ಮಾದಕ ವ್ಯಸನ: ಜಾಕಿಚಾನ್ ಮಗನೂ ಬಂಧನಕ್ಕೊಳಗಾಗಿದ್ದ!

– ಬಾ.ನಾ.ಸುಬ್ರಹ್ಮಣ್ಯ

ಮಾದಕ ದ್ರವ್ಯಗಳ ಅತಿಯಾದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರ ವ್ಯಸನ ಸಮಾಜದ ಮೇಲೆ, ವಿಶೇಷವಾಗಿ ಯುವಜನರ ಮೇಲೆ ಬೀರುವ ಪರಿಣಾಮ ಅತ್ಯಧಿಕ. ಎಲ್ಲ ದೇಶಗಳೂ ಇವುಗಳ ಅತಿಯಾದ ಬಳಕೆಯ ವಿರುದ್ಧ ಸಮರ ಸಾರಿವೆ. ಕಟ್ಟುನಿಟ್ಟಿನ ಕಾನೂನನ್ನು ಜಾರಿಗೆ ತಂದಿವೆ. ಆದರೆ ಅವುಗಳು ಎಷ್ಟರ ಮಟ್ಟಿಗೆ, ಯಾವ ಯಾವ ದೇಶಗಳಲ್ಲಿ ಜಾರಿಗೆ ಬಂದಿವೆ ಎನ್ನುವುದು ಮುಖ್ಯ.

ಬೆಳ್ಳಿತೆರೆ ಮತ್ತು ಕಿರುತೆರೆಯ ಮೇಲೆ ಕಾಣಿಸಿಕೊಳ್ಳುವವರು, ಅವುಗಳ ಹಿಂದೆ ಕೆಲಸ ಮಾಡುವವರು, ಅದರಲ್ಲೂ ತಾರಾ ವರ್ಚಸ್ಸನ್ನು ಪಡೆದವರಲ್ಲಿ ಹೆಚ್ಚಿನವರು ತಮ್ಮ ಮೋಜು, ರಂಜನೆಗಾಗಿ ಮಾದಕ ದ್ರವ್ಯಗಳನ್ನು ಬಳಸುವುದು ಬಹಿರಂಗ ಗುಟ್ಟು. ಅದು ಹಾಲಿವುಡ್ ಇರಲಿ, ಭಾರತೀಯ ಚಿತ್ರರಂಗದ ಯಾವುದೇ ಭಾಷಾವಲಯಗಳಿರಲಿ, ಅಲ್ಲಲ್ಲಿ ಇವುಗಳ ಬಳಕೆಯ ಸುದ್ದಿ, ಬಂಧನದ ಸುದ್ದಿ ಬರುತ್ತಲೇ ಇರುತ್ತವೆ. ಅತಿಯಾದ ಮಾದಕ ವ್ಯಸನ ಸಾಕಷ್ಟು ಮಂದಿಯ ವೃತ್ತಿಗೆ ಎರವಾದದ್ದಿದೆ. ಜೀವಕ್ಕೂ…

ಕಳೆದ ವರ್ಷ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ, ಹಿಂದಿ ಚಿತ್ರರಂಗದ ಬಹುತೇಕ ಜನಪ್ರಿಯ ಮಂದಿಯ ಮನೆಗಳಿಗೆ ದಾಳಿ ನಡೆಯಿತು, ಹಲವರನ್ನು ಪ್ರಶ್ನಿಸಲಾಯಿತು. ಕನ್ನಡ ಚಿತ್ರರಂಗದಲ್ಲೂ ಅಂತಹದೇ ಬೆಳವಣಿಗೆಗಳಾದವು. ಚಿತ್ರರಂಗದ ಹಲವರನ್ನು ಪ್ರಶ್ನಿಸಲಾಯಿತು. ಕೆಲವರು ಬಂಧನಕ್ಕೂ ಒಳಗಾದರು.

ಜನಪ್ರಿಯ ವ್ಯಕ್ತಿಗಳ, ಅದರಲ್ಲೂ ತಾರಾ ವರ್ಚಸ್ಸಿನ ನಟನಟಿಯರನ್ನು ಅಭಿಮಾನಿಗಳು ಅನುಸರಿಸುವುದು ವಾಡಿಕೆ. ಅವರು ಅಭಿನಯಿಸುವ ಚಿತ್ರಗಳ ಪಾತ್ರಗಳಾಗಿರಬಹುದು, ಉಡುಗೆ ತೊಡುಗೆಗಳಾಗಿರಬಹುದು, ವೈಯಕ್ತಿಕ ಬದುಕಿನಲ್ಲಿ ಅವರ ನಡೆನುಡಿಗಳಾಗಿರಬಹುದು. ಮಾದಕ ದ್ರವ್ಯಗಳ ವ್ಯಸನ ಇವತ್ತು ಎಲ್ಲಿಯವರೆಗೆ ಇದೆ ಎಂದರೆ, ಪ್ರೌಢಶಾಲೆಯಲ್ಲಿ, ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಹಲವರು ಇದರ ದಾಸರಾಗಿದ್ದಾರೆ.

ವಿದ್ಯಾರ್ಥಿಗಳಲ್ಲಿ ಈ ಬೆಳವಣಿಗೆಗೆ ಅವರ ಹೆತ್ತವರು ಮತ್ತು ಸುಲಭವಾಗಿ ಅದು ಕಾನೂನು ಬಾಹಿರವಾಗಿ ಶಾಲೆ, ಕಾಲೇಜುಗಳ ಬಳಿ ದೊರೆಯುವುದು ಕಾರಣ. ಮೊನ್ನೆ ಹಿಂದಿಯ ಹೆಸರಾಂತ ನಟ ಶಾರುಕ್ ಖಾನ್ ಪುತ್ರ ಅಯಾನ್ ಖಾನ್ ಮತ್ತು ಆತನ ಸಹವರ್ತಿಗಳನ್ನು ಸಮದ್ರಯಾನದ ವೇಳೆ ಮಾದಕದ್ರವ್ಯ ಸೇವಿಸಿ, ಹಾಡಿಕುಣಿಯುವ ವೇಳೆ ಬಂಧಿಸಲಾಯಿತು. ದೇಶಾದ್ಯಂತ ಈ ಸುದ್ದಿ ಸಂಚಲನ ಉಂಟು ಮಾಡಿತು. ಹಿಂದಿ ಚಿತ್ರರಂಗದ ಹಲವು ಮಂದಿ ಶಾರುಕ್ ಖಾನ್ ಮನೆಯತ್ತ ಓಡೋಡಿ ಬಂದು ಅವರ ಜೊತೆ ತಾವು ಇರುವುದಾಗಿ ಹೇಳಿದರು. ಸುದ್ದಿವಾಹಿನಿಗಳಿಗೆ ಸಾಕಷ್ಟು ಗ್ರಾಸ ಆಯಿತೆನ್ನಿ. ಶಾರೂಖ್ ಅಭಿಮಾನಿಗಳು, ಅವರ ಮಗನಿಗೆ ತಾವು ಬೆಂಬಲಕ್ಕೆ ಇರುವುದಾಗಿ ಪ್ರಕಟಿಸಿದರು! ಕಾನೂನು ಪಂಡಿತರಲ್ಲಿ ಯಾರೋ ಒಬ್ಬರು, `ಆತ ಮಾದಕ ದ್ರವ್ಯ ಸೇವಿಸಿದ್ದು ಭಾರತದಲ್ಲಿ ಅಲ್ಲ, ಸಮುದ್ರದಲ್ಲಿ ತಾನೆ? ಅಲ್ಲಿ ಬಂಧಿಸಲು ಇವರಿಗೆ ಹಕ್ಕಿದೆಯೇ?ʼ ಎಂದೂ ಪ್ರಶ್ನಿಸಿದರು.

