ಜಯಶಂಕರ್ ಬದನಗುಪ್ಪೆ
ಇತ್ತೀಚೆಗೆ ಹೆಚ್ಚುತ್ತಿರುವ ವನ್ಯ ಪ್ರಾಣಿಗಳು ಮತ್ತು ಮಾನವ ಸಂಘರ್ಷ ಕಳವಳಕಾರಿಯೆನಿಸಿದೆ. ಈಗಷ್ಟೇ ನಡೆದ ಹುಲಿ ಗಣತಿಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ಏಷ್ಯಾದಲ್ಲಿ ದಟ್ಟ ಅರಣ್ಯಗಳನ್ನು ಹೊಂದಿರುವ ಭಾರತ ಹುಲಿ ಸಂತತಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಆದರೆ ಇತ್ತೀಚೆಗೆ ಮಾನವನ ಅವಶ್ಯಕತೆಗಳಿಗಾಗಿ ಅರಣ್ಯ ಪ್ರದೇಶಗಳು ಒತ್ತುವರಿಯಾಗುತ್ತಿರುವುದು, ರೆಸಾರ್ಟ್‌ಗಳಂತಹ ಹೊಸ ವ್ಯಾಪಾರ ಪರಿಕಲ್ಪನೆಗಳು, ಅರಣ್ಯ ಸಂಪತ್ತಿನ ಸ್ವಾರ್ಥ ಬಳಕೆ, ಮರಗಳ ಹನನದಂತಹ ಪರಿಸರ ವಿರೋಧಿ ಚಟುವಟಿಕೆಗಳು ದಟ್ಟ ಅರಣ್ಯವನ್ನು ಕರಗಿಸುತ್ತಿವೆ. ಇದರಿಂದ ದಟ್ಟಡವಿಯ ಮಧ್ಯಭಾಗದಲ್ಲಿ ತಂಪಾದ, ಸುರಕ್ಷಿತ ನೆಲೆಯನ್ನು ಕಂಡುಕೊಂಡಿದ್ದ ವ್ಯಾಘ್ರ ಸಂತತಿ ಒಳಗೊಂಡಂತೆ ಹಲವು ವನ್ಯಮೃಗಗಳು ದಿಕ್ಕು ತೋಚದಂತಾಗಿವೆ.
ಇದಲ್ಲದೆ, ಸ್ವಾಭಾವಿಕವಾಗಿ ಲಭ್ಯವಿದ್ದ ನೀರು ಮತ್ತು ಆಹಾರ ಸಂಪ ನ್ಮೂಲಗಳ ಕೊರತೆಯೂ ಇತ್ತೀಚೆಗೆ ಅವುಗಳನ್ನು ಹೆಚ್ಚಾಗಿ ಕಾಡತೊಡಗಿದೆ. ಹಾಗಾಗಿ ಅವು ಪರ್ಯಾಯ ಮಾರ್ಗಗಳನ್ನು ಹುಡುಕುವ ಅನಿವಾರ್ಯ ತೆಯಲ್ಲಿ ಸಿಲುಕಿ ನಾಡಿಗೆ ಲಗ್ಗೆ ಇಡುತ್ತಿವೆ. ಉದಾಹರಣೆಗೆ ಹುಲಿ-ಚಿರತೆ ಯಂತಹ ವನ್ಯಮೃಗಗಳು ಆಹಾರಕ್ಕಾಗಿ ಜಿಂಕೆ, ಸಾಂಬಾರ್, ಕಾಡೆಮ್ಮೆ, ಕಾಡುಹಂದಿ, ಮೊಲ, ಕಾಡುಕುರಿಯಂತಹ ಪ್ರಾಣಿಗಳನ್ನೇ ಅವಲಂಬಿಸಿವೆ. ಇಂತಹ ಜೀವಸಂಕುಲಗಳ ಕೊರತೆಯನ್ನೂ ರಾಜ್ಯದ ಅರಣ್ಯಗಳು ಇಂದು ಎದುರಿಸುತ್ತಿವೆ. ಹುಲಿ ಸಂತತಿ ಹೆಚ್ಚಳವಾಗುವುದೊಂದೇ ಮುಖ್ಯವಲ್ಲ. ಅವು ಆಶ್ರಯಪಡೆದಿರುವ ಅಡವಿಗಳು ದಟ್ಟವಾಗಿವೆಯೇ? ಅಲ್ಲಿ ಆಹಾರದ ಕೊರತೆ ಇದೆಯೇ? ನೀರಿನ ಕೊರತೆ ಇದೆಯೇ? ವನ್ಯಜೀವಿಗಳ ಆವಾಸಸ್ಥಾನ ಅರಣ್ಯಗಳು ವಿಸ್ತೀರ್ಣದಲ್ಲಿ ಕಿರಿದಾಗುತ್ತಿವೆಯೇ? ಎಂಬ ಪ್ರಶ್ನೆಗಳೂ ಪ್ರಮುಖವಾಗುತ್ತವೆ. ಈ ಅಂಶಗಳನ್ನು ಕಡೆಗಣಿಸಿ ಹುಲಿ ಸಂತತಿ ಹೆಚ್ಚಳಕ್ಕಷ್ಟೇ ಗಮನ ಕೇಂದ್ರೀಕರಿಸಿದಾಗ ಹುಲಿ, ಚಿರತೆಗಳು, ಆನೆಗಳು ಮತ್ತಿತರ ವನ್ಯಪ್ರಾಣಿ ಗಳು ನಾಡಿಗೆ ಬರುವುದನ್ನು ತಡೆಯುವುದು ಸಾಧ್ಯವಾಗದ ಮಾತು.
ವನ್ಯ ಮೃಗಗಳು ತಮ್ಮ ಅಸ್ತಿತ್ವಕ್ಕೆ, ನೆಮ್ಮದಿಗೆ ಧಕ್ಕೆ ಒದಗಿದಾಗ ವಿಚಲಿತ ಗೊಂಡು, ರೈತರ ಜಮೀನುಗಳಿಗೆ, ಗ್ರಾಮಗಳೆಡೆಗೆ ಸಂಚಾರ ಆರಂಭಿಸುತ್ತವೆ. ಅರಣ್ಯಗಳ ದಟ್ಟಣೆ ಈಗ ಮೊದಲಿನಷ್ಟು ಇಲ್ಲ. ಮೊದಲಿಗಿಂತಲೂ ವಿರಳವಾಗಿವೆ. ಜತೆಗೆ ಸಂರಕ್ಷಿತ ಅರಣ್ಯಗಳಲ್ಲಿ ‘ಸಫಾರಿ ಈಗ ಜನರ ಆಕರ್ಷಣೆಯೂ ಆಗಿದ್ದು, ಅರಣ್ಯ ಇಲಾಖೆಗೆ ಆದಾಯ ತರುವ ಉದ್ಯಮವಾಗಿಯೂ ಬದಲಾಗಿದೆ. ಅರಣ್ಯ ಮತ್ತು ವನ್ಯಜೀವಿಗಳ ಬಗೆಗಿನ ಅಧ್ಯಯನದ ದೃಷ್ಟಿಯಿಂದ ಸಫಾರಿ ಅಗತ್ಯವೆನಿಸಿದರೂ ವಾಹನಗಳ ಶಬ್ದ, ಹೊಗೆ ಮತ್ತು ಇಂಧನದ ವಾಸನೆ, ವನ್ಯಮೃಗಗಳನ್ನು ಕಂಡಾಗ ಸಫಾರಿಗರಿಂದ ಕೇಳಿಬರುವ ಗೌಜು ಗದ್ದಲ, ವಾಹನಗಳ ಲೈಟ್ ಬೆಳಕು… ಇಂತಹ ಎಲ್ಲ ಸನ್ನಿವೇಶಗಳಿಗೂ ಬಫರ್ ಜೋನ್‌ನಲ್ಲಿ ಸಂಚರಿಸುವ ವನ್ಯಮೃಗಗಳು ಸಹಜವಾಗಿ ಹೊಂದಿಕೊಂಡಿರುತ್ತವೆ. ಇಂತಹ ಸಹಜ ಹೊಂದಿಕೊಳ್ಳುವಿಕೆಯಿಂದಾಗಿ ಯಾವ ಭಯವೂ ಇಲ್ಲದೆ ಅವು ಸಲೀಸಾಗಿ ನಾಡನ್ನು ಪ್ರವೇಶಿಸುತ್ತವೆ.
ಅರಣ್ಯದ ಹೊರವಲಯ ಕುರುಚಲು ಕಾಡು ಹುಲಿಗಳಂತಹ ವನ್ಯ ಜೀವಿಗಳಿಗೆ ವಾಸಯೋಗ್ಯ ಸ್ಥಳವಲ್ಲ. ದಟ್ಟ ಕಾನನವೇ ಅವುಗಳಿಗೆ ಸೂಕ್ತ. ಒಂದು ಕಾಡಿನ ಸಮೃದ್ಧತೆ ವನ್ಯಮೃಗಗಳ ವಾಸಯೋಗ್ಯ ವಾತಾವರಣದ ಸೂಚ್ಯಂಕ. ಈಗ ಕಾಡಿನ ಸಾಂದ್ರತೆ ಕಡಿಮೆಯಾಗಿರುವುದರಿಂದ ಅವುಗಳಿಗೆ ರೈತರ ಜಮೀನಿನ ಅಕ್ಕಪಕ್ಕದಲ್ಲಿರುವ ಸಣ್ಣಪುಟ್ಟ ಗುಡ್ಡ ಪ್ರದೇಶಗಳು, ಕುರುಚಲು ಕಾಡುಗಳಿಗೂ ದಟ್ಟಾರಣ್ಯಕ್ಕೂ ವ್ಯತ್ಯಾಸವೇ ತಿಳಿಯದಂತಾಗಿದೆ. ವನ್ಯ ಮೃಗಗಳು ಮಾನವನ ಪರಿಸರಕ್ಕೆ ಒಗ್ಗಿಕೊಳ್ಳುವಿಕೆಯಿಂದಾಗಿಯೇ ಊರಿಗೆ ಬರುವ ಹುಲಿ, ಚಿರತೆಯಂತಹ ಪ್ರಾಣಿಗಳು ವಾಹನಗಳ ಸಂಚಾರ ಮತ್ತು ಬೆಳಕು ಕಂಡಾಗಲೂ ವಿಚಲಿತವಾಗದೆ ತಮ್ಮಷ್ಟಕ್ಕೆ ನಿರ್ಲಿಪ್ತವಾಗಿರುತ್ತವೆ.
ಹುಲಿಗಳ ಸಂತತಿ ಹೆಚ್ಚಾದಂತೆಲ್ಲಾ ಚಿರತೆಗಳ ಬದುಕು ದುಸ್ತರವಾಗುತ್ತದೆ. ಹುಲಿಯ ದಾಳಿಯಿಂದ ತಪ್ಪಿಸಿಕೊಂಡು ಬದುಕುವುದು ಚಿರತೆಗೆ ಕರಗತವಾದ ಕಲೆ, ಅವುಗಳ ಬದುಕಿನ ಶೈಲಿಯೇ ಹಾಗೆ, ಹುಲಿಗಳ ದಾಳಿಯ ಭಯದಿಂದಾಗಿಯೂ ಚಿರತೆಗಳು ತಲೆಮರೆಸಿಕೊಂಡು ಬದುಕಲು ನಾಡಿನತ್ತ ಪಲಾಯನಗೈಯುತ್ತವೆ. ವನ್ಯಮೃಗಗಳಲ್ಲಿರುವ ಎಲ್ಲೆಗಟ್ಟಿನ ಟೆರಿಟರಿ) ಅಲಿಖಿತ ನೈಸರ್ಗಿಕ ನಿಯಮವೂ ಇಂತಹ ಪಲಾಯನಕ್ಕೆ ಕಾರಣವಾಗುತ್ತದೆ. ಒಂದು ಬಲಿಷ್ಠ ಹುಲಿಯು ಗುರುತಿಸಿಕೊಂಡಿರುವ ಗಡಿಯನ್ನು ಮತ್ತೊಂದು ಹುಲಿ ದಾಟಬೇಕೆಂದರೆ ಅದಕ್ಕೆ ಗೆಲ್ಲುವ ತಾಕತ್ತು ಇರಬೇಕು. ಇಲ್ಲವೇ ಸಾಯಲು ಸಿದ್ಧವಿರಬೇಕು. ಇದ್ಯಾವುದೂ ಬೇಡವೆಂದಲ್ಲಿ ನಾಡಿನತ್ತ ಬರಲೇಬೇಕು. ಇದು ಅವುಗಳ ಬದುಕಿನ ಅನಿವಾರ್ಯತೆ.
ದಾಳಿ ಮಾಡುವ ಭಯದಿಂದಾಗಿ ಮನುಷ್ಯನಿಗೆ ವನ್ಯಮೃಗಗಳ ಬಗೆಗಿರುವ ಭಯ, ಅವುಗಳಿಗೆ ಮನುಷ್ಯನ ಬಗೆಗಿರುವ ಆತಂಕ, ಸಾಕು ಪ್ರಾಣಿಗಳು ಮತ್ತು ಮಾನವನ ಮೇಲಿನ ದಾಳಿಗಳು ಮನುಷ್ಯನ ಜತೆಗಿನ ಸಂಘರ್ಷಕ್ಕೆ ಎಡೆಮಾಡಿಕೊಡುತ್ತವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದರ ನಿಯಂತ್ರಣ ಯಾರೊಬ್ಬರಿಗೂ ಸೀಮಿತವಾದದ್ದಲ್ಲ. ಇದೊಂದು ಸಾಮಾಜಿಕ ಹೊಣೆಗಾರಿಕೆ, ಅರಣ್ಯಗಳನ್ನು ಸಮೃದ್ಧವಾಗಿಸಬೇಕು. ಇದನ್ನು ಪರಿಣಾಮ ಕಾರಿಯಾಗಿ ನಿರ್ವಹಿಸದಿದ್ದರೆ ಇಂತಹ ಅನಾಹುತಗಳಿಗೆ ಕಡಿವಾಣ ಹಾಕುವುದು ಅಸಾಧ್ಯ.
ಮೈಸೂರು: ಬ್ರೇಕ್ ಫೇಲ್ ಆಗಿದ್ರು ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ಏಕಾಏಕಿ ಮುಂದೆ ಚಲಿಸುತ್ತಿದ್ದ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಜ್ಯದ ಪ್ರಸಿದ್ದ ಯಾತ್ರಾ ಸ್ಥಳವಾದ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ…
ನಂಜನಗೂಡು: ಇಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಗೆ ಭಕ್ತಸಾಗರವೇ ಹರಿದುಬಂದಿದೆ. ಇಂದು ಬೆಳಿಗ್ಗೆಯಿಂದಲೂ ಸಾವಿರಾರು…
ಸುಂಟಿಕೊಪ್ಪ: ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮ ನಿಯಮಿತದಿಂದ ಸುಂಟಿಕೊಪ್ಪದಲ್ಲಿ 3.64 ಕೋಟಿ ರೂ ವೆಚ್ಚದಲ್ಲಿ…
ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಇನ್ನು ಮುಂದೆ ದಿನದ 24 ಗಂಟೆಯೂ ಪ್ರಸಾದ ವಿತರಣೆ ಮಾಡಲಾಗುತ್ತದೆ. ಮಧ್ಯಾಹ್ನದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ ನೀರಿನಲ್ಲಿ ಬೃಹತ್ ಗಾತ್ರದ…