ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಮಹಾರಾಷ್ಟ್ರದಲ್ಲಿ ಇಂದು ಯುಗಾದಿ. ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ಗುಡಿ ಪಾಡ್ವ ಎಂದು ಕರೆಯುತ್ತಾರೆ. ಹಿಂದೂ ಧಾರ್ಮಿಕ ಆಚರಣೆಯ ಪ್ರಕಾರ ಯುಗಾದಿ ಈ ರಾಜ್ಯಗಳಿಗೆ ಹೊಸ ವರುಷದ ಮೊದಲ ದಿನ. ಸನಾತನ ಧರ್ಮದ ರಾಷ್ಟ್ರ ಸ್ಥಾಪನೆಯ ಕನಸು ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅದರ ಸ್ಥಾಪಕರಾದ ಕೇಶವ್ ಬಲಿರಾಂ ಹೆಡಗೇವಾರ್ ಮತ್ತು ಸಂಘದ ಎರಡನೇ ಸರ ಸಂಚಾಲಕರಾಗಿದ್ದ ಗೋಲ್ವಾಲ್ಕರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಹದಿಮೂರು ವರ್ಷಗಳ ನಂತರ ನಾಗ್ಪುರದ ಆರ್‌ಎಸ್‌ಎಸ್‌ನ ಪ್ರಧಾನ ಕಚೇರಿಗೆ ಭೇಟಿ ನೀಡುತ್ತಿರುವುದು ಬಿಜೆಪಿ, ಆರ್‌ಎಸ್‌ಎಸ್ ಮತ್ತು ಮಹಾರಾಷ್ಟ್ರದ ಎನ್‌ಡಿಎ ಸರ್ಕಾರಕ್ಕೆ ವಿಶೇಷ ಸಂದರ್ಭವಾಗಿದೆ.
ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ಆರ್‌ಎಸ್‌ಎಸ್ ನಿಯಂತ್ರಿಸುತ್ತಾ ಅದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವುದು ಬಹಿರಂಗ ಸತ್ಯ. ಕೆಲವೊಮ್ಮೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕತ್ವದ ನಡುವೆ ಮುಸುಕಿನ ಗುದ್ದಾಟವೂ ನಡೆದಿರುವುದನ್ನು ಇತಿಹಾಸದ ಘಟನೆಗಳು ಹೇಳುತ್ತವೆ. ಪ್ರಧಾನಿ ಮೋದಿ ಅವರು ಆರ್‌ಎಸ್‌ಎಸ್ ಕಾರ್ಯಕರ್ತರಾಗಿ ಬೆಳೆದವರು. ಕಳೆದೆರಡು ಚುನಾವಣೆಗಳಲ್ಲಿ ಮೋದಿ ಪ್ರಭಾವಳಿ ಇದ್ದದ್ದು ದೇಶಕ್ಕೇ ಗೊತ್ತಿರುವ ಸಂಗತಿ. ಈ ಪ್ರಭಾವಳಿ ಮೋದಿ ಅವರನ್ನೂ ಕೆಲವೊಮ್ಮೆ ದಾರಿ ತಪ್ಪಿಸಿರುವುದುಂಟು. ಮೋದಿ, ನಾನು ನಾನ್ ಬಯಲಾಜಿಕಲ್ ಮ್ಯಾನ್ ಎಂದು ಹೇಳಿಕೊಂಡದ್ದು ವಿವಾದವಾಗಿತ್ತು. ಅದಕ್ಕಾಗಿ ಆರ್‌ಎಸ್‌ಎಸ್ ಸರಸಂಚಾಲಕ ಮೋಹನ್ ಭಾಗವತ್ ‘ನಿಜವಾದ ಆರ್‌ಎಸ್‌ಎಸ್ ಕಾರ್ಯಕರ್ತ ಅಹಂಕಾರಿ ಆಗಿರಬಾರದು ಮತ್ತು ಮನುಷ್ಯನಾದವನು ತಾನು ಸೂಪರ್ ಮ್ಯಾನ್ ಮತ್ತು ಭಗವಂತನಾಗಲು ಪ್ರಯತ್ನಿಸಬಾರದು’ ಎಂದು ಪರೋಕ್ಷವಾಗಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬೆಳವಣಿಗೆಯಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ನಡುವೆ ಸ್ವಲ್ಪ ಬಿರುಕು ಉಂಟಾಗಿದ್ದು ಸುಳ್ಳಲ್ಲ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಸಂಘಟನೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿಲ್ಲವಾದ್ದರಿಂದ ಅದು ಸ್ಪಷ್ಟ ಬಹುಮತಗಳಿಸಲು ಆಗಲಿಲ್ಲ ಎನ್ನುವ ವಾದವಿದೆ. ಈ ಚುನಾವಣೆಯಲ್ಲಿ ನಾಲ್ಕು ನೂರು ಸ್ಥಾನಗಳನ್ನೂ ಮೀರಿ ಗೆಲ್ಲುವುದಾಗಿ ಮೋದಿ ದೇಶದುದ್ದಕ್ಕೂ ಹೇಳುತ್ತಾ ಬಂದರು. ಆದರೆ ಚುನಾವಣೆ ಫಲಿತಾಂಶ ಬಂದಾಗ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೇರಲೂ ಸಾಧ್ಯವಾಗದಂತೆ ಕೇವಲ ೨೪೦ ಸ್ಥಾನಗಳಿಗೇ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆನಂತರ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡದ್ದರಿಂದ ಪಕ್ಷವು ಗೆಲುವು ಸಾಧಿಸಲು ಸಾಧ್ಯವಾಯಿತೆನ್ನುವ ಅಭಿಪ್ರಾಯವೂ ಇದೆ. ಆದರೆ ಬಿಜೆಪಿಯು ಈಗ ತನ್ನ ಸ್ವಂತ ಶಕ್ತಿಯ ಮೇಲೆ ಚುನಾವಣೆಯನ್ನು ಗೆಲ್ಲುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂದು ಅಧ್ಯಕ್ಷ ಜೆ.ಪಿ.ನಡ್ಡಾ ಒಮ್ಮೆ ಹೇಳಿದ್ದು, ಸಂಘಪರಿವಾರವು ಸಿಟ್ಟಿಗೇಳುವಂತೆ ಮಾಡಿತ್ತು. ಆದರೆ ಬಿಜೆಪಿ ಮತ್ತು ಸಂಘ ಪರಿವಾರದ ಕೆಲವು ನಾಯಕರ ಪರೋಕ್ಷ ಮಾತುಕತೆಯಿಂದ ಪರಿಸ್ಥಿತಿ ಮತ್ತು ಬಾಂಧವ್ಯ ಸುಧಾರಿಸಿತು.
ಕಳೆದ ವರ್ಷದ ಜನವರಿಯಲ್ಲಿ ಶ್ರೀರಾಮ ಮಂದಿರದ ಪ್ರಾರಂಭೋತ್ಸವದಲ್ಲಿ ಪ್ರಧಾನಿ ಮೋದಿ ಅವರು ಆರ್‌ಎಸ್‌ಎಸ್ ಸರಸಂಚಾಲಕ ಮೋಹನ್ ಭಾಗವತ್ ಅವರ ಜೊತೆ ವೇದಿಕೆ ಹಂಚಿಕೊಂಡದ್ದು, ಬಿಟ್ಟರೆ ಈ ಇಬ್ಬರೂ ನಾಯಕರು ಸಾರ್ವಜನಿಕ ವೇದಿಕೆಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡದ್ದಿಲ್ಲ. ಹಾಗಾಗಿ ಯುಗಾದಿ ಹಬ್ಬದ ದಿನ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ಮತ್ತು ಅವರು ಧಾರ್ಮಿಕವಾಗಿ ಮತ್ತು ರಾಜಕೀಯವಾಗಿ ಏನು ಮಾತನಾಡಲಿದ್ದಾರೆ ಎನ್ನುವ ಕುತೂಹಲ ಉಂಟಾಗಿದೆ. ಒಬ್ಬ ಪ್ರಧಾನಿ ಆರ್‌ಎಸ್‌ಎಸ್ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು. ಪ್ರಧಾನಿ ಭೇಟಿ ಎಂದ ಮೇಲೆ ಸಹಜವಾಗಿ ವಿಶೇಷ ಭದ್ರತೆ ಮತ್ತು ಪ್ರಮುಖ ಕಾರ್ಯಕ್ರಮಗಳು ಆ ದಿನದ ಕಾರ್ಯಕ್ರಮಗಳಲ್ಲಿ ಸೇರಿಕೊಳ್ಳುತ್ತವೆ.
ಪ್ರಧಾನಿ ಮೋದಿ ಅವರ ನಾಗ್ಪುರ ಭೇಟಿ ವೇಳೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮದ ದೀಕ್ಷೆ ಪಡೆದ ದೀಕ್ಷಾ ಭೂಮಿಗೂ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಂಡಿರುವ ಕಾರಣ ಎರಡು ಕಡೆಯೂ ಪ್ರಧಾನಿ ಅವರ ಭಾಷಣದ ದಿಕ್ಸೂಚಿ ಏನಿರುತ್ತದೆ ಎಂದು ಹೇಳುವುದು ಕಷ್ಟ. ಆದರೆ ಮೋದಿ ಅವರ ಈ ಭೇಟಿ ರಾಜಕೀಯ ರಂಗದಲ್ಲಿ ಕುತೂಹಲ ಮೂಡಿಸಿರುವುದನ್ನು ತಳ್ಳಿಹಾಕಲಾಗದು.
ತಮಿಳುನಾಡು ಚುನಾವಣೆ: ದಕ್ಷಿಣ ರಾಜ್ಯಗಳ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ವಿಶೇಷವಾಗಿ ಗೃಹ ಸಚಿವ ಅಮಿತ್ ಶಾ ಅವರು ನಡೆಸುತ್ತಾ ಬಂದಿರುವ ತಂತ್ರಗಾರಿಕೆ ಆಗಿಂದಾಗ್ಗೆ ಬೆಳಕಿಗೆ ಬರುತ್ತಲೇ ಇದೆ. ಎರಡು ವರ್ಷಗಳ ಹಿಂದೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯನ್ನು ಸಾಧಿಸಿದ್ದವು. ಆದರೆ ದ್ರಾವಿಡ ನಾಡಿನಲ್ಲಿ ಈ ಮೈತ್ರಿಗೆ ಯಾವ ಕಿಮ್ಮತ್ತೂ ಸಿಗಲಿಲ್ಲ. ಹಾಗಾಗಿ ಎಐಎಡಿಎಂಕೆ ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡಿತ್ತು.
ತಮಿಳುನಾಡಿನ ರಾಜಕೀಯ ಚಿತ್ರಣದಲ್ಲಿ ಆಗಿಂದಾಗ್ಗೆ ಬದಲಾವಣೆ ಕಾಣಿಸಿಕೊಂಡರೂ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಬಿಟ್ಟರೆ ಅಲ್ಲಿ ಬೇರೆ ಯಾವುದೇ ರಾಷ್ಟ್ರೀಯ ಪಕ್ಷಗಳಿಗೆ ನೆಲೆಯೂರಲು ಜಾಗವಿಲ್ಲ. ಪ್ರಾದೇಶಿಕ ಪಕ್ಷಗಳಿಗೆ ರಾಷ್ಟ್ರೀಯ ಪಕ್ಷಗಳು ಪರಾವಲಂಬಿಗಳು. ಮುಖ್ಯಮಂತ್ರಿ ಸ್ಟಾಲಿನ್ ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ತ್ರಿಭಾಷಾ ಶಿಕ್ಷಣದ ಕೇಂದ್ರದ ನೂತನ ಶಿಕ್ಷಣ ನೀತಿ, ಹಿಂದಿ ಹೇರಿಕೆ ಮತ್ತು ಮುಂದಿನ ಲೋಕಸಭೆಯ ಚುನಾವಣೆಯಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ಎರಡು ಸ್ಥಾನಗಳು ಕಡಿಮೆ ಆಗಲಿವೆ ಎನ್ನುವ ಮಾಹಿತಿಯನ್ನಿಡಿದುಕೊಂಡು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯುವ ಮೂಲಕ ಜನಾಭಿಪ್ರಾಯವು ಡಿಎಂಕೆ ಪರವಾಗಿ ಮುಂದುವರಿಯಬೇಕೆನ್ನುವ ದೂರದೃಷ್ಟಿಯಿಂದ ಕೇಂದ್ರದ ವಿರುದ್ಧ ಸೆಟೆದು ನಿಂತಿದ್ದಾರೆ.
ತಮ್ಮ ಈ ಹೋರಾಟಕ್ಕೆ ಬೆಂಬಲವಾಗಿ ಕರ್ನಾಟಕ, ಕೇರಳ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಆದರೆ ಡಿಎಂಕೆಯ ಪ್ರಾಬಲ್ಯವನ್ನು ಮುರಿಯಲು ಕೇಂದ್ರ ಗೃಹ ಸಚಿವ ಶಾ ತಮ್ಮದೇ ಆದ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ವಿಧಾನಸಭೆಯಾಗಲಿ ಅಥವಾ ಲೋಕಸಭೆಯಾಗಲಿ ಒಂದು ಸ್ಥಾನವನ್ನೂ ಗೆಲ್ಲಲಾಗದ ಈ ದ್ರಾವಿಡ ನಾಡಿನಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಲು ಐಪಿಎಸ್ ಅಧಿಕಾರಿಯಾಗಿದ್ದ ಯುವಕನ ಕೈಯಲ್ಲಿ ಬಿಜೆಪಿ ಬೆಳೆಸುವ ಹೊಣೆಗಾರಿಕೆಯನ್ನು ನೀಡಿದರು. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರ ಸಾಧನೆ ಸೊನ್ನೆ ಆಯಿತು. ಈ ವಾಸ್ತವವನ್ನು ಅರಿತ ಅಮಿತ್ ಶಾ ಈಗ ಎಐಎಡಿಎಂಕೆ ಜೊತೆ ಮತ್ತೆ ಮೈತ್ರಿ ಬೆಳೆಸಲು ಮುಂದಾಗಿದ್ದಾರೆ.
ಈ ಮಧ್ಯೆ ಈ ಎರಡು ಪಕ್ಷಗಳಿಗೆ ಸವಾಲಾಗಿ ನಟ ವಿಜಯ್ ತಮಿಗಳ ವೆಟ್ರಿ ಕಳಗಂ ಪಕ್ಷವನ್ನು ಸ್ಥಾಪಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿರುವುದು ರಾಜ್ಯದ ರಾಜಕೀಯ ಸ್ಥಿತಿಯನ್ನೇ ಬದಲಿಸಲಿದೆ ಎನ್ನುವ ಭ್ರಮೆಯನ್ನು ಹುಟ್ಟುಹಾಕಲಾಗಿದೆ. ಕಳೆದ ಲೋಕಸಭೆ ಚುನಾವಣೆಗಷ್ಟೇ ಮೈತ್ರಿ ಎಂದು ಈಗೀಗ ಸತ್ಯವನ್ನು ಹೊರಗೆಡವುತ್ತಿರುವ ‘ಇಂಡಿಯಾ’ ಮೈತ್ರಿಕೂಟ ಈಗ ದಾರಿ ತಪ್ಪಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮರಳಿ ಅಧಿಕಾರಕ್ಕೆ ಬರುವಲ್ಲಿ ಎಷ್ಟು ಸಹಕಾರಿಯಾಗಲಿದೆ ಎನ್ನುವುದನ್ನು ಚುನಾವಣೆ ದಿನಗಳೇ ಹೇಳಬೇಕು.
” ದಕ್ಷಿಣ ರಾಜ್ಯಗಳ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ವಿಶೇಷವಾಗಿ ಗೃಹ ಸಚಿವ ಅಮಿತ್ ಶಾ ಅವರು ನಡೆಸುತ್ತಾ ಬಂದಿರುವ ತಂತ್ರಗಾರಿಕೆ ಆಗಿಂದಾಗ್ಗೆ ಬೆಳಕಿಗೆ ಬರುತ್ತಲೇ ಇದೆ. ಎರಡು ವರ್ಷಗಳ ಹಿಂದೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯನ್ನು ಸಾಧಿಸಿದ್ದವು. ಆದರೆ ದ್ರಾವಿಡ ನಾಡಿನಲ್ಲಿ ಈ ಮೈತ್ರಿಗೆ ಯಾವ ಕಿಮ್ಮತ್ತೂ ಸಿಗಲಿಲ್ಲ. ಹಾಗಾಗಿ ಎಐಎಡಿಎಂಕೆ ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದು ಕೊಂಡಿತ್ತು.”
ಕುಶಾಲನಗರ: ಮುಳ್ಳುಸೋಗೆಯಲ್ಲಿ ವೇಶ್ಯಾವಾಟಿಕೆ ಪ್ರಕರಣ ಬೇಧಿಸಿದ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ. ಸೆಲೆಕ್ಟ್ ಸಾಮಿಲ್ ಬಳಿಯ ಮನೆಯೊಂದನ್ನು ಬಾಡಿಗೆ ಪಡೆದ…
ಬೆಂಗಳೂರು: ಎಲ್ಲೆಂದರಲ್ಲಿ ಹಳೆಯ ವಾಹನಗಳನ್ನು ನಿಲ್ಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಈ ಕುರಿತು ಮಾಧ್ಯಮಗಳೊಂದಿಗೆ…
ನವದೆಹಲಿ: ಇರಾನ್ ಯುದ್ಧದ ಬಿಸಿ ಸವಾರರಿಗೆ ತಟ್ಟಿದೆ. ತೈಲ ಕಂಪನಿಗಳು ಪ್ರೀಮಿಯಂ ಪೆಟ್ರೋಲ್ ದರವನ್ನು 2 ರೂಗೆ ಏರಿಕೆ ಮಾಡಿದೆ.…
ಸುಂಟಿಕೊಪ್ಪ: ಮಾದಾಪುರ ರಾಜ್ಯ ಹೆದ್ದಾರಿ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವಿಗೀಡಾಗಿ ಹಿಂಬದಿ ಸವಾರ…
ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಶೃಂಗೇರಿಯ ಕೆರೆಕಟ್ಟೆ…
ಟೆಹರಾನ್: ಇರಾನ್ ಮೇಲೆ ಅಮೇರಿಕಾ ಹಾಗೂ ಇಸ್ರೇಲ್ ಜಂಟಿ ದಾಳಿ ಮುಂದುವರಿಸಿದ್ದು, ಇರಾನ್ ಗುಪ್ತಚರ ಸಚಿವ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.…