ಅಂಕಣಗಳು

ಗಾಂಧಿ ಅಭಿಯಾನ ಅರಿವಿನ ಯಾನ | ಹೊರದೇಶದ ಭಾಷೆಗಳನ್ನು ಕಲಿತೆ

ನೃತ್ಯ ಮುಂತಾದವುಗಳಲ್ಲಿ ನಾನು ನಡೆಸಿದ ಪ್ರಯೋಗಗಳಿಂದ ನಾನು ಉಚ್ಚೃಂಖಲ ಪ್ರವೃತ್ತಿಯುಳ್ಳವನಾಗಿದ್ದನೆಂದು ಯಾರೂ ತಿಳಿಯಬಾರದು. ಅದರಲ್ಲಿಯೂ ವಿವೇಕದ ಅಂಶ ಇದ್ದಿತೆಂಬುದು ವಾಚಕರಿಗೆ ಗೊತ್ತಾಗುತ್ತದೆ. ಆ ಮೋಹದ ಕಾಲದಲ್ಲಿಯೂ ನಾನು, ಕೆಲವಂಶ ವಿಮೋಚನಾಪರನಾಗಿಯೇ ಇದ್ದೆ. ಕಾಸು ಕಾಸಿಗೂ ಲೆಕ್ಕವನ್ನು ಇಡುತ್ತಿದ್ದೆ. ವೆಚ್ಚದ ಅಂದಾಜನ್ನೂ ಮಾಡುತ್ತಿದ್ದೆ. ನಾನು ತಿಂಗಳಿಗೆ ಹದಿನಾಲ್ಕು ಪೌಂಡುಗಳಿಗಿಂತ ಹೆಚ್ಚು ಖರ್ಚು ಮಾಡಕೂಡದೆಂದು ನಿಶ್ಚಯಿಸಿದೆ. ಬಸ್ ಪ್ರಯಾಣ ಮತ್ತು ಅಂಚೆಯ ವೆಚ್ಚ, ವೃತ್ತಪತ್ರಿಕೆ ಕೊಂಡ ಖರ್ಚು ಎಲ್ಲವನ್ನೂ ಅಂದಂದೇ ಬರೆದು ಮಲಗುವುದಕ್ಕೆ ಮುಂಚಿತವಾಗಿ ಜಮಾ ಖರ್ಚನ್ನು ನೋಡುತ್ತಿದ್ದೆ. ಆ ಅಭ್ಯಾಸ ಇಂದಿನವರೆಗೆ ನಡೆದು ಬಂದಿದೆ. ಈ ಅಭ್ಯಾಸದಿಂದ ನನ್ನ ಅನೇಕ ಸಾರ್ವಜನಿಕ ಕಾರ್ಯಗಳಲ್ಲಿ ಲಕ್ಷಾಂತರ ರೂಪಾಯಿಗಳು ಖರ್ಚು ಆದರೂ, ಮಿತವ್ಯಯವನ್ನು ಅನುಸರಿಸಿದ್ದೇನೆ. ಪ್ರತಿಯೊಂದು ಸಾರ್ವಜನಿಕ ಕಾರ್ಯದಲ್ಲಿಯೂ ಸಾಲ ಮಾಡುವ ಬದಲು ತಪ್ಪದೆ ಹಣವನ್ನು ಉಳಿಸಿದ್ದೇನೆ. ಪ್ರತಿಯೊಬ್ಬ ಯುವಕನೂ ನನ್ನ ಅನುಭವದಿಂದ ಲಾಭ ಹೊಂದಿ ತನ್ನ ಜಮಾ ಮತ್ತು ಖರ್ಚಿನ ಲೆಕ್ಕವನ್ನು ಸರಿಯಾಗಿಡಲಿ. ಅವನಿಗೂ ಕೊನೆಯಲ್ಲಿ ನನಗಾದಂತೆ ಲಾಭವಾಗುವುದು.

