ಪುರುಷ ಪ್ರಧಾನವಾಗಿರುವ ಸಾಹಿತ್ಯ ಸಮ್ಮೇಳನಗಳು ಈಗಾಗಲೇ ಲಿಂಗಸೂಕ್ಷ್ಮತೆ ಕಳೆದುಕೊಂಡಿವೆ
ನಾ.ದಿವಾಕರ
ಮೂವತ್ತು ವರ್ಷಗಳ ನಂತರ ಕರ್ನಾಟಕದ ಸಕ್ಕರೆ ನಾಡು ಎಂದೇ ಹೆಸರಾದ ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಮೊದಲನೆಯದಾಗಿ ಸಮ್ಮೇಳನದ ಪ್ರಧಾನ ವಿಷಯ ಅಥವಾ Theme ಏನಾಗಿರಬೇಕು ಎನ್ನುವುದಕ್ಕಿಂತಲೂ ಸಮ್ಮೇಳನಾಧ್ಯಕ್ಷರ ಆಯ್ಕೆ ಸಾರ್ವಜನಿಕ ಚರ್ಚೆಗೊಳಗಾಗಿದೆ. ಎರಡನೆಯದಾಗಿ ಊಳಿಗೆ ಮಾನ್ಯ-ಜಾತಿ ರಾಜಕಾರಣದ ಕೇಂದ್ರ ಬಿಂದುವಾಗಿ ರುವ ಮಂಡ್ಯದ ಸಮ್ಮೇಳನ ಸಾಹಿತ್ಯಕವಾಗಿಯೂ ಇದೇ ದಿಕ್ಕಿನಲ್ಲಿ ಸಾಗುತ್ತದೆಯೇ ಎಂಬ ಅನುಮಾನ ಮೂಡುತ್ತಿದೆ. ಈ ಸೂಕ್ಷ್ಮ ತೆಯನ್ನು ಸಮ್ಮೇಳನಾಧ್ಯಕ್ಷರ ಆಯ್ಕೆಯ ಪ್ರಶ್ನೆ ಸಾಹಿತ್ಯದ ಅಂಗಳದಿಂದ ರಾಜಕೀಯ ಕೂಪಕ್ಕೆ ಜಿಗಿದಿರುವುದರಲ್ಲಿ ಗುರುತಿಸಬಹುದು.
ಸಮ್ಮೇಳನದ ಉಸ್ತುವಾರಿ ವಹಿಸುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಆರಂಭಿಸಿರುವ ಈ ಚರ್ಚೆಯ ಹಿಂದೆ ಯಾವ ಹಿತಾಸಕ್ತಿಗಳಿವೆ ಎನ್ನುವು ದಕ್ಕಿಂತಲೂ ಹೆಚ್ಚಾಗಿ, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತನ್ನ ಬೇರುಗಳನ್ನು ಹರಡಿರುವ ರಾಜಕೀಯದ ವಾಸನೆ ಬಡಿಯುತ್ತಿರುವುದು ಚಿಂತೆಗೀಡು ಮಾಡುವ ವಿಚಾರ.
ರಾಜಕೀಯ ಮತ್ತು ಸಾಹಿತ್ಯ : ಸರ್ಕಾರದ ಕೃಪಾಕಟಾಕ್ಷದಲ್ಲೇ ಬಹುಮಟ್ಟಿಗೆ ನಡೆಯುವ ಸಾಹಿತ್ಯ ಸಮ್ಮೇಳನಗಳು ಈಗಾಗಲೇ ತಮ್ಮ ಸಾಹಿತ್ಯಕ ರೂಪವನ್ನು ಕಳೆದುಕೊಂಡಿದ್ದು, ಎರಡು ದಿನಗಳ ಅಕ್ಷರ ಜಾತ್ರೆಯಲ್ಲಿ ಆಡಳಿತಾರೂಢ ರಾಜಕೀಯ ಪಕ್ಷದ ಆಡಂಬರವೇ ಎದ್ದು ಕಾಣುವಂತಿರುತ್ತದೆ. ಮಹಾರಾಷ್ಟ್ರ ದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ಯಾವುದೇ ರಾಜಕೀಯ ವ್ಯಕ್ತಿ ಅಥವಾ ಅಧಿಕಾರಶಾಹಿಯ ಪ್ರತಿನಿಧಿಗಳಿಗೆ ವೇದಿಕೆ ಇರುವುದಿಲ್ಲ. ಈ ಪರಂಪರೆಯನ್ನು ಇಂದಿಗೂ ಕಾಪಾಡಿಕೊಂಡು ಬರಲಾಗಿದೆ. ಈ ಪರಂಪರೆಯ ಹಿಂದಿನ ಔದಾತ್ಯವನ್ನು ಕನ್ನಡ ಸಾಹಿತ್ಯ ಲೋಕ ಇನ್ನಾದರೂ ಗಮನಿಸಬೇಕಿದೆ.
