ವೈಡ್ ಆಂಗಲ್ ; ಬಾ.ನಾ.ಸುಬ್ರಹ್ಮಣ್ಯ
ಜೂನ್ ೧೮ಕ್ಕೆ ಮೈಸೂರಿನ ಗಾಯತ್ರಿ ಚಿತ್ರಮಂದಿರಕ್ಕೆ ೭೭ ತುಂಬಿತು. ನಗರದಲ್ಲಿದ್ದ ೨೨ ಏಕಪರದೆಯ ಚಿತ್ರಮಂದಿರಗಳಲ್ಲಿ ಉಳಿದಿರುವ ಏಳರಲ್ಲಿ ಇದೂ ಒಂದು. ರಾಜ್ಯದ ಉಳಿದ ಎಲ್ಲ ಚಿತ್ರಮಂದಿರಗಳಿಗಿಂತ ಭಿನ್ನವಾದ ಇತಿಹಾಸ ಹೊಂದಿರುವ ಚಿತ್ರಮಂದಿರವಿದು. ತಮ್ಮ ಮುತ್ತಾತರು ಆರಂಭಿಸಿದ ಈ ಚಿತ್ರಮಂದಿರವನ್ನು ಅವರ ನಾಲ್ಕನೇ ತಲೆಮಾರಿನ ಎಂ.ಆರ್. ರಾಜಾರಾಮ್ ಈಗ ನಡೆಸುತ್ತಿದ್ದಾರೆ. ಏಕಪರದೆಯ ಚಿತ್ರಮಂದಿರಗಳು ಕಾರಣಾಂತರಗಳಿಂದ ಚಿತ್ರ ಪ್ರದರ್ಶನ ನಿಲ್ಲಿಸಿ ಇತರ ಲಾಭದಾಯಕ ವ್ಯವಹಾರಗಳಿಗೆ ಅದನ್ನು ಬಳಸುವವರ ನಡುವೆ, ರಾಜಾರಾಮ್ ಅವರಂತಹ ಅಪರೂಪದ ಪ್ರದರ್ಶಕರ ಸಂಖ್ಯೆ ಗಮನಿಸಬೇಕು.
ಗಾಯತ್ರಿ ಚಿತ್ರಮಂದಿರ ಕಟ್ಟಲು ಒತ್ತಾಸೆಯಾದವರು ಮೈಸೂರಿನ ಅರಸರಾದ ಜಯಚಾಮರಾಜ ಒಡೆಯರ್ ಅವರು. ರಾಜಾರಾಮ್ ಅವರ ಮುತ್ತಾತ ಟಿ. ಚೆಲುವಾಚಾರ್ ಮತ್ತು ಅವರ ತಂದೆ ಮೇಸ್ತ್ರಿ ತಿಮ್ಮಯ್ಯಾಚಾರ್ ಅರಮನೆಯಲ್ಲಿ ಗುತ್ತಿಗೆದಾರರಾಗಿದ್ದರು. ಸಿನಿಮಾಗಳನ್ನು ನೋಡುವ ಹವ್ಯಾಸ ವಿದ್ದ ಜಯಚಾಮರಾಜ ಒಡೆಯರ್ ಅವರು ಅದಕ್ಕಾಗಿ ಬೆಂಗಳೂರಿನ ದಂಡು ಪ್ರದೇಶದಲ್ಲಿರುವ ಚಿತ್ರಮಂದಿರಕ್ಕೆ ಹೋಗುತ್ತಿದ್ದರು. ಮೈಸೂರಿನಲ್ಲಿ ಚಿತ್ರ ಮಂದಿರ ಇರಲಿಲ್ಲ ಎಂದೇನೂ ಅಲ್ಲ; ಇಲ್ಲಿ ಸಾಕಷ್ಟು ಸೌಲಭ್ಯ, ಸೌಕರ್ಯ ಗಳಿರಲಿಲ್ಲ. ಸ್ವಾತಂತ್ರ್ಯ ಪೂರ್ವದ ದಿನಗಳ ಮಾತಿದು.
