ಇದು ಹೊಸ ವಿಷಯ ಅಲ್ಲ. ಆಗಾಗ ಪ್ರಸ್ತಾಪ ಆದ ವಿಷಯ. ಮತ್ತೆ ಹೇಳಲೇಬೇಕು. ಅಷ್ಟೇ. ಚಲಚಿತ್ರ ಅಕಾಡೆಮಿಯ ಸ್ಥಾಪನೆ ಕರ್ನಾಟಕದಲ್ಲಿ ಆಗಲಿದೆ ಎನ್ನುವ ಸುದ್ದಿ ಕೇಳಿ ಕೇರಳ ಸರ್ಕಾರ ಅದನ್ನು ಸ್ಥಾಪಿಸಿತು. ೧೯೯೪ರಲ್ಲಿ ವಿ.ಎನ್.ಸುಬ್ಬರಾಯರ ಅಧ್ಯಕ್ಷತೆಯ ತಜ್ಞರ ಸಮಿತಿ ಶಿಫಾರಸುಗಳಲ್ಲಿ ಒಂದು ಈ ಅಕಾಡೆಮಿ ಸ್ಥಾಪನೆ. ಮುಂದಿನ ವರ್ಷವೇ ಅದು ಸ್ಥಾಪನೆ ಎಂದು ರಾಜ್ಯಪಾಲರು ಜಂಟಿ ಸದನಗಳನ್ನು ಉದ್ದೇಶಿಸಿ ಹೇಳಿದರು. ಆಗ ಅರ್ಥ ಸಚಿವರಾಗಿದ್ದ ಸಿದ್ದರಾಮಯ್ಯನವರು ಅದಕ್ಕಾಗಿ ಮುಂಗಡ ಪತ್ರದಲ್ಲಿ ಅನುದಾನ ಪ್ರಕಟಿಸಿದರು.
ಆದರೆ ಅಕಾಡೆಮಿ ಸ್ಥಾಪನೆ ಆಗಲಿಲ್ಲ. ವಾಣಿಜ್ಯ ಮಂಡಳಿಯ ಪ್ರಮುಖರು ಅಕಾಡೆಮಿ ಅಧ್ಯಕ್ಷರಾಗಿ ಉದ್ಯಮದ ಇಂತಹವರೇ ಆಗಬೇಕು ಎಂದು ಹಠಹಿಡಿದ ಪರಿಣಾಮವಾಗಿ ಅದರ ಸ್ಥಾಪನೆ ನನೆಗುದಿಗೆ ಬಿತ್ತು. ೨೦೦೯ರಲ್ಲಿ, ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ವರ್ಷದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಆರಿಸಿ ಬಂದ ಡಾ.ಜಯಮಾಲ ಅವರ ಅವಧಿಯಲ್ಲಿ ಅಕಾಡೆಮಿಯ ಸ್ಥಾಪನೆ ಆಯಿತು.
ಕೇರಳದಲ್ಲಿ ಅಕಾಡೆಮಿ ಸ್ಥಾಪನೆ ಆಯಿತಷ್ಟೇ. ಅದರ ಕಾರ್ಯವ್ಯಾಪ್ತಿಯನ್ನು ಗಮನಿಸಬೇಕು. ಶಾಲಾ ವಿದ್ಯಾರ್ಥಿಗಳಿಗಾಗಿ ಅದು ಚಲನಚಿತ್ರ ರಸಗ್ರಹಣ ಶಿಬಿರವನ್ನು ರಾಜ್ಯದ ವಿವಿಧ ನಗರಗಳಲ್ಲಿ ಏರ್ಪಡಿಸುತ್ತದೆ. ಚಿತ್ರರಂಗಕ್ಕೆ ಬರುವ ಆಸಕ್ತ ಮಹಿಳೆಯರಿಗೆ ತಾಂತ್ರಿಕ ತರಬೇತಿ ನೀಡುತ್ತದೆ.
