ಅಂಕಣಗಳು

ಕಲಾಮಂದಿರಕ್ಕೆ ಕಾಲಿಟ್ಟ ಗಾಲಿಬ್

ಶುಕ್ರವಾರದ ನಮಾಜ್ ಮುಗಿದು ಬಹಳ ಹೊತ್ತೇನೂ ಆಗಿರಲಿಲ್ಲ. ಮೈಸೂರಿನ ಆಗಸದಲ್ಲಿ ಮೋಡಗಳ ಜಾತ್ರೆ ನಡೆದೇ ಇತ್ತು. ಮನಸ್ಸು ಬಂದ ಹೊತ್ತಿನಲ್ಲಿ ಸುರಿದು ಹೋಗುವ ಮಳೆ ಒಂದಿಷ್ಟು ಹೊತ್ತು ಬಿಡುವು ಕೊಟ್ಟಿತ್ತು. ಆಹಾ ಎಷ್ಟು ಸೊಗಸಾಗಿದೆಯಲ್ಲಾ ಮೈಸೂರು ಎನ್ನುತ್ತಿರುವಾಗಲೇ ಮಿರ್ಜಾ ಗಾಲಿಬ್  ಬಂದೇಬಿಟ್ಟರು.

ಅದೇ ಉದ್ದನೆಯ ನಿಲುವಂಗಿ, ಅಷ್ಟೇ ಉದ್ದದ ಆಸರೆಯ ಕೋಲು. ಶಿಖರಪ್ರಾಯದಂಥ ಉದ್ದನೆಯ ಪರ್ಶಿಯನ್ ಟೋಪಿ. ನಿಧಾನಕ್ಕೆ ಹೆಜ್ಜೆಯ ಮೇಲೆ ಹೆಜ್ಜೆ ಊರುತ್ತ ಗಾಲಿಬ್ ಕಿರು ರಂಗಮಂದಿರದ ಬೆಳಕಿನಲ್ಲಿ ಕಾಣಿಸಿಕೊಂಡರು. ಗಾಲಿಬ್‌ನನ್ನು ಬರಮಾಡಿಕೊಳ್ಳಲು ಜನವೊ ಜನ. ಮೈಸೂರಿನ ಕಲಾಮಂದಿರದ ಆವರಣಕ್ಕೆ ಎಂದೂ ಕಾಲಿಡದ ಜನ, ನಿಂತು ನೋಡುತ್ತಿದ್ದ ಕಿಂದರಿ ಜೋಗಿಯನ್ನೂ ಮರೆತು ಕಿರು ರಂಗಮಂದತ್ತ ನುಗ್ಗಿಬಂದರು. ಹೆಂಗಸರು, ಗಂಡಸರು, ಮಕ್ಕಳು, ಮುದುಕರು. ದಾಪುಗಾಲು ಹಾಕುತ್ತ ಧಾವಿಸುತ್ತಿದ್ದರು.

ಇದೊಂದು ಅಪರೂಪದ ನೋಟ. ಉರ್ದು ಭಾಷೆಯನ್ನಾಡುವ, ಉರ್ದು ಭಾಷೆಯ ಬನಿಯನ್ನು, ಸೊಗಡು ಸೊಗಸುಗಳನ್ನು ಸವಿಯಬಲ್ಲ ಸಮುದಾಯ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಧಾವಿಸಿ ಬಂದದ್ದು ತುಂಬ ಅಪರೂಪವೇ. ಅರ್ಧಗಂಟೆ ಮುಂಚಿತವಾಗಿಯೇ ಕಿರುರಂಗಮಂದಿರದ ಬಾಗಿಲ ಮುಂದೆ ದಟ್ಟೈಸಿ ನಿಂತಿದ್ದ ಗುಂಪು ಬಾಗಿಲು ತೆಗೆಯುತ್ತಿದ್ದಂತೆಯೇ ಪ್ರವಾಹದಂತೆ ಒಳ ನುಗ್ಗಿತು. ಅಲ್ಲಿಯೂ ಒಂದು ಸಂಸ್ಕೃತಿ ಎದ್ದು ಕಾಣುತ್ತಿತ್ತು. ಮಹಿಳೆಯರಿಗೆ ಮೊದಲು ದಾರಿಮಾಡಿಕೊಟ್ಟವರು ಪುರುಷರು.