ಮೈಸೂರಿನಲ್ಲಿ ಅರಮನೆಯ ಬಳಿ ಚಿತ್ರಮಂದಿರವೊಂದನ್ನು ಕಟ್ಟುವಂತೆ ಜಯಚಾಮರಾಜ ಒಡೆಯರ್ ಅವರು ಚೆಲುವಾಚಾರ್ ಅವರಿಗೆ ಹೇಳುತ್ತಾರಲ್ಲದೆ ಅದಕ್ಕಾಗಿ ಮೂಲಧನವನ್ನೂ ನೀಡುತ್ತಾರೆ. ಬಸವೇಶ್ವರ ವೃತ್ತದ ಬಳಿ ಗಾಯತ್ರಿ ಚಿತ್ರಮಂದಿರದ ಕೆಲಸ ೧೯೪೬ರಲ್ಲಿ ಆರಂಭವಾಗಿ, ೧೯೪೮ರ ಜೂನ್ ೧೮ರಂದು ಪ್ರದರ್ಶನ ಆರಂಭಿಸುತ್ತದೆ. ಉದ್ಘಾಟನೆ ಮಾಡಿದವರು ಜಯಚಾಮರಾಜ ಒಡೆಯರ್. ಅಲ್ಲಿ ಬಿಡುಗಡೆಯಾದ ಮೊದಲ ಚಿತ್ರ ‘ಸಿಂದ್‌ಬಾದ್, ದ ಸೈಲರ್’ ಅವಿನ್ನೂ ವಿದೇಶೀ ಚಿತ್ರಗಳ ದಿನಗಳು.
ಗಾಯತ್ರಿ ಚಿತ್ರಮಂದಿರ ಎಂದರೆ ಇಂಗ್ಲಿಷ್ ಚಿತ್ರಗಳದು ಎನ್ನುವ ಮಾತೂ ಇತ್ತು. ವರದಿಗಳ ಪ್ರಕಾರ, ೧೯೭೨ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಹಾಲಿವುಡ್ ಚಿತ್ರಗಳನ್ನು ತರಿಸುವುದನ್ನು ನಿಷೇಧಿಸಿದ ನಂತರ ಯುರೋಪಿನ ಚಿತ್ರಗಳ ಪ್ರದರ್ಶನ ಅಲ್ಲಿ ಆರಂಭವಾಯಿತು. ನಂತರ ಭಾರತೀಯ ಭಾಷಾ ಚಿತ್ರಗಳು. ತಮಿಳು, ತೆಲುಗು ಚಿತ್ರಗಳು. ಅವು ಬೆಳಗಿನ ಪ್ರದರ್ಶನ. ಅಲ್ಲಿ ಪ್ರದರ್ಶನ ಕಂಡ ಮೊದಲ ಕನ್ನಡ ಚಿತ್ರ ಡಾ.ರಾಜಕುಮಾರ್ ಅಭಿನಯದ ‘ದೂರದ ಬೆಟ್ಟ’ ಅದು ರಜತ ಮಹೋತ್ಸವ ಕಂಡಿತು. ಅದರ ನಂತರ ಕನ್ನಡ ಚಿತ್ರಗಳು ಅಲ್ಲಿ ವಿಜೃಂಭಿಸತೊಡಗಿದವು. ರಾಜಮನೆತನದ ಮಂದಿ ಸಿನಿಮಾ ವೀಕ್ಷಣೆಯ ದಿನಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುತ್ತಿರಲಿಲ್ಲ. ‘ರಾಜಕುಟುಂಬದ ಅನುಕೂಲಕ್ಕಾಗಿ ಇಂದು ಸಾರ್ವಜನಿಕ ಪ್ರದರ್ಶನ ಇಲ್ಲ’ ಎಂದು ಚಿತ್ರಮಂದಿರದ ಮುಂದೆ ಫಲಕ ಹಾಕುತ್ತಿದ್ದರು.
ಕೊರೊನಾ ದಿನಗಳಲ್ಲಿ ಚಿತ್ರಮಂದಿರಗಳನ್ನು ಸರ್ಕಾರದ ಆದೇಶದಂತೆ ಮುಚ್ಚಲಾಗಿತ್ತು. ಮೊದಲು ಆಸನ ಸಂಖ್ಯೆಯ ೫೦%, ನಂತರ ೧೦೦% ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲಾಯಿತು. ಕೊರೊನಾ ದಿನಗಳು ಇತರ ಕ್ಷೇತ್ರಗಳಂತೆ, ಚಿತ್ರೋದ್ಯಮಕ್ಕೂ ಸಾಕಷ್ಟು ಆಘಾತ ಉಂಟುಮಾಡಿದ್ದವು. ಆ ಸಂದರ್ಭದಲ್ಲಿ ವಿಜೃಂಭಿಸಿದ ಒಟಿಟಿ ತಾಣಗಳು, ಪ್ರೇಕ್ಷಕರನ್ನು ಚಿತ್ರಮಂದಿರ ದತ್ತ ಬರದಂತೆ ಮಾಡಿದ್ದೂ ಹೌದು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಎಲ್ಲ ಭಾಷೆಗಳ ಚಿತ್ರಗಳನ್ನು ಮನೆಯಲ್ಲೇ ಕುಳಿತು ನೋಡಲು ಸಿಕ್ಕಿದ ಅವಕಾಶ, ಚಿತ್ರಗಳ ಗುಣಮಟ್ಟವನ್ನು ಗ್ರಹಿಸಲು ಸಾಧ್ಯಮಾಡಿಕೊಟ್ಟಿತು. ಭಾಷಾತೀತವಾಗಿ ಗುಣಮಟ್ಟದ ಚಿತ್ರಗಳ ಪಾಲಿಗೆ ಇದು ವರವಾಯಿತು.
ಕರ್ನಾಟಕದಲ್ಲಿ ಏಕಪರದೆಯ ಚಿತ್ರಮಂದಿರಗಳು ಮುಚ್ಚತೊಡಗಿದವು. ಪ್ರೇಕಕ್ಷರು ಬರುತ್ತಿಲ್ಲ , ಜನಪ್ರಿಯ ನಟರ ಚಿತ್ರಗಳಿಲ್ಲ ಹೀಗೆ ತಮ್ಮ ತಮ್ಮ ಮೂಗಿನ ನೇರಕ್ಕೆ ಕಾರಣಗಳನ್ನು ಹುಡುಕುವ ಕೆಲಸ ಪರಂತು ಅದರಾಚೆ ಇನ್ನೇನಾದರೂ ಇದೆಯೇ ಎನ್ನುವುದರತ್ತ ಸಂಬಂಧಪಟ್ಟವರ ಗಮನ ಹರಿದದ್ದು ಕಡಿಮೆ. ಚಿತ್ರಮಂದಿರವೊಂದರ ಮಾಸಿಕ ಖರ್ಚುವೆಚ್ಚಗಳು ಹೆಚ್ಚಾದ ಕಾರಣ ಕೊರೊನಾ ನಂತರ ಸಾಕಷ್ಟು ವಿನಾಯಿತಿಗಳನ್ನು ಪ್ರದರ್ಶಕ ವಲಯ ಕೋರಿತ್ತು. ಅದು ವಿಫಲವಾಯಿತೆನ್ನಿ.
