ಕೆಲವೇ ಕಾಲದ ಅಂತರದಲ್ಲಿ ಕರ್ನಾಟಕ ಸೇರಿದಂತೆ ದೇಶದ ನಾಲ್ಕು ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಅಂದ ಹಾಗೆ ಇಂತಹ ಅಪಸ್ವರ ಶುರು ಮಾಡಿರುವ ರಾಜ್ಯಗಳೆಂದರೆ ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ.
ಒಂದು ಕಡೆಯಿಂದ ನೋಡುತ್ತಾ ಹೋಗುವುದಾದರೆ ಮೊದಲಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳನ್ನೇ ತೆಗೆದುಕೊಳ್ಳಿ. ಅವರು ಏನು ಹೇಳಿದರು, ತಮ್ಮ ರಾಜ್ಯದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಕಾರಣದಿಂದ ಸರ್ಕಾರ ಗಂಭೀರ ಆರ್ಥಿಕ ದುಃಸ್ಥಿತಿಯನ್ನು ಎದುರಿಸುತ್ತಿದೆ ಎಂದು ತಾನೇ? ಅಷ್ಟೇ ಅಲ್ಲ, ಅವರ ಮಾತು ಮುಂದುವರಿದು; ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ನಾನು ಉಚಿತ ವಿದ್ಯುತ್ ಯೋಜನೆಯ ಸೌಲಭ್ಯವನ್ನು ಹಿಂತಿರುಗಿಸಲು ನಿರ್ಧರಿಸಿದ್ದೇನೆ. ಜನರೂ ಇಂತಹ ಸೌಲಭ್ಯವನ್ನು ಹಿಂತಿರುಗಿಸಬೇಕು ಎಂದು ಕರೆ ನೀಡಿದರು. ಅವರ ಮಾತುಗಳ ಆಳಕ್ಕಿಳಿದು ನೋಡಿದರೆ ಇವತ್ತು ಹಿಮಾಚಲ ಪ್ರದೇಶ ತಲುಪಿದ ಗಂಭೀರ ಪರಿಸ್ಥಿತಿ ಗೋಚರವಾಗುತ್ತದೆ. ಅಲ್ಲೀಗ ಗ್ಯಾರಂಟಿ ಯೋಜನೆಗಳಿಗೆ ಕೊಡುತ್ತಿರುವ ಹಣವೇ ಸರ್ಕಾರಕ್ಕೆ ಕಂಟಕವಾಗಿದೆ ಮತ್ತು ಬಜೆಟ್‌ನಲ್ಲಿ ಇದನ್ನು ಸರಿದೂಗಿಸಲು ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ.
ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಎರಡು, ಮೂರು ವರ್ಷಗಳಲ್ಲಿ ಹಿಮಾಚಲ ಪ್ರದೇಶ ಗಂಭೀರ ಆರ್ಥಿಕ ಸಮಸ್ಯೆಗೆ ಗುರಿಯಾಗಲಿದೆ. ಆರ್ಥಿಕ ತಜ್ಞರ ಪ್ರಕಾರ; ಸರ್ಕಾರವಾದರೂ ಎಷ್ಟು ದಿನ ಅಂತ ಹಣ ಹೊಂದಿಸಬಹುದು? ತನ್ನ ಕೈಯಲ್ಲಿ ಆಸ್ತಿ ಇರುವ ತನಕ ಹೊಂದಿಸಬಹುದು ತಾನೇ? ಆ ಆಸ್ತಿ ಕರಗಿದ ನಂತರ ಇನ್ನೇನು ಮಾಡಬಹುದು? ಹಿಮಾಚಲ ಪ್ರದೇಶದ ಅರ್ಥ ವ್ಯವಸ್ಥೆ ಎಷ್ಟು ಆತಂಕಕಾರಿಯಾಗಿದೆ ಎಂಬುದಕ್ಕೆ ಈ ಮಾತುಗಳು ಪುಷ್ಟಿ ನೀಡುತ್ತವೆ.
ಇದೇ ರೀತಿ ತೆಲಂಗಾಣದ ಮುಖ್ಯಮಂತ್ರಿ ರೇವಂತರೆಡ್ಡಿ ಕೂಡ ಗ್ಯಾರಂಟಿ ಯೋಜನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಅವರು; ತಮ್ಮ ಸರ್ಕಾರದ ಆದಾಯದ ಪೈಕಿ ದೊಡ್ಡ ಪಾಲು ಸರ್ಕಾರಿ ನೌಕರರ ವೇತನ, ಪಿಂಚಣಿಗೆ ಹೋದರೆ, ಮತ್ತೊಂದು ದೊಡ್ಡ ಪಾಲು ಈ ಹಿಂದೆ ಮಾಡಿರುವ ಸಾಲವನ್ನು ತೀರಿಸಲು ಬಳಕೆಯಾಗುತ್ತಿದೆ. ಇಷ್ಟೆಲ್ಲ ಅದ ನಂತರ ಪ್ರತಿ ತಿಂಗಳು ತಮಗೆ ಉಳಿಯುವ ಹಣ ಐದು ಸಾವಿರ ಕೋಟಿ ರೂಪಾಯಿ. ಇದರಲ್ಲಿ ನಾನು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹೇಗೆ? ಎಂದಿದ್ದಾರೆ. ಇದಾದ ನಂತರ ಅವರ ನೇರ ಮಾತೆಂದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಉಚಿತ. ಈ ಬಗ್ಗೆ ವ್ಯವಸ್ಥೆಯಲ್ಲಿ ಚರ್ಚೆಯಾಗಬೇಕು ಎಂಬುದು.
ಹೀಗೆ ತೆಲಂಗಾಣದ ಮುಖ್ಯಮಂತ್ರಿ ರೇವಂತರೆಡ್ಡಿಯವರು ಗ್ಯಾರಂಟಿ ಯೋಜನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ದೇಶದ ಬಹುದೊಡ್ಡ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರದಿಂದಲೂ ಅಪಸ್ವರ ಕೇಳಿ ಬಂತು. ಅದರ ಪ್ರಕಾರ, ಗ್ಯಾರಂಟಿ ಯೋಜನೆಗಳ ಸಲುವಾಗಿ ಮಹಾರಾಷ್ಟ್ರದ ಬಜೆಟ್ ದೊಡ್ಡ ಮಟ್ಟದಲ್ಲಿ ಕೊರತೆ ಅನುಭವಿಸುತ್ತಿದೆ. ಪರಿಸ್ಥಿತಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಅದರ ಆತಂಕ ಮತ್ತಷ್ಟು ಹೆಚ್ಚಾಗಲಿದೆ. ಹೀಗೆ ಹಿಮಾಚಲ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳ ನಂತರದ ಕರ್ನಾಟಕದ ಸರದಿ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾಗಿ ಹತ್ತತ್ತಿರ ಎರಡು ವರ್ಷ ಕಳೆಯುತ್ತಾ ಬಂದಿದೆ.