ಕರ್ನಾಟಕ ಉರ್ದು ಅಕಾಡೆಮಿ ಮೊದಲ ಬಾರಿಗೆ ಮಿರ್ಜಾ  ಗಾಲಿಬರನ್ನು ಮೈಸೂರಿಗೆ ಕರೆತಂದಿತ್ತು. ಪ್ರವೇಶ ಉಚಿತ. ಐದಾರು ನಿಮಿಷಗಳಲ್ಲೇ ರಂಗಮಂದಿರ ತುಂಬಿ ತುಳುಕಿತು. ಸೀಟಿಲ್ಲದವರು ಬಾಗಿಲಲ್ಲೇ ನಿಂತು ನೋಡಲು ತವಕಿಸುತ್ತಿದ್ದರು. ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಬಂದ ಮಿರ್ಜಾ ಗಾಲಿಬ್ ಮಹಾನ್ ಪ್ರತಿಭಾವಂತ ಕವಿ. ಪರ್ಶಿಯನ್ ಭಾಷೆಯಲ್ಲಿ ಕವಿತೆ ಬರೆಯಲು ಆರಂಭಿಸಿದರೂ ಮುಂದೆ ಉರ್ದು ಭಾಷೆಯನ್ನು ತಮ್ಮ ಕಾವ್ಯ ಮಾಧ್ಯಮವನ್ನಾಗಿ ಮಾಡಿಕೊಂಡರು.

ಉರ್ದುಭಾಷೆಯಲ್ಲಿ ಶ್ರೇಷ್ಠ ಕವಿಯಾದ ಗಾಲಿಬ್ ಉರ್ದು ಭಾಷಿಕರ ಹೃದಯವನ್ನು ಗೆದ್ದ ಕವಿಯೂ ಹೌದು. ಕಾವ್ಯಕ್ಷೇತ್ರದಲ್ಲಿ ಉತ್ತುಂಗ ಶಿಖರಕ್ಕೇರಿದ ಗಾಲಿಬ್ ಅತ್ಯಂತ ಜನಪ್ರಿಯ ಕವಿಯಾಗಿಯೂ ಉಳಿದಿದ್ದಾರೆ. ಜನ ನುಗ್ಗಿ ಬರಲು ಮುಖ್ಯ ಕಾರಣ ಇದೇ ಜನಪ್ರಿಯತೆ. ಕಾಲಪ್ರವಾಹದಲ್ಲಿ ಕೊಚ್ಚಿ ಹೋಗದೆ ಗಾಲಿಬ್ ಇವತ್ತಿಗೂ ಜನ ಪ್ರೀತಿಯ ಉಸಿರಲ್ಲೇ ಉಳಿದುಕೊಂಡಿದ್ದಾರೆ.

ಗಾಲಿಬ್ ಕಾವ್ಯದ ಆಳ-ಅಗಲಗಳು, ಸರಳ-ಸಂಕೀರ್ಣತೆಗಳು, ತೀವ್ರತೆ-ತಲ್ಲಣಗಳು, ಪ್ರಾಮಾಣಿಕತೆ-ಎದೆಗಾರಿಕೆಗಳು ಇಡೀ ಜಗತ್ತಿನಲ್ಲಿಯೇ ಅವನನ್ನು ದೊಡ್ಡ ಕವಿಯಾಗಿ ನಿಲ್ಲಿಸುವ ಶಕ್ತಿಯನ್ನು ಪಡೆದುಕೊಂಡಿವೆ. ಕೊನೆಯ ಭಾರತದ ಅಭಿಜಾತ ಪರ್ಶಿಯನ್ ಕವಿ ಎಂದೂ ಇವನನ್ನು ಪರಿಗಣಿಸಲಾಗಿದೆ.

ಶ್ರೀಮಂತ ಕೌಟುಂಬಿಕಹಿನ್ನೆಲೆಯಿಂದ ಬಂದರೂ, ಗಾಲಿಬ್ ಬಡತನವನ್ನು ಅದರ ಘೋರ ರೂಪದಲ್ಲಿ ಕಂಡವರು. ಮಹಾನ್ ಪ್ರತಿಭಾವಂತರಾದರೂ, ಸಿಗಬೇಕಾದ ಮನ್ನಣೆ ಸಕಾಲದಲ್ಲಿ ಸಿಕ್ಕದೆ, ಕಷ್ಟದ ಬದುಕಿನಲ್ಲಿ ತೊಳಲಾಡಿದವರು. ಸಂಸಾರವಿದ್ದೂ ಒಂಟಿತನವನ್ನು ಅನುಭವಿಸಿದವರು. ಮದ್ಯ ಮತ್ತು ಜೂಜಿನಲ್ಲಿಯೇ ಬದುಕನ್ನು ದೂಡುತ್ತ, ಅಲ್ಲಾನನ್ನು ತನ್ನ ಗೆಳೆಯನಂತೆ ಕಾಣುತ್ತ, ಗೇಲಿಮಾಡುತ್ತ, ಮನುಷ್ಯರ ನಂಬಿಕೆ ಮತ್ತು ಮೌಢ್ಯಗಳನ್ನು ಹಿಡಿದು ಅಲ್ಲಾಡಿಸಿದವರು. ಗಾಲಿಬ್‌ನ ಗಜಲ್‌ನಂತೆಯೇ ಅವನ ಪತ್ರಗಳು ಕೂಡಾ ಪ್ರಾಮುಖ್ಯತೆ ಪಡೆದುಕೊಂಡಿವೆ.

ಗಾಲಿಬ್‌ನ ಪತ್ರಗಳನ್ನು ಗಜಲ್‌ಗಳನ್ನು ಬಳಸಿಕೊಂಡು ರೂಪಿಸಿರುವ ನಾಟಕವೇ- ಜಿಕರ್ ಎ ಗಾಲಿಬ್. ಇದು ಗಾಲಿಬ್‌ನ ಬದುಕನ್ನು ಚಿತ್ರಿಸುತ್ತದೆ. ಬೆಂಗಳೂರಿನ ಕಟ್‌ಪುತಲಿಯಾನ್ ರಂಗತಂಡ ಈ ನಾಟಕವನ್ನು ರಂಗದ ಮೇಲೆ ಪ್ರದರ್ಶಿಸಿತು. ತಮ್ಮ ಅದ್ಭುತ ಅಭಿನಯದಲ್ಲಿ ಗಾಲಿಬ್‌ನನ್ನು ಕಡೆದಿಟ್ಟವರು-ಜಾಫರ್ ಮೊಹಿಯುದ್ದೀನ್. (ನಾಟಕದ ನಿರ್ದೇಶನವೂ ಇವರದೇ) ಬೆಂಗಳೂರಿನ ರಂಗಚಟುವಟಿಕೆಗಳಲ್ಲಿ ಸುಮಾರು ಅರ್ಧಶತಮಾನದಿಂದ ಕ್ರಿಯಾಶೀಲರಾಗಿರುವ ಜಾಫರ್ ಗಾಲಿಬ್‌ನ ಎಲ್ಲ ಭಾವ ವಿನ್ಯಾಸಗಳನ್ನು ಅದ್ಭುತವಾಗಿ ಚಿತ್ರಿಸಿದರು.

ಗಾಲಿಬ್‌ನ ಗಜಲ್‌ಗಳಿಗೆ ಜೀವತುಂಬಿ ಹಾಡಿದವರು ರಘುಪತಿ ಝಾ. ಗಾಲಿಬ್‌ನ ಕನಸುಗಳಿಗೆ,ರಮ್ಯಭಾವಗಳಿಗೆ ತಮ್ಮ ಕಥಕ್ ನೃತ್ಯದಿಂದ ರೂಪಕೊಟ್ಟವರು ಸ್ಮಿತಾ ಶ್ರೀನಿವಾಸನ್. (ಕೊರಿಯೊಗ್ರಫಿ- ನಂದಿನಿ ಮೆಹ್ತಾ). ಸರ್ಫರಾಜ್ ಖಾನ್ ಅವರ ಸಾರಂಗಿ ವಾದನ, ಅಶ್ವಿನಿ ಕೌಶಿಕ್ ಅವರ ಬಾನ್ಸುರಿ ಮತ್ತು ಅಜಯ್ ಕುಮಾರ್ ಸಿಂಗ್ ಅವರ ತಬಲಾ ನಾಟಕದ ಭಾವವನ್ನು ಮೇಲೆತ್ತಿದವು. ರಂಗಸಜ್ಜಿಕೆ ಮತ್ತು ಬೆಳಕಿನ ವಿನ್ಯಾಸ ಮೆಚ್ಚುವಂತಿದ್ದವು.

ಗಾಲಿಬ್‌ನ ಗಜಲ್‌ಗಳಿಗೆ ತಲೆದೂಗುತ್ತಿದ್ದ ನೋಟಕರು, ಗಾಲಿಬ್ ಮಾತುಗಳಲ್ಲಿದ್ದ ತಾತ್ವಿಕ ದರ್ಶನಕ್ಕೆ ಸೂಕ್ತ ಪ್ರತಿಕ್ರಿಯೆ ಕೊಡುತ್ತ ತಮ್ಮ ಅಭಿರುಚಿಯ ಮೇಲ್ಮಟ್ಟವನ್ನು ಸಾಬೀತುಪಡಿಸಿ, ಮೈಸೂರಿನ ಸಂಸ್ಕೃತಿಯನ್ನು ತೋರಿಸಿದರು. ಈ ರಂಗಪ್ರಯೋಗದ ಮಹತ್ವ ಎಂದರೆ, ಮೊದಲ ಬಾರಿಗೆ ಉರ್ದು ಭಾಷಿಕ ಸಮುದಾಯದವರನ್ನು ಕಲಾಮಂದಿರಕ್ಕೆ ಸೆಳೆದು, ಅದು ಮುಖ್ಯವಾಹಿನಿಯ ಜೊತೆ ಬೆರೆಯಲು ನೆರವಾದದ್ದು. ಕರ್ನಾಟಕ ಉರ್ದು ಅಕಾಡೆಮಿಯ ಈ ಕಾರ್ಯ ಉಳಿದ ಅಕಾಡೆಮಿಗಳಿಗೆ ಮಾದರಿಯಾಗಿಯೂ ಕಾಣುತ್ತಿತ್ತು. (ಕರ್ನಾಟಕ ನಾಟಕ ಅಕಾಡೆಮಿ ಈ ಕೆಲಸವನ್ನು ಎಂದೋ ಮಾಡಬಹುದಾಗಿತ್ತು.)

-ಜಿ.ಪಿ.ಬಸವರಾಜು

ಆಂದೋಲನ ಡೆಸ್ಕ್

Recent Posts

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

2 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

3 hours ago

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

4 hours ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

4 hours ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

5 hours ago

ಅಧಿಕಾರ ಶಾಶ್ವತವಲ್ಲ : ‘ನನ್ನ ತಂದೆಯ ಇಚ್ಛೆಯಂತೆಯೇ ನಡೆಯುವೆ’ ; ಯತೀಂದ್ರ

ಚಿಕ್ಕೋಡಿ : ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಯಾವುದೇ…

5 hours ago