ಪ್ರೊ.ಆರ್.ಎಂ. ಚಿಂತಾಮಣಿ
ಇತ್ತೀಚಿನ ತನ್ನ ಸಂಚಿಕೆಯಲ್ಲಿ ‘ಪಿರಿಯಾಡಿಕ್ ಲೇಬರ್ ಫೋಸ್ ರಿವ್ಯೂ’ ಮಾಸಿಕವು ಪ್ರಕಟಿಸಿದ ವರದಿಯಂತೆ ನಮ್ಮ ದೇಶದಲ್ಲಿ ಕಾರ್ಮಿಕ ರಂಗದಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯು ಶೇ.೩೩.೨ ಮಾತ್ರ ಇದ್ದು ಜಾಗತಿಕ ಮಟ್ಟಕ್ಕಿಂತ ತೀರ ಕಡಿಮೆ ಇದೆ ಎಂದು ಹೇಳಿದೆ ಮತ್ತು ಭಾರತದಲ್ಲಿ ನಿರುದ್ಯೋಗ ಪ್ರಮಾಣ ಶೇ.೫.೬ ಇದ್ದರೂ ೧೫ರಿಂದ ೨೯ ವರ್ಷ ವಯಸ್ಸಿನ ಯುವಕ, ಯುವತಿಯರಲ್ಲಿ ಇದು ಶೇ.೧೫.೦ ಇದೆ ಎಂದೂ ವರದಿ ಮಾಡಿದೆ. ಇದನ್ನು ಸರಿಪಡಿಸುವ ತುರ್ತು ಅವಶ್ಯಕತೆ ಇದೆ ಎಂದೂ ಅಭಿಪ್ರಾಯಪಟ್ಟಿದೆ.
ಇದರ ಪರಿಣಾಮವೆಂಬಂತೆ ಕೇಂದ್ರ ಸರ್ಕಾರ ಈ ತಿಂಗಳ ಮೊದಲ ವಾರದಲ್ಲಿ ಕೈಗಾರಿಕಾ ರಂಗದಲ್ಲಿ ವಿಶೇಷವಾಗಿ ಉತ್ಪಾದಕ ಉದ್ದಿಮೆಗಳಲ್ಲಿ ಉದ್ಯೋಗಾವಕಾಶಗಳ ಹೆಚ್ಚಳಕ್ಕಾಗಿ ಉತ್ತೇಜಕ ಯೋಜನೆಯೊಂದನ್ನು ಪ್ರಕಟಿಸಿದೆ. ಯೋಜನೆಯಡಿಯಲ್ಲಿ ಸರ್ಕಾರ ಇದೇ ಆಗಸ್ಟ್ ಒಂದರಿಂದ ಎರಡು ವರ್ಷಗಳವರೆಗೆ ‘ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ಉತ್ತೇಜಕ’ವೆಂದು (Employment Linked Incentive) ಒಟ್ಟು ೯೯,೪೪೬ ಕೋಟಿ ರೂ.ಗನ್ನು ವೆಚ್ಚ ಮಾಡಲಿದೆ. ಇದರಿಂದ ಒಟ್ಟು ೩ ಕೋಟಿ ೫೦ ಲಕ್ಷ ಉದ್ಯೋಗಾವಕಾಶಗಳು ಹೆಚ್ಚಾಗಿ ಸೃಷ್ಟಿಯಾಗಲಿವೆ ಎಂದೂ ಸರ್ಕಾರ ಹೇಳಿದೆ. ೨೦೨೪ – ೨೫ರ ಮುಂಗಡಪತ್ರದಲ್ಲಿಯ ಪ್ರಸ್ತಾವನೆಗಳ ಮುಂದುವರಿದ ಭಾಗ ಇದಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಯೋಜನೆಯಲ್ಲಿ ಎರಡು ಭಾಗಗಳಿದ್ದು ಭಾಗ ಎ ಉದ್ಯೋಗಿಗಳಿಗೆ ಸಂಬಂಧಿಸಿದ ಉತ್ತೇಜಕಗಳ ವಿವರ ಹೊಂದಿದ್ದು, ಭಾಗ ಬಿಯಲ್ಲಿ ಉದ್ಯೋಗದಾತರ ಉತ್ತೇಜಕಗಳನ್ನು ವಿವರಿಸಲಾಗಿದೆ. ನಿಗದಿತ ದಿನಾಂಕ ದಿಂದ (ಆ.೧, ೨೦೨೫) ನೇಮಕಗೊಳ್ಳುವ ಒಂದು ಲಕ್ಷ ರೂ.ಗಳವರೆಗೆ ಮಾಸಿಕ ಸಂಬಳ ಪಡೆಯುವ ಪ್ರತಿಯೊಬ್ಬ ನೌಕರನಿ/ಳಿಗೆ ಮೊದಲ ಎರಡು ವರ್ಷಗಳವರೆಗೆ ಪ್ರತಿವರ್ಷ ಒಂದು ತಿಂಗಳ ಸಂಬಳವನ್ನು ಅತಿ ಹೆಚ್ಚು ೧೫,೦೦೦ ರೂ.ಗಳನ್ನು ಕೊಡಲಾಗುವುದು. ಈ ಮೊತ್ತದ ಅರ್ಧವನ್ನು ಕೆಲಸಕ್ಕೆ ಸೇರಿದ ಆರು ತಿಂಗಳ ಕೊನೆಯಲ್ಲಿ ಕೊಡಲಾಗುವುದು. ಉಳಿದರ್ಧವನ್ನು ವರ್ಷ ಪೂರೈಸಿದ ಕೂಡಲೆ ನೌಕರನಿ/ಳಿಗೆ ಕೊಡಲಾಗುವುದು. ಎರಡನೆಯ ವರ್ಷವೂ ಇದೇ ರೀತಿ ವರ್ಗಾವಣೆ ಮಾಡಲಾಗುವುದು. ಉತ್ಪಾದಕ ಕಂಪೆನಿಯಲ್ಲಾಗಿದ್ದರೆ (Manufacturing Company) ಈ ಪ್ರಕ್ರಿಯೆ ಇನ್ನೆರಡು ವರ್ಷಗಳವರೆಗೆ ಮುಂದುವರಿಯುವುದು.
ಉದ್ಯೋಗದಾತ ಕಂಪೆನಿಗಳಿಗೂ ಉತ್ತೇಜಕವಿದೆ. ಹೊಸ ನೌಕರರ ನೇಮಕಾತಿ ಮತ್ತು ನಿರ್ವಹಣೆಯ ವೆಚ್ಚಗಳಲ್ಲಿ ಸ್ವಲ್ಪ ಭಾಗವನ್ನು ಕಂಪೆನಿಗಳಿಗೆ ಉತ್ತೇಜಕವಾಗಿ (Subsidy) ಸರ್ಕಾರ ಭರಿಸಲಿದೆ. ನೇಮಕ ಮಾಡಿಕೊಂಡ ಪ್ರತಿಯೊಬ್ಬ ನೌಕರನ/ಳ ಬಾಬ್ತು ಕಂಪೆನಿಗೆ ಸರ್ಕಾರವು ತಿಂಗಳಿಗೆ ೩,೦೦೦ ರೂ. ನೀಡಲಿದೆ. ಇದು ಎರಡು ವರ್ಷಗಳವರೆಗೆ ಮುಂದುವರಿಯಲಿದೆ. ಉತ್ಪಾದಕ ಕಂಪೆನಿಗಳಲ್ಲಿ ಇನ್ನೆರಡು ವರ್ಷಗಳಿಗೆ ವಿಸ್ತರಿಸಲಾಗುವುದು. ಇದಿಷ್ಟೇ ಯೋಜನೆಯ ಸಂಕ್ಷಿಪ್ತ ವಿವರ.
ಯೋಜನೆಯ ಉದ್ದೇಶಗಳು: ಮೇಲ್ನೋಟಕ್ಕೆ ಅರ್ಥ ವ್ಯವಸ್ಥೆಯಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಇದೆ ಎಂದು ಕಂಡರೂ ಖಾಸಗಿ ವಲಯದಲ್ಲಿ ಚಟುವಟಿಕೆಗಳು ವಿಸ್ತರಣೆಗೊಂಡು ಉದ್ಯೋಗಾವಕಾಶಗಳನ್ನು ಸೃಷ್ಟಿಸುವಂತಾಗಬೇಕೆಂಬುದೂ ಇಲ್ಲಿಯ ಉದ್ದೇಶಗಳಲ್ಲಿ ಒಂದು. ಇದಲ್ಲದೆ ಅಸಂಘಟಿತ ವಲಯದಿಂದ (Informal Sector) ಉದ್ಯೋಗಿಗಳನ್ನು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಸಂಘಟಿತ ವಲಯಕ್ಕೆ (Formal sector) ಆಕರ್ಷಿಸುವುದೂ ಒಂದು ಮಹತ್ವದ ಉದ್ದೇಶವಾಗಿದೆ. ಅಲ್ಲಿ ಅವರು ಕಡಿಮೆ ಸಂಬಳಕ್ಕೆ ಅನಿಶ್ಚಿತ ಉದ್ಯೋಗ ಭದ್ರತೆಯೊಂದಿಗೆ ದುಡಿಯಬೇಕಾಗಿರುತ್ತದೆ. ಮತ್ತು ಅವರ ಸೇವೆಯ ಫಲಗಳೂ ಪೂರ್ಣವಾಗಿ ಲೆಕ್ಕಕ್ಕೆ ಸಿಗುವುದಿಲ್ಲ. ಇಲ್ಲಿ ಭದ್ರತೆ ಇತ್ತು ನಿಖರತೆಯೊಂದಿಗೆ ಭವಿಷತ್ತಿನಲ್ಲಿ ಉನ್ನತೀಕರಣಕ್ಕೂ ಸಾಕಷ್ಟು ಅವಕಾಶಗಳಿರುತ್ತವೆ.
ಸಂಘಟಿತ ವಲಯದಲ್ಲಿ ಉದ್ಯೋಗಾವಕಾಶಗಳು ಮತ್ತು ಉದ್ಯೋಗಿಗಳ ಸಂಖ್ಯೆ ಹೆಚ್ಚಾದರೆ ಆರ್ಥಿಕ ಬೆಳವಣಿಗೆ ತೀವ್ರಗೊಂಡು ಸಾಮಾಜಿಕ – ಆರ್ಥಿಕ ಪ್ರಗತಿಗೆ ಹೆಚ್ಚು ನಿಖರವಾದ ಆಧಾರ ಸಿಗುತ್ತದೆ. ಉದ್ಯೋಗ ಮತ್ತು ನಿರುದ್ಯೋಗ ಅಂಕಿಸಂಖ್ಯೆಗಳು ನಿಖರವಾಗಿ ದೊರೆಯುವುದರಿಂದ ಸರ್ಕಾರಕ್ಕೆ ನೀತಿ ರೂಪಿಸಲು ಅನುಕೂಲವಾಗುತ್ತದೆ. ಸಂಘಟಿತ ವಲಯದಲ್ಲಿಯ ನೌಕರರ ಕೌಟುಂಬಿಕ ಆರ್ಥಿಕ ಸ್ಥಿತಿ ಸುಭದ್ರವಾಗಿರುವುದರಿಂದ ಕೌಟುಂಬಿಕ ಉಳಿತಾಯಗಳು, ಹೆಚ್ಚಾಗುವುದಲ್ಲದೆ, ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಠೇವಣಿಗಳಾಗಿ ಪರಿವರ್ತನೆಗೊಂಡು ಆರ್ಥಿಕ ಪ್ರಗತಿಗಾಗಿ ಉಪಯುಕ್ತ ಸಂಪನ್ಮೂಲಗಳಾಗಿ ಉಪಯೋಗವಾಗುತ್ತವೆ. ಕಾರ್ಪೊರೇಟ್ ವಲಯ ಮೊದಲಿನಂತೆ ಕೆಲವೇ ಜನರ ಕೈಯಲ್ಲಿ ಮತ್ತು ದೊಡ್ಡ ನಗರಗಳಲ್ಲಿ ಮಾತ್ರ ಉಳಿದಿಲ್ಲ. ದೇಶಾದ್ಯಂತ ವಿಸ್ತರಣೆಗೊಂಡು ಸಣ್ಣ ಪಟ್ಟಣಗಳಿಗೂ ಬಂದಿರುತ್ತದೆ. ಚಟುವಟಿಕೆಗಳೂ ಹಳ್ಳಿಗಳವರೆಗೆ ಬಂದಿವೆ. ಉದ್ಯೋಗಾವಕಾಶಗಳೂ ಹೆಚ್ಚಿವೆ. ಇಂಥ ಸಮಯದಲ್ಲಿ ಈ ಯೋಜನೆ ಸೂಕ್ತವಾಗಿದೆ.
ಕೌಶಲಾಭಿವೃದ್ಧಿ, ಶಿಕ್ಷಣ ಸಂಸ್ಥೆಗಳೊಡನೆ ಸಂಬಂಧ ಸರ್ವಾಂಗೀಣ ಜನ ಕಲ್ಯಾಣಕ್ಕೆ ಇಂಥ ಯೋಜನೆಗಳಷ್ಟೇ ಸಾಲದು. ನಮ್ಮ ವ್ಯವಸ್ಥೆಯಲ್ಲಿನ ಕೆಲವು ಮೂಲಭೂತ ಕೊರತೆಗಳತ್ತ ಗಮನ ಹೆಚ್ಚಿಸಬೇಕು. ಮೊದಲು ಕಾರ್ಮಿಕ ಕಾಯ್ದೆಗಳಲ್ಲಿ ಸುಧಾರಣೆಗಳಾಗಬೇಕು. ಈಗಿರುವ ಕಾಯ್ದೆಗಳು ವಕೀಲರ ಸಹಾಯವಿಲ್ಲದೆ ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಮೊದಲು ಅವುಗಳನ್ನು ಸರಳಗೊಳಿಸಿ ಜನರಿಗೆ ಅರ್ಥವಾಗುವಂತೆ ಮಾಡಬೇಕು.
ಮೊದಲು ನಮ್ಮ ಶಿಕ್ಷಣ ವ್ಯವಸ್ಥೆ ಜ್ಞಾನ ದಾನ ಮಾಡುವ ಕೆಲಸವನ್ನಷ್ಟೇ ಮಾಡುತ್ತಿತ್ತು. ಉದ್ಯೋಗ ಮತ್ತು ನೌಕರಿಗಳಿಗೆ ಜ್ಞಾನವಲ್ಲದೆ ಬೇಕಾಗುವ ಕನಿಷ್ಠ ಸಾಮಾನ್ಯ ಕೌಶಲಗಳೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ದೊರೆಯುತ್ತಿರಲಿಲ್ಲ. ನೌಕರಿ ಗಿಟ್ಟಿಸಿಕೊಂಡ ನಂತರ ಅದರಲ್ಲಿ ಉಳಿಯಬೇಕಾದರೆ, ಅವುಗಳನ್ನು ಕಲಿಯಬೇಕಾಗುತ್ತಿತ್ತು. ಇತ್ತೀಚಿನ ದಶಕಗಳಲ್ಲಿ ಕೆಲವು ಕೌಶಲಗಳನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಲಾಗುತ್ತಿದೆ. ಇನ್ನೂ ಬೇಕು. ನಿರಂತರ ಹೆಚ್ಚಿಸಬೇಕು. ತಂತ್ರಜ್ಞಾನ ಮತ್ತು ವೃತ್ತಿ ಶಿಕ್ಷಣ ವ್ಯವಸ್ಥೆಯಲ್ಲಿ ಸೇರಬೇಕಿದೆ, ಮಾಧ್ಯಮಿಕ ಮತ್ತು ಹೈಯರ್ ಸೆಕೆಂಡರಿವರೆಗೂ ಇಳಿಯಬೇಕಿದೆ. ವಿವಿಧ ಕೌಶಲಗಳ ಪ್ರಾಥಮಿಕ ಮಾಹಿತಿಯಾದರೂ ಸೇರಿಕೊಳ್ಳಬೇಕು.
ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗದಾತರಾದ ಕಂಪೆನಿಗಳು ಮತ್ತು ವೃತ್ತಿನಿರತರ ನಡುವೆ ನೇರವಾದ ಸಂಬಂಧವಿದ್ದು ಅವರಿಗೆ ಬೇಕಾದುದನ್ನು ಕಲ್ಪಿಸಿ ತರಬೇತು ಕೊಡುವುದು ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಬೇಕಾಗಿದೆ. ಇಂಥ ಸಂಬಂಧ ನೈಸರ್ಗಿಕವಾಗಿ ತಾನೇ ತಾನಾಗಿ ನಿರ್ಮಾಣವಾಗುವಂತೆ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ನಮ್ಮ ಪ್ರಧಾನಿಯವರ ಇಂಟರ್ನ್‌ಶಿಪ್ ಯೋಜನೆ ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅದೇ ರೀತಿ ದೇಶದಲ್ಲಿಯ ೧,೦೦೦ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ಗಳನ್ನು (ಐ.ಟಿ.ಐ.ಗಳನ್ನು) ಬರುವ ಐದು ವರ್ಷಗಳಲ್ಲಿ ಉನ್ನತೀಕರಣಗೊಳಿಸಿ ಕೌಶಲ ಕೇಂದ್ರಗಳನ್ನಾಗಿ ಪರಿವರ್ತಿಸುವ ಯೋಜನೆಯೂ ಸರಿಯಾಗಿ ಜಾರಿಗೊಳ್ಳಬೇಕು. ಅಲ್ಲದೆ, ಐದು ಉನ್ನತ ಮಟ್ಟದ ಶ್ರೇಷ್ಠತೆ ಮತ್ತು ಕೌಶಲ ಕೇಂದ್ರಗಳ ಸ್ಥಾಪನೆಯೂ ತೀವ್ರವಾಗಿ ಆಗಬೇಕು. ಇವೆಲ್ಲ ಪೂರಕ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಾಗ ಮಾತ್ರ ಉದ್ಯೋಗ ವ್ಯವಸ್ಥೆ ಪೂರ್ಣ.
” ಕಾರ್ಪೊರೇಟ್ ವಲಯ ಮೊದಲಿನಂತೆ ಕೆಲವೇ ಜನರ ಕೈಯಲ್ಲಿ ಮತ್ತುದೊಡ್ಡ ನಗರಗಳಲ್ಲಿ ಮಾತ್ರ ಉಳಿದಿಲ್ಲ. ದೇಶಾದ್ಯಂತ ವಿಸ್ತರಣೆಗೊಂಡು ಸಣ್ಣ ಪಟ್ಟಣಗಳಿಗೂ ಬಂದಿರುತ್ತದೆ. ಚಟುವಟಿಕೆಗಳೂ ಹಳ್ಳಿಗಳವರೆಗೆ ಬಂದಿವೆ. ಉದ್ಯೋಗಾವಕಾಶಗಳೂ ಹೆಚ್ಚಿವೆ. ಇಂಥ ಸಮಯದಲ್ಲಿ ಈ ಯೋಜನೆ ಸೂಕ್ತವಾಗಿದೆ”
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಮನೆಯೂಟ ಪೂರೈಕೆ ವಿಚಾರದಲ್ಲಿ ಕೋರ್ಟ್ ತನ್ನ ಆದೇಶ…
ಅಮೇರಿಕಾ: ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕಾದ ಪಡೆಗಳು ಬಂಧಿಸಿರುವ ಬೆನ್ನಲ್ಲೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು…
ತಮಿಳುನಾಡು: ಕರೂರು ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಇಂದು ನವದೆಹಲಿಯಲ್ಲಿ…
ಶ್ರೀಹರಿಕೋಟಾ: ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಪಿಎಸ್‌ಎಲ್‌ವಿ-C62 ರಾಕೆಟ್ ಮೂಲಕ EOS-N1 ಅನ್ವೇಷಾ ಸೇರಿದಂತೆ 16 ಉಪಗ್ರಹಗಳನ್ನು ಉಡಾವಣೆ ಮಾಡಿದೆ.…
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…
ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿಯ ಆತಂಕ ಮುಂದುವರಿದಿದ್ದು, ಹುಣಸೂರು ತಾಲ್ಲೂಕಿನ ಗುರುಪುರ ಸಮೀಪದ ಹೊಸೂರು ಗೇಟ್ ಬಳಿ ಹುಲಿ ದಾಳಿ…