ಡಿ.ವಿ.ರಾಜಶೇಖರ
ಇರಾನ್ ಪರಮಾಣು ಬಾಂಬ್ ತಯಾರಿಸುವುದನ್ನು ತಡೆಯುವ ಉದ್ದೇಶದಿಂದ ಕಳೆದ ವಾರ ಒಮಾನ್‌ನಲ್ಲಿ ಆರಂಭವಾದ ಮಾತುಕತೆ ಗಳು ಈ ಶನಿವಾರ ರೋಮ್‌ನಲ್ಲಿ ಮುಂದುವರಿಯಲಿವೆ. ಅಮೆರಿಕ ಅಂತೆಯೇ ಇರಾನ್ ಈ ಮಾತುಕತೆಗಳ ಬಗ್ಗೆ ಆಶಾಭಾವನೆ ಇಟ್ಟುಕೊಂಡಿವೆ. ಮಾತುಕತೆ ವಿಫಲವಾದರೆ ಅದರ ಪರಿಣಾಮ ಊಹೆಗೂ ನಿಲುಕದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿಯೇ ಹೇಳಿದ್ದಾರೆ.
ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಕುರಿತಂತೆ ಇರಾನ್ ಒಂದು ಒಪ್ಪಂದ ಮಾಡಿಕೊಳ್ಳದಿದ್ದರೆ ಪರಮಾಣು ತಂತ್ರಜ್ಞಾನ ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಿ ನಾಶಮಾಡಲಾಗುವುದು ಎಂದು ಟ್ರಂಪ್ ಕಳೆದ ವಾರ ಹೇಳಿದ್ದರು. ಇದಕ್ಕೊಂದು ಹಿನ್ನೆಲೆಯಿದೆ ಎಂಬುದು ಇದೀಗ ಬಹಿರಂಗವಾಗಿದೆ.
ಇರಾನ್ ಕುರಿತಂತೆ ಎರಡು ವಾರಗಳ ಹಿಂದೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರು ಟ್ರಂಪ್ ಅವರ ಮುಂದೆ ಒಂದು ಸಲಹೆ ಮಂಡಿಸಿದ್ದರು. ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್‌ನ ಪರಮಾಣು ಅಭಿವೃದ್ಧಿ ಸ್ಥಾವರಗಳ ಮೇಲೆ ಬಾಂಬ್ ದಾಳಿ ಮಾಡಿ ನಾಶಮಾಡಬೇಕೆಂಬುದು ನೆತಾನ್ಯಹು ಸಲಹೆಯಾಗಿತ್ತು. ತಮ್ಮ ಸಲಹೆಯನ್ನು ಟ್ರಂಪ್ ತತ್‌ಕ್ಷಣ ಒಪ್ಪುತ್ತಾರೆ ಎಂಬುದು ನೆತಾನ್ಯಹು ಲೆಕ್ಕಾಚಾರವಾಗಿತ್ತು. ಆದರೆ ನೆತಾನ್ಯಹು ಸಲಹೆಯನ್ನು ಟ್ರಂಪ್ ತಳ್ಳಿಹಾಕಿ ಏಕಾಏಕಿ ಬಾಂಬ್ ದಾಳಿ ಮಾಡುವುದು ಸರಿಯಲ್ಲ, ಪರಮಾಣು ಕಾರ್ಯಕ್ರಮ ನಿಲ್ಲಿಸಲು ಇರಾನ್‌ಗೆ ಮೊದಲು ಎಚ್ಚರಿಕೆ ನೀಡಬೇಕು. ಒಂದು ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರು ಇರಾನ್‌ನ ಧಾರ್ಮಿಕ ನಾಯಕ ಅಲಿ ಖಮೇನಿ ಅವರಿಗೆ ಪತ್ರವೊಂದನ್ನು ಬರೆದು ಪರಮಾಣು ಕಾರ್ಯಕ್ರಮ ಕುರಿತಂತೆ ಒಂದು ಒಪ್ಪಂದ ಮಾಡಿಕೊಳ್ಳಲು ಸಲಹೆ ಮಾಡಿದರು. ಈ ಮೊದಲು ಇರಾನ್ ಆಡಳಿತಗಾರರು ಅಮೆರಿಕ ದೊಡನೆ ನೇರ ಮಾತುಕತೆಗೆ ಒಪ್ಪಿರಲಿಲ್ಲ. ಈ ಪತ್ರದಿಂದಾಗಿ ಖಮೇನಿ ಅವರು ಮಾತುಕತೆಗೆ ಒಪ್ಪಿದರು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಕಳೆದ ವಾರ ಒಮಾನ್‌ನ ರಾಜಧಾನಿ ಮಸ್ಕಾಟ್‌ನಲ್ಲಿ ನಡೆದ ಮಾತುಕತೆಯಲ್ಲಿ ಟ್ರಂಪ್ ಅವರ ಪ್ರತಿನಿಧಿ ಸ್ಟೀವ್ ವಿಟ್‌ಕಾಫ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗಾಚಿ ನೇತೃತ್ವದಲ್ಲಿ ಎರಡೂ ದೇಶಗಳ ಅಧಿಕಾರಿಗಳ ತಂಡ ಭಾಗವಹಿಸಿದ್ದವು. ಅಮಾನ್‌ನ ವಿದೇಶಾಂಗ ಸಚಿವ ಬದರಿ ಬಿನ್ ಹಮದ್ ಅಲ್ ಬಸೈದ್ ಮಧ್ಯಸ್ಥಿಕೆದಾರರಾಗಿದ್ದರು. ಈ ಮಾತುಕತೆಗಳು ಸಕಾರಾತ್ಮಕವಾಗಿದ್ದವು ಎಂದು ಎರಡೂ ದೇಶಗಳ ಪ್ರತಿನಿಧಿಗಳು ಹೇಳಿದ್ದಾರೆ.
ಒಪ್ಪಂದ ಸಾಧ್ಯ ಎಂಬ ಭಾವನೆಯಿಂದ ಎರಡೂ ದೇಶಗಳ ಪ್ರತಿನಿಧಿಗಳು ಇದೀಗ ರೋಮ್‌ನಲ್ಲಿ ಎರಡನೆಯ ಸುತ್ತಿನ ಮಾತುಕತೆ ಆರಂಭಿಸಲಿದ್ದಾರೆ. ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳು ಈವರೆಗೆ ನೇರ ಮಾತುಕತೆ ನಡೆಸಿಲ್ಲ. ಎಲ್ಲವೂ ಅಧಿಕಾರಿಗಳ ನಡುವೆ ನಡೆದಿದೆ. ರೋಮ್ ಮಾತುಕತೆಯಲ್ಲಿ ಬಹುಶಃ ಎರಡೂ ದೇಶಗಳ ಪ್ರತಿನಿಧಿಗಳು ನೇರವಾಗಿ ಮಾತನಾಡುವ ಸಾಧ್ಯತೆಗಳಿವೆ.
ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕೈಬಿಡಬೇಕು ಮತ್ತು ಈಗ ಅಭಿವೃದ್ಧಿ ಮಾಡಿರುವ ತಂತ್ರಜ್ಞಾನವನ್ನು ನಾಶಮಾಡಬೇಕು ಎಂಬುದು ಅಮೆರಿಕದ ಒತ್ತಾಯ. ತನ್ನ ಪರಮಾಣು ಕಾರ್ಯಕ್ರಮ ಸಂಪೂರ್ಣವಾಗಿ ಶಾಂತಿ ಉದ್ದೇಶದ್ದು, ನಾಗರಿಕ ಬಳಕೆಯ ಆಶಯ ಉಳ್ಳದ್ದು, ಪರಮಾಣು ಅಸ್ತ್ರ ತಯಾರಿಸುವ ಯಾವುದೇ ಉದ್ದೇಶ ಇಲ್ಲ, ವಿದ್ಯುತ್ ಮತ್ತು ವೈದ್ಯಕೀಯ ಕ್ಷೇತ್ರದ ಬಳಕೆಗೆ ಮಾತ್ರ ಸೀಮಿತವಾದದ್ದು ಎಂಬುದು ಇರಾನ್‌ನ ವಾದ. ಶಾಂತಿ ಉದೆ ಶಕೆ ಯಾವುದೇ ತಂತ್ರಜ್ಞಾನ ಅಭಿವೃದ್ದಿ ಮಾಡುವುದು ತನ ಹಕ್ಕು. ಅದನ್ನು ತಡೆಯಲು ಸಾಧ್ಯವಿಲ್ಲ ಎಂಬುದು ಇರಾನ್ ನಿಲುವು. ಆದರೆ ಅಮೆರಿಕ ಈ ನಿಲುವನ್ನು ಒಪ್ಪುವುದಿಲ್ಲ. ಇರಾನ್ ಪರಮಾಣು ಬಾಂಬ್ ತಯಾರಿಸುವ ಉದೆ ಶವನ್ನು ರಹಸ್ಯವಾಗಿ ಹೊಂದಿದೆ ಎನ್ನುವುದು ಅಮೆರಿಕದ ಸಂಶಯ. ಹೀಗಾಗಿಯೇ ಅಮೆರಿಕ ಪಟ್ಟುಹಿಡಿದಿದೆ. ಅಂತೆಯೇ ಇರಾನ್ ಕೂಡ ತನ ನಿಲುವನ್ನು ಪುನರುಚ್ಛರಿಸುತ್ತಾ ಬಂದಿದೆ.
ಈ ಮಧ್ಯೆ ಮೊದಲ ಸುತ್ತಿನ ಮಾತುಕತೆಯ ನಂತರ ಟ್ರಂಪ್ ನಿಲುವಿನಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. ಪರಮಾಣು ಇಂಧನ ಉದ್ದೇಶದ ತಂತ್ರಜ್ಞಾನ ಅಭಿವೃದ್ಧಿಗೆ ತಡೆಹಾಕದೆ ಯುರೇನಿಯಂಅನ್ನು ಮಿತ ಪ್ರಮಾಣದಲ್ಲಿ ಸಂಸ್ಕರಿಸಲು ಅವಕಾಶ ನೀಡಬಹುದು ಎಂದು ಟ್ರಂಪ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಇರಾನ್ ಒಪ್ಪುವ ಸಾಧ್ಯತೆ ಕಾಣುತ್ತಿದೆ. ಆದರೆ ಇರಾನ್ ಒಂದು ಮಹತ್ವದ ಬೇಡಿಕೆ ಮುಂದಿಟ್ಟಿದೆ. ದೇಶದ ಮೇಲೆ ಜಾರಿಯಿರುವ ಎಲ್ಲ ರೀತಿಯ ಆರ್ಥಿಕ ಮತ್ತು ವಾಣಿಜ್ಯ ನಿರ್ಬಂಧಗಳನ್ನು ರದ್ದು ಮಾಡಬೇಕು ಎಂಬುದು ಇರಾನ್‌ನ ಷರತ್ತು. ಪರಮಾಣು ತಂತ್ರಜ್ಞಾನಕ್ಕೆ ಮಿತಿ ವಿಧಿಸುವ ವಿಚಾರದಲ್ಲಿ ಇರಾನ್ ಒಪ್ಪಿಗೆ ಸೂಚಿಸಿದರೆ ನಂತರ ಉಳಿದ ವಿಚಾರಗಳನ್ನು ಚರ್ಚೆ ಮಾಡಬಹುದು ಎಂಬುದು ಅಮೆರಿಕದ ನಿಲುವು. ರೋಮ್ ಮಾತುಕತೆಯಲ್ಲಿ ಈ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ.
ಆದರೆ ಅದಕ್ಕೂ ಮೊದಲು ಅಮೆರಿಕ ಇರಾನ್‌ಗೆ ಸಂಬಂಧಿಸಿದ ಇನ್ನಷ್ಟು ವಿಚಾರಗಳನ್ನು ಚರ್ಚೆಗೆ ಎಳೆದು ತರಬಹುದಾದ ಸಾಧ್ಯತೆಗಳಿವೆ. ಮುಖ್ಯವಾಗಿ ಗಾಜಾ ಪ್ರದೇಶದಲ್ಲಿ ಹಮಾಸ್ ಉಗ್ರವಾದಿಗಳಿಗೆ. ಲೆಬನಾನ್‌ನಲ್ಲಿ ಹಿಜಬುಲ್ಲ ಉಗ್ರರಿಗೆ, ಯಮನ್‌ನಲ್ಲಿ ಹೌತಿಗಳಿಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಬೇಕೆಂಬ ಷರತ್ತನ್ನು ಅಮೆರಿಕ ಹಾಕಬಹುದು. ಇದೇ ರೀತಿ ಇಸ್ರೇಲ್ ಅಸ್ತಿತ್ವ ಮತ್ತು ಅದು ನೆರೆಯ ದೇಶಗಳ ಮೇಲೆ ನಡೆಸುತ್ತಿರುವ ಆಕ್ರಮಣ ಮತ್ತು ಅಮೆರಿಕ ನೀಡುತ್ತಿರುವ ಯುದ್ಧಾಸ್ತ್ರಗಳ ನೆರವನ್ನು ಇರಾನ್ ಪ್ರಶ್ನಿಸಬಹುದು.
ಮುಸ್ಲಿಮರಲ್ಲಿನ ಷಿಯಾ ಜನರ ಪ್ರಾಬಲ್ಯದ ದೇಶ ಇರಾನ್. ಅರಬ್ ದೇಶಗಳೆಲ್ಲಾ ಸುನ್ನಿ ಜನರ ಪ್ರಾಬಲ್ಯದ ದೇಶಗಳು. ಸುನ್ನಿ ಮತ್ತು ಷಿಯಾ ಪಂಗಡಗಳ ನಡುವಣ ದ್ವೇಷ ಹಳೆಯದು. ಷಿಯಾ ಪ್ರ್ರಾಬಲ್ಯದ ಇರಾನ್ ಪರಮಾಣು ಬಾಂಬ್ ತಯಾರಿಸಿದರೆ ಮುಸ್ಲಿಮ್ ದೇಶಗಳ ನಾಯಕತ್ವ ಇರಾನ್‌ಗೆ ಹೋಗುತ್ತದೆ ಎನ್ನುವ ಆತಂಕ ಸುನ್ನಿ ದೇಶಗಳದ್ದು. ಹೀಗಾಗಿ ಇರಾನ್ ಯಾವುದೇ ರೀತಿಯಲ್ಲಿ ಬಲಿಷ್ಠವಾಗುವುದನ್ನು ಸುನ್ನಿ ದೇಶಗಳು ಸಹಿಸುವುದಿಲ್ಲ. ಹೀಗಾಗಿ ಸೌದಿ ಅರೇಬಿಯಾ, ಯುಎಇ ಮುಂತಾದ ಅತಿಶ್ರೀಮಂತ ದೇಶಗಳು ಅಮೆರಿಕವನ್ನು ಬೆಂಬಲಿಸುತ್ತಿವೆ.
ಇರಾನ್‌ನ ಪರಮಾಣು ಕಾರ್ಯಕ್ರಮನ್ನು ಮಿತಿಗೆ ಒಳಪಡಿಸುವ ದಿಸೆಯಲ್ಲಿ ೨೦೧೫ರ ಹಿಂದೆಯೇ ವಿಶ್ವಸಂಸ್ಥೆ, ಅಮೆರಿಕ, ರಷ್ಯಾ, ಚೀನಾ, ಬ್ರಿಟನ್, ಫ್ರಾನ್ಸ್, ಜರ್ಮನಿ ಮುಂತಾದ ಬಲಿಷ ದೇಶಗಳ ಮಧ್ಯೆಯೇ ಒಂದು ಒಪ್ಪಂದವಾಗಿತ್ತು. ಆ ಒಪ್ಪಂದದ ಅನ್ವಯ ನಿಗದಿತ ಅವಧಿಯಲ್ಲಿ ಅಂತಾರಾಷ್ಟ್ರೀಯ ಪರಮಾಣು ಇಂಧನ ಪರಿವೀಕ್ಷಣ ಸಂಸ್ಥೆ ಇರಾನ್ ಸ್ಥಾವರಗಳ ಪರಿಶೀಲನೆ ಒಳಪಡಿಸಲಾಗುತ್ತಿತ್ತು. ಇರಾನ್ ರಹಸ್ಯವಾಗಿ ಪರಮಾಣು ಅಸ್ತ್ರ ತಯಾರಿಕಾ ಕಾರ್ಯಕ್ರಮ ಮುಂದುವರಿಸಿದೆ ಎಂಬ ವರದಿಗಳ ಮಧ್ಯೆಯೂ ಅದರ ಮೇಲೆ ವಿಽಸಲಾಗಿದ ನಿರ್ಬಂಧಗಳನ್ನು ತೆರವು ಮಾಡುವ ಪ್ರಯತ್ನಗಳು ಆರಂಭವಾಗಿದ್ದವು. ಅಷ್ಟರಲ್ಲಿ ೨೦೧೮ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು. ಇರಾನ್‌ವಿರುದ್ಧ ಹೊಸ ನಿರ್ಬಂಧಗಳು ಜಾರಿಗೆ ಬಂದವು. ಈ ಹಿನ್ನೆಲೆಯಲ್ಲಿ ಇರಾನ್ ತನ್ನ ಪರಮಾಣು ಬಾಂಬ್ ಅಭಿವೃದ್ಧಿ ಕಾರ್ಯಕ್ರಮವನ್ನು ತೀವ್ರಗತಿಯಲ್ಲಿ ಮುಂದುವರಿಸಿದ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತಲೇ ಇದ್ದವು. ಹೀಗಾಗಿ ಇರಾನ್ ಮೇಲೆ ವಿಧಿಸಿದ್ದ ಆರ್ಥಿಕ, ವಾಣಿಜ್ಯ ನಿರ್ಬಂಧಗಳು ಮುಂದುವರಿದವು. ಈ ಮಧ್ಯೆ ಇರಾನ್ ಯುರೇನಿಯಂ ಸಂಸ್ಕರಣೆಯ ಮಟ್ಟವನ್ನು ಏರಿಸಿದ್ದು ಶೇ. ೬೦ ರ ಪ್ರಮಾಣ ತಲುಪಿದೆ ಎಂದು ಅಂತಾರಾಷ್ಟ್ರೀಯ ಪರಮಾಣು ಪರಿವೀಕ್ಷಣ ಸಂಸ್ಥೆಯ ಅಧ್ಯಕ್ಷ ರ‍್ಯಾಫೆಲ್ ಗ್ರಾಸ್ಸಿ ಹೇಳಿದರು.
(ಪರಮಾಣು ಬಾಂಬ್ ತಯಾರಿಸಬೇಕಾದರೆ ಸಂಸ್ಕರಿತ ಯುರೇನಿಯಂ ಶುದ್ಧತೆಯ ಪ್ರಮಾಣ ಶೇ.೯೦ ಇರಬೇಕು.) ಯಾವುದೇ ಕ್ಷಣದಲ್ಲಿ ಇರಾನ್ ಪರಮಾಣು ಬಾಂಬ್ ತಯಾರಿಸುವ ಸಾಮರ್ಥ್ಯ ಪಡೆದಿದೆ ಎಂದು ಗ್ರಾಸಿ ಹೇಳಿರುವುದು ಅಮೆರಿಕ ಮತ್ತು ಇಸ್ರೇಲ್ ನಾಯಕರಲ್ಲಿ ಭೀತಿ ಹುಟ್ಟಿಸಿತು. ಪರಿಣಾಮವಾಗಿ ಇದೀಗ ಸಂಧಾನ ನಡೆಯುತ್ತಿದೆ.
ಪರಮಾಣು ತಂತ್ರಜ್ಞಾನ ಕಾರ್ಯಕ್ರಮದಿಂದಾಗಿ ಇರಾನ್ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ ಬಂದಿದೆ. ವಿಶ ಸಂಸೆ ಯೂ ಸೇರಿದಂತೆ ಜಗತ್ತಿನ ಬಲಿಷ ದೇಶಗಳು ನಿರ್ಬಂಧಗಳನ್ನು ಹೇರಿವೆ. ಯಾವುದೇ ದೇಶ ಇರಾನ್ ಜೊತೆ ಯಾವುದೇ ರೀತಿಯ ವಹಿವಾಟು ನಡೆಸದಂತಾಗಿದೆ. ಇರಾನ್ ಬಹುದೊಡ ತೈಲ ಸಂಪನ್ಮೂಲ ಇರುವ ದೇಶ. ಆದರೆ ಯಾವುದೇ ದೇಶ ಇಸ್ರೇಲ್ ತೈಲವನ್ನು ಕೊಳ್ಳುವಂತಿಲ್ಲ. ನಿರ್ಬಂಧಗಳಿಂದಾಗಿ ಇರಾನ್ ಬಡವಾಗಿದೆ. ಆಹಾರ ಧಾನ್ಯ, ಔಷಧಗಳಿಗೂ ಪರದಾಡುವಂಥ ಪರಿಸ್ಥಿತಿ. ಸಾಮಾಜಿಕವಾಗಿಯೂ ಸಮಸ್ಯೆಗಳನ್ನು ಎದುರಿಸುತ್ತಿದೆ. ಆಡಳಿತದ ಮೇಲೆ ಇಸ್ಲಾಂ ಧಾರ್ಮಿಕ ನಾಯಕರ ಹಿಡಿತ ಬಲವಾಗಿರುವುದರಿಂದಾಗಿ ಬದಲಾವಣೆ ಸುಲಭವಾಗಿ ಆಗುವಂಥದಲ್ಲ. ಬದಲಾವಣೆ ಆಗದಿದ ರೆ ದೇಶ ಮುಂದುವರಿಯುವುದಿಲ್ಲ. ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳು ಫಲಪ್ರಧವಾಗಲಿ ಎನ್ನುವುದು ಇರಾನ್ ಜನರ ಆಶಯವೂ ಆಗಿದೆ.
” ಇರಾನ್ ಪರಮಾಣು ಬಾಂಬ್ ತಯಾರಿಸುವುದನ್ನು ಅರಬ್ ದೇಶಗಳೇ ವಿರೋಧಿಸುತ್ತವೆ. ಇರಾನ್ ಪರಮಾಣು ಬಾಂಬ್ ತಯಾರಿಸಿಬಿಟ್ಟರೆ ಅದು ತಮ್ಮ ಅಸ್ತಿತ್ವಕ್ಕೂ ಸಮಸ್ಯೆಯಾಗುತ್ತದೆ. ಅಷ್ಟೇ ಅಲ್ಲ ಅಂಥ ಬಾಂಬ್ ತಯಾರಿಕೆಗೆ ತಾವೂ ಮುಂದಾಗಬೇಕಾಗುತ್ತದೆ ಎಂದು ಮುಸ್ಲಿಮ್ ದೇಶಗಳ ನಾಯಕರು ಭಾವಿಸಿದ್ದಾರೆ. ಹೀಗಾಗಿ ಇರಾನ್‌ನ ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಕಾರ್ಯಕ್ರಮವನ್ನು ಮಿತಿಗೆ ಒಳಪಡಿಸುವ ಟ್ರಂಪ್ ಪ್ರಯತ್ನಕ್ಕೆ ಬೆಂಬಲ ನೀಡುತ್ತಿವೆ.”
ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…
ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…
ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…
ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…