ಪಾಕಿಸ್ತಾನಕ್ಕೆ ಹೋಗಿ ೭೫ ವರ್ಷಗಳ ಹಿಂದೆ ಬೇರ್ಪಟ್ಟ ಸಹೋದರಿಯನ್ನು ಬೇಟಿಯಾದಾಗ ಬದುಕಿನ ಒಂದು ಅಧ್ಯಾಯ ಪೂರ್ಣಗೊಳ್ಳುತ್ತದೆ!
ಕೋವಿಡ್ ಲಾಕ್ ಡೌನ್ ಸಮಯದಲ್ಲಿ ರೀನಾ ವರ್ಮಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ, ರಾವಲ್ಪಿಂಡಿಯ ತಮ್ಮ ಮನೆ ಹಾಗೂ ಅಲ್ಲಿ ಕಳೆದ ತಮ್ಮ ಬಾಲ್ಯದ ಬಗ್ಗೆ ಪೋಸ್ಟ್ ಹಾಕುತ್ತಾರೆ. ಅದು ರಾವಲ್ಪಿಂಡಿಯ ಸಜ್ಜದ್ ಭಾಯ್ ಎಂಬುವವರ ಕಣ್ಣಿಗೆ ಬಿದ್ದು, ಮನೆಯನ್ನು ಪತ್ತೆ ಹಚ್ಚಿ ಅದರ ಫೋಟೋ ಹಾಗೂ ವೀಡಿಯೋ ಕಳಿಸುತ್ತಾರೆ. ಮಗಳು ಸೋನಾಲಿ ಪಾಕಿಸ್ತಾನಕ್ಕೆ ಹೋಗಲು ಅವರಿಗಾಗಿ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಾರೆ. ರೀನಾರ ವಯಸ್ಸಿನ ಕಾರಣ ಅದು ತಿರಸ್ಕೃತಗೊಳ್ಳುತ್ತದೆ.
ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ನಡೆದ ಭೀಕರ ಕ್ರೌರ್ಯ ಮಾನವ ಚರಿತ್ರೆಯ ಕರಾಳ ಅಧ್ಯಾಯಗಳಲ್ಲೊಂದು. ಆ ಹೊತ್ತಲ್ಲಿ ನಡೆದ ಹಿಂಸೆ, ದೌರ್ಜನ್ಯ ಎರಡೂ ದೇಶಗಳು ಎಂದಿಗೂ ಮರೆಯಲಾಗದ್ದು. ಆ ಘಟನೆ ನಡೆದು ೭೫ ವರ್ಷಗಳು ಸಂದರೂ ಅದರ ಭೀಕರತೆಯ ಹೊಸ ಹೊಸ ವಿವರಗಳು ಇಂದಿಗೂ ಆಗಾಗ್ಗೆ ಬೆಳಕಿಗೆ ಬರುತ್ತಿವೆ. ಭೀಕರತೆಯ ಜೊತೆಯಲ್ಲಿ, ಅದು ತೆರೆದಿಟ್ಟ ಮಾನವೀಯ ಸಂಬಂಧಗಳ ಸಂಕೀರ್ಣತೆ, ಜಟಿಲತೆ ಹಾಗೂ ನವಿರು ಎಳೆಗಳೂ ಆಗಾಗ್ಗೆ ಬಿಚ್ಚಿಕೊಳ್ಳುತ್ತವೆ.
