ಅಂಕಣಗಳು

ಟ್ರಂಪ್ಗೆ ಮೆರ್ಜ್ ಸವಾಲು, ಯೂರೋಪ್ ಒಕ್ಕೂಟಕ್ಕೆ ಪ್ರತ್ಯೇಕ ಸೇನೆ

ಡಿ.ವಿ.ರಾಜಶೇಖರ 

ಅತಂತ್ರ ರಾಜಕೀಯ ಸ್ಥಿತಿಯಿಂದ ಹೊರಬರಲು ಜರ್ಮನಿಯಲ್ಲಿ ಕಳೆದ ವಾರ ನಡೆದ ದಿಢೀರ್ ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ (ಸಿಡಿಯು) ಮತ್ತು ಅದರ ಮಿತ್ರ ಪಕ್ಷ ಕ್ರಿಶ್ಚಿಯನ್ ಸೋಷಿಯಲ್ ಯೂನಿಯನ್ (ಸಿಎಸ್‌ಯು) ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಈ ಮೈತ್ರಿಕೂಟ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅವಕಾಶವಾದಿ ನೀತಿಗಳಿಗೆ ಬಲವಾದ ಸವಾಲೊಡ್ಡುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ.

ಅಧಿಕಾರಾರೂಢ ಸೋಷಿಯಲ್ ಡೆಮಾಕ್ರಟಿಕ್ ಪಕ್ಷ (ಎಸ್‌ಪಿಡಿ) ಮೂರನೆಯ ಸ್ಥಾನಕ್ಕೆ ಇಳಿದಿದ್ದು, ಕಟ್ಟಾ ಬಲಪಂಥೀಯ ಆಲ್ಟರ್‌ನೇಟಿವ್ ಟು ಜರ್ಮನಿ (ಎಎಫ್‌ಡಿ) ಎರಡನೆಯ ಸ್ಥಾನಗಳಿಸಿದೆ. ಯಾವುದೇ ಪಕ್ಷಕ್ಕೆ ಮತ್ತೆ ಬಹುಮತ ಬಂದಿಲ್ಲ. ಬೇರೆ ಪಕ್ಷಗಳ ಜೊತೆ ಮೈತ್ರಿ ಮತ್ತೆ ಅನಿವಾರ್ಯ. ಇತ್ತೀಚಿನ ವರ್ಷಗಳಲ್ಲಿ ಜರ್ಮನಿಯಲ್ಲಿ ಜನಪ್ರಿಯವಾದ ವಲಸೆ ವಿರೋಧಿ ಮತ್ತು ಜರ್ಮನಿ ಜರ್ಮನಿಯರಿಗೆ ಮಾತ್ರ ಎಂಬ ನೀತಿಯನ್ನು ಪ್ರಚುರಪಡಿಸುತ್ತ ಬಂದಿರುವ ಕಟ್ಟಾ ಬಲಪಂಥೀಯ ಎಎ-ಡಿ ಪಕ್ಷ ಅಧಿಕಾರಕ್ಕೆ ಬಂದುಬಿಡಬಹುದು ಎಂಬ ಆತಂಕ ದೇಶದಲ್ಲಿತ್ತು. ಆದರೆ ಮತದಾರರು ನಿರೀಕ್ಷೆಯನ್ನು ಸುಳ್ಳಾಗಿಸಿದ್ದಾರೆ. ಆದರೂ ಆ ಪಕ್ಷ ಎರಡನೆಯ ಸ್ಥಾನಕ್ಕೆ ಬಂದಿರುವುದು ಬೆಳೆಯುತ್ತಿರುವ ಅದರ ಜನಪ್ರಿಯತೆಯನ್ನು ಒತ್ತಿಹೇಳುತ್ತದೆ. ಆ ಪಕ್ಷದ ನಾಯಕಿ ಅಲೀಸಾ ವೈಡಲ್ ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ವಿಚಿತ್ರ ಎಂದರೆ ಅವರಿಗೆ ಹೆಚ್ಚು ಬೆಂಬಲ ಕಂಡುಬಂದಿರುವುದು ಒಂದು ಕಾಲಕ್ಕೆ ಕಮ್ಯುನಿಸ್ಟರ ಭದ್ರಕೋಟೆಯಾಗಿದ್ದ ಪೂರ್ವ ಜರ್ಮನಿಯಲ್ಲಿ. ಕಮ್ಯುನಿಸ್ಟರ ಕುಟುಂಬಗಳ ಹೊಸಜನಾಂಗದ ಯುವಕರೆಲ್ಲಾ ಬಲಪಂಥೀಯರಾಗಿ ಬದಲಾಗಿದ್ದಾರೆ. ಕ್ರಮೇಣ ಇವರ ಪ್ರಭಾವ ಪಶ್ಚಿಮ ಜರ್ಮನಿಗೂ ಹಬ್ಬುವ ಸೂಚನೆಗಳಿವೆ. ಇದೇನೇ ಇದ್ದರೂ ಇತರ ಪಕ್ಷಗಳ ಜೊತೆಗೂಡಿ ಸರ್ಕಾರ ನಡೆಸಲು ಅಲೀಸಾ ಮುಂದಾಗಿದ್ದರು. ಆದರೆ ಇತರ ಯಾವುದೇ ಪಕ್ಷಗಳು ಮೈತ್ರಿಗೆ ಸಿದ್ಧವಿಲ್ಲದ್ದರಿಂದಾಗಿ ಸರ್ಕಾರ ರಚಿಸುವ ಯತ್ನವನ್ನು ಅವರು ಕೈಬಿಟ್ಟಿದ್ದಾರೆ. ಕಮ್ಯುನಿಸಂ ಬಲವಾಗಿದ್ದ ಯೂರೋಪಿನ ಹಲವು ದೇಶಗಳಲ್ಲಿ ಬಲಪಂಥೀಯ ಪಕ್ಷಗಳು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯಗೊಳ್ಳುತ್ತಿರುವುದು ಈಗ ಎದ್ದು ಕಾಣುತ್ತಿದೆ. ಅಮೆರಿಕದಲ್ಲಿಯೇ ಬದಲಾವಣೆ ಆಗಿದ್ದು ಬಲಪಂಥೀಯ, ರಿಯಲ್ ಎಸ್ಟೇಟ್ ಉದ್ಯಮಪತಿ, ಸರ್ವಾಧಿಕಾರಿ ಲಕ್ಷಣಗಳುಳ್ಳ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಿದ್ದಾರೆ. ಅಮೆರಿಕ ಫಸ್ಟ್ ಎಂಬ ಸೂತ್ರವನ್ನು ಮುಂದೆಮಾಡಿಕೊಂಡು ಸರ್ಕಾರವನ್ನು ಒಂದು ಉದ್ಯಮದ ರೀತಿಯಲ್ಲಿ ನಡೆಸಲು ಹೊರಟಿದ್ದಾರೆ. ಅವರ ನೀತಿಗಳು ಈಗಾಗಲೇ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿವೆ.

ಅಕ್ರಮವಾಗಿ ವಲಸೆ ಬಂದವರನ್ನು ಹಿಡಿದು ಅನಾಮತ್ತಾಗಿ ವಿಮಾನ ಹತ್ತಿಸಿ ಅವರವರ ದೇಶಗಳಿಗೆ ಹೊತ್ತುಹಾಕಲಾಗುತ್ತಿದೆ. ಆಡಳಿತ ಸುಧಾರಣೆ ಮತ್ತು ಅನಗತ್ಯ ವೆಚ್ಚದ ಹೆಸರಿನಲ್ಲಿ ಮಾನವೀಯ ಕಾರಣಗಳಿಗೆ ನೀಡಲಾಗುತ್ತಿದ್ದ ನೆರವನ್ನೂ ನಿಲ್ಲಿಸಲಾಗಿದೆ. ನೆರವಿನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಪ್ರಸ್ತುತ ಆಡಳಿತ ವ್ಯವಸ್ಥೆ ಬದಲಿಸುವ ಹೆಸರಿನಲ್ಲಿ ನೂರಾರು ಆದೇಶಗಳನ್ನು ಹೊರಡಿಸಲಾಗಿದೆ. ಗಾಜಾ ಪ್ರದೇಶದಿಂದ ಪ್ಯಾಲೆಸ್ಟೇನ್ ಜನರನ್ನು ತೆರವು ಮಾಡಿಸಿ ಅಲ್ಲಿ ಮನರಂಜನಾ ತಾಣ ನಿರ್ಮಾಣ ಮಾಡುವ ಇಂಗಿತವನ್ನು ಅವರು ವ್ಯಕ್ತಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಾನ ತೆರಿಗೆ ಹೇರಿಕೆಯನ್ನು ಘೋಷಿಸಲಾಗಿದೆ. ಚೀನಾ, ಕೆನಡಾ, ಮೆಕ್ಸಿಕೊ ಮುಂತಾದ ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ಘೋಷಿಸಲಾಗಿದೆ. ಇದೀಗ ಯುರೋಪ್ ದೇಶಗಳಿಂದ ಬರುವ ವಸ್ತುಗಳ ಮೇಲೂ ಶೇ.೨೫ರಷ್ಟು ತೆರಿಗೆ ಘೋಷಿಸಲಾಗಿದೆ. ಪಶ್ಚಿಮ ದೇಶಗಳ ಮಿಲಿಟರಿ ಒಕ್ಕೂಟ ’ನ್ಯಾಟೋ’ಗೆ ಅಮೆರಿಕ ಏಕೆ ಹೆಚ್ಚು ಹಣನೀಡಬೇಕು? ಯೂರೋಪ್ ದೇಶಗಳು ಕಡಿಮೆ ಹಣ ಏಕೆ ಕೊಡುತ್ತಿವೆ. ಅವುಗಳೂ ಹೆಚ್ಚು ಕೊಡಬೇಕು. ಇಲ್ಲದೆ ಹೋದರೆ ಯೂರೋಪ್ ಭದ್ರತೆಗೆ ಅಮೆರಿಕ ಹಣ ನೀಡುವುದಿಲ್ಲ ಎಂದು ಟ್ರಂಪ್ ಘೋಷಿಸಿದ್ದಾರೆ. ಸೋವಿಯತ್ ಒಕ್ಕೂಟ ಒಡೆದು ಹೋಗಿ ಕಮ್ಯೂನಿಸಂ ಮಾದರಿ ಆಡಳಿತ ಅಂತ್ಯವಾದ ನಂತರ ಉದಾರವಾದಿ ಬಂಡವಾಳಶಾಹಿ ಮಾದರಿ ಆರ್ಥಿಕ ವ್ಯವಸ್ಥೆಯನ್ನು ಅಪ್ಪಿಕೊಂಡ ದೇಶಗಳು ಇನ್ನೂ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ. ಉಕ್ರೇನ್‌ನ ಮೇಲೆ ರಷ್ಯಾ ಅತಿಕ್ರಮಣ ಮತ್ತು ಆನಂತರ ರಷ್ಯಾದಿಂದ ಆಮದಾಗುತ್ತಿದ್ದ, ತೈಲ ಮತ್ತು ಅನಿಲ ಪೂರೈಕೆ ನಿಂತ ನಂತರ ಯೂರೋಪಿನ ದೇಶಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿವೆ. ಸಂಕಷ್ಟದ ಮಧ್ಯೆಯೂ ಜರ್ಮನಿ, ಫ್ರಾನ್ಸ್ ಮುಂತಾದ ದೇಶಗಳು ಉಕ್ರೇನ್ ಪರ ನಿಂತು ನೆರವಾಗುತ್ತಿವೆ.