ಒಂದು ಕುಟುಂಬದ ಜತೆ ವಾಸಿಸುವುದಕ್ಕೆ ಬದಲಾಗಿ ನನಗಾಗಿಯೇ ಬೇರೆ ಕೊಠಡಿಯನ್ನು ಗೊತ್ತುಮಾಡಿಕೊಳ್ಳಬೇಕೆಂದು ನಿಶ್ಚಯಿಸಿದೆ. ನನ್ನ ಕೆಲಸಕ್ಕೆ ಅನುಸಾರವಾಗಿಯೂ ಮತ್ತು ಅನುಭವವನ್ನು ಸಂಪಾದಿಸುವುದಕ್ಕಾಗಿಯೂ ಕೊಠಡಿಗಳನ್ನು ಬದಲಾಯಿಸುವುದನ್ನೂ ನಿಶ್ಚಯಿಸಿದೆ. ನನ್ನ ಕೆಲಸದ ಸ್ಥಳಕ್ಕೆ ಅರ್ಧಗಂಟೆಯೊಳಗೆ ನಡೆದುಕೊಂಡು ಹೋಗುವಷ್ಟು ದೂರದಲ್ಲಿ ಕೊಠಡಿಗಳನ್ನು ಗೊತ್ತುಮಾಡಿಕೊಳ್ಳುತ್ತಿದ್ದ. ಇದರಿಂದ ಗಾಡಿ ಬಾಡಿಗೆ ಉಳಿತಾಯವಾಯಿತು. ಅದಕ್ಕೆ ಮುಂಚಿನ ಕಾಲದಲ್ಲಿ, ನಾನು ಎಲ್ಲಿಗೆ ಹೋಗಬೇಕಾದರೂ ಗಾಡಿಯನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದ. ಇದರಿಂದ ಸಂಚಾರಕ್ಕಾಗಿ ಬೇರೆ ವೇಳೆಯನ್ನು ಗೊತ್ತುಮಾಡಿಕೊಳ್ಳಬೇಕಾಗಿತ್ತು. ಹೊಸ ಏರ್ಪಾಡಿನಲ್ಲಿ ಮಿತವ್ಯಯ ಮತ್ತು ಸಂಚಾರ ಎರಡೂ ಸೇರಿತ್ತು. ದಿವಸಕ್ಕೆ ಎಂಟು ಹತ್ತು ಮೈಲಿ ಸಂಚಾರ, ಗಾಡಿ ಬಾಡಿಗೆ ಉಳಿತಾಯ, ಈ ಅಭ್ಯಾಸ ನಾನು ವಿಲಾಯತಿಯಲ್ಲಿರುವವರೆಗೆ ನನ್ನನ್ನು ರೋಗರಹಿತನನ್ನಾಗಿಯೂ ದೃಢಕಾಯನನ್ನಾಗಿಯೂ ಇಟ್ಟಿತ್ತು. ನಾನು ಒಂದು ಸಂಸಾರದವರೊಂದಿಗೆ ಇರುವುದನ್ನು ಬಿಟ್ಟು ಎರಡು ಕೊಠಡಿಗಳನ್ನು ಬಾಡಿಗೆಗೆ ತೆಗೆದುಕೊಂಡೆ. ಮಲಗುವುದಕ್ಕೆ ಒಂದು, ಕುಳಿತುಕೊಳ್ಳಲು ಒಂದು ಬೈಠಕ್ಖಾನೆ. ಇದು ನನ್ನ ಪರಿವರ್ತನೆಯ ಎರಡನೆಯ ಯುಗವೆಂದು ಹೇಳಬಹುದು. ಮೂರನೆಯ ಯುಗ ಇನ್ನೂ ಮುಂದೆ ಬರುವುದಾಗಿತ್ತು.