೧೯೪೭ರಲ್ಲಿ ರೀನಾ ವರ್ಮಾ (ಎಡ ಚಿತ್ರ)ರಿಗೆ ಆಗಿನ್ನೂ ೧೫ರ ಎಳೇ ಪ್ರಾಯ. ಅವರ ಮನೆ ಇದ್ದುದು ರಾವಲ್ಪಿಂಡಿಯ ‘ಪ್ರೇಮ್ ಗಲ್ಲಿ’ ಎಂಬ ರಸ್ತೆಯಲ್ಲಿ. ಪ್ರೇಮ್ ಗಲ್ಲಿ ಅವರ ತಂದೆ ಭಾಯ್ ಪ್ರೇಮ್ ಚಂದ್ ಚಿಬ್ಬರ್ರ ಗೌರವಾರ್ಥ ಹೆಸರಿಸಲ್ಪಟ್ಟ ರಸ್ತೆ. (ಇಂದಿಗೂ ಆ ರಸ್ತೆಗೆ ಇದೇ ಹೆಸರಿದೆ). ಅದೇ ವರ್ಷ ಮೇ ೧೫ರಂದು ದೇಶವಿಭಜನೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಕೋಮು ಗಲಭೆಯ ಭಯದಲ್ಲಿ ಅವರ ಕುಟುಂಬ ತಮ್ಮ ಮನೆಯನ್ನು ಬಿಟ್ಟು ಸುರಕ್ಷತೆಯ ದೃಷ್ಟಿಯಿಂದ ಶಿಮ್ಲಾ ಬಳಿಯಿರುವ ಸೋಲಾನ್ ಎಂಬ ಪರ್ವತ ಪ್ರದೇಶಕ್ಕೆ ಹೋಗುತ್ತದೆ. ಹಿಂದೆ ಹಲವು ಬಾರಿ ಅವರ ಕುಟುಂಬ ಬೇಸಿಗೆ ರಜೆ ಕಳೆಯಲು ಸೊಲಾನ್ಗೆ ಬಂದಿತ್ತು. ಈ ಬಾರಿಯೂ ಅವರು ಕೆಲವು ದಿನ ಅಥವಾ ವಾರ ಕಾಲ ಅಲ್ಲಿದ್ದು ನಂತರ ತಮ್ಮ ಮನೆಗೆ ಮರಳತ್ತೇವೆ ಎಂದು ಯೋಚಿಸಿದ್ದರು. ಆದರೆ, ಆ ದಿನ ಬರಲೇ ಇಲ್ಲ. ನಂತರ ನಡೆದ ದೇಶ ವಿಭಜನೆ ಅವರನ್ನು ನಿರಾಶ್ರಿತರನ್ನಾಗಿಸಿತು. ರಾವಲ್ಪಿಂಡಿಯಿಂದ ಸೋಲಾನ್‌ಗೆ ಬಂದ ರೀನಾರ ಕುಟುಂಬ ಅಂಬಾಲಾ, ಪುಣೆ ಕೊನೇಗೆ ದೆಹಲಿಗೆ ಬಂದಿತು. ದೆಹಲಿಯಲ್ಲಿ ಸಕಾರದ ವತಿಯಿಂದ ಪಾಕಿಸ್ತಾನದ ಅವರ ಆಸ್ತಿಯ ಬದಲಿಯಾಗಿ ಚಿಕ್ಕದೊಂದು ಜಾಗ ಸಿಕ್ಕಿತಾದರೂ, ಅದರಲ್ಲಿ ಮನೆ ಕಟ್ಟಿಸಲು ರೀನಾರ ತಂದೆಯ ಬಳಿ ಹಣವಿರಲಿಲ್ಲ. ಹಾಗಾಗಿ, ಅವರ ಕುಟುಂಬ ಬಾಡಿಗೆ ಮನೆಯಲ್ಲಿ ಸಂಸಾರ ನಡೆಸಬೇಕಾಯಿತು.
ರೀನಾ ವರ್ಮಾರಿಗೆ ಈಗ ೯೩ರ ಇಳಿ ಪ್ರಾಯ. ಅವರ ತಂದೆ ತಾಯಿ ಗತಿಸಿ ಎಷ್ಟೋ ದಶಕಗಳಾದವು. ರೀನಾರ ಗಂಡ ಪಾಶ್ರ್ವವಾಯು ಪೀಡಿತರಾಗಿ ಮರಣ ಹೊಂದಿದರು. ಅವರ ಮಗನೂ ತೀರಿಕೊಂಡನು. ಈಗ ಅವರು ಪುಣೆಯ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ಬದುಕು ಸಾಗಿಸುತ್ತಿದ್ದಾರೆ. ಅವರ ಮಗಳು ಸೋನಾಲಿ ತನ್ನ ಸಂಸಾರದೊಂದಿಗೆ ಗುರ್‌ಗಾಂವ್‌ನಲ್ಲಿದ್ದಾರೆ.
ಎರಡು ವರ್ಷಗಳ ಹಿಂದೆ ಕೋವಿಡ್ ಹಿನ್ನೆಲೆಯಲ್ಲಿ ಹೇರಲ್ಪಟ್ಟ ಲಾಕ್ ಡೌನ್ ಸಮಯದಲ್ಲಿ ರೀನಾ ವರ್ಮಾ ಸಮಯ ಕಳೆಯಲು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ, ರಾವಲ್ಪಿಂಡಿಯ ತಮ್ಮ ಮನೆ ಹಾಗೂ ಅಲ್ಲಿ ಕಳೆದ ತಮ್ಮ ಬಾಲ್ಯದ ಬಗ್ಗೆ ಪೋಸ್ಟ್ ಹಾಕುತ್ತಾರೆ. ಅದು ರಾವಲ್ಪಿಂಡಿಯ ಸಜ್ಜದ್ ಭಾಯ್ ಎಂಬುವವರ ಕಣ್ಣಿಗೆ ಬಿದ್ದು, ಅವರು ಅವರ ಮನೆಯನ್ನು ಪತ್ತೆ ಹಚ್ಚಿ ಅದರ ಫೋಟೋ ಹಾಗೂ ವೀಡಿಯೋ ಕಳಿಸುತ್ತಾರೆ. ಮಗಳು ಸೋನಾಲಿ ಪಾಕಿಸ್ತಾನಕ್ಕೆ ಹೋಗಲು ಅವರಿಗಾಗಿ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ರೀನಾರ ವಯಸ್ಸಿನ ಕಾರಣ ಅದು ತಿರಸ್ಕೃತಗೊಳ್ಳುತ್ತದೆ. ಆದರೂ ಪಟ್ಟು ಬಿಡದ ರೀನಾ, ಪಾಕಿಸ್ತಾನದ ಒಬ್ಬರು ಪತ್ರಕರ್ತರ ಸಲಹೆಯಂತೆ, ಒಂದು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಅದು ಪಾಕಿಸ್ತಾನದ ವಿದೇಶಾಂಗ ಸಹಾಯಕ ಮಂತ್ರಿ ಹಿನಾ ರಬ್ಬಾನಿ ಖಾರ್‌ರ ಗಮನ ಸೆಳೆದು, ವರ್ಮಾರಿಗೆ ಪಾಕಿಸ್ತಾನ ಬೇಟಿಗೆ ೯೦ ದಿನಗಳ ವೀಸಾ ಸಿಗುತ್ತದೆ. ಜುಲೈ ತಿಂಗಳಲ್ಲಿ ಅವರು ರಾವಲ್ಪಿಂಡಿಗೆ ಹೋಗಲು ತಯಾರಿ ಮಾಡುತ್ತಿದ್ದಾರೆ.
ತಾನು ಹುಟ್ಟಿ ಬೆಳೆದ ಜಾಗ ಮತ್ತು ಮನೆಯನ್ನು ನೋಡುವ ಅವಕಾಶ ಸಿಕ್ಕಿದ್ದಕ್ಕೆ ರೀನಾ ಸಹಜವಾಗಿಯೇ ತುಂಬಾ ಸಂತೋಷಗೊಂಡಿದ್ದಾರೆ. ಆ ಮನೆಯಲ್ಲಿ ಈಗ ಯಾರು ವಾಸಿಸುತ್ತಿದ್ದಾರೋ ನನಗೆ ತಿಳಿಯದು. ಯಾರೇ ಇದ್ದರೂ ಅವರು ನನ್ನ ಮನೆಯನ್ನು ನೋಡಲು ಬಿಡುತ್ತಾರೆ ಎಂದು ಆಶಿಸುವೆ. ಕೋಮುಗಲಭೆಯ ಸಮಯದಲ್ಲಿ ನನ್ನ ತಾಯಯಿಯನ್ನು ತನ್ನ ಅಂಗಡಿಯಲ್ಲಿ ಅಡಿಗಿಸಿ ರಕ್ಷಿಸಿದ ನಮ್ಮ ಕುಟುಂಬದ ದರ್ಜಿ ಶಫಿ ಇನ್ನೂ ನೆನಪಿದ್ದಾನೆ. ನನಗೆ ಈಗ ಯಾರ ಬಗ್ಗೆಯೂ ಸಿಟ್ಟಿಲ್ಲ, ದ್ವೇಷವಿಲ್ಲ. ನಾನು ಭಾರತದಲ್ಲಿದ್ದರೂ ನಾನು ಹುಟ್ಟಿ ಬೆಳೆದ ರಾವಲ್ಪಿಂಡಿ ನನ್ನ ಹೃದಯದಲ್ಲಿ ಇನ್ನೂ ಜೀವಂತವಿದೆ ಎನ್ನುವಾಗ ರೀನಾ ವರ್ಮರ ಕಣ್ಣುಗಳು ಹನಿಗೂಡುತ್ತವೆ.
***
೭೫ ವರ್ಷಗಳ ಹಿಂದೆ ತನ್ನ ಕುಟುಂಬದಿಂದ ಬೇರ್ಪಟ್ಟ ನಂತರ ಮಮ್ತಾಜ್ ಬೀಬಿ ತನ್ನ ಸಹೋದರರನ್ನು ಮೊದಲ ಬಾರಿಗೆ ಬೇಟಿಯಾದಾಗ ಆಕೆಯ ಆನಂದ ಹೇಳ ತೀರದು. ಮಮ್ತಾಜ್ ಬೀಬಿ ಮುಸ್ಲಿಮರಲ್ಲ, ಅವರು ಸಿಖ್ ಧರ್ಮೀಯರು. ದೇಶ ವಿಭಜನೆಯ ಹಿನ್ನೆಲೆಯಲ್ಲಿ ಎದ್ದ ಕೋಮು ದಳ್ಳುರಿಗೆ ಪಾಕಿಸ್ತಾನದ ಪಂಜಾಬಿನಲ್ಲಿ ಆಕೆಯ ತಾಯಿ ಬಲಿಯಾಗುತ್ತಾರೆ. ಆಗಿನ್ನೂ ಹಸುಳೆಯಾಗಿದ್ದ ಮಮ್ತಾಜ್ ತನ್ನ ನಿರ್ಜೀವ ತಾಯಿಯ ಮೈಮೇಲೆ ಮಲಗಿದ್ದಳು. ಅದನ್ನು ಕಂಡ ಮುಹಮ್ಮದ್ ಇಕ್ಬಾಲ್ ಮತ್ತು ಅಲ್ಲಾಹ ರಖಿ ಎಂಬ ಮುಸ್ಲಿಂ ದಂಪತಿಗಳು ಮಗುವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು, ಮಮ್ತಾಜ್ ಬೀಬಿ ಎಂದು ಹೆಸರಿಸಿ ತಮ್ಮ ಸ್ವಂತ ಮಗುವಿನಂತೆ ಬೆಳೆಸಿ, ಮುಂದೆ ದೊಡ್ಡವಳಾದಾಗ ಮದುವೆ ಮಾಡಿ ಕೊಡುತ್ತಾರೆ. ಇಕ್ಬಾಲ್ ಮತ್ತು ಅವರ ಪತ್ನಿ, ಮಮ್ತಾಜ್ ಬೀಬಿ ತಮ್ಮ ಸ್ವಂತ ಮಗಳಲ್ಲ ಎಂದು ಯಾವತ್ತೂ ಆಕೆಗೆ ಹೇಳಲಿಲ್ಲ. ಆದರೆ, ಎರಡು ವರ್ಷಗಳ ಹಿಂದೆ ಇಕ್ಬಾಲ್ ಗಂಭೀರವಾಗಿ ಅಸ್ವಸ್ಥರಾದಾಗ ಅವರು ಮಮ್ತಾಜ್ ತಮ್ಮ ಸ್ವಂತ ಮಗಳಲ್ಲ ಹಾಗೂ ಆಕೆ ಸಿಖ್ ಧರ್ಮೀಯಳು ಎಂಬ ನಿಜ ಸಂಗತಿಯನ್ನು ಆಕೆಗೆ ತಿಳಿಸುತ್ತಾರೆ.
ಇಕ್ಬಾಲ್ ತೀರಿಕೊಂಡ ನಂತರ ಮಮ್ತಾಜ್ ಬೀಬಿ ತನ್ನ ಮಗನ ಜೊತೆಗೂಡಿ ಸೋಶಿಯಲ್ ಮೀಡಿಯಾ ಮೂಲಕ ತನ್ನ ಮೂಲ ಕುಟುಂಬದ ಹುಡುಕಾಟ ಪ್ರಾರಂಬಿಸುತ್ತಾರೆ. ಆಕೆಗೆ ತನ್ನ ತಂದೆಯ ಹೆಸರು ಮತ್ತು ದೇಶ ವಿಭಜನೆಯ ನಂತರ ಅವರು ಕುಟುಂಬದ ಇತರ ಸದಸ್ಯರೊಡನೆ ಭಾರತದ ಪಂಜಾಬಿನ ಪಾಟಿಯಾಲ ಜಿಲ್ಲೆಯ ಸಿದ್ರಾಣ ಎಂಬ ಗ್ರಾಮಕ್ಕೆ ಬಂದು ನೆಲಸಿರುವುದು ಇಕ್ಬಾಲ್ ಮೂಲಕ ತಿಳಿದಿತ್ತು. ಅವರು ಗುರುಮೀತ್ ಸಿಂಗ್ ಮತ್ತು ನರೇಂದ್ರ ಸಿಂಗ್ ಎಂಬಿಬ್ಬರು ತನ್ನ ಸಹೋದರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ. ಮೇ ತಿಂಗಳಲ್ಲಿ ಸಹೋದರರಿಬ್ಬರೂ ಪಾಕಿಸ್ತಾನದ ಕರ್ತಾರ್ಪುರಕ್ಕೆ ಹೋಗಿ ೭೫ ವರ್ಷಗಳ ಹಿಂದೆ ಬೇರ್ಪಟ್ಟ ತಮ್ಮ ಸಹೋದರಿಯನ್ನು ಬೇಟಿಯಾದಾಗ ಅವರ ಬದುಕಿನ ಒಂದು ಅಧ್ಯಾಯ ಪೂರ್ಣಗೊಳ್ಳುತ್ತದೆ!