ಕಳೆದ ವರ್ಷದವರೆಗೆ ಅಮೆರಿಕ ಕೂಡ ರಷ್ಯಾ ಅತಿಕ್ರಮಣವನ್ನು ವಿರೋಧಿಸಿ ಉಕ್ರೇನ್‌ಗೆ ಅಪಾರ ಪ್ರಮಾಣದಲ್ಲಿ ರಕ್ಷಣಾ ನೆರವು ನೀಡುತ್ತ ಬಂದಿದೆ. ಆದರೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ ಎಲ್ಲವೂ ತಿರುಗುಮುರುಗಾಗಿದೆ. ಪ್ರಜಾತಂತ್ರದ ದೇಶವೊಂದು ಸರ್ವಾಧಿಕಾರವಿರುವ ದೇಶದ ಜೊತೆ ಹೊಂದಾಣಿಕೆ ಮಾಡಿಕೊಂಡ ವಿಚಿತ್ರ ಬೆಳವಣಿಗೆ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಆಗಿದೆ. ದೊಡ್ಡ ಮತ್ತು ಸರ್ವಾಧಿಕಾರಿ ಆಡಳಿತವಿರುವ ದೇಶವೊಂದು ನೆರೆಯ ಸಣ್ಣ ದೇಶದ ಮೇಲೆ ಅತಿಕ್ರಮಣ ಮಾಡುವುದು ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ. ಆದರೆ ಟ್ರಂಪ್‌ಗೆ ಹಾಗನ್ನಿಸಿಲ್ಲ. ಶೀತಲ ಸಮರಕಾಲದಿಂದಲೂ ಸೋವಿಯತ್ ಒಕ್ಕೂಟ (ಈಗ ರಷ್ಯಾ) ಅಮೆರಿಕ ಶತ್ರು ದೇಶಗಳು. ಆದರೆ ಹಠಾತ್ತನೆ ಟ್ರಂಪ್ ರಷ್ಯಾದ ಅಧ್ಯಕ್ಷ ಪುಟಿನ್ ಜೊತೆ ಸ್ನೇಹ ಬೆಳಸಿ ವ್ಯಾಪಾರ ಕುದುರಿಸಲು ಯೋಚಿಸುತ್ತಿದ್ದಾರೆ.

ಯೂರೋಪ್ ಮತ್ತು ಅಮೆರಿಕ ನಡುವೆ ಎರಡನೆಯ ಮಹಾಯುದ್ಧದ ಕಾಲದಿಂದಲೂ ಮೈತ್ರಿ ಇದೆ. ಜಾಗತಿಕ ಸಮಸ್ಯೆಗಳ ವಿಚಾರದಲ್ಲಿ ಹೊಂದಾಣಿಕೆ ಇದೆ. ಆದರೆ ಟ್ರಂಪ್ ಅಧಿಕಾರಕ್ಕೆ ಬಂದಮೇಲೆ ಆ ಹೊಂದಾಣಿಕೆ, ಸ್ನೇಹ ಮರೆಯಾಗುತ್ತಿದೆ. ಉಕ್ರೇನ್ ವಿಚಾರದಲ್ಲಂತೂ ಯೂರೋಪ್ ಮತ್ತು ಅಮೆರಿಕ ವಿರುದ್ಧ ದಿಕ್ಕಿನಲ್ಲಿ ಇದ್ದಂತೆ ಕಾಣುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ನಿಲ್ಲಿಸಿ ಸಾಂತಿ ಸ್ಥಾಪಿಸುವುದಾಗಿ ಹೇಳುತ್ತಿದ್ದ ಟ್ರಂಪ್ ಇದೀಗ ಯೋಚಿಸುತ್ತಿರುವ ದಿಕ್ಕೇ ಬದಲಾಗಿದೆ. ಉಕ್ರೇನ್‌ಗೆ ಈವರೆಗೆ ಕೊಟ್ಟಿರುವ ಮಿಲಿಟರಿ ನೆರವಿನ ಬೆಲೆ ಕಟ್ಟುತ್ತಿದ್ದಾರೆ. ಅಮೆರಿಕ ಕನಿಷ್ಠ ೩೫೦ಬಿಲಿಯನ್ ಡಾಲರ್ ನೆರವು ನೀಡಿದ್ದು ಅದನ್ನು ವಾಪಸ್ ಪಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದಾರೆ. ಸಾಲ ತೀರಿಸುವ ಮಾರ್ಗವಾಗಿ ಉಕ್ರೇನ್ ನಲ್ಲಿರುವ ಅಪಾರ ಖನಿಜ ಸಂಪತ್ತನ್ನು ಕೊಡಬೇಕೆಂದು ಟ್ರಂಪ್ ಕೇಳುತ್ತಿದ್ದಾರೆ. ವಿಧಿಯಿಲ್ಲದೆ ಉಕ್ರೇನ್ ಅಧ್ಯಕ್ಷ ವ್ಲಾಡಮಿರ್ ಜಲನಸ್ಕಿ ಒಪ್ಪಿದ್ದಾರೆ. ರಷ್ಯಾ ಜೊತೆ ಶಾಂತಿ ಒಪ್ಪಂದದ ಮಾತುಕತೆ ಮುಂದೆ ನಡೆಯುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಈ ಮಧ್ಯೆ ಯೂರೋಪ್ ವಿಚಾರದಲ್ಲಿ ಟ್ರಂಪ್ ತಳೆದಿರುವ ನಿಲುವು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಉಕ್ರೇನ್ ವಿಚಾರದಲ್ಲಿ ರಷ್ಯಾದ ಜೊತೆ ಕೈಜೋಡಿಸಬಾರದು ಎಂದು ಟ್ರಂಪ್‌ಗೆ ಮನವರಿಕೆ ಮಾಡಿಕೊಡಲು ಯುರೋಪ್ ನಾಯಕರು ಸಾಕಷ್ಟು ಯತ್ನಿಸಿದ್ದಾರೆ. ಪುಟಿನ್ ಬಲೆ ಬೀಸಿದ್ದಾರೆ. ಅದರಲ್ಲಿ ಯಾರೂ ಬೀಳಬಾರದು. ಆಕ್ರಮಿತ ಪ್ರದೇಶಗಳನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲ. ಉಕ್ರೇನ್ ನ್ಯಾಟೋ ಗುಂಪಿಗೆ ಸೇರಬಾರದು ಎನ್ನುತ್ತಿದ್ದಾರೆ. ಅಂಥವರ ಜೊತೆ ಮಾತುಕತೆ ಹೇಗೆ ಸಾಧ್ಯ ಎಂದು ಯೂರೋಪಿನ ನಾಯಕರು ಟ್ರಂಪ್‌ಗೆ ಹೇಳಿದ್ದಾರೆ. ಆದರೆ ಟ್ರಂಪ್ ಬದಲಾಗಿಲ್ಲ. ಅಷ್ಟೇ ಅಲ್ಲ ಯೂರೋಪ್ ವಿರುದ್ಧವೇ ಟ್ರಂಪ್ ಮಾತನಾಡಲು ಆರಂಭಿಸಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವೆ ಕದನ ವಿರಾಮ ಜಾರಿಯಾದ ಪಕ್ಷದಲ್ಲಿ ಶಾಂತಿಪಡೆಯನ್ನು ಕಳುಹಿಸಬೇಕಾದ ಜವಾಬ್ದಾರಿ ಯೂರೋಪಿನದು, ಅಮೆರಿಕದಲ್ಲ ಎಂದು ಟ್ರಂಪ್ ವಾದ ಮಾಡಿದ್ದಾರೆ. ಯೂರೋಪ್ ಪ್ರತಿನಿಧಿಯನ್ನು ಸೇರಿಸಿಕೊಳ್ಳದೇ ಅಮೆರಿಕದ ನೇತೃತದಲ್ಲಿ ಸೌದಿ ಅರೇಬಿಯಾದಲ್ಲಿ ಉಕ್ರೇನ್ ಕುರಿತು ಮಾತುಕತೆ ನಡೆಸಲಾಯಿತು. ಉಕ್ರೇನ್ ಪ್ರತಿನಿಽಯೂ ಆ ಮಾತುಕತೆಯಲ್ಲಿ ಇರಲಿಲ್ಲ. ಇದು ಸಹಜವಾಗಿ ಉಕ್ರೇನ್ ಅಷ್ಟೇ ಅಲ್ಲ ಯೂರೋಪ್ ದೇಶದ ನಾಯಕರನ್ನೂ ಕೆರಳಿಸಿದೆ. ಉಕ್ರೇನ್‌ಗೆ ಯೂರೋಪಿನ ದೇಶಗಳು ಸಾಕಷ್ಟು ಪ್ರಮಾಣದಲ್ಲಿ ನೆರವು ನೀಡಿವೆ. ಯುದ್ಧ ಆರಂಭವಾದ ಮೇಲೆ ಲಕ್ಷಾಂತರ ಉಕ್ರೇನ್ ಜನರಿಗೆ ಯೂರೋಪ್ ಆಶ್ರಯ ನೀಡಿದೆ. ಜರ್ಮನಿಯೊಂದೇ ಸುಮಾರು ನೂರು ಬಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ ಶಸಾಸ್ತ್ರಗಳನ್ನು ಪೂರೈಸಿದೆ. ಇಷ್ಟಾದರೂ ಮಾತುಕತೆಯಲ್ಲಿ ಯೂರೋಪ್ ಪ್ರಾತಿನಿಧ್ಯ ಇಲ್ಲದಿರುವುದು ಸಹಜವಾಗಿ ಬೇಸರಕ್ಕೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಜರ್ಮನಿಯಲ್ಲಿ ಚುನಾವಣೆಗಳು ನಡೆದು ಹೊಸ ಛಾನ್ಸಲರ್ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಸೃಷ್ಟಿಯಾಗಿವೆ. ಯೂರೋಪಿನಲ್ಲಿ ಜರ್ಮನಿ ಬಲಿಷ್ಠ ದೇಶವಾಗಿದೆ. ಯೂರೋಪಿನ ಅಂತಾರಾಷ್ಟ್ರೀಯ ನೀತಿಗಳನ್ನು ರೂಪಿಸುವ ಸಾಮರ್ಥ್ಯ ಅದಕ್ಕಿದೆ. ಹೊಸ ಛಾನ್ಸಲರ್ ಆಗಲಿರುವ ಫಡ್ರಿಕ್ ಮೆರ್ಜ್ ತಮ್ನ ಮೊದಲ ಭಾಷಣದಲ್ಲಿಯೇ ಅಮೆರಿಕದ ನೀತಿಗಳನ್ನು ಕಟುವಾಗಿ ಟೀಕಿಸಿದ್ದಾರೆ. ಉಕ್ರೇನ್‌ಗೆ ಬೆಂಬಲ ಮುಂದುವರಿಯುತ್ತದೆ ಎಂದು ಘೋಷಿಸಿದ್ದಾರೆ. ಯೂರೋಪನ್ನು ಬಲಪಡಿಸುವ ಮತ್ತು ಅಮೆರಿಕದ ನೆರಳಿನಿಂದ ದೂರಸರಿಯಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಅಂದರೆ ಯೂರೋಪ್ ಒಂದು ಸ್ವತಂತ್ರ ಒಕ್ಕೂಟವಾಗಿ ಬೆಳೆಯಬೇಕೆಂಬುದು ಅವರ ಬಯಕೆ. ಯೂರೋಪ್‌ಗೇ ಪ್ರತ್ಯೇಕ ರಕ್ಷಣಾ ವ್ಯವಸ್ಥೆ ರೂಪಿಸುವ ಮತ್ತು ಯೂರೋಪನ್ನು ಆರ್ಥಿಕವಾಗಿ ಬಲಪಡಿಸುವ ಅವರ ಮಾತುಗಳು ಹೊಸದೇನನ್ನೋ ಸೂಚಿಸುತ್ತವೆ. ಇದುವರೆಗೆ ಅಮೆರಿಕ ಮತ್ತು ಯೂರೋಪ್ ಒಕ್ಕೂಟದ ದೇಶಗಳು ಒಂದು ವೇದಿಕೆಯ ಭಾಗವಾಗಿದ್ದವು. ಬಹುಶಃ ಮುಂದೆ ಎರಡಾಗಿ ಒಡೆದು ಹೋಗಬಹುದಾದ ಸೂಚನೆ ಕಾಣುತ್ತಿದೆ. ಇದರಿಂದಾಗಬಹುದಾದ ಪರಿಣಾಮಗಳೇನು ಎಂಬುದು ಮುಂದಷ್ಟೇ ಗೊತ್ತಾಗಬೇಕಿದೆ.

