ಅಂಕಣಗಳು

ಪೋಲಿಯೋ ಸೋಲಿಸಿ ಕುಸ್ತಿ  ಪಟುವಾದ ಕಿರಣ್ ಬಾವ್ಡೇಕರ್‌

ಪಂಜು ಗಂಗೊಳ್ಳಿ 

ಈಜುಗಾರ, ಫಿಟ್‌ನೆಸ್ ಟ್ರೈನರ್, ಕೋಚ್ ಆಗಿ ನೂರಾರು ಮಕ್ಕಳಿಗೆ ತರಬೇತಿ

ಬಾಲ್ಯದಲ್ಲಿ ಪೋಲಿಯೋ ತಗುಲಿ ಎರಡೂ ಕಾಲುಗಳನ್ನು ಎಳೆಯುತ್ತ ತಿರುಗುತ್ತಿದ್ದ ಕಿರಣ್ ಬಾವ್ಡೇಕರ್ ಎಂಬ ಗ್ರಾಮೀಣ ಪ್ರದೇಶದ ಬಾಲಕನೊಬ್ಬ ಮುಂದೆ ಒಬ್ಬ ಕುಸ್ತಿ ಪಟು, ಬಾಡಿ ಬಿಲ್ಡರ್, ಈಜುಗಾರ, ಫಿಟ್‌ನೆಸ್ ಟ್ರೈನರ್ ಹಾಗೂ ಕೋಚ್ ಆಗಿ ನೂರಾರು ಮಕ್ಕಳನ್ನು ತರಬೇತುಗೊಳಿಸಿ, ಸೈನ್ಯ ಹಾಗೂ ಪೊಲೀಸ್ ಇಲಾಖೆಗೆ ಸೇರಿಸಿ, ಸಾಹಸಮಯ ಹಾಗೂ ಸಾರ್ಥಕ ಬದುಕು ನಡೆಸಿ ನಿವೃತ್ತನಾದ ಕತೆ ರೋಮಾಂಚನಕಾರಿಯಾದುದು.

ಹರಿಯಾಣವನ್ನು ಹೊರತುಪಡಿಸಿದರೆ ಮಹಾರಾಷ್ಟ್ರದ ಕೊಲ್ಹಾಪುರ ಕುಸ್ತಿಪಟುಗಳ ತವರು ಮನೆ. ಭಾರತದ ಮೊತ್ತ ಮೊದಲ ವೈಯಕ್ತಿಕ ಒಲಿಂಪಿಕ್ ಪದಕ ವಿಜೇತ ಪೆಹಲ್ವಾನ್ ಕಶಾಬಾ ದಾದಾಸಾಹೇಬ್ ಜಾದವ್ ಇದೇ ಕೊಲ್ಹಾಪುರದವರು. ಛತ್ರಪತಿ ಸಾಹೂ ಮಹಾರಾಜ್ ದೊಡ್ಡ ಕುಸ್ತಿ ಪ್ರೇಮಿಯಾಗಿದ್ದು, ಅವರು ತಮ್ಮ ರಾಜ್ಯದಲ್ಲಿ ನೂರಾರು ಕುಸ್ತಿ ಅಖಾಡಗಳನ್ನು ಕಟ್ಟಿದ್ದರು. ಹೀಗಾಗಿ ಕೊಲ್ಹಾಪುರದ ಹಳ್ಳಿಗಳ ಪ್ರತಿಯೊಂದು ಕುಟುಂಬದಲ್ಲಿಯೂ ಕನಿಷ್ಠ ಒಬ್ಬ ಕುಸ್ತಿ ಪಟುವನ್ನಾದರೂ ಕಾಣಬಹುದು. ಕೊಲ್ಹಾಪುರದ ಕರವೀರ ತಾಲ್ಲೂಕಿನ ನಗಾವೆ ಗ್ರಾಮದ ಬಲ್ವಂತ ಬಾವ್ಡೇಕರ್ ಎಂಬವರು ಅಂತಹ ಒಬ್ಬ ಕುಸ್ತಿಪಟು. ಕುಸ್ತಿಪಟುವಾಗಿರುವ ಜೊತೆಗೆ ಅವರು ಉತ್ತಮ ಖೋಖೋ ಮತ್ತು ಕಬಡ್ಡಿ ಆಟಗಾರರೂ ಆಗಿದ್ದರು.

ಕಿರಣ್ ಬಾವ್ಡೇಕರ್ ಬಲ್ವಂತ ಬಾವ್ಡೇಕರ್‌ರ ಮಗ. ಕಿರಣ್ ಬಾವ್ಡೇಕರ್ ಮೂರು ವರ್ಷದ ಮಗುವಾಗಿದ್ದಾಗ ಅವರ ಎರಡೂ ಕಾಲುಗಳಿಗೆಪೋಲಿಯೋ ತಗಲಿತು. ಹದಿನೈದು ವರ್ಷದವರಾಗುವ ತನಕವೂ ಅವರು ತಮ್ಮ ಕಾಲುಗಳನ್ನು ಎಳೆದುಕೊಂಡು ತಿರುಗಾಡುತ್ತಿದ್ದರು. ಅದು ಸಾಲದೆಂಬಂತೆ, ೨೦೧೩ರಲ್ಲಿ ಒಂದು ದ್ವಿಚಕ್ರ ವಾಹನ ಅವರ ಕಾಲುಗಳ ಮೇಲೆ ಬಿದ್ದು, ಅವರ ಎಡಗಾಲಿನ ಮೂಳೆ ಮುರಿದು, ನಾಲ್ಕು ಸ್ಟೀಲ್ ರಾಡುಗಳನ್ನು ಜೋಡಿಸಬೇಕಾಗಿ ಬಂದಿತು. ೨೦೧೫ರಲ್ಲಿ ಇನ್ನೊಮ್ಮೆ ಅದೇ ರೀತಿಯ ಅಪಘಾತ ನಡೆದು ಅವರ ಬಲಗಾಲಿನ ಮೂಳೆ ತುಂಡಾಗಿ, ಅದಕ್ಕೆ ಎರಡು ಸ್ಟೀಲ್ ರಾಡುಗಳನ್ನು ಅಳವಡಿಸಬೇಕಾಯಿತು.

ಭಾರತದ ಗ್ರಾಮೀಣ ಪ್ರದೇಶಗಳು ವಿಶೇಷಚೇತನ ವ್ಯಕ್ತಿಗಳಿಗೆ ಅವಮಾನಕರ ಹೆಸರುಗಳಿಂದ ಕರೆಯುವುದರಲ್ಲಿ ಕುಖ್ಯಾತಿ ಪಡೆದವುಗಳು. ಅಕ್ಕಪಕ್ಕದ ಜನ ಕಿರಣ್ ಬಾವ್ಡೇಕರ್‌ರನ್ನು ‘ಪಂಗ್ಯಾ (ಕುಂಟ)’ ಎಂದು ಹಾಸ್ಯ ಮಾಡುತ್ತಿದ್ದರು. ಕಿರಣ್ ಬಾವ್ಡೇಕರ್ಶಾ ಲೆಯಲ್ಲಿ ತಾನು ಫಿಸಿಕಲ್ ಫಿಟ್‌ನೆಸ್ ಕಲಿಯಬೇಕೆಂಬ ಇಚ್ಛೆ ವ್ಯಕ್ತಪಡಿಸಿದಾಗ ಅವರ ಸಹಪಾಠಿಗಳು ನಕ್ಕು ಗೇಲಿ ಮಾಡಿದರು. ಯಾವ ಟ್ರೈನರ್‌ಗಳೂ ಕೂಡ ಅವರಿಗೆ ಫಿಟ್‌ನೆಸ್ ವಿಧಾನಗಳನ್ನು ಹೇಳಿಕೊಡಲು ಒಲವು ತೋರಲಿಲ್ಲ. ಅದು ಕಿರಣ್ ಬಾವ್ಡೇಕರ್‌ರಲ್ಲಿ ಹೇಗಾದರೂ ಸರಿ ತಾನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ನಡೆಯಬೇಕೆಂಬ ಕೆಚ್ಚನ್ನು ಹುಟ್ಟಿಸಿತು. ಹಾಗೆ ನಡೆಯಬೇಕಾದರೆ ತಾನು ಮಹತ್ವದ ತ್ಯಾಗಗಳನ್ನು ಮಾಡಬೇಕಾಗುತ್ತದೆ ಎಂಬುದು ಅವರಿಗೆ ತಿಳಿದಿತ್ತು. ಅದರಂತೆ ಅವರು ತಮ್ಮ೧೪ನೇ ವಯಸ್ಸಿನಲ್ಲಿ ಯಾರಿಗೂ ತಿಳಿಯದಂತೆ ರಾತ್ರಿ ೧೦ ಗಂಟೆಯಿಂದ ಬೆಳಗಿನ ಜಾವ ೪ ಗಂಟೆಯವರೆಗೆ ಒಂದು ಪಾಳುಬಿದ್ದ ಕುಸ್ತಿ ಅಖಾಡದಲ್ಲಿ ಕಸರತ್ತು ಮಾಡಲು ಪ್ರಾರಂಭಿಸಿದರು. ಸುಮಾರು ಐದು ವರ್ಷಗಳ ಕಾಲ ಅವರು ಏಳುತ್ತ ಬೀಳುತ್ತ, ಮೈಕೈ ನೋವು ಮಾಡಿಕೊಳ್ಳುತ್ತ ತನ್ನಿಂದ ಏನೇನು ದೈಹಿಕ ಕಸರತ್ತುಗಳನ್ನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದರು.

