ಅಂಕಣಗಳು

ಆತಂಕದ ಮಧ್ಯೆ ಕದನ ವಿರಾಮ-ಗೆದ್ದವರು ಯಾರು?

ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಿಂತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಜಾರಿಗೆ ಬಂದ ಕದನ ವಿರಾಮ ಸದ್ಯಕ್ಕೆ ಯಶಸ್ವಿಯಾಗಿ ಜಾರಿಯಾಗಿದೆ. ಆದರೆ ಯುದ್ಧ ಮತ್ತೆ ಸಿಡಿಯಬಹುದಾದ ಆತಂಕ ಎರಡೂ ದೇಶಗಳಲ್ಲಿ ಇದೆ. ಕದನ ವಿರಾಮವನ್ನು ಇಸ್ರೇಲ್ ಉಲ್ಲಂಸಿದರೆ ತಾನೂ ಪ್ರತಿದಾಳಿ ನಡೆಸುವುದಾಗಿ ಇರಾನ್ ಘೋಷಿಸಿದೆ. ಹೀಗಾಗಿ ಎರಡೂ ದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜನಜೀವನ ನಿಧಾನವಾಗಿ ಮಾಮೂಲಿ ಸ್ಥಿತಿಗೆ ಬರುತ್ತಿದೆ. ಎರಡೂ ದೇಶಗಳಲ್ಲಿ ಯುದ್ಧದಿಂದಾದ ಹಾನಿಯ ಪರಿಣಾಮಗಳನ್ನು ನಿಭಾಯಿಸಲು ಸರ್ಕಾರಗಳು ಕೆಲಸಮಾಡುತ್ತಿವೆ.

ಹನ್ನೆರಡು ದಿನಗಳ ಯುದ್ಧದಲ್ಲಿ ತಾನು ಗೆಲುವು ಸಾಧಿಸಿರುವುದಾಗಿ ಎರಡೂ ದೇಶಗಳು ಹೇಳಿಕೊಳ್ಳುತ್ತಿವೆ. ಪರಮಾಣು ಬಾಂಬ್ ತಯಾರಿಸುವ ಇರಾನ್ ಕನಸನ್ನು ನಾಶಮಾಡಿರುವುದಾಗಿ ಇಸ್ರೇಲ್ ಹೇಳುತ್ತಿದೆ. ಇರಾನ್‌ನ ಎಲ್ಲ ಪ್ರಮುಖ ಪರಮಾಣು ಸ್ಥಾವರಗಳು ಮತ್ತು ಪ್ರಯೋಗಾಲಯಗಳನ್ನು ನಾಶ ಮಾಡಿರುವುದಾಗಿ ಇಸ್ರೇಲ್ ಪ್ರಧಾನಿ ನೇತಾನ್ಯಹು ಘೋಷಿಸಿದ್ದಾರೆ. ಇಸ್ರೇಲ್ ಬಾಂಬ್ ದಾಳಿಯಲ್ಲಿ ಯುರೇನಿಯಂ ಸಂಸ್ಕರಣ ಸ್ಥಾವರಗಳಿಗೆ ಆಗಿರುವ ಹಾನಿ ಬೃಹತ್ ಪ್ರಮಾಣದ್ದೇನಲ್ಲ. ಪರಮಾಣು ಇಂಧನ ಕಾರ್ಯಕ್ರಮವನ್ನು ಮತ್ತೆ ಕೆಲವೇ ದಿನಗಳಲ್ಲಿ ಆರಂಭಿಸಬಹುದಾಗಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಫೆಜಾಕಿಯಾನ್ ಹೇಳಿದ್ದಾರೆ. ಅಷ್ಟೇ ಏಕೆ ನತಾಂಜ್, ಫರ್ದು ಮತ್ತ ಎಸ್‌ಫಯಾನ್ ಪರಮಾಣು ಸ್ಥಾವರಗಳ ಮೇಲೆ ರಾತ್ರೋರಾತ್ರಿ ನಡೆಸಿದ ಬಾಂಬ್ ದಾಳಿಯಿಂದ ಅಮೆರಿಕ ಗಳಿಸಿದ್ದೇನು ಎಂದು ಇರಾನ್ ಧಾರ್ಮಿಕ ನಾಯಕ ಅಯತ್ ಉಲ್ಲಾ ಅಲಿ ಖಮೇನಿ ಅವರೇ ಪ್ರಶ್ನಿಸಿದ್ದಾರೆ.

ಈಗ ಲಭ್ಯವಿರುವ ವರದಿಗಳ ಪ್ರಕಾರ ಹನ್ನೆರಡು ದಿನಗಳ ಯುದ್ಧದಲ್ಲಿ ಇರಾನ್‌ನಲ್ಲಿ ೬೦೦ ಮಂದಿ ಸತ್ತು ಸುಮಾರು ಐದು ಸಾವಿರ ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ಸತ್ತಿದ್ದು ಏಳುನೂರು ಮಂದಿ ಗಾಯಗೊಂಡಿದ್ದಾರೆ. ಎರಡೂ ದೇಶಗಳಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ತನ್ನ ಪರಮಾಣು ವಿಜ್ಞಾನಿಗಳನ್ನು, ಸೇನಾ ಕಮಾಂಡರುಗಳನ್ನು ಇರಾನ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿಖರವಾಗಿ ಗುರುತಿಸಿ ಅವರನ್ನು ಇಸ್ರೇಲ್ ಕೊಂದಿದ್ದು ಮತ್ತು ಯುದ್ಧಾಸ್ತ್ರಗಳ ಸಂಗ್ರಹಾಗಾರಗಳು, ಕ್ಷಿಪಣಿ ಉಡಾವಣೆ ನೆಲೆಗಳನ್ನು ಧ್ವಂಸಮಾಡಿದ್ದು ಇರಾನ್‌ಗೆ ಆಘಾತವನ್ನೇ ಉಂಟುಮಾಡಿದೆ. ಇರಾನ್ ಪ್ರತಿದಾಳಿ ನಡೆಸಿದರೂ ಇಸ್ರೇಲ್‌ನ ಮಿಲಿಟರಿ ನೆಲೆಗಳನ್ನು ಮತ್ತು ನಾಯಕತ್ವವನ್ನು ನಾಶಮಾಡಲು ಇರಾನ್‌ಗೆ ಸಾಧ್ಯವಾಗಲಿಲ್ಲ.

ಇರಾನ್‌ನ ಧಾರ್ಮಿಕ ನಾಯಕ ಮತ್ತು ಇತರ ಅಧಿಕಾರಾರೂಢರನ್ನು ಕೊಲ್ಲುವ ಯೋಜನೆಯನ್ನು ಇಸ್ರೇಲ್ ರೂಪಿಸಿತ್ತಾದರೂ ಅದನ್ನು ಜಾರಿಗೊಳಿಸಲಿಲ್ಲ. ಈ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಸಲಹೆಯನ್ನು ಇಸ್ರೇಲ್ ಪಾಲಿಸಿತು. ಇರಾನ್‌ನ ನಾಯಕತ್ವವನ್ನು ನಾಶಮಾಡುವುದು ಈ ಯುದ್ಧದ ಗುರಿಯಾಗಬಾರದು ಎನ್ನುವುದು ಟ್ರಂಪ್ ನಿಲುವಾಗಿತ್ತು. ಇದಕ್ಕೆ ಕಾರಣವೂ ಇದೆ. ಈ ಹಿಂದೆ ಇರಾಕ್, ಲಿಬಿಯಾ, ಅಫ್ಘಾನಿಸ್ತಾನದಲ್ಲಿ ಅಧಿಕಾರಾರೂಢರನ್ನು ನಾಶಮಾಡಿದ ನಂತರ ಏನಾಯಿತು ಎನ್ನುವ ಇತಿಹಾಸ ಎಲ್ಲರ ಮುಂದಿದೆ. ಅಧಿಕಾರಾರೂಢರನ್ನು ಕೆಳಗಿಳಿಸಿ ಅಥವಾ ಕೊಂದ ನಂತರ ಆ ದೇಶಗಳಲ್ಲಿ ಒಂದು ವ್ಯವಸ್ಥೆ ಸ್ಥಾಪಿಸಲು ಸಾಧ್ಯವಾಗಿಲ್ಲ. ಆ ದೇಶಗಳಲ್ಲಿ ಅರಾಜಕತೆ ತುಂಬಿದೆ. ತೊಂದರೆಯೇ ಜಾಸ್ತಿಯಾಗಿದೆ. ಈ ಅನುಭವದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಧಾರ್ಮಿಕ ನಾಯಕ ಅಲಿ ಖಮೇನಿ ಮತ್ತು ಇತರ ನಾಯಕರನ್ನು ಕೊಲ್ಲುವ ಆಲೋಚನೆಯನ್ನು ಟ್ರಂಪ್ ಮತ್ತು ನೆತಾನ್ಯಹು ಕೈಬಿಟ್ಟಿದ್ದಾರೆಂದು ಹೇಳಲಾಗಿದೆ. ಆದರೆ ಈ ಯುದ್ಧ ಇರಾನ್‌ನ ಆಡಳಿತಗಾರರಲ್ಲಿ ಬದಲಾವಣೆ ತರುವಲ್ಲಿ ವಿಫಲವಾಗಿದೆ. ಧಾರ್ಮಿಕ ಆಡಳಿತವನ್ನು ಈ ಯುದ್ಧ ಮತ್ತಷ್ಟು ಗಟ್ಟಿ ಮಾಡಿದಂತೆ ಕಾಣುತ್ತಿದೆ. ಬಹುಶಃ ಯುದ್ಧ ಮತ್ತೆ ಸಿಡಿಯಲು ಇದೇ ಆಡಳಿತ ಕಾರಣವಾದರೆ ಆಶ್ಚರ್ಯವಿಲ್ಲ.

‘ಇರಾನ್‌ನ ಯುರೇನಿಯಂ ಸಂಸ್ಕರಣ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಇಸ್ರೇಲ್ ಮತ್ತು ಅಮೆರಿಕ ನಡೆಸಿದ ವೈಮಾನಿಕ ಬಾಂಬ್ ದಾಳಿಗಳಿಂದ ಯುರೇನಿಯಂ ಸಂಸ್ಕರಣ ಪ್ರಯತ್ನಗಳನ್ನು ಹಲವಾರು ದಶಕಗಳ ಹಿಂದಕ್ಕೆ ನೂಕಲಾಗಿದೆ.ಅಂದರೆ ಮತ್ತೆ ಸಂಸ್ಕರಣೆ ನಡೆಸಲು ಹಲವಾರು ದಶಕಗಳೇ ಬೇಕಾಗಬಹುದು’ ಎಂದು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆದ ನ್ಯಾಟೋ ಶೃಂಗಸಭೆ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಈ ಘೋಷಣೆ ಅಮೆರಿಕದಲ್ಲಿಯೇ ವಿವಾದಕ್ಕೆ ಗುರಿಯಾಗಿದೆ. ಅಮೆರಿಕದ ಬಾಂಬ್ ದಾಳಿಯಲ್ಲಿ ಇರಾನ್ ಪರಮಾಣು ಸ್ಥಾವರಗಳಿಗೆ ದೊಡ್ಡಪ್ರಮಾಣದ ಹಾನಿಯೇನೂ ಆಗಿಲ್ಲ, ಕೆಲವೇ ತಿಂಗಳುಗಳಲ್ಲಿ ಇರಾನ್ ಯುರೇನಿಯಂ ಸಂಸ್ಕರಣೆಯನ್ನು ಪುನರಾರಂಭಿಸಬಹುದಾಗಿ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಮಾಡಿರುವ ವರದಿ ಬಹಿರಂಗವಾಗಿ ವಿವಾದ ಎಬ್ಬಿಸಿದೆ. ಇರಾನ್‌ನ ಯುರೇನಿಯಂ ಸಂಸ್ಕರಣೆ ಪ್ರಯತ್ನಗಳನ್ನು ಸಂಪೂರ್ಣವಾಗಿ ನಾಶಮಾಡಲಾಗಿದೆ ಎಂಬ ಟ್ರಂಪ್ ಹೇಳಿಕೆಯನ್ನು ಈಗ ಪ್ರಶ್ನಿಸಲಾಗುತ್ತಿದೆ.

ರಹಸ್ಯ ಗುಪ್ತಚಾರರ ವರದಿ ಸತ್ಯಕ್ಕೆ ದೂರವಾದುದು ಎಂದು ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ. ಟ್ರಂಪ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಹಿನ್ನೆಲೆಯಲ್ಲಿ ಸಿಐಎ ಕೂಡ ಟ್ರಂಪ್ ಹೇಳಿಕೆಯನ್ನು ಸಮರ್ಥಿಸುವಂಥ ಮಾಹಿತಿಯನ್ನು ಬಹಿರಂಗಮಾಡಿದೆ.

ಇರಾನ್ ಮತ್ತು ಅಮೆರಿಕದ ನಡುವೆ ಮತ್ತೆ ಮಾತುಕತೆ ಆರಂಭವಾಗುವ ಸೂಚನೆಯನ್ನು ಟ್ರಂಪ್ ನೀಡಿದ್ದಾರೆ. ಮುಂದಿನ ಗುರುವಾರ ಎರಡೂ ದೇಶಗಳ ಅಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನಂತರ ಎರಡೂ ದೇಶಗಳ ನಡುವೆ ಒಪ್ಪಂದ ಖಚಿತ ಎನ್ನುವುದು ಅವರ ನಂಬಿಕೆ. ಏನೇ ಆದರೂ ಪರಮಾಣು ಬಾಂಬ್ ತಯಾರಿಸಲು ನಡೆಸುವ ಯುರೇನಿಯಂ ಸಂಸ್ಕರಣೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಪರಮಾಣು ಇಂಧನಕ್ಕಾಗಿ ಯುರೇನಿಯಂ ಸಂಸ್ಕರಣೆ ಮಾಡುವುದು ತನ್ನ ಹಕ್ಕು ಎಂದು ಇರಾನ್ ಹೇಳುತ್ತಿರುವುದರಿಂದ ಬಿಕ್ಕಟ್ಟು ಬಗೆಹರಿಯುವ ಸಾಧ್ಯತೆ ಕಾಣಿಸುತ್ತಿಲ್ಲ.

ಈ ವಾದ-ಪ್ರತಿವಾದ ಟ್ರಂಪ್ ಅವರ ನಿರ್ಧಾರಗಳನ್ನು ಪ್ರಶ್ನಿಸಲು ಅಮೆರಿಕದ ಕಾಂಗ್ರೆಸ್‌ನ ವಿರೋಧಿ ಡೆಮಾಕ್ರಟಿಕ್ ಪಕ್ಷದ ಸದಸ್ಯರಿಗೆ ಅವಕಾಶ ಒದಗಿಸಿದೆ. ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಕೆಲವು ಸದಸ್ಯರೇ ಟ್ರಂಪ್ ಅವರ ಆಡಳಿತ ವೈಖರಿಯನ್ನು ಟೀಕಿಸಲು ಆರಂಭಿಸಿದ್ದಾರೆ. ಅಮೆರಿಕದಿಂದ ರಫ್ತಾಗುವ ಮತ್ತು ಆಮದಾಗುವ ವಸ್ತುಗಳ ಮೇಲೆ ಏಕಪಕ್ಷೀಯವಾಗಿ ಸುಂಕ ವಿಧಿಸುವ ಅಧಿಕಾರ ಡೊನಾಲ್ಡ್ ಟ್ರಂಪ್ ಅವರಿಗೆ ಇಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಈ ವಿವಾದ ಎದ್ದಿದೆ.

ಕಾಂಗ್ರೆಸ್ ಒಪ್ಪಿಗೆ ಇಲ್ಲದೆ ಇರಾನ್‌ನ ಮೇಲೆ ಬಾಂಬ್ ದಾಳಿ ನಡೆಸುವ ಅಧಿಕಾರ ಟ್ರಂಪ್‌ಗೆ ಇಲ್ಲ ಎಂದು ವಿರೋಧಿ ಸದಸ್ಯರು ವಾದ ಮಾಡುತ್ತಿದ್ದಾರೆ. ಈ ಸಂಬಂಧವಾಗಿ ಕಾಂಗ್ರೆಸ್‌ನಲ್ಲಿ ಚರ್ಚೆ ಆರಂಭಿಸುವ ಸೂಚನೆಯನ್ನೂ ಅವರು ನೀಡಿದ್ದಾರೆ. ಈಗಾಗಲೇ ಅವರ ಮೇಲೆ ವಾಗ್ದಂಡನೆ ನಿರ್ಣಯವೊಂದು ಚರ್ಚೆಗೆ ಬರಬೇಕಿದೆ. ಈ ಎಲ್ಲ ಬೆಳವಣಿಗೆಗಳು ಟ್ರಂಪ್ ಅವರನ್ನು ವಿವಾದಕ್ಕೆ ಒಳಗುಮಾಡಿವೆಯಾದರೂ ಅದರಿಂದ ಅವರ ಆಡಳಿತ ವೈಖರಿಯೇನೂ ಬದಲಾಗುವ ಸಾಧ್ಯತೆ ಕಾಣುತ್ತಿಲ್ಲ.

ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಿಲ್ಲಲು ತಾವೇ ಕಾರಣ ಎನ್ನುವುದು ಟ್ರಂಪ್ ಅವರ ವಾದ. ಆದರೆ ಇರಾನ್ ಹೇಳುವುದೇ ಬೇರೆ. ತಾನು ನಡೆಸಿದ ಕ್ಷಿಪಣಿ ದಾಳಿಗೆ ಹೆದರಿ ಇಸ್ರೇಲ್ ಪ್ರಧಾನಿ ನೆತಾನ್ಯಹು ಅವರು ಟ್ರಂಪ್ ಅವರನ್ನು ಕದನವಿರಾಮಕ್ಕೆ ಒತ್ತಾಯಿಸಿ ಜಾರಿಗೆ ತಂದಿದ್ದಾರೆ ಎಂಬುದು ಇರಾನ್ ವಾದ. ಅಮೆರಿಕ ಯುದ್ಧಕ್ಕಿಳಿಯಲು ಇದೇ ಕಾರಣ ಎಂಬುದು ಅವರ ಊಹೆ. ಆದರೆ ವಾಸ್ತವವಾಗಿ ಬೇರೆಯೇ ಕಾರಣ ಇರಬಹುದು. ಇರಾನ್‌ನ ಯುರೇನಿಯಂ ಸಂಸ್ಕರಣ ಸ್ಥಾವರಗಳನ್ನು ನಾಶಮಾಡಿದ ಖ್ಯಾತಿ ತಮಗೆ ಬರಲೆಂದೇ ಟ್ರಂಪ್ ಬಾಂಬ್ ದಾಳಿಗೆ ಆದೇಶ ನೀಡಿರಬಹುದು ಎಂಬುದು ಬಹುಶಃ ಸತ್ಯಕ್ಕೆ ಹತ್ತಿರವಾದ ವಾದ. ಇಂಥದ್ದೇ ಇನ್ನೊಂದು ಘಟನೆ ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧದ್ದು. ಟ್ರಂಪ್ ಮಧ್ಯಪ್ರವೇಶಕ್ಕೆ  ತಾನು ಅವಕಾಶ ನೀಡಿಲ್ಲ ಅಂದರೆ ಟ್ರಂಪ್ ದಾಳಿ ನಿಲ್ಲಿಸಲು ಒತ್ತಾಯಿಸಿಲ್ಲ ಎಂದು ಭಾರತ ಸ್ಪಷ್ಟಪಡಿಸಿದ ಮೇಲೂ ಟ್ರಂಪ್ ತಾವೇ ಯುದ್ಧ ನಿಲ್ಲಿಸಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಪಾಕಿಸ್ತಾನದ ಕೋರಿಕೆಯ ಮೇರೆಗೆ ದಾಳಿ ನಿಲ್ಲಿಸಲಾಯಿತು ಎಂಬುದು ಭಾರತದ ಸ್ಪಷ್ಟನೆ. ಬಹುಶಃ ಯುದ್ಧ ನಿಲ್ಲಿಸಿ ಕದನವಿರಾಮಕ್ಕೆ ಮುಂದಾಗುವಂತೆ ಪಾಕಿಸ್ತಾನವನ್ನು ಟ್ರಂಪ್ ಅವರು ಒತ್ತಾಯಿಸಿರಬಹುದು. ನಂತರದ ಬೆಳವಣಿಗೆಗಳನ್ನು ನೋಡಿದರೆ ಈ ವಾದದಲ್ಲಿಯೇ ಹೆಚ್ಚು ಸತ್ಯ ಇದ್ದಂತೆ ಕಾಣುತ್ತದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಸೈಯದ್ ಅಸಿಮ್ ಮುನೀರ್ ಅವರನ್ನು ಟ್ರಂಪ್ ಅವರು ಶ್ವೇತಭವನಕ್ಕೆ ಕರೆದು ಜೊತೆಯಲ್ಲಿ ಊಟಮಾಡಿರುವುದು ಮೇಲಿನ ವಾದಕ್ಕೆ ಸಮರ್ಥನೆ ಒದಗಿಸುತ್ತದೆ. ಯುದ್ಧ ನಿಲ್ಲಿಸಿದಕ್ಕಾಗಿ ಮುನಿರ್ ಅವರು ಟ್ರಂಪ್ ಅವರಿಗೆ ವಂದನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ನೊಬೆಲ್ ಶಾಂತಿ ಪ್ರಶಸ್ತಿಗೂ ಟ್ರಂಪ್ ಹೆಸರನ್ನು ಅವರು ಸೂಚಿಸಿದ್ದಾರೆ. ಸಹಜವಾಗಿಯೇ ಟ್ರಂಪ್‌ಗೆ ಖುಷಿಯಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಆಪ್ತ ಸ್ನೇಹಿತರು ಎಂದು ಹೇಳಿಕೊಂಡು ಟ್ರಂಪ್ ಅವರು ಪಾಕಿಸ್ತಾನವನ್ನು ಹೊಗಳುತ್ತಿರುವುದು ಸಹಜವಾಗಿಯೇ ಅನುಮಾನಕ್ಕೆ ಆಸ್ಪದ ನೀಡಿದೆ. ಟ್ರಂಪ್ ನಂಬಿಕೆಗೆ ಅರ್ಹರೇ ಎನ್ನುವ ಪ್ರಶ್ನೆ ಈಗ ಭಾರತಕ್ಕೆ ಎದುರಾಗಿದೆ. ಭಾರತ ವಿರೋಧಿ ಮುನಿರ್ ಅವರು ಅಮೆರಿಕದಲ್ಲಿ ಇದ್ದಾಗಲೇ ಟ್ರಂಪ್ ಅವರು ಮೋದಿ ಅವರಿಗೆ ಊಟಕ್ಕೆ ಬರಲು ಆಹ್ವಾನ ನೀಡಿದ್ದರು. ಆದರೆ ಮೋದಿ ಆ ಆಹ್ವಾನವನ್ನು ತಿರಸ್ಕರಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಇಸ್ರೇಲ್- ಇರಾನ್ ಯುದ್ಧದ ವಿಚಾರದಲ್ಲಿ ಮತ್ತು ನಂತರದ ಬೆಳವಣಿಗೆಗಳ ಲಾಭ ಗಳಿಸಲು ಟ್ರಂಪ್ ಲೆಕ್ಕಾಚಾರ ಹಾಕುತ್ತಿರುವಂತಿದೆ. ಈ ಯುದ್ಧದಲ್ಲಿ ಗೆದ್ದವರು ಯಾರು ಎಂಬುದು ಮುಂದಿನ ಬೆಳವಣಿಗೆಗಳು ನಿರ್ಧರಿಸಲಿವೆ.

“ಇರಾನ್‌ನ ಯುರೇನಿಯಂ ಸಂಸ್ಕರಣ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಇಸ್ರೇಲ್ ಮತ್ತು ಅಮೆರಿಕ ನಡೆಸಿದ ವೈಮಾನಿಕ ಬಾಂಬ್ ದಾಳಿಗಳಿಂದ ಯುರೇನಿಯಂ ಸಂಸ್ಕರಣ ಪ್ರಯತ್ನಗಳನ್ನು ಹಲವಾರು ದಶಕಗಳ ಹಿಂದಕ್ಕೆ ನೂಕಲಾಗಿದೆ.ಅಂದರೆ ಮತ್ತೆ ಸಂಸ್ಕರಣೆ ನಡೆಸಲು ಹಲವಾರು ದಶಕಗಳೇ ಬೇಕಾಗಬಹುದು’ ಎಂದು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆದ ನ್ಯಾಟೋ ಶೃಂಗಸಭೆ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಈ ಘೋಷಣೆ ಅಮೆರಿಕದಲ್ಲಿಯೇ ವಿವಾದಕ್ಕೆ ಗುರಿಯಾಗಿದೆ. ಅಮೆರಿಕದ ಬಾಂಬ್ ದಾಳಿಯಲ್ಲಿ ಇರಾನ್ ಪರಮಾಣು ಸ್ಥಾವರಗಳಿಗೆ ದೊಡ್ಡಪ್ರಮಾಣದ ಹಾನಿಯೇನೂ ಆಗಿಲ್ಲ, ಕೆಲವೇ ತಿಂಗಳುಗಳಲ್ಲಿ ಇರಾನ್ ಯುರೇನಿಯಂ ಸಂಸ್ಕರಣೆಯನ್ನು ಪುನರಾರಂಭಿಸಬಹುದಾಗಿ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಮಾಡಿರುವ ವರದಿ ಬಹಿರಂಗವಾಗಿ ವಿವಾದ ಎಬ್ಬಿಸಿದೆ.”

– ಡಿ.ವಿ.ರಾಜಶೇಖರ 

ಆಂದೋಲನ ಡೆಸ್ಕ್

Recent Posts

ವಾಲ್ಮೀಕಿ ಹಗರಣ: ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ

ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ರದ್ದು…

27 mins ago

ರಾಜ್ಯಪಾಲರ ನಡೆ ಖಂಡಿಸಿ ಪ್ರತಿಭಟನೆ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ರಾಜ್ಯಪಾಲರು ಭಾಷಣ ಓದದೇ ಸಂವಿಧಾನ ಉಲ್ಲಂಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ…

48 mins ago

ಭಾಷಣ ಓದದೇ ತೆರಳಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌: ಕಾಂಗ್ರೆಸ್‌ ನಾಯಕರಿಂದ ಹೈಡ್ರಾಮಾ

ಬೆಂಗಳೂರು: ವಿಧಾನಸೌಧದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಬೇಕಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಕೇವಲ ಎರಡನೇ ಮಾತಿನಲ್ಲಿ…

1 hour ago

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಇಂದು ಬಿಗ್ ಡೇ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್‌ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಹತ್ವದ…

2 hours ago

ರಾಜ್ಯಪಾಲರು-ಸರ್ಕಾರದ ಸಂಘರ್ಷದ ನಡುವೆಯೇ ವಿಧಾನಸೌಧದಲ್ಲಿ ಅಧಿವೇಶನ: ಪೊಲೀಸರಿಂದ ಭದ್ರತೆ

ಬೆಂಗಳೂರು: ರಾಜ್ಯ ಸರ್ಕಾರ ಇಂದಿನಿಂದ ಜನವರಿ.31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ಕರೆದಿದ್ದು, ನರೇಗಾ ಯೋಜನೆ ಹೆಸರು ಬದಲಾವಣೆ ಆಕ್ಷೇಪಿಸಿ ಕರೆದಿರುವ…

2 hours ago

ಓದುಗರ ಪತ್ರ: ಕಾಲೇಜು ವಿದ್ಯಾರ್ಥಿನಿಯರಿಗೆ ಬಿಸಿಯೂಟ ಶ್ಲಾಘನೀಯ

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…

5 hours ago