readers letter
ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ನಮ್ಮ ಪ್ರಜಾಸತ್ತಾತ್ಮಕ ಒಕ್ಕೂಟ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯ ಹಾಗೂ ಸಾಮರಸ್ಯದಿಂದ ಒಂದಾಗಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಇರುವ ಎರಡು ಪ್ರಮುಖ ಮುನ್ನೋಟದ ಸಂಸ್ಥೆಗಳು ಎಂದರೆ ‘ನೀತಿ ಆಯೋಗ (ಈ ಹಿಂದೆ ಯೋಜನಾ ಆಯೋಗವಾಗಿತ್ತು) ಮತ್ತು ಕೇಂದ್ರ ಹಾಗೂ ರಾಜ್ಯಗಳಿಂದ ತೆರಿಗೆ ಕ್ರೂಢೀಕರಣ ಮಾಡಿ ರಾಜ್ಯಗಳಿಗೆ ಮತ್ತೆ ಹಂಚಿಕೆ ಮಾಡುವ ‘ಜಿಎಸ್‌ಟಿ ವ್ಯವಸ್ಥೆ’ (ಗೂಡ್ಸ್ ಅಂಡ್ ಸರ್ವೀಸಸ್ ಟ್ಯಾಕ್ಸ್). ನೀತಿ ಆಯೋಗ ವರ್ಷಕ್ಕೊಮ್ಮೆ ಸಭೆ ಸೇರಿದರೆ, ಜಿಎಸ್‌ಟಿ ಮೂರು ತಿಂಗಳಿಗೊಮ್ಮೆ ಸಭೆ ಸೇರುತ್ತದೆ. ನೀತಿ ಆಯೋಗ ದೀರ್ಘ ಕಾಲದ ಮುನ್ನೋಟವನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸುತ್ತದೆ. ಪ್ರಧಾನಿ ಅಧ್ಯಕ್ಷರಾಗಿರುವ ಈ ನೀತಿ ಆಯೋಗಕ್ಕೆ ಆರ್ಥಿಕ ತಜ್ಞರೊಬ್ಬರು ಉಪಾಧ್ಯಕ್ಷರಾಗಿ ಎಲ್ಲ ಕಾರ್ಯಗಳನ್ನೂ ನಿರ್ವಹಿಸುತ್ತಾರೆ. ಈ ಆಯೋಗಕ್ಕೆ ವಿವಿಧ ಕ್ಷೇತ್ರಗಳ ತಜ್ಞರು ಮತ್ತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿರುತ್ತಾರೆ.
ಕಳೆದ ವಾರ ನಡೆದ ನೀತಿ ಆಯೋಗದ ಸಭೆಯ ಮಹತ್ವದ ಗುರಿ ಎಂದರೆ ೨೦೪೭ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆನ್ನುವುದು. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚಿನ “ವಿಕ್ಷಿತ್ ಭಾರತ್” (ಅಭಿವೃದ್ಧಿ ಭಾರತ)ನ ಕನಸನ್ನು ನನಸು ಮಾಡುವುದು. ಕೇಂದ್ರ ಸರ್ಕಾರದ ಜೊತೆ ರಾಜ್ಯಗಳೂ ಕೈ ಕೈ ಹಿಡಿದು ನಡೆಯಬೇಕು. ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವ ಮೂಲಕ ದೇಶದ ಜನರ ಆರ್ಥಿಕ ಸ್ಥಿತಿಗತಿಯನ್ನು ಉತ್ತಮಪಡಿಸಬೇಕು ಎನ್ನುವುದು. ಇದಕ್ಕಾಗಿ ‘ಟೀಂ ಇಂಡಿಯಾ’ ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯಗಳು ಕೆಲಸ ಮಾಡಬೇಕೆನ್ನುವುದು ಪ್ರಧಾನಿಗಳ ಆಶಯ. ಆದರೆ ಪ್ರಧಾನಿ ಅವರು ಎಲ್ಲ ರಾಜ್ಯಗಳೂ ‘ಟೀಂ ಇಂಡಿಯಾ’ ರೀತಿಯಲ್ಲಿ ಕೆಲಸ ಮಾಡಬೇಕೆಂದರೆ ಸಂಪನ್ಮೂಲ ಹಂಚಿಕೆಯಲ್ಲಿ ಸಮಾನ ಮನಸ್ಥಿತಿಯಲ್ಲಿ ನೋಡುವ ದೊಡ್ಡ ಮನಸ್ಸು ಬೇಕಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪ್ರತಿಯೊಂದು ರಾಜ್ಯವೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಂತೆ ಕನಿಷ್ಠ ಒಂದು ಮಹತ್ವದ ಪ್ರವಾಸಿ ತಾಣವನ್ನಾದರೂ ಅಭಿವೃದ್ಧಿಪಡಿಸಬೇಕು. ಪ್ರವಾಸಿಗರನ್ನು ಅಕರ್ಷಿಸುವ ಮೂಲಕ ಹೆಚ್ಚು ಸಂಪನ್ಮೂಲವನ್ನು ಕಂಡುಕೊಳ್ಳುವ ಜೊತೆಗೆ ಇಡೀ ರಾಜ್ಯದ ಮಹತ್ವವನ್ನು ಹೇಳುವಂತೆ ಮಾಡಬೇಕು. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ನಗರಗಳ ಅಭಿವೃದ್ಧಿಯೂ ವೇಗವಾಗಿ ಆಗುತ್ತಿದ್ದು, ಅಲ್ಲಿ ನಾಗರಿಕರಿಗೆ ಉತ್ತಮ ದರ್ಜೆಯ ಸೌಲಭ್ಯಗಳನ್ನು ಒದಗಿಸಬೇಕು. ಹಾಗೆಯೇ ಹಳ್ಳಿಗಳನ್ನೂ ಜೊತೆ ಜೊತೆಗೆ ತೆಗೆದುಕೊಂಡು ಹೋಗಬೇಕು ಎನ್ನುವುದು ಮೋದಿ ಅವರು ರಾಜ್ಯಗಳಿಗೆ ಹೇಳಿದ ಕಿವಿ ಮಾತುಗಳು.
ಪ್ರಸ್ತುತ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನೀತಿ ನಿರೂಪಣೆಯಲ್ಲಿ ಮತ್ತು ಕೇಂದ್ರ ಸರ್ಕಾರದಿಂದ ಅಭಿವೃದ್ಧಿಯ ಹೆಸರಿನಲ್ಲಿ ಹಣಕಾಸಿನ ಸಿಂಹಪಾಲು ಪಡೆಯುತ್ತಿರುವವರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ನರಾ ಚಂದ್ರಬಾಬು ನಾಯ್ಡು ಪ್ರಮುಖರು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಮೂರು ದಶಕಗಳ ಹಿಂದೆ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿ ದ್ದಾಗಲೂ ಸಂಯುಕ್ತ ರಂಗದ ಸರ್ಕಾರದಲ್ಲಿ ಚಂದ್ರಬಾಬು ನಾಯ್ಡು ಪ್ರಮುಖ ಪಾತ್ರಧಾರಿಯಾಗಿ ತಮ್ಮ ರಾಜ್ಯಕ್ಕೆ ಬೇಕಾದ ಅನುಕೂಲ ಪಡೆದುಕೊಳ್ಳುವುದರಲ್ಲಿ ಮುಂದಿದ್ದರು. ರಾಷ್ಟ್ರರಾಜಕಾರಣದಲ್ಲಿ ಆಗಿಂದಾಗ್ಗೆ ರಾಜಕೀಯ ತಿರುವುಗಳು, ಪಲ್ಲಟಗಳು ನಡೆದರೂ ಕೇಂದ್ರದ ಮಿತ್ರ ಪಕ್ಷಗಳಲ್ಲಿ ಹೆಚ್ಚಿನ ಸಂಖ್ಯಾಬಲ ಹೊಂದಿರುವ ಪಕ್ಷಗಳಿಗೆ ಅಂದಿನ ಪರಿಸ್ಥಿತಿಯು ಲಾಟರಿ ಹೊಡೆದಂತೆ.
ಹಾಗಾಗಿ ಆಂಧ್ರಪ್ರದೇಶವು ಆಂಧ್ರ ಮತ್ತು ತೆಲಂಗಾಣ ಎಂದು ಇಬ್ಭಾಗವಾದರೂ ಹೊಸ ರಾಜಧಾನಿ ನಿರ್ಮಾಣದ ಹೆಸರಿನಲ್ಲಿ ನಾಯ್ಡು ಈಗ ಕೇಂದ್ರದ ಜೊತೆ ಹೊಂದಾಣಿಕೆ ರಾಜಕೀಯದಿಂದ ಹೆಚ್ಚು ಪಾಲನ್ನು ಬಾಚಿಕೊಳ್ಳುವುದರಲ್ಲಿ ತೊಡಗಿರುವುದು ವಿಶೇಷ. ಇದು ಇಂದಿನ ರಾಜಕೀಯ ಪರಿಸ್ಥಿತಿ ತಂದುಕೊಟ್ಟ ಕೊಡುಗೆ.
ನೀತಿ ಆಯೋಗದ ಸಭೆಯಲ್ಲಿ ಕೇಂದ್ರದ ‘ವಿಕ್ಷಿತ್ ಭಾರತ್’ ಯೋಜನೆಯ ದೂರದೃಷ್ಟಿಗೆ ಚಂದ್ರಬಾಬು ನಾಯ್ಡು ಮೂರು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿ ಅವು ಕಾರ್ಯರೂಪಕ್ಕೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರೆ. ಇದಕ್ಕಾಗಿ ನೀತಿ ಆಯೋಗದ ಸದಸ್ಯರಲ್ಲಿಯೇ ಮೂರು ಉಪಸಮಿತಿಗಳನ್ನು ರಚಿಸಬೇಕು. ಅವುಗಳೆಂದರೆ ಜಿಎಸ್‌ಟಿ ಬೆಳವಣಿಗೆಗೆ ಸಹಾಯಕವಾಗುವಂತೆ ವಿವಿಧ ಯೋಜನೆಗಳಿಗೆ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು, ಉತ್ಪನ್ನ ಮತ್ತು ತಯಾರಿಕಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ಮತ್ತು ಆ ಮೂಲಕ ಯುವಕರಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು. ಇದಕ್ಕಾಗಿ ಸಾರ್ವಜನಿಕ ಮತ್ತು ಖಾಸಗಿ ಜಂಟಿ ಕ್ಷೇತ್ರವನ್ನು ಉತ್ತೇಜಿಸಲು ಕೆಲಸ ಮಾಡುವ ಉಪಸಮಿತಿಯ ರಚನೆ.
ಎರಡನೇ ಉಪ ಸಮಿತಿಯು ದೇಶದಲ್ಲಿ ಏರುಪೇರಾಗುತ್ತಿರುವ ಜನ ಸಂಖ್ಯಾ ಪ್ರಮಾಣವನ್ನು ಗಮನಿಸಿ ಕೆಲವು ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಅವುಗಳ ತೆರಿಗೆ ಪಾಲು ಕಡಿಮೆ ಇದ್ದರೂ ಹೆಚ್ಚಿನ ಲಾಭ ಪಡೆಯುತ್ತಿರುವುದು, ಹಾಗೆಯೇ ಜನಸಂಖ್ಯೆ ಪ್ರಮಾಣ ಕಡಿಮೆ ಇದ್ದು , ಹೆಚ್ಚಿನ ಸಂಪನ್ಮೂಲ ಗಳಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ನೀಡಿದರೂ ಕೇಂದ್ರದಿಂದ ಕಡಿಮೆ ಅನುದಾನ ಪಡೆಯುತ್ತಿರುವ ತಾರತಮ್ಯವನ್ನು ತಹಬದಿಗೆ ತರುವುದು.
ಮೂರನೆಯ ತಂಡವು ತಾಂತ್ರಿಕ ಕ್ಷೇತ್ರದ ಅಭಿವೃದ್ಧಿಯತ್ತ ಗಮನವಹಿಸಿ ಈಗ ವಿಶ್ವದ ಗಮನ ಸೆಳೆದಿರುವ ಕೃತಕ ಬುದ್ಧಿಮತ್ತೆಯನ್ನು ಜನರ ಮತ್ತು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವ ದಿಕ್ಕಿನಲ್ಲಿ ಕೆಲಸ ಮಾಡುವುದು. ಈ ಮೂರೂ ಅಂಶಗಳನ್ನು ನೀತಿ ಆಯೋಗ ಒಪ್ಪಿಕೊಂಡಿದ್ದು, ಅದನ್ನು ಕಾರ್ಯರೂಪಕ್ಕೆ ತರುವುದೊಂದು ಬಾಕಿ ಇದೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬಿಜೆಪಿಯೇತರ, ಬಿಜೆಪಿ ಹಾಗೂ ಎನ್‌ಡಿಎ ರಾಜ್ಯಗಳ ನಡುವೆ ಸಂಪನ್ಮೂಲ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎನ್ನುವ ಆರೋಪ ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಈ ಆರೋಪದಲ್ಲಿ ನಿಜವಿಲ್ಲ ಎಂದೇನಲ್ಲ. ಪ್ರತಿಯೊಂದು ಬಜೆಟ್‌ನಲ್ಲಿ ಯೋಜನೆಗಳಿಗೆ ನೀಡುವ ಹಣಕಾಸಿನ ನೆರವಿನ ಸೂತ್ರವನ್ನು ಗಮನಿಸಿದರೆ ಸತ್ಯಸಂಗತಿ ಏನೆಂಬುದು ಗೋಚರಿಸುತ್ತದೆ. ಈ ತಾರತಮ್ಯ ನೀತಿಯನ್ನು ಹಿಂದಿನ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಆಡಳಿತದಲ್ಲೂ ಮಾಡಿರುವ ಸಾಧ್ಯತೆಯನ್ನು ತಳ್ಳಿಹಾಕುವುದು ಕಷ್ಟ.
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಜಿಎಸ್‌ಟಿ ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ಶೇ.೫೯ರಷ್ಟು ಹಣವನ್ನು ತಾನಿಟ್ಟುಕೊಂಡು ಉಳಿದ ಶೇ.೪೧ರಷ್ಟು ಹಣವನ್ನು ರಾಜ್ಯಗಳಿಗೆ ನೀಡುವ ಪದ್ಧತಿಯನ್ನು ಅನುಸರಿಸುತ್ತಿದೆ. ಇದು ರಾಜ್ಯಗಳ ದೃಷ್ಟಿಯಿಂದ ಸರಿಯಲ್ಲ. ಶೇ.೫೦ರಷ್ಟು ತೆರಿಗೆ ಪಾಲನ್ನು ರಾಜ್ಯಗಳಿಗೆ ಸಮಾನವಾಗಿ ಹಂಚುವ ಸೂತ್ರವನ್ನು ನೀತಿ ಆಯೋಗ ಮತ್ತು ಜಿಎಸ್‌ಟಿ ಕಮಿಷನ್ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ್ದನ್ನು ನೀತಿ ಆಯೋಗ ಸದ್ಯಕ್ಕೆ ಮಾನ್ಯ ಮಾಡದಿರುವುದು ವಿಪರ್ಯಾಸ.
ರಾಜ್ಯಗಳು ಕೇಂದ್ರಕ್ಕೆ ನೀಡುವ ತೆರಿಗೆ ಪಾಲಿನಲ್ಲಿ ಅನುಸರಿಸುತ್ತಿರುವ ಈಗಿನ ಮಾನದಂಡ ಬದಲಾಗಬೇಕು. ಹೆಚ್ಚು ಜನಸಂಖ್ಯೆಯನ್ನು ಮತ್ತು ಹೆಚ್ಚು ಭೂ ವಿಸ್ತಾರ ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ತೆರಿಗೆಯ ಅನುದಾನ ನೀಡುವುದಕ್ಕೆ ದಕ್ಷಿಣ ರಾಜ್ಯಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿರುವುದು ಇತ್ತೀಚಿನ ಬೆಳವಣಿಗೆ. ಜನಸಂಖ್ಯೆ ನಿಯಂತ್ರಣ ಮಾಡಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿರುವುದೇ ದಕ್ಷಿಣ ರಾಜ್ಯಗಳಿಗೆ ಶಿಕ್ಷೆ ಎನ್ನುವ ಭಾವನೆ ಮೂಡಿದ್ದು, ಅದು ಬದಲಾಗುವ ಅವಶ್ಯಕತೆ ಇಂದಿನ ತುರ್ತು. ಈ ತಾರತಮ್ಯವನ್ನು ಹೋಗಲಾಡಿಸದಿದ್ದರೆ ದಕ್ಷಿಣ ರಾಜ್ಯಗಳ ಮನೋಭಾವವೇ ಬದಲಾಗುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಇಂತಹ ಮಹತ್ವದ ನೀತಿ ನಿರೂಪಣೆಯ ನೀತಿ ಆಯೋಗದ ಸಭೆಗೆ ಯಾರೂ ಗೈರು ಹಾಜರಾಗಬಾರದು. ಅದರಲ್ಲೂ ಪ್ರಧಾನಿ ಮೋದಿ ಅವರು ಯಾರ ಹಿಡಿತಕ್ಕೂ ಸಿಗುವುದಿಲ್ಲ. ಅದು ಸಂಸತ್ ಅಧಿವೇಶನವಿರಲಿ, ಆಕಾಶವಾಣಿ ಮೂಲಕ ಮಾತನಾಡುವ ‘ಮನ್ ಕಿ ಬಾತ್’ (ಮನದ ಮಾತು) ಇರಲಿ ಎಲ್ಲ ಕಡೆಯೂ ಏಕಪಾತ್ರಾಭಿನಯ. ಅವರ ಮಾತು ಸಾರ್ವಜನಿಕ ಭಾಷಣವಿದ್ದಂತೆಯೇ ಸರಿ. ಪತ್ರಿಕೆಯವರಿರಲಿ, ಪ್ರತಿಪಕ್ಷಗಳ ರಾಜಕೀಯ ನಾಯಕರಿರಲಿ, ಪ್ರಧಾನಿ ಮುಖಾಮುಖಿ ಚರ್ಚೆಗೆ ಮುಂದಾಗುವುದು ಅಪರೂಪ. ಅಂತಹದ್ದರಲ್ಲಿ ಸುಲಭವಾಗಿ ಸಿಗುವ ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಕೇರಳದ ಪಿಣರಾಯಿ ವಿಜಯನ್ ಅವರು ಗೈರು ಹಾಜರಾದದ್ದು ವಿಪರ್ಯಾಸ.
ಸಿದ್ದರಾಮಯ್ಯ ಅವರ ಈ ಗೈರು ಹಾಜರಿಯ ಬಗೆಗೆ ರಾಜ್ಯ ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿನ ಮುಖಂಡರು, ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್ ಸಿಂಧೂರಹೆಸರಿನಲ್ಲಿ ನಡೆಸಿದ ಸೇನಾ ಕಾರ್ಯಾಚರಣೆ ಮತ್ತು ಅದಕ್ಕಿಂತಲೂ ಮುಂಚಿತವಾಗಿ ಭಯೋತ್ಪಾದಕರಿಂದ ಪಹಲ್ಗಾಮ್‌ನಲ್ಲಿ ನಡೆದ ೨೬ ಮಂದಿ ಅಮಾಯಕರ ಹತ್ಯಾಕಾಂಡದ ಬಗೆಗೆ ನಡೆದ ಸರ್ವಪಕ್ಷಗಳ ಸಭೆಗೆ ಪ್ರಧಾನಿ ಗೈರು ಹಾಜರಾಗಿರಲಿಲ್ಲವೇ ಎಂದು ಮಾರುತ್ತರ ನೀಡುತ್ತಾರೆ, ನಿಜ. ಪ್ರಧಾನಿ ಅವರು ಸರ್ವಪಕ್ಷಗಳ ನಾಯಕರ ಸಭೆಗೆ ಗೈರು ಆಗುವುದು ಮತ್ತು ಮುಖ್ಯ ಮಂತ್ರಿಗಳು ನೀತಿ ಆಯೋಗದಂತಹ ಪ್ರಮುಖ ಸಭೆಗಳಿಗೆ ತಪ್ಪಿಸಿಕೊಳ್ಳುವುದು ಅವರವರ ಜವಾಬ್ದಾರಿ ನಿರ್ವಹಣೆಯಲ್ಲಿನ ವೈಫಲ್ಯ ಎನ್ನಲೇಬೇಕು.
ದಕ್ಷಿಣ ರಾಜ್ಯಗಳಿಗೆ ವಿಶೇಷವಾಗಿ ಕರ್ನಾಟಕಕ್ಕೆ ತೆರಿಗೆ ಪಾಲು ನೀಡುವಲ್ಲಿ ಮತ್ತು ಬೇರೆ ಬೇರೆ ಯೋಜನೆಗಳನ್ನು ಕಾರ್ಯಗತ ಮಾಡಲು ಅನುದಾನ ನೀಡಿಕೆಯಲ್ಲಿ ಕೇಂದ್ರವು ವಂಚನೆ ಮಾಡುತ್ತಿದೆ ಎಂದು ನಿರಂತರವಾಗಿ ಟೀಕಿಸುವ ಸಿದ್ದರಾಮಯ್ಯ ಮತ್ತು ಮಮತಾ ಬ್ಯಾನರ್ಜಿ ಈ ಸಭೆಯಲ್ಲಿ ಭಾಗವಹಿಸಲೇಬೇಕಿತ್ತು. ಸಭೆಯಲ್ಲಿ ಪ್ರಸ್ತಾಪಿಸಲು ಸಿದ್ದರಾಮಯ್ಯ ಅವರು ತಮ್ಮ ಭಾಷಣವನ್ನು ಕಳುಹಿಸಿದ್ದರೆನ್ನಲಾಗಿದೆ. ಆದರೆ ಅವರ ಭಾಷಣದಲ್ಲಿನ ಯಾವುದೇ ಪ್ರಸ್ತಾಪವನ್ನೂ ನೀತಿ ಆಯೋಗವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಪತ್ರಿಕೆಗಳ ಮೂಲಕ ಸಾರ್ವಜನಿಕg ಗಮನಕ್ಕೆ ತರದಿರುವುದು ದುರದೃಷ್ಟಕರ. ರಾಜ್ಯದ ಸಮಸ್ಯೆ ಏನು? ಅದರ ಬೇಡಿಕೆ ಏನು? ಎಂಬುದನ್ನು ಸರ್ಕಾರದ ದೆಹಲಿ ಕರ್ನಾಟಕ ಭವನದ ಆಡಳಿತವಾಗಲಿ ಅಥವಾ ರಾಜ್ಯದಲ್ಲಿನ ಸಂಬಂಧಿಸಿದ ಇಲಾಖೆಯಾಗಲಿ ಸಾರ್ವಜನಿಕರ ಗಮನಕ್ಕೆ ತರದಿರುವುದರಿಂದ ರಾಜ್ಯದ ಜನರನ್ನು ಕತ್ತಲೆಯಲ್ಲಿಟ್ಟಂತಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಆಯೋಗದ ಸಭೆಯಲ್ಲಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಪ್ರಸ್ತಾಪಿಸಿ ಭಾರತವು ಪಾಕಿಸ್ತಾನದ ಪ್ರಾಯೋಜಿತ ಭಯೋತ್ಪಾದನೆಯನ್ನು ಮಟ್ಟ ಹಾಕುವ ಬಗೆಗೆ ರಾಜ್ಯಗಳ ಮುಖ್ಯಮಂತ್ರಿಗಳ ಗಮನ ಸೆಳೆದಿರುವುದು ನಿರೀಕ್ಷೆಯಂತೆ ನಡೆದಿದೆ. ಪಾಕಿಸ್ತಾನವನ್ನು ಮತ್ತು ಅದು ಭಯೋತ್ಪಾದನೆಗೆ ನೀಡುವ ಕುಮ್ಮಕ್ಕಿನ ಬಗೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆ ದೇಶವನ್ನು ಅನೈತಿಕಗೊಳಿಸಲು ಕೈಗೊಂಡಿರುವ ಸರ್ವಪಕ್ಷಗಳ ಸಂಸತ್ ನಿಯೋಗದ ಪ್ರಾಮುಖ್ಯತೆಯನ್ನು ಅವರು ಹೇಳಿರುವುದು ಸರಿಯಷ್ಟೆ. ಆ ನಿಟ್ಟಿನಲ್ಲಿ ರಾಜ್ಯಗಳು ಕೈಗೊಳ್ಳಬೇಕಾದ ಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಹಾಗೆಯೇ ಮುಂದಿನ ವರ್ಷ ನಡೆಸುವ ಜನಗಣತಿಯಲ್ಲಿ ಜಾತಿ ಜನಗಣತಿಯ ಮಹತ್ವ ಅದರ ಸಾಧಕ ಬಾಧಕಗಳ ಬಗೆಗೂ ಅವರು ಪ್ರಸ್ತಾಪಿಸಬೇಕಿತ್ತು. ನೀತಿ ಆಯೋಗ ಕೈಗೊಂಡಿರುವ ಈ ಕ್ರಮಗಳು ಎಷ್ಟರ ಮಟ್ಟಿಗೆ ಜಾರಿಯಾಗುತ್ತವೆ ಎನ್ನುವುದನ್ನು ಎದುರು ನೋಡಬೇಕಷ್ಟೆ.
