Post About Indira Gandhi on X: Congress Protests Against BJP
ದೆಹಲಿ ಕಣ್ಣೋಟ
ಸಂಸತ್ತಿನ ಎರಡು ವಾರಗಳ ಮೊದಲ ಹಂತದ ಬಜೆಟ್ ಅಧಿವೇಶನ ನಿಮುಗಿಯಿತು. ಮತ್ತೆ ಎರಡನೇ ಹಂತದ ಬಜೆಟ್ ಅಧಿವೇಶನ ಮಾರ್ಚ್ 9ಕ್ಕೆ ಶುರುವಾಗಿ ಏಪ್ರಿಲ್ 2ಕ್ಕೆ ಮುಕ್ತಾಯವಾಗಲಿದೆ. ಈ ಬಜೆಟ್ ಅಧಿವೇಶನದಲ್ಲಿ ಬಜೆಟ್ ಚರ್ಚೆಗಿಂತ ಮತ್ತು ಗಲಾಟೆ ಗದ್ದಲ ನಡೆದದ್ದು ಆಳುವ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ದ್ವೇಷ, ಪರಸ್ಪರ ಟೀಕೆಗಳನ್ನು ಅತಿರೇಕಕ್ಕೆ ಎಳೆದೊಯ್ದದ್ದು ವಿಶೇಷ.
ಅದಷ್ಟೇ ಅಲ್ಲದೆ ಲೋಕಸಭೆಯ ಸ್ಪೀಕರ್ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯ. ಮತ್ತೊಂದು ಕಡೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎತ್ತಿದ ಪ್ರಶ್ನೆಗಳಿಗೆ ಆಡಳಿತ ಪಕ್ಷ ಸರಿಯಾಗಿ ಉತ್ತರ ನೀಡದೆ ಅವರ ಸದಸ್ಯತ್ವವನ್ನೇ ರದ್ದು ಮಾಡುವಂತೆ ಕೋರುವ ಸೂಚನೆ. ಈ ಎರಡು ವಿಚಿತ್ರ ಘಟನೆಗಳು ಈಗ ಉಭಯ ಮೈತ್ರಿಕೂಟವನ್ನು ಮುಖಾಮುಖಿಯನ್ನಾಗಿಸಿವೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎತ್ತಿದ ನಿವೃತ್ತ ಸೇನಾ ದಂಡ ನಾಯಕ ಜನರಲ್ ಮನೋಜ್ ನರವಣೆ ಅವರು ಬರೆದಿದ್ದು ಇನ್ನೂ ಪ್ರಕಟವಾಗಿರದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಯಲ್ಲಿ ಭಾರತ-ಚೀನಾ ನಡುವಿನ ಗದ್ದಲ ಮತ್ತು ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಹರ್ದೀಪ್ ಸಿಂಗ್‌ಪುರಿ ಅವರ ಹೆಸರು ಕಾಣಿಸಿಕೊಂಡ ಬಗೆಗೆ ಹಾಗೂ ಅಮೆರಿಕದ ಜೊತೆ ಮಾಡಿಕೊಂಡಿರುವ ವಾಣಿಜ್ಯ ಮತ್ತು ಕೃಷಿ ಒಪ್ಪಂದ ಕುರಿತ ಪ್ರಶ್ನೆಗಳಿಗೆ ಸರ್ಕಾರ ಸೂಕ್ತ ಉತ್ತರ ನೀಡದೆ ಹೋಗಿರುವುದು, ಆಡಳಿತದಲ್ಲಿ ಆಗುತ್ತಿರುವ ಎಡವಟ್ಟುಗಳು ಒಂದೊಂದಾಗಿ ಈಗ ಹೊರ ಬರಲಾರಂಭಿಸಿವೆ.
ವಿರೋಧ ಪಕ್ಷಗಳಿಗೆ ಸ್ಪೀಕರ್ ಓಂ ಬಿರ್ಲಾ ಬೇಡವಾಗಿದ್ದರೆ ಆಳುವ ಬಿಜೆಪಿಗೆ ವಿರೋಧ ಪಕ್ಷದ ನಾಯಕ ರಾಹುಲ್ ಬೇಡವಾಗಿರುವುದು ವಿಚಿತ್ರ ಸನ್ನಿವೇಶವನ್ನು ಉಂಟು ಮಾಡಿದೆ. ಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದು ತೀರಾ ಅಪರೂಪದಲ್ಲಿ ಅಪರೂಪದ ಘಟನೆ, ಸಭಾಧ್ಯಕ್ಷ ಓಂ ಬಿರ್ಲಾ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪವನ್ನು ಅಲ್ಲಗಳೆಯಲಾಗದು. ರಾಹುಲ್ ಗಾಂಧಿ ಅವರು ಬಜೆಟ್ ಮೇಲಿನ ಚರ್ಚೆ ಆರಂಭಿಸಿದಾಗ ರಾಷ್ಟ್ರದ ಭದ್ರತೆಯ ಪ್ರಶ್ನೆಯನ್ನು ಪ್ರಸ್ತಾಪಿಸಿ ನಿವೃತ್ತ ಸೇನಾ ದಂಡ ನಾಯಕ ಜನರಲ್ ನರವಣೆ ಅವರ ಕೃತಿಯಲ್ಲಿನ 2020ರ ಗಾಲ್ವಾನ್ ಗಲಾಟೆ ಬಗೆಗೆ ಉಲ್ಲೇಖವಾಗಿರುವ ಸಾಲುಗಳನ್ನು ಪ್ರಸ್ತಾಪಿಸಿದಾಗ ಆ ವಿಷಯವನ್ನು ಚರ್ಚೆಗೆ ಮುಂದುವರಿಸದಂತೆ ಕೈಗೊಂಡ ಕ್ರಮವನ್ನು ನೋಡಿದಾಗ ಇದು ಪಕ್ಷಪಾತಿ ನಡವಳಿಕೆ ಎನ್ನುವ ಸತ್ಯಸಂಗತಿ ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತಹದ್ದೇ. ಸ್ಪೀಕರ್ ಓಂ ಬಿರ್ಲಾ ಅವರ ಈ ನಡವಳಿಕೆಯ ಬಗೆಗೆ ಕೆಲವು ಪತ್ರಿಕೆಗಳು ತಮ್ಮ ಸಂಪಾದಕೀಯದಲ್ಲಿ ಟೀಕಿಸಿರುವುದೂ ಗಮನಾರ್ಹ.
ಇತ್ತ ರಾಜ್ಯಸಭೆಯ ಸಭಾಪತಿಯ ಮೇಲೂ ಇಂತಹದ್ದೇ ಆರೋಪ ಬಂದಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಫೆಬ್ರವರಿ 4ರಂದು ಮಾತನಾಡಿರುವ ಭಾಷಣದಲ್ಲಿ ಸರ್ಕಾರಕ್ಕೆ ಮುಜುಗರ ತರುವ ಕೆಲವು ಭಾಗಗಳನ್ನು ಕತ್ತರಿಸಿಹಾಕಲಾಗಿದೆ. ಈ ಬಗ್ಗೆ ಖರ್ಗೆ ಅವರು ಆಕ್ಷೇಪ ಎತ್ತಿದ್ದರೂ, ತಮ್ಮ ಮಾತುಗಳು ಅಸಂವಿಧಾನಾತ್ಮಕವಾಗಿದ್ದರೆ ಅಥವಾ ನಿಂದನೆಯದಾಗಿದ್ದರೆ ಮತ್ತು ಸದನದ ನಡವಳಿಕೆಯ 261ನೇ ನಿಯಮವನ್ನು ಉಲ್ಲಂಘಿಸಿದ್ದರೆ ಅಂತಹ ಭಾಗವನ್ನು ತೆಗೆದು ಹಾಕಬಹುದು ಎನ್ನುವ ಮನವಿಯನ್ನು ಸಭಾಪತಿ ಸಿ.ಪಿ.ರಾಧಾಕೃಷ್ಣನ್ ಸಾರಾಸಗಟಾಗಿ ತಳ್ಳಿಹಾಕುವ ಮೂಲಕರಾಜ್ಯಸಭೆಯಲ್ಲೂ ವಿರೋಧ ಪಕ್ಷದ ನಾಯಕರ ಮಾತಿಗೆ ಕತ್ತರಿ ಹಾಕಿದ್ದು, ಇಲ್ಲಿಯೂ ಪಕ್ಷಪಾತಿ ನಡವಳಿಕೆ ಢಾಳಾಗಿ ಕಾಣುತ್ತದೆ. ಈ ದಿನಗಳಲ್ಲಿ ಸಂಸತ್ ಕಲಾಪ ಹೇಗೆ ನಡೆಯುತ್ತಿದೆ ಎನ್ನುವುದನ್ನು ಅವಲೋಕಿಸಿದಾಗ ಅಚ್ಚರಿ ಆಗುತ್ತದೆ.
ನಮ್ಮ ಸಂಸದೀಯ ವ್ಯವಸ್ಥೆಯಲ್ಲಿನ ಲೋಕಸಭೆ ಮತ್ತು ರಾಜ್ಯಸಭೆಯನ್ನು ಮುನ್ನಡೆಸಿಕೊಂಡು ಹೋಗುವ ಸಭಾಧ್ಯಕ್ಷ ಪೀಠಗಳು ನಿಷ್ಪಕ್ಷಪಾತವಾಗಿರಬೇಕೆಂದು ಬಯಸುತ್ತೇವೆ. ಆದರೆ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿನ ಸಭಾಧ್ಯಕ್ಷರ ನಡವಳಿಕೆಗಳು ಈಗ ಪಕ್ಷಪಾತಿಯಾಗಿ ಕೂಡಿವೆ’ ಎನ್ನುವ ವಾದವನ್ನು ಪುಷ್ಟಿಕರಿಸಿರುವುದು ಸ್ಪಷ್ಟವಾಗಿ ಕಾಣುತ್ತಿರುವುದು ಕಲಾಪವನ್ನು ಗಂಭೀರವಾಗಿ ಗಮನಿಸಿದಾಗ ಗೊತ್ತಾಗುತ್ತದೆ. ಹೀಗಾಗಿ ಲೋಕಸಭೆಯ ಸಭಾಧ್ಯಕ್ಷರನಡವಳಿಕೆಕೂಡಪ್ರಶ್ನಾರ್ಹವಾಗಿರುವುದು ಅಪರೂಪದ ಘಟನೆ. ಸಭಾಧ್ಯಕ್ಷರ ಇಂತಹ ನಡವಳಿಕೆಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವುದು ಹೊಸದೇನೂ ಅಲ್ಲದಿದ್ದರೂ ಇಂತಹ ಘಟನೆಗಳು ಪುನರಾವರ್ತನೆ ಆಗಬಾರದು. ಲೋಕಸಭೆಯ ಮೊದಲ ಸ್ಪೀಕರ್ ಜಿ.ವಿ.ಮಾವಲಂಕರ್ ಬಗೆಗೆ ಒಳ್ಳೆಯ ಮಾತುಗಳು ಕೇಳಿ ಬಂದಿದ್ದರೂ ಅವರ ವಿರುದ್ಧ 1954ರಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ನಂತರ 1966ರಲ್ಲಿ ಹುಕುಂ ಸಿಂಗ್ ಮತ್ತು 1987ರಲ್ಲಿ ಬಲರಾಂ ಜಾಖಡ್ ಅವರ ವಿರುದ್ಧವೂ ಅವಿಶ್ವಾಸ ನಿರ್ಣಯಗಳನ್ನು ಮಂಡಿಸಿದ ಇತಿಹಾಸವಿದೆ. ಆದರೆ ಈ ಮೂವರು ಸಭಾಧ್ಯಕ್ಷರನ್ನು ಅವಿಶ್ವಾಸದ ಮೂಲಕ ಸಭಾಧ್ಯಕ್ಷ ಪೀಠದಿಂದ ಕೆಳಗಿಳಿಸಿದ ಉದಾಹರಣೆ ಇಲ್ಲ.
ಲೋಕಸಭೆಯಲ್ಲಿನ ಈಗಿನ ಸಂಖ್ಯಾಬಲವನ್ನು ಗಮನಿಸಿದರೆ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗುವುದು ಖಚಿತ. ಬಿಜೆಪಿ 240 ಮತ್ತು ಎನ್‌ಡಿಎ ಸಂಖ್ಯಾಬಲ ಒಟ್ಟು 293 ಇದೆ. ವಿರೋಧ ಪಕ್ಷ ಕಾಂಗ್ರೆಸ್ ಬಲ 199 ಮತ್ತು ಇತರೆ ಪಕ್ಷಗಳ ಬೆಂಬಲ ಇದ್ದರೂ, ಸದ್ಯಕ್ಕೆ ತೃಣಮೂಲ ಕಾಂಗ್ರೆಸ್ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದಿಂದ ದೂರ ಸರಿದಿದೆ. ಅವಿಶ್ವಾಸ ನಿರ್ಣಯ ಎನ್ನುವುದು ರಾಜಕೀಯದಲ್ಲಿ ಕೊನೆಯ ಅಸ್ತ್ರವಾಗಿ ಬಳಸಬೇಕು. ಹಾಗಾಗಿ ಈ ವಿಷಯದಲ್ಲಿ ತಾನಿನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆ ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ತಮ್ಮ ನಿಲುವಿನ ಬಗೆಗೆ ಸ್ಪಷ್ಟನೆ ನೀಡಿದ್ದಾರೆ. ಈ ನಿರ್ಣಯದ ಭವಿಷ್ಯ ಬಜೆಟ್ ಅಧಿವೇಶನದ ಮುಂದುವರಿದ ಭಾಗ ಮಾರ್ಚ್ 9ರಂದು ಸೇರಿದಾಗ ಗೊತ್ತಾಗಲಿದೆ.
ಈ ಬೆಳವಣಿಗೆಯಿಂದ ಸೇಡಿಗೆ ಸೇಡು ಎನ್ನುವಂತೆ ಆಳುವ ಬಿಜೆಪಿ ಸುಮ್ಮನೆ ಕುಳಿತಿಲ್ಲ. ಈ ಅಧಿವೇಶನದಲ್ಲಿ ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡಿಸುತ್ತಿದೆ. ರಾಹುಲ್, ಭಾರತ ಮತ್ತು ಅಮೆರಿಕ ನಡುವೆ ಆಗಿರುವ ವಾಣಿಜ್ಯ ಮತ್ತು ಕೃಷಿ ಒಪ್ಪಂದದ ಬಗೆಗೆ ಎತ್ತಿರುವ ಅಪಸ್ವರ, ಅವರ ಲೋಕಸಭೆ ಸದಸ್ಯತ್ವ ರದ್ದು ಮತ್ತು ಅವರ ಜೀವಿತಾವಧಿಯಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸದಂತೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಆದರೆ ಇದು ಸಾಧ್ಯವೇ ಎನ್ನುವ ಚರ್ಚೆಯೂ ರಾಜಕೀಯ ವಲಯದಲ್ಲಿ ನಡೆದಿದೆ. 2014ರ ಅವಧಿಯಲ್ಲಿ ಒಮ್ಮೆ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಲೋಕಸಭೆಯಲ್ಲಿ ಕೈಗೊಂಡಿದ್ದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು.
ಈ ಅವಿಶ್ವಾಸ ನಿರ್ಣಯಗಳಿಂದ ಓಂ ಬಿರ್ಲಾ ಮತ್ತು ರಾಹುಲ್ ಗಾಂಧಿ ಅವರು ಸೋಲು ಅನುಭವಿಸುವರೇ ಎನ್ನುವುದು ಚರ್ಚೆಯ ವಿಷಯ. ಆದರೆ ಸಂಸತ್ತಿನ ಇತಿಹಾಸದಲ್ಲಿ ಇಂತಹ ಪ್ರಯತ್ನಗಳು ಒಂದು ಕಪ್ಪು ಚುಕ್ಕೆಯಾಗಲಿದೆ ಅಷ್ಟೆ. ಅವಿಶ್ವಾಸ ನಿರ್ಣಯದಲ್ಲಿ ಓಂ ಪ್ರಕಾಶ್ ಬಿರ್ಲಾ ಅವರ ತಲೆದಂಡ ಆಗುವುದಿಲ್ಲ ಎನ್ನುವುದು ಬೆಳಕಿನಷ್ಟೇ ನಿಚ್ಚಳ. ಆದರೆ ಆಳುವ ಬಿಜೆಪಿಗೆ ಮಾತ್ರ ರಾಹುಲ್ ಗಾಂಧಿ ಈಗ ನುಂಗಲಾರದ ತುತ್ತಾಗಿರುವುದನ್ನು ಮಾತ್ರ ತಳ್ಳಿಹಾಕುವಂತಿಲ್ಲ. ಹತ್ತು ವರ್ಷಗಳ ಹಿಂದೆ ರಾಹುಲ್ ಒಬ್ಬ ಪಪ್ಪು ಎಂದು ಅಪಹಾಸ್ಯ ಮಾಡುತ್ತಿದ್ದ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ರಾಹುಲ್ ನಡುಕ ಹುಟ್ಟಿಸಿರುವ ಸತ್ಯವನ್ನು ಮಾತ್ರ ಇಲ್ಲ ಎನ್ನಲಾಗದು. ಬಿಜೆಪಿಯ ಸದಸ್ಯ ನಿಶಿಕಾಂತ್ ದುಬೆ ಅವರ ಈ ಅವಿಶ್ವಾಸ ಸೂಚನೆಗೆ ರಾಹುಲ್ ವಿಚಲಿತರಾದಂತೆ ಕಾಣುತ್ತಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ನಿವೃತ್ತ ಸೇನಾ ದಂಡನಾಯಕ ಜನರಲ್ ಮನೋಜ್ ನರವಣೆ ಅವರ ಕೃತಿಯ ಬಗೆಗೆ ರಾಹುಲ್ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡಲು ಲೋಕಸಭೆಗೆ ಬಾರದೆ ಹೋದುದು ಸಂಸತ್ತಿನ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ವಿಷಯದಲ್ಲಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಪ್ಪು ಮಾಹಿತಿ ನೀಡಿ ಅವರ ಹಾದಿ ತಪ್ಪಿಸಿದ್ದಾರೆ ಎನ್ನುವ ಆರೋಪವೂ ವಿರೋಧ ಪಕ್ಷಗಳು ಮಂಡಿಸಿರುವ ನಿರ್ಣಯದಲ್ಲಿ ಒಂದಾಗಿದೆ.
ಅಧಿಕಾರದಲ್ಲಿರುವ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ಈ ಮಟ್ಟದ ದ್ವೇಷ ರೋಷ ಹೇಗೆ ಹುಟ್ಟಿಕೊಂಡಿದೆ ಎನ್ನುವುದು ಕಳೆದೆರಡು ದಶಕಗಳಿಂದೀಚೆಗೆ ಕಾಣಿಸಿಕೊಳ್ಳುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಬದ್ಧವೈರಿಯಾಗಿ ಸಂಸತ್ತಿನ ಒಳಗೂ ಮತ್ತು ಹೊರಗೂ ಜಟಾಪಟಿಗೆ ಇಳಿದಿರುವುದು ಜನತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
2004ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಭಾರತ ಪ್ರಕಾಶಿಸುತ್ತಿದೆ’ ಎನ್ನುವ ವಾಜಪೇಯಿ ನೇತೃತ್ವದ ಬಿಜೆಪಿಯ ಆಕರ್ಷಕ ಘೋಷಣೆಗಳು ಚುನಾವಣೆಯಲ್ಲಿ ತೋಪಾದವು. ಸಂವಿಧಾನ ಪರಾಮರ್ಶೆಗೆ ಕೈ ಹಾಕಿ ವಾಜಪೇಯಿ ಕೈ ಸುಟ್ಟುಕೊಂಡರು. ಮತ್ತೆ ಬಿಜೆಪಿ ಚೇತರಿಸಿಕೊಳ್ಳಲು ಮೋದಿ ನಾಯಕತ್ವದ 2014 ಚುನಾವಣೆವರೆಗೆ ಕಾಯಬೇಕಾಯಿತು. ಅಂದು ಮೋದಿ ಅವರಿಗೆ ಕುದುರಿದ ಜಾಯಮಾನ ಮತ್ತು ದೇಶವನ್ನು ಕೇಸರೀಕರಣ ಮಾಡುವ ಗುರಿ ಅವರನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ.
2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ 335 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಏರುವಾಗ ಪ್ರಧಾನಿ ಸ್ಥಾನಕ್ಕೆ ಸೋನಿಯಾ ಗಾಂಧಿ ಹೆಸರು ಕೇಳಿ ಬರುತ್ತಿದ್ದಂತೆ ಬಿಜೆಪಿಯಲ್ಲಿ ತಲ್ಲಣ ಶುರುವಾಯಿತು. ಬಿಜೆಪಿಯ ಸುಷ್ಮಾ ಸ್ವರಾಜ್, ವಿದೇಶಿ ಮಹಿಳೆ ಸೋನಿಯಾ ಪ್ರಧಾನಿಯಾದರೆ ತಾನು ತಲೆಬೋಳಿಸಿಕೊಳ್ಳುವುದಾಗಿ ನೀಡಿದ ಹೇಳಿಕೆ, ಅದರ ಬೆನ್ನಲ್ಲೆ ಎದ್ದ ವಿವಾದದಿಂದ ಸೋನಿಯಾ ಪ್ರಧಾನಿ ಸ್ಥಾನ ಅಲಂಕರಿಸಲು ಹಿಂದೆ ಸರಿದರು. ಅಂದು ಸೋನಿಯಾ ವಿರುದ್ಧ ಬಹಿರಂಗವಾಗಿ ಕಾಣಿಸಿಕೊಂಡ ಬಿಜೆಪಿ ಮತ್ತು ಸಂಘಪರಿವಾರದ ವಿರೋಧ ಮನುವಾದದಲ್ಲಿ ನಂಬಿಕೆ ಇಟ್ಟವರ ಮೆದುಳು ಹೊಕ್ಕಿತು. ಸೋನಿಯಾ ಪ್ರಧಾನಿ ಸ್ಥಾನ ಅಲಂಕರಿಸಲು ಹಿಂದೇಟು ಹಾಕಿದ ಮೇಲೆ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಸ್ಥಾನಕ್ಕೆ ಅಚ್ಚರಿಯ ಆಯ್ಕೆಯಾದರು. ಆದರೆ ಮನಮೋಹನ್ ಸಿಂಗ್ ಪ್ರಧಾನಿಯಾದರೂ ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷೆಯಾಗಿ ತೆರೆಮರೆಯಲ್ಲಿ ಕೇಂದ್ರ ಸರ್ಕಾರದ ಆಡಳಿತವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ಮಾತು ಜನಜನಿತವಾದದ್ದು ನೆಹರೂ ಮತ್ತು ಸೋನಿಯಾ ಅವರನ್ನು ಅವರ ಕೌಟುಂಬಿಕ ವ್ಯವಸ್ಥೆಯನ್ನು ಹೀಗಳೆಯುವ ಮನಃಸ್ಥಿತಿ ವಿಶೇಷವಾಗಿ ಸನಾತನವಾದಿ ಯುವ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿತು.
ಈ ಬೆಳವಣಿಗೆಯಿಂದಾಗಿ ಕಾಕತಾಳೀಯ ಎನ್ನುವಂತೆ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ವರ್ಚಸ್ಸು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಮುಂದೆ ಮಂಕಾಯಿತು. ಗುಜರಾತ್‌ನಲ್ಲಿ 2002ರಲ್ಲಿ ನಡೆದ ಹಿಂಸಾಚಾರವೇ ಮೋದಿ ಅವರ ರಾಜಕೀಯ ಬಲವನ್ನು ಹೆಚ್ಚಿಸಿತು. ಬಿಜೆಪಿಯ ಪರವಾಗಿ ಮೋದಿ ಅವರು ಮನಮೋಹನ್ ಸಿಂಗ್ ಅವರ ಆಡಳಿತ ವೈಖರಿಯನ್ನು ಮುಖಾಮುಖಿಯಾಗಿ ಟೀಕಿಸುವುದಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಬೆನ್ನೆಲುಬಾಗಿ ನಿಂತಿತು. ಅಂದು ಶುರುವಾದ ಈ ರಾಜಕೀಯ ದ್ವೇಷ ಈಗ ಹೆಮ್ಮರವಾಗಿ ಇಡೀ ದೇಶವನ್ನೇ ಆಕ್ರಮಿಸಿಕೊಂಡಿರುವುದರ ಫಲವನ್ನು ನಾವೀಗ ಕಾಣುತ್ತಿದ್ದೇವೆ.
ಈ ದ್ವೇಷ ಈಗ ನಮ್ಮ ಸಂವಿಧಾನ ಆಧಾರಿತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆದರಿಕೆವೊಡ್ಡುವಂತೆ ಗೋಚರಿಸಿರುವುದು ಅಪಾಯದ ದಿನಗಳು ಇನ್ನೂ ಮುಂದಿವೆ ಎನ್ನುವ ಸೂಚನೆ ಎನ್ನುವುದು ಹಲವು ರಾಜಕೀಯ ಮತ್ತು ಸಾಮಾಜಿಕ ತಜ್ಞರ ಅಭಿಮತ. ಈ ಎಲ್ಲ ಬೆಳವಣಿಗೆಗೂ ಕಾಲವೇ ಉತ್ತರ ನೀಡಬೇಕಿದೆ.
ಮೈಸೂರು: ಮೈಸೂರು ನಗರದ ಸಿಸಿಬಿ ಪೊಲೀಸರು ಇಂದು ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.…
ಮಂಡ್ಯ: ಮಕ್ಕಳು ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ರಾಜ್ಯ…
ಮೈಸೂರು: ಶಾಸಕರ ವಿದೇಶಿ ಪ್ರವಾಸಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.…
ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ ತನಿಖೆಯನ್ನು ಪೂರ್ಣಗೊಳಿಸಿ ವರದಿ…
ಬೆಂಗಳೂರು: ನಿಮಗೆಲ್ಲಾ ಡಿಬಾಸ್, ಆ ಡಿಬಾಸ್ ನನಗೆ ಮಗ ನೆನಪಿಟ್ಟುಕೊಳ್ಳಿ. ಇನ್ನೆರಡು ತಿಂಗಳಲ್ಲಿ ದರ್ಶನ್ ಹೊರಬರುತ್ತಾರೆ ಎಂದು ನಟ ರವಿಚಂದ್ರನ್…
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರದ ಜಾಹೀರಾತು ನೀಡಿದ ಪ್ರಕರಣದಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕ…