ಬಿ.ಆರ್.ಗವಾಯಿ ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯ ಮೂರ್ತಿಯಾಗಿ ನ್ಯಾಯಾಲಯದಲ್ಲಿ ಕಾರ್ಯನಿರ್ವಿಹಿಸುವಾಗ ಕಳೆದ ಅಕ್ಟೋಬರ್ ೬ರಂದು ಹಿರಿಯ ವಕೀಲರೊಬ್ಬರು ಅವರತ್ತ ಶೂ ತೂರಿ ಅವಮಾನಪಡಿಸಿದ ಘಟನೆ ಮರೆಯಲಾಗದ ಒಂದು ಕಪ್ಪು ಚುಕ್ಕೆ. ಈ ಘಟನೆ ತಮ್ಮ ಮೇಲಾಗಿರುವುದು ಎನ್ನುವಂತೆ ಪರಿಶಿಷ್ಟ ಜಾತಿಯ ಜನರು ಒಳಗೊಳಗೇನೊಂದುಕೊಂಡು ಆ ಪ್ರಕರಣ ಅವರ ಮನಸ್ಸಿನಿಂದ ಮಾಸುವ ಮುನ್ನವೇ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಮೀಸಲಾತಿಯಲ್ಲಿ ಕ್ರೀಮಿಲೇಯರ್ ಜಾರಿಗೆ ತರುವ ಬಗೆಗೆ ಪುನರುಚ್ಚರಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಮೀಸಲಾತಿಯ ಅನುಕೂಲ ಮತ್ತು ಪ್ರಯೋಜನ ಸಮಾಜದ ಪರಿಶಿಷ್ಟ ಜಾತಿಯ ಕಟ್ಟಕಡೆಯ ಜನರಿಗೂ ತಲುಪಬೇಕು. ಮೀಸಲಾತಿಯಿಂದ ಕಟ್ಟ ಕಡೆಯ ಜನರ ಬದುಕೂ ಹಸನುಗೊಳ್ಳಬೇಕು ಎನ್ನುವುದರಲ್ಲಿ ಯಾವ ಅಪ ಸ್ವರವೂ ಇಲ್ಲ. ಆದರೆ ಕಳೆದ ಏಳು ದಶಕಗಳಿಂದ ಜಾರಿಯಲ್ಲಿರುವ ಮೀಸಲಾತಿ ಅಕ್ಷರಶಃ ಪರಿಣಾಮಕಾರಿಯಾಗಿ ಜಾರಿಯಾಗಿದೆಯೇ ಎನ್ನುವ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಕೇಂದ್ರ ಸರ್ಕಾರವಿರಲಿ ಅಥವಾ ಯಾವುದೇ ರಾಜ್ಯ ಸರ್ಕಾರವಿರಲಿ ಯಾವುದಾದರೂ ಇಲಾಖೆಗಳಲ್ಲಿ ನಿಗದಿಪಡಿಸಿರುವಂತೆ ಶೇ.೧೮ ಉದ್ಯೋಗ ನೀಡಿರುವುದು ಜಾರಿಗೆ ಬಂದಿದೆಯೇ ಎನ್ನುವ ಪ್ರಶ್ನೆಗೆ ಸರ್ಕಾರದಿಂದ ದೊರೆಯುವ ಮಾಹಿತಿ ನಿರಾಶೆ ಉಂಟು ಮಾಡುತ್ತದೆ.
ಮೀಸಲಾತಿ ಜಾರಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಾಕಷ್ಟು ಜನರ ಬದುಕಿನಲ್ಲಿ ಅಲ್ಪಸ್ವಲ್ಪ ಬದಲಾವಣೆ ಆಗಿರುವುದನ್ನು ಇಲ್ಲ ಎನ್ನಲಾಗದು. ಶಿಕ್ಷಣ ಕಲಿತು ಸಾಕಷ್ಟು ಮಂದಿ ಸರ್ಕಾರಿ ಉದ್ಯೋಗ ಪಡೆದಿದ್ದರಿಂದ ಆರ್ಥಿಕವಾಗಿ ಅವರ ಬದುಕು ಸುಧಾರಿಸಿದೆ. ಆದರೂ ಸಾಮಾಜಿಕವಾಗಿ ಅವರನ್ನು ನೋಡುವ ಸಮಾಜ ಇನ್ನೂ ಕುರುಡಾಗಿದೆ. ಹಿಂದೆ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ಮಾತ್ರ ಇತ್ತು. ಅದೀಗ ಜಾತಿ ತಾರತಮ್ಯದ ಜೊತೆಗೆ ಅಸೂಯೆ ಎನ್ನುವ ಅಸಹನೆ ಬೇರೆ ಜಾತಿಗಳವರ ಮನಸ್ಸಿನಲ್ಲಿ ಹುಟ್ಟಿಕೊಂಡಿದೆ. ಈ ಮನಃಸ್ಥಿತಿಯ ಜನರ ದೃಷ್ಟಿಯಲ್ಲಿ ಪರಿಶಿಷ್ಟರು ತಮ್ಮ ಸಮಕ್ಕೆ ಬರಬಾರದು ಎನ್ನುವುದು ಈಗ ಜಾತಿ ವೈಷಮ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಕ್ಕೆ ಕಾರಣ.
ಇದನ್ನು ಓದಿ: ಹಿರಿಯ ಹಾಸ್ಯ ನಟ ಎಂ.ಎಸ್. ಉಮೇಶ್ ಇನ್ನಿಲ್ಲ
ಮೀಸಲಾತಿ ವ್ಯವಸ್ಥೆಯಿಂದ ಹಲವರ ಬದುಕಿನಲ್ಲಿ ಬದಲಾವಣೆ ಆಗಿರುವುದು ನಿಜ. ಅವರ ಆರ್ಥಿಕ ಸ್ಥಿತಿಗತಿ ಉತ್ತಮವಾಗಿದೆ. ಅಂದ ಮಾತ್ರಕ್ಕೆ ನಮ್ಮ ಭಾರತೀಯ ಸಮಾಜದಲ್ಲಿ ಅವರ ವಿಮೋಚನೆ ಆಗಿಲ್ಲ ಎನ್ನುವುದೂ ಸತ್ಯ. ಮುಂದುವರಿದ ಇಂತಹ ವರ್ಗವೇ ಮೀಸಲಾತಿಯ ಲಾಭವನ್ನು ಪಡೆದುಕೊಳ್ಳುತ್ತಿದೆ. ಅವರಿಗಿಂತ ಬಡತನದಲ್ಲಿರುವ ಜನರಿಗೆ ಮೀಸಲಾತಿಯ ಅನುಕೂಲ ದೊರೆಯುತ್ತಿಲ್ಲ ಎನ್ನುವ ಸಾಮಾನ್ಯ ಮಾತುಗಳು ಸಹಜವಾಗಿಯೇ ಅಲ್ಲಲ್ಲಿ ಕೇಳಿ ಬರುತ್ತಿವೆ. ಆದ್ದರಿಂದ ಈ ವರ್ಗದಲ್ಲಿಯೂ ಉಳ್ಳವರನ್ನು (ಕ್ರೀಮಿ ಲೇಯರ್) ಮೀಸಲಾತಿಯಿಂದ ಹೊರಗಿಡಬೇಕು ಎನ್ನುವ ಮಾತು ಹತ್ತಾರು ವರ್ಷಗಳಿಂದ ಆಗಾಗ್ಗೆ ಕೇಳಿ ಬರುತ್ತಲೇ ಇದೆ.
ಕಳೆದ ವರ್ಷದ ಆಗಸ್ಟ್ ೧ರಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ಮಂದಿ ನ್ಯಾಯಮೂರ್ತಿಗಳು ಒಳಮೀಸಲಾತಿ ಕುರಿತು ತೀರ್ಪು ನೀಡುವಾಗ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಎತ್ತಿದ ಈ ಕ್ರೀಮಿಲೇಯರ್ ಬಗ್ಗೆಯೂ ಪೀಠ ಚರ್ಚಿಸಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ನ್ಯಾ. ಬಿ.ಆರ್.ಗವಾಯಿ ಅವರ ಈ ಅಭಿಪ್ರಾಯವನ್ನು ಅಂದಿನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸೇರಿದಂತೆ ಐವರು ನ್ಯಾಯಮೂರ್ತಿಗಳು ಬೆಂಬಲಿಸಿದ್ದರು. ಆದರೆ ಈ ಬಗೆಗೆ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸಲಿಲ್ಲ. ಇದು ಕೇಂದ್ರ ಸರ್ಕಾರಕ್ಕೆ ಸಲಹೆಯಷ್ಟೇ ಎಂದು ನ್ಯಾಯ ಪೀಠ ಈ ವಿಷಯವನ್ನು ಸರ್ಕಾರದ ವಿವೇಚನೆಗೆ ಬಿಟ್ಟಿತು ಮತ್ತು ಕ್ರೀಮಿಲೇಯರ್ ವಿಷಯವೂ ಈ ಪೀಠದ ಮುಂದಿರಲಿಲ್ಲ.
ಸುಪ್ರೀಂ ಕೋರ್ಟಿನ ಈ ಸಲಹೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯಲ್ಲಿ ಕ್ರೀಮಿಲೇಯರ್ ಪದ್ಧತಿಯನ್ನು ಜಾರಿಗೆ ತರುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ರೂಪಿಸಿರುವ ಈ ಮೀಸಲಾತಿ ಪದ್ಧತಿಯನ್ನು ಬದಲಾಯಿಸುವ ಉದ್ದೇಶ ಎನ್‌ಡಿ ಎ ಸರ್ಕಾರದ ಮುಂದಿಲ್ಲ ಎಂದು ಸಚಿವ ಅಶ್ವಿನ್ ವೈಷ್ಣವ್ ಸಂಪುಟದ ನಿರ್ಧಾರವನ್ನು ತಿಳಿಸಿದ್ದರು.
ಈ ತಿಂಗಳ ೨೫ರಂದು ನಿವೃತ್ತರಾದ ಮುಖ್ಯನ್ಯಾಯಮೂರ್ತಿ ಬಿ.ಆರ್. ಗವಾಯಿ ತಮ್ಮ ಅಧಿಕಾರಾವಧಿಯಲ್ಲಿ ಹೊರಬಿದ್ದ ಕೆಲವು ತೀರ್ಪುಗಳ ಬಗೆಗೆ ತಮಗೆ ಸಂತೃಪ್ತಿ ಇದೆ ಎಂದು ೨೩ರಂದು ಮಾಧ್ಯಮದವರ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವಾಗ ಕ್ರೀಮಿಲೇಯರ್ ಬಗೆಗಿನ ತಮ್ಮ ನಿಲುವನ್ನು ಪುನರುಚ್ಚರಿಸಿದರು. ನ್ಯಾ. ಬಿ.ಆರ್.ಗವಾಯಿ ಅವರು ತಳಸಮುದಾಯದಿಂದ ಬಂದವರಾಗಿ,ಅವರ ಪರಿಸ್ಥಿತಿಯನ್ನು ಅರಿತವರು. ಹಾಗಾಗಿ ಈ ಜನರಿಗೆ ಮೀಸಲಾತಿಯ ಅನುಕೂಲಗಳು ಸಿಗಬೇಕೆನ್ನುವ ಅವರ ಕಾಳಜಿಯನ್ನು ಯಾರೂ ಪ್ರಶ್ನಿಸಲಾರರು. ಆದರೆ ಇಂದಿನ ಸಮಾಜ ಮತ್ತು ಸರ್ಕಾರದಲ್ಲಿನ ಮೀಸಲಾತಿಯ ನೈಜ ಸ್ಥಿತಿಯನ್ನು ಗಮನಿಸಬೇಕೆನ್ನುವುದು ಈಗ ಮುಖ್ಯವಾಗುತ್ತದೆ.
ತಮಿಳುನಾಡು ಸರ್ಕಾರ ೧೯೭೧ರಲ್ಲಿ ನೇಮಕ ಮಾಡಿದ್ದ ಸತ್ಯನಾಥನ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಮೀಸಲಾತಿ ವ್ಯಾಪ್ತಿಯಿಂದ ಉಳ್ಳವರನ್ನು ಹೊರಗಿಡಬೇಕೆನ್ನುವ ಉದ್ದೇಶದಿಂದ ಕ್ರೀಮಿಲೇಯರ್ ಪದ್ಧತಿಯನ್ನು ಅಳವಡಿಸಬೇಕೆನ್ನುವ ಪರಿಕಲ್ಪನೆಯನ್ನು ಪರಿಚಯಿಸಿತು. ನಂತರ ೧೯೭೭ರಲ್ಲಿ ಕೇಂದ್ರದಲ್ಲಿ ಅಽಕಾರಕ್ಕೆ ಬಂದ ಪ್ರಧಾನಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಸರ್ಕಾರ ೧೯೭೯ರಲ್ಲಿ ನೇಮಿಸಿದ ಬಿ.ಪಿ. ಮಂಡಲ್ ಆಯೋಗ ೧೯೮೦ರ ಡಿಸೆಂಬರ್ ೩೧ರಂದು ಸಲ್ಲಿಸಿದ ತನ್ನ ವರದಿಯಲ್ಲಿ ಕ್ರೀಮಿಲೇಯರ್ ಪರಿಕಲ್ಪನೆಯನ್ನು ಶಿಫಾರಸು ಮಾಡಿತು. ಈ ವರದಿಯ ಶಿಫಾರಸಿನಂತೆ ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತಂದಾಗ ಮೀಸಲಾತಿ ಪಡೆಯುವ ಹಿಂದುಳಿದ ವರ್ಗಗಳ ಕುಟುಂಬದ ವಾರ್ಷಿಕ ಆದಾಯಕ್ಕೆ ಒಂದು ಲಕ್ಷ ರೂ.ಗಳ ಮಿತಿಯನ್ನು ಹಾಕಲಾಗಿತ್ತು. ನಂತರ ೨೦೦೪ರಲ್ಲಿ ಆ ಮಿತಿ ೨.೫ ಲಕ್ಷ ರೂ.ಗಳಿಗೆ ಹೆಚ್ಚಿತು. ೨೦೦೮ರಲ್ಲಿ ೪.೫ ಲಕ್ಷ ರೂ.ಗಳಿಗೆ ಹೆಚ್ಚಿಸಲಾಯಿತು. ಅದೀಗ ೮ ಲಕ್ಷ ರೂ. ಮಿತಿಗೆ ಬಂದು ನಿಂತಿದೆ. ಈ ಮಿತಿಯನ್ನು ಕೇಂದ್ರ ಸರ್ಕಾರ ಈಗ ೧೫ ಲಕ್ಷ ರೂ.ಗಳಿಗೆ ಹೆಚ್ಚಿಸಬೇಕೆನ್ನುವ ಪ್ರಸ್ತಾವನೆ ಇದೆ ಎಂದು ಹೇಳಲಾಗುತ್ತಿದೆ.
ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಗೆ ಈ ಆದಾಯ ಮಿತಿ ಇಲ್ಲ. ಪರಿಶಿಷ್ಟ ಜಾತಿಯಲ್ಲಿ ಮೀಸಲಾತಿಯಿಂದ ಮೇಲೆ ಬಂದವರಿಗೂ ಕ್ರೀಮಿ ಲೇಯರ್ ಜಾರಿಗೆ ತರಬೇಕೆನ್ನುವ ಮಾತುಗಳು ಕೇಳಿ ಬರುತ್ತಲೇ ಇವೆ. ಒಳಮೀಸಲಾತಿಗಾಗಿ ಈ ಹಿಂದೆ ನೇಮಕವಾಗಿದ್ದ ನ್ಯಾ. ಎ.ಜೆ.ಸದಾಶಿವ ಆಯೋಗವೂ ಸಹ ಕ್ರೀಮಿಲೇಯರ್ ಪದ್ಧತಿಯನ್ನು ಜಾರಿಗೆ ತರಬೇಕೆಂದು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಕರ್ನಾಟಕ ಸರ್ಕಾರವು ಮೀಸಲಾತಿ ಸೌಲಭ್ಯ ಪಡೆಯಲು ಜಾತಿ ಪತ್ರದ ಜೊತೆಗೆ ವಾರ್ಷಿಕ ಆದಾಯ ೨.೫ ಲಕ್ಷ ರೂ. ದಾಟಿರಬಾರದು ಎನ್ನುವ ಆದೇಶವನ್ನು ಜಾರಿಗೆ ತಂದಿದೆ. ಹಿಂದುಳಿದ ವರ್ಗಗಳಿಗೆ ವಾರ್ಷಿಕ ಆದಾಯದ ಮಿತಿ ೮ ಲಕ್ಷ ರೂ. ಇದ್ದರೆ ಈ ಹಿಂದೆ ಪರಿಶಿಷ್ಟ ಜಾತಿಯವರಿಗೆ ೪ ಲಕ್ಷ ರೂ. ಆದಾಯದ ಮಿತಿಯನ್ನು ವಿಧಿಸಿತ್ತು. ಅದನ್ನೀಗ ೨.೫ ಲಕ್ಷ ರೂ.ಗಳಿಗೆ ಇಳಿಸಲಾಗಿದೆ. ಅಂದರೆ ರಾಜ್ಯ ಸರ್ಕಾರ ಕ್ರೀಮಿಲೇಯರ್ ಹೆಸರು ಪ್ರಸ್ತಾಪಿಸದೇ ಕಠಿಣಾತೀತ ಕ್ರಮವನ್ನು ಈಗಾಗಲೇ ಜಾರಿಗೆ ತಂದಿದೆ. ಹಿಂದುಳಿದ ವರ್ಗಗಳ ಆದಾಯ ಮಿತಿಯನ್ನು ಹೆಚ್ಚಿಸುತ್ತಾ ಹೋದರೆ ಇಲ್ಲಿ ಅದು ಉಲ್ಟಾ ಆಗಿರುವುದು ವಿಪರ್ಯಾಸ. ಇಂದಿನ ಪರಿಸ್ಥಿತಿಯಲ್ಲಿನ ಈ ಕನಿಷ್ಠ ಆದಾಯ ಮಿತಿಯನ್ನು ಸರ್ಕಾರ ಪುನರ್ ಪರಿಶೀಲಿಸುವ ಅವಶ್ಯಕತೆ ಇರುವುದನ್ನು ರಾಜ್ಯ ಸರ್ಕಾರ ಗಮನಿಸಬೇಕಿದೆ.
ಇದನ್ನು ಓದಿ: ತವರಿನಲ್ಲೇ ಕಲುಷಿತಗೊಳ್ಳುತ್ತಿರುವ ಕಾವೇರಿ
ತೊಂಬತ್ತರ ದಶಕದಲ್ಲಿ ಜಾರಿಗೆ ಬಂದ ಮುಕ್ತ ಆರ್ಥಿಕ ನೀತಿಯ ಜೊತೆ ಜೊತೆಗೆ ವಿಶ್ವದಾದ್ಯಂತ ಸರ್ಕಾರಿ ಆಡಳಿತ ಮತ್ತು ಮುಖ್ಯವಾಗಿ ಖಾಸಗಿ ಕ್ಷೇತ್ರದಲ್ಲಿ ಬದಲಾವಣೆ ತಂದ ಕಂಪ್ಯೂಟರೀಕರಣ ಪದ್ಧತಿ, ಅದರಿಂದ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಆದ ಬದಲಾವಣೆಯಿಂದ ಮಾಹಿತಿ ತಂತ್ರಜ್ಞಾನ ಶಿಕ್ಷಣ ಮತ್ತು ಇದರ ಪರಿಣಾಮ ಆಡಳಿತ ವ್ಯವಸ್ಥೆಯಲ್ಲಿ ಮುಕ್ತ ಪ್ರವೇಶದಿಂದ ದೊರೆತ ಉದ್ಯೋಗಾವಕಾಶಗಳತ್ತ ಪರಿಶಿಷ್ಟ ವಿದ್ಯಾರ್ಥಿಗಳು ಮುನ್ನುಗಿದರು. ಹಾಗಾಗಿ ಈ ಕ್ಷೇತ್ರಗಳಿಗೆ ಹೋಗಬಯಸುವ ಸಾವಿರಾರು ಯುವ ಜನರು ಯಾವುದೇ ಮೀಸಲಾತಿಯಿಲ್ಲದೆ ಬದುಕನ್ನು ಕಟ್ಟಿಕೊಳ್ಳುತ್ತಿರುವುದನ್ನು ಇಂದು ನಾವು ನೋಡಬಹುದಾಗಿದೆ.
ಆದರೆ ಶಿಕ್ಷಣದ ಹಂತದಲ್ಲಿಯೇ ಕ್ರೀಮಿ ಲೇಯರ್ ಪದ್ಧತಿ ಜಾರಿಗೆ ತಂದರೆ ಉನ್ನತ ಶೈಕ್ಷಣಿಕ ಕ್ಷೇತ್ರದಂತಹ ಐಐಟಿ, ಐಐಎಂ, ಐಐಸಿ ಮತ್ತು ವೈದ್ಯಕೀಯ ಸ್ನಾತಕೋತ್ತರ ಮುಂತಾದ ಶಿಕ್ಷಣ ಪಡೆಯುವುದು ಕಡು ಬಡತನದಿಂದ ಬಂದವರಿಗೆ ಕಷ್ಟ ಮಾತ್ರವಲ್ಲ ಈ ಉನ್ನತ ಶಿಕ್ಷಣ ಮತ್ತು ಉದ್ಯೋಗ ಕೇವಲ ಕನಸಾಗಿಯೇ ಉಳಿಯಲಿದೆ. ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವುದರಿಂದ ಮತ್ತು ಕೀಳರಿಮೆಯಿಂದ ಹೊರಬಂದು ತಾವು ಯಾರಿಗೇನೂ ಕಡಿಮೆ ಇಲ್ಲ ಎನ್ನುವವರು ಮಾತ್ರ ಮೇಲೆ ಹೇಳಿದ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದು ಸಾಧ್ಯ.
ಜೊತೆಗೆ ಅಲ್ಲಿನ ಪರಿಸ್ಥಿತಿಯ ಸವಾಲುಗಳನ್ನೂ ಮೆಟ್ಟಿ ನಿಲ್ಲಬಲ್ಲ ಶಕ್ತಿ ಪಡೆದವ ರಾಗಿರುತ್ತಾರೆ. ಇಂತಹ ಉಳ್ಳವರ ಮಕ್ಕಳು ಈ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೂ ಮತ್ತು ಉದ್ಯೋಗ ಪಡೆದಿದ್ದರೂ ಅಲ್ಲಿಯೂ ಜಾತಿ ತಾರತಮ್ಯದಿಂದ ನರಳುತ್ತಿರುವ, ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಕೊರಳೊಡ್ಡುತ್ತಿರುವ ಘಟನೆಗಳು ಆಗಿಂದಾಗ್ಗೆ ನಡೆಯುತ್ತಲೇ ಇರುವ ವಾಸ್ತವವನ್ನು ಮನಗಾಣಬೇಕಿದೆ. ಮೀಸಲಾತಿಯು ಕೇವಲ ಬಡತನ ನಿವಾರಣೆ ಮಾತ್ರವಲ್ಲ, ಆಡಳಿತ ವ್ಯವಸ್ಥೆಯಲ್ಲಿ ಎಲ್ಲ ಕಡೆಯೂ ಪರಿಶಿಷ್ಟ ಜಾತಿಗೆ ಪ್ರಾತಿನಿಧ್ಯ ಸಿಗಬೇಕು. ಎಲ್ಲ ಹಂತಗಳ ಆಡಳಿತ ವ್ಯವಸ್ಥೆಯಲ್ಲಿ ಪರಿಶಿಷ್ಟ ಜನರು ಭಾಗಿಯಾಗಬೇಕು ಎನ್ನುವ ಉದ್ದೇಶ ಮೀಸಲಾತಿಯ ಕಲ್ಪನೆ ಎಂದು ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ನಂಬಿದ್ದರು. ಆ ದೃಷ್ಟಿಯಿಂದ ಮೀಸಲಾತಿಯ ಅವಕಾಶದಿಂದ ಶಿಕ್ಷಣ ಮತ್ತು ಉದ್ಯೋಗ ಮುಕ್ತವಾಗಿ ದೊರೆಯಬೇಕು. ಕ್ರೀಮಿಲೇಯರ್ ಪದ್ಧತಿ ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ತಡೆಗೋಡೆ ಆಗಬಾರದು ಎನ್ನುವುದನ್ನು ಸರ್ಕಾರ ಮತ್ತು ಸಮಾಜ ಅರ್ಥ ಮಾಡಿಕೊಳ್ಳುವುದು ಅವಶ್ಯ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದವರೆಲ್ಲರೂ ಕೇವಲ ಸರ್ಕಾರದ ಮೀಸಲಾತಿ ಪಡೆದು ಆರ್ಥಿಕವಾಗಿ ಮುಂದೆ ಬಂದಿಲ್ಲ. ಅವರವರ ಕೌಶಲ, ಕಂಡುಕೊಂಡ ಕೆಲಸ ಮತ್ತು ಶ್ರಮದಿಂದ ಮುಂದೆ ಬಂದವರೇ ಹೆಚ್ಚು. ಗಾಗಿ ಪರಿಶಿಷ್ಟ ಜಾತಿಗೆ ಮೀಸಲಾತಿ ಇಲ್ಲದೆ ಬದುಕೇ ಇಲ್ಲ ಎನ್ನುವ ಸಂಕುಚಿತ ಟೀಕೆ ಟಿಪ್ಪಣಿಗಳು ಅನವಶ್ಯಕ. ಬದಲಾದ ಪರಿಸ್ಥಿತಿಗೆ ತಕ್ಕಂತೆ ಮೀಸಲಾತಿಯಿಂದ ಹೊರಬಂದು ಬದುಕು ಕಟ್ಟಿಕೊಳ್ಳಲು ಯುವ ಪೀಳಿಗೆ ಮಾನಸಿಕವಾಗಿ ಸಿದ್ಧವಾಗಬೇಕು.
” ತೊಂಬತ್ತರ ದಶಕದಲ್ಲಿ ಜಾರಿಗೆ ಬಂದ ಮುಕ್ತ ಆರ್ಥಿಕ ನೀತಿಯ ಜೊತೆ ಜೊತೆಗೆ ವಿಶ್ವದಾದ್ಯಂತ ಸರ್ಕಾರಿ ಆಡಳಿತ ಮತ್ತು ಮುಖ್ಯವಾಗಿ ಖಾಸಗಿ ಕ್ಷೇತ್ರದಲ್ಲಿ ಬದಲಾವಣೆ ತಂದ ಕಂಪ್ಯೂಟರೀಕರಣ ಪದ್ಧತಿ. ಅದರಿಂದ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಆದ ಬದಲಾವಣೆಯಿಂದ ಮಾಹಿತಿ ತಂತ್ರಜ್ಞಾನ ಶಿಕ್ಷಣ ಮತ್ತು ಇದರ ಪರಿಣಾಮ ಆಡಳಿತ ವ್ಯವಸ್ಥೆಯಲ್ಲಿ ಮುಕ್ತ ಪ್ರವೇಶದಿಂದ ದೊರೆತ ಉದ್ಯೋಗಾವಕಾಶಗಳತ್ತಪರಿಶಿಷ್ಟ ವಿದ್ಯಾರ್ಥಿಗಳು ಮುನ್ನುಗಿದರು. ಹಾಗಾಗಿ ಈ ಕ್ಷೇತ್ರಗಳಿಗೆ ಹೋಗಬಯಸುವ ಸಾವಿರಾರು ಯುವ ಜನರು ಯಾವುದೇ ಮೀಸಲಾತಿಯಿಲ್ಲದೆ ಬದುಕನ್ನು ಕಟ್ಟಿಕೊಳ್ಳುತ್ತಿರುವುದನ್ನು ಇಂದು ನಾವು ನೋಡಬಹುದಾಗಿದೆ.”
-ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…