ಕೆಲವು ಚಿತ್ರೋತ್ಸವಗಳನ್ನೂ ಅದು ಏರ್ಪಡಿಸುತ್ತದೆ. ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೩೦ನೇ ಅವೃತ್ತಿಗೆ ಸಿದ್ಧತೆ ನಡೆದಿದೆ. ಇದಲ್ಲದೆ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳ ಅಂತಾರಾಷ್ಟ್ರೀಯ ಚಿತ್ರೋತ್ಸವ, ಬೇರೆಬೇರೆ ನಗರಗಳಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ, ರಾಷ್ಟ್ರೀಯ ಚಲನಚಿತ್ರೋತ್ಸವ ಇವುಗಳನ್ನು ನಡೆಸುತ್ತಿದೆ. ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ದ ಭಾರತೀಯ ಭಾಷಾ ಚಿತ್ರಗಳ ಪ್ರದರ್ಶನ ಇರುತ್ತದೆ.
ಇದನ್ನು ಓದಿ: ದಸರಾ; ನೈಋತ್ಯ ರೈಲ್ವೆಗೆ ದಾಖಲೆ ಆದಾಯ
ರಾಜ್ಯ ಚಲನಚಿತ್ರ ಪ್ರಶಸ್ತಿ, ರಾಜ್ಯ ಟಿವಿ ಪ್ರಶಸ್ತಿ, ಜೀವನ ಸಾಧನೆ ಪ್ರಶಸ್ತಿಗಳೇ ಮೊದಲಾದವುಗಳ ಜವಾಬ್ದಾರಿ ಅಕಾಡೆಮಿಯದೇ. ಚಿತ್ರೋದ್ಯಮಕ್ಕೆ ಸಂಬಂಧಪಟ್ಟ ಕೃತಿಗಳ ರಚನೆ, ಮಲಯಾಳ ಚಲನಚಿತ್ರಗಳ ವಿವರಗಳ ಕೋಶ ಅಲ್ಲದೆ ಪ್ರತಿ ತಿಂಗಳು ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಜರ್ನಲ್ ಪ್ರಕಟಣೆ ಮಾಡುತ್ತದೆ.
ರಾಜ್ಯ ಚಲನಚಿತ್ರ ಅಕಾಡೆಮಿಯಲ್ಲಿ ಇಂತಹ ಕೆಲಸಗಳು ಆಗುತ್ತಿಲ್ಲ. ಈ ಬಾರಿ ಅಧ್ಯಕ್ಷರು ಮಾತ್ರವಲ್ಲದೆ, ಸದಸ್ಯರ ನಾಮಕರಣವೂ ಆಗಿದೆ. ಆದರೆ ಯಾವುದೇ ಕೆಲಸ ಮಾಡುವುದಕ್ಕೂ ಸರ್ಕಾರ ಆರ್ಥಿಕ ಅನುದಾನ ನೀಡಿಲ್ಲ ಎನ್ನುವುದು ಈಗ ಕೇಳಿಬರುತ್ತಿರುವ ಮಾತು. ಕೊಟ್ಟಿರುವ ನೆರವು ಕೇವಲ ಸಂಬಳ ಮತ್ತು ಓಡಾಟದ ವೆಚ್ಚಕ್ಕೆ ಸಾಕಾಗುತ್ತಿಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ.
ಕನ್ನಡ ಚಿತ್ರರಂಗ ಇದೀಗ ೯೧ ವರ್ಷಗಳನ್ನು ಪೂರೈಸಿ ೯೨ನೇ ವರ್ಷಕ್ಕೆ ಕಾಲಿಟ್ಟು ಅದಾಗಲೇ ಏಳು ತಿಂಗಳು ಕಳೆದಿವೆ. ಚಿತ್ರರಂಗ ೯೦ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಿನಿಜಗತ್ತಿನ ಚರಿತ್ರೆಯನ್ನು ದಾಖಲಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ.
