mysuru dasara
ಬಾನು ಮುಷ್ತಾಕ್ ಅವರ ಭಾಷಣದ ಒಂದೆರಡು ವಾಕ್ಯಗಳನ್ನು ಎತ್ತಿಕೊಂಡು ಒಂದು ವರ್ಗ ದಿಢೀರನೆವಿರೋಧ ವ್ಯಕ್ತಪಡಿಸುತ್ತಿದೆ. ಭಾಜಪ ಮತ್ತದರ ಸೈದ್ಧಾಂತಿಕ ಸಂಗಾತಿಗಳ ಈ ಪ್ರವೃತ್ತಿ ರಾಜ್ಯಕ್ಕೋ ದೇಶಕ್ಕೋ ಹೊಸದೇನಲ್ಲ.
ಧರ್ಮದ ಗುರುತಿನಿಂದಾಚೆ ಏನನ್ನೂ ಗುರುತಿಸಲಾರದವರು, ಗೌರವಿಸಲಾರದವರು ಇದೀಗ ಬಾನು ಅವರ ಮಾತುಗಳನ್ನೆತ್ತಿಕೊಂಡು ಕ್ಯಾತೆ ತೆಗೆದಿದೆ. ಇದು ನಿರೀಕ್ಷಿತ. ಆದರೆ ಇದೇ ವೇಳೆಗೆ ಬಾನು ಮುಷ್ತಾಕ್ ಸಹಿತ ಪ್ರಗತಿಪರರ ಬಗ್ಗೆ ಅಸಹನೆ ಇರುವ ಸಾರಸ್ವತ, ಸಾಂಸ್ಕೃತಿಕ ಲೋಕದ ಮಂದಿ ಭುವನೇಶ್ವರಿಯ ಗುರಾಣಿ ಹಿಡಿದು ದಾಳಿ ಮಾಡುತ್ತಿದ್ದಾರೆ.
‘ಬೆರಳು ಚಂದ್ರನೆಡೆ ಬೆಟ್ಟು ಮಾಡಿದರೆ, ಮುಠ್ಠಾಳ ಬೆರಳಿನ ತುದಿ ನೋಡುತ್ತಾನೆ’ ಎಂಬ ಚೀನಾದ ಗಾದೆಯೊಂದಿದೆ. ಬಾನು ಅವರ ಆಶಯ, ಆತಂಕಗಳನ್ನು ಅರ್ಥ ಮಾಡಿಕೊಳ್ಳದೇ ಅವರು ನೀಡುವ ಸಾಂದರ್ಭಿಕ ಉದಾಹರಣೆಯನ್ನು ಎತ್ತಿಕೊಂಡು ದಾಳಿ ಮಾಡುವುದು ಧೂರ್ತತನ.
ಒಂದೆರಡು ಅಂಶಗಳನ್ನು ಗಮನಿಸೋಣ. ಸ್ಟ್ಯಾಂಡರ್ಡ್ ಕನ್ನಡ ಮೂಲತಃ ಬ್ರಾಹ್ಮಣರ ‘ಶುದ್ಧ ಕನ್ನಡ’. ಅದೂ ಮೈಸೂರು, ಮಲ್ಲೇಶ್ವರಂ, ಬಸವನಗುಡಿಯ ಮಾದರಿ. ಇದರಿಂದಾಚೆಯ ಕನ್ನಡವನ್ನೆಲ್ಲ ಐತೆ, ಪೈತೆ ಮಾದರಿ ಎಂದು ತಾತ್ಸಾರದಿಂದ ಹೊರಗಿಟ್ಟಾಗಿದೆ. ಈ ಭಾಷಾ ತಾತ್ಸಾರವೂ ಜಾತಿಯ ಶ್ರೇಷ್ಠತೆಯ ಭಾಷಾ ರೂಪ ಅಷ್ಟೇ.
