ಅಂಕಣಗಳು

ದೇವಭೂಮಿ ದ್ವಾರಕಾದ ‘ಮೀಟಾಪುರ್ ಮದರ್ ಥೆರೇಸಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ 

ಬಡಪಾಯಿಗಳ ಸೇವೆ ಮಾಡಿ ಜನರ ಹೃದಯ ಗೆದ್ದ ಮಾತೆ 

ಮದರ್ ಥೆರೇಸಾ ಈಗ ನಮ್ಮ ನಡುವೆ ಇಲ್ಲ. ಆದರೆ, ಅವರನ್ನು ನೆನಪಿಸುವಂತಹ ಆನೇಕ ವ್ಯಕ್ತಿಗಳು ಅಲ್ಲೊಮ್ಮೆ ಇಲ್ಲೊಮ್ಮೆ ಇಂದಿಗೂ ಕಂಡು ಬರುತ್ತಾರೆ. ಗುಜರಾತಿನ ‘ಮೀಟಾಪುರ್ ಮದರ್ ಥೆರೇಸಾ’ ಎಂಬವರು ಅಂತಹ ಒಬ್ಬರು. ಇವರ ನಿಜ ಹೆಸರು ಸಿಸ್ಟರ್ ಎಲ್ಸಿ ವಡಕ್ಕೇಕರ. ೮೭ ವರ್ಷ ಪ್ರಾಯದ ಇವರು ಗುಜರಾತಿನ ದೇವಭೂಮಿ ದ್ವಾರಕಾ ಜಿಲ್ಲೆಯ ಮಿಟಾಪುರದ ಒಬ್ಬ ಕ್ಯಾಥೊಲಿಕ್ ನನ್. ಅವರು ಅಲ್ಲಿನ ಅನಾಥ ಮಾನಸಿಕ ರೋಗಿಗಳಿಗೆ ಮಾಡುವ ಸೇವೆಯನ್ನು ನೋಡಿ ಅಲ್ಲಿನ ಜನ ಅವರನ್ನು ಪ್ರೀತಿಯಿಂದ ‘ಮೀಟಾಪುರದ ಮದರ್ ಥೆರೇಸಾ’ ಎಂದು ಕರೆಯುತ್ತಾರೆ.

ನಮ್ಮ ದೇಶದಲ್ಲಿ ಆನೇಕ ಕುಟುಂಬಗಳು ತೀರ್ಥಯಾತ್ರೆಗೆ ಹೋದಾಗ ತಮ್ಮ ಮಾನಸಿಕ ಅಸ್ವಸ್ಥ ಬಂಧುಗಳನ್ನು ಅಲ್ಲಿಯೇ ಬಿಟ್ಟು ಬರುವುದು ಇದೆ. ಹೀಗೆ ನಿರ್ಗತಿಕರಾಗುವ ಮಾನಸಿಕ ಅಸ್ವಸ್ಥರು ದಿಕ್ಕುದೆಸೆಯಿಲ್ಲದೆ ಅಕ್ಷರಶಃ ಬಿಡಾಡಿ ಜನುವಾರುಗಳಂತೆ ರಸ್ತೆಗಳಲ್ಲಿ ಅಲೆದಾಡುತ್ತಾರೆ. ಸ್ನಾನವಿಲ್ಲದೆ ದುರ್ನಾತ ಬೀರುವ ಶರೀರ, ಕೊಳೆಯಾಗಿ ಹರಿದು ಚಿಂದಿಯಾದ ಬಟ್ಟೆ, ಎಣ್ಣೆ ನೀರಿಲ್ಲದೆ ಕೆದರಿದ ತಲೆಗೂದಲು, ಸರಿಯಾಗಿ ಉಣ್ಣಲು ತಿನ್ನಲು ಇಲ್ಲದೆ ಆರೋಗ್ಯ ಕೆಟ್ಟು, ಅರೆ ಆಯುಷಿಗಳಾಗಿ ಅನಾಥ ಹೆಣವಾಗುತ್ತಾರೆ.