ಹತ್ತು ಸಂಪುಟಗಳಲ್ಲಿ ಇದು ಇರಲಿದೆಯಂತೆ. ಅದು ಕನ್ನಡ ಸಿನಿಮಾ ಕುರಿತ ಆಕರ ಗ್ರಂಥವಾಗಬೇಕು, ಕನ್ನಡ ಚಿತ್ರಗಳ ಕುರಿತ ಸಂಶೋಧನೆ ನಡೆಸುವವರಿಗೆ ನೆರವಾಗಬೇಕು ಎನ್ನುವುದು ಪ್ರಾಧಿಕಾರದ ಅಧ್ಯಕ್ಷರ ಹಂಬಲವಂತೆ. ಚಿತ್ರರಂಗದ ಈ ದಾಖಲೆ ಮಾಡುವ ಕೆಲಸವನ್ನು ಚಲನಚಿತ್ರ ಅಕಾಡೆಮಿ ಮಾಡಬೇಕಿತ್ತಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ ಅಥವಾ ಅಕಾಡೆಮಿ ಮತ್ತು ಪುಸ್ತಕ ಪ್ರಾಧಿಕಾರ ಜಂಟಿಯಾಗಿ ಮಾಡಬಹುದಿತ್ತು ಎಂದು ಸೂಚಿಸುವವರೂ ಇದ್ದಾರೆನ್ನಿ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಹಿಂದೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡ ಚಿತ್ರರಂಗದ ಇತಿಹಾಸವನ್ನು ದಾಖಲಿಸುವ ಕೆಲಸ ಮಾಡಿತ್ತು. ಹೊಸ ಸಹಸ್ರಮಾನಕ್ಕೆ ಹೊರಳುವವರೆಗಿನ ಸಮಗ್ರ ದಾಖಲೆ ಅಲ್ಲಿದೆ. ಕನ್ನಡ ವಿವಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಸಹಯೋಗದೊಂದಿಗೆ ಈ ಕೆಲಸ ಮಾಡಿತ್ತು. ಮೊದಲ ಆವೃತ್ತಿಯ ನಂತರ ಎರಡನೇ ಆವೃತ್ತಿಯ ಹಕ್ಕನ್ನು ವಾಣಿಜ್ಯ ಮಂಡಳಿಗೆ ನೀಡಲಾಗಿತ್ತು. ಈಗಲೂ ಮರು ಪ್ರಕಟಣೆಯ ಹಕ್ಕು ಮಂಡಳಿಯದೇ.
ಕೆಲವು ವೈಯಕ್ತಿಕ ಹಿತಾಸಕ್ತಿಗಳ ರಕ್ಷಣೆಗೆ ಗುರಾಣಿಯಾಗಿ, ಆ ಕೃತಿಯಲ್ಲಿದ್ದ ಕೆಲವು ಕಟುಟೀಕೆಗಳನ್ನು ಉದಾಹರಿಸಿ, ಅದರ ಮಾರಾಟವನ್ನು ನಿಲ್ಲಿಸುವಲ್ಲಿ ಅವು ಸಫಲವಾದವು. ಪ್ರಕಟಣೆಗೆ ಮೊದಲೇ ಸಾಕಷ್ಟು ಖರೀದಿ ಆದ ಕಾರಣ ಕೆಲವು ಪುಸ್ತಕಗಳು ಮಾತ್ರ ಮಾರಾಟವಾಗದೆ ಹಾಗೆಯೇ ಉಳಿದವು. ಮುಂದೆ ಅದರ ಪರಿಷ್ಕರಣೆಯ ಕೆಲಸವೂ ಆಯಿತು! ಉಳಿದಂತೆ ಏನಾಯಿತೋ ಏನೋ, ಆದರೆ ಮೂಲ ಆಶಯ ಈಡೇರಿದ ಖುಷಿ ಸಂಬಂಧಪಟ್ಟವರಿಗಿತ್ತು ಎನ್ನುತ್ತಿವೆ ಮೂಲಗಳು. ಇದೀಗ ಕನ್ನಡ ಚಿತ್ರರಂಗ ೯೦ ದಾಟಿದ ನೆನಪಿನ ಚರಿತ್ರೆ, ಮೂಕಿಯಿಂದ ಟಾಕಿ, ಸೆಲ್ಯುಲಾಯ್ಡಿನಿಂದ ಡಿಜಿಟಲ್, ಸಾಧನೆ, ಸಾಧಕರು ಹೀಗೆ ದಾಖಲಾಗಬಹುದು. ೨೫ ವರ್ಷ ಆದಾಗ ರಜತಮಹೋತ್ಸವ, ೫೦ರ ಹೊತ್ತಿಗೆ ಸುವರ್ಣ ಮಹೋತ್ಸವ, ೬೦ರ ವೇಳೆ ವಜ್ರಮಹೋತ್ಸವ, ೭೫ರ ವೇಳೆ ಅಮೃತ ಮಹೋತ್ಸವ, ೧೦೦ ಆದಾಗ ಶತಮಾನೋತ್ಸವ ಆಚರಣೆ, ದಾಖಲೆ ಸಾಮಾನ್ಯ. ಆದರೆ ೯೦ರ ಮಹತ್ವವೇನು ಎನ್ನುವ ಪ್ರಶ್ನೆ ಉದ್ಯಮದ ಕೆಲವರದು.
