್ರಿಯೆ ಕೂಡ ಸಿಕ್ಕಿದಂತಿದೆ. ಜೊತೆಗೆ ಇನ್ನೊಂದು ಹೊಸ ಯೋಚನೆಗೂ ಚಾಲನೆ ಅಲ್ಲಲ್ಲಿ ಸಿಗುತ್ತಿದೆ. ಅದೆಂದರೆ, ಚಿತ್ರದಲ್ಲಿ ಸಂಭಾವನೆಯ ಬದಲು, ಅದರ ಲಾಭದಲ್ಲಿ ಪಾಲು ನೀಡುವ ಪ್ರಸ್ತಾಪ. ಪ್ರಮುಖ ಲಾವಿದರು, ತಂತ್ರಜ್ಞರು ಇಂತಹದೊಂದು ಯೋಜನೆಗೆ ಕೈಜೋಡಿಸಿದರೆ, ಆಗ ನಿರ್ಮಾಪಕರಿಗೆ ಹೊರೆ ಕಡಿಮೆ ಆಗುತ್ತದೆ, ಮಾತ್ರವಲ್ಲ, ಹೊರಗಿನಿಂದ ದುಬಾರಿ ಬಡ್ಡಿಗೆ ಹಣ ತರುವ ಪ್ರಮೇಯವೂ ಇರುವುದಿಲ್ಲ.
ನೆರೆಯ ರಾಜ್ಯಗಳಲ್ಲಿ ಆಗುತ್ತಿರುವ ಈ ಬೆಳವಣಿಗೆ ಅದ್ಧೂರಿ ವೆಚ್ಚದ ಚಿತ್ರಗಳ ನಿರ್ಮಾಪಕರಿಗೆ ಮಾದರಿ ಆಗಬಹುದು. ಆದರೆ ಕಡಿಮೆ ವೆಚ್ಚದಲ್ಲಿ ತಯಾರಾಗುವ ಸದಭಿರುಚಿಯ, ಗಂಭೀರ ಚಿತ್ರಗಳ ಪರಂಪರೆ ಉಳಿಸಿ, ಬೆಳೆಸಲು ಇರುವ ದಾರಿಯಾದರೂ ಏನು ಎನ್ನುವುದು ಈಗ ಅಂತಹ ಚಿತ್ರಗಳನ್ನು ನೀಡುವ ಮಂದಿಯ ಪ್ರಶ್ನೆ. ಐವತ್ತು ವರ್ಷಗಳ ಹಿಂದೆ ‘ಮಯೂರ’ ಮತ್ತು ‘ತ್ರಿಮೂರ್ತಿ’ ಚಿತ್ರಗಳು ತೆರೆ ಕಂಡ ವರ್ಷದಲ್ಲೇಬಿಡುಗಡೆಯಾದ ‘ಚೋಮನದುಡಿ’ ಮತ್ತು ‘ಹಂಸಗೀತೆ’ ಚಿತ್ರಗಳೂ ಯಶಸ್ವಿಯಾಗಿದ್ದವು. ಆದರೆ ಈಗ ಅಂತಹ ಚಿತ್ರಗಳ ಬಿಡುಗಡೆಗೂ ಅವಕಾಶ ಇಲ್ಲದ ದಿನಗಳು.
ನೆರೆಯ ಮಹಾರಾಷ್ಟ್ರದಲ್ಲಿ ಮರಾಠಿ ಚಿತ್ರಗಳನ್ನು ಕಡ್ಡಾಯವಾಗಿ ಪ್ರೆ ಮ್ ಟೈಂನಲ್ಲಿ ಪ್ರದರ್ಶಿಸಬೇಕು ಎನ್ನುವ ನಿಯಮವಿದೆ. ಮಲ್ಟಿಪ್ಲೆಕ್ಸ್‌ಗಳು ಅದನ್ನು ಪಾಲಿಸುತ್ತಿವೆ. ಆದರೆ ಇಲ್ಲಿ ಸರ್ಕಾರದ ಆದೇಶದ ವಿರುದ್ಧವೇ ಅವು ಎದ್ದು ನಿಲ್ಲುತ್ತವೆ. ಪ್ರವೇಶ ದರ ಗರಿಷ್ಟ ೨೦೦ ರೂ. ಆದೇಶದ ವಿರುದ್ಧ ಅವು ನ್ಯಾಯಾಲಯದ ಮೆಟ್ಟಲೇರಿರುವುದು ಅದಕ್ಕೊಂದು ಜ್ವಲಂತ ನಿದರ್ಶನ. ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿ ಕೂಡ ಈ ಪ್ರವೇಶದರ ಮಿತಿ ಇದೆ. ಆದರೆ ಅಲ್ಲಿ ಅದರ ವಿರುದ್ಧ ದನಿ ಎತ್ತದ ಮಲ್ಟಿಪ್ಲೆಕ್ಸ್‌ಗಳು ಇಲ್ಲೇಕೆ ದನಿ ಎತ್ತಿವೆ?
” ಚಿತ್ರದಲ್ಲಿ ಸಂಭಾವನೆಯ ಬದಲು, ಅದರ ಲಾಭದಲ್ಲಿ ಪಾಲು ನೀಡುವ ಪ್ರಸ್ತಾಪವಿದೆ. ಪ್ರಮುಖ ಲಾವಿದರು,ತಂತ್ರಜ್ಞರು ಇಂತಹದೊಂದು ಯೋಜನೆಗೆ ಕೈಜೋಡಿಸಿದರೆ, ಆಗ ನಿರ್ಮಾಪಕರಿಗೆ ಹೊರೆ ಕಡಿಮೆ ಆಗುತ್ತದೆ, ಮಾತ್ರವಲ್ಲ, ಹೊರಗಿನಿಂದ ದುಬಾರಿ ಬಡ್ಡಿಗೆ ಹಣ ತರುವ ಪ್ರಮೇಯವೂ ಇರುವುದಿಲ್ಲ.”
-ವೈಡ್ ಆಂಗಲ್
ಬಾ.ನಾ.ಸುಬ್ರಹ್ಮಣ್ಯ
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…