ಈ ಸ್ಟ್ಯಾಂಡರ್ಡ್ ಕನ್ನಡದ ಯಜಮಾನಿಕೆಯ ಭಾಷೆಯ ಮಾದರಿ ಹೇಗಿದೆಯೆಂದರೆ, ಅದರ ಎದುರು ತುಳು, ಕೊಂಕಣಿ, ಕೊಡವ, ಬಂಜಾರ, ಉರ್ದು, ಕೊರಚ ಇತ್ಯಾದಿ ಹತ್ತಾರು ಸಣ್ಣಪುಟ್ಟ ಭಾಷೆಗಳು ಹೊಸ್ತಿಲಿನಿಂದಾಚೆ ನಿಂತಿರುವ ಸ್ಥಿತಿ ಇದೆ. ಈ ಭಾಷೆಗಳನ್ನಾಡುವ ಮಕ್ಕಳು ಶಾಲೆಯೊಳಗೆ ಈ ಭಾಷಾ ಪದ ಪ್ರಯೋಗ ಮಾಡದಂತೆ, ನಮ್ಮ ಶಿಕ್ಷಣ ವ್ಯವಸ್ಥೆಯ ಕನ್ನಡ ನೋಡಿಕೊಂಡಿದೆ. ಇವೆಲ್ಲಾ ಭಾಷೆಗಳ ಪದ ಶ್ರೀಮಂತಿಕೆ ಕನ್ನಡದೊಳಕ್ಕೆ ಬಂದರೆ ಕನ್ನಡ ಬೆಳೆಯುತ್ತದೆ ಎಂಬ ಪ್ರಜ್ಞೆಯೂ ಈ ವ್ಯವಸ್ಥೆಗಿಲ್ಲ. ಇನ್ನೊಂದೆಡೆ ಪ್ರಾದೇಶಿಕ ಭಾಷೆ, ಸಮುದಾಯಗಳ ಭಾಷೆಗಳನ್ನೆಲ್ಲಾ ಗೇಲಿ, ಹಾಸ್ಯದ ಕ್ಯಾರಿಕೇಚರ್ ಆಗಿ ಪ್ರದರ್ಶಿಸುತ್ತಾ ಇವು ಕೀಳರಿಮೆಯಲ್ಲಿ ಬಳಲುವಂತೆ ನಮ್ಮ ಯಜಮಾನ ಕನ್ನಡ ಮಾಡಿದೆ.
ಬಾನು ಮುಷ್ತಾಕ್ ಎತ್ತಿರುವುದು ಈ ಪ್ರಶ್ನೆಯನ್ನೇ. ಉದಾ: ಮುಸ್ಲಿಂ ಲೇಖಕಿ, ದಲಿತ ಲೇಖಕ ಎಂದು ಗುರುತಿಸುವ ರೀತಿ ನಾವು ಬ್ರಾಹ್ಮಣ ಲೇಖಕ/ ಲೇಖಕಿಯನ್ನೆಲ್ಲಾ ಜಾತಿ ಗುರುತಿನ ಮೂಲಕ ಉಲ್ಲೇಖಿಸಿದರೆ, ನಾಳೆ ಭೂಕಂಪವೇ ಆಗಿ ಬಿಡಬಹುದು. ಇವರೆಲ್ಲಾ ‘ಕನ್ನಡ ಲೇಖಕ/ ಲೇಖಕಿಯರು!!’ ಉಳಿದವರು ಮುಸ್ಲಿಂ/ ದಲಿತ/ ಅಂಚಿನ ಹಣೆಪಟ್ಟಿಯ ಸೂಚಿಯ ಮೂಲಕ ಸ್ಥಾನ ಪಡೆದವರು! ಈ ವ್ಯಂಗ್ಯ ತಟ್ಟಿದ ದಿನ ಬಾನು ಅವರ ಆಳದ ವಿಷಾದ ಅರ್ಥವಾದೀತು.
ಇನ್ನು ಈ ಭುವನೇಶ್ವರಿ ಬಗ್ಗೆ ಸಣ್ಣ ವಿವರಣೆ. ಈ ದಸರಾ ಉತ್ಸವಕ್ಕೆ ಭುವನೇಶ್ವರಿ ಎಂಟ್ರಿ ಆಗಿ ಐದು ದಶಕ ಆಗಿದೆ, ಅಷ್ಟೆ! ಮಹಾರಾಜರ ದಸರಾ ಅಂತ್ಯವಾಗಿ ಜನರ ದಸರಾ ಶುರುವಾದಾಗ ಅಂಬಾರಿಯಲ್ಲಿ ಕೂತ ಆಶಯ ರೂಪ – ಭುವನೇಶ್ವರಿ.
