ಜಿಎಸ್ ಟಿಗೆ ಐದು ವರ್ಷ ; ಇನ್ನೂ ಈಡೇರದ ಉದ್ದೇಶ

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿ ಬಂದು ಇಂದಿಗೆ ಐದು ವರ್ಷ ಪೂರ್ಣಗೊಳ್ಳುತ್ತಿದೆ. ಸ್ವತಂತ್ರ್ಯೋತ್ತರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದು ಬಣ್ಣಿಸಲ್ಪಟ್ಟ ಜಿಎಸ್‌ಟಿ ಜಾರಿಯಾಗಿ ಐದು ವರ್ಷಗಳು ಕಳೆದ ನಂತರವೂ ಏಕ ರಾಷ್ಟ್ರ- ಏಕ ತೆರಿಗೆ ಆಶಯವನ್ನು ಈಡೇರಿಸುವುದು ಸಾಧ್ಯವಾಗಿಲ್ಲ. ಜನಸ್ನೇಹಿ ಆಗಬೇಕಿದ್ದ ಜಿಎಸ್‌ಟಿ ಜನ ವಿರೋಧಿಯಾಗುತ್ತಲೇ ಸಾಗಿದೆ. ಎಲ್ಲಾ ವಸ್ತುಗಳಿಗೂ ತೆರಿಗೆ ಹೇರಬೇಕೆಂಬ ಹುಚ್ಚು ಬಿಡದ ಹೊರತು ಜಿಎಸ್‌ಟಿ ಜನಸ್ನೇಹಿ ಆಗುವ ಸಾಧ್ಯತೆ ಇಲ್ಲ.

ಸುಂಕದವನ ಹತ್ತಿರ ಸಂಕಟ ಹೇಳಿಕೊಳ್ಳಬಾರದು ಎಂಬುದು ಬಹಳ ಹಳೆಯ ಗಾದೆ. ಇದರರ್ಥ ಸುಂಕ ವಸೂಲಿ ಮಾಡುವವರಿಗೆ ಮಾನವೀಯತೆ ಇಲ್ಲ ಎಂದರ್ಥ. ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಕೂಡಾ ನಿಧಾನಗತಿಯಲ್ಲಿ ಮಾನವೀಯತೆ ನೆಲೆಯಿಂದ ದೂರ ಸರಿಯುತ್ತಾ ಬರೀ ಸಂಪನ್ಮೂಲ ಕ್ರೋಢೀಕರಣದತ್ತ ಕೇಂದ್ರೀಕೃತಗೊಳ್ಳುತ್ತಿದೆ.

ಅದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಹೈನು ಉತ್ಪನ್ನಗಳಾದ ಬ್ರಾಂಡೆಡ್ ಅಲ್ಲದ ಪ್ಯಾಕ್ ಮಾಡಲಾದ ಮೊಸರು ಮತ್ತು ಪನ್ನೀರಿಗೆ ತೆರಿಗೆ ಹೇರಿದೆ. ತೆರಿಗೆ ನಿರ್ಧರಿಸುವವರಿಗೆ ಮೊಸರು ಮತ್ತು ಪನ್ನೀರಿನ ಬಳಕೆಯ ಬಗ್ಗೆ ಜ್ಞಾನ ಇರಬೇಕು.

ಮೊಸರು ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರೂ ಬಳಸುತ್ತಾರೆ. ಪನ್ನೀರು ಬಹುತೇಕ ಶ್ರೀಮಂತರು, ಮೇಲ್ಮಧ್ಯಮ ವರ್ಗದವರು ಬಳಸುತ್ತಾರೆ. ಹೀಗಿದ್ದಾಗ ಪನ್ನೀರನ್ನು ಮಾತ್ರ ತೆರಿಗೆ ವ್ಯಾಪ್ತಿಗೆ ತರಬೇಕಿತ್ತು. ಈಗ ಮೊಸರನ್ನೂ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದು ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಹೇಗೆ ಜನಸ್ನೇಹಿಯಾಗದೇ ಜನವಿರೋಧಿಯಾಗುತ್ತಾ ಸಾಗಿದೆ ಎಂಬುದಕ್ಕೆ ಒಂದು ಉದಾಹರಣೆಯಷ್ಟೇ!

