ಅಂಕಣಗಳು

ಮಾಲ್ಡೀವ್ಸ್‌ ವಿವಾದ: ಭಾವಾವೇಶಕ್ಕೆ ಒಳಗಾಗಿ ಲಕ್ಷದ್ವೀಪ ಹಾಳುಮಾಡಬಾರದು

ಡಿ.ವಿ ರಾಜಶೇಖರ

ನಿರೀಕ್ಷೆಯಂತೆಯೇ ಭಾರತ ಮತ್ತು ನೆರೆಯ ದ್ವೀಪಸಮುದಾಯ ದೇಶ ಮಾಲೀವ್ ನಡುವಣ ಬಾಂಧವ್ಯ ಕೆಟ್ಟಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಚೀನಾ ಪರವಾದಿ ಮಹಮ್ಮದ್ ಮುಯಿಜ್ಜು ಗೆಲುವು ಸಾಧಿಸಿದಾಗಲೇ ಎರಡೂ ದೇಶಗಳ ನಡುವೆ ಅಹಿತಕರ ಬೆಳವಣಿಗೆ ಆಗುತ್ತದೆಂದು ನಿರೀಕ್ಷಿಸಲಾಗಿತ್ತು. ಇದೀಗ ಆ ಊಹೆ ನಿಜವಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪದ ಸಮುದ್ರತೀರದಲ್ಲಿ ಕಳೆದವಾರ ವಿಹರಿಸುವ ಮತ್ತು ಆ ಮೂಲಕ ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಂಡದ್ದೇ ಕಾರಣವಾಗಿ ಮಾಲೀನ ಕೆಲ ಮಂತ್ರಿಗಳು ಕಿಡಿಕಾರಿದ್ದರು. ಮೋದಿ ಅವರ ಬಗ್ಗೆ ವ್ಯಂಗ್ಯವಾಡಿದ್ದರು. ಮೋದಿ ಅವರು ತಮ್ಮ ಲಕ್ಷದ್ವೀಪ ಪ್ರವಾಸ ಕಾಲದಲ್ಲಿ ಎಲ್ಲಿಯೂ ಮಾಲೀವ್ ಹೆಸರು ಪ್ರಸ್ತಾಪಿಸಿರಲಿಲ್ಲ. ಆದರೂ ಮುಯಿಜ್ಜು ಸಂಪುಟದ ಮೂವರು ಉಪಸಚಿವರು ಮೋದಿ ಅವರನ್ನು ಕೋಡಂಗಿ, ಇಸ್ರೇಲ್‌ನ ‘ಕೈಗೊಂಬೆ’ ಎಂದು ಹೀಯಾಳಿಸಿ ‘ಎಕ್ಸ್’ (ಟ್ವಿಟ್ಟರ್)ನಲ್ಲಿ ಬರೆದದ್ದು ಭಾರತದಲ್ಲಿ ಸಹಜವಾಗಿ ಕೆಟ್ಟ ಪ್ರತಿಕ್ರಿಯೆಗೆ ಕಾರಣವಾಗಿತ್ತು. ಭಾರತ ಈ ಬಗ್ಗೆ ಪ್ರತಿಭಟನೆ ವ್ಯಕ್ತಮಾಡಿದ ಬೆನ್ನಲ್ಲೇ ಆ ಮೂವರೂ ಸಚಿವರನ್ನು ಸಂಪುಟದಿಂದ ಸಸ್ಪೆಂಡ್ ಮಾಡಲಾಗಿದೆ. ಸಂಪುಟದ ಕೆಲ ಸದಸ್ಯರು ವ್ಯಕ್ತಮಾಡಿರುವ ಅಭಿಪ್ರಾಯ ಸರ್ಕಾರದ್ದಲ್ಲ, ವೈಯಕ್ತಿಕವಾದುದು ಎಂದು ಸರ್ಕಾರ ಸ್ಪಷ್ಟನೆಯನ್ನು ನೀಡಿತು. ಆದರೆ ಭಾರತದ ವಿದೇಶಾಂಗ ಸಚಿವಾಲಯ ಮತ್ತು ಮೋದಿ ಬೆಂಬಲಿಗರು ಆ ಸಚಿವರನ್ನು ಸಸ್ಪೆಂಡ್ ಮಾಡಿದರೆ ಸಾಲದು, ಸಂಪುಟದಿಂದ ಹೊರಹಾಕಬೇಕು ಮತ್ತು ಸರ್ಕಾರ ಕ್ಷಮೆ ಕೇಳಬೇಕೆಂದು ಒತ್ತಾಯ ಮಾಡಿದ್ದಾರೆ. ಈ ಬೆಳವಣಿಗೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ‘ಮಾಲ್ಡಿವ್ ಬಹಿಷ್ಕಾರ’ ದ ಕೂಗು ಎದ್ದಿದೆ. ಈ ಕೂಗಿಗೆ ಪ್ರತಿಕ್ರಿಯೆಯಾಗಿ ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೆಲವು ಉದ್ಯಮಪತಿಗಳು ಮುಂದಾಗಿದ್ದಾರೆ. ಅಷ್ಟೇ ಅಲ್ಲ ಹಿಂದಿಯ ಜನಪ್ರಿಯ ನಟ, ನಟಿಯರು ಮಾಲೀಕ್ಸ್‌ಗೆ ಬದಲಾಗಿ ಲಕ್ಷದ್ವೀಪದಲ್ಲಿ ತಮ್ಮ ಮುಂದಿನ ಎಲ್ಲ ಪ್ರವಾಸವನ್ನೂ ಮಾಡುವುದಾಗಿ ಘೋಷಿಸಿದ್ದಾರೆ. ಮಾಲ್ಡಿವ್ ಬಹಿಷ್ಠಾರ ಕರೆಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದ್ದು ಪ್ರವಾಸೋದ್ಯಮ ಸಂಸ್ಥೆಗಳು ಅಲ್ಲಿಗೆ ವಿಮಾನ ಪ್ರಯಾಣವನ್ನು ರದ್ದು ಮಾಡಿವೆ. ಅಷ್ಟೆ ಅಲ್ಲ ಹೊಸದಾಗಿ ಬುಕ್ಕಿಂಗ್ ಮಾಡುವುದನ್ನೂ ನಿಲ್ಲಿಸಿವೆ. ಈ ಕಾರಣದಿಂದಾಗಿ ಮಾಲೀನ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಸಹಜವಾಗಿ ನೂರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಘಟನೆಗಾಗಿ ಮಾಲೀನ ವಿರೋಧಿ ನಾಯಕರು ವಿಷಾದ ವ್ಯಕ್ತಮಾಡಿ ತುರ್ತಾಗಿ ಭಾರತದ ಜೊತೆ ಮಾತುಕತೆ ನಡೆಸಿ ವಿವಾದ ಅಂತ್ಯವಾಗುವಂತೆ ಮತ್ತು ಆ ಮೂಲಕ ಕೆಟ್ಟಿರುವ ಬಾಂಧವ್ಯವನ್ನು ಸರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹಿಂದೂ ಮಹಾಸಾಗರದಲ್ಲಿರುವ ಮತ್ತು ಭಾರತಕ್ಕೆ ಅತಿ ಹತ್ತಿರದಲ್ಲಿರುವ ಹೂವಿನ ಹಾರದಂತಿರುವ 26 ದ್ವೀಪಗಳ ಸುಂದರ ದೇಶ ಮಾಲ್ಲೀವ್. ಪ್ರವಾಸಿಗರ ಸ್ವರ್ಗವೆಂದೇ ಹೆಸರಾಗಿರುವ ಮಾಲೀವ್ ಬ್ರಿಟಿಷ್ ಆಡಳಿತಗಾರರಿಂದ ಬಿಡುಗಡೆ ಪಡೆದದ್ದು 1956ರಲ್ಲಿ. ಶತಮಾನಗಳ ಹಿಂದೆ ಅರಬರು ವ್ಯಾಪಾರಕ್ಕೆಂದು ಬಂದು ಇಲ್ಲಿಯೇ ನೆಲೆಸಿದಂದಿನಿಂದ ಮಾಲೀವ್ ಮುಸ್ಲಿಮ್ ಪ್ರಾಬಲ್ಯದ ದೇಶವಾಗಿ ಬೆಳೆದು ಬಂದಿದೆ. ನೆರೆಯ ದೇಶವಾದ ಭಾರತ ಸದಾ ಕಷ್ಟ ಕಾಲದಲ್ಲಿ ಮಾಲೀಕ್ಸ್‌ಗೆ ನೆರವಾಗುತ್ತ ಬಂದಿದೆ. ಶ್ರೀಲಂಕಾದಲ್ಲಿನ ಎಲ್‌ಟಿಟಿಯ ಬಂಡುಕೋರರು ಒಮ್ಮೆ ದೇಶವನ್ನು ವಶಮಾಡಿಕೊಳ್ಳುವ ದಿಸೆಯಲ್ಲಿ ಕ್ಷಿಪ್ರಕ್ರಾಂತಿಗೆ ಯತ್ನಿಸಿದರಾದರೂ ಅದರಲ್ಲಿ ಅವರು ಯಶಸ್ವಿಯಾಗಲಿಲ್ಲ. ಭಾರತೀಯ ಸೇನೆ ಮಧ್ಯಪ್ರವೇಶಿಸಿ ಕ್ಷಿಪ್ರಕ್ರಾಂತಿಯನ್ನು ವಿಫಲಗೊಳಿಸಿತು. ಸುನಾಮಿಯಿಂದ ದೇಶ ತತ್ತರಿಸಿದಾಗ ನೆರವಿಗೆ ಹೋದದ್ದು ಭಾರತ. ಅಷ್ಟೇ ಅಲ್ಲ ಕೋವಿಡ್ ಹಾವಳಿ ಕಾಲದಲ್ಲಿ ಭಾರತ ಉಚಿತವಾಗಿ ಮಾಲ್ಡಿವ್‌ಗೆ ವ್ಯಾಕ್ಸಿನ್ ಪೂರೈಸಿತು.

ಭಾರತದ ನೆರೆಯಲ್ಲಿರುವ ಮಾಲ್ಡಿವ್‌ಗೆ ಆದಾಯ ತರುವ ಬಹು ಮುಖ್ಯ ಕ್ಷೇತ್ರ ಪ್ರವಾಸೋದ್ಯಮ. ಕಳೆದ ವರ್ಷ ಮಾಲೀವ್‌ಗೆ ಭೇಟಿ ನೀಡಿದ ಭಾರತೀಯ ಪ್ರವಾಸಿಗರ ಸಂಖ್ಯೆ ಸುಮಾರು 17 ಲಕ್ಷ. ಒಟ್ಟು ಪ್ರವಾಸಿಗರಲ್ಲಿ ಶೇ.11 ಭಾಗ ಭಾರತೀಯರದ್ದೇ ಆಗಿದೆ. ರಷ್ಯಾದ ಪ್ರವಾಸಿಗರು ಎರಡನೆಯ ಸ್ಥಾನದಲ್ಲಿದ್ದಾರೆ. ಮೂರನೆಯ ಸ್ಥಾನದಲ್ಲಿ ಚೀನಾ ಪ್ರವಾಸಿಗರಿದ್ದಾರೆ. ಹೀಗಾಗಿಯೆ ಮಾಲೀವ್‌ಗೆ ಭಾರತದ ಜೊತೆಗಿನ ಬಾಂಧವ್ಯ ಮುಖ್ಯವಾಗಿದೆ. ಆದರೆ ರಾಜಕಾರಣಿಗಳು ಎರಡು ಗುಂಪುಗಳಾಗಿ ವಿಭಜನೆಗೊಂಡಿದ್ದಾರೆ. ಭಾರತದ ಪರ ಒಂದು ಗುಂಪು ಇದ್ದರೆ ಮತ್ತೊಂದು ಗುಂಪು ಚೀನಾದ ಪರ. ಈ ವಿಭಜನೆ ಕಳೆದ ವರ್ಷದ ಅಂತ್ಯಕ್ಕೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹೆಚ್ಚು ಢಾಳಾಗಿ ಕಂಡುಬಂತು.

ಚುನಾವಣಾ ಪ್ರಚಾರ ಕಾಲದಲ್ಲಿ ‘ಇಂಡಿಯಾ ಔಟ್ ಘೋಷಣೆಯನ್ನೇ ಮುಂದಿಟ್ಟುಕೊಂಡಿದ್ದರು. ಆಗಿನ ಅಧ್ಯಕ್ಷ ಮತ್ತು ಮುಯಿಜ್ಜು ಅವರ ವಿರೋಧಿ ಇಬ್ರಾಹಿಂಸಾಲಿಹ್ ‘ಇಂಡಿಯಾಫಸ್ಟ್’ ಎಂಬಘೋಷಣೆಯೊಂದಿಗೆ ಪ್ರಚಾರ ನಡೆಸಿದರು. ಅಧಿಕಾರಕ್ಕೆ ಬಂದರೆ ದೇಶದ ಸಾರ್ವಭೌಮತೆಯನ್ನು ಕಾಪಾಡುವ ದಿಸೆಯಲ್ಲಿ ದೇಶದಲ್ಲಿರುವ ಭಾರತದ ಸೇನೆಯನ್ನು ವಾಪಸ್ ಕಳುಹಿಸುವುದಾಗಿ ಮುಯಿಜ್ಜು ಘೋಷಿಸಿ ಅದನ್ನು ರಾಷ್ಟ್ರೀಯ ಸ್ವಾಭಿಮಾನದ ಪ್ರಶ್ನೆಯನ್ನಾಗಿಸಿದರು. ಆ ಮೂಲಕ ಜನರಲ್ಲಿ ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸಿದರು. ಭಾವಾವೇಶದ ಸನ್ನಿವೇಶ ವಾಸ್ತವಿಕ ಅಂಶವನ್ನು ದೇಶ ಮರೆಮಾಚಿತ್ತು. ಭಾರತ ನೀಡಿರುವ ಅಂಕಿ ಅಂಶಗಳ ಪ್ರಕಾರ ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸೈನಿಕರ ಸಂಖ್ಯೆ 79. ಗಡಿ ರಕ್ಷಣೆ ಮತ್ತು ನಿಸರ್ಗವಿಕೋಪಗಳಂಥ ಅವಘಢಗಳನ್ನು ನಿಭಾಯಿಸಲು ಮಾಲೀಕ್ಸ್‌ಗೆ ಭಾರತ ಮೂರು ವಿಮಾನಗಳನ್ನು ಉಡುಗೊರೆಯಾಗಿ ಈ ಹಿಂದೆ ನೀಡಿತ್ತು. ಈ ವಿಮಾನಗಳ ಕಾರ್ಯನಿರ್ವಹಣೆಗೆಂದೇ ಆ ಕೆಲಸ ಭದ್ರತಾಪಡೆಯನ್ನು ಮಾಲೀಕ್ಸ್‌ನಲ್ಲಿ ನೆಲೆಗೊಳಿಸಲಾಗಿದೆ. ಅವರು ಮೂಲಭೂತವಾಗಿ ಸೈನಿಕರ ಕೆಲಸ ಮಾಡುವುದಿಲ್ಲ. ಮಾಲೀನ ವಾಯುಪ್ರದೇಶದ ಕಾವಲು, ನೈಸರ್ಗಿಕ ವಿಪತ್ತು ಬಂದ ಸಂದರ್ಭದಲ್ಲಿ ಜನರಿಗೆ ನೆರವಾಗುವುದು, ವೈದ್ಯಕೀಯ ನೆರವು ಒಗಿಸುವುದು ಮುಂತಾದ ಜನಸೇವಾ ಕೆಲಸಗಳನ್ನು ಆ ಸೈನಿಕರು ಮಾಡುತ್ತಿದ್ದಾರೆ. ಅಂಥವರನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿರುವುದು ರಾಜಕಾರಣವಲ್ಲದೆ ಮತ್ತೇನೂ ಅಲ್ಲ. ಮುಯಿಜ್ಜು ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತತ್‌ಕ್ಷಣ ಭಾರತವನ್ನು ಒತ್ತಾಯಿಸಿದ್ದೇ ಸೈನಿಕರನ್ನು ವಾಪಸ್ ಕರೆಸಿಕೊಳ್ಳಬೇಕೆಂಬುದು.

ಸಾಮಾನ್ಯವಾಗಿ ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿ ಬಂದವರು ನೆರೆಯ ದೇಶ ಭಾರತಕ್ಕೆ ಮೊದಲ ಭೇಟಿ ಮಾಡುತ್ತ ಬಂದಿದ್ದಾರೆ. ಆದರೆ ಮುಯಿಜ್ಜು ಅವರು ತಮ್ಮ ಭಾರತ ವಿರೋಧಿ ಧೋರಣೆಯನ್ನು ಮುಂದುವರಿಸಿದ್ದು ಚೀನಾಕ್ಕೆ ಮೊದಲ ಭೇಟಿ ನೀಡಿದ್ದಾರೆ. ಮೋದಿ ಅವರಿಗೆ ಸಂಬಂಧಿಸಿದಂತೆ ಮಾಲೀಕ್ಸ್‌ನಲ್ಲಿ ಅಹಿತಕರ ಘಟನೆಗಳು ಸಂಭವಿಸಿದಾಗ ಮೊಯಿಜ್ಜು ಅವರು ಚೀನಾ ಪ್ರವಾಸದಲ್ಲಿದ್ದರು. ಅಲ್ಲಿ ಅವರಿಗೆ ಕೆಂಪು ಹಾಸಿನ ಸ್ವಾಗತ ಸಿಕ್ಕಿದೆ. 22 ಹೊಸ ಪ್ರಸ್ತಾವನೆಗಳಿಗೆ ಬೆಂಬಲ ನೀಡುವ ಸಂಬಂಧ ಚೀನಾ ನಾಯಕರು ಸಹಿಹಾಕಿದ್ದಾರೆ. ಇದು ಸಾಲದೆಂಬಂತೆ ಭಾರತಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ ಕೂಡ. ಮಾಲೀವ್ ಸಾರ್ವಭೌಮತೆಯನ್ನು ಚೀನಾ ರಕ್ಷಿಸಲಿದೆ. ಯಾವುದೇ ಹೊರಗಿನ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಚೀನಾ ನಾಯಕರು ಹೇಳಿಕೆಯೊಂದರಲ್ಲಿ ಘೋಷಿಸಿದ್ದಾರೆ. ಮುಯಿಜ್ಜು ಅವರು ಭಾರತಕ್ಕೆ ವಿರೋಧವಾಗಿ ಚೀನಾ ನಾಯಕರ ಕಿವಿಯೂದಿದ್ದರಿಂದಲೇ ಇಂಥ ಹೇಳಿಕೆ ಹೊರಬಿದ್ದಿದೆ ಅನಿಸುತ್ತದೆ.

ಚೀನಾದೇಶ ಭಾರತದ ಅಭಿವೃದ್ಧಿಗೆ ಅಡ್ಡಗಾಲು ಹಾಕಲು ನಾನಾ ರೀತಿಯ ತಂತ್ರಗಳನ್ನು ಬಳಸುತ್ತ ಬಂದಿದೆ. ಭಾರತದ ನೆರೆಯ ದೇಶಗಳನ್ನು ಬಲೆಗೆ ಹಾಕಿಕೊಳ್ಳುವ ಕೆಲಸ ಮಾಡುತ್ತ ಬಂದಿದೆ. ಅದು ಬಳಸುತ್ತಿರುವ ವಿಧಾನ ಸಾಲ ನೀಡಿಕೆ ತಂತ್ರ, ಅದರ ಸಾಲದ ಬಲೆಯಲ್ಲಿ ಮೊದಲು ಸಿಕ್ಕಿಹಾಕಿಕೊಂಡು ನರಳುತ್ತಿರುವ ದೇಶ ಪಾಕಿಸ್ತಾನ, ಎರಡನೆಯ ದೇಶ ಶ್ರೀಲಂಕಾ. ಸಾಲದ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಕೆಳಕ್ಕೆ ಬಿದ್ದಿರುವ ಶ್ರೀಲಂಕಾ ಈಗ ಮತ್ತೆ ಭಾರತದ ಜೊತೆ ಸ್ನೇಹಕ್ಕೆ ಮುಂದಾಗಿದೆ. ಇದೀಗ ಮಾಲೀವ್ ಚೀನಾದ ಜಾಲದಲ್ಲಿದೆ. ಈಗಾಗಲೇ ಚೀನಾ ಅಪಾರ ಪ್ರಮಾಣದಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ನೆರವಾಗಿದೆ. ಮತ್ತಷ್ಟು ಸಾಲಕ್ಕೆ ಮಾಲೀವ್ ಅಧ್ಯಕ್ಷರು ಬೇಡಿಕೆ ಇಟ್ಟಿದ್ದು ಚೀನಾ ನೆರವಿನ ಭರವಸೆ ನೀಡಿದೆ ಎನ್ನಲಾಗಿದೆ. ಭಾರತ ಕೂಡ ಮಾಲೀಕ್ಸ್‌ನಲ್ಲಿ ಸಾಕಷ್ಟು ಹಣ ಹೂಡಿದೆ. ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡು ಜಾರಿಗೊಳಿಸಿದೆ. ಆದರೆ ಚೀನಾವು ಭಾರತಕ್ಕಿಂತ ಹೆಚ್ಚಿನ ಹಣವನ್ನು ವಿವಿಧ ಯೋಜನೆಗಳಲ್ಲಿ ತೊಡಗಿಸಿ ಜನರ ಮನಗೆಲ್ಲಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಇತ್ತೀಚಿನ ವಿದ್ಯಮಾನಕ್ಕೆ ಭಾರತ ವಿಶೇಷ ಮಹತ್ವ ನೀಡಬೇಕಿಲ್ಲ.

ಮಾಲ್ಡಿವ್‌ಗೆ ಪರ್ಯಾಯವಾಗಿ ಲಕ್ಷದ್ವೀಪ ಅಭಿವೃದ್ಧಿ ಮಾಡುವ ಕೆಲವರ ಘೋಷಣೆ ಅರ್ಥಪೂರ್ಣವಾದುದಲ್ಲ. ಮಾಲೀಟ್ಸ್ಅನ್ನು ನಿರ್ಲಕ್ಷಿಸುವ ಪ್ರಯತ್ನ ಅಪಾಯಕಾರಿ. ನಿರ್ಲಕ್ಷಿಸಿದರೆ ಅಲ್ಲಿ ಚೀನಾ ಮೇಲುಗೈ ಸಾಧಿಸುತ್ತದೆ. ಮಾಲ್ಲೀವ್ ಬೇರೆ ದೇಶ. ಆದರೆ ಅಷ್ಟೇ ಸುಂದರವಾಗಿರುವ ನಮ್ಮ ದೇಶದ್ದೇ ಆದ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ. ಈ ದ್ವೀಪ ಸಮುದಾಯಕ್ಕೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸುವತ್ತ ಸರ್ಕಾರ ಹಾಗೂ ಖಾಸಗಿ ಕ್ಷೇತ್ರ ಪ್ರಯತ್ನ ಮಾಡಿದರೆ ಒಳ್ಳೆಯದೆ. ಆದರೆ ಪೂರ್ಣ ವಾಣಿಜ್ಯಕರಣ ಅಪಾಯಕಾರಿ. ಇತ್ತೀಚಿನ ವರ್ಷಗಳಲ್ಲಿ ಮಾಡ್ತೀವ್ ಕಸದ ತೊಟ್ಟಿಯಾಗಿ ಪರಿವರ್ತಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೀವಿ ವೈವಿಧ್ಯದ ನೆಲೆಯಾಗಿರುವ ಲಕ್ಷದ್ವೀಪದ ನಿಸರ್ಗ ಸಂಪತ್ತನ್ನು ರಕ್ಷಿಸಬೇಕಾಗಿರುವ ಜವಾಬ್ದಾರಿಯನ್ನು ಸರ್ಕಾರ ಮರೆಯುವಂತಿಲ್ಲ.

andolanait

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

2 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

2 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

3 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago