ಅಂಕಣಗಳು

ಕನ್ನಡ ಚಿತ್ರರಂಗದಲ್ಲಿ ಸುವರ್ಣ ಸಂಭ್ರಮದ ಆಚೆ ಈಚೆ

ವೈಡ್‌ ಆಂಗಲ್‌ : ಯುವರಾಜಕುಮಾರ್ ಮುಖ್ಯ ಭೂಮಿಕೆಯ ‘ಎಕ್ಕ’ಚಿತ್ರ ಬಿಡುಗಡೆಯಾಗಿದೆ. ಚಿತ್ರ ಗೆಲುವಿನ ನಗೆ ಬೀರಿದಂತಿದೆ. ಡಾ.ರಾಜ್ ಕುಟುಂಬದ ಕುಡಿಯ ಚಿತ್ರ ಎನ್ನುವ ಹೆಗ್ಗಳಿಕೆ. ಮೂರು ಸಂಸ್ಥೆಗಳ ಜಂಟಿ ನಿರ್ಮಾಣ. ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಪಿಆರ್‌ಕೆ ಸಂಸ್ಥೆಯ ಮೂಲಕ ಕೈಜೋಡಿಸಿದ್ದರು. ಆ ಕುಟುಂಬದ ಎಲ್ಲ ನಟರ ಚಿತ್ರಗಳನ್ನೂ ಪಾರ್ವತಮ್ಮ ರಾಜಕುಮಾರ್ ನಿರ್ಮಿಸಿದ್ದರು. ಯುವರಾಜ ಕುಮಾರ್ ಚಿತ್ರದ ಹೊರತಾಗಿ. ‘ಅಶ್ವಿನಿ ಈ ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿದ್ದು, ಅಮ್ಮನೇ ಬಂದ ಹಾಗೆ, ಥ್ಯಾಂಕ್ಯೂ ಅಶ್ವಿನಿ’ ಎಂದು, ರಾಘವೇಂದ್ರ ರಾಜಕುಮಾರ್ ಹೇಳಿದ್ದು, ಚಿತ್ರದ ಯಶಸ್ಸಿನ ಸಂತೋಷ ಸಮಾರಂಭದಲ್ಲಿ.

ರಾಘಣ್ಣ ವಜ್ರೇಶ್ವರಿ ಸಂಸ್ಥೆಗೆ ಐವತ್ತು ತುಂಬಿದ್ದನ್ನೂ ಹೇಳಿದರು. ‘ಎಕ್ಕ’ ಬಿಡುಗಡೆಯ ವೇಳೆ ಅಶ್ವಿನಿ ಅವರು ತಮ್ಮ ಇನ್ಸ್ಟಾದಲ್ಲಿ ಶ್ರೀ ವಜ್ರೇಶ್ವರಿ ಸಂಸ್ಥೆಯ ಭವ್ಯ ಪರಂಪರೆಗೆ ೫೦ ವರ್ಷಗಳ ಸಂಭ್ರಮಾಚರಣೆಯ ಕುರಿತು ಹೇಳಿದ್ದರು. ಬಹುಶಃ ಅವರು ಪಾರ್ವತಮ್ಮ ರಾಜಕುಮಾರ್ ನಿರ್ಮಾಪಕಿ ಆಗಿ ಮೊದಲ ಚಿತ್ರ ನಿರ್ಮಿಸಿ ಐವತ್ತು ವರ್ಷಗಳಾದದ್ದನ್ನು ಈ ಪರಂಪರೆಯ ಭಾಗವಾಗಿ ಹೇಳಿದ್ದಾರೆ. ವಜ್ರೇಶ್ವರಿ ಸಂಸ್ಥೆಗೆ ಇನ್ನೂ ಐವತ್ತಾಗಿಲ್ಲ. ಪಾರ್ವತಮ್ಮ ರಾಜಕುಮಾರ್ ನಿರ್ಮಾಪಕಿಯಾಗಿ ಕಾಲಿಟ್ಟದ್ದು ೧೯೭೫ರಲ್ಲಿ.

ಪುನೀತ್ ಹುಟ್ಟಿದ್ದೂ ಅದೇ ವರ್ಷ ಮಾರ್ಚ್ ೧೭ರಂದು. ರಾಜಕುಮಾರ್ ಅಭಿನಯದ ಚಿತ್ರಗಳ ನಿರ್ಮಾಪಕರಲ್ಲಿ ಕೆಲವರು ತಮಗೆ ಈ ಚಿತ್ರಗಳಿಂದ ನಷ್ಟ ಆಗುತ್ತಿದೆ ಎಂದು ಮಾತನಾಡುತ್ತಿರುವ ವಿಷಯ ಕಿವಿಗೆ ಬಿದ್ದಾಗ ಸ್ವತಃ ಪಾರ್ವತಮ್ಮ ರಾಜಕುಮಾರ್ ನಿರ್ಮಾಣಕ್ಕಿಳಿದರು. ಅವರು ನಿರ್ಮಿಸಿದ ಮೊದಲ ಚಿತ್ರ ‘ತ್ರಿಮೂರ್ತಿ’. ಮೇ ೫ರಂದು ಸೆಟ್ಟೇರಿದ ಆ ಚಿತ್ರದ ಕ್ಯಾಮೆರಾ ಚಾಲೂ ಮಾಡಿಸಿದ್ದು ಎರಡು ತಿಂಗಳೂ ತುಂಬದ ತಮ್ಮ ಮಗುವಿನ ಕೈಯಲ್ಲಿ. ನಂತರ ಪುನೀತ್ ಆದ ಲೋಹಿತ್ ಕೈಯಲ್ಲಿ. ತಮ್ಮ ಮಗಳ ಹೆಸರು, ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನ, ನಿರ್ಮಾಪಕರಾಗಿ ಪಾರ್ವತಮ್ಮ ಮತ್ತು ನಾಗಮ್ಮ (ರಾಜಕುಮಾರ್ ಸೋದರಿ).

೧೯೭೫ರ ಡಿಸೆಂಬರ್ ಕೊನೆಯ ವಾರದಲ್ಲಿ ತೆರೆಕಂಡ ಆ ಚಿತ್ರ ಶತದಿನ ಕಂಡರೂ ಪಾರ್ವತಮ್ಮ ಅದನ್ನು ಆಚರಿಸಲಿಲ್ಲ. ವಿತರಕರು ಬೇರೆಯವರಾಗಿದ್ದರು. ನಿರ್ಮಾಪಕಿಯಾದ ಪಾರ್ವತಮ್ಮ ಅವರು ಹಂಚಿಕೆ ಕೈಗೆತ್ತಿಕೊಳ್ಳಲೂ ಇಂತಹದೇ ಕಾರಣವಿತ್ತು. ಮುಂಬೈ ಕರ್ನಾಟಕ ಭಾಗದಲ್ಲಿದ್ದ ಹಂಚಿಕಾ ಸಂಸ್ಥೆಗಳು ಇದಕ್ಕೆ ಕಾರಣ. ರಾಜಕುಮಾರ್ ಅಭಿನಯದ ಚಿತ್ರಗಳ ಗಳಿಕೆ ಕಡಿಮೆ ಆಗುತ್ತಿದೆ ಎಂದು ಹೇಳಿದ್ದು ಕೇಳಿ ತಾವೇ ಹಂಚಿಕೆದಾರರಾದರು. ಚಂದ್ರಿಕಾ ಮೂವೀಸ್ ಹುಬ್ಬಳ್ಳಿಯಲ್ಲಿ ಅವರು ಆರಂಭಿಸಿದ ಹಂಚಿಕಾ ಸಂಸ್ಥೆ. ೧೯೭೭ರಲ್ಲಿ. ಅಲ್ಲಿ ಬಿಡುಗಡೆಯಾದ ಮೊದಲ ಚಿತ್ರ ‘ಗಿರಿಕನ್ಯೆ’ ಆ ಚಿತ್ರ ಅಲ್ಲಿನ ಗಳಿಕೆಯ ಸಾಧ್ಯತೆಯನ್ನು ಅವರಿಗೆ ಪರಿಚಯಿಸಿತ್ತು.

ಬೆಂಗಳೂರಿನಲ್ಲಿ ಅವರು ವಜ್ರೇಶ್ವರಿ ಕಂಬೈನ್ಸ್ ಹಂಚಿಕಾ ಸಂಸ್ಥೆ ಆರಂಭಿಸಿದ್ದು ೧೯೮೦ರಲ್ಲಿ. ಅಲ್ಲಿ ಬಿಡುಗಡೆಯಾದ ಮೊದಲ ಚಿತ್ರ‘ರವಿಚಂದ್ರ’. ರಾಜಕುಮಾರ್ ಅಭಿನಯದ ಚಿತ್ರಗಳು, ಅವರ ಮಕ್ಕಳು ಅಭಿನಯಿಸಿದ ಚಿತ್ರಗಳು ಎಲ್ಲವೂ ಅಲ್ಲಿಂದಲೇ ಹಂಚಿಕೆ ಆಗುತ್ತಿದ್ದವು. ಪಾರ್ವತಮ್ಮ ಅವರು ಪೂರ್ಣಿಮಾ ಎಂಟರ್‌ಪ್ರೈಸಸ್ ಮಾತ್ರವಲ್ಲದೆ ಸರ್ವೇಶ್ವರಿ ಎಂಟರ್‌ಪ್ರೈಸಸ್, ಚಕ್ರೇಶ್ವರಿ ಎಂಟರ್‌ಪ್ರೈಸಸ್, ನಿರುಪಮಾ ಆರ್ಟ್ ಕಂಬೈನ್ಸ್, ದಾಕ್ಷಾಯಿಣಿ ಕಂಬೈನ್ಸ್, ಕಾತ್ಯಾಯಿನಿ ಆರ್ಟ್ ಕಂಬೈನ್ಸ್, ಶ್ರೀ ಚಕ್ರೇಶ್ವರಿ ಕಂಬೈನ್ಸ್, ಶ್ರೀ ಲಕ್ಷ್ಮೀ ಆರ್ಟ್ ಕಂಬೈನ್ಸ್, ಆರ್.ಪಿ. ಕ್ರಿಯೇಷನ್ಸ್ ಹೀಗೆ ವಿವಿಧ ಲಾಂಛನಗಳ ಮೂಲಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರು ನಿರ್ಮಿಸಿದ ೮೫ಕ್ಕೂ ಹೆಚ್ಚು ಚಿತ್ರಗಳಲ್ಲಿ ಸೋಲು ಕಂಡದ್ದು ಕಡಿಮೆ. ಅದಕ್ಕೆ ಮೂಲ ಕಾರಣ ಅವುಗಳ ಪೂರ್ವಸಿದ್ಧತೆ. ಚಿತ್ರ ನಿರ್ಮಾಣಕ್ಕೂ ಮೊದಲು, ಅದರ ಕಥೆ, ಚಿತ್ರಕಥೆ ಮೊದಲ್ಗೊಂಡು ಎಲ್ಲವುಗಳ ಚರ್ಚೆ ನಡೆಯುತ್ತಿತ್ತು. ನಿರ್ದೇಶಕರು, ಚಿತ್ರದ ಕಥೆ, ಚಿತ್ರಕಥೆ ಬರೆಯುವವರ ಜೊತೆ ಚರ್ಚೆ. ರಾಜ್ ಹಾಗೂ ಸೋದರ ವರದರಾಜು ಅವರು ಈ ವೇಳೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಎಲ್ಲರಿಗೂ ಒಪ್ಪಿತವಾದ ಮೇಲಷ್ಟೇ ಚಿತ್ರೀಕರಣ.

ಹ್ಞಾಂ ೧೯೭೫ರಲ್ಲಿ ತೆರೆಕಂಡ ಚಿತ್ರಗಳಲ್ಲಿ ರಾಜಕುಮಾರ್ ಅಭಿನಯದ ‘ದಾರಿ ತಪ್ಪಿದ ಮಗ’, ಐತಿಹಾಸಿಕ ಚಿತ್ರ ‘ಮಯೂರ’ ಮತ್ತು ಅವರದೇ ಸಂಸ್ಥೆಯ ‘ತ್ರಿಮೂರ್ತಿ’ಮೂರು ಚಿತ್ರಗಳಿದ್ದವು. ಪಾರ್ವತಮ್ಮ ರಾಜಕುಮಾರ್ ನಿರ್ಮಾಪಕಿಯಾಗಿ ಐವತ್ತು ವರ್ಷಗಳ ಪರಂಪರೆಯನ್ನು ಅವರ ಕುಟುಂಬವರ್ಗ ಮುಂದುವರಿಸುತ್ತಿದೆ. ೧೯೭೫ರಲ್ಲಿ ಚಿತ್ರರಂಗಕ್ಕೆ ಬಂದ ತಂತ್ರಜ್ಞರಲ್ಲಿ ಈಗಲೂ ಸಕ್ರಿಯರಾಗಿರುವ ಕೆಲವರಿದ್ದಾರೆ. ಅವರದು ಸುವರ್ಣ ಸಂಭ್ರಮಾಚರಣೆಯ ದಿನಗಳು. ಕನ್ನಡ ಚಿತ್ರರಂಗ ಮೈಸೂರಿನಲ್ಲೇ ನೆಲೆಯೂರಬೇಕು ಎಂದು ಕನಸು ಕಂಡ ನಿರ್ಮಾಪಕ, ನಿರ್ದೇಶಕ ಶಂಕರಸಿಂಗ್ ಅವರ ಮಗ ಎಸ್. ವಿ. ರಾಜೇಂದ್ರಸಿಂಗ್ (ಬಾಬು) ನಿರ್ದೇಶನದ ಮೊದಲಚಿತ್ರ ತೆರೆಕಂಡ ದಾಖಲೆಯೂ ೧೯೭೫ರಲ್ಲೇ ಇದೆ. ಅವರು ನಿರ್ದೇಶಿಸಿದ ಆ ಚಿತ್ರ‘ನಾಗಕನ್ಯೆ’.

ಈಗಲೂ ಸಕ್ರಿಯರಾಗಿರುವ ಬಾಬು ಅವರ‘ಬಿದ್ದರ್ ಕಂಬಳ’ ತುಳುಚಿತ್ರ ಈ ವರ್ಷ ಬಿಡುಗಡೆಗೆ ಸಿದ್ಧವಾಗುತ್ತಿದೆ. ಬಾಬು ಅವರ ಚಿತ್ರವಲ್ಲದೆ ಶಂಕರ್ ಸಿಂಗ್ ಅವರ ಮಕ್ಕಳಾದ ಸಂಗ್ರಾಂ ಸಿಂಗ್ ಮತ್ತು ನಾಗರಾಜ್ ಸಿಂಗ್ ಅವರ ಚಿತ್ರಗಳೂ ಆ ವರ್ಷ ತೆರೆಕಂಡಿವೆ. ಸಂಗ್ರಾಂ ಅವರ ‘ಮಹದೇಶ್ವರ ಪೂಜಾ ಫಲ’, ನಾಗರಾಜಸಿಂಗ್ ಅವರ ‘ಪೂಜಾಫಲ’ ಈ ಚಿತ್ರಗಳು. ಕನ್ನಡದ ಎರಡು ಚರಿತ್ರಾರ್ಹ ಚಿತ್ರಗಳು ೧೯೭೫ರಲ್ಲಿ ತೆರೆಕಂಡವು. ‘ಚೋಮನದುಡಿ’ ಮತ್ತು ‘ಹಂಸಗೀತೆ’. ಪಟ್ಟಾಭಿರಾಮರೆಡ್ಡಿ ಅವರ ‘ಸಂಸ್ಕಾರ’ ಚಿತ್ರದ ನಂತರ ವರ್ಷದ ಅತ್ಯುತ್ತಮ ಚಿತ್ರ ಕಿರು ಸ್ವರ್ಣ ಕಮಲ ಪ್ರಶಸ್ತಿ ಪಡೆದ ಚಿತ್ರ ‘ಚೋಮನದುಡಿ’ ಶಿವರಾಮಕಾರಂತರ ಕಾದಂಬರಿ ಆಧರಿಸಿ ತಯಾರಾದ ಈ ಚಿತ್ರವನ್ನು ಬಿ.ವಿ.ಕಾರಂತರು ನಿರ್ದೇಶಿಸಿದ್ದರು. ಚೋಮನ ಪಾತ್ರ ನಿರ್ವಹಿಸಿದ ರಂಗನಟ ಎಂ.ವಿ.ವಾಸುದೇವರಾವ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಅತ್ಯುತ್ತಮ ಕಥೆಗಾಗಿ ಶಿವರಾಮಕಾರಂತರಿಗೆ ಪ್ರಶಸ್ತಿಸಂದಿತ್ತು.

‘ಹಂಸಗೀತೆ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರಕ್ಕಿರುವ ಪ್ರಶಸ್ತಿ, ಜಿ.ವಿ.ಅಯ್ಯರ್, ನಿರ್ಮಿಸಿ, ನಿರ್ದೇಶಿಸಿದ ಚಿತ್ರವದು. ರಾಜ್ಯದಲ್ಲಿ ಮೊದಲ ಮತ್ತು ಎರಡನೇ ಅತ್ಯುತ್ತಮ ಚಿತ್ರಗಳಾಗಿ‘ಚೋಮನದುಡಿ’ ಮತ್ತು ‘ಹಂಸಗೀತೆ’ ಚಿತ್ರಗಳು ಪ್ರಶಸ್ತಿ ಪಡೆದವು. ಅನಂತನಾಗ್ ಮುಖ್ಯಭೂಮಿಕೆಯಲ್ಲಿದ್ದರು. ‘ಚೋಮನದುಡಿ’ ಚಿತ್ರದಲ್ಲಿ ನಿರ್ದೇಶನ ಸಹಾಯಕ್ಕಾಗಿ ಬಂದವರು ಅದಾಗಲೇ ಪೂನಾದಲ್ಲಿ ನಿರ್ದೇಶನ ತರಬೇತಿ ಪಡೆಯುತ್ತಿದ್ದ ಗಿರೀಶ್ ಕಾಸರವಳ್ಳಿ ಮತ್ತು ರಂಗಭೂಮಿಯಲ್ಲಿ ಅನುಭವ ಪಡೆಯುತ್ತಿದ್ದ, ‘ಕಾಡು’ ಚಿತ್ರದಲ್ಲಿ ಪಾಲ್ಗೊಂಡಿದ್ದ ಟಿ.ಎಸ್. ನಾಗಾಭರಣ. ಕಾಸರವಳ್ಳಿ ಅವರು ೧೯೭೭ರಲ್ಲಿ ‘ಘಟಶ್ರಾದ್ಧ’ ದ ಮೂಲಕ ಸ್ವತಂತ್ರ ನಿರ್ದೇಶಕರಾಗಿ, ಅಂತಾರಾಷ್ಟ್ರೀಯ ಖ್ಯಾತಿ ಪಡೆದರು. ಅವರ ನಿರ್ದೇಶನದ ಹೊಸಚಿತ್ರ ‘ಆಕಾಶ ಮತ್ತು ಬೆಕ್ಕು’ ಚಿತ್ರೀಕರಣದ ಕೊನೆಯ ಹಂತದಲ್ಲಿದೆ.

‘ಗ್ರಹಣ’ದ ಮೂಲಕ ನಿರ್ದೇಶಕರಾದ ನಾಗಾಭರಣ ಅವರದು ಕೂಡ ಪ್ರಯೋಗಗಳತ್ತ ಹೆಚ್ಚು ಒಲವು. ರಾಷ್ಟ್ರ ಪ್ರಶಸ್ತಿ ಪುರಸ್ಕೃತರು. ನಟ, ನಿರ್ಮಾಪಕ, ನಿರ್ದೇಶಕ, ರಂಗತಜ್ಞ ಹೀಗೆ ಹಲವು ವಿಭಾಗಗಳ ಅನುಭವಿ. ತಮ್ಮದೇ ಆದ ಅಭಿನಯ ತರಬೇತಿ ಕೇಂದ್ರ ಸ್ಥಾಪಿಸಿಕೊಂಡಿದ್ದಾರೆ. ಅವರೀಗ ನಾಡಪ್ರಭು ಕೆಂಪೇಗೌಡರ ಜೀವನಚರಿತ್ರೆಯನ್ನು ತೆರೆಯ ಮೇಲೆ ತರುವ ಸನ್ನಾಹದಲ್ಲಿದ್ದಾರೆ.  ಕನ್ನಡ ಚಿತ್ರರಂಗದ ಸುವರ್ಣ ದಶಕದಲ್ಲಿ ಚಿತ್ರೋದ್ಯಮಕ್ಕೆ ನಿರ್ದೇಶಕರಾಗಿ ಕಾಲಿಟ್ಟ ಸಾಹಿತಿ, ಉಪನ್ಯಾಸಕರಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪನವರು, ಈಗಲೂ ಸಕ್ರಿಯರು. ಅವರ ನಿರ್ದೇಶನದ ‘ಸ್ವಪ್ನ ಮಂಟಪ’ ಇಂದು ತೆರೆಗೆ ಬರುತ್ತಿದೆ.

‘ಕಂಕಣ’ ಅದೇ ವರ್ಷ ತೆರೆಕಂಡ ಚಿತ್ರ. ಪ್ರಸಾದ್ ನಿರ್ದೇಶನದ, ಆ ಚಿತ್ರ ಸುರೇಶ್ ಹೆಬ್ಳಿಕರ್ ಅವರನ್ನು ತೆರೆಗೆ ಪರಿಚಯಿಸಿತ್ತು. ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆ ‘ಕಂಕಣ’ದ್ದು. ಅಷ್ಟುಮಾತ್ರವಲ್ಲ, ಜನಧನ (ಕ್ರೌಡ್ ಫಂಡಿಂಗ್) ಮೂಲಕ ನೂರು ಮಂದಿ ಬಂಡವಾಳ ಹೂಡಿ ನಿರ್ಮಿಸಿದ ಚಿತ್ರ ಇದು ಎನ್ನಲಾಗಿದೆ.

ಈಗಲೂ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಎನ್. ಟಿ. ಜಯರಾಮರೆಡ್ಡಿ ಅವರ ‘ನಮ್ಮ ಊರ ದೇವರು’ ಚಿತ್ರ ಕೂಡ ೧೯೭೫ರಲ್ಲಿ ಬಿಡುಗಡೆಯಾಗಿತ್ತು. ನಟಿ ಶ್ರೀಲಲಿತಾ ಅಭಿನಯದ ‘ನಂಜುಂಡನಕ್ಕಾಗ’ ಚಿತ್ರವೂ ಅದೇ ವರ್ಷದ್ದು. ಇವರೆಲ್ಲ ಸುವರ್ಣ ವರ್ಷಗಳನ್ನು ಕಂಡವರು. ೧೯೭೫ಕ್ಕೂ ಮೊದಲೇ ಚಿತ್ರರಂಗಕ್ಕೆ ಕಾಲಿಟ್ಟು ಈಗಲೂ ಸಕ್ರಿಯರಾಗಿರುವ ಕಲಾವಿದರು, ತಂತ್ರಜ್ಞರು ಸಾಕಷ್ಟು ಮಂದಿ ಇದ್ದಾರೆ. ತಡವಾಗಿ ಆದರೂ ಪದ್ಮ ಗೌರವಕ್ಕೆ ಪಾತ್ರರಾದ ಅನಂತನಾಗ್, ಬಾಲನಟರಾಗಿ ಬಂದು ಹಾಸ್ಯ ನಟರಾಗಿ ಹೆಸರಾದ ಉಮೇಶ್, ಶ್ರೀನಾಥ್ ಅಶೋಕ್, ಸುಂದರರಾಜ್, ಭಾರತಿ ವಿಷ್ಣುವರ್ಧನ್, ಗಿರಿಜಾ ಲೋಕೇಶ್, ಡಾ. ಜಯಮಾಲ ಮೊದಲಾಗಿ ಕಲಾವಿದರಿದ್ದಾರೆ. ತಂತ್ರಜ್ಞರಿದ್ಧಾರೆ. ಅವರೆಲ್ಲರ ಹೆಸರುಗಳ ಪಟ್ಟಿಯೇ ಬಹಳ ದೊಡ್ಡದಾಗಬಹುದು.

ಹಿಂದಿನ ದಿನಗಳಲ್ಲಿ ಸುವರ್ಣ ಸಡಗರವನ್ನು ಸಂಭ್ರಮಿಸುವ ಕಾರ್ಯಕ್ರಮಗಳು ಆಗುತ್ತಿದ್ದವು. ಡಾ.ರಾಜಕುಮಾರ್ ಅವರಿಗೆ ಪದ್ಮಭೂಷಣ ಗೌರವ ಸಂದಾಗ ಅವರನ್ನು ಸರ್ಕಾರ ಗೌರವಿಸಿತ್ತು. ನಾಗರಿಕ ಸನ್ಮಾನವಿತ್ತು. ಕನ್ನಡಚಿತ್ರರಂಗದ ಸಾಧಕರ ಸಾಧನೆಗಳನ್ನು, ಅವರ ಹೆಜ್ಜೆ ಗುರುತುಗಳನ್ನು ಮುಂದಿನ ಪೀಳಿಗೆಗೆ ಹೇಳುವ, ಕಾಪಿಡುವ ಕೆಲಸಗಳಾಗಬೇಕು. ಸ್ವಯಂಪ್ರಚಾರವೇ (ಬ್ರಾಂಡಿಂಗ್) ಮಹಾಪ್ರಚಾರ ಎಂದುಕೊಳ್ಳುವ ಕಾರ್ಪೊರೇಟ್ ಜಗತ್ತನ್ನು ಚಿತ್ರರಂಗ ಅಪ್ಪಿಕೊಳ್ಳುತ್ತಿರುವ ಈ ದಿನಗಳಲ್ಲಿ ಇದನ್ನು ಎಷ್ಟು ನಿರೀಕ್ಷಿಸಬಹುದು?

” ಪಾರ್ವತಮ್ಮ ರಾಜಕುಮಾರ್ ನಿರ್ಮಾಪಕಿಯಾಗಿ ಕಾಲಿಟ್ಟದ್ದು ೧೯೭೫ರಲ್ಲಿ. ಪುನೀತ್ ಹುಟ್ಟಿದ್ದೂ ಅದೇ ವರ್ಷ ಮಾರ್ಚ್ ೧೭ರಂದು. ರಾಜಕುಮಾರ್ ಅಭಿನಯದ ಚಿತ್ರಗಳ ನಿರ್ಮಾಪಕರಲ್ಲಿ ಕೆಲವರು ತಮಗೆ ಈ ಚಿತ್ರಗಳಿಂದ ನಷ್ಟ ಆಗುತ್ತಿದೆ ಎಂದು ಮಾತನಾಡುತ್ತಿರುವ ವಿಷಯ ಕಿವಿಗೆ ಬಿದ್ದಾಗ ಸ್ವತಃ ಪಾರ್ವತಮ್ಮ ರಾಜಕುಮಾರ್ ನಿರ್ಮಾಣಕ್ಕಿಳಿದರು. ಅವರು ನಿರ್ಮಿಸಿದ ಮೊದಲ ಚಿತ್ರ ‘ತ್ರಿಮೂರ್ತಿ’.”

-ಬಾ.ನಾ.ಸುಬ್ರಹ್ಮಣ್ಯ 

ಆಂದೋಲನ ಡೆಸ್ಕ್

Recent Posts

‘ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿ’ : ಶಿವಶಂಕರ್ ಸೂಚನೆ

ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…

21 seconds ago

ಮೈಸೂರು | ನಾಳೆಯಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…

24 mins ago

ರೇಸ್‌ಕ್ಲಬ್‌ ಸುತ್ತಮುತ್ತ ಕುದುರೆ ಚಟುವಟಿಕೆಗಳಿಗೆ ನಿರ್ಬಂಧ

ಮೈಸೂರು : ಮೈಸೂರಿನ ರೇಸ್‌ಕ್ಲಬ್‌ನ ಪ್ರದೇಶದ ಸುತ್ತಲಿನ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಗತ್ತೆ ಪ್ರಾಣಿಗಳ ಚಲನವಲನ, ಕುದುರೆಗಳನ್ನು…

1 hour ago

ರಸ್ತೆ ಅಪಘಾತ ಸಂಖ್ಯೆ ಶೂನ್ಯವಾಗಬೇಕು : ನಿ.ನ್ಯಾಯಮೂರ್ತಿ ಅಭಯ್‌ ಮನೋಹರ್‌ ಸಪ್ರೆ

ಮೈಸೂರು : ಪ್ರತಿ ಜೀವ ಅಮೂಲ್ಯ, ರಸ್ತೆ ಅಪಘಾತಗಳ ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು ಎಂದು ಸುಪ್ರೀಂ ಕೋಟ್೯ನ ನಿ.ನ್ಯಾಯಮೂರ್ತಿಯೂ ಆದ…

1 hour ago

ಸ್ಲೀವ್‌ಲೆಸ್‌, ಹರಿದ ಜೀನ್ಸ್‌ ಹಾಕುವ ಸರ್ಕಾರಿ ನೌಕರರೇ ಹುಷಾರ್.. : ರಾಜ್ಯ ಸರ್ಕಾರದ ಎಚ್ಚರಿಕೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಯೋಗ್ಯ ಸೂಕ್ತ ಬಟ್ಟೆ ಧರಿಸಿಕೊಂಡು ಬರದಿದ್ದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ…

2 hours ago

ಮೈಸೂರು ವಿಶ್ವವಿದ್ಯಾನಿಲಯ ; ಅನಧಿಕೃತ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರವೇಶಕ್ಕೆ ನಿರ್ಬಂಧ

ಮೈಸೂರು : ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಿಕೆ ಹಾಗೂ ವಿ.ವಿ ಕ್ಯಾಂಪಸ್‌ಗೆ ಅನಧಿಕೃತ…

2 hours ago