ಅಂಕಣಗಳು

ಹಲವು ರಾಮಾಯಣಗಳು: ಕಾಲಕಾಲಕ್ಕೆ ಬದಲಾವಣೆ ಕಂಡ ರಾಮಾಯಣದ ಗ್ರಹಿಕೆ

• ಪುರುಷೋತ್ತಮ ಬಿಳಿಮಲೆ

ವಾಲ್ಮೀಕಿ ಆದಿ ಕವಿಯೂ ಹೌದು, ಮಹಾ ಕವಿಯೂ ಹೌದು. ಅವನು ಬರೆದ ರಾಮಾಯಣ ಮಹಾಕಾವ್ಯದ ಕಥಾನಾಯಕ ರಾಮ ಭಾರತೀಯರ ಮನಸ್ಸಿಗೆ ಹತ್ತಿರವಾಗಲು ಏನು ಕಾರಣ ಎಂಬುದು ನಮಗಿನ್ನೂ ಸರಿಯಾಗಿ ಗೊತ್ತಿಲ್ಲ. ಅವನು ತಂದೆಯ ಮಾತನ್ನು ಪರಿಪಾಲಿಸಲು ಕಾಡಿಗೆ ಹೋದದ್ದು, ಕಾಡಲ್ಲಿ ಹೆಂಡತಿ ಕೇಳಿದ ತಕ್ಷಣ ಚಿನ್ನದ ಜಿಂಕೆಯನ್ನು ತರಲು ಹೊರಟದ್ದು, ಸೀತೆಯನ್ನು ಹುಡುಕಾಡುತ್ತಾ ದಂಡಕಾರಣ್ಯದಲ್ಲಿ ಅಲೆದಾಡಿದ್ದು, ಅಹಲ್ಯಾ ಶಾಪ ವಿಮೋಚನೆ ಮಾಡಿದ್ದು, ಶಬರಿ ಕೊಟ್ಟ ಹಣ್ಣನ್ನು ತಿಂದದ್ದು, ವಾನರರ ಸ್ನೇಹ ಮಾಡಿದ್ದು ಇತ್ಯಾದಿ ಘಟನೆಗಳೊಂದಿಗೆ ನಾವು ರಾಮನನ್ನು ಜೋಡಿಸಿ ಸಂತೋಷಿಸುತ್ತೇವೆ. ಈ ನಡುವೆ ಅವನು ಅಯೋಧ್ಯೆ ಯಲ್ಲಿ ಹುಟ್ಟಿದ ಎಂಬುದು ನಮಗೆಂದೂ ಮುಖ್ಯವಾಗಿರ ಲಿಲ್ಲ, ಏಕೆಂದರೆ ಅಯೋಧ್ಯೆ ಯನ್ನು ಸೂರ್ಯವಂಶದ ಅರಸರೆಲ್ಲರೂ, ಅದರಲ್ಲೂ ಮುಖ್ಯವಾಗಿ, ಭಗೀರಥ, ದಿಲೀಪ, ರಘು, ನಹುಷ, ಯಯಾತಿ, ಅಜ, ದಶರಥ ಮೊದಲಾದವರೆಲ್ಲ ಆಳಿದ್ದರು. ಆದರೆ ಯಾರೂ ಶ್ರೀರಾಮನ ಹಾಗೆ ಪ್ರಖ್ಯಾತಿ ಪಡೆಯದೇ ಹೋದರು. ಏಕೆಂದರೆ, ಅವರಾರೂ ರಾಮನ ಹಾಗೆ ಕಡಲ ತಡಿಯಲ್ಲಿ ನಿಂತು ಕಳಕೊಂಡ ಸೀತೆಗಾಗಿ ದುಃಖಿಸಿರಲಿಲ್ಲ!