ನಟ ಅನಂತನಾಗ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಭೂಷಣ ಸಂದು ಸಾಕಷ್ಟು ಸಮಯವಾಗಿದೆ. ನಾಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವರನ್ನು ಗೌರವಿಸಲಿದೆ. ಜೊತೆಗೆ ಪದ್ಮಶ್ತೀ ಪುರಸ್ಕೃತ, ಸಾಹಸ ಸಂಯೋಜಕ ಹಾಸನ ರಘು ಅವರನ್ನು ಕೂಡ. ಆ ಕುರಿತ ವಿವರ ನೀಡುವ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡ ಜಾತಿಗಣತಿಯ ಕುರಿತ ಪ್ರಸ್ತಾಪ, ಸಹಕಾರದ ಮಾತಿತ್ತು.
ಅನಂತನಾಗ್ ಅವರಿಗೆ ಪದ್ಮಭೂಷಣ ಸಂದ ಕೂಡಲೇ ಅವರನ್ನು ಉದ್ಯಮ ಗೌರವಿಸುವ ಕೆಲಸ ಮಾಡಬೇಕಿತ್ತು. ಆದರೆ ಅದೇಕೋ ನಿಧಾನವೇ ಪ್ರಧಾನ ಎಂದೋ, ಇದು ಆದ್ಯತೆಯ ಕೆಲಸ ಎಂದು ಅಲ್ಲಿನ ಭಾರವಾಹಿಗಳಿಗೆ ತಿಳಿಯಲಿಲ್ಲವೋ ಒಟ್ಟಿನಲ್ಲಿ ನಾಳೆಗೆ ಅದರ ಮುಹೂರ್ತ! ಅವಸರದ ಕಾರಣ, ಅವರನ್ನು ಅಭಿನಂದಿಸಲು ಬರುವ ಅತಿಥಿಗಳು ಯಾರು ಎನ್ನುವುದಿನ್ನೂ ಸ್ಪಷ್ಟವಾಗಿಲ್ಲ. ಕಲಾವಿದರ ಸಂಘ ಕೂಡಾ ಈ ಕೆಲಸ ಮಾಡಬಹುದಾಗಿತ್ತು ಎನ್ನುವವರೂ ಇದ್ದಾರೆ. ಸಂಘ ನೇತೃತ್ವ ವಹಿಸದೆ ಇದ್ದರೂ, ಸಂಘದ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಮುಂದಿನ ವಾರ ಇನ್ನೊಂದು ಅಭಿನಂದನಾ ಕಾರ್ಯಕ್ರಮ ಇದೆ. ಅದು ಎಸ್.ವಿ.ರಾಜೇಂದ್ರ ಸಿಂಗ್ (ಬಾಬು) ವೃತ್ತಿ ಜೀವನದ ಐವತ್ತು ವರ್ಷ ಪೂರೈಸಿದ ಸುವರ್ಣ ಸಂಭ್ರಮ ಆಚರಣೆ. ೧೯೭೫ರಲ್ಲಿ ತೆರೆಕಂಡ ‘ನಾಗಕನ್ಯೆ’ ಬಾಬು ನಿರ್ದೇಶನದ ಮೊದಲ ಚಿತ್ರ. ಮಹಾತ್ಮ ಸಂಸ್ಥೆಯ ಆ ಚಿತ್ರದ ನಿರ್ಮಾಣವೂ ಬಾಬು ಹೆಸರಲ್ಲೇ ಇದೆ. ವಿಷ್ಣುವರ್ಧನ್ – ಭವಾನಿ ಜೋಡಿ. ಆ ಚಿತ್ರದ ಸಹಾಯಕ ನಿರ್ದೇಶಕರು ಜೋಸೈಮನ್.
ಇದನ್ನು ಓದಿ: ಮ.ಬೆಟ್ಟ: ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ
ಈ ಸಮಾರಂಭಕ್ಕೆ ನಿರ್ಮಾಪಕ, ನಿರ್ದೇಶಕ ಕೃಷ್ಣೇಗೌಡ ಅವರು ನೇತೃತ್ವ ವಹಿಸಿದ್ದು, ಚಿತ್ರೋದ್ಯಮ ಪೂರ್ತಿಯಾಗಿ ಪಾಲ್ಗೊಳ್ಳಲಿದೆ ಎಂದು ಹೇಳಲಾಗಿದೆ. ಕಲಾವಿದರ ಸಂಘದ ಕಾರ್ಯದರ್ಶಿಗಳು, ನಿರ್ದೇಶಕರ ಸಂಘದ, ಸಂಕಲನಕಾರರ, ಮತ್ತಿತರ ಸಂಘಟನೆಗಳ ಅಧ್ಯಕ್ಷರು, ಪ್ರಶಸ್ತಿ ಪುರಸ್ಕೃತ ನಿರ್ದೇಶಕರು ಈ ಅಭಿನಂದನಾ ಸಮಿತಿಯಲ್ಲಿದ್ದಾರೆ. ಬಾಬು ಅವರ ಅಭಿನಂದನಾ ಸಂದರ್ಭದಲ್ಲಿ ಅವರ ಆಯ್ದ ಚಿತ್ರಗಳ ಉತ್ಸವ, ಅವರ ಕುರಿತ ಕೃತಿ, ನೆನಪಿನ ಸಂಚಿಕೆ ಪ್ರಕಟಣೆ ಇರಲಿದೆ. ವೃತ್ತಿ ಜೀವನದಲ್ಲಿ ಬಾಬು ಅವರು ೫೦ ವರ್ಷಗಳನ್ನು ಪೂರೈಸುವ ಮೊದಲೇ ಅನಂತನಾಗ್ ಅವರು ಸುವರ್ಣ ವರ್ಷ ಕಂಡಾಗಿತ್ತು. ೧೯೭೩ರಲ್ಲಿ ತೆರೆಕಂಡ ನಂಜರಾಜೇ ಅರಸ್ ಅವರ ‘ಸಂಕಲ್ಪ’ದ ಮೂಲಕ ಚಿತ್ರರಸಿಕರಿಗೆ ಅವರ ಪರಿಚಯ. ಅನಂತನಾಗ್ ಮಾತ್ರವಲ್ಲ, ಇನ್ನೂ ಕೆಲವು ಮಂದಿ ಸುವರ್ಣ ಮಹೋತ್ಸವ ವರ್ಷ ದಾಟಿದ್ದಾರೆ. ಹಿಂದೆ ಕಲಾವಿದರು ೫೦, ೧೦೦ ಚಿತ್ರಗಳನ್ನು ಪೂರೈಸಿದಾಗ ಸಾರ್ವಜನಿಕ ಸಮಾರಂಭಗಳನ್ನು ಏರ್ಪಡಿಸಿ ಅವರನ್ನು ಗೌರವಿಸುವ ಕೆಲಸ ನಡೆಯುತ್ತಿತ್ತು. ಆದರೆ ಈಗ ಅವು ಅಪರೂಪ.
ಕೃಷ್ಣೇಗೌಡರು ತಮ್ಮ ಸಂಸ್ಥೆಯ ಮೂಲಕ ಅಥವಾ ಅದರ ನೇತೃತ್ವದಲ್ಲಿ ಈ ಕೆಲಸ ಆರಂಭಿಸಿದ್ದಾರೆ. ಅವರ ಸಂಸ್ಥೆಯ ಹೆಸರಿನ ಕುರಿತಂತೆ ಇತ್ತೀಚೆಗೆ ತಕರಾರು ಎದ್ದಿತ್ತು. ಆದರೆ ಅದರ ವಿರುದ್ಧ ಅವರು ಮೇಲ್ಮನವಿ ಸಲ್ಲಿಸಿದ್ದಾರಂತೆ. ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯಲ್ಲಿ ಕನ್ನಡ ನಿರ್ಮಾಪಕರು ಮಾತ್ರವಲ್ಲ, ಇತರ ಭಾಷಾ ಚಿತ್ರಗಳ ವಿತರಕರು, ಇತರ ಭಾಷೆಗಳ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳ ಮಾಲೀಕರು ಸದಸ್ಯರಾಗಿರುತ್ತಾರೆ.
ಆ ಕಾರಣದಿಂದಲೇ ಕನ್ನಡದ ಚಿತ್ರ ನಿರ್ಮಾಪಕರ ಸಂಘದ ಸ್ಥಾಪನೆ ಆಗಿತ್ತು. ಹಳೆಯ ಕಟ್ಟಡ ಒಡೆದು ಹೊಸ ಕಟ್ಟಡ ಕಟ್ಟುವ ವೇಳೆ ಅದರ ಹೆಸರನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂದು ಇಡುವ ಪ್ರಯತ್ನವೂ ನಡೆದಿತ್ತು. ಕನ್ನಡ ಚಿತ್ರರಂಗದ ಪ್ರಾತಿನಿಧಿಕ ಸಂಸ್ಥೆ ಎಂದೇ ಹೇಳಲಾಗುತ್ತಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಲ್ಲದೆ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೆಸರಿನ ಸಂಸ್ಥೆ ಅಸ್ತಿತ್ವದಲ್ಲಿದೆ. ಇದಲ್ಲದೆ ಕೃಷ್ಣೇಗೌಡರ ಸಂಸ್ಥೆ ಸೇರಿದಂತೆ ಕೆಲವು ಸಂಸ್ಥೆಗಳೂ ಇವೆ. ವಾಣಿಜ್ಯ ಸಂಸ್ಥೆಗಳು ಚಿತ್ರರಂಗದ ಎಲ್ಲ ವಿಭಾಗಗಳನ್ನು ಪ್ರತಿನಿಧಿಸುವ ಸಂಸ್ಥೆ ಎನಿಸಿಕೊಂಡದ್ದು ಹೇಗೆ ಎಂದು ಕೇಳುವವರೂ ಇಲ್ಲದಿಲ್ಲ. ರಾಜ್ಯ ಟಿವಿ ಅಸೋಸಿಯೇಶನ್ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ಕಾರ್ಮಿಕರು ಎಲ್ಲರನ್ನೂ ಒಳಗೊಂಡ ಸಂಸ್ಥೆ, ಹಾಗಾಗಿ ಅದನ್ನು ಪ್ರಾತಿನಿಧಿಕ ಸಂಸ್ಥೆ ಎಂದು ಕರೆಯಬಹುದೇ ಹೊರತು, ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಮಾತ್ರ ಸದಸ್ಯರಾಗಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಕನ್ನಡ ಚಿತ್ರರಂಗದ ಪ್ರಾತಿನಿಧಿಕ ಸಂಸ್ಥೆ ಆಗುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಯಾರು ನೀಡುತ್ತಾರೆ?
” ಕನ್ನಡ ಚಿತ್ರರಂಗ ಇದೀಗ ೯೧ ವರ್ಷಗಳನ್ನು ಪೂರೈಸಿ ೯೨ನೇ ವರ್ಷಕ್ಕೆ ಕಾಲಿಟ್ಟು ಅದಾಗಲೇ ಏಳು ತಿಂಗಳು ಕಳೆದಿವೆ. ಚಿತ್ರರಂಗ ೯೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಿನಿಜಗತ್ತಿನ ಚರಿತ್ರೆಯನ್ನು ದಾಖಲಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ”
–ವೈಡ್ ಆಂಗಲ್
ಬಾ.ನಾ.ಸುಬ್ರಹ್ಮಣ್ಯ
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…