ಕೊರೊನಾ ನಂತರದ ದಿನಗಳಲ್ಲಿ ರಾಜಾರಾಮ್ ಅವರು ಸ್ಥಳೀಯ ಯುಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಪ್ರದರ್ಶಕರು, ಅದರಲ್ಲೂ ಪ್ರತ್ಯೇಕವಾಗಿ ಮೈಸೂರಿನವರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಅದು ವಾರ್ಷಿಕ ಆಸ್ತಿ ತೆರಿಗೆಯ ವಿಷಯ. ರಾಜ್ಯದ ಬೇರೆ ಯಾವ ಪ್ರದೇಶ ದಲ್ಲೂ ಇಲ್ಲದ ಆಸ್ತಿ ತೆರಿಗೆ ಮೈಸೂರಿನಲ್ಲಿದೆ ಎನ್ನುತ್ತಾರೆ ಅವರು. ಮೈಸೂರಿನ ಸಂಗಂ ಚಿತ್ರಮಂದಿರ ವಾರ್ಷಿಕ ೭,೯೨,೦೦೦ ರೂ. ಆಸ್ತಿ ತೆರಿಗೆ ಪಾವತಿಸಿದರೆ, ಬೆಂಗಳೂರಿನ ನವರಂಗ್ ಚಿತ್ರಮಂದಿರಕ್ಕೆ ಇದು ೮೨,೦೦೦ ರೂ ಮಾತ್ರ. ಈ ಮೊತ್ತ ಎಂದರೆ, ಮಾಹೆಯಾನ ೬೦ -೬೫ ಸಾವಿರ ರೂಗಳು! ಎಲ್ಲೋ ತಪ್ಪಾಗಿದೆ, ಸರಿಮಾಡಿ ಎಂದು ಸಂಬಂಧಪಟ್ಟವರನ್ನೆಲ್ಲ ಕೋರಿದ್ದಾಯಿತು. ಸರ್ಕಾರಕ್ಕೂ ಬರೆದಾಯಿತು. ಆದರೆ ಫಲಿತಾಂಶ ಸೊನ್ನೆ. ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಲು ಏರದೆ ವಿಧಿ ಇರಲಿಲ್ಲ.
ಚಿತ್ರರಂಗವನ್ನು ‘ಉದ್ಯಮ’ ಎಂದು ಪ್ರಕಟಿಸಿದೆ. ಇದು ಕಾರ್ಮಿಕರಿಗೆ ಸಂಬಂಧಪಟ್ಟಂತೆ ಇರುವ ಕಾನೂನುಗಳಿಗೆ ಅನ್ವಯಿಸುತ್ತದೆ ಹೊರತು, ಮಾಲೀಕರಿಗೆ ಸಿಗಬಹುದಾದ/ಪಡೆದುಕೊಳ್ಳಬಹುದಾದ ಸೌಕರ್ಯ, ಸೌಲಭ್ಯಗಳಿಗೆ ಸಂಬಂಧಪಟ್ಟಂತೆ ಇಲ್ಲ ಎನ್ನುತ್ತಾರೆ ರಾಜಾರಾಮ್. ಕೊರೊನಾ ನಂತರ ನಮ್ಮ ನೆರೆಯ ರಾಜ್ಯಗಳು ಚಿತ್ರೋದ್ಯಮಕ್ಕೆ ಸಾಕಷ್ಟು ರಿಯಾಯಿತಿ ಕೊಟ್ಟಿವೆ, ನೆರವು ನೀಡಿದೆ. ಆದರೆ ನಮ್ಮಲ್ಲಿ ಅಂತಹ ಕೆಲಸ ಆಗಿಲ್ಲ. ಇತರ ರಾಜ್ಯಗಳಲ್ಲಿ ಏಕಪರದೆಯ ಚಿತ್ರಮಂದಿರಗಳು ಕೊರೊನಾ ನಂತರವೂ ಸಾಕಷ್ಟು ತಲೆ ಎತ್ತಿವೆ ಎನ್ನುವುದನ್ನು ಗಮನಿಸಿದ್ದಾರೆ ಅವರು. ಚಿತ್ರಮಂದಿರಗಳ ನೋಂದಣಿ ನವೀಕರಣವೂ ಅಷ್ಟೇ. ವಿದ್ಯುತ್ ಇಲಾಖೆ, ಅಗ್ನಿಶಾಮಕ ದಳ, ಲೋಕೋಪಯೋಗಿ ಇಲಾಖೆ,ಆರೋಗ್ಯ ಇಲಾಖೆ ಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಬೇಕು, ನಂತರ ಜಿಲ್ಲಾಧಿಕಾರಿಗಳಿಂದ ನೋಂದಣಿ ನವೀಕರಿಸಬೇಕು. ಎಲ್ಲ ಹಂತಗಳಲ್ಲಿ ಏನಾಗುತ್ತದೆ, ಏನು ನಿರೀಕ್ಷೆಗಳಿರುತ್ತವೆ ಎನ್ನುವುದು ಸ್ವಯಂ ವೇದ್ಯ. ಈ ನಡುವೆ, ನೋಂದಣಿ ಆದ ಮೇಲೆ, ಟ್ರೇಡ್ ಲೈಸನ್ಸ್ ಪಡೆದುಕೊಳ್ಳಬೇಕು ಎನ್ನುವ ಹೊಸ ನಿಯಮವೂ ಬಂದಿದೆ. ಪ್ರದರ್ಶಕರು ಇವುಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ.
ಏಕ ಪರದೆಯ ಚಿತ್ರಮಂದಿರಗಳು ಕರ್ನಾಟಕದಲ್ಲಿ ಹೊಸದಾಗಿ ತಲೆ ಎತ್ತಿಲ್ಲ. ಎಲ್ಲರೂ ಮುಚ್ಚುವ ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರ ಚಿತ್ರಮಂದಿರಗಳ ನಿರ್ಮಾಣಕ್ಕೆ ಸಹಾಯಧನ ಪ್ರಕಟಿಸಿದ್ದು, ಅವರ ಗಮನದಲ್ಲಿದೆ. ಚಿತ್ರಮಂದಿರಗಳ ನಿರ್ಮಾಣಕ್ಕೆ ಈ ಹಿಂದೆ ಇದ್ದ ಸಿನಿಮಾಟೋಗ್ರಾಫ್ ಕಾಯಿದೆಯಲ್ಲಿ ಹೆಚ್ಚು ಬದಲಾವಣೆಗಳೇನೂ ಆಗಿಲ್ಲ. ಹಾಗಾಗಿ ಅತ್ತ ಹೋಗಲು ಬಹುಶಃ ಯಾರೂ ಉತ್ಸುಕರಾಗಿಲ್ಲ. ಮಲ್ಟಿಪ್ಲೆಕ್ಸ್‌ಗಳ ನಿರ್ಮಾಣ ನೆರೆಯ ರಾಜ್ಯಗಳಲ್ಲಿ ಕರ್ನಾಟಕದಷ್ಟು ಇಲ್ಲ. ಅಲ್ಲಿ ಸಿನಿಮಾ ಪ್ರವೇಶದರ ಸರ್ಕಾರದ ನಿಯಂತ್ರಣದಲ್ಲಿದೆ. ನಮ್ಮಲ್ಲಿ ಗರಿಷ್ಟ ಪ್ರವೇಶದರ ಕುರಿತ ಪ್ರಕಟಣೆ ಆಗಿದೆ ಹೊರತು ಅದಕ್ಕೆ ಬೇಕಾದ ಆದೇಶ ಆಗಿಲ್ಲ. ಪ್ರವೇಶ ದರ ಹೆಚ್ಚಾದಷ್ಟು ಮಲ್ಟಿಪ್ಲೆಕ್ಸ್‌ಗಳಿಗೆ ಅದರ ಅನುಕೂಲ ಹೆಚ್ಚು ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್‌ಗಳ ಜೊತೆ ನಿವೇಶನೋದ್ಯಮಿಗಳು ಸೇರಿದ್ದು, ಅವರಿಗೆ ರಾಜಕಾರಣಿಗಳ ಅಭಯಹಸ್ತವೂ ಇದೆ ಎನ್ನುವ ಮಾತು ಹುಸಿಯಾಗಿರಲಾರದೇನೋ! ಹಾಗಿಯೇ ರಾಜ್ಯದಲ್ಲಿ ಸಾಕಷ್ಟು ಮಲ್ಟಿಪ್ಲೆಕ್ಸ್ ಗಳು ತಲೆ ಎತ್ತಿವೆ, ತಲೆ ಎತ್ತುತ್ತಿವೆ.
ಮಲ್ಟಿಪ್ಲೆಕ್ಸ್‌ಗಳು ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುತ್ತಿಲ್ಲ ಎನ್ನುವ ಆರೋಪ ಹೊಸದೇನೂ ಅಲ್ಲ. ಅವುಗಳ ಮಾಲೀಕರು ಬಹುತೇಕ ಹೊರಗಿನವರು. ದೇಶವಿದೇಶಗಳ ಚಿತ್ರಗಳನ್ನು ಅಲ್ಲಿ ಪ್ರದರ್ಶಿಸುವ ಮಂದಿ, ರಾಜ್ಯಭಾಷೆಯ ಚಿತ್ರಗಳಿಗೆ ನೀಡಬೇಕಾದ ಆದ್ಯತೆಯನ್ನು ನೀಡುತ್ತಿಲ್ಲ. ಮೈಸೂರಿನಲ್ಲಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳ ಜೊತೆಗೆ ಹಿಂದಿ, ಇಂಗ್ಲಿಷ್, ಜಪಾನಿ ಭಾಷೆಯ ಚಿತ್ರಗಳ ಪ್ರದರ್ಶನ! ಬೆಂಗಳೂರಿನಲ್ಲೋ ಇವುಗಳಷ್ಟೇ ಅಲ್ಲದೆ ಜೊತೆಗೆ ಒರಿಯಾ, ಅಸ್ಸಾಮಿ, ಬಂಗಾಲಿ, ಗುಜರಾತಿ, ನೇಪಾಳಿ, ಪಂಜಾಬಿ ಭಾಷೆಗಳ ಚಿತ್ರಗಳು!
ಕನ್ನಡ ಚಿತ್ರಗಳಿಗೆ ಸರಿಯಾದ ವೇಳೆ ನೀಡುತ್ತಿಲ್ಲ ಎನ್ನುವುದು ಬಹುತೇಕ ನಿರ್ಮಾಪಕರ ಅಳಲು. ಪರಭಾಷೆಯ ಚಿತ್ರಗಳು, ಅದರಲ್ಲೂ ಅದ್ಧೂರಿ ನಿರ್ಮಾಣ ವೆಚ್ಚದ ಪರಭಾಷೆಯ ಚಿತ್ರಗಳು ತೆರೆಕಾಣುವಾಗಲಂತೂ ಮಲ್ಟಿಪ್ಲೆಕ್ಸ್ ಮಂದಿ ಕನ್ನಡ ಚಿತ್ರಗಳನ್ನು ಕಿತ್ತುಹಾಕುತ್ತಾರೆ ಎನ್ನುವುದು ಹೊಸ ಮಾತೇನೂ ಅಲ್ಲ. ಈ ವಾರ ತೆರೆಕಂಡ ‘ಸಿತಾರೆ ಜಮೀನ್ ಪರ್’ ಮತ್ತು ‘ಕುಬೇರ’ ಚಿತ್ರಗಳು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕನ್ನಡ ಚಿತ್ರಗಳ ಪಾಲಿಗೆ ದುಸ್ವಪ್ನವಾಗಿದ್ದರೆ ಆಶ್ಚರ್ಯವಿಲ್ಲ. ಕಳೆದ ವಾರ ತೆರಕಂಡ ‘ಮಾದೇವ’ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿತ್ತು. ಅದನ್ನು ಸಾಕಷ್ಟು ಚಿತ್ರಮಂದಿರಗಳಿಂದ ಕಿತ್ತುಹಾಕುವ ಪ್ರಯತ್ನ ನಡೆದಿದೆ. ವಾಣಿಜ್ಯ ಮಂಡಳಿಗೂ ಈ ಬಗ್ಗೆ ದೂರು ಹೋಗಿತ್ತು.
ಗಾಯತ್ರಿ ಚಿತ್ರಮಂದಿರದಲ್ಲೂ ‘ಮಾದೇವ’ ಪ್ರದರ್ಶನ ಕಾಣುತ್ತಿದೆ. ಮೊದಲ ವಾರಕ್ಕಿಂತ ಎರಡನೇ ವಾರ ಗಳಿಕೆ ಇನ್ನಷ್ಟು ಚೆನ್ನಾಗಿದೆಯಂತೆ. ಮಲ್ಟಿಪ್ಲೆಕ್ಸ್‌ಗಳು ತಮ್ಮ ಗಳಿಕೆಯನ್ನಷ್ಟೇ ಗಮನದಲ್ಲಿ ಇರಿಸಿಕೊಂಡಿರುತ್ತವೆ. ಈ ಹಿಂದೆಯೂ ಪ್ರಸ್ತಾಪಿಸಿದ ಹಾಗೆ, ಚಿತ್ರವೊಂದು ಜನಭರಿತವಾಗಿ ೧೦೦ ದಿನಗಳ ಪ್ರದರ್ಶನ ಕಂಡರೆ ಅದರ ಗಳಿಕೆಯ ೨/೩ ಭಾಗ ಮಲ್ಟಿಪ್ಲೆಕ್ಸ್‌ಗಳ ಪಾಲಿಗಾದರೆ, ಉಳಿದ ೧/೩ ಭಾಗ ನಿರ್ಮಾಪಕರ ಪಾಲಿಗೆ. ಈ ಲೆಕ್ಕಾಚಾರವೇ ಕನ್ನಡ ಚಿತ್ರಗಳ ಬಗೆಗೆ ಮಲ್ಟಿಪ್ಲೆಕ್ಸ್‌ಗಳ ಅನಾದರಕ್ಕೆ ಕಾರಣ. ಹಳೆಯ ಏಕ ಪರದೆಯ ಚಿತ್ರಮಂದಿರಗಳಿಗೆ ಬೇಕಾದ ಅನುಕೂಲಗಳನ್ನು ಸಂಬಂಧಪಟ್ಟವರು ಮಾಡಿ ಕೊಡಬೇಕು. ಹೊಸದಾಗಿ ಬರುವವರಿಗೆ ಚಿತ್ರ ಮಂದಿರ ಕಟ್ಟಲು ಬೇಕಾದ ನಿಯಮಾವಳಿಗಳನ್ನು ಸಡಿಲಿಸಬೇಕು. ೭೮ಕ್ಕೆ ಕಾಲಿಟ್ಟಿರುವ ಗಾಯತ್ರಿ ಚಿತ್ರಮಂದಿರಕ್ಕೆ ಅಭಿನಂದನೆ, ಶುಭಾಶಯ
” ಮೈಸೂರಿನಲ್ಲಿ ಅರಮನೆಯ ಬಳಿ ಚಿತ್ರಮಂದಿರವೊಂದನ್ನು ಕಟ್ಟುವಂತೆ ಜಯಚಾಮರಾಜ ಒಡೆಯರ್ ಅವರು ಚೆಲುವಾಚಾರ್ ಅವರಿಗೆ ಹೇಳುತ್ತಾರಲ್ಲದೆ ಅದಕ್ಕಾಗಿ ಮೂಲಧನವನ್ನೂ ನೀಡುತ್ತಾರೆ. ಬಸವೇಶ್ವರ ವೃತ್ತದ ಬಳಿ ಗಾಯತ್ರಿ ಚಿತ್ರಮಂದಿರದ ಕೆಲಸ ೧೯೪೬ರಲ್ಲಿ ಆರಂಭವಾಗಿ, ೧೯೪೮ರ ಜೂನ್ ೧೮ರಂದು ಪ್ರದರ್ಶನ ಆರಂಭಿಸುತ್ತದೆ. ಉದ್ಘಾಟನೆ ಮಾಡಿದವರು ಜಯಚಾಮರಾಜ ಒಡೆಯರ್. ಅಲ್ಲಿ ಬಿಡುಗಡೆಯಾದ ಮೊದಲ ಚಿತ್ರ ‘ಸಿಂದ್‌ಬಾದ್, ದ ಸೈಲರ್’ ಅವಿನ್ನೂ ವಿದೇಶೀ ಚಿತ್ರಗಳ ದಿನಗಳು.”
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…