ಹೀಗೆ ಅರ್ಧ ಖರ್ಚು ಉಳಿಯಿತು. ಆದರೆ ಕಾಲವನ್ನು ಕಳೆಯುವುದು ಹೇಗೆ? ಬ್ಯಾರಿಸ್ಟರ್ ಪರೀಕ್ಷೆಗೆ ಹೆಚ್ಚು ವ್ಯಾಸಂಗ ಅವಶ್ಯವಿಲ್ಲವೆಂದು ನನಗೆ ತಿಳಿದಿದ್ದಿತು. ಆದುದರಿಂದ ನನಗೆ ಆ ಯೋಚನೆ ಇರಲಿಲ್ಲ. ನನ್ನ ಅರ್ಧಮರ್ಧ ಇಂಗ್ಲಿಷಿನದೇ ನನಗೆ ಯೋಚನೆಯಾಗಿತ್ತು. ಲೇಲಿ ಸಾಹೇಬರು ಹೇಳಿದ್ದ ‘ಬಿ. ಎ. ಮುಗಿಸಿ ನನ್ನಲ್ಲಿಗೆ ಬಾ’ ಎಂಬ ಮಾತು ನನ್ನ ಕಿವಿಯಲ್ಲಿ ಆಡುತ್ತಿತ್ತು. ಬ್ಯಾರಿಸ್ಟರ್ ಆದರೆ ಸಾಲದು. ಇನ್ನಾವುದಾದರೂ ವಿಷಯ ಅಧ್ಯಯನ ಮಾಡಿ ಪದವಿ (ಡಿಗ್ರಿ) ಸಂಪಾದಿಸಬೇಕೆನಿಸಿತು. ಆಕ್ಸ್‌ಫರ್ಡ್, ಕೇಂಬ್ರಿಡ್ಜ್ ಬಗ್ಗೆ ವಿಚಾರಿಸಿದೆ. ಮಿತ್ರರನ್ನು ಕೇಳಿದೆ. ಅಲ್ಲಿ ಹೋದರೆ ಖರ್ಚು ಹೆಚ್ಚಾಗಿ ಬೀಳುತ್ತೆ, ಕಾಲವೂ ಹೆಚ್ಚು ಬೇಕಾಗುತ್ತೆ ಎಂದು ತಿಳಿಯಿತು. ನಾನು ಮೂರು ವರ್ಷಗಳಿಗಿಂತ ಹೆಚ್ಚಾಗಿ ಇಂಗ್ಲೆಂಡಿನಲ್ಲಿರಲು ಸಾಧ್ಯವಿರಲಿಲ್ಲ. ಒಬ್ಬ ಮಿತ್ರರು ‘ನಿನಗೆ ನಿಜವಾಗಿ ಒಂದು ಕಠಿಣವಾದ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕೆಂದು ಇಷ್ಟವಿದ್ದರೆ, ಮೆಟ್ರಿಕ್ಯುಲೇಶನ್ ಪರೀಕ್ಷೆಗೆ ಕುಳಿತುಕೊ, ಅದಕ್ಕೆ ಹೆಚ್ಚು ಕಷ್ಟಪಟ್ಟು ವ್ಯಾಸಂಗ ಮಾಡಬೇಕು. ಜತೆಗೆ ನಿನ್ನ ಸಾಮಾನ್ಯ ಜ್ಞಾನವೂ ಹೆಚ್ಚುತ್ತದೆ, ಖರ್ಚು ಕಡಿಮೆ’ ಎಂದು ಹೇಳಿದರು. ಆ ಮಾತು ನನಗೆ ಒಪ್ಪಿಗೆಯಾಯಿತು. ಆದರೆ ಪರೀಕ್ಷಾ ವಿಷಯಗಳನ್ನು ನೋಡಿ ನಾನು ಹೆದರಿದೆ. ಲ್ಯಾಟಿನ್ ಮತ್ತು ಇನ್ನೂ ಒಂದೆರಡು ಆಧುನಿಕ ಭಾಷೆಗಳನ್ನು ತೆಗೆದುಕೊಳ್ಳಲೇ ಬೇಕಾಗಿತ್ತು. ಲ್ಯಾಟಿನ್ ಕಲಿಯುವುದು ಹೇಗೆ? ವಕೀಲರಿಗೆ ಲ್ಯಾಟಿನ್ ಭಾಷೆಯಿಂದ ತುಂಬಾ ಲಾಭವಿದೆ. ‘ಲ್ಯಾಟಿನ್ ತಿಳಿದವರಿಗೆ ಕಾನೂನನ್ನು