ಸಾಹಿತ್ಯ ಸಮ್ಮೇಳನ ಎನ್ನುವುದು ಈ ಸೃಜನಶೀಲ ಸಾಹಿತ್ಯಕ ಅಭಿವ್ಯಕ್ತಿಯನ್ನು ವಿಶಾಲ ಸಮಾಜದ ನಡುವೆ ಇಟ್ಟು ನೋಡುವ ಒಂದು ಪ್ರಯತ್ನ. ಸಾಹಿತ್ಯ ಎನ್ನುವುದು ಸುತ್ತಲಿನ ಸಮಾಜದ ಸ್ಥಿತ್ಯಂತರಗಳನ್ನು, ಜನಜೀವನ ಮತ್ತು ಆಗುಹೋಗುಗಳನ್ನು ಗಮನಿಸುತ್ತಲೇ ಬೆಳೆಯುವ ಒಂದು ಅಕ್ಷರ ಲೋಕದ ಪ್ರಯತ್ನ. ಇಲ್ಲಿ ಬರುವ ಫಸಲುಗಳೆಲ್ಲವೂ ವಸ್ತುನಿಷ್ಠವಾಗಿರುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಇದರೊಳಗಿನ ಒಂದು ಚಿಂತನಾಧಾರೆ ಸಮಾಜಮುಖಿಯಾಗಿ, ಸಮಷ್ಟಿ ಪ್ರಜ್ಞೆಯೊಂದಿಗೆ ಎಲ್ಲವನ್ನೂ ಒಳಗೊಳ್ಳುವ ಉದಾತ್ತ ಆಲೋಚನೆಗಳಿಗೆ ತೆರೆದುಕೊಂಡಿರುತ್ತದೆ.
ಸಾಹಿತ್ಯ ಲೋಕದ ವಿಭಿನ್ನ ಧಾರೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅವು ಗಳೊಳಗಿನ ಸಮಾಜಮುಖಿ ಚಿಂತನೆಗಳನ್ನು ಮುಖಾಮುಖಿಯಾಗಿಸಿ, ವಿಮರ್ಶೆಗೊಳಪಡಿಸುವ ಒಂದು ದೊಡ್ಡ ಜವಾಬ್ದಾರಿ ಸಾಹಿತ್ಯಪರಿಷತ್ತಿನಂತಹ ಸಂಸ್ಥೆಗಳ ಮೇಲಿರುತ್ತದೆ. ಕಸಾಪ ವಸ್ತುಶಃ ಹೀಗೆ ಮಾಡುತ್ತಿಲ್ಲ ಎನ್ನುವುದು ಬೇರೆ ವಿಚಾರ. ಆದರೆ ಕಾಲಕಾಲಕ್ಕೆ ನಡೆಯುವ ಸಾಹಿತ್ಯ ಸಮ್ಮೇಳನಗಳು ಈ ವಿಮರ್ಶಾತ್ಮಕ ಹಿನ್ನೋಟ ಮತ್ತು ದೂರಗಾಮಿ ಮುನ್ನೋಟಕ್ಕೆ ವೇದಿಕೆಯಾಗಿ ನಡೆಯಬೇಕಾಗುತ್ತದೆ. ಹಾಗಾಗಿಯೇ ಇಲ್ಲಿ ನಡೆಯುವ ಗೋಷ್ಠಿಗಳು, ಚರ್ಚೆ-ಸಂವಾದಗಳು ಆಯಾ ಕಾಲಘಟ್ಟದ ಸಾಮಾಜಿಕ ಸ್ಥಿತ್ಯಂತರಗಳ ಮೇಲೆ ಬೆಳಕು ಚೆಲ್ಲುತ್ತಲೇ, ತಳಮಟ್ಟಕ್ಕೂ ವಿಸ್ತರಿಸುವ ಸಾಮಾಜಿಕ ತಲ್ಲಣಗಳನ್ನು ದಾಖಲಿಸಿ, ಎಲ್ಲರನ್ನೊಳಗೊಳ್ಳುವ ಒಂದು ಸುಂದರ ಸಮಾಜದ ನಿರ್ಮಾಣಕ್ಕೆ ಬೇಕಾದ ಹಾದಿಗಳನ್ನು ಸೂಚಿಸುವಂತಿರಬೇಕಾಗುತ್ತದೆ. ಅದ್ದೂರಿ ಜಾತ್ರೆಗಳಂತೆ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಇದನ್ನು ಅಪೇಕ್ಷಿಸುವುದು ಅತಿರೇಕ ಎನಿಸಿದರೂ ಇದು ಅಗತ್ಯ.
