ಅಂಕಣಗಳು

ಹತ್ಯೆಗಳು ಮರ್ಯಾದೆ ಉಳಿಸುವ ಭ್ರಮೆ

 ರಮೇಶ್ ಹಾಸನ್

 ಮರ್ಯಾದೆ ಹತ್ಯೆ ಯಂತೆ! ಅಸಲಿಗೆ ಇವುಗಳನ್ನು ಅಮಾನವೀಯ ಹತ್ಯೆಗಳು, ಅವಮಾನದ ಹತ್ಯೆಗಳು ಎನ್ನಬೇಕು. ಗ್ರೀಕ್ ಮತ್ತು ರೋಮ್ ಸಾಮ್ರಾಜ್ಯಗಳಲ್ಲಿ ಸೇಕ್ರೆಡ್ ಕಿಲ್ಲಿಂಗ್ ಅಂದರೆ, ಪವಿತ್ರತೆಗಾಗಿ ಹತ್ಯೆ ಎಂಬುದು ಸಹಜವಾಗಿತ್ತು. ಯಾವಾಗ ಆರ್ಯನ್ನರು ಜಗತ್ತಿನ ವಿವಿಧ ಭಾಗಗಳಿಗೆ ಕಾಲಿಟ್ಟರೋ ಅಲ್ಲೆಲ್ಲಾ ಹಾನರ್ ಕಿಲ್ಲಿಂಗ್ ಅನ್ನೋದು ಸಹಜವಾಗಿಬಿಟ್ಟಿದೆ. ಜಗತ್ತಿನ ಅತ್ಯಂತ ದೊಡ್ಡ ರಾಷ್ಟ್ರವೆಂದು ಹೇಳಿಕೊಳ್ಳುವ ಅಮೆರಿಕದಲ್ಲೂ ಈ ಹಾನರ್ ಕಿಲ್ಲಿಂಗ್ ನಡೆಯುತ್ತಿದೆ. ಅಲ್ಲಿನ ಪ್ರತಿಷ್ಠಿತ ಕುಟುಂಬಗಳು ಹೆಣ್ಣು ಮಕ್ಕಳನ್ನು ತಮ್ಮ ಕುಲಗೌರವದ ಸಂಕೇತವೆಂದು ಇಂದಿಗೂ ಭಾವಿಸುತ್ತವೆ. ಈ ಕಾರಣದಿಂದ ಅಲ್ಲಿನ ಹೆಣ್ಣುಮಕ್ಕಳು ಜಗತ್ತಿನ ಎದುರಿಗೆ ಆಧುನಿಕರಂತೆ ಕಂಡರೂ, ಒಳಗೊಳಗೆ ಈ ಶ್ರೇಷ್ಠತೆಯ ಕುಲುಮೆಯಲ್ಲಿ ಬೇಯುತ್ತಿರುತ್ತಾರೆ!

ಭಾರತದಲ್ಲಿ ಇತ್ತೀಚೆಗೆ ಮರ್ಯಾದೆಗೇಡು ಹತ್ಯೆಗಳು ಹೆಚ್ಚಾಗುತ್ತಿವೆ. ತಳ ಸಮುದಾಯದ ಹುಡುಗನನ್ನೋ, ಹುಡುಗಿಯನ್ನೋ ಪ್ರೀತಿಸಿದರು ಎಂಬ ಕಾರಣಕ್ಕೆ ತನ್ನ ಹೊಟ್ಟೆಯಲ್ಲಿ ಜನಿಸಿದ ಮಕ್ಕಳನ್ನೇ ಕೊಲ್ಲುತ್ತಾರೆಂದರೆ, ಈ ಹೀನಾಯ ಕೊಲೆಯನ್ನು ಮರ್ಯಾದೆ ಹತ್ಯೆ ಎನ್ನಲಾಗುತ್ತದೆ ಎಂದರೆ, ಆ ಮರ್ಯಾದೆ ಹತ್ಯೆ ಅನ್ನುವ ಪದವನ್ನೇ ಇಲ್ಲಿನ ಮೇನ್‌ಸ್ಟ್ರೀಮ್ ಮಾಧ್ಯಮಗಳು ಬಳಸಿಕೊಂಡು ಸುದ್ದಿ ಮಾಡುತ್ತಿವೆಯೆಂದರೆ, ನಮ್ಮ ಸಮಾಜದ ಮನಸ್ಥಿತಿ ಅದೆಷ್ಟು ಹದಗೆಟ್ಟಿರಬೇಕು?

ನಾವು ಒಪ್ಪಲಿ, ಬಿಡಲಿ ಇಂಥದ್ದೊಂದು ಮನಸ್ಥಿತಿ, ಇದೇ ಮನಸ್ಥಿತಿಯನ್ನು ಒಪ್ಪಿಕೊಂಡು ಹೋಗುವ ಸಮಾಜ ಸೃಷ್ಟಿಯಾಗಿರುವುದಂತೂ ನಿಜ.

ಸಾವಿರಾರು ವರ್ಷಗಳಿಂದ ಜಾತಿ ಹೆಸರಿನಲ್ಲಿ ಈ ಹತ್ಯೆಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಇಂದು ಈ ಹತ್ಯೆಗಳು ಹೊಸ ರೂಪ ಪಡೆದುಕೊಂಡು ಮರ್ಯಾದೆ ಹತ್ಯೆ ಎಂಬ ಹೆಸರಿನಲ್ಲಿ ಯಾವುದೇ ಎಗ್ಗಿಲ್ಲದೆ ನಡೆಯುತ್ತಿವೆ. ಇದಕ್ಕೆ ಬಲಿಯಾಗುತ್ತಿರುವುದು ಮೇಲ್ವರ್ಗದವರೆಂದು ಅಥವಾ ಮೇಲ್ಜಾತಿಗಳೆಂದು ಕರೆಸಿಕೊಳ್ಳುವ ಸಮುದಾಯದ ಹೆಣ್ಣು ಮಕ್ಕಳು ಎಂಬುದು ಆತಂಕಕಾರಿ ವಿಷಯ.

ಈ ಮೊದಲು ಉತ್ತರ ಭಾರತದಲ್ಲಿ ಈ ಮರ್ಯಾ ದೆಗೇಡು ಹತ್ಯೆಗಳು ಹೆಚ್ಚಾಗಿ ನಡೆಯುತ್ತಿರುವುದಾಗಿ ವರದಿಯಾಗುತ್ತಿದ್ದವು. ಗುಜರಾತ್, ಉತ್ತರಪ್ರದೇಶ, ಪಂಜಾಬ್, ಬಿಹಾರ, ಹರಿಯಾಣದಂಥ ರಾಜ್ಯಗಳಲ್ಲಿ ಈಗಲೂ ಹೆಚ್ಚಾಗಿ ನಡೆಯುತ್ತಿವೆ ಎಂದು ರಾಷ್ಟ್ರೀಯ ಮಟ್ಟದಲ್ಲಿ ಅಪರಾಧಗಳನ್ನು ಸಂಗ್ರಹಿಸುವ, ಕೇಂದ್ರ ಸರ್ಕಾರದ ಅಽನ ಸಂಸ್ಥೆಯಾಗಿರುವ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (NCRB) ಆತಂಕಕಾರಿ ದಾಖಲೆ ಗಳ ವರದಿ ನೀಡಿದೆ.

ಈ ಮರ್ಯಾದೆಗೇಡಿನ ಹತ್ಯೆಗಳು ದಕ್ಷಿಣ ಭಾರತಕ್ಕೂ ಕಾಲಿಟ್ಟು ಬಹಳ ವರ್ಷಗಳೇ ಕಳೆದಿವೆ. ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಇದು ತಾಂಡವವಾಡು ತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ತುಮಕೂರು, ಕೋಲಾರ, ಮಂಡ್ಯ ಮತ್ತು ಉತ್ತರ ಕರ್ನಾಟಕದ ಭಾಗ ಗಳಲ್ಲಿಯೂ ಹರಡಿಕೊಂಡು, ಕಳೆದ ಮೂರು ವರ್ಷಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಮಕ್ಕಳು ಮರ್ಯಾದೆಗೇಡು ಹತ್ಯೆಗಳಿಗೆ ಬಲಿಯಾಗಿದ್ದಾರೆ. ಇಲ್ಲೂ ಕೂಡ ಬೆಳಕಿಗೆ ಬಾರದೆ ಇರುವ ಪ್ರಕರಣಗಳು  ಹೆಚ್ಚು. ಕಳೆದ ಮೂರೇ ತಿಂಗಳುಗಳಲ್ಲಿ ಕೋಲಾರ ಜಿಲ್ಲೆಯೊಂದರಲ್ಲೇ ಮೂರು ಮರ್ಯಾದೆಗೇಡು ಹತ್ಯೆಗಳಾಗಿವೆ. ಈ ಮೂರು ಪ್ರಕರಣಗಳಲ್ಲೂ  ತಂದೆ ಮತ್ತು ಕುಟುಂಬದವರು ಸೇರಿ ಹತ್ಯೆಗೈದಿರುತ್ತಾರೆ.

ಒಂದು ಪ್ರಕರಣದಲ್ಲಿ ಅನ್ಯಜಾತಿ ಹುಡುಗನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ತನ್ನ ಮಗಳನ್ನು ನಿರ್ದಯವಾಗಿ ಉಸಿರುಗಟ್ಟಿಸಿ ಕೊಂದರೆ, ಮತ್ತೊಂದು ಪ್ರಕರಣ ಕೋಲಾರದ ಬಂಗಾರಪೇಟೆ ಬೋಡಗುರ್ಗಿ ಗ್ರಾಮದಲ್ಲಿ, ಕೆಳ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಸ್ವತಃ ತಂದೆಯೇ ಮಗಳ ಕುತ್ತಿಗೆ ಹಿಸುಕಿ ಹತ್ಯೆ ಮಾಡಿರುವ ಘಟನೆ ನಡೆಯಿತು. ತಾನು ಪ್ರೀತಿಸಿದ ಹುಡುಗಿ ಮೃತಪಟ್ಟಿದ್ದಾಳೆ ಅನ್ನೋ ವಿಷಯ ತಿಳಿಯುತ್ತಿದ್ದಂತೆ ದಲಿತ ಹುಡುಗ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡುಬಿಟ್ಟ. ಇದರ ಬೆನ್ನಿಗೇ ಕೆಲವು ವಾರಗಳ ಹಿಂದೆ ಬೆಂಗಳೂರಿನಲ್ಲಿ ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳನ್ನು ಮಚ್ಚಿನಿಂದ ಹೊಡೆದು ಕೊಂದಿರುವ ಕ್ರೂರ ಘಟನೆ ನಡೆದಿದೆ.

ಮರ್ಯಾದೆಗೇಡು ಹತ್ಯೆಗಳ ತಡೆಗಿಲ್ಲವೆ ಕಾನೂನು?:ಜಾತಿವಿನಾಶವಾಗಬೇಕಾದರೆ, ಹೆಚ್ಚು ಹೆಚ್ಚು ಅಂತರ್ಜಾತಿಯ ಮದುವೆಗಳು ಆಗಬೇಕು ಎನ್ನುತ್ತಾರೆ. ಆದರೆ, ಈ ವಿಷಮಸ್ಥಿತಿಯಲ್ಲಿ ಈ ರೀತಿಯ ಮದುವೆಗಳು ಅರೇಂಜ್ ಮ್ಯಾರೇಜ್ ಆಗಲು ಸಾಧ್ಯವೇ? ಎದೆಯಲ್ಲಿ ಒಲವು ಮೂಡಿಬಿಟ್ಟರೆ ಸಾಕು, ಜಾತಿಗೀತಿ ಆಚೆಗೆ ಎಂಬ ತಿಳಿವು ಇರುವುದು ಪ್ರೇಮಕ್ಕೆ ಮಾತ್ರ. ಈ ಪ್ರೇಮದ ಕಾರಣದಿಂದ ಅಲ್ಲಲ್ಲಿ ಅಂತರ್ಜಾತಿ ಮದುವೆಗಳು ಪ್ರಜ್ಞಾವಂತ ಜಾತ್ಯತೀತರ ಸಮ್ಮುಖದಲ್ಲಿ, ಪೊಲೀಸರ ರಕ್ಷಣೆಯಲ್ಲಿ ಜರುಗುತ್ತವೆ. ಎಲ್ಲೋ ಕೆಲವು ಕಡೆ ಮಕ್ಕಳ ಮೇಲಿನ ಪ್ರೀತಿಯ ಕಾರಣದಿಂದ ಇಂಥ ಮದುವೆಗಳಿಗೆ ಉಭಯ ಪೋಷಕರೂ ಒಪ್ಪಿಗೆ ಸೂಚಿಸುವ ಅಪರೂಪದ ಬೆಳವಣಿಗೆಗಳೂ ನಮ್ಮ ಸಮಾಜದಲ್ಲಿ ನಡೆದಿವೆ. ಆದರೆ, ಆತಂಕ ಹುಟ್ಟಿಸುತ್ತಿರುವುದು ಮರ್ಯಾದೆ ಹಾಳಾಗಿ ಬಿಡುತ್ತದೆ ಎಂದೋ, ಜಾತಿಗೆಡುತ್ತದೆ ಎಂದೋ ತನ್ನ ಮಕ್ಕಳನ್ನೇ ಕೊಂದುಬಿಡುತ್ತಾರಲ್ಲ ಈ ವಿಷಯದಲ್ಲಿ.

ಕಳೆದ 20 ವರ್ಷಗಳಲ್ಲಿ ಮರ್ಯಾದೆಗೇಡು ಹತ್ಯೆಗಳು ಹೆಚ್ಚುತ್ತಿದ್ದಂತೆ ಕಾನೂನು ಹೋರಾಟಗಳೂ ಹೆಚ್ಚಾದವು. ಈ ಹತ್ಯೆಗಳ ಬಗ್ಗೆ ಸುಪ್ರೀಂ ಕೋರ್ಟ್ ೨೦೧೦ರಲ್ಲಿ ಹೀಗೆ ಅಭಿಪ್ರಾಯಪಟ್ಟಿದೆ. ‘ಮರ್ಯಾದೆಗೇಡು ಹತ್ಯೆಗಳು ಕೇವಲ ಹತ್ಯೆಗಳಲ್ಲ. ಅದೊಂದು ವ್ಯವಸ್ಥಿತ ಸಂಚು ಮತ್ತು ಕೌಟುಂಬಿಕ ಖ್ಯಾತಿ, ಗೌರವ, ಕುಲವನ್ನು ಮರುಸ್ಥಾಪಿಸುವ ಮೂಲಕ ತಮ್ಮ ಜಾತಿಯನ್ನು ಶುದ್ಧವಾಗಿ ಕಾಪಿಡಬೇಕೆಂಬ ಹೀನ ಕೃತ್ಯವಾಗಿದೆ. ಇದನ್ನು ಕೊಲೆಗಾರರು ಹೆಮ್ಮೆಯಿಂದ, ಘನತೆಯಿಂದ ಹೇಳಿಕೊಂಡು ತಪ್ಪೊಪ್ಪಿಕೊಂಡ ಉದಾಹರಣೆಗಳಿವೆ. ಆದರೆ, ಪ್ರಸ್ತುತದಲ್ಲಿ ಈ ಯಾವುದೇ ಪ್ರಬಲವಾದ ನಿರ್ದಿಷ್ಟವಾದ ಕಾನೂನು ಇಲ್ಲದಂತಾಗಿದೆ.

ಮರ್ಯಾದೆಗೇಡು ಹತ್ಯೆ ಪ್ರಕರಣಗಳು ಪ್ರಸ್ತುತದಲ್ಲಿ ಚಾಲ್ತಿಯಲ್ಲಿರುವ ಭಾರತೀಯ ದಂಡ ಸಂಹಿತೆ, 1860 (IPC)ನಲ್ಲಿ ವಿವರಿಸಿರುವ ಸಾಮಾನ್ಯ ದಂಡದ ನಿಬಂಧನೆಗಳ ಅಡಿಯಲ್ಲಿ ಬರುತ್ತವೆ. ಈ ನಿಬಂಧನೆಗಳು ಸೆಕ್ಷನ್ 107-11 (ಕೊಲೆಗೆ ಕುಮ್ಮಕ್ಕು), ವಿಭಾಗ 120ಅ ಮತ್ತು 160ಆ (ಅಪರಾಧದ ಪಿತೂರಿ), ವಿಭಾಗಗಳು 299-304 (ಕೊಲೆ ಮತ್ತು ನರಹತ್ಯೆ), ಮತ್ತು ವಿಭಾಗಗಳು 307-308 (ಕೊಲೆಯ ಯತ್ನ ಮತ್ತು ತಪ್ಪಿತಸ್ಥ ನರಹತ್ಯೆ) ಸೇರಿವೆ. ಇದರ ಹೊರತಾಗಿ, ಮರ್ಯಾದಾ ಹತ್ಯೆಯ ಪ್ರಕರಣಗಳನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ, 1989ರ ಅಡಿಯಲ್ಲಿ ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ನಡೆದ ದೌರ್ಜನ್ಯಗಳಿಗೆ ಒಳಪಡಿಸಬಹುದಾಗಿದೆ.

ಆದರೆ ಪ್ರಥಮ ವರ್ತಮಾನ ವರದಿ (FIR) ದಾಖಲಿಸುವ ಸಮಯಲ್ಲಿ, ಹಲವಾರು ಕಡೆಗಳಲ್ಲಿ ಈ ಕಾಯ್ದೆಯನ್ನು ಬೇಕೆಂದೇ ಉಲ್ಲೇಖಿಸುವುದಿಲ್ಲ. ಈ ಹತ್ಯೆಗಳನ್ನು ತಡೆಗಟ್ಟಲು ಪ್ರಬಲ ಕಾನೂನು ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯದ ಆಳುವ ವರ್ಗಗಳು ಹಿಂದೇಟು ಹಾಕುತ್ತಿರುವುದು ಮತ್ತು ಜಾತಿ ಪೋಷಿತವಾಗಿ ನಡೆದುಕೊಳ್ಳುತ್ತಿರುವುದು ಇಂತಹ ಹತ್ಯೆಗಳು ನಡೆಯಲು ಪರೋಕ್ಷ ಕಾರಣ ಎನ್ನಬಹುದಾಗಿದೆ.

andolanait

Recent Posts

ಮಾದಕ ವಸ್ತು ಮಾರಾಟ, ಬಳಕೆ ವಿರುದ್ಧ ಕಾರ್ಯಾಚರಣೆ

ನವೀನ್ ಡಿಸೋಜ ೩ ತಿಂಗಳಲ್ಲಿ ೧೩೮ ಎನ್‌ಡಿಪಿಎಸ್ ಪ್ರಕರಣ ದಾಖಲು; ೬ ಕೆ.ಜಿ. ೬೬೪ ಗ್ರಾಂ ಗಾಂಜಾ, ೩೫.೬೬ ಗ್ರಾಂ…

26 mins ago

ಹಾಳಾಗಿ ವರ್ಷಗಳೇ ಕಳೆದರೂ ದುರಸ್ತಿಯಾಗದ ಶುದ್ಧ ನೀರಿನ ಘಟಕಗಳು

ಮಹಾದೇಶ್ ಎಂ.ಗೌಡ ಹನೂರು: ತಾಲ್ಲೂಕಿನ ೨೫ ಗ್ರಾಮ ಪಂಚಾಯಿತಿಗಳ ಪೈಕಿ ೨೧ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ೪೭ ಶುದ್ಧ ಕುಡಿಯುವ ನೀರಿನ…

31 mins ago

ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಅಪಘಾತಗಳಿಗೆ ಆಹ್ವಾನ

ಎಸ್.ನಾಗಸುಂದರ್ ರೈತನಿಗೆ ಕೈಮೂಳೆ ಮುರಿತ: ಪಾಂಡವಪುರದಲ್ಲಿ ಅವಗಢ, ಸಾರ್ವಜನಿಕರ ಆಕ್ರೋಶ ಪಾಂಡವಪುರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಅವೈಜ್ಞಾನಿಕವಾಗಿ ಮತ್ತು…

35 mins ago

ಅರ್ಜುನಹಳ್ಳಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಎರಡನೇ ಬಾರಿ ಪ್ರಶಸ್ತಿ ಪಡೆದು ಗಮನಸೆಳೆದ ಪಂಚಾಯಿತಿ ಭೇರ್ಯ ಮಹೇಶ್ ಕೆ.ಆರ್.ನಗರ : ತಾಲೂಕಿನ ಅರ್ಜುನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮೀಣಾಭಿವೃದ್ಧಿ…

39 mins ago

ಊರ ಜಾತ್ರೆ ಒಂದು ನೆನಪು…

ನಂಜನಗೂಡಿನ ಜಾತ್ರೆ ಅಂದು ಹೇಗಿತ್ತೋ ಇಂದೂ ಹಾಗೆ ತನ್ನ ಆಚರಣೆಯ ಮುಗ್ಧತೆ ಉಳಿಸಿಕೊಂಡಿದೆ  ಡಾ.ಹೆಚ್.ಸಿ.ಮಹದೇವಪ್ಪ, ಸಚಿವರು ನಂಜನಗೂಡಿನಿಂದ ಕೆಲವೇ ಮೈಲಿಗಳ…

44 mins ago

ಯುದ್ಧ: ಕಟ್ಟಡ ನಿರ್ಮಾಣ ವಲಯಕ್ಕೆ ಬೆಲೆ ಏರಿಕೆಯ ಬಿಸಿ

ಚಿರಂಜೀವಿ ಸಿ.ಹುಲ್ಲಹಳ್ಳಿ ಮೈಸೂರು: ಮಧ್ಯಪ್ರಾಚ್ಯ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜನಸಾಮಾನ್ಯರಿಗೆ ನಿತ್ಯ ಒಂದಲ್ಲಾ ಒಂದು ಬಿಸಿ ತಟ್ಟುತ್ತಿದೆ. ಕಟ್ಟಡ…

48 mins ago