ಅರ್ಥಮಾಡಿಕೊಳ್ಳುವುದು ಸುಲಭ. ರೋಮನ್ ಕಾನೂನಿಗೆ ಸಂಬಂಽಸಿದ ಪ್ರಶ್ನೆ ಪತ್ರಿಕೆ ಲ್ಯಾಟಿನ್ ಭಾಷೆಯಲ್ಲಿರುತ್ತೆ ಮತ್ತು ಲ್ಯಾಟಿನ್ ತಿಳಿದಿದ್ದರೆ ಇಂಗ್ಲಿಷ್ ಭಾಷೆಯ ಮೇಲೆ ಒಳ್ಳೆಯ ಪ್ರಭುತ್ವವುಂಟಾಗುತ್ತದೆ’ ಎಂದು ಹೇಳಿದರು. ಆ ಮಾತು ನನ್ನ ಮನಸ್ಸಿಗೆ ಹಿಡಿಸಿತು. ಎಷ್ಟೇ ಕಷ್ಟವಾದರೂ ಲ್ಯಾಟಿನ್ ಕಲಿಯಬೇಕೆಂದು ನಿಶ್ಚಯಿಸಿದೆ. ಫ್ರೆಂಚನ್ನು ಕಲಿಯಲು ಆಗಲೇ ಪ್ರಾರಂಭಿಸಿದ್ದುದರಿಂದ ಅದೇ ಆಧುನಿಕ ಭಾಷೆಯಾಯಿತೆಂದು ನಿಶ್ಚಯಿಸಿದೆ. ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದ ಒಂದು ಮೆಟ್ರಿಕ್ಯುಲೇಶನ್ ತರಗತಿಯನ್ನು ಸೇರಿದೆ. ಆ ಪರೀಕ್ಷೆ, ಆರು ತಿಂಗಳಿಗೊಮ್ಮೆ ನಡೆಯುತ್ತಿತ್ತು. ನನ್ನ ಮುಂದೆ ಇದ್ದುದು ಐದೇ ತಿಂಗಳು.

ಆ ಕೆಲಸ ನನ್ನ ಶಕ್ತಿಗೆ ಮೀರಿದುದಾಗಿತ್ತೆನ್ನಬಹುದು. ಪರಿಣಾಮವಾಗಿ ಇಂಗ್ಲಿಷ್ ನಾಗರಿಕನಾಗಬೇಕೆಂದು ಹೊರಟಿದ್ದ ನಾನು, ಅತ್ಯಂತ ಉದ್ಯಮಶೀಲನಾದ ವಿದ್ಯಾರ್ಥಿಯಾದೆ. ಒಂದು ಗಳಿಗೆಯೂ ಪೋಲಾಗದಂತೆ ವೇಳಾಪಟ್ಟಿಯನ್ನು ನಿರ್ಮಿಸಿಕೊಂಡೆ. ಆದರೆ ಉಳಿದಿದ್ದ ಕಾಲದಲ್ಲಿ ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗಳನ್ನೂ ಉಳಿದ ವಿಷಯಗಳನ್ನೂ ಕಲಿಯುವಷ್ಟು ನನ್ನ ಬುದ್ಧಿಯಾಗಲೀ ಸ್ಮರಣಶಕ್ತಿಯಾಗಲೀ ಚುರುಕಾಗಿರಲಿಲ್ಲ. ಪರೀಕ್ಷೆಗೆ ಕುಳಿತೆ. ಲ್ಯಾಟಿನ್‌ನಲ್ಲಿ ತೇರ್ಗಡೆಯಾಗಲಿಲ್ಲ. ಇದರಿಂದ ನನಗೆ ದುಃ ಖವಾದರೂ ನಾನು ಧೈರ್ಯಗುಂದಲಿಲ್ಲ. ಲ್ಯಾಟಿನ್‌ನಲ್ಲಿ ರುಚಿ ಹುಟ್ಟಿತು. ಮತ್ತೊಂದು ಸಲ ಪ್ರಯತ್ನ ಮಾಡಿದರೆ ಫ್ರೆಂಚ್ ಭಾಷೆಯ ಜ್ಞಾನ ಉತ್ತಮವಾಗುವುದೆಂದು ಭಾವಿಸಿದೆ. ವಿಜ್ಞಾನದಲ್ಲಿ ಒಂದು ಹೊಸ ವಿಷಯ ತೆಗೆದುಕೊಳ್ಳುವ ನಿಶ್ಚಯ ಮಾಡಿದೆ. ರಸಾಯನ ಶಾಸ್ತ್ರ ಅಭಿರುಚಿ ಹುಟ್ಟಿಸುವ ಶಾಸ್ತ್ರ. ಆದರೆ ಪ್ರಯೋಗಗಳ ಅಭಾವದಿಂದ ನನಗೆ ಹಿಡಿಸಲಿಲ್ಲ. ಭಾರತದಲ್ಲಿ ರಸಾಯನ ಶಾಸ್ತ್ರ, ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯ ವಿಷಯ. ಆದುದರಿಂದ ನಾನು ಅದನ್ನು ಮೊದಲ ಸಲ ಲಂಡನ್ ಮೆಟ್ರಿಕ್ಯುಲೇಶನ್‌ಗೆ ಆರಿಸಿಕೊಂಡಿದ್ದೆ. ಈ ಸಲ ಬೆಳಕು ಮತ್ತು ಶಾಖ ಎಂಬ ವಿಷಯಗಳನ್ನು ತೆಗೆದುಕೊಂಡೆ. ಅದು ಸುಲಭ ಎಂದು ಹೇಳಿದರು.