” ಕಳೆದ ವರ್ಷದವರೆಗೆ ಅಮೆರಿಕ ಕೂಡ ರಷ್ಯಾ ಅತಿಕ್ರಮಣವನ್ನು ವಿರೋಧಿಸಿ ಉಕ್ರೇನ್‌ಗೆ ಅಪಾರ ಪ್ರಮಾಣದಲ್ಲಿ ರಕ್ಷಣಾ ನೆರವು ನೀಡುತ್ತ ಬಂದಿದೆ. ಆದರೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ ಎಲ್ಲವೂ ತಿರುಗುಮುರುಗಾಗಿದೆ. ಪ್ರಜಾತಂತ್ರದ ದೇಶವೊಂದು ಸರ್ವಾಧಿಕಾರವಿರುವ ದೇಶದ ಜೊತೆ ಹೊಂದಾಣಿಕೆ ಮಾಡಿಕೊಂಡ ವಿಚಿತ್ರ ಬೆಳವಣಿಗೆ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಆಗಿದೆ. ದೊಡ್ಡ ಮತ್ತು ಸರ್ವಾಽಕಾರಿ ಆಡಳಿತವಿರುವ ದೇಶವೊಂದು ನೆರೆಯ ಸಣ್ಣ ದೇಶದ ಮೇಲೆ ಅತಿಕ್ರಮಣ ಮಾಡುವುದು ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ. ಆದರೆ ಟ್ರಂಪ್‌ಗೆ ಹಾಗನ್ನಿಸುವುದಿಲ್ಲ”

ಆಂದೋಲನ ಡೆಸ್ಕ್

Recent Posts

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

15 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

17 hours ago

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…

17 hours ago

ಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್‌ ಗಾಂಧಿ

ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…

17 hours ago

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್

ಮೈಸೂರು: ಬಹುಭಾಷಾ ನಟ ಪ್ರಭುದೇವ್‌ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…

17 hours ago

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

21 hours ago