ಅಂಕಣಗಳು

ಗ್ರಾಮ ಸಭಾ ಕರಡು ನಿಯಮಗಳು: ಲೆಕ್ಕಕ್ಕುಂಟು ಆಟಕ್ಕಿಲ್ಲ

ವಿಲ್ಫ್ರೆಡ್‌ ಡಿಸೋಜ 

ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆಗಳನ್ನು ಕರೆಯುವ ಕುರಿತು ಕರಡು ನಿಯಮಾವಳಿಗಳನ್ನು ಸಿದ್ಧಪಡಿಸಿ ದಿನಾಂಕ ೩೦.೦೧.೨೦೨೫ ರಂದು ಕರ್ನಾಟಕ ರಾಜ್ಯಪತ್ರದ ಮೂಲಕ ಪ್ರಕಟಿಸಿದೆ. ಪ್ರಕಟಣೆಯ ನಂತರದ ೩೦ ದಿನಗಳ ಒಳಗೆ ಕರಡು ನಿಯಮಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಕರಡು ನಿಯಮಗಳ ಕುರಿತು ಈಗಾಗಲೇ ಸುದ್ದಿ ಮಾಧ್ಯಮಗಳಲ್ಲಿ ವಿಶೇಷ ವರದಿಗಳು ಪ್ರಕಟ ವಾಗಿವೆ. ಹಲವು ವ್ಯಕ್ತಿಗಳು ಮತ್ತು ಸಂಘಟನೆಗಳು ಈ ನಿಯಮಗಳು ಜಾರಿಗೆ ಬರುವುದರಿಂದ ರಾಜ್ಯದಲ್ಲಿ “ಗ್ರಾಮ ಸ್ವರಾಜ್ಯ”ದ ಕನಸು ನನಸಾಗಲಿದೆ ಎನ್ನುವ ಹೇಳಿಕೆಗಳನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಪಂಚಾಯತ್ ರಾಜ್ ಇತಿಹಾಸ ಮತ್ತು ಸಾಧನೆಯ ಏರಿಳಿತಗಳ ಕುರಿತು ವಸ್ತುನಿಷ್ಠವಾಗಿ ಅವಲೋಕನ ಮಾಡಿದರೆ ಇದು ಭ್ರಮೆ ಎನ್ನುವುದು ಅರ್ಥವಾಗುತ್ತದೆ. ಈ ಕರಡು ನಿಯಮಗಳು ಲೆಕ್ಕಕ್ಕುಂಟು, ಆದರೆ ಆಟಕ್ಕೆ ಇಲ್ಲ.

* ಕರಡು ನಿಯಮಗಳನ್ನು ರಚಿಸುವಾಗ ಗ್ರಾಮ ಸಭೆಗಳ ನಿರ್ವಹಣೆ ಕುರಿತು ಈ ವರೆಗಿನ ಕ್ಷೇತ್ರಾನುಭವವನ್ನು ಪರಿಗಣಿಸಿಲ್ಲ

* ೧೯೯೨ ರಲ್ಲಿ ಅನುಮೋದನೆಗೊಂಡ ಸಂವಿಧಾನದ   ೭೩ನೇ ತಿದ್ದುಪಡಿಯ ನಂತರದಲ್ಲಿ ರಾಜ್ಯದಲ್ಲಿ ಜಾರಿಗೆ ತರಲಾದ ಕೆಪಿಆರ್ ಕಾಯಿದೆ ೧೯೯೩ ರ ಮೂಲ ಅಂಶಗಳು ಮತ್ತು ಈ ಕಾಯಿದೆಯಲ್ಲಿ ಗ್ರಾಮ ಸಭೆಯ ಸಬಲೀಕರಣಕ್ಕೆ ಸಂಬಂಽಸಿದ ವಿಚಾರಗಳನ್ನು ಕುರಿತು ಕಾಲ ಕಾಲಕ್ಕೆ ತರಲಾದ ತಿದ್ದುಪಡಿಗಳ ಆಶಯಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡದೆ ಕರಡು ನಿಯಮಗಳನ್ನು ಸಿದ್ಧ ಪಡಿಸಲಾಗಿದೆ

* ಗ್ರಾಮ ಸ್ವರಾಜ್ ಘಟಕಗಳಾದ ಜನ ವಸತಿ ಸಭೆ, ವಾರ್ಡ್ ಸಭೆ ಮತ್ತು ಗ್ರಾಮ ಸಭಾದ ಸಭೆಗಳ ನಡುವೆ ಅಗತ್ಯವಾಗಿ ಇರಲೇಬೇಕಾದ ಸಮನ್ವಯದ ಕುರಿತು ಕರಡು ನಿಯಮಗಳಲ್ಲಿ ಮಾಹಿತಿಯನ್ನು ನೀಡಲಾಗಿಲ್ಲ. ಹೀಗಾಗಿ ಇದು ಅಪೂರ್ಣವಾಗಿದೆ

* ಕರಡು ನಿಯಮಗಳಲ್ಲಿ ಹೇಳಲಾಗಿರುವ ವಾರ್ಷಿಕ ೪ ಗ್ರಾಮ ಸಭೆಗಳು ಮತ್ತು ೪ ವಿಶೇಷ ಗ್ರಾಮ ಸಭೆಗಳ ನಿರ್ವಹಣೆಯನ್ನು ಕುರಿತು ಸ್ಪಷ್ಟವಾದ ವಿವರಗಳು ಇಲ್ಲ

* ವಾರ್ಷಿಕ ೮ ಗ್ರಾಮ ಸಭೆಗಳು, ಅದಕ್ಕಿಂ ಮುಂಚಿತವಾಗಿ ನಡೆಯಬೇಕಿರುವ ವಾರ್ಡ್ ಸಭೆಗಳು, ವಸತಿ ಸಭೆಗಳು, ೧೨ ಸಾಮಾನ್ಯ ಸಭೆಗಳು, ಸ್ಥಾಯಿ ಸಮಿತಿ ಸಭೆಗಳು, ಉಪ ಸಮಿತಿಗಳ ಸಭೆಗಳು, ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆ, ಗ್ರಾಮ ಪಂಚಾಯಿತಿ ಜಮಾಬಂದಿ ಇತ್ಯಾದಿ ಅನೇಕ ಸಭೆಗಳ ನಿರ್ವಹಣೆ, ಈ ಎಲ್ಲ ಸಭೆಗಳ ವಿವರಗಳನ್ನು ಗ್ರಾಮ ಪಂಚಾಯಿತಿಗಳ ಪೋರ್ಟಲ್‌ಗಳಲ್ಲಿ ಅಪ್‌ಡೇಟ್ ಮಾಡುವ ಕಾರ್ಯಗಳ ಒತ್ತಡದ ನಡುವೆ ಗ್ರಾಮ ಪಂಚಾಯಿತಿ ಆಡಳಿತವನ್ನು ಜನಸ್ನೇಹಿಯಾಗಿ ಸುಧಾರಿಸುವ ಕುರಿತು ಈ ನಿಯಮಗಳು ಮೌನವಾಗಿವೆ

* ಹೊಸದಾಗಿ ರಚಿಸಲು ಉದ್ಧೇಶಿಸಲಾಗಿರುವ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಗ್ರಾಮ ಸಭಾ ಸಮನ್ವಯ ಸಮಿತಿಗಳು ಈಗಾಗಲೇ ಶಾಶ್ವತವಾಗಿ ನಿದ್ರೆಯಲ್ಲಿರುವ ಅನೇಕ ಸಮಿತಿಗಳ ಸಾಲಿಗೆ ಸೇರುವ ಸಾಧ್ಯತೆಗಳೇ ಹೆಚ್ಚು

* ಗ್ರಾಮ ಸಭಾದ ಸಭೆಗಳು ನಿರ್ಧರಿಸುವ ಆದ್ಯತೆಗಳಿಗೆ ಅನುಗುಣವಾಗಿ ವಿವಿಧ ಇಲಾಖೆಗಳು ಮತ್ತು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಸರ್ಕಾರಗಳು ಅಭಿವೃದ್ಧಿ ಯೋಜನೆಯನ್ನು ರೂಪಿಸಿ ಅನುಷ್ಠಾನ ಮಾಡುವಲ್ಲಿ ತಾಲ್ಲೂಕು ಯೋಜನಾ ಸಮಿತಿ ಮತ್ತು ಜಿಲ್ಲಾ ಯೋಜನಾ ಸಮಿತಿಗಳ(ಈPಇ) ಹೊಣೆಗಾರಿಕೆಯನ್ನು ಕುರಿತು ಕರಡು ನಿಯಮಗಳಲ್ಲಿ ಯಾವುದೇ ಉಲ್ಲೇಖ ಇಲ್ಲ

ಮೇಲಿನ ಅಂಶಗಳನ್ನು ಈ ಕೆಳಗಿನ ಮಾಹಿತಿಗಳು ಪುಷ್ಟೀಕರಿಸುತ್ತವೆ

* ಗ್ರಾಮ ಸಭೆಯ ವ್ಯಾಪ್ತಿ

ಕೆಪಿಆರ್ ಕಾಯಿದೆಗೆ ೨೦೧೫ ರಲ್ಲಿ ತರಲಾದ ತಿದ್ದುಪಡಿಗೆ ಮುಂಚಿತವಾಗಿ ‘ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ೧ ಗ್ರಾಮ ಸಭೆ’ ಎನ್ನುವ ನಿಯಮ ಇತ್ತು. ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್ ಸಭೆಗಳ ನಂತರ ಒಂದು ಗ್ರಾಮ ಸಭೆ ಮಾಡಬೇಕಿತ್ತು. ತಿದ್ದುಪಡಿಯ ನಂತರ ಕಂದಾಯ ಗ್ರಾಮಕ್ಕೊಂದು ಗ್ರಾಮ ಸಭೆ ಎನ್ನುವ ನಿಯಮ ಜಾರಿಗೆ ಬಂತು. ಅಂದರೆ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಕಂದಾಯ ಗ್ರಾಮಗಳ ಸಂಖ್ಯೆ ಯಷ್ಟು ಗ್ರಾಮ ಸಭೆಗಳು. ಕರ್ನಾಟಕದಲ್ಲಿ ೧ಕ್ಕಿಂತಲೂ ಹೆಚ್ಚು ಕಂದಾಯ ಗ್ರಾಮಗಳಿರುವ ಗ್ರಾಮ ಪಂಚಾಯಿತಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೫ ಕಂದಾಯ ಗ್ರಾಮಗಳಿದ್ದರೆ ಆ ಗ್ರಾಮ ಪಂಚಾಯಿತಿಗಳಲ್ಲಿ ಒಂದು ಬಾರಿಗೆ ೫ ಗ್ರಾಮ ಸಭೆಗಳಂತೆ ವರ್ಷದಲ್ಲಿ ೨೦ ಗ್ರಾಮ ಸಭೆಗಳು ನಡೆಯಬೇಕು! ಜೊತೆಗೆ ೧೬ ವಿಶೇಷ ಗ್ರಾಮ ಸಭೆಗಳು ನಡೆಯಬೇಕು! ಇಷ್ಟು ಗ್ರಾಮ ಸಭೆಗಳಲ್ಲಿ ಬರುವ ಜನರ ಬೇಡಿಕೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರೋಡೀಕ ರಿಸಿ ಆದ್ಯತೆ ನಿರ್ಧರಿಸುವ ವೇದಿಕೆ ಯಾವುದು? ಈ ಗೊಂದಲಗಳಿಗೆ ನಿಯಮಗಳನ್ನು ರೂಪಿಸುವಾಗ ಪರಿಹಾರವನ್ನು ನೀಡುವ ಪ್ರಯತ್ನ ಆಗಿಲ್ಲ. ಇನ್ನು ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಕಂದಾಯ ಗ್ರಾಮದಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ಪಕ್ಕದ ಕಂದಾಯ ಗ್ರಾಮವನ್ನು ಸೇರಿಸಿಕೊಂಡು ಗ್ರಾಮ ಸಭೆ ಕರೆಯಬೇಕು ಎನ್ನುವ ಹೊಸ ನಿಯಮ ಈಗ ಇರುವ ಗೊಂದಲಗಳಿಗೆ ಹೆಚ್ಚುವರಿ ಸೇರ್ಪಡೆಯಾಗಿದೆ

* ವಿಶೇಷ ಗ್ರಾಮಸಭೆಗಳು

ವಿಶೇಷ ಗ್ರಾಮ ಸಭೆಗಳಾದ ಮಹಿಳಾ ಗ್ರಾಮ ಸಭೆ, ಮಕ್ಕಳ ಗ್ರಾಮ ಸಭೆ, ಅನುಸೂಚಿತ ಜಾತಿ ಮತ್ತು ಪಂಗಡಗಳ ಗ್ರಾಮ ಸಭೆ, ವಿಶೇಷ ಚೇತನರು ಮತ್ತು ವಿವಿಧ ಹಿಂದುಳಿದ ವರ್ಗಗಳ ಗ್ರಾಮ ಸಭೆಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸಿ ನಡೆಸಬೇಕು. ಇಲ್ಲಿ ಚರ್ಚಿಸಿದ ನಿರ್ಣಯಗಳನ್ನು ಯಥಾವತ್ತಾಗಿ ಇಲಾಖೆಗಳು ಕಾರ್ಯಗತಗೊಳಿಸತಕ್ಕದ್ದು ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ ‘ಯಥಾವತ್ತಾಗಿ’ ಎನ್ನುವ ಪದದ ವಿವರಣೆ ನೀಡಿಲ್ಲ. ಅಲ್ಲದೆ ಈ ವಿಶೇಷ ಗ್ರಾಮ ಸಭೆಗಳ ಬೇಡಿಕೆಗಳನ್ನು ಗ್ರಾಮ ಪಂಚಾಯಿತಿಯ ಕ್ರಿಯಾಯೋಜನೆಯಲ್ಲಿ ಸಮನ್ವಯಗೊಳಿಸುವ ಕುರಿತು ಸ್ಪಷ್ಟನೆ ಇಲ್ಲ.

* ಗ್ರಾಮ ಸಭೆಯ ನೋಟಿಸ್

ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೮ ವರ್ಷಕ್ಕೆ ಮೇಲ್ಪಟ್ಟ ಮತದಾರರು ಗ್ರಾಮ ಸಭೆಯ ಸದಸ್ಯರು ಎನ್ನುವುದನ್ನು ಕಾಯಿದೆ ಸ್ಪಷ್ಟ ಪಡಿಸಿದೆ.  ‘ಗ್ರಾಮ ಸಭೆಯ ಸೂಚನಾ ಪತ್ರ (Notice))ವನ್ನು ಮನೆ ಮನೆಗೂ ತಲುಪಿಸುವುದು ಹಾಗೂ ಸಹಿ ಪಡೆಯತಕ್ಕದ್ದು’ ಎಂದು ಕರಡು ನಿಯಮ ಹೇಳುತ್ತದೆ. ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ೫ರಿಂದ ೧೫ ಸಾವಿರ ಮತದಾರರಿದ್ದಾರೆ. ಅಷ್ಟು ಜನರಿಗೆ ಮನೆ ಮನೆಗೆ ಗ್ರಾಮ ಸಭೆಯ ನೋಟಿಸ್ ತಲುಪಿಸಿ ಸಹಿ ಪಡೆಯುವ ಜವಾಬ್ಧಾರಿ ಯಾರದು? ಈ ಹೊಣೆಯನ್ನು ನಿಭಾಯಿಸದೆ ಇದ್ದಲ್ಲಿ ಮುಂದಿನ ಕ್ರಮ ಏನು ಎನ್ನುವ ಕುರಿತು ಕರಡು ನಿಯಮ ಏನನ್ನೂ ಹೇಳುವುದಿಲ್ಲ.

* ಸಭೆಗಳನ್ನು ಕರೆಯುವ ಹೊಣೆಗಾರಿಕೆ: 

ವಾರ್ಡ್ ಮತ್ತು ಗ್ರಾಮ ಸಭೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಕಾಯಿದೆಯು ಕ್ರಮವಾಗಿ ಆಯಾ ವಾರ್ಡ್‌ಗಳ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ನಿಗದಿಪಡಿಸಿದೆ. ಒಂದು ವೇಳೆ ನಿಯಮಾನುಸಾರ ವಾರ್ಡ್ ಸಭೆಗಳನ್ನು ಕರೆಯಲು ಸದಸ್ಯರು ವಿಫಲರಾದರೆ ಮತ್ತು ಗ್ರಾಮ ಸಭೆಯನ್ನು ಕರೆಯಲು ಅಧ್ಯಕ್ಷರು ವಿಫಲರಾದರೆ ಅವರು ಮುಂದಿನ ಸಭೆಯಲ್ಲಿ ಅದಕ್ಕೆ ಅವರು ಸ್ಪಷ್ಟೀಕರಣ ನೀಡುವುದಲ್ಲದೆ, ನಿಗದಿಪಡಿಸಿದ ದಂಡದ ಮೊತ್ತವನ್ನು ಗ್ರಾಮ ಪಂಚಾಯಿತಿ ನಿದಿಗೆ ಪಾವತಿಸಬೇಕು ಎಂದು ಕಾಯಿದೆ ಹೇಳುತ್ತದೆ.ಆದರೆ ಕರಡು ನಿಯಮಗಳನ್ನು ರೂಪಿಸುವಾಗ ಈ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ

ಮೇಲಿನ ಹಂತಗಳ ಗ್ರಾಮ ಸಭಾ ಸಮನ್ವಯ ಸಮಿತಿಗಳು ಪ್ರತಿಯೊಂದು ವಿಷಯಕ್ಕೂ ಸಮಿತಿಗಳನ್ನು ರಚಿಸುವುದು ಆಚರಣೆಯಾಗಿ ಹೋಗಿದೆ. ಈಗ ಗ್ರಾಮ ಸಭೆಗಳ ಸಮನ್ವಯಕ್ಕಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಎರಡು ಸಮಿತಿಗಳನ್ನು ರಚಿಸಬೇಕು ಎಂದು ಕರಡು ನಿಯಮ ಹೇಳುತ್ತದೆ. ಕಾಟಾಚಾರದ ಈ ಸಮಿತಿಗಳಿಂದ ಏನು ಉಪಯೋಗ ಎಂದು ಯಾರೂ ಯೋಚಿಸುವುದಿಲ್ಲ. ಈ ಹೊಸ ಸಮಿತಿಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸದಸ್ಯರ ಸಂಘಟನೆ ಬೆನ್ನು ತಟ್ಟಿಕೊಳ್ಳುತ್ತಿದೆ. ಆದರೆ ಈಗಾಗಲೇ ಕಾಯಿದೆ ಬದ್ಧವಾಗಿ ರಚಿಸಲೇಬೇಕಿರುವ ಜಿಲ್ಲಾ ಯೋಜನಾ ಸಮಿತಿ, ತಾಲ್ಲೂಕು ಯೋಜನಾ ಸಮಿತಿಗಳ ಕತೆ ಏನಾಗಿದೆ? ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗಳಿಗೆ ಒಂದು ವರ್ಷದ ಅವಽಗೆ ಶೇ.೨೦ ಗ್ರಾ.ಪಂ. ಅಧ್ಯಕ್ಷರುಗಳನ್ನು ಮತ್ತು ಶೇ. ೨೦ ತಾ.ಪಂ. ಅಧ್ಯಕ್ಷರುಗಳನ್ನೂ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗಳಿಗೆ ಆಹ್ವಾನಿಸುವ ಕಾಯಿದೆ ಬದ್ಧ ಅವಕಾಶಗಳನ್ನು ಎಷ್ಟರ ಮಟ್ಟಿಗೆ ಸದುಪಯೋಗ ಮಾಡಿಕೊಳ್ಳಲಾಗಿದೆ?

” ಹಲವಾರು ಕೊರತೆಗಳಿಂದ ತುಂಬಿರುವ ಗ್ರಾಮ ಸಭಾ ಕರಡು ನಿಯಮಗಳು ಯಥಾವತ್ತಾಗಿ ಅನುಷ್ಠಾನಕ್ಕೆ ಬಂದಲ್ಲಿ ‘ಗ್ರಾಮ ಸ್ವರಾಜ್ಯದ’ ಆಶಯ ಎನ್ನುವುದು ಕೇವಲ ಭ್ರಮೆ ಅಷ್ಟೇ. ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸಭೆಗಳ ಸಬಲೀಕರಣದ ಕುರಿತು ಪ್ರಾಮಾಣಿಕ ಕಾಳಜಿ ಇದ್ದರೆ, ರಾಜ್ಯ ಮಟ್ಟದಲ್ಲಿ ಗ್ರಾಮ ಸಭೆಯ ಸದಸ್ಯರ ಮತ್ತು ವಿಷಯ ತಜ್ಞರ ಚಿಂತನ ಸಭೆಯನ್ನು ನಡೆಸಬೇಕು.” 

ಆಂದೋಲನ ಡೆಸ್ಕ್

Recent Posts

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

6 hours ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

10 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

10 hours ago

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

11 hours ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

12 hours ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

12 hours ago