ಅಂಕಣಗಳು

ಚಿರತೆಗಳು ಕಾಣಿಸಿಕೊಳ್ಳುವಿಕೆ: ಮೈಸೂರಿನ ಅಭಿವೃದ್ಧಿಯ ಮತ್ತೊಂದು ಮುಖ

ಮೈಸೂರು ನಗರವು ತನ್ನ ಸಾಂಸ್ಕೃತಿಕ ಪರಂಪರೆ, ಹಸಿರು ಪರಿಸರ ಮತ್ತು ಸುಸ್ಥಿರ ಜೀವನಶೈಲಿಗಾಗಿ ಬಹಳ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಎದುರಿಸುತ್ತಿರುವ ಒಂದು ಹೊಸ ಸಮಸ್ಯೆ ಎಂದರೆ ನಗರದಲ್ಲಿ ಚಿರತೆಗಳು ಹಾಗೂ ಇತರೆ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವಿಕೆ. ಈ ಘಟನೆಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಕಾಣಿಸಿಕೊಂಡು ಜನರಲ್ಲಿ ಆತಂಕದ ಭಾವನೆ ಮೂಡಿಸುತ್ತಿವೆ. ಆದರೂ, ಈ ಸಮಸ್ಯೆಯ ಮೂಲ ಮನುಷ್ಯರಲ್ಲಿರುವುದನ್ನು ನಾವು ಬಹುತೇಕ ಮರೆತೇ ಬಿಡುತ್ತೇವೆ. ಕಳೆದ ಹತ್ತು ವರ್ಷಗಳಲ್ಲಿ ಮೈಸೂರಿನ ಹೊರವಲಯದಲ್ಲಿ ನಡೆದ ಭೂ ಉಪಯೋಗ ಬದಲಾವಣೆ, ರಿಯಲ್ ಎಸ್ಟೇಟ್ ವಿಸ್ತರಣೆ ಮತ್ತು ‘ಅಭಿವೃದ್ಧಿ’ ಎಂಬ ಹೆಸರಿನಲ್ಲಿ ನಡೆದ ಅತಿರೇಕದ ನಗರೀಕರಣವೇ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣವಾಗಿದೆ.

ಹಿಂದೆ ಮೈಸೂರಿನ ರಿಂಗ್ ರಸ್ತೆ ಸುತ್ತಲಿನ ಪ್ರದೇಶಗಳು ಪಾಚ್ ಕಾಡುಗಳು, ಗುಡ್ಡಗಾಡುಗಳು, ಜಾಗಗಳು ಮತ್ತು ತೆರೆದ ಜಮೀನುಗಳಿಂದ ತುಂಬಿದ್ದವು. ಇವು ಕೇವಲ ಸಸ್ಯಾವರಣೆಗಳು ಅಲ್ಲ, ಚಿರತೆ, ನರಿ, ಮುಂಗುಸಿ, ಮೊಲ, ಕಾಡು ಹಂದಿ ಮುಂತಾದ ಹಲವಾರು ಪ್ರಾಣಿಗಳ ನೈಸರ್ಗಿಕ ವಾಸಸ್ಥಳಗಳಾಗಿದ್ದವು. ಮನುಷ್ಯರ ಸಂಚಾರ ಕಡಿಮೆ ಇರುವ ಪ್ರದೇಶವಾಗಿದ್ದುದರಿಂದ ಪ್ರಾಣಿಗಳ ಸಂಚಲನ, ಬೇಟೆ, ಪ್ರಕೃತಿ ದತ್ತವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಈ ಪ್ರದೇಶಗಳ ಬಹುಪಾಲು ಮನೆಗಳು, ಲೇಔಟ್‌ಗಳು, ಅಪಾರ್ಟ್‌ಮೆಂಟ್ ಗಳು ಮತ್ತು ವಾಣಿಜ್ಯ ಕಟ್ಟಡಗಳಿಂದ ತುಂಬಿಕೊಂಡಿವೆ. ಹಸಿರು ಪ್ರದೇಶಗಳ ಬದಲಿಗೆ ಕಾಂಕ್ರೀಟ್ ಕಟ್ಟಡಗಳು ಕಾಣಿಸಿಕೊಂಡಿದ್ದು, ಮಣ್ಣಿನ ಪರಿಸರ ಸಂಪೂರ್ಣವಾಗಿ ಬದಲಾಗಿದೆ.

ಇದನ್ನು ಓದಿ : ಮಾನವ ಹಕ್ಕುಗಳನ್ನು ಪೋಷಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆ

ಪ್ರಾಣಿಗಳು ನಗರಕ್ಕೆ ಬರುತ್ತಿವೆ ಎನ್ನುವುದು ಮಾಧ್ಯಮಗಳಲ್ಲಿ ಹೆಚ್ಚಾಗಿ ಕೇಳುವ ಮಾತು. ಆದರೆ ಪ್ರಶ್ನೆ ಏನೆಂದರೆ ಚಿರತೆ ನಗರಕ್ಕೆ ಬರುತ್ತಿದೆಯೇ? ಅಥವಾ ನಗರವೇ ಚಿರತೆಯ ಮನೆಗೆ ಬಂದು ಕೂತಿದೆಯೇ? ಮನುಷ್ಯರು ತಮ್ಮ ಅಗತ್ಯಗಳಿಗಾಗಿ, ಲಾಭಕ್ಕಾಗಿ, ಅಭಿವೃದ್ಧಿ ಎನ್ನುವ ಹೆಸರಿನಲ್ಲಿ ಕಾಡಿನ ಜಾಗಗಳನ್ನು ಕಬಳಿಸಿದ್ದಾರೆ. ಈ ನೈಸರ್ಗಿಕ ವಾಸಸ್ಥಳ ನಾಶವಾದ ಮೇಲೆ, ಪ್ರಾಣಿಗಳಿಗೆ ಬದುಕಲು ಜಾಗವೇ ಉಳಿದಿಲ್ಲ. ಚಿರತೆ ಸಾಮಾನ್ಯವಾಗಿ ಮನುಷ್ಯರನ್ನು ದೂರವಿರಿಸುವ ಪ್ರಾಣಿ. ಅದು ಮನುಷ್ಯರ ಸಂಚಲನ ಹೆಚ್ಚಿರುವ ಪ್ರದೇಶಕ್ಕೆ ಬರುವುದಿಲ್ಲ. ಆದರೆ ನಗರದ ಹೊರವಲಯದಲ್ಲಿ ಕಟ್ಟಡಗಳ ಸಂಖ್ಯೆ ಹೆಚ್ಚಾದಂತೆ, ಅದು ಸಾಗುತ್ತಿದ್ದ ಹಾದಿಗಳನ್ನೇ ಮನುಷ್ಯರು ಮುಚ್ಚಿರುವುದರಿಂದ, ಅದರ ಚಲನೆ ವ್ಯತ್ಯಾಸಗೊಂಡಿದೆ.

ಚಿರತೆ ನಗರದಲ್ಲಿ ಕಾಣಿಸಿಕೊಳ್ಳಲು ಹಲವು ಕಾರಣಗಳಿವೆ. ಮೊದಲನೆಯದಾಗಿ, ಆಹಾರ ಸರಪಳಿಯ ವ್ಯತ್ಯಾಸ. ಚಿರತೆಯ ಮುಖ್ಯ ಆಹಾರವಾಗಿರುವ ಮೊಲ, ಮತ್ತು ಬೀದಿ ನಾಯಿಗಳು ನಗರದ ಹೊರವಲಯದಲ್ಲಿ ಹೆಚ್ಚಿರುವ ಕಸದ ಬುಟ್ಟಿಗಳ ಕಡೆ ಆಕರ್ಷಿತರಾಗಿ ಬರುತ್ತಿವೆ. ಪ್ರಾಣಿಗಳು ತಮ್ಮ ಬೇಟೆಯನ್ನು ಹಿಂಬಾಲಿಸಿದಾಗ ಅವು ಸಹ ನಗರಕ್ಕೆ ಬರುತ್ತವೆ. ಎರಡನೆಯದಾಗಿ, ರಾತ್ರಿ ಸಮಯದಲ್ಲಿ ಮನುಷ್ಯರ ಚಟುವಟಿಕೆಗಳು ಹೆಚ್ಚಾಗಿರುವುದು. ಒಮ್ಮೆ ಮೌನವಾಗಿದ್ದ ಪ್ರದೇಶಗಳಲ್ಲಿ ಬೈಕ್ ಸಂಚಾರ, ಲೈಟುಗಳು, ಗದ್ದಲ.

