2023ರಲ್ಲಿ ವಿಶ್ವದ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದೆಂಬ ಎಲ್ಲ ಊಹೆಗಳೂ ಸುಳ್ಳಾಗಿವೆ. ಹಾಗೆ ನೋಡಿದರೆ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಹೆಚ್ಚಿದೆ. ಈ ಬಿಕ್ಕಟ್ಟಿನಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅಭಿವೃದ್ಧಿಯಲ್ಲಿ ಮತ್ತಷ್ಟು ಕುಸಿತ ಉಂಟಾಗಿದೆ. ಹೊಸದಾಗಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಇದರ ಪರಿಣಾಮವೋ ಏನೋ ಎಂಬಂತೆ ಬಡದೇಶಗಳಲ್ಲಿ ರಾಜಕೀಯ ಕೋಲಾಹಲ ಎದ್ದಿದೆ. ಆಫ್ರಿಕಾ, ಲ್ಯಾಟಿನ್ ಅಮೆರಿಕ ದೇಶಗಳಿಂದ ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಜನ ಯೂರೋಪ್ ಮತ್ತು ಪಾಶ್ಚಾತ್ಯ ದೇಶಗಳಿಗೆ ವಲಸೆಬರುತ್ತಿದ್ದಾರೆ. ವಲಸೆಯೇ ಈ ದೇಶಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಆಂತರಿಕವಾಗಿಯೂ ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜಕೀಯ ಬಿಕ್ಕಟ್ಟು ಕೆಲವು ದೇಶಗಳಲ್ಲಿ ಪ್ರಜಾತಂತ್ರ ಕುಸಿತಕ್ಕೆ ಮತ್ತು ಮಿಲಿಟರಿ ಕ್ಷಿಪ್ರಕ್ರಾಂತಿಗೆ ಅವಕಾಶ ಮಾಡಿಕೊಡುತ್ತಿದೆ. ಈ ಬೆಳವಣಿಗೆಗಳನ್ನು ನೋಡಿದರೆ ಮುಂಬರುವ ವರ್ಷವು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತೆ ಕಾಣುತ್ತಿದೆ.
ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ನಿಲ್ಲುವ ಹಾಗೆ ಕಾಣುತ್ತಿಲ್ಲ. ಈ ಯುದ್ಧದಿಂದಾಗಿ ಸೃಷ್ಟಿಯಾಗಿದ್ದ ಆಹಾರ ಧಾನ್ಯ ಮತ್ತು ಪೆಟ್ರೋಲ್, ಡೀಸೆಲ್, ಅನಿಲ ಕೊರತೆ ಮುಂದುವರಿಯಲಿದೆ. ಅಂದರೆ ಜಗತ್ತಿನಲ್ಲಿ ಆರ್ಥಿಕ ಬಿಕ್ಕಟ್ಟು ಪರಿಹಾರವಾಗುವ ಸಾಧ್ಯತೆ ಇಲ್ಲ ಎಂದಾಯಿತು. ರಷ್ಯಾ ಆಕ್ರಮಿತ ಪ್ರದೇಶಗಳನ್ನು ಬಿಟ್ಟುಕೊಡದ ಹೊರತು ಯುದ್ಧ ನಿಲುಗಡೆ ಮಾತುಕತೆ ಇಲ್ಲ ಎಂದು ಉಕ್ರೇನ್ ನಾಯಕ ವಾಡಮಿರ್ ಜೆಲನಸ್ಕಿ ಹೇಳಿದರೆ, ರಷ್ಯಾ ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ ಆಕ್ರಮಿತ ಪ್ರದೇಶ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಯುದ್ಧ ಮುಂದುವರಿಸಲು ಉಕ್ರೇನ್ ಈಗಾಗಲೇ ಶಸ್ತ್ರಾಸ್ತ್ರಗಳ ಅಭಾವ ಎದುರಿಸುತ್ತಿದೆ. ಹತಾಶೆಯ ಸ್ಥಿತಿ. ಈ ಮಧ್ಯೆ ಅಂತಾರಾಷ್ಟ್ರೀಯ ನಿರ್ಬಂಧಗಳ ನಡುವೆಯೂ ರಷ್ಯಾದ ಆರ್ಥಿಕ ಪರಿಸ್ಥಿತಿ ಸುಧಾರಿಸಿರುವ ವರದಿಗಳು ಪಾಶ್ಚಾತ್ಯ ಮತ್ತು ಯೂರೋಪ್ ದೇಶಗಳನ್ನು ಕಳವಳಕ್ಕೀಡು ಮಾಡಿವೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮುಂದುವರಿಯುತ್ತಿರುವಂತೆಯೇ ಪ್ಯಾಲೆಸ್ಟೇನ್ ಪ್ರದೇಶದ ಹಮಾಸ್ ಉಗ್ರವಾದಿಗಳು ಮತ್ತು ಇಸ್ರೇಲ್ ನಡುವೆ ಯುದ್ಧ ಸಿಡಿದಿದೆ. ಇದೇ ವರ್ಷದ ಅಕ್ಟೋಬರ್ ಏಳರಂದು ಹಮಾಸ್ ಉಗ್ರವಾದಿಗಳು ಇಸ್ರೇಲ್‌ಗೆ ನುಗ್ಗಿ ಸಾವಿರಾರು ಜನರನ್ನು ಕೊಂದ ಮತ್ತು ಅಪಹರಿಸಿದಘಟನೆಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಸೇನೆ ಹಮಾಸ್ ಮೇಲೆ ಮಿಲಿಟರಿ ದಾಳಿ ನಡೆಸಿದೆ. ಹಮಾಸ್ ನಿರ್ನಾಮ ಮಾಡದೆ ಸೇನೆ ಹಿಂತೆಗೆಯುವುದಿಲ್ಲ ಎಂದು ಇಸ್ರೇಲ್‌ನ ಪ್ರಧಾನಿ ನೆತಾನ್ಯಹು ಹೇಳುತ್ತಿದ್ದಾರೆ. ಮಿಲಿಟರಿ ದಾಳಿಯಲ್ಲಿ ಇದುವರೆಗೆ 21 ಸಾವಿರ ಪ್ಯಾಲೆಸ್ಟೈನ್ ಜನರು ಸತ್ತಿದ್ದಾರೆ ಎಂದು ಹೇಳಲಾಗಿದೆ. ಆಹಾರ, ಶುದ್ಧ ಕುಡಿಯುವ ನೀರು, ಆರೋಗ್ಯ ಸೌಲಭ್ಯವಿಲ್ಲದೆ ಜನರು ಪರದಾಡುತ್ತಿದ್ದಾರೆ. ಜಗತ್ತು ಹಿಂದೆಂದೂ ಕಂಡರಿಯದಂಥ ಸರ್ವನಾಶ, ಸಾವು ನೋವನ್ನು ಇಸ್ರೇಲ್ ಮಿಲಿಟರಿ ಆಕ್ರಮಣ ತಂದೊಡ್ಡಿದೆ.
ಪ್ರಜಾತಂತ್ರ ವ್ಯವಸ್ಥೆ ಜಗತ್ತಿನಲ್ಲಿ ಮತ್ತಷ್ಟು ಒತ್ತಡಕ್ಕೆ ಒಳಗಾಗಿದೆ. ಚುನಾಯಿತ ಜನಪ್ರತಿನಿಧಿಗಳು ಅಧಿಕಾರಕ್ಕೆ ಬರದಂತೆ ತಡೆದ ಮೈನಮಾರ್‌ನ ಮಿಲಿಟರಿ ಅಧಿಕಾರಿಗಳು ಸಾಮಾನ್ಯ ಜನರ ಮೇಲೆ ತಮ್ಮ ಅಟ್ಟಹಾಸವನ್ನು ಮುಂದುವರಿಸಿದ್ದಾರೆ. ಮಿಲಿಟರಿ ಆಡಳಿತದ ವಿರುದ್ದ ಒಂದು ಕಡೆಯುವಕರು ಗೆರಿಲ್ಲಾ ಮಾದರಿ ಯುದ್ಧ ಮಾಡುತ್ತಿದ್ದರೆ, ಮತ್ತೊಂದು ಕಡೆ ಪ್ರತಿಭಟನೆಗಳ ಮೂಲಕ ಮಿಲಿಟರಿ ಆಡಳಿತಕ್ಕೆ ವಿರೋಧ ಪಕ್ಷಗಳು ಸವಾಲೊಡ್ಡಿವೆ. ಆಫ್ರಿಕಾದ ಬಡ ದೇಶ ನೈಜರ್‌ನಲ್ಲಿ ನಡೆದ ಮಿಲಿಟರಿ ಕ್ಷಿಪ್ರಕ್ರಾಂತಿಯಲ್ಲಿ ಪ್ರಜಾತಂತ್ರ ಮಾರ್ಗದಲ್ಲಿ ಆಯ್ಕೆಯಾಗಿದ್ದ ಅಧ್ಯಕ್ಷರನ್ನು ಪದಚ್ಯುತಿಗೊಳಿಸಲಾಗಿದೆ. ನೆರೆಯ ಮಾಲಿ, ಬರ್ಕಿನೋ ಫಾಸೊ ದೇಶಗಳಲ್ಲಿಯೂ ಮಿಲಿಟರಿ ಕ್ರಾಂತಿಯಾಗಿದೆ. ಆಫ್ರಿಕಾ ಖಂಡದ ಘಾನಾ, ಸುಡಾನ್, ಜೈರೆ ಬರೂಂಡಿ, ಚಾಡ್, ರುವಾಂಡಾ, ಸೊಮಾಲಿಯ ದೇಶಗಳು ಈಗಾಗಲೇ ಮಿಲಿಟರಿ ಆಡಳಿತದಲ್ಲಿದ್ದು ಈ ದೇಶಗಳು ಪ್ರಜಾತಂತ್ರಕ್ಕೆ ಮರಳುವ ಸಾಧ್ಯತೆಗಳು ಕಾಣುತ್ತಿಲ್ಲ. ಅರ್ಮೇನಿಯಾ-ಅಜರ್ ಬೈಜಾನ್ ನಡುವಣ ಯುದ್ಧ, ಸುಡಾನ್‌ನಲ್ಲಿ ಸರ್ಕಾರ ಮತ್ತು ವಿರೋಧಿ ಗುಂಪಿನ ನಡುವೆ ನಡೆಯುತ್ತಿರುವ ಯುದ್ಧ ಕೊನೆಯಿಲ್ಲದೆ ಮುಂದುವರಿದಿದೆ.
ಧಾರ್‌ಫರ್ ಜನರ ಮೇಲೆ ದಾಳಿ ಮುಂದುವರಿದಿದೆ. ಸಹಸ್ರಾರು ಜನರು ಸತ್ತಿದ್ದಾರೆ. ಯೆಮನ್ ದೇಶದಲ್ಲಿ ಇರಾನ್ ಬೆಂಬಲಿತ ಹೌತಿ ಗೆರಿಲ್ಲಾಗಳು ಅಲ್ಲಿನ ಟುಟ್ಟಿಗಳ ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಈ ಗೆರಿಲ್ಲಾಗಳು ಪ್ಯಾಲೆಸ್ಟೈನ್ ಜನರನ್ನು ಬೆಂಬಲಿಸಿ ಇಸ್ರೇಲ್ ವಿರುದ್ಧಕ್ರಮಕ್ಕೆ ಮುಂದಾಗಿದ್ದಾರೆ. ಈ ದಿಸೆಯಲ್ಲಿ ಕೆಂಪುಸಮುದ್ರದ ಮೇಲೆ ಸಂಚರಿಸುವ ಇಸ್ರೇಲ್ ಸಂಬಂಧ ಪಡೆದ ಎಲ್ಲ ಸರಕು ಸಾಗಣೆ ಹಡುಗುಗಳ ಮೇಲೆ ರಾಕೆಟ್ ದಾಳಿ ಆರಂಭಿಸಿದ್ದಾರೆ. ಇದರಿಂದಾಗಿ ಗಾಜಾ ಯುದ್ಧಕ್ಕೆ ಅಂತಾರಾಷ್ಟ್ರೀಯ ಸ್ವರೂಪ ಬಂದಂತಾಗಿದೆ. ಭಾರತಕ್ಕೆ ಬರಬೇಕಿದ್ದ ಸರಕು ಸಾಗಣೆ ಹಡಗೊಂದರ ಮೇಲೆ ಡೋನ್ ಬಾಂಬ್ ದಾಳಿ ನಡೆದಿದ್ದು ಸಮಸ್ಯೆಯನ್ನು ಜಟಿಲಗೊಳಿಸಿದೆ. ತೈಲ ಹೊತ್ತ ರಷ್ಯಾದ ಹಡಗುಗಳು ಕೆಂಪು ಸಮುದ್ರದ ಮೇಲೇ ಬರಬೇಕಿದ್ದು ಹೌತಿ ಒಡ್ಡಿರುವ ಬೆದರಿಕೆ ಭಾರತದ ಇಂಧನ ಸಂಗ್ರಹದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.
ಚೀನಾ ಮತ್ತು ತೈವಾನ್ ನಡುವಣ ಬಿಕ್ಕಟ್ಟು ಹಳೆಯದು. ತೈವಾನನ್ನು ತನ್ನ ಭಾಗವಾಗಿ ಮಾಡಿಕೊಳ್ಳುವ ದಿಸೆಯಲ್ಲಿ ಮಿಲಿಟರಿ ಕಾರ್ಯಾಚರಣೆಗೂ ಚೀನಾ ಸಿದ್ಧವಿದೆ. 2023ರಲ್ಲಿ ಅತಿಕ್ರಮಣ ಆಗಬಹುದೆಂದು ಬಲವಾಗಿ ನಂಬಲಾಗಿತ್ತು. ಆದರೆ ಚೀನಾ ಹಾಗೆ ಮಾಡಿಲ್ಲ. ಈಗ ಮತ್ತೆ ಈ ವಿಚಾರ ಮುಂಚೂಣಿಗೆ ಬಂದಿದೆ. ಈ ವಿಷಯದಲ್ಲಿ ಅಮೆರಿಕ ಮತ್ತು ಚೀನಾ ನಡುವೆ ಮುಸುಕಿನ ಯುದ್ಧ ನಡೆಯುತ್ತಿದೆ.
ಖಾಲಿಸ್ತಾನಿ ಉಗ್ರವಾದಿ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತ ಸರ್ಕಾರದ ಏಜೆಂಟರ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರಡೋ ಆರೋಪ ಉಭಯ ದೇಶಗಳ ನಡುವಣ ಬಾಂಧವ್ಯ ಕೆಡಲು ಕಾರಣವಾಗಿದೆ. ಈ ಪ್ರಕರಣ ಮರೆಯುವ ಮೊದಲೇ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಸಿಖ್ ಪ್ರತ್ಯೇಕತಾವಾದಿ ಗುರು ಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ವಿಫಲ ಸಂಚಿನ ಹಿಂದೆ ಭಾರತದ ಅಧಿಕಾರಿಗಳು ಇದ್ದಾರೆ ಎಂದು ಅಮೆರಿಕ ಆರೋಪ ಮಾಡಿದ್ದು, ಇದೀಗ ಪ್ರಕರಣ ತನಿಖೆಯಲ್ಲಿದೆ.
ಬದಲಾಗುತ್ತಿರುವ ಹವಾಮಾನ ವೈಪರೀತ್ಯ ಆಡಳಿತಗಾರರಿಗೆ ದೊಡ್ಡ ಸವಾಲು. ಈ ವರ್ಷ ಜಗತ್ತಿನ ನಾನಾ ಕಡೆ ವಿಪರೀತ ಮಳೆಯಾಗಿದೆ. ಭೂಕಂಪ ಹಲವು ಕಡೆ ಕಾಣಿಸಿಕೊಂಡಿದೆ. ಚೀನಾ, ಮೊರಾಕ್ಕೋ, ಬ್ರೆಜಿಲ್, ಗ್ರೀಸ್, ಲೈಬೀರಿಯಾ ಮುಂತಾದ ದೇಶಗಳಲ್ಲಿ ಅಪಾರವಾಗಿ ಮಳೆ ಬಿದ್ದು ಪ್ರವಾಹ ಉಂಟಾಗಿ ನೂರಾರು ಜನರು ಪ್ರಾಣಕಳೆದುಕೊಂಡಿದ್ದಾರೆ. ಚಂಡಮಾರುತ ಮತ್ತು ಆ ನಂತರದ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಮಲಾವಿ, ಮುಜಾಂಬಿಕ್ ದೇಶಗಳಲ್ಲಿ 1,400 ಜನರು ಸತ್ತಿದ್ದಾರೆ. ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 60 ಸಾವಿರ ಜನರು, ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 8,000 ಸಾವಿರ ಜನರು ಮೃತರಾಗಿದ್ದಾರೆ.
ದುಬೈಯಲ್ಲಿ ಹವಾಮಾನ ಕುರಿತ ಶೃಂಗಸಭೆ ಈ ವರ್ಷ ನಡೆಯಿತು. ಹವಾಮಾನ ವೈಪರೀತ್ಯ ಕುರಿತಂತೆ ವಿಶ್ವನಾಯಕರು ಕಳವಳ ವ್ಯಕ್ತಮಾಡಿ ಹಸಿರು ಮನೆ ಪರಿಣಾಮ ತಗ್ಗಿಸಲು ಕಾರ್ಯಕ್ರಮ ರೂಪಿಸಿದ್ದಾರೆ. ಆದರೆ ತೈಲ, ಡೀಸೆಲ್, ಕಲ್ಲಿದ್ದಲು ಮತ್ತು ಅನಿಲ ಉತ್ಪಾದನೆ ಮೇಲೆ ಕಡಿವಾಣ ಹಾಕುವಲ್ಲಿ ಸಭೆ ವಿಫಲವಾಯಿತು. ಹವಾಮಾನ ವೈಪರೀತ್ಯದಿಂದ ತೊಂದರೆಗೊಳಗಾದ ದೇಶಗಳಿಗೆ ಪರಿಹಾರ ಕೊಡುವ ದೃಷ್ಟಿಯಿಂದ ನಿಧಿಯೊಂದನ್ನು ಸ್ಥಾಪಿಸಿದ್ದೇ ಈ ಶೃಂಗಸಭೆಯ ಸಾಧನೆ. ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ಮುಂದಿನ ವರ್ಷ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಲ್ಲಿರಿಸಿ ಚುನಾವಣೆ ನಡೆಸಲು ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಜಾಮೀನಿನ ಮೇಲೆ ಇದೀಗ ಅವರು ಜೈಲಿನಿಂದ ಹೊರಬಂದಿದ್ದು ಇತರ ಹಲವಾರು ಪ್ರಕರಣಗಳಲ್ಲಿ ಮೊಕದ್ದಮೆ ಎದುರಿಸಬೇಕಾಗಿ ಬಂದಿದೆ. ಈ ಮಧ್ಯೆ ನಾಲ್ಕು ವರ್ಷಗಳ ಕಾಲ ದುಬೈನಲ್ಲಿದ್ದು ಪಾಕಿಸ್ತಾನಕ್ಕೆ ವಾಪಸ್ಸಾಗಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಭಾರತದ ಜೊತೆ ಮೈತ್ರಿ ಮಾಡಿಕೊಳ್ಳುವ ಮಾತನ್ನಾಡುತ್ತಿರುವ ನವಾಜ್ ಷರೀಫ್ ಮತ್ತೆ ಅಧಿಕಾರಕ್ಕೆ ಬರುವರೇ ಎಂಬುದನ್ನು ಕಾದುನೋಡಬೇಕು.
ಅಮೆರಿಕದಲ್ಲಿ ರಾಜಕೀಯ ಕುತೂಹಲಕಾರಿಯಾಗಿದೆ. ಮುಂದಿನ ವರ್ಷ ಅಧ್ಯಕ್ಷ ಚುನಾವಣೆ ನಡೆಯಬೇಕಿದೆ. ಈಗ ನಡೆಸಿರುವ ಜನಮತ ಸಂಗ್ರಹದ ಪ್ರಕಾರ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಕಾಣಿಸುತ್ತಿವೆ. ಅವರ ಮೇಲೆ ಹಲವಾರು ಗಂಭೀರ ಪ್ರಕರಣಗಳು ವಿಚಾರಣೆಯಲ್ಲಿದ್ದು ಒಂದು ಪ್ರಕರಣದಲ್ಲಿ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಗಿದೆ. ಆದರೆ ಸುಪ್ರೀಂ ಕೋರ್ಟ್ ಉನ್ನತ ಪೀಠ ಈ ಪ್ರಶ್ನೆಯನ್ನು ಇನ್ನೂ ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ. ಅವರ ಭವಿಷ್ಯ ಇನ್ನೂ ತೂಗುಕತ್ತಿಯ ಅಂಚಿನಲ್ಲಿದೆ.
ಯೂರೋಪ್‌ನಲ್ಲಿ ಬಲಪಂಥೀಯರು ಬಲಗೊಳ್ಳುತ್ತಿದ್ದಾರೆ. ನೆದರ್ ಲ್ಯಾಂಡ್ಸ್ ಮತ್ತು ಅರ್ಜೆಂಟೈನಾದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಜನರು ಸಾಂಪ್ರದಾಯಿಕ ರಾಜಕೀಯಕ್ಕೆ ಆಘಾತವನ್ನೇ ಉಂಟುಮಾಡಿದ್ದಾರೆ.
ಈ ವರ್ಷದ ಘಟನೆಗಳು ಮತ್ತು ವಿದ್ಯಮಾನಗಳನ್ನು ನೋಡಿದರೆ 2024 ಜನರ ಪಾಲಿಗೆ ಮತ್ತಷ್ಟು ಸಂಘರ್ಷಮಯವಾಗಿ ಇರಲಿದೆ ಅನಿಸುತ್ತದೆ.
ತಿ.ನರಸೀಪುರ : ಮುಡುಕುತೊರೆಯು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ಪ್ರವಾಸೋದ್ಯಮ ಕೇಂದ್ರವೂ ಆಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು…
ಮೈಸೂರು : ರಂಗಾಯಣದ ಪ್ರತಿಷ್ಠಿತ ಉತ್ಸವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಜನವರಿ 11 ರಿಂದ 18 ರವರೆಗೆ ನಡೆಯಲಿದೆ ಎಂದು…
ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಬೆಂಗಳೂರು ನಗರದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ…
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಸ್ಥಾನದಿಂದಲೇ ಅನರ್ಹಗೊಂಡು ನ್ಯಾಯಾಲಯದ ತಡೆಯಾಜ್ಞೆಯಿಂದ ಬಚಾವ್ ಆಗಿದ್ದ ಮಾಜಿ ಸಚಿವ ಹಾಗೂ ಶಾಸಕ…
ನವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ…
ಬೆಂಗಳೂರು: ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್ ಸೀಜ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ…