ಇಸ್ರೇಲ್ ಮತ್ತು ಇರಾನ್ ನಡುವಣ ಯುದ್ಧ ಭೀಕರ ಸ್ವರೂಪ ತಾಳುತ್ತಿದೆ. ಇರಾನ್‌ನ ಪರಮಾಣು ಸಂಸ್ಕರಣಾ ಸ್ಥಾವರಗಳ ಮೇಲಿನ ಇಸ್ರೇಲ್ ಬಾಂಬ್ ದಾಳಿಯಿಂದ ಆರಂಭವಾದ ಯುದ್ಧ ಎಂಟು ದಿನ ಕಳೆದರೂ ಒಂದು ನಿರ್ಣಾಯಕ ಹಂತ ತಲುಪಿದಂತೆ ಕಾಣುತ್ತಿಲ್ಲ. ಇರಾನ್‌ನ ಬಹುಪಾಲು ಮಿಲಿಟರಿ ಅಧಿಕಾರಿಗಳನ್ನು, ಪರಮಾಣು ವಿಜ್ಞಾನಿಗಳನ್ನು ವೈಮಾನಿಕ ಬಾಂಬ್ ದಾಳಿಗಳಲ್ಲಿ ಕೊಲ್ಲಲಾಗಿದೆ. ಈ ದಾಳಿಗಳಿಗೆ ಜಗ್ಗದೆ ಇರಾನ್ ಪ್ರತಿದಾಳಿ ನಡೆಸುತ್ತಿದೆ. ಅಪಾರ ಸಾವು-ನೋವು ಕಳವಳಕಾರಿಯಾಗಿದೆ. ಇರಾನ್ ಪರಮಾಣು ಅಸ್ತ್ರ ತಯಾರಿಸುವುದನ್ನು ತಡೆಯುವುದೇ ಈ ದಾಳಿಯ ಗುರಿ ಎಂದು ಇಸ್ರೇಲ್ ಪ್ರಧಾನಿ ನೆತಾನ್ಯಹು ಮತ್ತೊಮ್ಮೆ ಘೋಷಿಸಿದ್ದಾರೆ. ಆದರೆ ಇಂಧನ ಮತ್ತಿತರೆ ನಾಗರಿಕ ಸೌಲಭ್ಯ ಕ್ಕಾಗಿ ಯುರೇನಿಯಂ ಸಂಸ್ಕರಣೆ ನಮ್ಮ ದೇಶದ ಹಕ್ಕು ಎಂದು ಇರಾನ್ ಅಧ್ಯಕ್ಷ ಮಸೂದ್ ಫೆಜೆಕಿಯಾನ್ ಹೇಳುತ್ತಿದ್ದಾರೆ.
ಈ ಎಂಟು ದಿನಗಳ ಯುದ್ಧದಲ್ಲಿ ಇರಾನ್‌ನಲ್ಲಿ ೨೫೦ಕ್ಕೂ ಹೆಚ್ಚು ಜನರು ಸತ್ತು ಎರಡು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರೆ, ಇರಾನ್ ಕ್ಷಿಪಣಿ ದಾಳಿಗಳಿಂದ ಇಸ್ರೇಲ್‌ನಲ್ಲಿ ೨೫ಕ್ಕೂ ಹೆಚ್ಚು ಮಂದಿ ಸತ್ತು, ೬೦೦ ಮಂದಿ ಗಾಯಗೊಂಡಿದ್ದಾರೆ. ಕ್ಷಿಪಣಿ ದಾಳಿಗಳಿಂದ ಎರಡೂ ಕಡೆ ಅಪಾರ ಆಸ್ತಿ-ಪಾಸ್ತಿ ನಾಶವಾಗಿದೆ. ಜನರು ಇರಾನ್‌ನ ರಾಜಧಾನಿ ಟೆಹರಾನ್‌ನಿಂದ, ಇಸ್ರೇಲ್‌ನ ರಾಜಧಾನಿ ಟೆಲ್ ಅವಿವ್ ನಗರಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವಲಸೆಹೋಗುತ್ತಿದ್ದಾರೆ. ಭಾರತವೂ ಸೇರಿದಂತೆ ಬೇರೆ ಬೇರೆ ದೇಶಗಳು ತಮ್ಮ ಜನರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿವೆ.
ಇಸ್ರೇಲ್‌ನ ದಕ್ಷಿಣ ಭಾಗದ ಪ್ರಮುಖ ನಗರವಾದ ಬೀರ್ ಸೇಬಾ ದಲ್ಲಿನ ಅತಿ ದೊಡ್ಡ ಸೊರೋಕಾ ಆಸ್ಪತ್ರೆಯ ಮೇಲೆ ಇರಾನ್ ನಡೆಸಿದ ಬಾಂಬ್ ದಾಳಿ ಯುದ್ಧದ ದಿಕ್ಕನ್ನೇ ಬದಲಿಸಿದೆ. ಇನ್ನು ಮುಂದೆ ಯುದ್ಧದ ಗುರಿ ಇರಾನ್‌ನ ವರಿಷ್ಠ , ಧಾರ್ಮಿಕ ನಾಯಕ ಅಲಿ ಖಮೇನಿ ಅವರ ಅಂತ್ಯ ಎಂದು ಇಸ್ರೇಲ್ ನ ರಕ್ಷಣಾ ಸಚಿವ ಕಟ್ಜ್ ಘೋಷಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಿರುವ ಇಸ್ರೇಲ್ ವಾಯುಪಡೆ ಇರಾನ್‌ನ ಪೂರ್ಣ ವಾಯು ಪ್ರದೇಶ ತನ್ನ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದೆ. ಆದರೆ ಇರಾನ್ ಕ್ಷಿಪಣಿ ದಾಳಿಯನ್ನು ಮುಂದುವರಿಸಿರುವುದನ್ನು ನೋಡಿದರೆ ಎಲ್ಲವೂ ಇಸ್ರೇಲ್ ಹೇಳಿದಂತೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇರಾನ್ ಸೂಪರ್‌ಸಾನಿಕ್ ಕ್ಷಿಪಣಿ ದಾಳಿ ಮತ್ತು ಕ್ಲಸ್ಟರ್ ಬಾಂಬ್ ದಾಳಿ ಮುಂದುವರಿಸಿದೆ. ಇಡೀ ಮಧ್ಯಪ್ರಾಚ್ಯಕ್ಕೆ ದೊಡ್ಡ ಬೆದರಿಕೆ ಇಸ್ರೇಲ್ ಎಂದು ಹೇಳಿರುವ ಇರಾನ್ ಧಾರ್ಮಿಕ ನಾಯಕ ಅಲಿ ಖಮೇನಿ ಶರಣಾಗುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಇದುವರೆವಿಗೆ ಅಮೆರಿಕ ನೇರವಾಗಿ ಈ ಯುದ್ಧದಲ್ಲಿ ಭಾಗಿಯಾಗಿಲ್ಲ. ಆದರೆ ಇಸ್ರೇಲ್‌ಗೆ ಎಲ್ಲ ರೀತಿಯ ಯುದ್ಧಾಸ್ತ್ರಗಳನ್ನು ಪೂರೈಸುತ್ತಿದೆ. ಇಸ್ರೇಲ್‌ಗೆ ಈ ನೆರವೇ ದೊಡ್ಡ ಶಕ್ತಿ. ಯುರೇನಿಯಂ ಸಂಸ್ಕರಣೆಗೆ ಸಂಬಂಧಿಸಿದ ಅನೇಕ ಸ್ಥಾವರಗಳು, ಪ್ರಯೋಗಾಲಯಗಳ ಮೇಲೆ ಇಸ್ರೇಲ್ ಈಗಾಗಲೇ ಬಾಂಬ್ ದಾಳಿ ನಡೆಸಿದೆ. ಟೆಹರಾನ್‌ಗೆ ೯೦ ಕಿ.ಮೀ. ದೂರದಲ್ಲಿರುವ ಫರ್ದೂ ಪರಮಾಣು ಸಂಸ್ಕರಣಾ ಘಟಕವನ್ನು ನಾಶ ಮಾಡಲು ಇನ್ನೂ ಇಸ್ರೇಲ್‌ನಿಂದ ಸಾಧ್ಯವಾಗಿಲ್ಲ. ಆ ಸ್ಥಾವರದ ಮೇಲೆ ಬಾಂಬ್ ದಾಳಿ ನಡೆದಿದೆಯಾದರೂ ಆ ಸ್ಥಾವರ ಬೆಟ್ಟದ ಒಳಗಡೆ ಸುಮಾರು ೩೦೦ ಅಡಿ ಆಳದಲ್ಲಿ ಇರುವುದರಿಂದ ನಾಶ ಮಾಡಲು ಸಾಧ್ಯವಾಗಿಲ್ಲ. ಅಷ್ಟು ಆಳಕ್ಕಿಳಿದು ಸ್ಛೋಟಿಸುವಂಥ ಬಾಂಬ್ಗಳು ಅಥವಾ ತಂತ್ರಜ್ಞಾನ ಇಸ್ರೇಲ್ ಬಳಿ ಇಲ್ಲ. ಆದರೆ ಅಮೆರಿಕದ ಬಳಿ ನೆಲದಾಳದಲ್ಲಿ ಸ್ಛೋಟಿಸುವ ಬಾಂಬರ್‌ಗಳು ಇವೆ. ಇಸ್ರೇಲ್ ಆ ಯುದ್ಧ ವಿಮಾನಗಳನ್ನು ನಿರೀಕ್ಷಿಸುತ್ತಿದೆ. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಯುದ್ಧಕ್ಕಿಳಿಯುವ ಬಗ್ಗೆ ಇನ್ನೂ ಡೋಲಾಯಮಾನ ಮನಸ್ಥಿತಿಯಲ್ಲಿದ್ದಾರೆ.
ಕೆನಡಾದಲ್ಲಿ ನಡೆದ ಜಿ-೭ ಅಭಿವೃದ್ಧಿ ದೇಶಗಳ ಶೃಂಗ ಸಭೆಯಿಂದ ಹಠಾತ್ತನೆ ವಾಷಿಂಗ್ಟನ್‌ಗೆ ವಾಪಸಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್-ಇಸ್ರೇಲ್ ಯುದ್ಧ ಕುರಿತಂತೆ ಭದ್ರತಾ ಸಲಹೆಗಾರರ ಜೊತೆ ಮಾತುಕತೆ ನಡೆಸಿದ್ದಾರೆ. ಇರಾನ್ ಪರಮಾಣು ಅಸ್ತ್ರ ತಯಾರಿಸಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಇರಾನ್‌ನ ಧಾರ್ಮಿಕ ನಾಯಕ ಅಲಿ ಖಮೇನಿ ಎಲ್ಲಿ ಅಡಗಿ ಕುಳಿತಿದ್ದಾರೆ ಎಂಬುದು ಅಮೆರಿಕಕ್ಕೆ ನಿಖರವಾಗಿ ಗೊತ್ತಿದೆ. ಆದರೆ ಅವರನ್ನು ಅಮೆರಿಕ ಕೊಲ್ಲಲು ಬಯಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಶರಣಾಗುವಂತೆ ಅಲಿ ಖಮೇನಿ ಅವರನ್ನು ಟ್ರಂಪ್ ಒತ್ತಾಯಿಸಿದ್ದಾರೆ. ಖಮೇನಿಯನ್ನು ಕೊಲ್ಲಲು ಇಸ್ರೇಲ್ ಪ್ರಧಾನಿ ನೆತಾನ್ಯಹು ಯೋಜಿಸಿದ್ದು ಅದಕ್ಕೆ ಟ್ರಂಪ್ ತಡೆಹಾಕಿದರು ಎಂದೂ ಹೇಳಲಾಗಿದೆ. ಅಮೆರಿಕದ ಮುಂದಿನ ನಡೆ ಒಂದೆರಡು ವಾರಗಳಲ್ಲಿ ಗೊತ್ತಾಗಲಿದೆ ಎಂದು ಟ್ರಂಪ್ ಹೇಳಿರುವುದು ಕುತೂಹಲ ಮೂಡಿಸಿದೆ. ಅಂದರೆ ಇರಾನ್ ಮತ್ತು ಇಸ್ರೇಲ್ ನಡುವೆ ಮಾತುಕತೆ, ಒಪ್ಪಂದವನ್ನು ಅವರು ನಿರೀಕ್ಷಿಸುತ್ತಿದ್ದಾರೆ ಎಂದು ಶ್ವೇತಭವನದ ವಕ್ತಾರರು ಹೇಳಿದ್ದಾರೆ. ಈ ಯುದ್ಧದಲ್ಲಿ ತಲೆಹಾಕಬೇಕೋ, ಬೇಡವೋ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನು ಟ್ರಂಪ್ ಮುಂದಕ್ಕೆ ಹಾಕಿರುವುದು ಅನೇಕ ಸಂಶಯಗಳಿಗೆ ಆಸ್ಪದ ನೀಡಿದೆ. ಇಸ್ರೇಲ್ ಮಿಲಿಟರಿಯೇ ಆ ಕೆಲಸ ಮಾಡಲಿ ಎಂಬ ಲೆಕ್ಕಾಚಾರವೂ ಇರಬಹುದು.
ಖಮೇನಿ ಹತ್ಯೆಯ ನಂತರ ಮುಂದೇನು ಎಂಬ ಬಗ್ಗೆ ಇನ್ನೂ ಚಿಂತನೆ ನಡೆಯದಿರುವುದು ತಮ್ಮ ನಿರ್ಧಾರ ಮುಂದಕ್ಕೆ ಹಾಕಲು ಕಾರಣ ಇರಬಹುದು. ಇರಾಕ್‌ನ ಅಧ್ಯಕ್ಷ ಸದ್ದಾಂ ಹುಸೇನ್ ಮತ್ತು ಲಿಬಿಯಾ ಅಧ್ಯಕ್ಷ ಗಡಾಫಿ ಹತ್ಯೆಯ ನಂತರ ಏನಾಯಿತು ಎನ್ನುವುದು ಎಲ್ಲರಿಗೂ ತಿಳಿದಿದೆ. ಹತ್ತು ವರ್ಷಗಳ ನಂತರವೂ ಆ ದೇಶಗಳಲ್ಲಿ ರಾಜಕೀಯ ಸ್ಥಿರತೆ ಸ್ಥಾಪಿತವಾಗಿಲ್ಲ. ಇಂದಿಗೂ ಆ ದೇಶಗಳು ಸಮಸ್ಯೆಯಲ್ಲಿ ಮುಳುಗಿವೆ. ಪ್ರಜಾತಂತ್ರ ವ್ಯವಸ್ಥೆ ಸ್ಥಾಪಿತವಾಗುವುದು ದೂರದ ಮಾತು. ಆ ದೇಶಗಳಲ್ಲಿ ಮತ್ತೆ ಧರ್ಮ ಆಧಾರಿತ, ಸರ್ವಾಧಿಕಾರಿ ಅಥವಾ ದುಷ್ಟರ ಕೂಟದ ಆಡಳಿತ ಜಾರಿಗೆ ಬಂದಿದೆ. ಖಮೇನಿಯನ್ನು ಕೊಂದರೆ ಬಹುಶಃ ಇರಾನ್‌ಗೂ ಅಂಥ ಸ್ಥಿತಿ ಬರುವುದಿಲ್ಲ ಎನ್ನುವ ಗ್ಯಾರಂಟಿ ಏನು ಎನ್ನುವ ಪ್ರಶ್ನೆ ಟ್ರಂಪ್ ಸೇರಿದಂತೆ ಎಲ್ಲರನ್ನೂ ಕಾಡುತ್ತಿದೆ. ಇರಾನ್‌ನಲ್ಲಿ ೧೯೭೯ರಲ್ಲಿ ಇಸ್ಲಾಮಿಕ್ ಕ್ರಾಂತಿ ಆಗುವ ಮೊದಲು ದೊರೆ ಶಾ ಪಹ್ಲವಿ ಆಡಳಿತವಿತ್ತು. ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳ ಹಿಡಿತದಲ್ಲಿದ್ದ ಶಾ ಅವರು ಇರಾನನ್ನು ಪಾಶ್ಚಾತ್ಯ ಮಾದರಿ ದೇಶವಾಗಿ ಪರಿವರ್ತಿಸಲು ಹೊರಟರು. ಅದರ ಪರಿಣಾಮವಾಗಿ ಅಲ್ಲಿ ಇಸ್ಲಾಮಿಕ್ ಮಾದರಿ ಧಾರ್ಮಿಕ ಕ್ರಾಂತಿ ನಡೆಯಿತು. ಪಾಶ್ಚಾತ್ಯ ಮಾದರಿ ಆಡಳಿತ ನಾಶವಾಯಿತು. ಶಾ ಪಲಾಯನ ಮಾಡಿದರು. ಇರಾನ್ ದೇಶದ ಈ ಇತಿಹಾಸ ಅಮೆರಿಕ ಸೇರಿದಂತೆ ಎಲ್ಲ ದೇಶಗಳ ನಾಯಕರನ್ನು ಚಿಂತೆಗೀಡುಮಾಡಿದೆ. ಪರಮಾಣು ಅಸ್ತ್ರ ತಯಾರಿಕೆಗೆ ಅಗತ್ಯವಾದ ಯುರೇನಿಯಂ ಸಂಸ್ಕರಣೆ ಯನ್ನು ತಪ್ಪಿಸಿದರೆ ಸಾಕು ಎನ್ನುವ ಭಾವನೆ ವಿಶ್ವನಾಯಕರಲ್ಲಿ ಇದ್ದಂತಿದೆ.
ತನ್ನ ಬಳಿ ಪರಮಾಣು ಅಸ್ತ್ರಗಳಿಲ್ಲ. ಅವುಗಳನ್ನು ತಯಾರಿಸುವ ಉದ್ದೇಶವೂ ಇಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ -ಜೆಕಿಯಾನ್ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಇಂಧನ ಉದ್ದೇಶಕ್ಕೆ ಮತ್ತು ವೈದ್ಯಕೀಯ ಉದ್ದೇಶಕ್ಕೆ ಯುರೇನಿಯಂ ಸಂಸ್ಕರಣೆ ಮಾಡುತ್ತಿರುವುದಾಗಿ ಮತ್ತು ಅಂಥ ಹಕ್ಕು ಅಂತಾರಾಷ್ಟ್ರೀಯವಾಗಿ ಎಲ್ಲ ದೇಶಗಳಿಗೂ ಇದೆ ಎಂದು ಅವರು ವಾದಿಸುತ್ತಿದ್ದಾರೆ. ಆದರೆ ಇರಾನ್ ಅಧ್ಯಕ್ಷರು ಸುಳ್ಳು ಹೇಳುತ್ತಿದ್ದಾರೆ ಎಂದೇ ಪರಮಾಣು ವಿಜ್ಞಾನಿಗಳು ಭಾವಿಸಿದ್ದಾರೆ. ಒಂದು ವಾರದಲ್ಲಿ ಪರಮಾಣು ಅಸ್ತ್ರ ತಯಾರಿಸಬಹುದಾದಂಥ ಮಟ್ಟದಲ್ಲಿ ಯುರೇನಿಯಂ ಸಂಸ್ಕರಿಸಲಾಗುತ್ತಿದೆ ಎಂಬ ಸಂಶಯ ಅಂತಾರಾಷ್ಟ್ರೀಯ ಪರಮಾಣು ಇಂಧನ ಪರೀಕ್ಷಕ ವಿಜ್ಞಾನಿಗಳದ್ದು. ಹೀಗಾಗಿಯೇ ಇಷ್ಟೆಲ್ಲಾ ಸಮಸ್ಯೆ. ಪರಮಾಣು ಅಸ್ತ್ರ ತಯಾರಿಸುವುದರಿಂದ ಇಡೀ ಮಧ್ಯಪ್ರಾಚ್ಯದ ಮೇಲೆ ಹಿಡಿತ ಸಾಧಿಸಬಹುದೆಂಬ ಮಹದಾಸೆ ಇರಾನ್‌ಗೆ ಇದೆ ಎಂಬ ಅನುಮಾನ ಮುಸ್ಲಿಮ್ ದೇಶಗಳಿಗೆ ಇದೆ.
ಹೀಗಾಗಿಯೇ ಇಂಥ ಪರಿಸ್ಥಿತಿಯಲ್ಲಿಯೂ ಯಾವುದೇ ಮುಸ್ಲಿಮ್ ದೇಶ ಇರಾನ್‌ಗೆ ಬೆಂಬಲವಾಗಿ ನಿಂತಿಲ್ಲ. ಇರಾನ್ ಬಲಿಷ್ಠವಾಗುವುದು ಯಾವುದೇ ಮುಸ್ಲಿಮ್ ದೇಶಕ್ಕೆ ಬೇಕಿಲ್ಲ. ವಿಚಿತ್ರ ಎಂದರೆ ಇಂಥ ಇಕ್ಕಟ್ಟಿನ ಸಂದರ್ಭದಲ್ಲಿಯೂ ತಾನೇ ಪೋಷಿಸಿದ ಯಮನ್‌ನ ಹೂಥಿಗಳಾಗಲಿ, ಲೆಬನಾನ್‌ನ ಹಿಜಬುಲ್ಲಾ ಗಳಾಗಲಿ, ಗಾಜಾದ ಹಮಾಸ್‌ಗಳಾಗಲಿ ಇರಾನ್ ಬೆಂಬಲವಾಗಿ ಯುದ್ಧಕ್ಕಿಳಿದಿಲ್ಲ. ಇದೇ ರೀತಿ ಇರಾನ್‌ನ ಮಿತ್ರ ದೇಶಗಳಾಗಿರುವ ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾ ಈ ವಿಚಾರದಲ್ಲಿ ಸಕ್ರಿಯವಾಗಿಲ್ಲದಿರುವುದೂ ಆಶ್ಚರ್ಯ ಹುಟ್ಟಿಸಿದೆ.
ಈ ಮಧ್ಯೆ ಯೂರೋಪಿನ ನಾಯಕರ ಜೊತೆ ಮಾತುಕತೆ ನಡೆಸಲು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅಕ್ಷಾಚಿ ಜಿನೀವಾದಲ್ಲಿದ್ದಾರೆ. ಫ್ರಾನ್, ಬ್ರಿಟನ್, ಜರ್ಮನಿಯ ನಾಯಕರು ಭಾಗವಹಿಸಲಿರುವ ಸಭೆಯಲ್ಲಿ ಪ್ರಸ್ತುತ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಿದ್ದಾರೆ. ಆದರೆ ಈ ಮಾತುಕತೆಗಳಿಂದ ಪ್ರಯೋಜನವೇನೂ ಆಗುವ ಸಾಧ್ಯತೆ ಇಲ್ಲ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಣ ಮಾತುಕತೆ ಮತ್ತು ಒಂದು ಒಪ್ಪಂದ ಮಾತ್ರ ಈ ಯುದ್ಧವನ್ನು ನಿಲ್ಲಿಸಬಲ್ಲದು.
” ಇಸ್ರೇಲ್‌ನ ದಕ್ಷಿಣ ಭಾಗದ ಪ್ರಮುಖ ನಗರವಾದ ಬೀರ್ ಸೇಬಾ ದಲ್ಲಿನ ಅತಿ ದೊಡ್ಡ ಸೊರೋಕಾ ಆಸ್ಪತ್ರೆಯ ಮೇಲೆ ಇರಾನ್ ನಡೆಸಿದ ಬಾಂಬ್ ದಾಳಿ ಯುದ್ಧದ ದಿಕ್ಕನ್ನೇ ಬದಲಿಸಿದೆ. ಇನ್ನು ಮುಂದೆ ಯುದ್ಧದ ಗುರಿ ಇರಾನ್‌ನ ವರಿಷ್ಠ, ಧಾರ್ಮಿಕ ನಾಯಕ ಅಲಿ ಖಮೇನಿ ಅವರ ಅಂತ್ಯ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಕಟ್ಜ್ ಘೋಷಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಿರುವ ಇಸ್ರೇಲ್ ವಾಯುಪಡೆ ಇರಾನ್‌ನ ಪೂರ್ಣ ವಾಯು ಪ್ರದೇಶ ತನ್ನ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದೆ. ಆದರೆ ಇರಾನ್ ಕ್ಷಿಪಣಿ ದಾಳಿಯನ್ನು ಮುಂದುವರಿಸಿರುವುದನ್ನು ನೋಡಿದರೆ ಎಲ್ಲವೂ ಇಸ್ರೇಲ್ ಹೇಳಿದಂತೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇರಾನ್ ಸೂಪರ್‌ಸಾನಿಕ್ ಕ್ಷಿಪಣಿ ದಾಳಿ ಮತ್ತು ಕ್ಲಸ್ಟರ್ ಬಾಂಬ್ ದಾಳಿ ಮುಂದುವರಿಸಿದೆ. ಇಡೀ ಮಧ್ಯಪ್ರಾಚ್ಯಕ್ಕೆ ದೊಡ್ಡ ಬೆದರಿಕೆ ಇಸ್ರೇಲ್ ಎಂದು ಹೇಳಿರುವ ಇರಾನ್ ಧಾರ್ಮಿಕ ನಾಯಕ ಅಲಿ ಖಮೇನಿ ಶರಣಾಗುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.”
– ಡಿ.ವಿ.ರಾಜಶೇಖರ
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…
ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…
ಬೆಂಗಳೂರು: ಆರ್.ಅಶೋಕ್ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್…
ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನವದೆಹಲಿಯ…
ಬೆಂಗಳೂರು: ನಾನು ನನ್ನ ವಾಚ್ ವಿಚಾರವಾಗಿ ಲೋಕಾಯುಕ್ತ ಸೇರಿದಂತೆ ಎಲ್ಲೆಲ್ಲಿ ಮಾಹಿತಿ ನೀಡಬೇಕೋ, ಎಲ್ಲಾ ನೀಡಿದ್ದೇನೆ. ನಾನು ಈ ವಿಚಾರದಲ್ಲಿ…