ನನಗೂ ಹಾಗೆಯೇ ತೋರಿತು. ಇನ್ನೊಮ್ಮೆ ಪರೀಕ್ಷೆಗೆ ಕೂಡುವ ಸಿದ್ಧತೆಯ ಜತೆಯಲ್ಲಿಯೇ ಜೀವನವನ್ನು ಇನ್ನೂ ಸರಳವಾಗಿ ಮಾಡಲು ಪ್ರಯತ್ನಿಸಿದೆ. ನಮ್ಮ ಮನೆಯವರ ಬಡತನಕ್ಕೆ ಅನುಸಾರವಾದ ರೀತಿಯಲ್ಲಿ ನಾನು ಜೀವಿಸುತ್ತಿಲ್ಲ ಎಂದು ನನಗೆ ತೋರಿತು. ನಮ್ಮಣ್ಣ ಕಷ್ಟಪಟ್ಟು ನಾನು ಕೇಳಿದಾಗಲೆಲ್ಲಾ ಉದಾರವಾಗಿ ಹಣ ಕಳುಹಿಸುತ್ತಿದ್ದುದನ್ನು ಚಿಂತಿಸಿ, ನನಗೆ ದುಃ ಖವಾಗುತ್ತಿತ್ತು. ತಿಂಗಳಿಗೆ ಎಂಟರಿಂದ ಹದಿನೈದು ಪೌಂಡುಗಳವರೆಗೆ ಖರ್ಚು ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರಕುತ್ತಿತ್ತು. ನನಗಿಂತ ಹೆಚ್ಚು ಸರಳವಾಗಿ ಜೀವಿಸುತ್ತಿದ್ದವರನ್ನೂ ನಾನು ನೋಡಿದೆ. ಒಬ್ಬ ವಿದ್ಯಾರ್ಥಿ, ಲಂಡನ್ನಿನ ಬಡವರ ಬೀದಿಯಲ್ಲಿ ವಾರಕ್ಕೆ ಎರಡು ಮಿಲಿಂಗ್ ಬಾಡಿಗೆ ಕೊಠಡಿ ತೆಗೆದುಕೊಂಡಿದ್ದ. ಲಾಕ್‌ಹಾರ್ಟ್ ಎಂಬಾತನ ಅಗ್ಗದ ಅಂಗಡಿಯಲ್ಲಿ ಒಂದು ಹೊತ್ತಿನ ಎರಡು ಪೆನ್ನಿಯ ರೊಟ್ಟಿ, ಕೋಕೋ ತೆಗೆದುಕೊಂಡು ಜೀವನ ಸಾಗಿಸುತ್ತಿದ್ದ. ಹಾಗೆ ಇರಬೇಕೆಂದು ನಾನೇನೂ ಯೋಚಿಸಲಿಲ್ಲ. ಆದರೆ ‘ನನಗೆ ಎರಡು ಕೊಠಡಿಗಳು ಬೇಕಿಲ್ಲ. ನನ್ನ ಊಟದಲ್ಲಿ ಅರ್ಧ ಅಡಿಗೆ ನಾನೇ ಮಾಡಿಕೊಳ್ಳಬಹುದು’ ಎಂದು ಯೋಚಿಸಿದೆ. ಅದರಿಂದ ತಿಂಗಳಿಗೆ ನಾಲ್ಕು, ಐದು ಪೌಂಡು ಉಳಿತಾಯವಾಗುತ್ತಿತ್ತು. ಸರಳ ಜೀವನಕ್ಕೆ ಸಂಬಂಽಸಿದ ಕೆಲವು ಪುಸ್ತಕಗಳನ್ನೂ ಓದಿದೆ. ಎರಡು ಕೊಠಡಿಯನ್ನು ಬಿಟ್ಟು, ವಾರಕ್ಕೆ ಎಂಟು ಷಿಲಿಂಗ್ ಬಾಡಿಗೆಗೆ ಒಂದು ಕೊಠಡಿಯನ್ನು ಗೊತ್ತು ಮಾಡಿಕೊಂಡೆ. ಒಂದು ಸ್ಟವ್ ಕೊಂಡುಕೊಂಡು ಬೆಳಗಿನ ಅಡುಗೆ ನಾನೇ ಮಾಡಿಕೊಳ್ಳಲು ಪ್ರಾರಂಭಿಸಿದೆ. ಅಡುಗೆ ಇಪ್ಪತ್ತು ನಿಮಿಷಕ್ಕಿಂತ ಹೆಚ್ಚಿಗೆ ಹಿಡಿಯುತ್ತಿರಲಿಲ್ಲ. ಗೋಽ ಹಿಟ್ಟಿನ ಅಂಬಲಿ ಮತ್ತು ಕೋಕೋ ಇದಕ್ಕೆ ಇನ್ನೆಷ್ಟು ಹೊತ್ತು? ಮಧ್ಯಾಹ್ನದ ಊಟವನ್ನು ಹೋಟೆಲಿನಲ್ಲಿ ಮಾಡುತ್ತಿದ್ದೆ. ಈ ರೀತಿ ಒಂದು ದಿನದ ಊಟ ಒಂದೂಕಾಲು ಷಿಲಿಂಗ್‌ನಲ್ಲಿ ಮುಗಿಯುತ್ತಿತ್ತು. ಆ ಸಮಯದಲ್ಲಿ ನಾನು ವಿಶೇಷವಾಗಿ ವ್ಯಾಸಂಗ ಮಾಡಿದೆ. ಜೀವನ ಸರಳವಾದುದರಿಂದ, ನನಗೆ ಸಮಯ ಬೇಕಾದಷ್ಟು ದೊರೆಯಿತು. ಎರಡನೇ ಸಲ ಪರೀಕ್ಷೆಯಲ್ಲಿ ತೇರ್ಗಡೆಯಾದೆ.