ಇಂತಹ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡ ಮಟ್ಟದಲ್ಲಿ ಸಂಕಟ ಅನುಭವಿಸಿದ್ದಾರೆ. ಕಾರಣ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಯೋಜನೇತರ ಬಾಬ್ತಿನಿಂದ ಹಣ ಒದಗಿಸಲು ಸಾಧ್ಯವಿಲ್ಲ. ಯಾಕೆಂದರೆ, ಯೋಜನೇತರ ಬಾಬ್ತಿನಲ್ಲಿ ಸರ್ಕಾರಿ ನೌಕರರ ವೇತನ, ಪಿಂಚಣಿಯಿಂದ ಹಿಡಿದು, ಸರ್ಕಾರಿ ಮಾಡಿರುವ ಸಾಲದ ಮೇಲಿನ ಅಸಲು, ಬಡ್ಡಿ, ಚಕ್ರಬಡ್ಡಿಯನ್ನು ತೀರಿಸುವುದೂ ಸೇರುತ್ತದೆ. ನೇರವಾಗಿ ಹೇಳಬೇಕೆಂದರೆ ಈ ಹಣವನ್ನು ಕಡಿತ ಮಾಡಲು ಯಾವುದೇ ಸರ್ಕಾರಕ್ಕೂ ಸಾಧ್ಯವಿಲ್ಲ. ಅರ್ಥಾತ್, ಯೋಜನೇತರ ಬಾಬ್ತಿನಿಂದ ಹಣ ಒದಗಿಸಲು ಸಾಧ್ಯವಾಗದೆ ಹೋದಾಗ ಸರ್ಕಾರ ಯೋಜನಾ ಬಾಬ್ತಿಗೆ ಕಡಿತ ಮಾಡಿ ಹಣ ನೀಡಬೇಕಾಗುತ್ತದೆ.
ಯೋಜನಾ ಬಾಬ್ತು ಎಂದರೆ ನೇರವಾಗಿ ರಾಜ್ಯದ ಅಭಿವೃದ್ಧಿಗೆ ಸಂಬಂಽಸಿದ್ದು. ಈ ಬಾಬ್ತಿನ ಹಣವನ್ನು ಕಡಿತ ಮಾಡಿದರೆ ಅದರ ನೇರ ಪರಿಣಾಮವಾಗುವುದು ಅಭಿವೃದ್ಧಿ ಕಾರ್ಯಗಳ ಮೇಲೆ ಮತ್ತು ಇಂತಹ ಕಾರ್ಯಗಳಿಗೆ ಹಣ ಕಡಿತವಾದರೆ ಶಾಸಕರು ಕೋಪಗೊಳ್ಳುವರು. ಕಳೆದ ಎರಡು ಬಜೆಟ್‌ಗಳಲ್ಲೂ ಶಾಸಕರಿಗೆ ದೊಡ್ಡ ಮಟ್ಟದ ಅನುದಾನ ನೀಡುವ ವಿಷಯದಲ್ಲಿ ಸಿದ್ದರಾಮಯ್ಯ ಅಸಹಾಯಕರಾಗಿದ್ದರು. ಆದರೆ ಈ ವರ್ಷ ಅವರು ಚೇತರಿಸಿಕೊಂಡು ರಾಜಧಾನಿ ಬೆಂಗಳೂರಿಗೆ ಎಂಟು ಸಾವಿರ ಕೋಟಿ ರೂಪಾಯಿ ನೀಡಿದ್ದರೆ, ಉಳಿದಂತೆ ರಾಜ್ಯದ ಎಲ್ಲ ಶಾಸಕರಿಗೂ ನಲವತ್ತರಿಂದ ಐವತ್ತು ಕೋಟಿ ರೂಪಾಯಿ ಕೊಡಲು ತಯಾರಿ ಮಾಡಿಕೊಂಡಿದ್ದಾರೆ.
ಹೀಗೆ ಬೆಂಗಳೂರಿಗೆ ಹಣ ಬಿಡುಗಡೆ ಮಾಡುವುದು, ರಾಜ್ಯದ ಶಾಸಕರಿಗೆ ಹಣ ಬಿಡುಗಡೆ ಮಾಡುವುದು ಎಂದರೆ ಶಾಸಕರನ್ನು ಸಮಾಧಾನಿಸುವುದು ಎಂದೇ ಅರ್ಥ. ಆ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಅರ್ಥಾತ್, ಗ್ಯಾರಂಟಿ ಯೋಜನೆಗಳ ಹೊಡೆತಕ್ಕೆ ತಲ್ಲಣಗೊಂಡ ತಮ್ಮ ಸರ್ಕಾರವನ್ನು ಒಂದು ಹಳಿಯ ಮೇಲೆ ತಂದು ನಿಲ್ಲಿಸುವಲ್ಲಿ ಅವರು ಸಫಲರಾಗಿದ್ದಾರೆ. ಆದರೆ ಇದಾದರೂ ಎಷ್ಟು ದಿನ?
ಏಕೆಂದರೆ ಈಗಾಗಲೇ ರಾಜ್ಯ ಸರ್ಕಾರದ ಬಹುತೇಕ ಆದಾಯ ಜಿ. ಎಸ್. ಟಿ. ಹೆಸರಿನಲ್ಲಿ ಕೇಂದ್ರಕ್ಕೆ ಹೋಗುತ್ತಿದೆ. ಈ ಹಣದಲ್ಲಿ ರಾಜ್ಯಕ್ಕೆ ಅದು ಒಂದು ಪಾಲು ಕೊಡಬಹುದು. ಆದರೆ ಇದುವರೆಗೆ ರಾಜ್ಯದ್ದೇ ಆಗಿದ್ದ ಆದಾಯವನ್ನು ಪಡೆಯುವುದಕ್ಕೂ, ಆದಾಯದಲ್ಲಿ ಒಂದು ಪಾಲು ಪಡೆಯುವುದಕ್ಕೂ ವ್ಯತ್ಯಾಸವಿದೆ. ಇಂತಹ ಪರಿಸ್ಥಿತಿ ಇರುವಾಗ ರಾಜ್ಯ ಸರ್ಕಾರ ಹೊಸ ಹೊಸ ಆದಾಯ ಮೂಲಗಳನ್ನು ಕಂಡು ಹಿಡಿಯುವುದೂ ಕಷ್ಟ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಿತ್ಯಂತರಗಳಿಂದಾಗಿ ಸಿದ್ದರಾಮಯ್ಯ ಕೆಳಗಳಿದರೆ, ಗ್ಯಾರಂಟಿ ಯೋಜನೆಗಳನ್ನು ನಿಭಾಯಿವುದು ಸರ್ಕಾರಕ್ಕೆ ನಿಜಕ್ಕೂ ಹೊರೆಯಾಗಲಿದೆ.
ಇಂತಹ ಹೊರೆಯನ್ನು ಸಾಮಾಜಿಕ ನ್ಯಾಯದ ಕಲ್ಪನೆಯಿಲ್ಲದ ಮುಖ್ಯಮಂತ್ರಿಗಳು ನಿಭಾಯಿಸುವುದೂ ಇಲ್ಲ ಮತ್ತು ಅದರ ಅಗತ್ಯವೂ ಅವರಿಗೆ ಕಾಣುವುದಿಲ್ಲ. ಹೀಗಾಗಿ ಮುಂದಿನ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಈಗಲೇ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಕಾರ್ಯ ನಡೆಯಬೇಕು. ಪರಿಷ್ಕರಿಸುವುದು ಎಂದರೆ ಅರ್ಹರಿಗೆ ತಪ್ಪಿಸುವುದು ಎಂದಲ್ಲ, ಬದಲಿಗೆ ಅನರ್ಹರಿಗೆ ತಪ್ಪಿಸುವುದು ಎಂದರ್ಥ. ವಿಪರ್ಯಾಸವೆಂದರೆ ಸರ್ಕಾರ ಈ ಕೆಲಸಕ್ಕೆ ಮುಂದಾದರೆ ಪ್ರತಿಪಕ್ಷಗಳು ಗದ್ದಲವೆಬ್ಬಿಸುತ್ತವೆ. ಗ್ಯಾರಂಟಿ ಭರವಸೆ ನೀಡಿ, ಜನರಿಗೆ ಅನ್ಯಾಯ ಮಾಡಲಾಗುತ್ತಿದೆ ಎನ್ನುತ್ತವೆ.
ವಾಸ್ತವವಾಗಿ ಹೇಳಬೇಕೆಂದರೆ ಇದು ಪ್ರಜಾಪ್ರಭುತ್ವದ ನಿಜವಾದ ದುರಂತ. ಪ್ರತಿಪಕ್ಷಗಳು ಹೀಗೆ ವಿರೋಧ ಮಾಡುವ ಬದಲು ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಸಿಗುವಂತೆ ಮಾಡುವುದು ಹೇಗೆ? ಎಂದು ಸರ್ಕಾರಕ್ಕೆ ಸಲಹೆ ನೀಡಬೇಕು.
ಒಂದು ಅಂದಾಜಿನ ಪ್ರಕಾರ, ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಮಾತ್ರ ಸಿಗುವಂತಾದರೆ ರಾಜ್ಯ ಸರ್ಕಾರಕ್ಕೆ ವಾರ್ಷಿಕ ಇಪ್ಪತ್ತೆ ದು ಸಾವಿರ ಕೋಟಿ ರೂ. ಗಳಷ್ಟು ಹಣ ಉಳಿಯಲಿದೆ. ಆ ಮೂಲಕ ಪ್ರತಿ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಕನಿಷ್ಠ ನೂರು ಕೋಟಿ ರೂಪಾಯಿಗಳಷ್ಟು ಹಣ ಸಿಗುತ್ತದೆ.
ಇವತ್ತು ಇಷ್ಟು ದೊಡ್ಡ ಪ್ರಮಾಣದಲ್ಲಿ ಪೋಲಾಗುತ್ತಿರುವ ಸರ್ಕಾರದ ಹಣವನ್ನು ಉಳಿಸುವುದು ಪ್ರತಿಪಕ್ಷಗಳ ಕರ್ತವ್ಯವೂ ಹೌದು. ಒಂದು ವೇಳೆ ಅವು ಈ ಕರ್ತವ್ಯವನ್ನು ನಿಭಾಯಿಸಲು ವಿಫಲವಾದರೆ ಪ್ರಜಾಸತ್ತೆಯನ್ನು ದುರ್ಬಲಗೊಳಿಸಲು ಅವು ಪಾಲು ನೀಡಿದಂತೆ.
ಏಕೆಂದರೆ ಗ್ಯಾರಂಟಿ ಯೋಜನೆಗಳು ಬಯಸುವ ಹಣವನ್ನು ಪೂರೈಸಲಾಗದೆ ಒಂದು ದಿನ ಸರ್ಕಾರ ಕೈ ಚೆಲ್ಲಿದರೆ, ನಿಜವಾದ ಅನ್ಯಾಯ ಬಡವರಿಗಾಗುತ್ತದೆ. ಹಾಗಾಗಬಾರದು ಎಂದರೆ ಈಗಲೇ ಒಟ್ಟಾರೆ ರಾಜಕೀಯ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು.
ಮೈಸೂರು: ಬ್ರೇಕ್ ಫೇಲ್ ಆಗಿದ್ರು ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ಏಕಾಏಕಿ ಮುಂದೆ ಚಲಿಸುತ್ತಿದ್ದ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಜ್ಯದ ಪ್ರಸಿದ್ದ ಯಾತ್ರಾ ಸ್ಥಳವಾದ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ…
ನಂಜನಗೂಡು: ಇಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಗೆ ಭಕ್ತಸಾಗರವೇ ಹರಿದುಬಂದಿದೆ. ಇಂದು ಬೆಳಿಗ್ಗೆಯಿಂದಲೂ ಸಾವಿರಾರು…
ಸುಂಟಿಕೊಪ್ಪ: ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮ ನಿಯಮಿತದಿಂದ ಸುಂಟಿಕೊಪ್ಪದಲ್ಲಿ 3.64 ಕೋಟಿ ರೂ ವೆಚ್ಚದಲ್ಲಿ…
ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಇನ್ನು ಮುಂದೆ ದಿನದ 24 ಗಂಟೆಯೂ ಪ್ರಸಾದ ವಿತರಣೆ ಮಾಡಲಾಗುತ್ತದೆ. ಮಧ್ಯಾಹ್ನದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ ನೀರಿನಲ್ಲಿ ಬೃಹತ್ ಗಾತ್ರದ…