ಅಂಕಣಗಳು

ಭಕ್ತಿಯಿಂದ ಬದ್ಧತೆಯವರೆಗೆ ಕನಕದಾಸರ ಸಾಮಾಜಿಕ ಕ್ರಾಂತಿ

ಹಾಲಪ್ಪ ಎಚ್.

ಸಮಾಜಶಾಸ್ತ್ರ ಉಪನ್ಯಾಸಕರು

ಭಾರತದ ಮಹಾಕಾವ್ಯ ಸಂಸ್ಕೃತದ ಮಹಾಭಾರತವನ್ನು ಅನುಸರಿಸಿ ಕನ್ನಡದಲ್ಲಿ ಆದಿಕವಿ ಪಂಪ ಬರೆದ ‘ವಿಕ್ರಮಾರ್ಜುನ ವಿಜಯ’ ದಲ್ಲಿ ಒಂದು ಪ್ರಸಂಗವಿದೆ.

ಕರ್ಣನು ತನ್ನ ಅಸ್ತ್ರವಿದ್ಯಾ ಪ್ರೌಢಿಮೆಯನ್ನು ಪ್ರದರ್ಶಿಸುವಾಗ ದ್ರೋಣನು, ನಿನ್ನ ತಂದೆ ತಾಯಿಯ ವಿಷಯವನ್ನು ವಿಚಾರಿಸಿ ಮಾತನಾಡುವುದಾದರೆ, ನಿನಗೂ ಅರಿಕೇಸರಿಗೂ (ಅರ್ಜುನ) ಯಾವ ಸಮಾನತೆಯಿದೆ? ಎಂದಾಗ ದುರ್ಯೋಧನನು, ‘ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ’ (ಶೌರ್ಯವೇ ಕುಲವಲ್ಲದೆ ಕುಲವೆಂಬುದು ಬೇರೆಯುಂಟೆ?) ಎಂದು ತೀಕ್ಷ್ಣವಾಗಿ ಪ್ರಶ್ನಿಸುತ್ತಾನೆ.

ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಕುಲವನ್ನು ತಿರಸ್ಕರಿಸುವ, ಒಪ್ಪಿಕೊಳ್ಳುವ, ಆಚರಿಸುವ, ಸಂಕೀರ್ಣ ಪರಂಪರೆಯುಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಬೆಳೆದು ಬಂದಿದೆ. ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ, ಕವಿ ಮತ್ತು ದಾರ್ಶನಿಕ, ೧೫-೧೬ ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಸಮರ ಸಾರಿದ ಸಮಾಜ ಸುಧಾರಕ, ಮೌಢ್ಯದ ವಿರುದ್ಧ ಜನರಲ್ಲಿ ಅರಿವು ಮೂಡಿಸಲು ಶ್ರಮಿಸಿದ ಮಹಾಪುರುಷ ಕನಕದಾಸ. ಇವರು ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ಸರ್ವಧರ್ಮ ಸಹಿಷ್ಣುತೆಯನ್ನು ಜಗತ್ತಿಗೆ ಸಾರಿದ ಕನಕದಾಸರ ಕೀರ್ತನೆಗಳ ವಿಚಾರಗಳು ಎಂದಿಗೂ ಪ್ರಸ್ತುತ. ಕನಕದಾಸರ ಕೀರ್ತನೆಗಳು ಮೌಢ್ಯವನ್ನು ಧಿಕ್ಕರಿಸುವುದರೊಂದಿಗೆ, ಸ್ತ್ರೀ ಪರವಾದ ಚಿಂತನೆಗಳನ್ನು ಕಟ್ಟಿಕೊಟ್ಟು, ಸಮಾಜದ ಒಳಿತಿಗಾಗಿ ಪದವಿ, ಸಿರಿತನವನ್ನು ತ್ಯಾಗ ಮಾಡಿದವರ ಮೊದಲ ಸಾಲಿನಲ್ಲಿ ಕನಕದಾಸರು ಸಿಗುತ್ತಾರೆ.