” ರಾಜ್ಯಗಳು ಕೇಂದ್ರಕ್ಕೆ ನೀಡುವ ತೆರಿಗೆ ಪಾಲಿನಲ್ಲಿ ಅನುಸರಿಸುತ್ತಿರುವ ಈಗಿನ ಮಾನದಂಡ ಬದಲಾಗಬೇಕು. ಹೆಚ್ಚು ಜನಸಂಖ್ಯೆಯನ್ನು ಮತ್ತು ಹೆಚ್ಚು ಭೂ ವಿಸ್ತಾರ ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ತೆರಿಗೆಯ ಅನುದಾನ ನೀಡುವುದಕ್ಕೆ ದಕ್ಷಿಣ ರಾಜ್ಯಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿರುವುದು ಇತ್ತೀಚಿನ ಬೆಳವಣಿಗೆ. ಜನಸಂಖ್ಯೆ ನಿಯಂತ್ರಣ ಮಾಡಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿರುವುದೇ ದಕ್ಷಿಣ ರಾಜ್ಯಗಳಿಗೆ ಶಿಕ್ಷೆ ಎನ್ನುವ ಭಾವನೆ ಮೂಡಿದ್ದು, ಅದು ಬದಲಾಗುವ ಅವಶ್ಯಕತೆ ಇಂದಿನ ತುರ್ತು. ಈ ತಾರತಮ್ಯವನ್ನು ಹೋಗಲಾಡಿಸದಿದ್ದರೆ ದಕ್ಷಿಣ ರಾಜ್ಯಗಳ ಮನೋಭಾವವೇ ಬದಲಾಗುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.”
ನಂಜನಗೂಡು ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಹಟ್ಟಿ ಮಾರಮ್ಮ ದೇವಾಲಯದಲ್ಲಿ ಪ್ರತಿ ವರ್ಷ ಫೆಬ್ರವರಿ/ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ಕೊಂಡೋತ್ಸವ, ಜಾತ್ರೆ ನಡೆಯುತ್ತದೆ.…
ಮಹಾರಾಷ್ಟ್ರ ರಾಜ್ಯದ ಸೌಂದಾಳ ಗ್ರಾಮವು ದೇಶದಲ್ಲೇ ಮೊದಲ ಜಾತಿ ಮುಕ್ತ ಮನಸ್ಸುಳ್ಳ ಗ್ರಾಮ ಎಂಬ ಕೀರ್ತಿಯನ್ನು ಗಳಿಸಿ ನಮ್ಮ ಸಮಾಜಕ್ಕೆ…
ಈ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸರ್ಕಾರಿ ಕಾಲೇಜುಗಳಿಂದ ಒಟ್ಟು 1.38 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ, ಇವರಲ್ಲಿ 63,514 ವಿದ್ಯಾರ್ಥಿಗಳು…
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಕಷ್ಟು ಆಂಬ್ಯುಲೆನ್ಸ್ ಸೌಲಭ್ಯವಿಲ್ಲದೆ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ತೊಂದರೆಯಾಗಿದೆ.…
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಸಂಸತ್ತಿನ ಎರಡು ವಾರಗಳ ಮೊದಲ ಹಂತದ ಬಜೆಟ್ ಅಧಿವೇಶನ ನಿಮುಗಿಯಿತು. ಮತ್ತೆ ಎರಡನೇ ಹಂತದ…
• ರಾಜ್ಯದ ವಿವಿಧ ಕಡೆಗಳಿಂದ ಜನರ ಆಗಮನ • ಒಂದು ತಿಂಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಭೇರ್ಯ ಮಹೇಶ್…