ಅಂಕಣಗಳು

ರಾಜಕಾರಣದಲ್ಲಿ ‘ಮಾತೆಂಬುದು ಜ್ಯೋತಿರ್ಲಿಂಗ’ದಂತೆ ಇರಬೇಕು

ಬೆಂಗಳೂರು ಡೈರಿ

ಇದು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಘಟನೆ. ಆ ಸಂದರ್ಭದಲ್ಲಿ ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರನ್ನು ನರಹಂತಕ ವೀರಪ್ಪನ್ ಅಪಹರಿಸಿದ್ದ. ಹೀಗೆ ರಾಜ್‌ಕುಮಾರ್ ಅವರ ಅಪಹರಣವಾದ ನಂತರ ರಾಜ್ಯದ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಎಷ್ಟು ಸಂಕೀರ್ಣವಾಗಿತ್ತೆಂದರೆ, ಯಾವ ಸಂದರ್ಭದಲ್ಲಾದರೂ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂಬ ಆತಂಕ ನೆಲೆಸಿತ್ತು.

ಮೂಲಗಳ ಪ್ರಕಾರ, ಈ ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಎಷ್ಟು ಎಚ್ಚರಿಕೆ ವಹಿಸಿದ್ದರೆಂದರೆ, ರಾಜ್ ಅಪಹರಣದ ನಂತರದಲ್ಲಿ ಹೆಜ್ಜೆಹೆಜ್ಜೆಗೂ ಪೊಲೀಸ್ ಅಧಿಕಾರಿಗಳು ಅವರಿಗೆ ವಸ್ತುಸ್ಥಿತಿಯ ವರದಿ ನೀಡಬೇಕಿತ್ತು. ಏಕೆಂದರೆ, ಒಂದು ಸಲ ಗಲಭೆ ಭುಗಿಲೆದ್ದು ಹತ್ತಾರು ಹೆಣಗಳು ಉರುಳಿದರೆ ಅದು ಕಾನೂನು ಸುವ್ಯವಸ್ಥೆ ಹದಗೆಟ್ಟ ಸಂಕೇತವಾಗುತ್ತಿತ್ತಷ್ಟೇ ಅಲ್ಲ, ರಾಜ್ಯಪಾಲರು ಮಧ್ಯಪ್ರವೇಶಿಸುವ ಮತ್ತು ಸರ್ಕಾರಕ್ಕೆ ಸಂಕಟವಾಗುವ ತೀರ್ಮಾನ ತೆಗೆದುಕೊಳ್ಳಬಹುದು ಎಂಬ ಆತಂಕ ಅವರಲ್ಲಿತ್ತು.

ಹೀಗಾಗಿ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರತಿ ದಿನ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸುತ್ತಿದ್ದ ಎಸ್.ಎಂ.ಕೃಷ್ಣ, ಪ್ರತಿ ದಿನದ ಬೆಳವಣಿಗೆಯ ಬಗ್ಗೆ ತಾವೇ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದರು. ಆದರೆ ಅವರು ಹೀಗೆ ಹೇಳಿಕೆ ನೀಡಿದರೂ ಮಾಧ್ಯಮಗಳಲ್ಲಿ ವಿವಾದ ತಪ್ಪುತ್ತಿರಲಿಲ್ಲ. ಅದರಲ್ಲೂ ಅವರು ನೀಡಿದ ಹೇಳಿಕೆಯಲ್ಲೇ ಏನಾದರೊಂದು ಸೂಕ್ಷ್ಮವನ್ನು ಗುರುತಿಸಿ ವಿವಾದ ಸೃಷ್ಟಿಸುವ ಕೆಲಸವಾಗುತ್ತಿತ್ತು.

ಯಾವಾಗ ಇದು ಅತಿಯಾಯಿತೋ ಆಗ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಒಂದು ತೀರ್ಮಾನಕ್ಕೆ ಬಂದರು. ಒಂದು ದಿನ ಮಾಧ್ಯಮಗಳ ಜತೆ ಮಾತನಾಡುತ್ತಾ, ಇನ್ನು ಮುಂದೆ ರಾಜ್‌ಕುಮಾರ್ ಅವರ ಅಪಹರಣ ಪ್ರಕರಣದ ಬಗ್ಗೆ ಗೃಹ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಮಾಧ್ಯಮಗಳಿಗೆ ವಿವರಿಸುತ್ತಾರೆ ಎಂದರು. ಸರಿ, ಇದಾದ ಮರುದಿನದಿಂದ ಅಪಹರಣ ಪ್ರಕರಣದ ಬಗ್ಗೆ ವಿವರಪಡೆಯಲು ಮಾಧ್ಯಮಗಳು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಬಳಿ ಹೋಗತೊಡಗಿದವು. ಆದರೆ ಹೀಗೆ ಖರ್ಗೆಯವರನ್ನು ಭೇಟಿ ಮಾಡತೊಡಗಿದ ಮಾಧ್ಯಮದವರಿಗೆ ಕೆಲವೇ ದಿನಗಳಲ್ಲಿ ನಿರಾಸೆ ಕಾಡತೊಡಗಿತು.

ಏಕೆಂದರೆ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಇಡೀ ದಿನದ ಬೆಳವಣಿಗೆಯ ಬಗ್ಗೆ ಸಂಕ್ಷಿಪ್ತವಾಗಿ, ಧ್ವನಿಯಲ್ಲಿ ಯಾವುದೇ ಏರಿಳಿತಗಳಿಲ್ಲದೆ ಕೆಲವೇ ಮಾತುಗಳಲ್ಲಿ ವಿವರ ನೀಡುತ್ತಿದ್ದರು. ಹೀಗೆ ಅವರು ನೀಡಿದ ವಿವರವನ್ನು ಗಮನಿಸಿದರೆ ಅದರಲ್ಲಿ ವಿವಾದ ಸೃಷ್ಟಿಸುವ ಅಂಶಗಳೇ ಸಿಗುತ್ತಿರಲಿಲ್ಲ. ನೋಡ ನೋಡುತ್ತಿದ್ದಂತೆಯೇ ಮಲ್ಲಿಕಾರ್ಜುನ ಖರ್ಗೆಯವರ ಸುದ್ದಿಗೋಷ್ಠಿಗಳಿಗೆ ಮಾಧ್ಯಮದವರ ಸಂಖ್ಯೆ ಕಡಿಮೆಯಾಗತೊಡಗಿತು. ಕೊನೆಕೊನೆಗೆ ಸರ್ಕಾರದ ಹೇಳಿಕೆಗಳ ಸಹವಾಸದಿಂದ ದೂರವಾದ ಮಾಧ್ಯಮಗಳು ತಮ್ಮದೇ ಮೂಲಗಳಿಂದ ಸುದ್ದಿ ಪಡೆದು ಪ್ರಕಟಿಸತೊಡಗಿದವು.

ವಾಸ್ತವವಾಗಿ ಇಂತಹ ಬೆಳವಣಿಗೆಗಳಿಂದ ನಿಟ್ಟುಸಿರು ಬಿಟ್ಟವರು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ . ಏಕೆಂದರೆ ಅಪಹರಣ ಪ್ರಕರಣದ ಬಗ್ಗೆ ಪ್ರತಿದಿನ ಮಲ್ಲಿಕಾರ್ಜುನ ಖರ್ಗೆಯವರು ಹೇಳಿಕೆ ನೀಡುತ್ತಾರೆ ಎಂದು ಹೇಳಿದ ದಿನದಿಂದ ಅವರು ವಿವಾದಗಳಿಂದ ದೂರವಿದ್ದರು. ಅದೇ ರೀತಿ ಸರ್ಕಾರವೂ ವಿವಾದಗಳಿಂದ ದೂರವೇ ಉಳಿಯಿತು. ಈ ಬೆಳವಣಿಗೆಯನ್ನು ಏಕೆ ಗಮನಿಸಬೇಕೆಂದರೆ, ಆಡಳಿತ ನಡೆಸುವವರು ವಿವಾದಗಳಿಂದ ದೂರವಿರುವ ಕಲೆಯನ್ನು ಕಲಿಯಬೇಕು. ಅರ್ಥಾತ್, ಅವರಾಡುವ ಮಾತುಗಳು ಬೇರೆ ಬೇರೆ ಧ್ವನಿಯನ್ನು ಹೊರಡಿಸಬಾರದು. ಹೀಗೆ ಆಡಿದ ಮಾತು ವಿವಾದಗಳಿಗೆ ಕಾರಣವಾಗದಂತೆ ನೋಡಿಕೊಳ್ಳುವ ಕಲೆ ಕೃಷ್ಣ ಅವರಿಗಿತ್ತಾದರೂ,ಸನ್ನಿವೇಶ ಬಂದರೆ ಅದನ್ನು ಇನ್ನೂ ಚೆನ್ನಾಗಿ ಮಾಡಬಲ್ಲರು ಎಂಬ ಕಾರಣಕ್ಕಾಗಿ ಅಪಹರಣ ಪ್ರಕರಣದ ಬಗ್ಗೆ ಅವರಿಂದ ಮಾತನಾಡಿಸಿದ್ದರು. ಅವತ್ತು ಅಂತಲ್ಲ, ಇವತ್ತು ಎಐಸಿಸಿ ಅಧ್ಯಕ್ಷರಾಗುವ ಮಟ್ಟಕ್ಕೆ ಬೆಳೆದ ಮೇಲೂ ಮಲ್ಲಿಕಾರ್ಜುನ ಖರ್ಗೆಯವರು ಹಾಗೇ ಇದ್ದಾರೆ. ಅವರ ಮಾತುಗಳು ಯಾವತ್ತೂ ವಿವಾದಗಳಿಗೆ ಸಿಲುಕುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಅಗತ್ಯ ಬಿದ್ದರೆ ಮಾತ್ರ ಮಾತನಾಡುತ್ತಾರೆ.

ಹೀಗಾಗಿ ಆಡಳಿತದ ವಿಷಯ ಬಂದಾಗ ಅವರು ವಿವಾದಗಳಿಗೆ ಸಿಲುಕುವುದೇ ಇಲ್ಲ. ಇವತ್ತು ಹೆಜ್ಜೆಹೆಜ್ಜೆಗೂ ವಿವಾದಗಳನ್ನುಸೃಷ್ಟಿಸಿಕೊಳ್ಳುವ ರಾಜಕೀಯ ನಾಯಕರು ಮಲ್ಲಿಕಾರ್ಜುನ ಖರ್ಗೆಯವರನ್ನು ನೋಡಿ ಕಲಿಯಬೇಕು. ‘ಮಾತೆಂಬುದು ಜ್ಯೋತಿರ್ಲಿಂಗ’ವಾಗಬೇಕು ಎಂಬುದು ಗೊತ್ತಾಗದಿದ್ದರೆ ಯಶಸ್ವಿ ನಾಯಕರಾಗುವುದು ಅಸಾಧ್ಯ ಎಂಬುದನ್ನು ಅರಿಯಬೇಕು. ಇದೇ ರೀತಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಹೇಗೆ ಎಂಬುದನ್ನು ಕಲಿಯಬೇಕು ಎಂದರೆ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೋಡಬೇಕು.

೨೦೨೩ರಲ್ಲಿ ಅವರು ಮುಖ್ಯಮಂತ್ರಿಯಾದರಲ್ಲ ಇದಾದ ನಂತರ ನಿರಂತರವಾಗಿ ಒಂದು ವಿಷಯ ಪಕ್ಷ ಮತ್ತು ಸರ್ಕಾರವನ್ನು ಬಾಧಿಸತೊಡಗಿತು. ಅದೆಂದರೆ, ಅಧಿಕಾರ ಹಂಚಿಕೆ ಒಪ್ಪಂದದ ಮಾತು. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಮುಖ್ಯಮಂತ್ರಿ ಹುದ್ದೆಗಾಗಿಸಿದ್ದರಾಮಯ್ಯ ಅವರ ಜತೆ ಡಿ.ಕೆ.ಶಿವಕುಮಾರ್ ಅವರೂ ಪೈಪೋಟಿ ನಡೆಸಿದ್ದರಲ್ಲ, ಈ ಸಂದರ್ಭದಲ್ಲಿ ಕಿರೀಟ ಸಿದ್ದರಾಮಯ್ಯ ಅವರ ನೆತ್ತಿಯ ಮೇಲೆ ಕೂತುಕೊಂಡಿತಾದರೂ, ಎರಡೂವರೆ ವರ್ಷಗಳ ನಂತರ ಅವರು ಅಧಿಕಾರದಿಂದ ಕೆಳಗಿಳಿಯುತ್ತಾರೆ, ನಂತರದ ಎರಡೂವರೆ ವರ್ಷ ಡಿಸಿಎಂ ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತು ಹರಿದಾಡತೊಡಗಿತು.

ಈ ಬಗ್ಗೆ ಯಾರೆಷ್ಟೇ ಹೇಳಲಿ, ಆದರೆ ಸಿದ್ದರಾಮಯ್ಯ ಮಾತ್ರ ಹೆಚ್ಚು ಉತ್ತರಿಸುವ ಗೋಜಿಗೆ ಹೋಗುತ್ತಿರಲಿಲ್ಲ. ತೀರಾ ಅನಿವಾರ್ಯವಾದರೆ ಐದು ವರ್ಷಗಳ ಕಾಲ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳುತ್ತಿದ್ದರು. ಆದರೆ ಇತ್ತೀಚೆಗೆ ವಿದೇಶಕ್ಕೆ ಹೋದ ರಾಹುಲ್ ಗಾಂಧಿಯವರು ದಿಲ್ಲಿಗೆ ಮರಳುತ್ತಾರೆ ಎಂಬ ವರ್ತಮಾನ ಕೇಳಿ ಬಂದಾಗ ಕರ್ನಾಟಕದ ರಾಜಕಾರಣದಲ್ಲಿ ಅಧಿಕಾರ ಹಂಚಿಕೆಯ ಮಾತು ಸುನಾಮಿಯಂತೆ ಮೇಲೆದ್ದಿತು.

ಈ ಸಲ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಬ್ಬರೂ ದಿಲ್ಲಿಗೆ ಕರೆದಿದ್ದಾರೆ. ಹೀಗೆ ಕರೆದವರು ಇಬ್ಬರ ಜತೆ ಸಭೆ ನಡೆಸಿನಿರ್ಣಾಯಕ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ. ಅದರ ಪ್ರಕಾರ, ನವೆಂಬರ್ ಇಪ್ಪತ್ತರ ವೇಳೆಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡುವಂತೆ ಅವರು ಸಿದ್ದರಾಮಯ್ಯ ಅವರಿಗೆ ಹೇಳಲಿದ್ದಾರೆ ಎಂಬ ಮಾತುರಾಜಕೀಯ ವಲಯಗಳಲ್ಲಿ ಹಬ್ಬುತ್ತಾ ಹೋಯಿತು.

ಹೀಗೆ ಹಬ್ಬಿದ ಸುದ್ದಿಯ ಪ್ರಕಾರ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಬ್ಬರೂ ದಿಲ್ಲಿಗೆ ಹೋದರು ಆದರೆ ದಿಲ್ಲಿಗೆ ಹೋದ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಜತೆ ಸಭೆ ನಡೆಯುವ ಮುನ್ನವೇ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ: ಐದು ವರ್ಷ ಕಾಲವೂ ನಾನೇ ಸಿಎಂ ಎಂದರಲ್ಲದೆ, ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ಅಧಿಕಾರ ಹಂಚಿಕೆ ಒಪ್ಪಂದವೇ ಆಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶಾಸಕಾಂಗ ನಾಯಕನ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನಾನು ಡಿ.ಕೆ.ಶಿವಕುಮಾರ್ ಅವರನ್ನು ಸೋಲಿಸಿ ಗೆದ್ದಿದ್ದೇನೆ ಎಂದುಬಿಟ್ಟರು.

ಯಾವಾಗ ಅವರು ಈ ಮಾತು ಹೇಳಿದರೋ, ಆನಂತರ ರಾಹುಲ್ ಗಾಂಧಿ ಅವರು ಉಭಯ ನಾಯಕರ ಜತೆ ಸಭೆ ನಡೆಸಲೇ ಇಲ್ಲ. ಅಂದ ಹಾಗೆ ಅವರು ಸಭೆ ನಡೆಸಲು ವೇದಿಕೆ ಸಜ್ಜಾಗಿತ್ತೇನೋ ನಿಜ. ಆದರೆ ಸಿದ್ದರಾಮಯ್ಯ ದಿಲ್ಲಿಗೇ ಬಂದು ಕುಳಿತು ಇಂತಹ ಮಾತನಾಡಿದ ಮೇಲೆ ಮುಂದೇನು ಅಂತ ಅವರಿಗೂ ತೋಚಲಿಲ್ಲ. ಏಕೆಂದರೆ ಒಂದು ಸಲ ಸಿದ್ದರಾಮಮಯ್ಯ ಅವರು ನಾಯಕತ್ವನನ್ನದೇ ಎಂದು ಪಟ್ಟಾಗಿ ಹೇಳಿದ ಮೇಲೆ ಮಾತನಾಡುವುದಕ್ಕೆ ಉಳಿದಿದ್ದಾದರೂ ಏನು? ಅದೇ ರೀತಿ ಅದೇ ಸಭೆಗೆ ಬರುವ ಡಿಕೆಶಿಗೆ ಯಾವ ಸಂದೇಶ ಕೊಡಬಹುದು? ವಸ್ತುಸ್ಥಿತಿಯೆಂದರೆ, ದಿಲ್ಲಿ ಗದ್ದುಗೆಯಿಂದ ದೂರವುಳಿದ ಪಕ್ಷಕ್ಕೆ ಡಿಕೆಶಿ ದೊಡ್ಡಮಟ್ಟದಲ್ಲಿ ಟಾನಿಕ್ ಕೊಡುತ್ತಿದ್ದಾರೆ. ಹೀಗೆ ಟಾನಿಕ್ ಕೊಡುತ್ತಿರುವ ಅವರಿಗೆ ನಿರಾಸೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ರಾಹುಲ್ ಗಾಂಧಿ ಸಭೆಯನ್ನೇ ಮುಂದೂಡಿಬಿಟ್ಟರು.

ಇದಾದ ನಂತರದ ದಿನಗಳಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಡಿಕೆಶಿ ಕ್ಯಾಂಪಿನ ನಾಯಕರು ಚಕಾರವೆತ್ತುತ್ತಿಲ್ಲ. ತೀರಾ ಖಾಸಗಿ ಮಾತುಕತೆಯ ಸಂದರ್ಭದಲ್ಲಿ ಡಿಕೆಶಿಗೆ ಸಿಎಂ ಹುದ್ದೆ ಸಿಕ್ಕೇ ಸಿಗುತ್ತದೆ ಅಂತ ಅವರು ಪಿಸುಗುಟ್ಟುತ್ತಾರಾದರೂ ಹಿಂದಿನಂತೆ ಗಡದ್ದು ಧ್ವನಿಯಲ್ಲಿ ಮಾತನಾಡುತ್ತಿಲ್ಲ.

ಆ ದೃಷ್ಟಿಯಿಂದ ಸಿದ್ದರಾಮಯ್ಯ ಅಧಿಕಾರ ಹಂಚಿಕೆಯ ಮಾತಿಗೆ ದೊಡ್ಡದೊಂದು ಬ್ರೇಕ್ ಹಾಕಿದರು. ಅರ್ಥಾತ್, ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಕೇಳುತ್ತಾ ಬಂದ ಮಾತಿಗೆ ನಿರ್ಣಾಯಕ ಸಮಯದಲ್ಲಿ ಹೊಡೆತ ಕೊಟ್ಟಿದ್ದರು. ಈ ಬೆಳವಣಿಗೆಯ ನಂತರ ತಮ್ಮ ಸರ್ಕಾರಿ ನಿವಾಸದಲ್ಲಿದ್ದ ಸಿದ್ದರಾಮಯ್ಯ ಅವರನ್ನು ಹಿರಿಯ ಸಚಿವರೊಬ್ಬರು ಭೇಟಿ ಮಾಡಿ ಅಭಿನಂದಿಸಿದರಂತೆ. ಯಾಕಪ್ಪಾ ಅಂತ ಇವರು ಕೇಳಿದರೆ: ದಿಲ್ಲಿಯಲ್ಲಿ ಆಡಿದ ಮಾತನ್ನು ಹಿಂದೆಯೇ ಆಡಬೇಕಿತ್ತು. ಆದರೆ ತಡವಾಗಿಯಾದರೂ ಆಡಿದಿರಲ್ಲ, ಅದಕ್ಕೇ ಅಭಿನಂದನೆ ಹೇಳಿದೆ ಎಂದು ಸಚಿವರು ಹೇಳಿದರಂತೆ.

ಆಗ ಸಿದ್ದರಾಮಯ್ಯ ಅವರು ಎಲ್ಲವನ್ನೂ ಪ್ರತಿ ದಿನ ಹೇಳುತ್ತಾ ಕೂರಬಾರದು. ಬದಲಿಗೆ ಸಮಯಕ್ಕಾಗಿ ಕಾಯಬೇಕು ಎಂದರಂತೆ.ಅರ್ಥಾತ್, ಕೂತಾಗ, ಎದ್ದಾಗ ಅವರು ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡಿದ್ದರೆ ಅದಕ್ಕೊಂದು ಫೋರ್ಸು ಇರುತ್ತಿರಲಿಲ್ಲ. ಆದರೆ ಇದಕ್ಕಾಗಿ ಸುದೀರ್ಘ ಕಾಲ ಕಾದು ದಿಲ್ಲಿಯಲ್ಲಿ ಸಿಡಿಸಿದ ಬಾಂಬು ದೊಡ್ಡಮಟ್ಟದಲ್ಲಿ ಕೆಲಸ ಮಾಡಿತು. ಇದು ಕೂಡಾ ‘ಮಾತೆಂಬುದು ಜ್ಯೋತಿರ್ಲಿಂಗ’ವಾಗಬೇಕು ಎಂಬುದಕ್ಕೆ ಉದಾಹರಣೆ.

” ಹೆಜ್ಜೆಹೆಜ್ಜೆಗೂ ವಿವಾದಗಳನ್ನು ಸೃಷ್ಟಿಸಿಕೊಳ್ಳುವ ರಾಜಕೀಯ ನಾಯಕರು ಮಲ್ಲಿಕಾರ್ಜುನಖರ್ಗೆಯವರನ್ನು ನೋಡಿ ಕಲಿಯಬೇಕು. ‘ಮಾತೆಂಬುದು ಜ್ಯೋತಿರ್ಲಿಂಗ’ವಾಗಬೇಕು ಎಂಬುದು ಗೊತ್ತಾಗದಿದ್ದರೆ ಯಶಸ್ವಿ ನಾಯಕರಾಗುವುದು ಅಸಾಧ್ಯ ಎಂಬುದನ್ನು ಅರಿಯಬೇಕು.”

-ಆರ್.ಟಿ.ವಿಠ್ಠಲಮೂರ್ತಿ 

ಆಂದೋಲನ ಡೆಸ್ಕ್

Recent Posts

ಮದುವೆ ರದ್ದು: ಮೌನಮುರಿದ ಸ್ಮೃತಿ ಮಂದಾನ

ಮುಂಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಉಪನಾಯಕಿ ಸ್ಮೃತಿ ಮಂದಾನ ಹಾಗೂ ಸಂಗೀತ ಸಂಯೋಜಕ ಪಲಾಶ್‌ ಮುಚ್ಚಲ್‌ ಮದುವೆ ಮುಂದೂಡಿಕೆಯಾಗಿತ್ತು.…

22 mins ago

ಅರಣ್ಯ ಕಾಯುವುದಕ್ಕೆ ರೆಡಿ ಆಯ್ತು ಬೆಲ್ಜಿಯಂ ಶ್ವಾನ

ಗುಂಡ್ಲುಪೇಟೆ: ಬಂಡೀಪುರ ರಾಜ್ಯದಲ್ಲೇ ಅತಿ ಹೆಚ್ಚು ಹುಲಿ, ಚಿರತೆ ಹಾಗೂ ಆನೆಗಳಿರುವ ತಾಣ. ಈ ಅರಣ್ಯದಲ್ಲಿ ದೇಶದಲ್ಲೇ ಮೊದಲ ಟ್ರ್ಯಾಕರ್…

46 mins ago

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ

ಬೆಳಗಾವಿ: ಬೆಳಗಾವಿಯಲ್ಲಿ ನಾಳೆಯಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ…

48 mins ago

ಗೋವಾ ನೈಟ್‌ಕ್ಲಬ್‌ನಲ್ಲಿ ಬೆಂಕಿ ದುರಂತ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶ ನೀಡಿದ ಸಿಎಂ ಪ್ರಮೋದ್‌ ಸಾವಂತ್‌

ಪಣಜಿ: ಗೋವಾದ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 25 ಜನರು ಸಾವನ್ನಪ್ಪಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶ…

1 hour ago

ನನ್ನದು ಕೃಷ್ಣತತ್ವ ಕಾಂಗ್ರೆಸ್ ಪಕ್ಷದ್ದು ಕಂಸತತ್ವ: ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು

ನವದೆಹಲಿ: ಭಗವದ್ಗೀತೆಯನ್ನು ಶಾಲಾ ಮಕ್ಕಳಿಗೆ ಬೋಧಿಸಬೇಕು ಎಂದು ಪುನರುಚ್ಚರಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು, ತಮ್ಮನ್ನು ಮನುವಾದಿ ಎಂದ ಮುಖ್ಯಮಂತ್ರಿ…

1 hour ago

ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟಗಾರರು, ಬಳಕೆದಾರರ ವಿರುದ್ಧ ಸರ್ಕಾರ ಮತ್ತು ಪೊಲೀಸರು ಸಮರ…

1 hour ago