 

ಆಂದೋಲನ ಡೆಸ್ಕ್

Recent Posts

ಯುದ್ಧಕ್ಕೆ ದಿನಾಂಕ ಫಿಕ್ಸ್: ‘ವಿಜಯದಶಮಿ’ಗೆ ಸಮರ ಸಾರಿದ ಕೇಂದ್ರ ಸಚಿವ ಎಚ್‌ಡಿಕೆ

ಹಾಸನ: ಇಡೀ ದೇಶವೇ ಅಲ್ಲೋಲ, ಕಲ್ಲೋಲ ಆಗುವ ಸುದ್ದಿ ಕೊಡುತ್ತೇನೆ ಎಂಬ ಮಾತನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುನರುಚ್ಛರಿಸಿದ್ದಾರೆ. ಈ…

14 hours ago

ಉಗ್ರ ಮಸೂದ್‌ ಅಜರ್‌ ಸುಳಿವು ಕೊಟ್ಟವರಿಗೆ 24 ಲಕ್ಷ ರೂ ಬಹುಮಾನ ಘೋಷಿಸಿದ ಪಾಕ್‌

ಇಸ್ಲಾಮಾಬಾದ್:‌ ಉಗ್ರ ಮಸೂದ್‌ ಅಜರ್‌ ಸುಳಿವು ಕೊಟ್ಟವರಿಗೆ 24 ಲಕ್ಷ ರೂ ಬಹುಮಾನ ನೀಡುವುದಾಗಿ ಪಾಕಿಸ್ತಾನ ಘೋಷಣೆ ಮಾಡಿದೆ. ದೇಶದ…

14 hours ago

ಸೆಪ್ಟೆಂಬರ್ ತಿಂಗಳಲ್ಲೇ ಕರ್ನಾಟಕದಲ್ಲಿ ಬಿರು ಬೇಸಿಗೆಯ ವಾತಾವರಣ

ಬೆಂಗಳೂರು: ಮುಂಗಾರು ಮಳೆಯ ಅಬ್ಬರ ಕಾಣಬೇಕಿದ್ದ ಸೆಪ್ಟೆಂಬರ್ ತಿಂಗಳಲ್ಲೇ ಕರ್ನಾಟಕದಲ್ಲಿ ಬಿರು ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ…

15 hours ago

ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ: ಸಚಿವ ಎನ್. ಚಲುವರಾಯಸ್ವಾಮಿ

ಮಂಡ್ಯ: ಮೈಸೂರು ದಸರಾಗಿಂತಲೂ ಪುರಾತನವಾದ ಶ್ರೀರಂಗಪಟ್ಟಣ ದಸರಾವನ್ನು ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ಅದ್ದೂರಿತನದ ಬದಲು ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ…

15 hours ago

ಹನೂರು: ಬಿಸಿಯೂಟಕ್ಕೂ ನೀರಿಲ್ಲ – ಖಾಲಿ ಬಿಂದಿಗೆ ಹಿಡಿದು ವಿದ್ಯಾರ್ಥಿಗಳ ಪ್ರತಿಭಟನೆ

ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದನಪಾಳ್ಯ ಗ್ರಾಮದ ಸೆಂಟ್ ಆಂಥೋನಿ ಶಾಲೆಯಲ್ಲಿ ಕಳೆದ ಆರು ತಿಂಗಳಿನಿಂದ ಕುಡಿಯುವ…

16 hours ago

ಮದ್ದೂರಿನಲ್ಲಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವು

ಮಂಡ್ಯ: ಬೈಕ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ…

19 hours ago