• ಎಚ್.ಕೆ.ವಿವೇಕಾನಂದ
ಬಹುಶಃ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಒಂದು ಪಂಥೀಯ ವಾದದ ಸುಳಿಗೆ ಸಿಲುಕದೆ, ಯಾವುದೇ ರಾಜಕೀಯ ಪ್ರೇರಿತ ಚಿಂತನೆ ಗಳವರು ಸಂಪೂರ್ಣವಾಗಿ ನಮ್ಮವರು ಅಥವಾ ನಮ್ಮ ವಿರೋಧಿಗಳು ಎಂದು ಹೇಳಲಾಗದೆ ಬಹುತೇಕ ಎಲ್ಲರೂ ಒಪ್ಪಿರುವ ಏಕೈಕ ವ್ಯಕ್ತಿ ಮತ್ತು ವ್ಯಕ್ತಿತ್ವ ಸ್ವಾಮಿ ವಿವೇಕಾ ನಂದರವರದು.
ಭಾರತದ ನಿಜವಾದ ಸಾಂಸ್ಕೃತಿಕ ರಾಯಭಾರಿ ಯಾಗಲು ಅರ್ಹರಾದ ಮಹಾಪುರುಷ ಅವರು. ಈಗಲೂ ಭಾರತದಾದ್ಯಂತ ಯಾವುದೇ ಪ್ರದೇಶಗಳಲ್ಲಿ ಯಾವುದೇ ಒತ್ತಡ ಅಥವಾ ಪ್ರಚೋದನೆ ಅಥವಾ ರಾಜಕೀಯ- ಆರ್ಥಿಕ ಲಾಭವಿಲ್ಲದೆ ಸೇವಾ ಮನೋಭಾವನೆಯ ಸಂಘಟನೆಗಳು ಹೆಚ್ಚಾಗಿ ಸ್ಥಾಪನೆಯಾಗಿರುವುದೇ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ.
ಸ್ವಾಮಿ ವಿವೇಕಾನಂದರ ಜನ್ಮದಿನವನ್ನು (ಜನವರಿ 12) ರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತಿದೆ. ಕಾರಣ ಯುವಕರನ್ನು ಅತ್ಯಂತ ಪ್ರೀತಿ, ಗೌರವ, ಅಭಿಮಾನ ದಿಂದ ಭವಿಷ್ಯದ ದೊಡ್ಡ ಶಕ್ತಿಯಾಗಿ ಗುರುತಿಸಿದವರು ಸ್ವಾಮಿ ವಿವೇಕಾನಂದರು. ಭಾರತದ ನಿಜವಾದ ಖಾವಿ ಧಾರಿ ಸ್ವಾಮಿ ವಿವೇಕಾನಂದರು ಮಾತ್ರ ಎಂಬುದಾಗಿ ಕೆಲವರು ಹೇಳುತ್ತಾರೆ.
“ಉಕ್ಕಿನ ದೇಹದ-ಕಬ್ಬಿಣದ ನರಮಂಡಲದ – ದೃಢ ಮತ್ತು ಕಠಿಣ ಮನಸ್ಸನ್ನು’ ಭಾರತದ ಯುವ ಶಕ್ತಿ ಹೊಂದಿ ರಬೇಕು ಎಂದು ಆಶಿಸಿದ್ದವರು ಸ್ವಾಮಿ ವಿವೇಕಾನಂದರು.