ಈ ಪ್ರಕರಣ ಆಗುತ್ತಲೇ ನೆನಪಾದದ್ದು, ಕುಂಗ್‌ಫು ಸಮರ ಕಲೆಯ ನಿಷ್ಣಾತ, ಹಾಲಿವುಡ್ ನಟ ಜಾಕಿಜಾನ್ ಮಗ, ಗಾಯಕ, ನಟ, ಜೊತೆಗೆ ಮಾದಕವ್ಯಸನಿ ಜೇಸಿಚಾನ್ ಇಂತಹದೇ ಪ್ರಸಂಗದಲ್ಲಿ ಬಂಧನಕ್ಕೊಳಗಾದ ಸಂದರ್ಭ. 2009ರಿಂದ ಜಾಕಿಚಾನ್ ಚೀನಾದ, ಮಾದಕದ್ರವ್ಯ ನಿಯಂತ್ರಣ ರಾಯಭಾರಿಯಾಗಿದ್ದರು. 2012ರಲ್ಲಿ ಅಧ್ಯಕ್ಷರಾಗಿ ಬಂದ ಕ್ಸಿಜಿಂಪಿಂಗ್ ಮಾದಕ ದ್ರವ್ಯವನ್ನು ಕಾನೂನುಬಾಹಿರವಾಗಿ ಬಳಸುವ ಮತ್ತು ಮಾರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರೂ, ಅದು ಸಾಕಷ್ಟು ಪರಿಣಾಮಕಾರಿ ಆಗಿರಲಿಲ್ಲ. 2014ರ ಜೂನ್ ತಿಂಗಳಲ್ಲಿ ಅವರು ಇದರ ವಿರುದ್ಧ ಕಠಿಣಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಮಾತ್ರವಲ್ಲ, ಮಾದಕದ್ರವ್ಯ ಸೇವನೆ, ವೇಶ್ಯಾಸಂಗ ಮಾಡಿದ ತಾರೆಯರ ಸಿನಿಮಾ, ಧಾರಾವಾಹಿಗಳ ಪ್ರಸಾರವನ್ನು ದೂರದರ್ಶನ, ಆನ್‌ಲೈನ್ ಮಾಧ್ಯಮ, ಚಲನಚಿತ್ರ ಮತ್ತು ಪ್ರಕಟಣೆಗೆ ಅನ್ವಯವಾಗುವಂತೆ ನಿಷೇಧಿಸುವ ಆದೇಶವನ್ನೂ ಹೊರಡಿಸಿದರು.

2014ರ ಜೂನ್‌ನಿಂದ ನಡೆದ ದಾಳಿಯಲ್ಲಿ ಚಲನಚಿತ್ರ ಮತ್ತು ದೂರದರ್ಶನ ತಾರೆಯರು, ಚಲನಚಿತ್ರ ನಿರ್ದೇಶಕರು ಮತ್ತು ಚಿತ್ರಸಾಹಿತಿ ಸೇರಿದಂತೆ ಹತ್ತು ಮಂದಿ ಸ್ಥಳೀಯ ತಾರೆಯರನ್ನು ಬಂಧಿಸಲಾಗಿತ್ತು. ಬೀಜಿಂಗ್‌ನಲ್ಲಿರುವ ಕಲಾವಿದರನ್ನು ಆಯ್ಕೆ ಮಾಡುವ 42 ತಂಡಗಳು, ಮಾದಕವ್ಯಸನಿಗಳನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪೊಲೀಸರ ಜೊತೆ ಒಪ್ಪಂದ ಮಾಡಿಕೊಂಡವು.

ಆಗಸ್ಟ್ ತಿಂಗಳ ಮೂರನೇ ವಾರ. ಜಾಕಿಚಾನ್ ಮಗ ಜೇಸಿಚಾನ್ ಮನೆಯ ಮೇಲೆ ದಾಳಿ ನಡೆದಾಗ ಆತ ತನ್ನ ಆತ್ಮೀಯರ ಜೊತೆ ಗಾಂಜಾ ಬಳಸುತ್ತಿದ್ದ, ಮಾತ್ರವಲ್ಲ ಅಲ್ಲಿ 100 ಗ್ರಾಂ ಗಾಂಜಾ ಸಂಗ್ರಹವೂ ಇತ್ತು. ಸ್ಥಳೀಯ ನ್ಯಾಯಾಂಗದ ಅನುಮತಿ ಪಡೆದು ಆತನನ್ನು ಬಂಧಿಸಲಾಯಿತು. ಗರಿಷ್ಠ ಮೂರು ವರ್ಷಗಳ ಜೈಲುವಾಸ ಶಿಕ್ಷೆಯ ಈ ಅಪರಾಧಕ್ಕೆ, ಜೇಸಿಗೆ ಆರು ತಿಂಗಳ ಜೈಲುಶಿಕ್ಷೆ ವಿಧಿಸಲಾಯಿತು. 32ರ ಹರೆಯದ ಜೇಸಿ, ತನಗೆ ಈ ಶಿಕ್ಷೆ ವಿಧಿಸಿದಾಗ, ʻನಾನು ಶಿಕ್ಷಾರ್ಹ ಅಪರಾಧ ಮಾಡಿದ್ದೇನೆ. ಅದರರ್ಥ ನನಗೆ ಕರುಣೆ ಮತ್ತು ಕ್ಷಮೆ ಸಿಕ್ಕಿದೆ ಎಂದಲ್ಲ. ಭವಿಷ್ಯದಲ್ಲಿ ಅದನ್ನು ಪಡೆಯಲು ನಾನು ಪ್ರಯತ್ನಿಸುತ್ತೇನೆʼ ಎಂದು ತಮ್ಮ ಬ್ಲಾಗ್‌ನಲ್ಲಿ ಹೇಳಿಕೊಂಡ. ನ್ಯಾಯಾಧೀಶರೂ, ವಿಚಾರಣೆಯ ವೇಳೆ ಆತನ ಸಹಕಾರವನ್ನು ಪ್ರಸ್ತಾಪಿಸುತ್ತಾ, ʻಸರಿದಾರಿಗೆ ಬಂದು ಸಮಾಜದಲ್ಲಿ ಆರೋಗ್ಯಪೂರ್ಣ ವರ್ಚಸ್ಸನ್ನು ಬೆಳಸಿಕೊಳ್ಳುವ ಅವಕಾಶ ಆತನಿಗೆ ಇದೆʼ ಎಂದಿದ್ದರು.

ತಮಗೆ ಮನೋವೇದನೆ ತಂದ ಘಟನೆ ಅಂದು ಎಂದ ಜಾಕಿಚಾನ್ ʻನನ್ನ ಮಗ ಜೇಸಿ ಒಳಗೊಂಡ ಘಟನೆಗೆ ಸಂಬಂಧಿಸಿದಂತೆ ನನಗೆ ಅತಿಯಾದ ಕೋಪವಿದೆ, ಆಘಾತಕ್ಕೆ ಒಳಗಾಗಿದ್ದೇನೆ. ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ನನಗೆ ನಾಚಿಕೆಯಾಗುತ್ತಿದೆ. ಒಬ್ಬ ತಂದೆಯಾಗಿ ಬೇಸರವಿದೆ. ಈ ಸುದ್ದಿ ಕೇಳಿ ಅವನ ತಾಯಿಯ ಎದೆಯೊಡೆದಿದೆʼ ಎಂದು ಹೇಳಿದ್ದರು. ಮಾತ್ರವಲ್ಲ, ತಮ್ಮ ಮಗನಿಗೆ ಹೇಳಿದ್ದನ್ನೂ ಅವರು ಪ್ರಸ್ತಾಪಿಸಿದ್ದರು: ʻನೀನು ಏನಾದರೂ ತಪ್ಪು ಮಾಡಿದ್ದರೆ, ಅದರ ಪರಿಣಾಮಗಳನ್ನು ಎದುರಿಸಬೇಕು. ನೀನು ನಡೆಯುವ ಮುಂದಿನ ದಾರಿಯಲ್ಲಿ ಎದುರಿಸಬೇಕಾದದ್ದನ್ನು ಎದುರಿಸಲು ತಂದೆಯಾಗಿ ನಾನು ನಿನ್ನ ಜೊತೆಗಿರುತ್ತೇನೆʼ.

ಜಾಕಿಚಾನ್ ತನ್ನ ಮಗನ ಈ ಪ್ರಕರಣದಲ್ಲಿ ಎಲ್ಲೂ ತಮ್ಮ ಅಧಿಕಾರವನ್ನಾಗಲಿ, ಜನಪ್ರಿಯತೆಯನ್ನಾಗಲಿ ಬಳಸಿಕೊಳ್ಳಲಿಲ್ಲ. ಮಾತ್ರವಲ್ಲ, ಮಗ ಜೈಲಿನಲ್ಲಿದ್ದಾಗ, ಒಮ್ಮೆಯೂ ಆತನನ್ನು ನೋಡಲೂ ಹೋಗಲಿಲ್ಲ. ನಂತರ ತಮ್ಮ ಸಂಪತ್ತಿನಲ್ಲಿ ಮಗನಿಗೆ ಯಾವುದೇ ಭಾಗ ನೀಡದಿರುವ ನಿರ್ಧಾರವನ್ನೂ ಮಾಡುತ್ತಾರೆ. ಅದಕ್ಕೆ ಈ ದುಶ್ಚಟ ಕಾರಣವಲ್ಲ ಬಿಡಿ. ʻಅವನು ದುಡಿದು ಗಳಿಸಲು ಸಮರ್ಥನಿದ್ದಾನೆ. ನನ್ನ ಸಂಪತ್ತಿನ ಅಗತ್ಯ ಆತನಿಗೆ ಇಲ್ಲʼ ಎಂದು ತಮ್ಮ ಸಮಸ್ತ ಆಸ್ತಿಯನ್ನೂ ತಮ್ಮ ಟ್ರಸ್ಟ್‌ಗೆ ನೀಡಲು ನಿರ್ಧರಿಸಿದ್ದಾರೆ.

ಇಂತಹದೊಂದು ಪ್ರಸಂಗ ನಾವು ಇಲ್ಲಿ ನಿರೀಕ್ಷಿಸುವುದು ಕನಸಿನಲ್ಲೂ ಸಾಧ್ಯವಿಲ್ಲವೇನೋ! ಇದಕ್ಕೊಂದು ಜ್ವಲಂತ ಉದಾಹರಣೆ, ನಟ ಸಲ್ಮಾನ್‌ಖಾನ್ ಅವರ ಮೇಲೆ ಇದ್ದ ಕೃಷ್ಣಮೃಗ ಬೇಟೆ ಮತ್ತು ರಾತ್ರಿ ಹೊತ್ತು ಕುಡಿದು ಕಾರು ಚಲಾಯಿಸಿ ಮುಂಬಯಿಯಲ್ಲಿ ರಸ್ತೆಯೊಂದರ ಫುಟ್‌ಪಾತ್‌ನಲ್ಲಿ ಮಲಗಿದ್ದವರನ್ನು ಸಾಯಿಸಿದ ಪ್ರಕರಣಗಳಿಂದ ಮುಕ್ತರಾದ ರೀತಿ. ಎರಡೂ ಪ್ರಸಂಗಗಳಲ್ಲಿ ಆತ ʻನಿರಪರಾಧಿʼ ಎಂದು ಸಾಬೀತಾದದ್ದು. ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಹಿಡಿದ ಕನ್ನಡಿ. ನೂರು ಜನ ಅಪರಾಧಿಗಳು ಶಿಕ್ಷೆಯಿಂದ ಪಾರಾದರೂ ಪರವಾಗಿಲ್ಲ, ಆದರೆ ನಿರಪರಾಧಿಗೆ ಯಾವುದೇ ಕಾರಣಕ್ಕೂ ಶಿಕ್ಷೆಯಾಗಬಾರದು ಎನ್ನುವ ಸಾಲಿನಲ್ಲಿ, ಸಲ್ಮಾನ್ ನೂರರಲ್ಲಿ ಒಬ್ಬರೋ ಅಥವಾ ಅವರೇ ಒಬ್ಬರೋ ಎನ್ನುವುದು ಈ ಘಟನೆಗಳನ್ನು ಗಮನಿಸಿದವರಿಗೆ ತಿಳಿಯುತ್ತದೆ. ಇದೊಂದೇ ಅಲ್ಲ, ಶಿಕ್ಷೆಯಾದ ಪ್ರಕರಣಗಳೂ ಇವೆ.

ಇದೀಗ ಶಾರುಕ್‌ಖಾನ್ ಮಗ ಅಯಾನ್ ಖಾನ್ ಪ್ರಕರಣ. ʻಚಿರಂಜೀವಿʼ ಜಾಲತಾಣಗಳು ಎಲ್ಲವನ್ನೂ ತಮ್ಮ ಹೊಟ್ಟೆಯಲ್ಲಿ ಹಾಗೆಯೇ ಉಳಿಸಿಕೊಳ್ಳುತ್ತವೆ. ಸಂದರ್ಶನವೊಂದರಲ್ಲಿ ತಮ್ಮ ಮಗನಿಗೆ ಎಲ್ಲ ಚಾಳಿಗಳೂ ಇರಬೇಕು ಎಂದು ಬಹಳ ಸಂಭ್ರಮದಲ್ಲಿ ಶಾರೂಕ್‌ಖಾನ್ ಹೇಳಿರುವುದು, ಈಗ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. ಅದರಲ್ಲಿ ಸಿಗರೇಟು ಸೇದುವುದು, ಮಾದಕದ್ರವ್ಯ ಸೇವನೆ, ಸೆಕ್ಸ್ ಎಲ್ಲವನ್ನೂ ಅವನು ಅನುಭವಿಸಲಿ ಎಂದು ಹೇಳಿದ್ದು ಈಗ ನಿಜವಾಗಿದೆ!

ಲಂಡನ್ ಮತ್ತು ಅಮೆರಿಕಗಳಲ್ಲಿ ಓದಿದ ಅಯಾನ್ ಮೊದಲಿನಿಂದಲೂ ಮಾದಕವ್ಯಸನಿ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಹಡಗುಗಳಲ್ಲಿ ಮೋಜು ಮಸ್ತಿಗಳಿಗಾಗಿಯೇ ಕ್ರೂಸ್ ಯಾನಗಳಿರುತ್ತವೆ. ಅಲ್ಲಿ ಭಾರಿ ಪಾರ್ಟಿಗಳಲ್ಲಿ ಮದ್ಯ, ಮಾನಿನಿಯರು ಜೊತೆಗೆ ತಮ್ಮನ್ನೇ ಮರೆಯುವಂತೆ ನಶೆಯೇರಿಸುವ ವಿವಿಧ ರೀತಿಯ ಮಾದಕ ದ್ರವ್ಯಗಳ ಸರಬರಾಜು ನಡೆಯುತ್ತಿರುತ್ತವೆ ಎನ್ನಲಾಗುತ್ತಿದೆ. ಅಲ್ಲಿ ಮಾತ್ರವಲ್ಲ, ರೇವ್ ಪಾರ್ಟಿ ಹೆಸರಲ್ಲಿ ನಡೆಯುವ ತಡರಾತ್ರಿ ಪಾರ್ಟಿಗಳೂ ಇಂತಹವುಗಳನ್ನು ಸರಬರಾಜನ್ನು ಮಾಡುತ್ತವೆ.

ಹಾಲಿವುಡ್, ಬಾಲಿವುಡ್ ಒತ್ತಟ್ಟಿಗಿರಲಿ, ನಮ್ಮಲ್ಲೂ ಇಂತಹ ಸಂತೋಷಕೂಟಗಳು ನಡೆಯುತ್ತವೆ. ಪೊಲೀಸರೂ ಅವುಗಳ ಹಿಂದೆ ಬಿದ್ದಿದ್ದಾರೆ. ಮುಂಬೈಯಲ್ಲಿ ಕಟ್ಟುನಿಟ್ಟಿನ ಅಧಿಕಾರಿ ಸಮೀರ್ ವಾಂಖಡೆಯ ಕಾರಣ ಅಯಾನ್‌ಗೆ ಬಂಧನವಾಗುತ್ತಲೇ ಹೊರಬರಲು ಯಾವುದೇ ಶಿಫಾರಸು ನೆರವಾಗಲಿಲ್ಲ ಎನ್ನಲಾಗಿದೆ. ಹಾಗೆಯೇ ಇಲ್ಲೂ ಆದರೆ ಚೆನ್ನ. ʻಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರುʼ ನಿಜ. ಆದರೆ ʻಕೆಲವೊಮ್ಮೆ, ಕೆಲವರು ಹೆಚ್ಚು ಸಮಾನರುʼ ಆಗಿಬಿಡುತ್ತಾರೆ. ಹಾಗಾಗಬಾರದು ಅಲ್ಲವೇ?

× Chat with us