ಮೂರನೆಯದಾಗಿ, ರಿಯಲ್ ಎಸ್ಟೇಟ್. ಜಾಗದ ಬೆಲೆ ಏರಿಕೆ, ‘ಮನೆ-ಮನೆ-ಮನೆ’ ಎಂಬ ರೀತಿಯ ಅಭಿವೃದ್ಧಿಯಿಂದ ಕಾಡಿಗೆ ಮನುಷ್ಯರು ನೇರವಾಗಿ ಧಕ್ಕೆ ತಂದಿದ್ದಾರೆ. ಅಭಿವೃದ್ಧಿ ಎನ್ನುವುದು ಕೇವಲ ಮನುಷ್ಯರ ಸುಲಭಿಕೆಗಾಗಿ ಮಾಡಿದ ಕ್ರಮವಾಗಿದ್ದು, ಪರಿಸರದ ದೀರ್ಘಕಾಲಿಕ ಪರಿಣಾಮಗಳನ್ನು ಪರಿಗಣಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಚಿರತೆಗಳು ಮನೆಗಳ ಹಿಂಭಾಗ, ತೋಟ, ಬೀದಿ, ಶಾಲೆಗಳ ಬಳಿ ಕಾಣಿಸಿಕೊಂಡರೆ ಅದರಲ್ಲಿ ಆಶ್ಚರ್ಯವಿಲ್ಲ. ಆದರೆ ಜನರು ಇದನ್ನು ‘ಅಪಾಯ’ ಎಂದು ಮಾತ್ರ ನೋಡುತ್ತಾರೆ. ಚಿರತೆ ಮನುಷ್ಯರ ಮೇಲೆ ದಾಳಿ ಮಾಡುವ ಪ್ರಾಣಿ ಅಲ್ಲ.

ಇದನ್ನು ಓದಿ: ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಅದು ಮನುಷ್ಯರ ಸನ್ನಿಧಿ ಕಂಡರೆ ದೂರ ಹೋಗಲು ಪ್ರಯತ್ನಿಸುತ್ತದೆ. ಆದರೆ ಜನರು ಗುಂಪು ಸೇರಿ ಅದನ್ನು ಬೆನ್ನಟ್ಟುವಾಗ, ಕಲ್ಲೆಸೆಯುವಾಗ, ವಿಡಿಯೋ ತೆಗೆದುಕೊಳ್ಳಲು ಹತ್ತಿರ ಹೋಗುವಾಗ, ಅದಕ್ಕೆ ಹಿಂಸೆ ಆಗುತ್ತದೆ, ಅದು ತಮಗೆಭಯ ಎಂದು ಭಾವಿಸಿ ಪ್ರತಿಕ್ರಿಯಿಸಿದಾಗ ಸಂಘರ್ಷಕ್ಕೆ ಕಾರಣವಾಗುತ್ತದೆ.ಈ ಸಮಸ್ಯೆಗೆ ಪರಿಹಾರ ಹುಡುಕುವುದಾದರೆ, ಮೊದಲು ಕಾಡಿನ ಉಳಿವಿಗೆಕಾನೂನು ರಕ್ಷಣೆ ನೀಡಬೇಕು. ರಿಂಗ್ ರಸ್ತೆ ಸುತ್ತಲೂ ಉಳಿದಿರುವ ಪಾಚ್ ಕಾಡುಗಳನ್ನು ‘ಅರ್ಬನ್ ಗ್ರೀನ್ ಝೋನ್’ ಆಗಿ ಘೋಷಿಸುವುದು ಅಗತ್ಯ. ಎರಡನೆಯದಾಗಿ, ಗ್ರೀನ್ ಬೆಲ್ಟ್ ಅನ್ನು ಪುನಃ ಸ್ಥಾಪಿಸುವುದು ಬಹಳ ಮುಖ್ಯ. ಇದು ಪ್ರಾಣಿಗಳ ಸಂಚಲನಕ್ಕೆ ನೈಸರ್ಗಿಕ ಮಾರ್ಗವಾಗಿ ಕೆಲಸ ಮಾಡುತ್ತದೆ. ನಗರ ಹೊರವಲಯದಲ್ಲಿ ಕಸದ ನಿರ್ವಹಣೆಯನ್ನು ಕಟ್ಟುನಿಟ್ಟಾಗಿಸಬೇಕು. ಹಂದಿ ಹಾಗೂ ನಾಯಿಗಳನ್ನು ಆಕರ್ಷಿಸುವಂತಹ ಕಸದ ಗುಡ್ಡೆಗಳು ಚಿರತೆಗೆ ನಗರ ಪ್ರವೇಶದ ನೇರ ಆಹ್ವಾನವಾಗುತ್ತವೆ. ಅಕ್ರಮ ಲೇಔಟ್‌ಗಳನ್ನು ನಿಯಂತ್ರಿಸದಿದ್ದರೆ ಮೈಸೂರಿನ ಪರಿಸರ ಸಮತೋಲನ ಸಂಪೂರ್ಣ ಕುಸಿಯುವುದು ಖಂಡಿತ.

ಜನರಲ್ಲಿ ಜಾಗೃತಿ ಮೂಡಿಸುವುದೂ ತುಂಬಾ ಮುಖ್ಯ. ಚಿರತೆಯನ್ನು ನೋಡಿದರೆ ಜನರು ದೂರವೇ ನಿಲ್ಲಬೇಕು, ಹತ್ತಿರ ಹೋಗಬಾರದು, ಮಕ್ಕಳನ್ನು ಹೊರಗೆ ಬಿಡಬಾರದು, ಪಶುಗಳನ್ನು ಸರಿಯಾಗಿ ಕಾಯ್ದುಕೊಳ್ಳಬೇಕು. ಅರಣ್ಯ ಇಲಾಖೆಯ ಸಿಬ್ಬಂದಿ ತಮ್ಮ ಕೆಲಸವನ್ನು ಸುಗಮವಾಗಿ ಮಾಡಲು ಜನರು ಸಹಕರಿಸಬೇಕು. ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳು, ರಸ್ತೆಗಳು ಮತ್ತು ವಾಣಿಜ್ಯ ಕೇಂದ್ರಗಳು ಅಲ್ಲ. ನಿಜವಾದ ಅಭಿವೃದ್ಧಿ ಎಂದರೆ ಪ್ರಕೃತಿ, ಮನುಷ್ಯ ಮತ್ತುಕಾಡುಜೀವಿಗಳು ಸಮತೋಲನದಿಂದ ಬದುಕುವ ಪರಿಸರ. ಮೈಸೂರಿನ ನೈಜ ಸೌಂದರ್ಯ ಅರಮನೆ, ರಸ್ತೆಗಳು ಹಾಗೂ ಕಟ್ಟಡಗಳ ಜೊತೆ, ಅದರ ಹಸಿರುಪ್ರದೇಶಗಳಲ್ಲಿ, ಜೀವವೈವಿಧ್ಯದಲ್ಲಿ ಮತ್ತು ಪ್ರಕೃತಿ ಸಂರಕ್ಷಣೆಯಲ್ಲಿಯೂ ಇದೆ. ಚಿರತೆಗಳು ನಗರ ಪ್ರವೇಶವು ನಮಗೆ ಪ್ರಕೃತಿಯಿಂದ ಬಂದಿರುವ ಒಂದು ನೇರ ಸಂದೇಶ: ‘ನನ್ನ ವಾಸಸ್ಥಳವನ್ನು ಕಾಪಾಡಿ.’ ಇಂದು ನಾವು ಕಂಡುಕೊಳ್ಳುತ್ತಿರುವ ಸಮಸ್ಯೆ, ನಾಳೆ ಮತ್ತಷ್ಟು ದೊಡ್ಡ ಸಮಸ್ಯೆಯ ರೂಪ ತಾಳಬಹುದು.

ಆದ್ದರಿಂದ ನಗರ ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷಣೆಯನ್ನು ಮರೆಯದೇ ಮುಂದುವರಿಸಬೇಕು. ಮೈಸೂರನ್ನು ಮುಂದಿನ ತಲೆಮಾರಿಗೆ ನೀಡುವಾಗ ಅದು ಕೇವಲ ಕಟ್ಟಡಗಳ ನಗರವಾಗಿರದೇ, ಜೀವವೈವಿಧ್ಯ ಮತ್ತು ಪ್ರಕೃತಿ ಸಮತೋಲನ ಹೊಂದಿರುವ ನಗರವಾಗಿರಬೇಕು.

” ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳು, ರಸ್ತೆಗಳು ಮತ್ತು ವಾಣಿಜ್ಯ ಕೇಂದ್ರಗಳು ಅಲ್ಲ. ನಿಜವಾದ ಅಭಿವೃದ್ಧಿ ಎಂದರೆ ಪ್ರಕೃತಿ, ಮನುಷ್ಯ ಮತ್ತು ಕಾಡುಜೀವಿಗಳು ಸಮತೋಲನದಿಂದ ಬದುಕುವ ಪರಿಸರ”

ಶ್ರೇಯಸ್ ದೇವನೂರು

ಆಂದೋಲನ ಡೆಸ್ಕ್

Recent Posts

ಚಿರತೆ ಸೆರೆ | ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಗುಂಡ್ಲುಪೇಟೆ : ತಾಲ್ಲೂಕಿನ ಬರಗಿ ಗ್ರಾಮದ ಜಮೀನುಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ವಿಚಾರವಾಗಿ ಅರಣ್ಯ ಇಲಾಖೆ ಚಿರತೆ…

3 hours ago

ಮೈಸೂರಲ್ಲಿ ಡ್ರಗ್ಸ್‌ ಉತ್ಪಾದನೆ ಶಂಕೆ : ಓರ್ವನ ಬಂಧನ

ಮೈಸೂರು : ಬುಧವಾರವಷ್ಟೇ ಹೆಬ್ಬಾಳ್‌ನಲ್ಲಿ ಶೆಡ್‌ವೊಂದರ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಪೊಲೀಸರು, ಮಾದಕ ವಸ್ತು ಮಾರಾಟ ಆರೋಪ ಪ್ರಕರಣದಲ್ಲಿ…

3 hours ago

ತೇಗದ ಮರ ಅಕ್ರಮ ಕಟಾವು : ಓರ್ವ ಬಂಧನ

ಹನೂರು : ತಾಲ್ಲೂಕಿನ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಟಾವು…

3 hours ago

ಮೈಸೂರು ವಿ.ವಿ | ಯುಜಿಸಿ ಉದ್ದೇಶಿತ ಹೊಸ ನಿಯಾಮವಳಿ ಜಾರಿಗೆ ಒತ್ತಾಯ

ಮೈಸೂರು : ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ನಲ್ಲಿ ಜಾತಿ, ಧರ್ಮ,ಲಿಂಗ ಆಧಾರಿತ ಶೋಷಣೆಯನ್ನು ತಡೆಗಟ್ಟಲು ಯುಜಿಸಿಯ ಉದ್ದೇಶಿತ ಹೊಸ ನಿಯಮಾವಳಿಗಳ ಜಾರಿಗೆ ಒತ್ತಾಯಿಸಿ…

4 hours ago

ಸರ್ಕಾರಿ ನೌಕರರಿಗೆ ತಿಂಗಳಿಗೊಮ್ಮೆ ಖಾದಿ ಧಿರಿಸು ಕಡ್ಡಾಯ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ…

5 hours ago

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ : ಯುಜಿಸಿ ನಿಯಮಾವಳಿಗೆ ʻಸುಪ್ರೀಂʼ ತಡೆ

ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ವಿಶ್ವವಿದ್ಯಾಲಯ…

5 hours ago