ಅಚ್ಚರಿ ಎಂದರೆ ಇತಿಹಾಸದ ಎಲ್ಲೂ ಈ ನಾಡಿನ ಅಧಿದೇವತೆ ಎಂದು ಭುವನೇಶ್ವರಿಯನ್ನು ಗುರುತಿಸಿದ್ದಿಲ್ಲ! ಅಷ್ಟೇಕೆ, ಭಾರತ ಪುಲ್ಲಿಂಗದ ಭೌಗೋಳಿಕ ವಿಶೇಷವಾಗಿತ್ತು. ಸಾವರ್ಕರ್ ಕೂಡಾ ಭಾರತವನ್ನು ‘ಫಾದರ್ ಲ್ಯಾಂಡ್’ ಎಂದು ಕರೆದಿದ್ದರು. ಅದನ್ನು ಭಾರತಾಂಬೆ ಎಂದು ಬದಲಾಯಿಸಿದ್ದು ೨೦ನೇ ಶತಮಾನದ ಆದಿಯಲ್ಲಿ. ಅರವಿಂದ ಘೋಷ್ ಭಾರತದ ಭೂಪಟ ಹೆಣ್ಣಿನ ತರ ಇದೆ ಎಂದು ರೇಖು ಬಿಡಿಸಿದರೆ ; ಅವನೀಂದ್ರನಾಥ ಠಾಗೋರ್, ಸಾದಾ ಸೀರೆಯ ಭಾರತಮಾತೆಯ ಚಿತ್ರ ಬರೆದರು. ಭಾರತಮಾತೆ ಹುಟ್ಟಿದ್ದು ಹೀಗೆ. ಅದೇ ರಾಷ್ಟ್ರೀಯ ಭಾವನೆಯ ಮಥನದಲ್ಲಿ ಕರ್ನಾಟಕದ ನಮ್ಮ ಹಿರಿಯರು, ಕನ್ನಡ ನಾಡನ್ನು ಹಾಗೇ ಕಲ್ಪಿಸಿಕೊಂಡು, ಭಾರತಾಂಬೆಯ ಮಗಳು ಕನ್ನಡಾಂಬೆ ನಮ್ಮ ತಾಯಿಯಾದಳು. ಶತಮಾನದ ಚರಿತ್ರೆ ಮಾತ್ರ ಇರುವ ಈ ಬೆಳವಣಿಗೆ, ಪ್ರಜಾಸತ್ತಾತ್ಮಕ ಆಶಯಗಳ ಕಾರಣಕ್ಕೇ ಹುಟ್ಟಿತು.
ರಾಜರ ಕಾಲದಲ್ಲಿ ಭೂಮಿಯೆಂಬುದು ತಾಯಿಯೆಂದು ಪರಿಗಣಿತವಾದ ಉದಾಹರಣೆ ಎಲ್ಲಿದೆ? ರಾಜ ಎಲ್ಲ ಕಾಲದಲ್ಲೂ ಭೂಮಿಯ ಗಂಡ! ಜನಸಾಮಾನ್ಯರು ಮಾತ್ರ ಭೂಮ್ತಾಯಿ ಅಂತ ಕೈಮುಗಿತಿದ್ದರು. ನಮ್ಮ ನಾಡು, ತಾಯ್ನಾಡು, ತಾಯ್ನುಡಿ, ತಾಯ್ನಾಡಿಗೊಂದು ಸ್ವರೂಪ ಎಲ್ಲವೂ ಕಳೆದ ಶತಮಾನದ ರಾಷ್ಟ್ರೀಯ, ಪ್ರಜಾಸತ್ತಾತ್ಮಕ ಚಳವಳಿಯಿಂದ ಹುಟ್ಟಿಕೊಂಡಿದ್ದೇ ಹೊರತು, ಇತಿಹಾಸದ ಸೊತ್ತಂತೂ ಅಲ್ಲ. ಈ ತಾಯ್ನಾಡು ಅಲ್ಲಿನ ನುಡಿ- ಎಲ್ಲರನ್ನೂ ಒಳಗೊಂಡು, ಸಲಹಿ ಬೆಳೆಸುವಂತಿರಬೇಕೆ ಹೊರತು, ತನ್ನೊಳಗಿನ ಇತರ ಅಶಕ್ತ ಭಾಷಾ ಲೋಕಕ್ಕೆ ಕೀಳರಿಮೆ ತುಂಬಬಾರದು. ಈ ಪ್ರಶ್ನೆ ಎತ್ತಿದಾಗ, ಅಸಹನೆ ತೋರುವುದೇ ಯಜಮಾನಿಕೆಯ ದರ್ಪದ ಸಂಕೇತ.
” ಅಚ್ಚರಿ ಎಂದರೆ ಇತಿಹಾಸದ ಎಲ್ಲೂ ಈ ನಾಡಿನ ಅಧಿದೇವತೆ ಎಂದು ಭುವನೇಶ್ವರಿಯನ್ನು ಗುರುತಿಸಿದ್ದಿಲ್ಲ! ಅಷ್ಟೇಕೆ, ಭಾರತ ಪುಲ್ಲಿಂಗದ ಭೌಗೋಳಿಕ ವಿಶೇಷವಾಗಿತ್ತು. ಸಾವರ್ಕರ್ ಕೂಡಾ ಭಾರತವನ್ನು ‘-ದರ್ ಲ್ಯಾಂಡ್’ ಎಂದು ಕರೆದಿದ್ದರು. ಅದನ್ನು ಭಾರತಾಂಬೆ ಎಂದು ಬದಲಾಯಿಸಿದ್ದು ೨೦ನೇ ಶತಮಾನದ ಆದಿಯಲ್ಲಿ.”
-ಸುರೇಶ್ ಕಂಜರ್ಪಣೆ
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…