ಒಂದು ದಿನ ಕಿರಣ್ ಬಾವ್ಡೇಕರ್ ವ್ಯಾಯಾಮ ಮಾಡುವಾಗ ಕೆಳಕ್ಕೆ ಬಿದ್ದುದನ್ನು ಅವರ ಹಳ್ಳಿಯವರೇ ಆದ ತಾನಾಜಿ ಪಾಟೀಲ್ ಎಂಬ ಒಬ್ಬರು ಕುಸ್ತಿ ಗುರು ನೋಡಿದರು. ಅವರು ಅವರ ಬಳಿ ಬಂದು ವಿಚಾರಿಸಿದಾಗ, ಕಿರಣ್ ತನ್ನ ಕತೆಯನ್ನು ಹೇಳಿದರು. ಆಗ ತಾನಾಜಿ ಪಾಟೀಲ್ ಅವರನ್ನು ತನ್ನ ಜೊತೆ ಕರೆದುಕೊಂಡು ಹೋಗಿ, ಕುಸ್ತಿಯ ಕಸರತ್ತುಗಳನ್ನು ಹೇಳಿ ಕೊಡಲು ಪ್ರಾರಂಭಿಸಿದರು. ಪ್ರತಿದಿನ ಮೂರು ಗಂಟೆಗಳ ಕಾಲ ಒಂದು ವರ್ಷದ ತನಕ ತಾನಾಜಿ ಪಾಟೀಲ್ ಕಿರಣ್ ಬಾವ್ಡೇಕರ್‌ಗೆ ತರಬೇತಿ ನೀಡಿ ಒಬ್ಬ ಕುಸ್ತಿಪಟುವನ್ನಾಗಿ ರೂಪಿಸಿದರು. ಅವರು ಕಿರಣ್ ಬಾವ್ಡೇಕರ್‌ರನ್ನು ಎಷ್ಟು ಚೆನ್ನಾಗಿ ತರಬೇತಿಗೊಳಿಸಿದರೆಂದರೆ, ಒಮ್ಮೆ ಕಿರಣ್ ಅವರನ್ನೇ ಕುಸ್ತಿಯಲ್ಲಿ ಸೋಲಿಸಿದರು!

ಏಳು ವರ್ಷಗಳ ಕಾಲ ಕಿರಣ್ ಬಾವ್ಡೇಕರ್‌ರ ಹೆತ್ತವರಿಗೆ ತಮ್ಮ ಮಗ ಕುಸ್ತಿ ಮಾಡುವುದು ಗೊತ್ತಿರಲಿಲ್ಲ. ಅವರ ತಾಯಿ ಪ್ರಭಾವತಿಗೆ ತಮ್ಮ ಮಗನಿಗೆ ಮತ್ತೇನಾದರೂ ಅನಾಹುತವಾಗುತ್ತದೆಂಬ ಆತಂಕ. ಒಮ್ಮೆ ಕಿರಣ್ ಒಂದು ಹಳ್ಳಿಯಲ್ಲಿ ಕುಸ್ತಿ ಮಾಡುತ್ತಿದ್ದಾಗ ಅವರ ತಂದೆ ಯಾವುದೋ ಕೆಲಸದ ನಿಮಿತ್ತ ಅತ್ತ ಬಂದಾಗ ಅವರಿಗೆ ತಮ್ಮ ಮಗ ಕುಸ್ತಿ ಮಾಡುವುದು ತಿಳಿಯಿತು. ಮೊದಲು ಆಘಾತಗೊಂಡ ಅವರು ನಂತರ ಕಿರಣ್ ಕುಸ್ತಿಯಲ್ಲಿ ಗೆದ್ದುದನ್ನು ಕಂಡು ಸಂತೋಷಪಟ್ಟರು. ಅಂದಿನಿಂದ ಅವರು ಮಗನ ಕನಸು ಸಾಕಾರಗೊಳ್ಳಲು ಆಸರೆಯಾಗಿ ನಿಂತರು.

ಕಿರಣ್ ಹದಿನಾರು ವರ್ಷದವರಾಗಿದ್ದಾಗ ವಡಾಂಗೆ ಎಂಬ ಹಳ್ಳಿಯಲ್ಲಿ ತಮ್ಮ ಮೊದಲ ಕುಸ್ತಿ ಸ್ಪರ್ಧೆಯನ್ನು ಮಾಡಿದರು. ಆದರೆ, ಅದರಲ್ಲಿ ಸೋತರು. ವೃತ್ತಿಪರ ಕುಸ್ತಿ ಪಟುಗಳೊಂದಿಗೆ ಸ್ಪರ್ಧಿಸುವುದು ಬೇರೆಯೇ ಆದ ಅನುಭವ. ಕುಸ್ತಿಯಾಟ ಸ್ಥಳೀಯವಾಗಿ ಬಹಳ ಜನಪ್ರಿಯವಾದ ಕ್ರೀಡೆಯಾದುದರಿಂದ ಕಿರಣ್‌ಗೆ ಬಹಳಷ್ಟು ಅವಕಾಶಗಳು ಸಿಕ್ಕವು. ತಮ್ಮ ಬಲವಾದ ದೇಹ ಹಾಗೂ ಚಾಣಾಕ್ಷ ಪಟ್ಟುಗಳಿಂದ ಮೊದಲ ಸುತ್ತುಗಳಲ್ಲಿ ಅವರು ಜಯಗಳಿಸುತ್ತಿದ್ದರು. ಆದರೆ, ಅವರ ದೈಹಿಕ ಅಂಗವೈಕಲ್ಯದ ಕಾರಣಕ್ಕೆ ಅವರಿಗೆ ಯಾವುದೇ ಫೈನಲ್ ಹಂತದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಎರಡು ವರ್ಷಗಳ ಕಾಲ ೪೫೦ ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ, ೪೦೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದು, ನಂತರ ಕುಸ್ತಿ ಅಖಾಡಾದಿಂದ ಹೊರ ನಡೆದರು.

ಅದರ ನಂತರ ಅವರು ಸೌರಭ್ ಸಾಳುಂಕೆ ಎಂಬ ಗುರುವಿನಿಂದ ಬಾಡಿ ಬಿಲ್ಡಿಂಗ್ ಕಲಿತು, ೧೯೮೧ರಿಂದ ೧೯೯೦ರ ತನಕ ಹಲವಾರು ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ಗೋಕುಲ್ ಕೇಸರಿ, ಆಲ್ ಇಂಡಿಯಾ ಓಪನ್ ಚಾಂಪಿಯನ್‌ಶಿಪ್ ಮೊದಲಾದ ಪ್ರಶಸ್ತಿಗಳನ್ನು ಗೆದ್ದರು. ಬಾಡಿ ಬಿಲ್ಡಿಂಗ್ ರಂಗದಲ್ಲೂ ಕಿರಣ್ ಹಲವಾರು ನಿರಾಶೆಗಳನ್ನು ಅನುಭವಿಸಬೇಕಾಯಿತು. ಮಾಸ್ಕೋ ಒಲಿಂಪಿಕ್ಸ್ ಸೇರಿ ಇತರ ಕೆಲವು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಅರ್ಹತೆ ಪಡೆದರೂ ಹಣಕಾಸಿನ ಕೊರತೆ ಹಾಗೂ ಸರ್ಕಾರದ ಬೆಂಬಲ ಸಿಗದ ಕಾರಣ ಅವರಿಗೆ ಅವುಗಳಲ್ಲಿ ಭಾಗವಹಿಸಲಾಗಲಿಲ್ಲ. ಅದೇ ಹೊತ್ತಲ್ಲಿ ಅವರ ತಂದೆ ಉದ್ಯೋಗದಿಂದ ನಿವೃತ್ತರಾದರು. ಆಗ ಕಿರಣ್ ಕುಟುಂಬ ನಡೆಸುವ ಸಲುವಾಗಿ ಕೊಲ್ಹಾಪುರ ನಗರದಲ್ಲಿ ಗುಮಾಸ್ತ, ಕೂಲಿ, ಕಾಂಪೊಸಿಟರ್, ದೈಹಿಕ ಶಿಕ್ಷಕ, ಫಿಟ್‌ನೆಸ್ ಟ್ರೈನರ್ ಹಾಗೂ ಬ್ಯಾಂಕ್ ಕ್ಯಾಶಿಯರ್ ಮೊದಲಾಗಿ ಸುಮಾರು ೩೦ ರೀತಿ ಉದ್ಯೋಗಗಳನ್ನು ಮಾಡಿದರು. ೨೦೦೦ ದಲ್ಲಿ ಕಿರಣ್ ಬೇರೆಲ್ಲ ಕೆಲಸಗಳನ್ನು ಬಿಟ್ಟು, ಬ್ಯಾಂಕ್ ಕ್ಯಾಶಿಯರ್ ಕೆಲಸವನ್ನು ಉಳಿಸಿಕೊಂಡು, ಗ್ರಾಮೀಣ ಮಕ್ಕಳಿಗೆ ಫಿಟ್‌ನೆಸ್ ಕಲಿಸಲು ತಮ್ಮದೇ ಒಂದು ಜಿಮ್ ಶುರು ಮಾಡಿದರು.

ಕರವೀರ ತಾಲ್ಲೂಕು ಪರಿಸರದಲ್ಲಿ ಅಂತಹದೊಂದು ಜಿಮ್ ಮೊದಲಬಾರಿಗೆ ಸ್ಥಾಪನೆಯಾಗಿದ್ದರಿಂದ ಕೆಲವೇ ತಿಂಗಳಲ್ಲಿ ಅದು ಬಹಳ ಜನಪ್ರಿಯವಾಯಿತು. ಪ್ರಾರಂಭದಲ್ಲಿ ಅವರು ಹತ್ತು ರೂಪಾಯಿ ಶುಲ್ಕ ವಿಽಸುತ್ತಿದ್ದರು. ಆದರೆ, ಬಡ ಮಕ್ಕಳಿಂದ ಅದನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಬೆಳಿಗ್ಗೆ ೫ ರಿಂದ ೮ ರ ವರೆಗೆ ಮಕ್ಕಳಿಗೆ ಟ್ರೈನಿಂಗ್ ಕೊಟ್ಟು, ನಂತರ ತಮ್ಮ ಬ್ಯಾಂಕ್ ಕೆಲಸಕ್ಕೆ ಹೋಗಿ, ಸಂಜೆ ಪುನಃ ತರಬೇತಿ ಕೊಡುವುದರಲ್ಲಿ ನಿರತರಾಗುತ್ತಿದ್ದರು. ಅವರಲ್ಲಿ ತರಬೇತಿ ಪಡೆದ ೨೦,೦೦೦ಕ್ಕೂ ಹೆಚ್ಚು ಮಕ್ಕಳಲ್ಲಿ ಸುಮಾರು ೩೫೦ ಮಕ್ಕಳು ಸೈನ್ಯ ಸೇರಿದರೆ, ೧೬ ಕ್ಕೂ ಹೆಚ್ಚು ಮಕ್ಕಳು ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿದ್ದಾರೆ.

ಬಾಡಿ ಬಿಲ್ಡಿಂಗ್ ಹಾಗೂ ವೆಯ್ಟ್ ಲಿಫ್ಟಿಂಗ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ೧೫ ಪದಕ, ರಾಜ್ಯ ಮಟ್ಟದಲ್ಲಿ ೩೮ ಪದಕಗಳು, ಈಜು, ಡಿಸ್ಕಸ್ ಎಸೆತ, ಶಾಟ್‌ಪುಟ್ ಮತ್ತು ಜಾವೆಲಿನ್ ಎಸೆತಗಳಲ್ಲೂ ಹಲವಾರು ಪದಕಗಳನ್ನು ಗೆದ್ದಿರುವ ಕಿರಣ್ ಬಾವ್ಡೇಕರ್‌ಗೆ ಈಗ ೬೪ ವರ್ಷ ಪ್ರಾಯ. ತಮ್ಮದೇ ಹಣದಲ್ಲಿ ಕರವೀರ ತಾಲ್ಲೂಕಿನ ಶಾಲೆಗಳ ಮಕ್ಕಳಿಗೆ ಮ್ಯಾರಾಥಾನ್‌ಗಳನ್ನು ನಡೆಸುತ್ತಾರೆ. ಅವರ ಹಿರಿ ಮಗ ಪ್ರಥಮೇಶ್ ಹುಟ್ಟುವಾಗಲೇ ಅವನ ಹೃದಯದಲ್ಲಿ ನಾಲ್ಕು ತೂತುಗಳಿದ್ದವು. ಅದಕ್ಕಾಗಿ ಎರಡು ಬಾರಿ ಬೈಪಾಸ್ ಶಸ್ತ್ರಚಿಕಿತ್ಷೆಗಳನ್ನು ಮಾಡಿಸಬೇಕಾಯಿತು. ಈಗ ೨೫ ವರ್ಷಗಳಾಗರುವ ಅವನು ಹೆಚ್ಚು ಕಾಲ ಬದುಕಲಾರ ಎಂದು ವೈದ್ಯರು ಹೇಳಿದ್ದಾರೆ. ಅವನೂ ತಂದೆಯಂತೆಯೇ ಛಲಗಾರನಾಗಿದ್ದು, ತಂದೆಯ ಜೊತೆ ಫಿಟ್‌ನೆಸ್ ವ್ಯಾಯಾಮಗಳನ್ನು ಮಾಡುತ್ತ ವೈದ್ಯರ ಮಾತನ್ನು ಸುಳ್ಳಾಗಿಸಲು ಹೋರಾಟ ನಡೆಸಿದ್ದಾನೆ.

” ಬಾಡಿ ಬಿಲ್ಡಿಂಗ್ ಹಾಗೂ ವೆಯ್ಟ್ ಲಿಫ್ಟಿಂಗ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ೧೫ ಪದಕ, ರಾಜ್ಯ ಮಟ್ಟದಲ್ಲಿ ೩೮ ಪದಕಗಳು, ಈಜು, ಡಿಸ್ಕಸ್ ಎಸೆತ, ಶಾಟ್‌ಪುಟ್ ಮತ್ತು ಜಾವೆಲಿನ್ ಎಸೆತಗಳಲ್ಲೂ ಹಲವಾರು ಪದಕಗಳನ್ನು ಗೆದ್ದಿರುವ ಕಿರಣ್ ಬಾವ್ಡೇಕರ್‌ಗೆ ಈಗ ೬೪ ವರ್ಷ ಪ್ರಾಯ. ತಮ್ಮದೇ ಹಣದಲ್ಲಿ ಕರವೀರ ತಾಲ್ಲೂಕಿನ ಶಾಲೆಗಳ ಮಕ್ಕಳಿಗೆ ಮ್ಯಾರಾಥಾನ್‌ಗಳನ್ನು ನಡೆಸುತ್ತಾರೆ.”

ಆಂದೋಲನ ಡೆಸ್ಕ್

Recent Posts

ಆಂದೋಲನ ವರದಿ ಫಲಶ್ರುತಿ : ಪಚ್ಚೆದೊಡ್ಡಿ ಗ್ರಾಮದ ಶಾಲೆ ಮಕ್ಕಳಿಗೆ ವಾಹನ ಸೌಲಭ್ಯ

ಡಿಸಿ ಶಿಲ್ಪಾನಾಗ್‌ ಸೂಚನೆ ಮೇರೆಗೆ ಅರಣ್ಯ ಇಲಾಖೆಯ ಸಫಾರಿ ವಾಹನದಲ್ಲಿ ಮಕ್ಕಳನ್ನು ಕರೆತರಲು ಕ್ರಮ ಹನೂರು : ಅಂತೂ ಇಂತೂ…

1 min ago

ನಾನೇ ವಿಪಕ್ಷ ನಾಯಕ ಎಂದ ಯತ್ನಾಳ್

ಬೆಳಗಾವಿ : ನಾನು ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಲ್ಲ, ನಿಜವಾದ ವಿರೋಧ ಪಕ್ಷದ ನಾಯಕ ನಾನೇ ಎಂದು ವಿಧಾನಸಭೆ ಕಲಾಪದ…

8 mins ago

ಬಿಳಿಗಿರಿ ರಂಗನಬೆಟ್ಟ ಅಭಿವೃದ್ಧಿ ಕಾರ್ಯ ಪರಿಶೀಲನೆಯಲ್ಲಿದೆ : ಸಚಿವ .ಎಚ್.ಕೆ.ಪಾಟೀಲ್‌

ಬೆಳಗಾವಿ : ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪುರಾಣ ಪ್ರಸಿದ್ಧ ಕ್ಷೇತ್ರವಾಗಿರುವ ಬಿಳಿಗಿರಿ ರಂಗನಬೆಟ್ಟ ಪ್ರದೇಶವನ್ನು 5.75…

23 mins ago

ರೈತರಿಗೆ ಗುಂಡು ಹೊಡೆಸಿದ್ದ ಬಿಜೆಪಿಗರಿಂದ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ : ಸಚಿವೆ ಹೆಬ್ಬಾಳಕರ್‌

ಬೆಳಗಾವಿ : ಬಿಜೆಪಿ ನಾಯಕರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ‌.‌ ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ, ಯಾರು…

1 hour ago

ಮೈಸೂರಿನಲ್ಲಿ 300 ಎಕರೆ ಜಮೀನಿನಲ್ಲಿ ಲೇಔಟ್‌ ನಿರ್ಮಾಣ: ಸಚಿವ ಭೈರತಿ ಸುರೇಶ್‌

ಬೆಳಗಾವಿ: ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿದರೆ ಅತಿವೇಗವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ಸುಮಾರು 300 ಎಕರೆ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡಿ ಸಾರ್ವಜನಿಕರಿಗೆ…

2 hours ago

ಋತುಚಕ್ರ ರಜೆ: ತಡೆಯಾಜ್ಞೆ ಮಾರ್ಪಡಿಸಿ ನಾಳೆಗೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ರಾಜ್ಯ ಸರ್ಕಾರ ನೀಡಿದ್ದ ರಜೆ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಆದರೆ ಈ…

2 hours ago