ತೆರಿಗೆ ಹಂತಗಳಲ್ಲಿನ ಗೊಂದಲಗಳು ಇನ್ನೂ ಮುಗಿದಂತಿಲ್ಲ. ಕಳೆದ ಐದು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಬಾರಿ ತೆರಿಗೆ ಹಂತಗಳನ್ನು ಪರಿಷ್ಕರಿಸಲಾಗಿದೆ. ಪರಿಷ್ಕರಣೆ ನಿರಂತರ ಪ್ರಕ್ರಿಯೆ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ, ತೆರಿಗೆ ಪರಿಷ್ಕರಣೆಯು ಹೆಚ್ಚಿನ ತೆರಿಗೆಯಿಂದ ಕೆಳ ಹಂತದ ತೆರಿಗೆಯತ್ತ ಸಾಗಬೇಕು. ಆದರೆ, ಬಹುತೇಕ ಪ್ರಕರಣಗಳಲ್ಲಿ ಕೆಳಹಂತದ ತೆರಿಗೆಯನ್ನು ಮೇಲು ಹಂತಕ್ಕೆ ಪರಿಷ್ಕರಿಸಲಾಗಿದೆ. ದೇಶದಲ್ಲಿ ಬಡ ಜನರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗದ ಹೊರತು ಆಹಾರ ಮತ್ತಿತರ ನಿತ್ಯೋಪಯೋಗಿ ವಸ್ತುಗಳನ್ನು ಶೂನ್ಯ ತೆರಿಗೆ ವ್ಯಾಪ್ತಿಯಲ್ಲಿ ಇಡಬೇಕು. ಅದು ಸರ್ಕಾರದ ಮಾನವೀಯ ಮತ್ತು ನೈತಿಕ ಜವಾಬ್ದಾರಿಯೂ ಹೌದು.

ವಾಸ್ತವವಾಗಿ ಸರಕು ಮತ್ತು ಸೇವಾ ತೆರಿಗೆ ಜಾರಿ ಉದ್ದೇಶ ಇದ್ದಿದ್ದೇ ರಾಷ್ಟ್ರ ವ್ಯಾಪಿ ಒಂದು ಅಥವಾ ಎರಡು ಹಂತ ತೆರಿಗೆಗಳನ್ನು ವಿಧಿಸಲು. ಆದರೆ, ಆರಂಭದಲ್ಲಿ ಆರು ಹಂತದ ತೆರಿಗೆ ಇತ್ತು. ಈಗಲೂ ಶೇ.೫, ೧೨, ೧೮ ಮತ್ತು ೨೮ ರಷ್ಟು ತೆರಿಗೆ ಹಂತಗಳಿವೆ. ಈ ಹಂತದಲ್ಲಿ ಹಲವು ಗೊಂದಲಗಳು ಇನ್ನೂ ನಿವಾರಣೆ ಆದಂತಿಲ್ಲ.

ರಾಜ್ಯಗಳ ಪಾಲು ಪಾವತಿ ವಿಳಂಬ

ಜಿಎಸ್ ಟಿ ಜಾರಿಗೆ ಬಂದ ನಂತರ ರಾಜ್ಯಗಳ ಪಾಲು ತಗ್ಗುವ ಅಪಾಯದ ಹಿನ್ನೆಲೆಯಲ್ಲಿ ಕೇಂದ್ರವು ನಷ್ಟ ತುಂಬಿಕೊಡುವ ವಾಗ್ದಾನ ನೀಡಿತ್ತು. ಅಂದರೆ, ೧೦೦ ರೂಪಾಯಿ ತೆರಿಗೆ ಬರುತ್ತಿದ್ದ ಕಡೆ ಪ್ರತಿ ವರ್ಷ ಅದು ೧೧೪ ರೂಪಾಯಿಗೆ ಏರಿಕೆಯಾಗಬೇಕು. ಏರಿಕೆಯಾಗದ ರಾಜ್ಯಗಳಿಗೆ ಕೇಂದ್ರವು ಕೊರತೆಯನ್ನು ಭರ್ತಿ ಮಾಡಿಕೊಡಬೇಕು ಎಂಬ ನಿಯಮ ರೂಪಿಸಲಾಗಿತ್ತು. ಆ ನಿಯಮ ಕೇವಲ ಐದು ವರ್ಷಗಳಿಗೆ ಮಾತ್ರ ಎಂದು ಷರತ್ತು ಹಾಕಲಾಗಿತ್ತು. ಆದರೆ, ರಾಜ್ಯಗಳು ಗಳಿಸುತ್ತಿರುವ ತೆರಿಗೆ ವಾರ್ಷಿಕ ಏರಿಕೆಯು ನಿರೀಕ್ಷಿತ ಅಂದಾಜನ್ನು ಮುಟ್ಟುತ್ತಿಲ್ಲ. ಹೀಗಾಗಿ ಮತ್ತೆರಡು ವರ್ಷ ಕೇಂದ್ರ ನಷ್ಟ ಭರ್ತಿಗೆ ಒಪ್ಪಿಗೆ ನೀಡಿದೆ. ತೆರಿಗೆ ಸಂಗ್ರಹ ನಿರೀಕ್ಷಿತ ಅಂದಾಜು ತಲುಪುವರೆಗೂ ರಾಜ್ಯಗಳಿಗೆ ನಷ್ಟಭರ್ತಿ ಮಾಡಿಕೊಡಬೇಕು ಎಂದು ಬಹುತೇಕ ರಾಜ್ಯಗಳ ಬೇಡಿಕೆಯಾಗಿದೆ. PRS ಲೆಜಿಸ್ಲೇಟಿವ್ ರಿಸರ್ಚ್ ನಡೆಸಿರುವ ಅಧ್ಯಯನದ ಪ್ರಕಾರ, ೨೦೧೮-೨೧ರ ಅವಧಿಯಲ್ಲಿ, ಹೆಚ್ಚಿನ ರಾಜ್ಯಗಳು ನಿಗದಿತ ತೆರಿಗೆ ಆದಾಯ ಗುರಿ ಸಾಧಿಸಲು ಕೇಂದ್ರದ ಪರಿಹಾರ ಧನವನ್ನೇ ಅವಲಂಬಿಸಿವೆ. ೨೦೧೮-೧೯ ರಲ್ಲಿ, ರಾಜ್ಯಗಳು ತಮ್ಮ ತೆರಿಗೆ ಗುರಿಯ ಶೇ.೮೮ ರಷ್ಟು ಮಾತ್ರ ಸಂಗ್ರಹಿಸಿವೆ.

ಮೌಲ್ಯವರ್ಧಿತ ತೆರಿಗೆ, ಕೇಂದ್ರೀಯ ಅಬಕಾರಿ ಸುಂಕ, ಹೆಚ್ಚುವರಿ ಅಬಕಾರಿ ಸುಂಕ, ಔಷಧೀಯ ಮತ್ತು ಶೌಚಾಲಯಗಳ ತಯಾರಿ ಕಾಯಿದೆಯಡಿ ವಿಧಿಸಲಾದ ಸುಂಕ, ಸೇವಾ ತೆರಿಗೆ, ಕೌಂಟರ್ವೈಲಿಂಗ್ ಸುಂಕ, ವಿಶೇಷ ಹೆಚ್ಚುವರಿ ಸುಂಕ, ಸಿಎಸ್‌ಟಿ, ಮನರಂಜನಾ ತೆರಿಗೆ, ಆಕ್ಟ್ರಾಯ್, ಖರೀದಿ ತೆರಿಗೆ, ಐಷಾರಾಮಿ ತೆರಿಗೆ, ಲಾಟರಿ ಮೇಲಿನ ತೆರಿಗೆಗಳು, ಬೆಟ್ಟಿಂಗ್ , ಜೂಜು ಮತ್ತು ಸೆಸ್‌ಗಳು ಮತ್ತು ಹೆಚ್ಚುವರಿ ಶುಲ್ಕಗಳು ಎಲ್ಲವನ್ನೂ ಒಗ್ಗೂಡಿಸಿ ಸರಕು ಮತ್ತು ಸೇವಾ ತೆರಿಗೆ ರೂಪಿಸಲಾಗಿದೆ. ಆದರೆ, ಇನ್ನೂ ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಕನಿಷ್ಠವೆಂದರೂ ಶೇ.೪೦ರಷ್ಟು ದರ ಇಳಿಯುತ್ತದೆ. ಆದರೆ, ಉದ್ದೇಶಪೂರ್ವಕವಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಎಸ್ಟಿ ವ್ಯಾಪ್ತಿಗೆ ತರುತ್ತಿಲ್ಲ.

ಜಿಎಸ್‌ಟಿ ಮತ್ತು ಪಿಜ್ಜಾ!

ಹರಿಯಾಣ ಮೇಲ್ಮನವಿ ಪ್ರಾಧಿಕಾರವು ಇತ್ತೀಚೆಗೆ, ಪಿಜ್ಜಾ ಟಾಪಿಂಗ್‌ಗಳ ಮೇಲೆ ಹೆಚ್ಚಿನ ಜಿಎಸ್‌ಟಿ ವಿಧಿಸುವ ಪರವಾಗಿ ತೀರ್ಪು ನೀಡಿತು, ಪಿಜ್ಜಾ ಟಾಪಿಂಗ್ ಪಿಜ್ಜಾ ಅಲ್ಲ, ಅದರ ತಯಾರಿಕೆಯ ವಿಧಾನವು ವಿಭಿನ್ನವಾಗಿದೆ ಮತ್ತು ಆದ್ದರಿಂದ ಪ್ರತ್ಯಕವಾಗಿ ವರ್ಗೀಕರಿಸಬೇಕು ಎಂದು ಹೇಳಿದೆ.

ಜಿಎಸ್‌ಟಿ ಗೊಂದಲಗಳಿಗೆ ಪಿಜ್ಜಾ ತಾಜಾ ಉದಾಹರಣೆ. ಪಿಜ್ಜಾದ ವಿವಿಧ ಭಾಗಗಳಿಗೆ ಮೂರು ವಿಭಿನ್ನ ತೆರಿಗೆ ಹಂತಗಳಿವೆ. ಪಿಜ್ಜಾವನ್ನು ಎಲ್ಲಿ ತಯಾರಿಸಲಾಗುತ್ತದೆ, ಎಲ್ಲಿ ಖರೀದಿಸಲಾಗುತ್ತದೆ ಎಲ್ಲಿ ತಿನ್ನಲಾಗುತ್ತದೆ ಎಂಬುದರ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ರೆಸ್ಟೋರೆಂಟ್‌ನಲ್ಲಿ ತಯಾರಿಸಿದ, ಖರೀದಿಸಿದ ಮತ್ತು ಅಲ್ಲೇ ತಿನ್ನುವ ಪಿಜ್ಜಾ ಮೇಲೆ ಶೇ. ೫ ಜಿಎಸ್‌ಟಿ ಇದೆ.
ನೀವು ಪಿಜ್ಜಾವನ್ನು ಮನೆಗೆ ತರಿಸಿಕೊಂಡರೆ ಅದರ ಮೇಲೆ ಶೇ.೧೮ರಷ್ಟು ಜಿಎಸ್‌ಟಿ ಇದೆ. ಒಂದು ವೇಳೆ ನೀವು ಪಿಜ್ಜಾವನ್ನು ಮನೆಯಲ್ಲೇ ತಯಾರಿಸುತ್ತೀರಿ ಎಂದಿಟ್ಟುಕೊಳ್ಳಿ. ಆಗಲೂ ವಿವಿಧ ಬಗೆಯ ತೆರಿಗೆ ಇದೆ. ಪಿಜ್ಜಾ ಬೇಸ್ ಗೆ ಶೇ.೧೨ರಷ್ಟು ಜಿಎಸ್‌ಟಿ ಇದೆ. ಪಿಜ್ಜಾ ಟಾಪಿಂಗ್ಸ್‌ಗೆ ಶೇ.೧೮ರಷ್ಟು ಜಿಎಸ್‌ಟಿ ಮತ್ತು ಸಾಸ್, ಮಸಲಾ ಪುಡಿಗಳಿಗೆ ಶೇ.೧೨ರಷ್ಟು ಜಿಎಸ್‌ಟಿ ಇದೆ.

ಚಿತ್ರಕೃಪೆ- ಸತೀಶ್ ಆಚಾರ್ಯ/ಸಿಫಿಡಾಟ್‌ಕಾಮ್

andolana

Recent Posts

ಮೋಹನ್‌ ಭಾಗವತ್‌ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ

ನವದೆಹಲಿ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ದೇಶದ್ರೋಹ ಎಸಗಿದ್ದು, ಭಾರತೀಯರನ್ನು ಅವಮಾನಿಸಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌…

27 seconds ago

ಚುನಾವಣಾ ನಿಯಮಗಳಿಗೆ ತಿದ್ದುಪಡಿ| ಚುನಾವಣಾ ಆಯೋಗ, ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಸಿಸಿಟಿವಿ ಹಾಗೂ ಇತರ ಚುನಾವಣಾ ಸಂಬಂಧಿತ ದಾಖಲೆಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವ ಬಗ್ಗೆ ಇತ್ತೀಚೆಗೆ 1961ರ ಚುನಾವಣಾ ನಿಯಮಗಳಲ್ಲಿ…

8 mins ago

ಜನವರಿ.25ರಂದು ಶಿವರಾಜ್‌ ಕುಮಾರ್‌ ಬೆಂಗಳೂರಿಗೆ ಆಗಮನ: ಮಧು ಬಂಗಾರಪ್ಪ ಮಾಹಿತಿ

ಬೆಂಗಳೂರು: ಶಿವಣ್ಣಗೆ ಆರು ಆಪರೇಷನ್‌, 190 ಹೊಲಿಗೆ ಹಾಕಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆಗೆ…

31 mins ago

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಶಾಸಕರ ಅಭಿಪ್ರಾಯ ಕೇಳಿ: ಹೈಕಮಾಂಡ್‌ಗೆ ಸತೀಶ್‌ ಜಾರಕಿಹೊಳಿ ಆಗ್ರಹ

ಬೆಂಗಳೂರು: ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಪೂರ್ಣಾವಧಿಗೆ ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸಲಿ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ರಾಜ್ಯದಲ್ಲಿ…

49 mins ago

ಜ.26ರ ಗಣರಾಜ್ಯೋತ್ಸವಕ್ಕೆ ಅದ್ದೂರಿ ಸಿದ್ಧತೆ: ಅಪರ ಜಿಲ್ಲಾಧಿಕಾರಿಗಳಿಂದ ಅಧಿಕಾರಿಗಳಿಗೆ ಮಹತ್ವದ ಸೂಚನೆ

ಮೈಸೂರು: ಜಿಲ್ಲಾಡಳಿತದ ವತಿಯಿಂದ ಈ ಬಾರಿಯ ಗಣರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಧ್ವಜಾರೋಹಣವನ್ನು…

1 hour ago

ಗುತ್ತಿಗೆದಾರರೇ ನೀವೇನು ಭಿಕ್ಷುಕರಲ್ಲ ಎಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಗುತ್ತಿಗೆದಾರರೇ ನೀವೇನು ಭಿಕ್ಷುಕರಲ್ಲ. ದಯಾಮರಣಕ್ಕೆ ಯಾಕೆ ಕೇಳ್ತೀರಾ. ಒಂದು ವರ್ಷ ಕೆಲಸವನ್ನೇ ಮಾಡಬೇಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ…

1 hour ago