ಪಾಣಿನಿಯ ವ್ಯಾಕರಣ ನಿಯಮಗಳನ್ನು ಕೆಲವು ಬಾರಿಯಾದರೂ ಮೀರಿ ವಾಲ್ಮೀಕಿಯು ರಾಮಾಯಣ ವನ್ನು ಬರೆದ. ಮುಖ್ಯವಾಗಿ ಅದು ಕಾವ್ಯವಾಗಿರು ವುದರಿಂದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಹೆಚ್ಚು ಸಲ ಕಾಣಿಸಿಕೊಂಡಿಲ್ಲ. ಧಾರ್ಮಿಕ ಭಾಷೆಯೊಳಗೆ ಬಂದಿ ಯಾಗಲೂ ಇಲ್ಲ. ರಾಮನ ಬಗ್ಗೆ ಯಾರೂ ದೊಡ್ಡ ದೇವಸ್ಥಾನಗಳನ್ನೂ ಕಟ್ಟಲಿಲ್ಲ. ಹಾಗಾಗಿ ಸಾಮಾನ್ಯಜನರು, ಕವಿಗಳು, ಪಂಡಿತರು, ಹರಿದಾಸರು, ಯಕ್ಷಗಾನದವರು, ಗಮಕಿಗಳು ಆ ಕಾವ್ಯವನ್ನು ತಮಗೆ ಬೇಕಾದಂತೆ ಬರೆದು ಕೊಂಡರು, ಹಾಡಿಕೊಂಡರು. ರಾಮನನ್ನು ರಾಮಣ್ಣ, ರಾಮಪ್ಪ, ರಾಮಕ್ಕ ಎಂದೆಲ್ಲಾ ಮಾಡಿಕೊಂಡು ತಮ್ಮ ಕುಟುಂಬದಲ್ಲಿ ಒಬ್ಬನನ್ನಾಗಿ ಮಾಡಿಕೊಂಡರು. 1960-70ರ ದಶಕದ ಕ್ಯಾಲೆಂಡರುಗಳಲ್ಲಿ ರಾಮ ಒಬ್ಬನೇ ನಿಂತದ್ದೇ ಕಡಿಮೆ. ನಗುಮುಖದ ಅವನೊಂದಿಗೆ ಸೀತೆ ಮತ್ತು ಲಕ್ಷ್ಮಣ ಹಾಗೂ ಕಾಲಬುಡದಲ್ಲಿ ವಿನೀತನಾಗಿ ಕೈಜೋಡಿಸಿ ಕುಳಿತಿರುವ ಹನುಮಂತ ಇರಲೇಬೇಕು. ಈ ಕೌಟುಂಬಿಕ ರಾಮ ಎಲ್ಲರ ಮನೆಯ ಗೋಡೆಯಲ್ಲಿ ರುತ್ತಿದ್ದ. ‘ರಾಮ ನಮ್ಮೂರಿಗೆ ಬಂದಿದ್ದ, ಅದು ಸೀತೆಯ ಸೆರಗಿನ ಗುರುತು, ಇದು ಸೀತೆ ಹಕ್ಕಿ, ಏಕೆಂದರೆ ಆ ಹೆಸರಿಟ್ಟದ್ದು ಸೀತೆ’ ಎಂದೆಲ್ಲ ಹೇಳಿಕೊಂಡು ರಾಮನನ್ನು ಜನರು ತಮ್ಮತಮ್ಮ ಊರಿಗೋ, ಕಾಡಿಗೋ ಅಂಟಿಸಿಕೊಂಡರು. ಹಾಗೇ ನೋಡಿದರೆ ಇಡೀ ದೇಶವೇ ಕಾಲ, ಪ್ರದೇಶ ಮತ್ತು ಸಮುದಾಯಗಳ ಆಶೋತ್ತರ ಗಳಿಗೆ ಅನುಗುಣವಾಗಿ ರಾಮಾಯಣವನ್ನು ತನಗೆ ಬೇಕಾದಂತೆ ಮತ್ತೆ ಮತ್ತೆ ಬರೆದುಕೊಂಡಿತು. ರಾಮ ಲೀಲಾ, ರಾಮನವಮಿ, ದೀಪಾವಳಿ ಯಕ್ಷಗಾನ ಮತ್ತಿತರ ಸಂದರ್ಭಗಳಲ್ಲಿ ರಾಮಾಯಣದ ಕೆಲವು ಪಾತ್ರಗಳು ಪ್ರತಿ ವರ್ಷ ನವೀಕರಣಗೊಂಡು ಹೊಸದಾಗುತ್ತಲೇ ಹೋದುವು.

ರಾಮಾಯಣದ ಕಥೆಯನ್ನು ಸಂಸ್ಕೃತ ನಾಟಕಕಾರರು ಬಳಸಿಕೊಂಡ ರೀತಿಯೂ ಮೋಹಕವಾಗಿದ್ದು, ಅವು ವಾಲ್ಮೀಕಿ ರಾಮಾಯಣಕ್ಕಿಂತ ಬಹಳ ದೂರ ಸರಿದಿವೆ. ಈ ಮಾತಿಗೆ ಭಾಸನ ಪ್ರತಿಮಾ ನಾಟಕ ಮತ್ತು ಅಭಿಷೇಕ ನಾಟಕ ಒಳ್ಳೆಯ ಉದಾಹರಣೆಗಳು. ಭವಭೂತಿಯ ಉತ್ತರ ರಾಮಚರಿತೆ ಬಹಳ ಪ್ರಸಿದ್ಧ ನಾಟಕ. ದಿಜ್ಞಾನಗನ ಕುಂದಮಾಲಾ, ಮುರಾರಿಯ ಅನರ್ಥ್ಯ ರಾಘವ, ರಾಜಶೇಖರನ ಬಾಲರಾಮಾಯಣ, ಶಕ್ತಿಭದ್ರನ ಆಶ್ಚರ್ಯ ಚೂಡಾಮಣಿ ನಾಟಕಗಳು ಅನೇಕ ಹೊಸ ಘಟನೆಗಳನ್ನು ಹೊಂದಿದ್ದು ರಾಮಾಯಣದ ಕಥಾಭಿತ್ತಿಯನ್ನು ವಿಸ್ತರಿಸಿವೆ.

ಇದನ್ನು ಗಮನಿಸಿಯೇ ಕುಮಾರವ್ಯಾಸನು –
ತಿಣಿಕಿದನು ಫಣಿರಾಯ ರಾಮಾ ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ! ಎಂದು ಉದ್ಧರಿಸಿ ಮಹಾಭಾರತದ ಕಡೆ ವಾಲಿ ಕೊಂಡನು. ಆದರೆ ಅವನ ಅನಂತರ ಬಂದ ತೊರವೆ ನರಹರಿಯು ತೊರವೆ ರಾಮಾಯಣ’ವನ್ನೇ ಬರೆದ!
ಇವತ್ತು ನಮ್ಮ ದೇಶದ ಎಲ್ಲರಿಗೂ ಗೊತ್ತಿರುವ ರಾಮ ವಾಲ್ಮೀಕಿಯ ರಾಮನೇ ಆಗಿರಬೇಕೆಂದೇನೂ ಇಲ್ಲ. ಬೆರಳೆಣಿಕೆಯ ಕೆಲವು ವಿದ್ವಾಂಸರನ್ನು ಬಿಟ್ಟರೆ ವಾಲ್ಮೀಕಿ ರಾಮಾಯಣವನ್ನು ಪೂರ್ತಿಯಾಗಿ ಓದಿದವರೇ ಇಲ್ಲ.

ನನಗೆ ವೈಯಕ್ತಿಕವಾಗಿ ಗೊತ್ತಿರುವ ರಾಮನ ಕತೆ ಯಕ್ಷಗಾನದಿಂದ ಬಂದದ್ದು. ಶೇಣಿ ಗೋಪಾಕೃಷ್ಣ ಭಟ್, ಕುಂಬಳೆ ಸುಂದರರಾವ್, ಕೆರೆಮನೆ ಶಂಭು ಹೆಗಡೆ, ಪ್ರಭಾಕರ ಜೋಶಿ ಮೊದಲಾದ ಪ್ರತಿಭಾವಂತ ಕಲಾವಿ ದರುರಂಗದ ಮೇಲೆ ಕಟ್ಟಿದ ಕತೆಯದು. ಈ ಕಲಾವಿದರು ಬದಲಾದಂತೆ ನನ್ನ ರಾಮಾಯಣದ ಗ್ರಹಿಕೆಯಲ್ಲೂ ಬದಲಾವಣೆ ಆಗಿದೆ. ಆನಂತರ ನಾಗಚಂದ್ರ 12ನೇ ಶತಮಾನದಲ್ಲಿ ಬರೆದ ರಾಮಚಂದ್ರಚರಿತ ಪುರಾಣ ಓದಿದೆ. ಅದರಲ್ಲೊಬ್ಬ ದುರಂತ ರಾವಣ ಕಂಡ. 17ನೇ ಶತಮಾನದಲ್ಲಿ ಪಾರ್ತಿಸುಬ್ಬ ಬರೆದ ಯಕ್ಷಗಾನ ಪ್ರಸಂಗಗಳಲ್ಲಿ ರಾಮಾಯಣದ ಎಲ್ಲ ಪಾತ್ರಗಳೂ ಕುಣಿಯುತ್ತಿದ್ದವು. ಕೇರಳದ ಮಲಬಾರ್ ಪ್ರಾಂತ್ಯದಲ್ಲಿ ಬ್ಯಾರಿ ಭಾಷೆಯಲ್ಲಿ ಮಾಪಿಳ್ಳೆ ರಾಮಾಯಣವೂ ಇದೆ. ಕನ್ನಡ ಜಾನಪದದಲ್ಲಿರುವ ‘ಗೊಂಡ ರಾಮಾಯಣವು ಆದಿವಾಸಿಗಳು ಕಂಡ ರಾಮನ ವಿಶೇಷ ಕಥನ ತುಳುವಿನಲ್ಲಿ ಮಂದಾರ ರಾಮಾಯಣವಿದೆ. ಹೀಗೆ ಅದ್ಭುತ ರಾಮಾಯಣ, ಅಧ್ಯಾತ್ಮ ರಾಮಾಯಣ, ಆನಂದ ರಾಮಾಯಣ, ಪಉಮ ಚರಿಯ, ಪದ್ಧಚರಿತ, ಶ್ರೀ ರಾಮಾಯಣ ದರ್ಶನಂ… ಇದೊಂದು ಕೊನೆ ಯಿಲ್ಲದ ಲೋಕ, ತಮಿಳು ಕವಿ ಕಂಬನ್ ಬರೆದ ರಾಮಾವತಾರಮ್ ಮತ್ತು ತುಲಸೀದಾಸರ ಶ್ರೀರಾಮಚರಿತ ಮಾನಸಂ ವಿಶ್ವ ಪ್ರಸಿದ್ಧಿ ಪಡೆದ ಎರಡು ಕೃತಿಗಳು. ಇವಲ್ಲದೆ, ಗುಜರಾತಿನ ಪ್ರೇಮಾನಂದ, ಬಂಗಾಲದ ಕೃತ್ತಿವಾಸ, ಒಡಿಯಾದ ಬಲರಾಮದಾಸ, ಮಹಾರಾಷ್ಟ್ರದ ಶ್ರೀಧರ, ಆಂಧ್ರಪ್ರದೇಶದ ರಂಗನಾಥ ಮೊದಲಾದವರೂ ಅವರವರ ತಾಯ್ತುಡಿಗಳಲ್ಲಿ ರಾಮಕತೆಯನ್ನು ಕಂಡರಿಸಿದ್ದಾರೆ. ಹಿಂದಿ, ಮೈಥಿಲೀ, ಅವಧಿ ಮುಂತಾದ ವಿವಿಧ ಭಾಷೆ ಮತ್ತು ಉಪಭಾಷೆಗಳಲ್ಲಿ 50ಕ್ಕೂ ಹೆಚ್ಚು ರಾಮಾಯಣಗಳಿವೆ. ಉತ್ತರ ಭಾರತದಲ್ಲಿ ಪ್ರಚಲಿತವಾ ಗಿರುವ ರಾಮಾಯಣದ ಕಥೆಗಳು ದಕ್ಷಿಣ ಭಾರತಕ್ಕಿಂತ ಭಿನ್ನ ಎಂದು ನಾನು ಮತ್ತೆ ಹೇಳಬೇಕಾಗಿಲ್ಲ.

ಥೈಲ್ಯಾಂಡ್, ಕಾಂಬೋಡಿಯ, ಮಲೇಷಿಯ, ಶ್ರೀಲಂಕಾ, ಲಾವೋಸ್, ವಿಯೆಟ್ನಾಂ, ಜಾವಾ, ಸುಮಾತ್ರಾ ಮತ್ತು ಇಂಡೋನೇಶಿಯಾ ದೇಶಗಳಲ್ಲಿ ಪ್ರಚಲಿತವಾ ಗಿರುವ ರಾಮಾಯಣಗಳಲ್ಲಿ ರಾಮನಿಗಿಂತ ಲಕ್ಷ್ಮಣನೇ ಹೆಚ್ಚು ಶಕ್ತಿವಂತ. ಕರಾವಳಿಯ ತುಳು ಭಾಷೆಯಲ್ಲಿ ದೊರಕುವ ರಾಮಾಯಣವೊಂದರಲ್ಲಿ ಕಾಗೆಯನ್ನು ಹೊಡೆದುರುಳಿಸಿ ಸೀತೆಯನ್ನು ಗೆಲ್ಲುವವನು ಕೂಡ ಲಕ್ಷಣ. ಆಮೇಲೆ ಆತ ಆಕೆಯನ್ನು ಅಣ್ಣನಿಗೆ ಒಪ್ಪಿಸು ತ್ತಾನೆ. ರಾಮಾಯಣದ್ದೇ ಆದ ಒಂದು ಪ್ರಸಂಗ ‘ಅಹಿರಾ ವಣ ಮತ್ತು ಮಹಿರಾವಣ’ ಕತೆಯಲ್ಲಿ ಹನುಮಂತನಿಗೆ ಮದುವೆಯೂ ಆಗುತ್ತದೆ. ಉಳಿದ ಕಡೆಗಳಲ್ಲಿ ಆತ ಬ್ರಹ್ಮಚಾರಿ ಮತ್ತು ಚಿರಂಜೀವಿ. ಕೆಲವು ರಾಮಾಯ ಣಗಳಲ್ಲಿ ಸೀತೆ ರಾವಣನ ಮಗಳು, ಮತ್ತೆ ಕೆಲವುಗಳಲ್ಲಿ ಲಕ್ಷ್ಮಣನಿಗೆ 11 ಜನ ಹೆಂಡತಿಯರು, ರಾವಣ ಸಾಯು ವುದು ಲಕ್ಷ್ಮಣನಿಂದ- ಇಂಥ ಭಿನ್ನವಸ್ತುಗಳಿಗೆ ಕೊನೆಯೇ ಇಲ್ಲ. ಉತ್ತರ ರಾಮಾಯಣಕ್ಕೆ ಆಮೇಲೆ ಸೇರಿಕೊಂಡ ಶೂದ್ರ ಶಂಬೂಕನ ವಧೆಯ ಕುರಿತು ಕುವೆಂಪು ಶೂದ್ರ ತಪಸ್ವಿ ಎಂಬ ಕ್ರಾಂತಿಕಾರಕ ನಾಟಕವನ್ನೇ ಬರೆದರು.

ಇವತ್ತಿನ ರಾಜಕೀಯ ವಾಲ್ಮೀಕಿ ರಾಮಾಯಣವನ್ನು ಆಮೂಲಾಗ್ರವಾಗಿ ಬದಲಿಸಿದ ಹಾಗೆ ತೋರುತ್ತದೆ. ಕೆಲವು ವರ್ಷಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು (ಅಭಾವಿಪ) ರಾಮಾಯಣದ ಭಿನ್ನಪಠ್ಯಗಳ ಅಧ್ಯಯನ ಕ್ರಮವನ್ನು ವಿರೋಧಿಸಿದರು. ಪರಿಣಾಮವಾಗಿ ಎ.ಕೆ.ರಾಮಾನುಜನ್ ಬರೆದ; ‘ಮುನ್ನೂರು ರಾಮಾಯಣಗಳು ಲೇಖನ ಪಠ್ಯಕ್ರದಿಂದಲೇ ಹೊರಬಿತ್ತು. ಒಂದು ದೇಶ, ಒಂದು ಭಾಷೆ, ಒಂದು ಚುನಾವಣೆ’ ಎಂದೆಲ್ಲಾ ಕೂಗುತ್ತಿರುವ ಬಿಜೆಪಿಗೆ ಭಾರತದ ಬಹುತ್ವ ಅರ್ಥವಾಗುತ್ತಿಲ್ಲ. ಸುಮಾರು ಐದುನೂರು ವರ್ಷಗಳ ಹಿಂದೆ ಭಾರತಕ್ಕೆ ಕಾಲಿರಿಸಿದ್ದ ಬ್ರಿಟಿಷರಿಗೂ ಭಾರತದ ಬಹುತ್ವ ತಿಳಿಯಲೇ ಇಲ್ಲ. ಇಲ್ಲಿನ ಅಪಾರ ವೈವಿಧ್ಯ, ಅನೇಕ ಭಾಷೆಗಳು, ಸಮುದಾಯಗಳು, ಆಚರಣೆಗಳು, ಭೌಗೋಳಿಕ ವ್ಯತ್ಯಾಸ ಇತ್ಯಾದಿಗಳನ್ನೆಲ್ಲ ಒಂದು ಬಲವಾದ ಚೌಕಟ್ಟಿನೊಳಗೆ ತಾರದ ಹೊರತು ಸ್ಥಿರವಾದ ಆಳ್ವಿಕೆ ಕೊಡುವುದು ಅಸಾಧ್ಯ ಎಂಬುದನ್ನು ಮನಗಂಡ ಬ್ರಿಟಿಷರು ಭಾರತವನ್ನು ಯಾವುದಾದರೂ ಒಂದು ನಿರ್ದಿಷ್ಟ ಪರಿಭಾಷೆಯಲ್ಲಿ ವಿವರಿಸಲು ಹೆಣಗುತ್ತಿದ್ದರು. ಭಾರತಕ್ಕೆ ಒಂದು ವ್ಯಾಕರಣ ಬರೆಯಬೇಕಾಗಿತ್ತು ಅವರಿಗೆ ಇಂಥ ಪ್ರಯತ್ನದ ಪರಿಣಾಮವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅವರು ಗ್ರಂಥ ಸಂಪಾದನಾ ಶಾಸ್ತ್ರವನ್ನು ಬೆಳೆಸಿದರು. ಲಭ್ಯವಿರುವ ಹಲವು ಪಠ್ಯಗಳಿಂದ ಒಂದು ಪಠ್ಯವನ್ನು ಸೃಷ್ಟಿಸಿ, ಅದನ್ನು ಅಧಿಕೃತಗೊಳಿಸುವುದು ವಸಾಹತು ಕಾಲದ ಗ್ರಂಥ ಸಂಪಾದನಾಶಾಸ್ತ್ರದ ಮುಖ್ಯ ಕೆಲಸ. ಅದೇ ಮಾದರಿಯ ಕೆಲಸಗಳನ್ನು ಈಗ ಬಿಜೆಪಿ, ಆ‌ಎಸ್‌ಎಸ್ ಮಾಡು ತ್ತಿರುವುದು ಇತಿಹಾಸದ ವ್ಯಂಗ್ಯಗಳಲ್ಲಿ ಒಂದು.

andolanait

Recent Posts

ಹೊರ್ಮುಜ್‌ ಜಲಸಂಧಿ ಮುಕ್ತಗೊಳಿಸಿ ; ಇರಾನ್‌ಗೆ ಅಂತಿಮ ಎಚ್ಚರಿಕೆ ನೀಡಿದ ಟ್ರಂಪ್‌

ವಾಷಿಂಗ್ಟನ್‌ : ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯದಿದ್ದರೆ ಇರಾನ್‌ನ ಎಲ್ಲ ತೈಲ ಬಾವಿಗಳು ಮತ್ತು ಖಾರ್ಗ್‌ ದ್ವೀಪಗಳನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ…

7 mins ago

ದೇಶದಲ್ಲೇ ಮೊದಲ ಮಕ್ಕಳ ಬೃಹತ್ ಆಸ್ಪತ್ರೆ ಬೆಂಗಳೂರಿನಲ್ಲಿ

ಬೆಂಗಳೂರು : ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಮೀಸಲಾಗಿ 450 ಹಾಸಿಗೆಗಳ ಬೃಹತ್, ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದಿರಾ…

51 mins ago

ಬೈಲಕುಪ್ಪೆ ಹಿಟ್‌ ಅಂಡ್‌ ರನ್‌ ಕೇಸ್‌ ; ರಸ್ತೆ ತಡೆದು ಪ್ರತಿಭಟನೆ ನಡೆಸಿದ ಸ್ಥಳೀಯರು

ಬೈಲಕುಪ್ಪೆ : ನಿನ್ನೆ ರಾತ್ರಿ ನಡೆದ ಹಿಟ್ ಅಂಡ್ ರನ್ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ…

1 hour ago

ಬಹುಭಾಷಾ ನಟ ಪ್ರಕಾಶ್‌ ರಾಜ್‌ ತಾಯಿ ಸುವರ್ಣಲತಾ ನಿಧನ

ಹೈದರಬಾದ್‌ : ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ ಅವರು ನಿಧನರಾಗಿದ್ದಾರೆ. 85 ವರ್ಷದ ಸುವರ್ಣಲತಾ ಅವರು…

2 hours ago

ಧುರಂಧರ್-‌2 ನಟಿ ಸಾರಾ ಅರ್ಜುನ್‌ಗೆ ಫ್ಯಾನ್ಸ್‌ ಮುತ್ತಿಗೆ ; ಮಗಳಿಗೆ ಬಾಡಿ ಗಾರ್ಡ್‌ ಆದ ತಂದೆ

ಮುಂಬೈ : ‘ಧುರಂಧರ್-2’ ಚಿತ್ರದ ಯಶಸ್ವಿ ನಟಿ ಸಾರಾ ಅರ್ಜುನ್ ಅವರಿಗೆ ಸದ್ಯ ಖ್ಯಾತಿ ಹೆಚ್ಚಾಗಿದೆ. ಭಾನುವಾರ ಮುಂಬೈನ ವಾಂಖೆಡೆ…

2 hours ago

ತಮಿಳುನಾಡು ಚುನಾವಣೆ | ಸಿಎಂ ಸ್ಟಾಲಿನ್‌, ನಟ ವಿಜಯ್‌ ನಾಮತ್ರ ಸಲ್ಲಿಕೆ

ಚೆನ್ನೈ : ಏಪ್ರಿಲ್‌ 23 ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಮತ್ತು ಪ್ರತಿಸ್ಪರ್ಧಿ ಟಿವಿಕೆ…

3 hours ago