‘ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ’? ಎಂಬ ಕೀರ್ತನೆಯ ಮೂಲಕ ಸಮಾಜವನ್ನುಪ್ರಶ್ನಿಸುವುದರಲ್ಲಿಯೇ ಪರಿಹಾರವನ್ನು ಸೂಚಿಸಿರುವುದು ಕನಕದಾಸರ ಜಾಣ್ಮೆಯೇ ಆಗಿದೆ. ಮಹಾತ್ಮ ಗಾಂಧೀಜಿ ಅವರು ೧೯೩೪ರ ಫೆಬ್ರವರಿ ೨೫ ರಂದು ಉಡುಪಿಗೆ ಭೇಟಿ ನೀಡಿದಾಗ ಸಾರ್ವಜನಿಕ ಭಾಷಣದಲ್ಲಿ ಕನಕದಾಸರನ್ನು ಕುರಿತು ‘ಕನಕರು ಶ್ರೇಷ್ಠ ಸಂತರು. ಕಾವ್ಯದ ಮೂಲಕ ಸಮಾಜದ ಪರಿವರ್ತನೆಗೆ ಪ್ರಯತ್ನಿಸಿದರು. ಜೀವ ಯಾವ ಕುಲ ಎಂದು ಕನಕದಾಸರು ಕೇಳಿದ ಪ್ರಶ್ನೆ ಅವರ ಎತ್ತರವನ್ನು ಸೂಚಿಸುತ್ತದೆ, ಅವರ ಪದಗಳು ಜಾತ್ಯತೀತೆಯ ಮಹತ್ವವನ್ನು ಪರಿಣಾಮಕಾರಿಯಾಗಿ ಹೇಳುತ್ತವೆ’ ಎಂದು ಕೊಂಡಾಡಿದರು. ಇಂದು ನಾವೆಲ್ಲರೂ ಭಾವೈಕ್ಯದ ಸಾರವನ್ನು ಮರೆತಿದ್ದೇವೆ. ಆದರೆ ಭಾವೈಕ್ಯತೆಯಲ್ಲಿ ಭಕ್ತಿಯ ಸಂಗಮವೇ ಕನಕದಾಸರಾಗಿದ್ದಾರೆ. ೨೧ನೇ ಶತಮಾನದಲ್ಲಿಯೂ ಜಾತಿ,ಕುಲ, ಮೌಢ್ಯ ನಮ್ಮನ್ನು ಕಾಡುತ್ತಿವೆ.  ಶಿಕ್ಷಿತರ ಸಂಖ್ಯೆ ಹೆಚ್ಚಾದರೂ ಜಾತಿಯ ಪ್ರಾಬಲ್ಯ ಕಡಿಮೆಯಾಗದೇ ಹೆಚ್ಚಾಗಿದೆ. ಕನಕದಾಸರು ತಮ್ಮ ಕೀರ್ತನೆಯ ಮೂಲಕ ನಮಗೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಭೆ, ಗುಣ, ನಡತೆ ಮತ್ತು ಅರ್ಹತೆಯ ಮೂಲಕ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬೇಕೇ ಹೊರತು ಅವನ ಜಾತಿಯಿಂದಲ್ಲ ಎಂಬುದನ್ನು ಕನಕದಾಸರು ತಮ್ಮ ಕೀರ್ತನೆಯ ಮೂಲಕ ಸಾರಿದ್ದಾರೆ.