ಗುಜರಾತಿನ ದೇವಭೂಮಿ ದ್ವಾರಕದಲ್ಲಿ ಹೀಗೆಯೇ ಬಿಟ್ಟು ಹೋದ ಮಾನಸಿಕ ಅಸ್ವಸ್ಥರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕುಟುಂಬಗಳು ತಮ್ಮ ಮಾನಸಿಕ ಅಸ್ವಸ್ಥರನ್ನು ರೈಲಲ್ಲಿ ತಂದು, ಭಾರತ-ಪಾಕಿಸ್ತಾನ ಗಡಿಯ ಹತ್ತಿರದ ಕೊನೆಯ ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಹೋಗುವುದು ಇಲ್ಲಿ ಸಾಮಾನ್ಯ. ಸಿಸ್ಟರ್ ಎಲ್ಸಿ ವಡಕ್ಕೇಕರ ಈ ಬಡಪಾಯಿಗಳ ಸೇವೆ ಮಾಡುವ ಮೂಲಕ ಅಲ್ಲಿನ ಜನರ ಹೃದಯ ಗೆದ್ದು ‘ಮೀಟಾಪುರದ ಮದರ್ ಥೆರೇಸಾ’ ಎಂದು ಹೆಸರಾಗಿದ್ದಾರೆ. ಹಲವು ವರ್ಷಗಳ ಹಿಂದೆ, ಟೈಟಸ್ ಮ್ಯಾಂಡಿ ಎಂಬ ಒಬ್ಬರು ಬಿಷಪ್ ಒಂದು ಭಾನುವಾರ ಚರ್ಚಿನಲ್ಲಿ ಮಾಸ್ ಮುಗಿಸಿ ವಾಪಸಾಗುತ್ತಿದ್ದಾಗ ದಾರಿಯಲ್ಲಿ ಒಬ್ಬ ಮಾನಸಿಕ ಅಸ್ವಸ್ಥ ವ್ಯಕ್ತಿ ಸೆಗಣಿ ತಿನ್ನುತ್ತಿರುವುದನ್ನು ಕಂಡು ಬಹಳ ವ್ಯಥೆಗೊಂಡರು. ಅವರು ಸಿಸ್ಟರ್ ಎಲ್ಸಿ ವಡೆಕ್ಕೇಕರ ಹಾಗೂ ಇನ್ನು ಕೆಲವು ನನ್ ಗಳನ್ನು ಕರೆದು, ತಾನು ಇಂತಹ ನಿರ್ಗತಿಕ ಮಾನಸಿಕ ಅಸ್ವಸ್ಥರಿಗಾಗಿ ಏನಾದರೂ ಮಾಡಬೇಕೆಂದಿದ್ದೇನೆ ಎಂದು ಹೇಳಿ, ಅವರ ಸಹಾಯವನ್ನು ಯಾಚಿಸಿದರು. ಆಗ ಸಿಸ್ಟರ್ ಎಲ್ಸಿ ವಡೆಕ್ಕೇಕರ ಅವರಿಗೆ ಸಹಾಯ ಮಾಡಲು ಮುಂದೆ ಬಂದರು. ಇದು ನಡೆದದ್ದು ೨೦೧೦ರಲ್ಲಿ. ಆ ವರ್ಷ ಕ್ರಿಸ್ಮಸ್ ದಿನದಂದು ಶುರುವಾದ ಸಿಸ್ಟರ್ ಎಲ್ಸಿ ವಡಕ್ಕೇರಾರ ಈ ಮಾನವೀಯ ಸೇವೆ ಇಂದಿಗೂ ಮುಂದುವರಿದಿದೆ.

ಸಿಸ್ಟರ್ ಎಲ್ಸಿ ವಡಕ್ಕೇಕರ ಪ್ರತೀದಿನ ಮಧ್ಯಾಹ್ನ ತಮ್ಮ ಕಾನ್ವೆಂಟಿನಲ್ಲಿ ಊಟ ತಯಾರಿಸಿ, ಅದನ್ನು ವಾಹನದಲ್ಲಿರಿಸಿಕೊಂಡು, ಸುತ್ತಮುತ್ತಲ ೧೭ ಚದರ ಮೈಲಿ ಸುತ್ತಳತೆಯಲ್ಲಿ ತಿರುಗಾಡಿ, ಸುಮಾರು ೪೦ ಸ್ಥಳಗಳಲ್ಲಿ ವಾಹನ ನಿಲ್ಲಿಸಿ, ಸುಮಾರು ೪೫ ಜನ ನಿರ್ಗತಿಕ ಮಾನಸಿಕ ಅಸ್ವಸ್ಥರಿಗೆ ಹಂಚುತ್ತಾರೆ. ಹಳದಿ ಬಣ್ಣದ ಇವರ ರಿಕ್ಷಾ ಬರುವುದು ಕಾಣಿಸುತ್ತಲೇ ಈ ಬಡಪಾಯಿಗಳು ಅದರ ಬಳಿ ಬಂದು, ತಮ್ಮ ಪಾಲಿನ ಆಹಾರ ತೆಗೆದುಕೊಳ್ಳುತ್ತಾರೆ. ಅಷ್ಟೂ ಮಾಡಲಾಗದ ಮಾನಸಿಕ ಅಸ್ವಸ್ಥರೂ ಇದ್ದಾರೆ. ಆಗ ಸಿಸ್ಟರ್ ಎಲ್ಸಿ ಅಥವಾ ಅವರ ಚಾಲಕ ಸಂಜಯ್ ಸಿರೂಕಾ ಅವರ ಹೆಸರನ್ನು ಕೂಗಿ ಕರೆದು ಆಹಾರ ಕೊಡುತ್ತಾರೆ. ಇನ್ನು ಕೆಲವರು ಇವರ ಬಳಿ ಬರುವುದೂ ಇಲ್ಲ, ಹೆಸರು ಕರೆದರೆ ಪ್ರತಿಕ್ರಿಯಿಸುವುದೂ ಇಲ್ಲ. ಅಂತಹರು ಯಾವ ಮರದಡಿ, ಯಾವ ಕಟ್ಟಡದ ಮೂಲೆಯಲ್ಲಿ ಕುಳಿತ್ತಿದ್ದಾರೆಂದು ಪತ್ತೆ ಹಚ್ಚಿ, ಆಹಾರ ಕೊಟ್ಟು ಬರುತ್ತಾರೆ.

ಕೆಲವು ಮಾನಸಿಕ ಅಸ್ವಸ್ಥರು ತಮ್ಮ ಪಾಲಿನ ಆಹಾರ ತೆಗೆದುಕೊಂಡು, ಸಿಸ್ಟರ್ ಎಲ್ಸಿಯತ್ತ ಸಣ್ಣದೊಂದು ನಗು ಬೀರುತ್ತಾರೆ. ಮತ್ತೂ ಕೆಲವರ ಮುಖದಲ್ಲಿ ಯಾವ ಭಾವನೆಗಳೂ ಗೋಚರಿಸುವುದಿಲ್ಲ. ಸಿಸ್ಟರ್ ಎಲ್ಸಿ ಎಲ್ಲರನ್ನೂ ಪ್ರೀತಿಯಿಂದ ನೋಡಿ, ನಗು ಬೀರಿ, ಅವರ ತಲೆ ಸವರುತ್ತಾರೆ ಅಥವಾ ಭುಜ ತಟ್ಟುತ್ತಾರೆ. ಮಹಿಳಾ ಮಾನಸಿಕ ಅಸ್ವಸ್ಥರಾಗಿದ್ದರೆ ತಬ್ಬಿಕೊಳ್ಳುತ್ತಾರೆ. ಯಾರ ಮೈ ಮೇಲಾದರೂ ಗಾಯಗಳು ಕಂಡರೆ, ನಲವತ್ತು ವರ್ಷಗಳ ಕಾಲ ನರ್ಸ್ ಆಗಿ ರೋಗಿಗಳ ಸೇವೆ ಮಾಡಿದ ಅನುಭವವಿರುವ ಅವರು ಔಷಧಿ ಹಚ್ಚಿ, ಬ್ಯಾಂಡೇಜು ಕಟ್ಟುತ್ತಾರೆ.

ಸಿಸ್ಟರ್ ಎಲ್ಸಿ ಈವರೆಗೆ ಒಂದು ದಿನವೂ ಆಹಾರ ತರುವುದನ್ನು ನಿಲ್ಲಿಸಿಲ್ಲ. ಹಾಗೆ ಒಂದು ವೇಳೆ ನಿಲ್ಲಿಸಿದರೆ ಆ ನಿರ್ಗತಿಕ ಮಾನಸಿಕ ಅಸ್ವಸ್ಥರು ಉಪವಾಸವಿರಬೇಕಾಗುತ್ತದೆ ಎಂಬುದು ಅವರಿಗೆ ತಿಳಿದಿದೆ. ಆಹಾರದಲ್ಲಿ ಅನ್ನ, ಚಪಾತಿ, ಪಲ್ಯ ಹಾಗೂ ಒಂದು ಬಾಟಲಿ ನೀರು ಇರುತ್ತದೆ. ಹೆಚ್ಚಿನವರಿಗೆ ಎರಡು ಚಪಾತಿ, ಅನ್ನ, ಪಲ್ಯ ಸಾಕಾಗುತ್ತದೆ. ಆದರೆ, ಕೆಲವರು ಎಂಟು, ಹತ್ತು ಚಪಾತಿ ತಿನ್ನುತ್ತಾರೆ. ಯಾರು ಎಷ್ಟು ಚಪಾತಿ ತಿನ್ನುತ್ತಾರೆ ಎಂದು ತಿಳಿದಿರುವ ಸಿಸ್ಟರ್ ಎಲ್ಸಿ ಅವರಿಗೆ ಅಷ್ಟಷ್ಟು ಚಪಾತಿ, ಅನ್ನ ಹಾಕಿ ಕೊಡುತ್ತಾರೆ. ರವಿವಾರ ಹೊರತಾಗಿ ಉಳಿದೆಲ್ಲ ದಿನ ಕಾನ್ವೆಂಟಿನಲ್ಲಿ ಒಬ್ಬಳು ಸಹಾಯಕಿಯ ನೆರವಿನಿಂದ ಅವರು ಆಹಾರ ಬೇಯಿಸಿ ತರುತ್ತಾರೆ. ಪ್ರತೀ ರವಿವಾರದ ದಿನ ಹಸ್ಮುಖ್ ಭಾರತಿ ಎಂಬ ಸ್ಥಳೀಯ ನಾಗೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದ ಅರ್ಚಕರು ತಮ್ಮ ಹೆಂಡತಿಯ ಸಹಾಯದಿಂದ ತಾವೇ ಅಡುಗೆ ಮಾಡಿ ಕೊಡುತ್ತಾರೆ. ಹಾಗೂ, ಕೆಲವೊಮ್ಮೆ ಅವರ ಜೊತೆ ಹೋಗಿ ಆಹಾರ ಹಂಚಲು ಸಹಾಯ ಮಾಡುತ್ತಾರೆ. ಸುತ್ತಮುತ್ತಲ ಹಿಂದೂ ವ್ಯಾಪಾರಿಗಳು ಅಡುಗೆಗೆ ಬೇಕಾದ ಅಕ್ಕಿ, ಬೇಳೆ, ತರಕಾರಿ ಹಾಗೂ ಇತರ ದಿನಸಿಗಳನ್ನು ದಾನ ನೀಡುವುದರಿಂದ ಸಿಸ್ಟರ್ ಎಲ್ಸಿಯವರಿಗೆ ಅವುಗಳನ್ನು ಮಾರುಕಟ್ಟೆಯಿಂದ ಖರೀದಿಸುವ ಅಗತ್ಯ ಬೀಳುವುದಿಲ್ಲ.

ಸಿಸ್ಟರ್ ಎಲ್ಸಿಯವರ ವಾಹನ ಚಾಲಕ ಸಿರೂಕಾ ಹಿಂದೆ ಒಬ್ಬ ಕುಡುಕನಾಗಿದ್ದ. ಅವರ ಸಂಪರ್ಕಕ್ಕೆ ಬಂದು ಅವರ ವಾಹನ ಚಾಲಕನಾದ ನಂತರ ಅವನು ಕುಡಿಯುವುದನ್ನು ಸಂಪೂರ್ಣ ಬಿಟ್ಟಿದ್ದಾನೆ. ಮಾನಸಿಕ ಅಸ್ವಸ್ಥರ ಸೇವೆ ಮಾಡುವುದು ಎಲ್ಲ ಸಮಯದಲ್ಲೂ ಅಷ್ಟು ಸುಲಭವಲ್ಲ. ಒಮ್ಮೆ ಒಬ್ಬ ಯುವ ಪ್ರಾಯದ ಮಾನಸಿಕ ಅಸ್ವಸ್ಥನೊಬ್ಬ ಇವರು ಕೊಟ್ಟ ಆಹಾರವನ್ನು ಸಂತೋಷದಿಂದ ತೆಗೆದುಕೊಂಡ. ಆದರೆ, ಮರುಕ್ಷಣ ಅವರ ಎದುರಲ್ಲೇ ಅದನ್ನು ನೆಲಕ್ಕೆ ಎಸೆದ. ಮತ್ತೊಮ್ಮೆ ಒಬ್ಬಳು ಮಾನಸಿಕ ಅಸ್ವಸ್ಥ ಮಹಿಳೆ ಇವರತ್ತ ಕಲ್ಲು ಎಸೆದಳು. ಮೀಟಾಪುರದ ಚರ್ಚು ಪ್ರಾರಂಭದಲ್ಲಿ ಇಂತಹವರಿಗಾಗಿ ಒಂದು ಆಶ್ರಮವನ್ನು ತೆರೆದಿತ್ತು. ಆದರೆ, ಮಾನಸಿಕ ಅಸ್ವಸ್ಥರನ್ನು ಒಂದೆಡೆ ನೆಲೆ ನಿಲ್ಲುವಂತೆ ಮಾಡುವುದು ಅಸಾಧ್ಯವಾಗಿ, ಅದನ್ನು ನಿಲ್ಲಿಸಿತು.

” ಕೆಲವರು ಆಹಾರ ತೆಗೆದುಕೊಂಡು ಸಿಸ್ಟರ್ ಎಲ್ಸಿಯತ್ತ ಸಣ್ಣದೊಂದು ನಗು ಬೀರುತ್ತಾರೆ. ಮತ್ತೂ ಕೆಲವರ ಮುಖದಲ್ಲಿ ಯಾವ ಭಾವನೆಗಳೂ ಗೋಚರಿಸುವುದಿಲ್ಲ. ಸಿಸ್ಟರ್ ಎಲ್ಸಿ ಎಲ್ಲರನ್ನೂ ಪ್ರೀತಿಯಿಂದ ನೋಡಿ, ನಗು ಬೀರಿ, ಅವರ ತಲೆ ಸವರುತ್ತಾರೆ ಅಥವಾ ಭುಜ ತಟ್ಟುತ್ತಾರೆ. ಮಹಿಳಾ ಮಾನಸಿಕ ಅಸ್ವಸ್ಥರಾಗಿದ್ದರೆ ತಬ್ಬಿಕೊಳ್ಳುತ್ತಾರೆ”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ದರ ವ್ಯತ್ಯಾಸ: ಗ್ರಾಹಕರ ಹಿತವೇ ಮುಖ್ಯ

ಔಷಧಿಗಳ ನೈಜ ದರಕ್ಕೂ ಮತ್ತು ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಗಮನಿಸಿ ತೀವ್ರ…

1 min ago

‘ಸರೆಂಡರ್ ಆದ ಹುಡುಗರು ಬೇರೆ ಕಥೆ ಹೇಳುತ್ತಿದ್ದಾರೆ!?’

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಅಂತೂ ನಾಲ್ಕು ಹುಡುಗರು ಸ್ಟೇಷನ್ ಒಳಗೆ ಹೋದರು ಎಂದರೆ ಮತ್ತೊಂದು ಸಂಕಟ ಶುರು ಪಿಎಸ್‌ಐ…

12 mins ago

ಮಡಿಕೇರಿ ದಸರಾ: ಕೆಎಸ್‌ಆರ್‌ಟಿಸಿ ಪ್ರವಾಸಿ ಪ್ಯಾಕೇಜ್

ನವೀನ್ ಡಿಸೋಜ ಒಂದೇ ದಿನದಲ್ಲಿ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ; ವಯಸ್ಕರಿಗೆ ೪೦೦, ಮಕ್ಕಳಿಗೆ ೩೦೦ ರೂ.ದರ  ಮಡಿಕೇರಿ:…

26 mins ago

ದಸರಾ ಖರ್ಚಿನ ಭಾರ ಇಳಿಸಿದ ಟಿಕೆಟ್ ಮಾರಾಟದ ಆದಾಯ

ಕೆ.ಬಿ.ರಮೇಶನಾಯಕ ಗೋಲ್ಡ್ ಕಾರ್ಡ್, ಜಂಬೂಸವಾರಿ, ಪಂಜಿನ ಕವಾಯತು ಟಿಕೆಟ್ ಸೋಲ್ಡ್ ಔಟ್ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಪ್ಲಾನ್ ಯಶಸ್ವಿ ಮೈಸೂರು:…

46 mins ago

ದಸರಾ: ರಾಜಪಥದಲ್ಲಿ ಅಂಬಾರಿ ಸಂಚಾರ!

ಪ್ರಶಾಂತ್ ಎಸ್. ಕೆಎಸ್‌ಟಿಡಿಸಿ ವತಿಯಿಂದ ವ್ಯವಸ್ಥೆ; ಪ್ರತಿನಿತ್ಯ ೩ ಟ್ರಿಪ್‌ಗಳಲ್ಲಿ ಪ್ರಯಾಣ ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ‘ಅಂಬಾರಿ ಬಸ್’…

51 mins ago

ವರ್ತಕರಿಗೆ ಹಬ್ಬದ ನಿರಾಳತೆ: ದೀಪಾವಳಿ ನಂತರಕ್ಕೆ UPI ಮರ್ಚೆಂಟ್‌ ಶುಲ್ಕ ಜಾರಿ ಮುಂದೂಡಿಕೆ

ನವದೆಹಲಿ: ವರ್ತಕರಿಗೆ ದೀಪಾವಳಿ ಸಂದರ್ಭದಲ್ಲಿ ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಅಕ್ಟೋಬರ್‌ 15ರಿಂದ ಜಾರಿಯಾಗಬೇಕಿದ್ದ ಆಯ್ದ UPI ಮರ್ಚೆಂಟ್‌ ಪಾವತಿಗಳ ಮೇಲಿನ…

18 hours ago