ಆದರೆ ಈಗಿನ ವಾಸ್ತವ ಏನು? ಸತ್ವರಹಿತ ಹಣ್ಣು ತರಕಾರಿಗಳು ಸೃಷ್ಟಿಯಾಗುತ್ತಿರುವಂತೆ, ಯುವಜನರೂ ಸತ್ವರಹಿತರಾಗುತ್ತಿದ್ದಾರೆ ಅನಿಸುತ್ತದೆ. ಜಾಗತೀಕರಣದ ಪ್ರಭಾವದಿಂದಾಗಿ ಭಾರತದ ಮಧ್ಯಮ ವರ್ಗದ ಕುಟುಂಬಗಳಲ್ಲಿ ಬಡತನ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ಊಟ, ಬಟ್ಟೆ, ವಸತಿಯ ವಿಷಯದಲ್ಲಿ ಮಕ್ಕಳಿಗೆ ಹೆಚ್ಚಿನ ಕೊರತೆಯಾಗದಂತೆ ಪೋಷಕರು ನೋಡಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬಂದಿತು. ಅವಿಭಕ್ತ ಕುಟುಂಬಗಳು ಶಿಥಿಲವಾಗಿ ಚಿಕ್ಕ ಸಂಸಾರಗಳು ಅಸ್ತಿತ್ವಕ್ಕೆ ಬಂದವು. ಅದರಿಂದಾಗಿ ಮಕ್ಕಳ ಮೇಲೆ ಪೋಷಕರ ಪ್ರೀತಿ ಹೆಚ್ಚಾಯಿತು. ಟಿವಿ, ಮೊಬೈಲ್, ವಿಡಿಯೋ ಗೇಮ್ಸ್, ಸಿನಿಮಾ ಮನರಂಜನೆ ಮುಂತಾದ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಯಿಂದ ಮಕ್ಕಳ ಮನಸ್ಥಿತಿ ಹೆಚ್ಚು ಶಾರ್ಪ್ ಆಯಿತು. ಆದರೆ, ಕಲಬೆರಕೆ ಆಹಾರ, ಜಂಕ್ ಫುಡ್ ಮುಂತಾದ ರಾಸಾ ಯನಿಕ ಮಿಶ್ರಿತ ಪದಾರ್ಥಗಳು, ತಿಂಡಿಗಳು ಮತ್ತು ಅತಿಯಾದ ವಾಹನಗಳ ಬಳಸುವಿಕೆ ಹಾಗೂ ಪರಿಸರ ಮಾಲಿನ್ಯದಿಂದ ದೇಹ ಮತ್ತು ಮನಸ್ಸುಗಳಲ್ಲಿ ಆಲಸ್ಯ ಉಂಟಾಯಿತು. ತೀರಾ ಹಸಿವಿನ ಸಂಕಷ್ಟಗಳ ಅನುಭವ ಅವರಿಗೆ ಆಗಲೇ ಇಲ್ಲ. ಯಾವುದೇ ಭಯಂಕರ ಯುದ್ಧ, ಪ್ರಾಕೃತಿಕ ವಿಕೋಪ, ಹಿಂಸೆಯ ಕ್ರಾಂತಿ ಇತ್ತೀಚಿನ ವರ್ಷಗಳಲ್ಲಿ ನಡೆಯಲಿಲ್ಲ. ಇತಿಹಾಸದ ನೋವುಗಳ ನೆನಪುಗಳಿಲ್ಲ, ಭವಿಷ್ಯದ ಕನಸುಗಳ ಮುನ್ನೋಟವಿಲ್ಲ. ಸ್ವಂತಿಕೆ ಮತ್ತು ಸ್ವಾಭಿಮಾನ ಇಲ್ಲದೇ ಹೋಯಿತು. ಇದಕ್ಕಾಗಿಯೇ ಹೊಂಚು ಹಾಕಿ ಕುಳಿತಿದ್ದ ಕೆಲವು ರಾಜಕೀಯ ಪಕ್ಷಗಳು ಕೋತಿಗಳಿಗೆ ಕಡಲೆ ಬೀಜ ಹಾಕಿ ಬೋನಿಗೆ ಬೀಳಿಸುವಂತೆ ಭ್ರಷ್ಟಾಚಾರ, ಧರ್ಮ, ಜಾತಿ, ಭಾಷೆ, ಪಂಥ, ದೇಶಪ್ರೇಮ ಅದು- ಇದು ಎಂಬ ಮಸಾಲೆ ಹಾಕಿದ ಕಡಲೇ ಬೀಜಗಳನ್ನು ಎಸೆದರು ನೋಡಿ, ಈ ಯುವಕರು ಸುಲಭವಾಗಿ ಅವರ ಬಲೆಗೆ ಬಿದ್ದರು.
