ಅಂಕಣಗಳು

ಚಿತ್ರನಗರಿಗೆ ಹಸಿರು ನಿಶಾನೆ; ಉದ್ಯಮಕ್ಕೆ ಬೇಕು ಕಾಯಕಲ್ಪ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ 

ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಿಂದ ಯೋಜನೆ ಆರಂಭಕ್ಕೆ ಅನುಮತಿ

ಸರಿಯಾಗಿ ೫೪ ವರ್ಷಗಳ ನಂತರ ಇದೀಗ ರಾಜ್ಯದಲ್ಲಿ ಚಿತ್ರನಗರಿ ಸ್ಥಾಪನೆಗೆ ಹಸಿರು ನಿಶಾನೆ ಸಿಕ್ಕಿದೆ. ಕಳೆದ ವಾರ ನಡೆದ ಸಚಿವ ಪುಟದ ಸಭೆ ಇದಕ್ಕೆ ಅನುಮೋದನೆ ನೀಡಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಚಿತ್ರನಗರಿ ಯೋಜನೆ ೧೬೦ ಎಕರೆ ೮ ಗುಂಟೆ ಜಮೀನಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜಾರಿಯಾಗಲಿದೆ. ಚಲನಚಿತ್ರ ನಿರ್ಮಾಣ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಇರುವ ಈ ಯೋಜನೆಗೆ ೭೨೯.೪೩ ಕೋಟಿರೂ. ವೆಚ್ಚವಾಗಲಿದೆ.

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವ ಯೋಜನೆಗೆ ನಾಂದಿ ಹಾಡಿ, ಅಲ್ಲಿ ೧೧೦ ಎಕರೆ ಜಮೀನನ್ನು ಇದಕ್ಕಾಗಿ ಕಾಯ್ದಿರಿಸುವಂತೆ ಸೂಚಿಸಿದ್ದರು. ಹಿಂದಿನ ಮುಂಗಡ ಪತ್ರದಲ್ಲಿ ಇದಕ್ಕಾಗಿ ೫೦೦ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು. ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟ ಆ ಯೋಜನೆಯನ್ನು ಆರಂಭಿಸಲು ಅನುಮತಿ ನೀಡಿದೆ.

ಈ ಚಿತ್ರನಗರಿ ಯೋಜನೆಗೆ ಅದರದೇ ಆದ ಇತಿಹಾಸ ಇದೆ. ೧೯೬೬-೬೭ರಲ್ಲಿ, ೬೦ ವರ್ಷಗಳ ಹಿಂದೆ, ಕನ್ನಡ ಚಿತ್ರಗಳಿಗೆ ಸಹಾಯಧನ ಮತ್ತು ಪ್ರಶಸ್ತಿ ನೀಡುವ ಸಂಪ್ರದಾಯ ಆರಂಭವಾಯಿತು. ಮದರಾಸಿನಲ್ಲಿ ನೆಲೆಯಾಗಿದ್ದ ಕನ್ನಡ ಚಿತ್ರೋದ್ಯಮವನ್ನು ರಾಜ್ಯಕ್ಕೆ ತರುವುದು ಅದರ ಮೂಲ ಉದೇಶವಾಗಿತ್ತು. ಪತ್ರಿಕೆಗಳು ಈ ಕುರಿತು ಒತ್ತಾಯಿಸುತ್ತಲೇ ಇದ್ದವು. ೧೯೬೬ರ ಏಪ್ರಿಲ್ ತಿಂಗಳಲ್ಲಿ ಪ್ರೀಮಿಯರ್ ಸ್ಟುಡಿಯೊ ಮಾಲೀಕರಾದ ಬಸವರಾಜಯ್ಯನವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಮನರಂಜನಾ ತೆರಿಗೆಯಿಂದ ಬರುವ ಹಣದ ಅರ್ಧ ಭಾಗವನ್ನು ಕನ್ನಡ ಚಿತ್ರಗಳಿಗೆ ಸಹಾಯಧನ ರೂಪದಲ್ಲಿ ಕೊಡಬೇಕೆಂದು ಒತ್ತಾಯಿಸಿದರು. ಮಾತ್ರವಲ್ಲ, ಅದರಿಂದ ಆಗಬಹುದಾದ ಅನುಕೂಲಗಳ ಬಗ್ಗೆ ವಿವರಿಸಿದರು.

ಆಗ ರಾಜ್ಯದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ. ರಾಮಕೃಷ್ಣ ಹೆಗಡೆ ಅರ್ಥ ಸಚಿವ. ವಾರ್ತಾ ಮಂತ್ರಿ ಎಂ.ರಾಜಶೇಖರಮೂರ್ತಿ. ಈ ಮೂವರಿಗೂ ಚಲನಚಿತ್ರ ಮಾಧ್ಯಮ ಮತ್ತು ಉದ್ಯಮ ಎರಡರ ಕುರಿತು ವಿಶೇಷವಾದ ಆಸಕ್ತಿಯಿದ್ದುದರಿಂದ ಅವರ ಮೇಲ್ವಿಚಾರಣೆಯಲ್ಲಿ ಕನ್ನಡ ಚಿತ್ರರಂಗದ ಶ್ರೇಯಸ್ಸು ತುಂಬಾ ಸುಲಭವೆಂಬ ವಾತಾವರಣವೂ ನಿರ್ಮಾಣವಾಯಿತು ಎಂದು ಚಲನಚಿತ್ರ ಇತಿಹಾಸ ದಾಖಲಿಸಿದೆ.

ನಂತರ ೧೯೬೮ರಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮ ಸ್ಥಾಪನೆಯಾಯಿತು. ಆಗ ವಾರ್ತಾ ಸಚಿವರಾಗಿದ್ದ ದೇವರಾಜ ಅರಸು ಅಧ್ಯಕ್ಷತೆಯಲ್ಲಿ ಸ್ಥಾಪನೆಯಾದ ಈ ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಚಲನಚಿತ್ರ ವಿಭಾಗದ ವಿಶೇಷಾಧಿಕಾರಿ ಶಾಂತೇಶ ಪಾಟೀಲರು ನೇಮಕವಾದರು. ಪ್ರಥಮ ನಿರ್ದೇಶಕರ ಮಂಡಳಿಗೆ ಚಿತ್ರರಂಗದಲ್ಲಿ ಖ್ಯಾತರಾದ ವಿ.ಶಾಂತಾರಾಂ , ಎಲ. ವಿ.ಪ್ರಸಾದ್ ಮತ್ತು ಸ್ಥಳೀಯ ಚಿತ್ರೋದ್ಯಮದ ಪ್ರತಿನಿಧಿಗಳಾಗಿ ಬಿ.ಸರೋಜದೇವಿ, ಕೃಷ್ಣಕಾಂತ್ ದೇಸಾಯಿ, ಎಂ.ವಿ.ಕೃಷ್ಣಸ್ವಾಮಿ ಹಾಗೂ ಕೆ.ವೆಂಕಟಸ್ವಾಮಿ ನಾಮ ನಿರ್ದೇಶಿತರಾದರು.

ಆಗಲೇ ಚಿತ್ರನಗರಿಗಾಗಿ ಬೆಂಗಳೂರು ಹೊರವಲಯದ ಹೆಸರಘಟ್ಟದಲ್ಲಿ ೩೪೭ ಎಕರೆ ೧೨ ಗುಂಟೆ ಜಮೀನನ್ನು ನಿಗಮಕ್ಕೆ ೯೯ ವರ್ಷ ಗುತ್ತಿಗೆ ಆಧಾರದಲ್ಲಿ ನೀಡಲಾಯಿತು. ೧೯೭೨ರ ಮಾರ್ಚ್ ತಿಂಗಳಲ್ಲಿ ಅಲ್ಲಿ ಚಿತ್ರನಗರಿಗಾಗಿ ಶಂಕುಸ್ಥಾಪನೆಯೂ ಆಯಿತು. ಮೂರು ಹಂತಗಳಲ್ಲಿ ಚಿತ್ರನಗರಿ ಸ್ಥಾಪಿಸುವ ಯೋಜನೆಯ ಜೊತೆಯ ೧೫೦ ಜನತಾ ಚಿತ್ರಮಂದಿರಗಳ ನಿರ್ಮಾಣವೂ ಪ್ರಕಟವಾಯಿತು.

ಉತ್ತರ ಕರ್ನಾಟಕದಲ್ಲಿ ಕೆಲವು ಚಿತ್ರಮಂದಿರಗಳ ನಿರ್ಮಾಣವೂ ಆಯಿತು. ಚಿತ್ರನಗರಿ ಯೋಜನೆ ಕಡತದ ಉಳಿಯಿತು. ಮುಂದೆ ಬಂದ ಮುಖ್ಯಮಂತ್ರಿಗಳ ಪೈಕಿ ಕುಮಾರ ಸ್ವಾಮಿ ಅವರು ರಾಮನಗರದಲ್ಲಿ ಚಿತ್ರನಗರಿ ಸ್ಥಾಪನೆಯ ಜೊತೆಗೆ ಅಲ್ಲಿ ಒಂದು ಚಲನಚಿತ್ರ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವುದಾಗಿಯೂ ಪ್ರಕಟಿಸಿದರು. ಇದಕ್ಕಾಗಿ ೨೦೨೦-೨೧ರ ಕ್ರಿಯಾ ಯೋಜನೆಯಲ್ಲಿ ಒಂದು ಕೋಟಿ ರೂ.ಗಳನ್ನೂ ಕೋರಲಾಗಿತ್ತು. ರಾಮನಗರ ಮತ್ತು ಮೈಸೂರು ಎರಡೂ ಕಡೆ ಚಿತ್ರನಗರಿ ಸ್ಥಾಪನೆಯ ಮಾತೂ ವೇದಿಕೆಯಲ್ಲಿ ಕೇಳಿಬಂತು. ಈ ನಡುವೆ ದೇವಿಕಾ ರಾಣಿ ಎಸ್ಟೇಟಿನಲ್ಲಿ ಚಿತ್ರನಗರಿ ಸ್ಥಾಪನೆ ಎಂದೂ ಕೇಳಿ ಬಂತು.

ಚಲನಚಿತ್ರ ಸೆಲ್ಯುಲಾಯ್ಡಿನಿಂದ ಡಿಜಿಟಲ್‌ಗೆ ಹೊರಳಿದೆ. ಕೃತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಕಬಂಧ ಬಾಹುವನ್ನು ಚಾಚುತ್ತಿದೆ. ಈ ದಿನಗಳಲ್ಲಿ ಚಿತ್ರನಗರಿಯ ಯೋಚನೆ ಮತ್ತು ಯೋಜನೆ ಅದಕ್ಕೆ ಪೂರಕವಾಗಿರಬೇಕು. ಸಚಿವ ಸಂಪುಟ ಚಿತ್ರನಗರಿಗೆ ಒಪ್ಪಿಗೆ ನೀಡುವ ಮೊದಲು ಈ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ ಎನ್ನುತ್ತಿವೆ ಮೂಲಗಳು. ಅತ್ಯಾಧುನಿಕ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರ ತರಬೇತಿ ಕೇಂದ್ರದ ಅಗತ್ಯ ರಾಜ್ಯಕ್ಕಿದೆ. ಮೂಲಗಳ ಪ್ರಕಾರ ಚಿತ್ರನಗರಿಯ ಯೋಜನೆಯಲ್ಲಿ ಅದನ್ನು ಅಳವಡಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಶಾಲೆ ಮತ್ತು ಮತ್ತು ಸಂಶೋಧನಾ ಕೇಂದ್ರದ ಸ್ಥಾಪನೆಗೆ ಅತ್ಯಂತ ಪ್ರಮುಖ ಆದ್ಯತೆ ನೀಡಲಾಗಿದೆ. ಚಿತ್ರನಗರಿ ಕೇವಲ ಚಿತ್ರೀಕರಣ ತಾಣ ಒದಗಿಸುವುದಷ್ಟೇ ಅಲ್ಲದೆ, ಜಾಗತಿಕ ಮಟ್ಟದ ನುರಿತ ತಂತ್ರಜ್ಞರು ಮತ್ತು ಪ್ರತಿಭೆಗಳನ್ನು ಕರ್ನಾಟಕದ ಸೃಷ್ಟಿಸುವ ಉದ್ದೇಶವನ್ನೂ ಹೊಂದಿದೆ. ಕೇವಲ ಸಾಂಪ್ರದಾಯಿಕ ಶಿಕ್ಷಣ ಮಾತ್ರವಲ್ಲದೆ, ಇಂದಿನ ಒಟಿಟಿ ಮತ್ತು ಜಗತಿಕ ಸಿನಿಮಾಗಳಿಗೆ ಬೇಕಾದ ಪ್ರಾಯೋಗಿಕ ತರಬೇತಿಗಳನ್ನೂ ನೀಡಲಾಗುತ್ತದೆ.

ಸಿನಿಮಾ ನಿರ್ದೇಶನ ಮತ್ತು ಚಿತ್ರಕಥೆ ರಚನೆ, ೮ಕೆ ಕ್ಯಾಮೆರಾ, ಐಮ್ಯಾಕ್ಸ್ ಶೈಲಿಯ ಚಿತ್ರೀಕರಣ ಮತ್ತು ಬೆಳಕಿನ ವಿನ್ಯಾಸದ ಬಳಕೆ ಸೇರಿದಂತೆ ಛಾಯಾಗ್ರಹಣ, ಧ್ವನಿ ತಂತ್ರ ಮತ್ತು ಧ್ವನಿಗ್ರಹಣ, ವಿಎಫ್ಎಕ್ಸ್ ಮತ್ತು ಅನಿಮೇಶನ್, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಿನಿಮಾ ಸಂಕಲನ ಮತ್ತು ಅತ್ಯಾಧುನಿಕ ಗ್ರಾಫಿಕ್ಸ ವಿನ್ಯಾಸ, ಅಭಿನಯ ತರಬೇತಿ ಹೀಗೆ ವಿವಿಧ ಕ್ಷೇತ್ರಗಳ ಆಸಕ್ತರಿಗೆ ಅಲ್ಲಿ ಶಿಕ್ಷಣ, ತರಬೇತಿ ಸಿಗಲಿದೆ. ಇಲ್ಲಿ ಕರ್ನಾಟಕದ ಪ್ರತಿಭೆಗಳಿಗೆ ಶೇಕಡಾ ೫೦ ರಷ್ಟು ಸೀಟುಗಳನ್ನು ಮೀಸಲಿಡಲು ಸರ್ಕಾರ ನೀತಿ ರೂಪಿಸಿದೆ. ಇದರಿಂದಾಗಿ ರಾಜ್ಯದ ಗ್ರಾಮೀಣ ಹಾಗೂ ನಗರ ಭಾಗದ ಬಡ ಮತ್ತು ಮಧ್ಯಮ ವರ್ಗದ ಯುವಕ ಯುವತಿಯರಿಗೆ ಅತ್ಯಾಧುನಿಕ ಸಿನಿಮಾ ತಂತ್ರeನವನ್ನು ರಿಯಾಯಿತಿ ದರದಲ್ಲಿ ಕಲಿಯಲು ಸುವರ್ಣಾವಕಾಶ ಸಿಗಲಿದೆ. ಚಿತ್ರನಗರಿ ಯೋಜನೆಯ ಬೆನ್ನ ಮೊನ್ನೆ ಕನ್ನಡ ತಾರೆಯರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿಗಳು ತಾವೇ ತಾರೆಯರನ್ನು ಆಹ್ವಾನಿಸಿದ್ದರು. ತಮ್ಮ ಆಡಳಿತಾವಧಿಯ ಹೆಜ್ಜೆಗುರುತು ಮೂಡಿಸಬೇಕು ಎನ್ನುವುದನ್ನು ಅವರು ಆಗಾಗ ಹೇಳುವುದಿದೆ. ಇಚ್ಛಾಶಕ್ತಿ ಇದ್ದರೆ ಚಿತ್ರರಂಗಕ್ಕೆ ಕಾಯಕಲ್ಪವಾಗಿ ಹೆಜ್ಜೆಗುರುತು ಮೂಡಿಸುವುದು ಸಾಧ್ಯ. ೨೦೧೧ರ ಮಾರ್ಚ್ ತಿಂಗಳಲ್ಲಿ ಐದು ವರ್ಷಗಳ ಅವಧಿಗೆ ಬಂದ ರಾಜ್ಯ ಚಲನಚಿತ್ರ ನೀತಿ ಬದಲಾಗಿಲ್ಲ. ಅದು ಸಮಗ್ರ ಚಲನಚಿತ್ರ ನೀತಿ ಆಗಿರಲಿಲ್ಲ. ಪ್ರಶಸ್ತಿ, ಸಹಾಯಧನ ಮತ್ತು ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ, ಅನಿವಾರ್ಯವಾಗಿ ಬಂದ ನೀತಿಯಾಗಿತ್ತು ಅದು ಎನ್ನಲಾಗಿದೆ.

ಕರ್ನಾಟಕ ಹೊರತುಪಡಿಸಿದರೆ, ದೇಶದ ಇತರ ಬಹುತೇಕ ರಾಜ್ಯಗಳಲ್ಲಿ ಚಲನಚಿತ್ರ ನೀತಿ ಇದೆ. ಮಾಧ್ಯಮ ಮತ್ತು ಉದ್ಯಮಗಳಗೆ ಪೂರಕವಾದ ನೆರವಿನ ಪ್ರಸ್ತಾಪವಿದೆ. ಈಗಾಗಲೇ ನಮ್ಮಲ್ಲಿ ಎವಿಜಿಸಿ- ಎಕ್ಸ್‌ಆರ್ ನೀತಿ, ಚಲನಚಿತ್ರ ಪ್ರವಾಸೋದ್ಯಮ ನೀತಿ ಇದೆ. ರಾಜದ್ಯಂತ ಶಾಲೆ, ಕಾಲೇಜುಗಳಲ್ಲಿ ಚಲನಚಿತ್ರ ಶಿಕ್ಷಣ, ಸಂಶೋಧನೆ ಮತ್ತು ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಚಿತ್ರಮಂದಿರಗಳ ಆಧುನೀಕರಣ ಮತ್ತು ಗ್ರಾಮೀಣ ಪ್ರದರ್ಶನ ವ್ಯವಸ್ಥೆ, ಸಹಾಯಧನ, ಪ್ರೋತ್ಸಾಹ ಧನ, ಹಣಕಾಸಿನ ನೆರವು, ಕನ್ನಡ ಚಿತ್ರಗಳಿಗೆ ಜಗತಿಕ ಮಾರುಕಟ್ಟೆ ಮತ್ತು ಒಟಿಟಿ ನೀತಿ, ಚಲನಚಿತ್ರ ಪ್ರಾಚ್ಯಾಗಾರ, ಕಾರ್ಮಿಕ ಕಲ್ಯಾಣ, ವಿಮೆ ಮತ್ತು ಪಿಂಚಣಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ನೀತಿಯೇ ಮೊದಲಾಗಿ ಎಲ್ಲವನ್ನೂ ಒಂದು ಚಾವಣಿಯಡಿಯಲ್ಲಿ ತರಲು ಸಾಧ್ಯವಾದರೆ ಚೆನ್ನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಚಲನಚಿತ್ರ ಘಟಕ ಇದೆ. ಚಲನಚಿತ್ರ ಅಕಾಡೆಮಿ ಇದೆ ನಿಜ. ಕೆಲವು ರಾಜ್ಯಗಳಲ್ಲಿ ಸಂಸ್ಕೃತಿ ಮತ್ತು ಸಿನಿಮಾಕ್ಕೆ ಪ್ರತ್ಯೇಕ ಸಚಿವಾಲಯ ಇದ್ದಂತಿದೆ. ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮ ಮೊದಲು ಸ್ಥಾಪಿಸಿದ್ದು ಕರ್ನಾಟಕ. ಉಳಿದ ರಾಜ್ಯಗಳು ಅದನ್ನು ಸ್ಥಾಪಿಸಲು ತೊಡಗಿದಾಗ ಕರ್ನಾಟಕ ಅದನ್ನು ಮುಚ್ಚಿತ್ತು. ಅಭಿವೃದ್ಧಿ ನಿಗಮವಾಗಲಿ, ಚಲನಚಿತ್ರ ಪ್ರಾಧಿಕಾರ ಎಂದಾಗಲಿ ಸರ್ಕಾರದ ಸಂಸ್ಥೆ ಸ್ಥಾಪಿಸಿ, ಅದರ ಅಡಿಯಲ್ಲಿ ಈ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವೇ? ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸುವದೇ ಆದರೆ, ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಒಡಿಶಾ, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ಕಾಶ್ಮೀರ ಸೇರಿದಂತೆ ಇತರ ರಾಜ್ಯಗಳ ಚಲನಚಿತ್ರ ನೀತಿಗಳನ್ನು, ೧೯೮೦ರಲ್ಲಿ ಕೋಟ ಶಿವರಾಮ ಕಾರಂತರ ಸಮಿತಿ ಕೇಂದ್ರಕ್ಕೆ ಸಲ್ಲಿಸಿದ ವರದಿ, ಇತರ ಚಲನಚಿತ್ರ ಸಂಬಂಧಿತ ಕಡತಗಳನ್ನು ಗಮನಿಸಬಹುದು. ಹಿಂದೆ ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಕಾರ್ಯದರ್ಶಿಗಳಾಗಿದ್ದ ಡಾ. ಸಿ.ಎಸ್.ಕೇದಾರ್ ಅವರು ಹೇಳಿದ ಮಾತು ಈ ಸಂದರ್ಭದಲ್ಲಿ ನೆನಪಾಗುತ್ತಿದೆ: ೮೦ರ ದಶಕದಲ್ಲಿ ನಿಮಗೆ ಮಾಹಿತಿ ತಂತ್ರeನದ ಬಗ್ಗೆ ತಿಳಿದಿತ್ತೇ? ಈಗ ವಿಶ್ವವೇ ಇತ್ತ ನೋಡುವಂತಾಗಿದೆ. ಚಿತ್ರೋದ್ಯಮಕ್ಕೆ ಪೂರಕ ಸೌಲಭ್ಯ ಒದಗಿಸಿದರೆ, ಕರ್ನಾಟಕವನ್ನು ಭಾರತದ ಚಲನಚಿತ್ರೋದ್ಯಮ ಕೇಂದ್ರವಾಗಿ ಮಾಡಬಹುದು. ಅದಕ್ಕೆ ಬೇಕಾಗಿರುವುದು ಇಚ್ಛಾಶಕ್ತಿ.

” ಅತ್ಯಾಧುನಿಕ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರ ತರಬೇತಿ ಕೇಂದ್ರದ ಅಗತ್ಯ ರಾಜ್ಯಕ್ಕಿದೆ. ಮೂಲಗಳ ಪ್ರಕಾರ ಚಿತ್ರನಗರಿಯ ಯೋಜನೆಯಲ್ಲಿ ಅದನ್ನು ಅಳವಡಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಶಾಲೆ ಮತ್ತು ಮತ್ತು ಸಂಶೋಧನಾ ಕೇಂದ್ರದ ಸ್ಥಾಪನೆಗೆ ಅತ್ಯಂತ ಪ್ರಮುಖ ಆದ್ಯತೆ ನೀಡಲಾಗಿದೆ.”

 

 

ಆಂದೋಲನ ಡೆಸ್ಕ್

Recent Posts

ಬ್ರಿಕ್ಸ್‌ ಸಭೆಗಾಗಿ ಭಾರತಕ್ಕೆ ಬರಲಿದ್ದಾರೆ ಇರಾನ್‌ ಸಂಸತ್‌ ಸ್ಪೀಕರ್‌ ಘಾಲಿಬಾಫ್‌

ನವದೆಹಲಿ: ಇರಾನ್‌ ಸಂಸತ್‌ ಸ್ಪೀಕರ್‌ ಮೊಹಮ್ಮದ್‌ ಬಾಘೇರ್‌ ಘಾಲಿಬಾಫ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್‌ 26 ಮತ್ತು 27ರಂದು…

15 mins ago

ಶೇ.70ರಷ್ಟು ಅಂತರ್ಜಲ ಬಳಕೆ: ಮತ್ತಷ್ಟು ಜಲಸಂಕಷ್ಟದ ಆತಂಕ!

ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲದ ಬಳಕೆ ಶೇಕಡಾ 70ರಷ್ಟಾಗಿದ್ದು, ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ಕುಡಿಯುವ ನೀರು, ಕೃಷಿ…

23 mins ago

ರಾಜ್ಯದಲ್ಲಿ ಚುರುಕುಗೊಂಡ ಹಿಂಗಾರು ಮಳೆ

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಚುರುಕುಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಮಳೆ ಮತ್ತೊಮ್ಮೆ ಮಹತ್ವ ಪಡೆದುಕೊಂಡಿದೆ. ಹಿಂಗಾರು ಬೆಳೆಗಳ ಬಿತ್ತನೆಗೆ ಸಿದ್ಧತೆ ನಡೆಸುತ್ತಿರುವ…

27 mins ago

ನೇಪಾಳ ಪ್ರವಾಹದ ನೆನಪು ಮಾಸುವ ಮುನ್ನವೇ ಟಿಬೆಟ್‌ನಲ್ಲಿ ಪ್ರಬಲ ಭೂಕಂಪ

ಲಾಸಾ: ನೇಪಾಳ–ಟಿಬೆಟ್ ಗಡಿಯಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ನೆನಪು ಮಾಸುವ ಮುನ್ನವೇ ಟಿಬೆಟ್‌ನಲ್ಲಿ ಮತ್ತೊಂದು ನೈಸರ್ಗಿಕ ವಿಕೋಪ ಸಂಭವಿಸಿದೆ. ಅಕ್ಟೋಬರ್…

30 mins ago

ಇಸ್ರೇಲ್ ಸ್ವಾತಂತ್ರ್ಯೋತ್ಸವದ ಜ್ಯೋತಿ ಬೆಳಗಿಸಲು ಮೋದಿ–ಸ್ಮಿತ್ ಮಚ್ಚಾರ್‌ಗೆ ನೆತನ್ಯಾಹು ಆಹ್ವಾನ!

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ…

34 mins ago

ಓದುಗರ ಪತ್ರ: ಸ್ವಾತಂತ್ರ್ಯ ಹೋರಾಟಗಾರರ ಪುತ್ತಳಿಗೆ ಕಟ್ಟಡ ಅಡ್ಡ ಬರಬಾರದು

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ತಗಡೂರು ಗಾಂಧಿ ಎಂದೇ ಕರೆಯಲ್ಪಟ್ಟ ಹಿರಿಯರಾದ ತಗಡೂರು ರಾಮಚಂದ್ರರಾಯರ ಗೌರವಾರ್ಥ ಮೈಸೂರು ನಗರದಲ್ಲಿ ಶ್ರೀಯುತರು ವಾಸವಾಗಿದ್ದ ಚಾಮುಂಡಿಪುರಂ…

37 mins ago