ಭಾರತದ ಮಟ್ಟಿಗೆ ಧಾನ್ಯಗಳಿಗೆ ಜೀವ ತುಂಬಿ ರೂಪಾತ್ಮಕ ಚಿತ್ರಣ ಕೊಟ್ಟಿರುವುದು ಕನಕದಾಸರು ಒಬ್ಬರೆ ಎಂದರೆ ತಪ್ಪಲ್ಲ. ಕನಕದಾಸರು ತಮ್ಮ ರಾಮ ಧಾನ್ಯ ಚರಿತೆಯಲ್ಲಿ ಭತ್ತ ಮತ್ತು ರಾಗಿಯ ನಡುವಿನ ಸಂಘರ್ಷದ ಕಥೆ ಹೇಳುವ ಮೂಲಕ ಕುಲದ ವಿಚಾರವನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ.ಪವಿತ್ರ ಕಾರ್ಯಗಳಲ್ಲಿ ರಾಗಿಯನ್ನು ಉಪಯೋಗಿಸಲಾಗದೆಂದು, ಭತ್ತವು ರಾಗಿಯನ್ನು ಮೂದಲಿಸಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟು ರಾಮನ ನೇತೃತ್ವದಲ್ಲಿ ರಾಗಿಗೆ ಜಯ ಸಿಕ್ಕಿದ ಮೇಲೆ ರಾಮ ಧಾನ್ಯ ಚರಿತೆ ಎಂದು ಹೆಸರಾಗುತ್ತದೆ.

ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆದ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದ ಆಹಾರ ಧಾನ್ಯ ಭತ್ತ ಮತ್ತು ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನುನಿರೂಪಿಸಿರುವುದು ಕನಕದಾಸರ ಸೃಜನಶೀಲತೆಯ ಅತಿಶಯವಾಗಿದೆ. ದಲಿತ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ತಪ್ಪಾಗ ಲಾರದು. ರಾಮ ಧಾನ್ಯ ಚರಿತೆಯಲ್ಲಿ ಭತ್ತ, ರಾಗಿಯ ಹೋರಾಟವು ಶ್ರಮಿಕ ಸಂಸ್ಕೃತಿಯ ಶ್ರೇಷ್ಠತೆಯನ್ನು ಸಾರುತ್ತದೆ. ರಾಮ ಧಾನ್ಯ ಚರಿತೆಯಲ್ಲಿ ಎರಡು ಧಾನ್ಯಗಳನ್ನು ಮುಂದಿರಿಸಿಕೊಂಡು ಸಮಾಜದಲ್ಲಿನ ತಾರತಮ್ಯದ ಮೇಲೆ ಬೆಳಕು ಚೆಲ್ಲಲಾಗಿದೆ.

‘ಹೃದಯ ಹೊಲವನ್ನು ಮಾಡಿ ತನುವ ನೇಗಿಲ ಮಾಡಿ’ ಕನಕದಾಸರ ಈ ಮೇಲಿನ ಕೀರ್ತನೆಯಲ್ಲಿ ಸಮಾಜದ ಪ್ರಗತಿಗೂ ಮತ್ತು ಮನುಷ್ಯನ ಏಳಿಗೆಗೂ ಕಾರಣವಾಗಿರುವುದೇ ಕೃಷಿ. ನೆಲದಲ್ಲಿ ಭತ್ತ, ರಾಗಿಯನ್ನು ಬೆಳೆಯುವುದಷ್ಟೇ ಕೃಷಿಯಲ್ಲ, ಮನದಲ್ಲಿ ಭಕ್ತಿಯ ವಿಚಾರಗಳನ್ನು ಬೆಳೆಸಿಕೊಳ್ಳುವುದು ಕೃಷಿಯೇ ಆಗಿದೆ. ಒಂದು ಹೊರಗಿನ ಕೃಷಿ, ಇನ್ನೊಂದುಒಳಗಿನ ಕೃಷಿ. ಈ ಎರಡರಲ್ಲೂ ಸಮನ್ವಯವನ್ನು ಸಾಽಸಿದವನೇ ಋಷಿ. ಕನಕದಾಸರು ದೇಹವನ್ನೇ ನೇಗಿಲಾಗಿಸಿಕೊಂಡು, ಮನಸ್ಸನ್ನೇ ಧಾನ್ಯವನ್ನಾಗಿ ನೋಡಬೇಕೆಂದು ವಿವರಿಸುತ್ತಾರೆ. ಆದರೆ ನಮ್ಮ ಇಂದಿನ ಸಮಾಜ ಸುಧಾರಣೆಯ ಪೈರುಗಳು ನಾಟಿ ಮಾಡುವ ಮೊದಲೇ ಒಣಗುತ್ತಿರುತ್ತವೆ. ಇದಕ್ಕೆ ಕಾರಣ ನಾವು ಬಿತ್ತಿರುವ ಬೀಜದಲ್ಲಿ ಮರೆಯಾಗಿರುವ ಅಧ್ಯಾತ್ಮದ ಸತ್ವ, ಕಾಮ, ಕ್ರೋಧ, ಮದ,ಮತ್ಸರಗಳಿಂದ ಕಳೆಗಳ ದಾರಿಯಲ್ಲಿ ನಮ್ಮ ಬಾಳ ಬೆಳೆಯು ಬಾಡುತ್ತಿರುವುದನ್ನೇ ನಾವು ಗಮನಿಸುತ್ತಿಲ್ಲ. ತಿರುಪತಿಯ ಶ್ರೀ ವೆಂಕಟೇಶ್ವರ ಕಲ್ಯಾಣ ಮಹೋತ್ಸವ ನೋಡಲು ಬೆಟ್ಟವನ್ನು ಹತ್ತುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಕನಕದಾಸರನ್ನು ಎಂದೂ ನೋಡದ ಚಿನ್ನಪ್ಪನು ಭಿಕ್ಷುಕನಂತೆ ಬರುತ್ತಿದ್ದ ಕನಕದಾಸರನ್ನೇ ‘ಏ ದಾಸಯ್ಯ ನಿನಗೇನಾದರೂ ಕನಕದಾಸರು ಯಾರೆಂಬುದು ಗೊತ್ತೇ? ಅವರು ಈಗ ಎಲ್ಲಿದ್ದಾರೆ ಹೇಳು? ಎಂದು ಕೇಳುತ್ತಾನೆ. ಆಗ ಕನಕದಾಸರು ‘ಆತ ಹಿಂದೆಬರುವ ಯಾತ್ರಿಕರ ಮುಂದೆ ಮತ್ತು ಮುಂದೆ ಹೋಗುವ ಯಾತ್ರಿಕರ ಹಿಂದೆ’ ಇದ್ದಾನೆ ಎಂದು ಉತ್ತರಿಸಿ ಮುಂದೆ ನಡೆದರು. ಈ ಒಂದು ಮಾತು ಕನಕದಾಸರ ಇಡೀ ವ್ಯಕ್ತಿತ್ವವನ್ನು ಹಿಡಿದಿಟ್ಟಿದೆ. ಯಾತ್ರಿಕರು ಎಂದಾಗ ಕುಲದ ಮಾತೇ ಬರುವುದಿಲ್ಲ. ಅಲ್ಲದೆ ಇಲ್ಲಿ ನಾಯಕ ಮತ್ತು ಅನುಯಾಯಿಗಳಿಗೆ ಸ್ಥಾನವೇ ಇಲ್ಲ. ಕನಕದಾಸರು ಜನ ಸಮುದಾಯದೊಳಗೆ ಜನಸಾಮಾನ್ಯರಂತೆ ಇದ್ದರು.  ಭಕ್ತಿ ಪಂಥದಲ್ಲಿ ಹಿಂದೆ ತಮಗಿಂತ ಎಷ್ಟೋ ಜನ ಬಂದು ಹೋಗಿದ್ದಾರೆ, ಮುಂದೆ ಎಷ್ಟೋ ಜನ ಬರಲಿದ್ದಾರೆ. ಕನಕದಾಸರು ತಾವು ನಡುವೆ ಇರುವ ಒಬ್ಬ ಭಕ್ತ ಎಂಬ ತತ್ವವನ್ನು ಸ್ಪಷ್ಟಪಡಿಸಿದ್ದಾರೆ.‘ಎನಗಿಂತ ಕಿರಿಯರಿಲ್ಲ’ ಎಂಬ ಬಸವಣ್ಣನವರ ಮಾತು ಕನಕದಾಸರ ಈ ನಿಲುವನ್ನು ಸ್ಪಷ್ಟಪಡಿಸುತ್ತದೆ.

‘ಯಾರು ನೋಡದಿದ್ದರೂ ದೇವರು ನೋಡುವನು’ ಎಂಬ ಕನಕದಾಸರ ಅಲೌಕಿಕ ಭಕ್ತಿ ಅನನ್ಯವಾದದ್ದು. ನಾನು ಏನು ಮಾಡಿದರೂ ಜಗತ್ತಿಗೆತಿಳಿಯುತ್ತದೆ ಎಂಬ ಲೌಕಿಕ ಎಚ್ಚರವಾದರೂ ಇದ್ದರೆ ದೇವರು ಅಷ್ಟುಭಾಗವಾಗಿದ್ದಾನೆ ಎಂಬುದು ಇದರ ಅರ್ಥ. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಸತ್ಯ, ಜೈವಿಕ ಸತ್ಯ ಮತ್ತು ಆಧ್ಯಾತ್ಮಿಕ ಸತ್ಯವನ್ನು ಸಾರುವ ಮೂಲಕ ವ್ಯಕ್ತಿ ಮತ್ತು ಸಮಾಜ ಹೇಗಿರಬೇಕು ಎಂಬುದನ್ನು ತಮ್ಮ ದಾಸವಾಣಿಯ ಮೂಲಕ ತಿಳಿಸಿದ್ದಾರೆ. ಕನಕದಾಸರು ಆರಂಭದಲ್ಲಿ ಪಾಳೆಯಗಾರನ ಮಗನಾಗಿ ತಂಬು ಸಂಪತ್ತಿನ ಒಡನಾಟ ಇದ್ದರೂ ಅದನ್ನು ಮೀರಿ ಸೇನಾ ದಂಡನಾಯಕನಾಗಿ ಸಾವು ನೋವುಗಳಿಗೆ ಮರುಗಿ ಶಸ್ತ್ರಾಸ್ತ್ರವನ್ನು ತ್ಯಜಿಸುತ್ತಾರೆ. ತಮ್ಮನ್ನು ಅವಮಾನಿಸಿ,ಹಿಂಸಿಸಿ ಗಾಯಗೊಳಿಸಿದ ಜಾತಿ ವ್ಯವಸ್ಥೆ ಮತ್ತು ಹಲವು ಅನಿಷ್ಟ ವಿಚಾರಗಳಿಗೆ ಪ್ರತಿಕ್ರಿಯೆಯಾಗಿ ತಮ್ಮ ಸಾಹಿತ್ಯವನ್ನುಕವಿಯಾಗಿ ಕಟ್ಟುತ್ತಾ ಹೋಗುತ್ತಾರೆ. ಕಾವ್ಯ ಕಟ್ಟುವ ಸಂದರ್ಭದಲ್ಲಿ ಸೃಷ್ಟಿಸಿದ ರೂಪಕಗಳು ,ಚಿತ್ರಿಸಿದ ಸನ್ನಿವೇಶಗಳು ಮತ್ತು ಪಾತ್ರಗಳ ಮೂಲಕ ಕನ್ನಡ ಜನ ಸಮುದಾಯದಲ್ಲಿ ಎಚ್ಚರಿಕೆಯ ಧ್ವನಿಯಾಗಿ ಸಮಾಜದ ಕೊಳಕನ್ನು ತೊಳೆಯಲು ಪ್ರಯತ್ನಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಒಪ್ಪಿಕೊಂಡವರು, ಒಪ್ಪಿಕೊಂಡಿರುವರು ಮತ್ತು ಅಪ್ಪಿಕೊಂಡಿದ್ದು ಜಾತಿಯ ಕಾರಣಕ್ಕೆ, ಹಾಗೆಯೇಅವರನ್ನು ಒಪ್ಪದವರು, ದೂರತಳ್ಳುತ್ತಿರುವುದು ಜಾತಿಯ ಕಾರಣಕ್ಕೆ. ಆದರೆಇವರ ಮಾನವೀಯ ಮೌಲ್ಯಗಳನ್ನು, ತತ್ವ ಸಿದ್ಧಾಂತಗಳನ್ನು ಮತ್ತು ಸಾಮಾಜಿಕ ಕಳಕಳಿಯನ್ನು ಅರ್ಥ ಮಾಡಿಕೊಂಡಿರುವವರು ಬಹಳ ವಿರಳ. ಆದ್ದರಿಂದಲೇ ನಮ್ಮ ಭಾರತವು ಇಂದಿಗೂ ಜಾತಿ-ಧರ್ಮ ಎಂಬ ನಂಜಿನಿಂದ ನರಳುತ್ತಿದೆ.ಇಂತಹ ಮಹನೀಯರ ಜಯಂತಿ ಆಚರಣೆಯ ಮೂಲಕ ಅವರ ತತ್ವ ಸಿದ್ಧಾಂತಗಳನ್ನು ಮನೆ- ಮನೆಗೆ ಮತ್ತು ಮನಸ್ಸು- ಮನಸ್ಸುಗಳಿಗೆ ತಲುಪಿಸಬೇಕಾಗಿದೆ. ಕೇವಲ ಸಾಂಕೇತಿಕವಾಗಿ ಜಯಂತಿಗಳನ್ನು ಆಚರಿಸುವ ಬದಲು ಒಳ್ಳೆಯ ಸಂಕಲ್ಪ ಮಾಡಲು ಜಯಂತಿಯನ್ನು ಆಚರಿಸಬೇಕಿದೆ.

” ಕನಕದಾಸರು ಆರಂಭದಲ್ಲಿ ಪಾಳೆಯಗಾರನ ಮಗನಾಗಿ ತಂಬು ಸಂಪತ್ತಿನ ಒಡನಾಟ ಇದ್ದರೂ ಅದನ್ನು ಮೀರಿ ಸೇನಾ ದಂಡನಾಯಕನಾಗಿ ಸಾವು ನೋವುಗಳಿಗೆ ಮರುಗಿ ಶಸ್ತ್ರಾಸ್ತ್ರವನ್ನು ತ್ಯಜಿಸುತ್ತಾರೆ. ತಮ್ಮನ್ನು ಅವಮಾನಿಸಿ, ಹಿಂಸಿಸಿ ಗಾಯಗೊಳಿಸಿದ ಜಾತಿ ವ್ಯವಸ್ಥೆ ಮತ್ತು ಹಲವು ಅನಿಷ್ಟ ವಿಚಾರಗಳಿಗೆ ಪ್ರತಿಕ್ರಿಯೆಯಾಗಿ ತಮ್ಮ ಸಾಹಿತ್ಯವನ್ನು ಕವಿಯಾಗಿ ಕಟ್ಟುತ್ತಾ ಹೋಗುತ್ತಾರೆ. ಕಾವ್ಯ ಕಟ್ಟುವ ಸಂದರ್ಭದಲ್ಲಿ ಸೃಷ್ಟಿಸಿದ ರೂಪಕಗಳು,ಚಿತ್ರಿಸಿದ ಸನ್ನಿವೇಶಗಳು ಮತ್ತು ಪಾತ್ರಗಳ ಮೂಲಕ ಕನ್ನಡ ಜನ ಸಮುದಾಯದಲ್ಲಿ ಎಚ್ಚರಿಕೆಯ ಧ್ವನಿಯಾಗಿ ಸಮಾಜದ ಕೊಳಕನ್ನು ತೊಳೆಯಲು ಪ್ರಯತ್ನಿಸಿದರು.”

ಆಂದೋಲನ ಡೆಸ್ಕ್

Recent Posts

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

2 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

2 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

2 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

3 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

3 hours ago

ಕಿಚ್ಚ ಸುದೀಪ್‌ ಮಾರ್ಕ್‌ ಟ್ರೈಲರ್‌ ಅದ್ಧೂರಿ ಬಿಡುಗಡೆ

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್‌ ಸಿನಿಮಾ ಟ್ರೈಲರ್‌ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್‌ ಕಾರ್ತಿಕೇಯ-ಸುದೀಪ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…

3 hours ago