ಅಧ್ಯಕ್ಷತೆಯ ಔಚಿತ್ಯ ಮತ್ತು ಪ್ರಸ್ತುತತೆ: ಹಾಗಾಗಿಯೇ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವಾಗ ಅನುಸರಿಸಬೇಕಾದ ಮಾನದಂಡಗಳು ಗಂಭೀರ ಚರ್ಚೆಗೊಳಗಾಗಬೇಕಿದೆ. ಈಗ ಸಾಹಿತ್ಯ ವಲಯದಲ್ಲಿ ಉದ್ಭವಿಸಿರುವ ಚರ್ಚೆ “ಸಾಹಿತ್ಯೇತರ ವ್ಯಕ್ತಿಗಳನ್ನು”ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಅಪೇಕ್ಷೆಯೇ ಅನಗತ್ಯವಾದದ್ದು. ‘ಸಾಹಿತ್ಯೇತರ’ ಎಂಬ ವಿಂಗಡನೆ ಬಹುಶಃ ಸಾಹಿತ್ಯದಲ್ಲಿ ತೊಡಗಿಕೊಳ್ಳದಿರುವವರನ್ನು ಉದ್ದೇಶಿಸಿದೆ. ಸಹಜವಾಗಿಯೇ ಇಲ್ಲಿ ಸಮಾಜದ ಇತರ ಕ್ಷೇತ್ರಗಳು ಗಮನಸೆಳೆಯುತ್ತವೆ. ಔದ್ಯೋಗಿಕ, ಔದ್ಯಮಿಕ, ಕಾರ್ಪೊರೇಟ್, ಸಾಫ್ಟ್‌ವೇರ್, ಚಿತ್ರರಂಗ, ಕ್ರೀಡೆ, ಸಮಾಜ ಸೇವೆ, ಅಧ್ಯಾತ್ಮ, ಮಠಮಾನ್ಯಗಳು ಹೀಗೆ ವಿಸ್ತರಿಸಿಕೊಳ್ಳುತ್ತಾ ಇದು ಬಂದು ತಲುಪುವುದು ಈ ಎಲ್ಲ ಕ್ಷೇತ್ರಗಳಲ್ಲೂ ತನ್ನ ಪ್ರಭಾವವನ್ನು ಹೊಂದಿರುವ ರಾಜಕೀಯ ವಲಯಕ್ಕೆ. ಈ ಕ್ಷೇತ್ರಗಳಲ್ಲಿ ಕನ್ನಡ ನಾಡು ನುಡಿಯ ಸೇವೆ ಸಲ್ಲಿಸಿರುವವರು ಇಲ್ಲವೆಂದೇನಲ್ಲ. ಆದರೆ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನ ವಹಿಸುವವರಿಗೆ ಸಾಹಿತ್ಯ ಕೃಷಿಯ ಬೇಸಾಯದೊಂದಿಗೆ, ಸಾಹಿತ್ಯಕ ಸೃಜನಶೀಲ ಕಣೋಟದಿಂದ ಇಡೀ ಸಮಾಜವನ್ನು ಒಳಹೊಕ್ಕು ನೋಡುವ ಹಾಗೂ ಅದರೊಳಗಿನ ತಲ್ಲಣ, ತುಮುಲ, ತೊಳಲಾಟಗಳನ್ನು ಗ್ರಹಿಸುವ ಸಾಮರ್ಥ್ಯ ಇರಬೇಕು. ಸಾಹಿತ್ಯ ಕೃಷಿಯಿಂದ ಹೊರತಾದ ವ್ಯಕ್ತಿಗಳಲ್ಲಿ ಸಾಹಿತ್ಯದ ಒಳನೋಟದೊಂದಿಗೆ ನೋಡುವ ವ್ಯವಧಾನ ಇರುವುದು ಅನುಮಾನ. ಹಾಗಾಗಿಯೇ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯೇತರ ವ್ಯಕ್ತಿಗಳು ಅನಪೇಕ್ಷಿತವಾಗುತ್ತಾರೆ.
ಮಹಿಳಾ ಪ್ರಾತಿನಿಧ್ಯದ ಪ್ರಶ್ನೆ : ಇಲ್ಲಿ ಮತ್ತೊಂದು ಸೂಕ್ಷ್ಮವೆಂದರೆ 110 ವರ್ಷಗಳ ದೀರ್ಘ ಇತಿಹಾಸದಲ್ಲಿ ಕಸಾಪ ಒಮ್ಮೆಯೂ ಮಹಿಳಾ ಅಧ್ಯಕ್ಷರನ್ನು ಹೊಂದಿಲ್ಲದಿರುವುದು ಸಾಹಿತ್ಯ ವಲಯದಲ್ಲಿ ಬೇರೂರಿರುವ ಗಂಡಾಳಿಕೆಯ ಸಂಕೇತವಾಗಿ ಕಾಣುತ್ತದೆ. ಈ ಗಂಡಾಳಿಕೆಯ ಕೇಂದ್ರವು ಕಾಲಕಾಲಕ್ಕೆ ನಡೆಸುವ ಅದ್ದೂರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ ಇನ್ನೂ ಸುಸ್ಪಷ್ಟ. ಈವರೆಗೂ 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಇವುಗಳಲ್ಲಿ ಸಮ್ಮೇಳನಾಧ್ಯಕ್ಷರಾಗಿ ಮೊದಲ ಬಾರಿ ಮಹಿಳೆ ಆಯ್ಕೆಯಾಗಲು 60 ವರ್ಷಗಳೇ ಬೇಕಾದವು (1974, ಜಯದೇವಿತಾಯಿ ಲಿಗಾಡೆ). ಆನಂತರ ಮಹಿಳಾ ಸಾಹಿತಿಗಳಿಗೆ 26 ವರ್ಷಗಳ ಕಡ್ಡಾಯ ರಜೆ ನೀಡಲಾಯಿತು. ಕನ್ನಡ ಸಾಹಿತ್ಯದ ಉತ್ಕರ್ಷದ ಕಾಲಘಟ್ಟ ಎನ್ನಬಹುದಾದ 1975-2000ರ ಅವಧಿಯಲ್ಲಿ ಮಹಿಳಾ ಸಾಹಿತಿಗಳು ಪ್ರಕಟಿಸಿದ ಅಕ್ಷರ ಭಂಡಾರ, ಕನ್ನಡ ಸಾಹಿತ್ಯ ಪರಂಪರೆಗೆ ಹೆಮ್ಮೆ ತರುವಂತಹುದು. ಆದರೂ ಈ ಅವಧಿಯಲ್ಲಿ ಕಸಾಪದ ಕಣ್ಣಿಗೆ ಒಬ್ಬ ಮಹಿಳಾ ಸಾಹಿತಿಯೂ ಕಾಣಲಿಲ್ಲ. ದುರಂತ ಎನಿಸುವುದಿಲ್ಲವೇ?
ತದನಂತರ ಹೊಸ ಶತಮಾನದಲ್ಲಿ ನಡೆದಿರುವ 19 ಸಮ್ಮೇಳನಗಳಲ್ಲಿ ಕೇವಲ ಮೂರು ಬಾರಿ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ (2000 ಶಾಂತಾದೇವಿ ಮಾಳವಾಡ, 2003 ಕಮಲಾ ಹಂಪನಾ, 2010 ಗೀತಾ ನಾಗಭೂಷಣ). ಇದರರ್ಥ ಕನ್ನಡ ಸಾಹಿತ್ಯ ಲೋಕದಲ್ಲಿ ಸಮ್ಮೇಳನಾಧ್ಯಕ್ಷರಾಗುವ ಅರ್ಹತೆ ಇರುವ ಮಹಿಳಾ ಸಾಹಿತಿಗಳು ಇಲ್ಲವೆಂದೇನಲ್ಲ. ಸಾಮಾಜಿಕ ಪಿತೃಪ್ರಧಾನತೆ, ರಾಜಕೀಯ ಪುರುಷಾಧಿಪತ್ಯ, ಸಾಂಸ್ಕೃತಿಕ ಗಂಡಾಳಿಕೆ ಇವುಗಳನ್ನು ದಿಟ್ಟವಾಗಿ ಎದುರಿಸುತ್ತಲೇ, ಪುರುಷ ಸಮಾಜದ ವಿಕೃತಿಗಳಿಗೆ ಬಲಿಯಾದ ಸಹಸ್ರಾರು ಮಹಿಳೆಯರಿಗೆ ದನಿಯಾಗುವಂತಹ ಸಾಹಿತ್ಯ ಈ ಅವಧಿಯಲ್ಲಿ ಮಹಿಳಾ ಸಾಹಿತಿಗಳಿಂದಲೇ ವಿಪುಲವಾಗಿ ಹರಿದುಬಂದಿದೆ. ಆದರೂ ಸಮ್ಮೇಳನಾಧ್ಯಕ್ಷರ ಸ್ಥಾನದಿಂದ ಮಹಿಳೆ ವಂಚಿತಳಾಗಿದ್ದಾಳೆ ಎಂದರೆ ಆ ಗೌರವಯುತ ಸ್ಥಾನಕ್ಕೆ ಮಹಿಳೆಯನ್ನು ಕೂರಿಸುವ ವಿಶಾಲ ಚಿಂತನೆ-ಸೂಕ್ಷ್ಮ ತೆ-ಸಂವೇದನೆ ಕನ್ನಡ ಸಾಹಿತ್ಯ ಲೋಕಕ್ಕೆ ಅಥವಾ ಅದನ್ನು ನಿರ್ದೇಶಿಸುವ ಸಾಂಸ್ಥಿಕ ಗಂಡಾಳಿಕೆಗೆ ಇರಲಿಲ್ಲ/ಈಗಲೂ ಎಂದರ್ಥ.
ಮಹಿಳಾ ದೌರ್ಜನ್ಯಗಳು ನಿತ್ಯ ಸುದ್ದಿಗಳಾಗಿರುವ ಹೊತ್ತಿನಲ್ಲಿ ಮಂಡ್ಯದಲ್ಲಿ ನಡೆಯಲಿರುವ 87ನೆಯ ಸಾಹಿತ್ಯ ಸಮ್ಮೇಳನದ ಮುಖ್ಯ ವಿಷಯ ಅಥವಾ ಥೀಮ್ ಮಹಿಳೆಯೇ ಆಗಬೇಕಿದೆ. ಮಂಡ್ಯ ಈಗ ಸಕ್ಕರೆ-ಕನ್ನಂಬಾಡಿಗಿಂತಲೂ ಹೆಚ್ಚಾಗಿ ವಿಶ್ವಮಾನ್ಯವಾಗಿರುವುದು ಹೆಣ್ಣು ಭ್ರೂಣ ಹತ್ಯೆಗಳಿಗಾಗಿ ಮತ್ತು ಕುಸಿಯುತ್ತಿರುವ ಲಿಂಗಾನುಪಾತಕ್ಕಾಗಿ, ಈ ಹಿನ್ನೆಲೆಯಲ್ಲಿ ನೋಡಿದಾಗ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಥೀಮ್ ‘ಮಹಿಳೆ’ ಆಗುವುದು ಸಮಂಜಸ ಸಮ್ಮೇಳನಾಧ್ಯಕ್ಷರೂ ಮಹಿಳೆಯೇ ಆಗಬೇಕಿದೆ. ಒಂದು ಶತಮಾನ ಕಳೆದರೂ ಮಹಿಳಾ ಪ್ರಾತಿನಿಧ್ಯ ಒಂದು ಸಹಜ ಪ್ರಕ್ರಿಯೆಯಾಗದೆ, ಆಗ್ರಹವಾಗಿಯೇ ಕೇಳಿಬರುತ್ತಿರುವುದು ನಾಚಿಕೆಗೇಡಿನ ವಿಚಾರವಲ್ಲವೇ? ಪಿತೃಪ್ರಧಾನತೆ, ಸಾಂಸ್ಕೃತಿಕ ಲೋಕದ ಸಾಂಸ್ಥಿಕ ಗಂಡಾಳಿಕೆ, ಅಧಿಕಾರ ರಾಜಕಾರಣದ ಪುರುಷಾಧಿಪತ್ಯ ಮತ್ತು ಮರೆಯಾಗುತ್ತಲೇ ಇರುವ ಲಿಂಗ ಸೂಕ್ಷ್ಮತೆ ಈ ತಲ್ಲಣಗಳ ದೃಷ್ಟಿಯಿಂದ ಮಂಡ್ಯದಲ್ಲಿ ನಡೆಯುವ87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡುವುದು ನಮ್ಮ ಆದ್ಯತೆಯಾಗಬೇಕಿದೆ.
ಇದು ಕೆಲವೇ ಸಾಹಿತಿಗಳ ಗುತ್ತಿಗೆಯ ಪ್ರಶ್ನೆಯಲ್ಲ. ಇಲ್ಲಿರುವುದು ಸಾಹಿತ್ಯ ಸಂವೇದನೆ ಮತ್ತು ಲಿಂಗ ಸೂಕ್ಷ್ಮತೆಯ ಪ್ರಶ್ನೆ, ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿಯ ಪ್ರಶ್ನೆಯೂ ಅಲ್ಲ. ಸಾಹಿತ್ಯ ಸಮ್ಮೇಳನಕ್ಕೊಂದು ಔನ್ನತ್ಯ ಇರುವಂತೆಯೇ ಸಾಹಿತ್ಯಕ ಔಚಿತ್ಯವೂ ಇರುತ್ತದೆ. ಸಾಹಿತ್ಯೇತರ ಎನ್ನಲಾಗುವ ಸಮಾಜದಿಂದ ಆಯ್ಕೆಯಾಗುವ ಉದ್ಯಮಿ-ಮಠಾಧಿಪತಿ-ರಾಜಕಾರಣಿ ಯಾರೇ ಆದರೂ ಈ ಎರಡೂ ಅಂಶಗಳನ್ನು ಸಾಹಿತ್ಯ ಸೂಕ್ಷ್ಮ ದೃಷ್ಟಿಯಿಂದ ಗ್ರಹಿಸಲುಸಾಧ್ಯವಾಗುವುದಿಲ್ಲ. ಮೊದಲೇ ಅದ್ಧೂರಿ ಜಾತ್ರೆಯಂತೆ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಕ ಸ್ಪರ್ಶವನ್ನೂ ಕಳೆದುಕೊಂಡುಬಿಟ್ಟರೆ ಅದು ಮತ್ತೊಂದು ಸಮಾವೇಶವಾಗಿ ಪರ್ಯಾವಸಾನ ಹೊಂದುತ್ತದೆ. ಕನ್ನಡ ಸಾಹಿತ್ಯ ಮತ್ತು ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಗಮನದಲ್ಲಿಟ್ಟು ನೋಡುವುದಾದರೆ ‘ಸಾಹಿತ್ಯೇತರ’ರನ್ನು ಹೊರಗಿಟ್ಟು ಅಧ್ಯಕ್ಷರನ್ನು ಆಯ್ಕೆ ಮಾಡುವುದು ವಿವೇಕಯುತ,
ಮಹಿಳಾ ದೌರ್ಜನ್ಯಗಳು ನಿತ್ಯ ಸುದ್ದಿಗಳಾಗಿರುವ ಹೊತ್ತಿನಲ್ಲಿ ಮಂಡ್ಯದಲ್ಲಿ ನಡೆಯಲಿರುವ 87ನೆಯ ಸಾಹಿತ್ಯ ಸಮ್ಮೇಳನದ ಮುಖ್ಯ ವಿಷಯ ಅಥವಾ ಥೀಮ್ ಮಹಿಳೆಯೇ ಆಗಬೇಕಿದೆ. ಮಂಡ್ಯ ಈಗ ಸಕ್ಕರೆ-ಕನ್ನಂಬಾಡಿಗಿಂತಲೂ ಹೆಚ್ಚಾಗಿ ವಿಶ್ವಮಾನ್ಯವಾಗಿರುವುದು ಹೆಣ್ಣು ಭ್ರೂಣ ಹತ್ಯೆಗಳಿಗಾಗಿ ಮತ್ತು ಕುಸಿಯುತ್ತಿರುವ ಲಿಂಗಾನುಪಾತಕ್ಕಾಗಿ. ಈ ಹಿನ್ನೆಲೆಯಲ್ಲಿ ನೋಡಿದಾಗ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಥೀಮ್ ‘ಮಹಿಳೆ’ ಆಗುವುದು ಸಮಂಜಸ. ಸಮ್ಮೇಳನಾಧ್ಯಕ್ಷರೂ ಮಹಿಳೆಯೇ ಆಗಬೇಕಿದೆ.
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…
ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…