ಇದರ ಜೊತೆಗೆ ಎಲ್ಲೆಲ್ಲೂ ಬಾರ್ ಅಂಡ್ ರೆಸ್ಟೋರೆಂಟ್ಗಳು, ಶಾಪಿಂಗ್ ಮಾಲ್‌ಗಳು, ಸಿಗರೇಟು, ಗಾಂಜಾದಂತಹ ಮಾದಕ ಪದಾರ್ಥಗಳು ಸುಲಭವಾಗಿ ದೊರೆಯತೊಡಗಿದವು. ಇನ್ನೆಲ್ಲಿಯ ಸ್ವಂತಿಕೆ ?
ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ಸಿ.ಎನ್.ಮಂಜುನಾಥ್ ಅವರು, “ಹಿಂದೆ ಮಕ್ಕಳು ತಂದೆ ತಾಯಿ ಮುಂತಾದ ಹಿರಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಈಗ ತಂದೆ ತಾಯಿಗಳು ಮಕ್ಕಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿರುವ ಬದಲಾವಣೆಯ ದೃಶ್ಯಗಳನ್ನು ನೋಡುತ್ತಿದ್ದೇವೆ…”ಎಂದು ಹೇಳಿದ್ದು ನಿಜವಾಗಿದೆ.
ಇದು ಯುವಜನರು ಮಾನಸಿಕವಾಗಿ ಸತ್ವ ಕಳೆದುಕೊಳ್ಳುತ್ತಿರುವುದಕ್ಕೆ ಒಂದು ಉದಾಹರಣೆ ಮಾತ್ರ. ಹಾಗೆಯೇ ಇಂದು ಯಾವುದೇ ಗಹನವಾದ, ತರ್ಕ ಬದ್ಧವಾದ, ಆಳವಾದ ಚಿಂತನೆಯಿಲ್ಲದೆ ವಿಷಯವನ್ನು ಕೇವಲ ವಾಕ್ಚಾತುರ್ಯ ಮತ್ತು ನಿರೂಪಣೆಯಿಂದ ಯುವ ಸಮೂಹವನ್ನು ಮೆಚ್ಚಿಸಿ ಅವರಿಂದ ಚಪ್ಪಾಳೆ ಮತ್ತು ಓಟು ಪಡೆಯಬಹುದು ಎಂಬುದು ಅವರ ಮಾನಸಿಕ ದುರ್ಬಲ ಸ್ಥಿತಿಗೆ ಮತ್ತಷ್ಟು ಉದಾಹರಣೆಗಳು, ಆದ್ದರಿಂದಲೇ ಹಣ ಇರುವ, ಜಾತಿ ರಾಜಕಾರಣದ ಭ್ರಷ್ಟ ವ್ಯಕ್ತಿಗಳು ಸುಲಭವಾಗಿ ಜನ ಪ್ರತಿನಿಧಿಗಳಾಗಿ ಮತ್ತೆ ಮತ್ತೆ ಆಯ್ಕೆಯಾಗುತ್ತಿದ್ದಾರೆ.
ಮದುವೆಯಾಗಲು ಹುಡುಗ ಹುಡುಗಿಯರು ಕೇಳುತ್ತಿರುವ ಅಥವಾ ಬಯಸುತ್ತಿರುವ ಬೇಡಿಕೆಗಳು, ಕೆಲವೇ ತಿಂಗಳುಗಳಲ್ಲಿ ಅವರ ನಡುವೆ ಉಂಟಾಗುತ್ತಿರುವ ಭಿನ್ನಾಭಿಪ್ರಾಯಗಳು, ಹಣದ ಬಗೆಗಿನ ಮೋಹ, ವ್ಯಕ್ತಿತ್ವ ಮತ್ತು ಮೌಲ್ಯಗಳ ಬಗೆಗಿನ ತಿರಸ್ಕಾರವನ್ನು ಗಮನಿಸಿದರೆ ಈ ಸತ್ತಹೀನ ಮನೋಭಾವನೆಯ ಯುವ ಜನಾಂಗದ ಬಗ್ಗೆ ಸ್ವಲ್ಪ ಅರ್ಥವಾಗಬಹುದು. ಸ್ವಾಮಿ ವಿವೇಕಾನಂದರ ಕನಸಿನ, ಕಠಿಣ ಮನಸ್ಥಿತಿಯ, ಶುದ್ಧ ವ್ಯಕ್ತಿತ್ವದ, ಕ್ರಿಯಾತ್ಮಕ ಚಿಂತನೆಗಳ ದ್ಯೋತಕವಾಗಬೇಕಿದ್ದ ಯುವ ಜನಾಂಗ ದ್ವೇಷ ಕಾರುವ, ಶ್ರೇಷ್ಠತೆಯ ವ್ಯಸನದ, ಸಣ್ಣ ಮನಸ್ಸಿನ ಅಸೂಯಾಪರ ಮನಸ್ಥಿತಿಯನ್ನು ರೂಢಿಸಿಕೊಳ್ಳುತ್ತಿದೆ. ಯುವಕರು, ತಮ್ಮ ಕ್ರಿಯಾಶೀಲತೆಯಿಂದ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮರೆತು, ಮಧ್ಯರಾತ್ರಿ ಬೈಕನ್ನು ವೀಲಿಂಗ್ ಮಾಡುತ್ತಾ, ಮೋಜು ಅನುಭವಿಸಿ ಇತರರಿಗೆ ತೊಂದರೆ ಕೊಡುತ್ತ ಬದುಕನ್ನು ಸಂಪೂರ್ಣ ಎಂಜಾಯ್ ಮಾಡುವುದನ್ನೇ ಜೀವನ ಎಂಬಂತೆ ಭಾವಿಸಿದ್ದಾರೆ.
ಯಾವ ವಿದ್ಯಾರ್ಥಿ ಕಾಲೇಜಿನಲ್ಲಿ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸದೆ, ಸ್ವತಂತ್ರ ಚಿಂತನೆ ಬೆಳೆಸಿಕೊಳ್ಳದೆ, ಯಾವುದೋ ರಾಜಕೀಯ ಪಕ್ಷಕ್ಕೋ ಅಥವಾ ಸಿದ್ಧಾಂತಕ್ಕೆ ತನ್ನನ್ನು ಶರಣಾಗಿಸಿ ಬಸ್ಸಿಗೆ ಕಲ್ಲು ಹೊಡೆದು ಮುಷ್ಕರ ಮಾಡಿ ಭ್ರಷ್ಟ ನಾಯಕನಿಗೆ ಬಕೆಟ್ ಹಿಡಿದು ಜೈಕಾರ ಕೂಗುತ್ತಾನೋ, ಅವನೇ ಭವಿಷ್ಯದ ನಾಯಕನಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಮೂಡತೊಡಗಿದೆ.
ಯುವ ಶಕ್ತಿ ಎಂಬುದು, ಯಾರು ಸಾವಿರಾರು ವರ್ಷಗಳ ಅನುಭವದ ಆಧಾರದಲ್ಲಿ ರೂಪಿತವಾದ ಅತ್ಯುತ್ಕೃಷ್ಟ ಮೌಲ್ಯಗಳನ್ನು ತಿರಸ್ಕರಿಸಿ ಉಡಾಫೆ ಮಾಡುತ್ತಾ, ನಕಲಿ ದೇಶಭಕ್ತಿ ಪ್ರದರ್ಶಿಸುತ್ತಾ, ಸ್ವಂತ ಯೋಚಿಸುವ ಶಕ್ತಿ ಇಲ್ಲದ, ದೇಶವನ್ನು ಜಾತಿ ಧರ್ಮದ ಆಧಾರದಲ್ಲಿ ಒಡೆಯುವ ಸಾಮರ್ಥ್ಯವಿರುವರೋ ಅವರೇ ನಿಜವಾದ ಮುಂದಿನ ನಾಯಕರು ಎಂಬಂತೆ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ.
ಸಭ್ಯತೆಯ ಸೋಗಿನಲ್ಲಿ ಆತ್ಮವಂಚನೆ ಮಾಡಿಕೊಳ್ಳುವ Pseudo ಸಮಾಜದೆಡೆಗೆ ನಮ್ಮ ಯುವಶಕ್ತಿ ಸಾಗುತ್ತಿದೆಯೇ ಎಂದು ಆತಂಕವಾಗುತ್ತಿದೆ. ಆದರೂ ಈ ಮಾತೃ ಭೂಮಿ ಹಾಗಾಗಲಿಕ್ಕೆ ಬಿಡದೆ ಮುಂದಿನ ದಿನಗಳು ಯುವಕರ ಪಾಲಿಗೆ ಆಶಾದಾಯಕವಾಗಲಿ – ಆದರ್ಶವಾಗಲಿ— ಸ್ಫೂರ್ತಿದಾಯಕವಾಗಲಿ ಎಂದು ಆಶಿಸುತ್ತಾ…
ಯುವ ಶಕ್ತಿಯಲ್ಲಿ ಅನೇಕ ಒಳ್ಳೆಯ ಅಂಶಗಳೂ ಇವೆ. ಆದರೆ ಆತಂಕವಾಗಿರುವ ಋಣಾತ್ಮಕ ಅಂಶಗಳನ್ನು ಮಾತ್ರ ಇಲ್ಲಿ ಹೇಳಲಾಗಿದೆ. ಯುವಜನರಿಗೆ ಒಳ್ಳೆಯ ಮಾರ್ಗದರ್ಶನ ಮತ್ತು ಆದರ್ಶ ವ್ಯಕ್ತಿತ್ವಗಳು ಸಿಗುತ್ತಿಲ್ಲ. ಒಳ್ಳೆಯದನ್ನು ಗ್ರಹಿಸುವ ಮನಸ್ಥಿತಿಯನ್ನು ಅವರಲ್ಲಿ ನಾವು ಬೆಳೆಸುತ್ತಿಲ್ಲ.
ಯುವಜನರ ಐಕಾನ್ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬದ ಸಂದರ್ಭದಲ್ಲಿ ಯುವಕರನ್ನು ಈ ವಿಷ ಚಕ್ರದಿಂದ ಬಿಡುಗಡೆ ಮಾಡಿ ಸಹಜ ಮೌಲ್ಯಯುತ ಸುಂದರ ಬದುಕಿನತ್ತ ಕರೆದೊಯ್ಯುವ ಜವಾಬ್ದಾರಿಯನ್ನು
ಎಲ್ಲ ನಾಗರಿಕರೂ ಹೊರಬೇಕಿದೆ.
ಬೆಂಗಳೂರು: ಕಾಂಗ್ರೆಸ್ ಶಾಸಕರ ನಿಧನದ ಕಾರಣ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಗೆ ಶೀಘ್ರದಲ್ಲೇ ದಿನಾಂಕ ಘೋಷಣೆ ಆಗಲಿದೆ.…
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ ಕೆಲ ಶಾಸಕರು ಖಾಸಗಿ ಹೋಟೆಲ್‌ನಲ್ಲಿ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಈ…
ಬೆಂಗಳೂರು: ಮಾರ್ಚ್.3ರಂದು ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ ಮಾಸದ ಹುಣ್ಣಿಮೆಯ…
ಮಡಿಕೇರಿ: ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮದ ಕುರಿತು ನಿನ್ನೆ ವಾಹನದಲ್ಲಿ ಪ್ರಚಾರ ಮಾಡುತ್ತಿದ್ದ ಗೌತಮ್ ಎಂಬಾತನ…
ಮೈಸೂರು: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಮಾರ್ಚ್.17ರವರೆಗೂ ನಡೆಯಲಿದೆ. ಮೈಸೂರು ಜಿಲ್ಲೆಯಲ್ಲಿ 35,835 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,…
ಮೇಲುಕೋಟೆ: ಮಾ.೨೩ರಿಂದ ಏ.೩ರವರೆಗೆ ನಡೆಯುವ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು…